ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಗಣಿಗಾರಿಕೆ, ಕಾಲುವೆಗಳ ನಿರ್ಮಾಣ, ರಸ್ತೆಗಳು, ರೈಲ್ವೆ ಮಾರ್ಗಗಳು ಇವೆಲ್ಲಾ ವನ್ಯಜೀವಿಗಳ ಬದುಕನ್ನೇ ಕಸಿದುಕೊಳ್ಳುತ್ತಿವೆ.

ವನ್ಯಜೀವಿ ಕಾರಿಡಾರ್‌ಗಳು ಅಂದರೆ ಎರಡು ಅರಣ್ಯದ ಸಂಪರ್ಕ ಸ್ಥಳಗಳು.  ಇಲ್ಲಿ ವನ್ಯಜೀವಿಗಳು ವಲಸೆಗಾಗಿ ಬರುತ್ತವೆ.  ಇದು ಸಂಪೂರ್ಣ ಹದ ತಪ್ಪಿದೆ.  ಕಾರಣ ಮಾನವ ವಸತಿಪ್ರದೇಶದ ಅತಿ ಹಿಗ್ಗುವಿಕೆ ಹಾಗೂ ಪ್ರವಾಸೋದ್ಯಮ, ಸಂವಹನ, ಕೈಗಾರಿಕೀಕರಣ, ಕೃಷಿ ಚಟುವಟಿಕೆಗಳು.

ಉದಾಹರಣೆಗೆ ಹೆದ್ದಾರಿಗಳಲ್ಲಿ ವಾಹನಗಳು ತಮ್ಮಷ್ಟಕ್ಕೆ ಚಲಿಸುತ್ತವೆ.  ಕಾಡಿನೊಳಗೆ ಹೋಗುವುದಿಲ್ಲ ಎಂಬ ಪ್ರಶ್ನೆ ಎದುರಾಗುತ್ತದೆ.  ಆದರೆ ಹೆದ್ದಾರಿ ದಾಟುವ ವನ್ಯಜೀವಿಗಳಿಗೆ ಈ ವಾಹನಗಳ ಬಗ್ಗೆ ಅರಿವಿಲ್ಲ.  ಹೀಗಾಗಿ ೨೦೦೮ರಲ್ಲಿ ಒಂದೇ ತಿಂಗಳಿನಲ್ಲಿ ಮೈಸೂರಿನ ಅರಣ್ಯಗಳಲ್ಲಾದ, ದಾಖಲಾದ ಅಪಘಾತಗಳ ಸಂಖ್ಯೆ ೮೮.  ಕೇವಲ ಹೆದ್ದಾರಿ ನಿರ್ಮಿಸಿದ್ದರಿಂದಲೇ ಇಷ್ಟಾದರೆ ಜನರ ಅತಿಕ್ರಮಣಗಳಿಂದ ಆಗುವ ನಷ್ಟವೆಷ್ಟಿರಬಹುದು.

ಗಣಿಗಾರಿಕೆಯು ಸೂಕ್ಷ್ಮಜೀವಿ ಪರಿಸರವನ್ನೇ ಕುಲಗೆಡಿಸಿಬಿಡುತ್ತದೆ.  ದೊಡ್ಡ ದೊಡ್ಡ ಪರ್ವತಗಳೇ ಗಣಿಗಾರಿಕೆಯಿಂದ ಮಾಯವಾಗುತ್ತಿವೆ.  ಚಿರತೆ, ಹುಲಿ, ಆನೆಗಳ ವಿನಾಶ ಕಣ್ಣಿಗೆ ಕಾಣುವಂತಹುದು.  ಆದರೆ ನರಿ, ಸೀಳುನಾಯಿ, ಕರಡಿ, ತೋಳ, ಕಿರುಬ ಮುಂತಾದ ಮಧ್ಯಮವರ್ಗದ ಪ್ರಾಣಿಗಳ ಅವನತಿ ಕಾಣಿಸದು.  ದಾಖಲೂ ಆಗದು.  ನಮ್ಮ ಕಲ್ಲಿದ್ದಲು ಗಣಿಪ್ರದೇಶಗಳೆಲ್ಲಾ ಇರುವುದು ದಟ್ಟಕಾಡಿನಲ್ಲಿ.  ಕಾಡಿನ ನೆಲದಾಳದಲ್ಲಿ ಕಲ್ಲಿದ್ದಲಿಲ್ಲದಿದ್ದರೆ ಅಭಿವೃದ್ಧಿಯೇ ಆಗದು ಎನ್ನುವ ಪರಿಸ್ಥಿತಿ ನಮ್ಮದು.  ಗಣಿಗಾರಿಕೆಯು ಮನುಷ್ಯ ಅಭಿವೃದ್ಧಿ, ವ್ಯಕ್ತಿಗತ ಅಭಿವೃದ್ಧಿಯ ಮಾರ್ಗವೇ ಹೊರತು ಸರ್ವಾಂಗೀಣ ಅಭಿವೃದ್ಧಿ ಖಂಡಿತಾ ಅಲ್ಲ ಎಂಬುದು ಈಗ ಸೂರ್ಯಗೋಚರ.

ದೊಡ್ಡ ದೊಡ್ಡ ನೀರಾವರಿ ಯೋಜನೆಗಳಿರಬಹುದು, ಸಣ್ಣದಿರಬಹುದು.  ಒಟ್ಟಾರೆ ಕಾಡಿನ ನಡುವೆಯೇ ನದಿ ಹರಿವ ಕಾರಣ ಕಾಡುನಾಶ ನಿಶ್ಚಿತ.  ಜಲಾಶಯಗಳು ಸಾವಿರಾರು ಎಕರೆ ಕಾಡನ್ನೇ ನುಂಗುತ್ತವೆ.  ನೀರಾವರಿ ಉದ್ದೇಶವಿದ್ದರಂತೂ ಕಾಲುವೆಗಳು ಸಾವಿರಾರು ಮೈಲುಗಳ ಉದ್ದಕ್ಕೂ ವಿನಾಶ ಮಾಡುತ್ತಲೇ ಸಾಗಿರುತ್ತವೆ.  ಯಾವುದೇ ಕಾಲುವೆಯೂ ದೇಶ ವಿಭಜನೆ ಮಾಡಿ ಗಡಿರೇಖೆ ಎಳೆದರೆ ಆಗುವ ನಷ್ಟವನ್ನೇ ನೀಡುತ್ತದೆ.  ವನ್ಯಜೀವಿಗಳು ಎಂದೆಂದೂ ಕಾಲುವೆಯನ್ನು ದಾಟಲು ಸಾಧ್ಯವಿಲ್ಲದಂತೆ ನಿರ್ಮಿಸಲಾಗಿದೆ.  ವಿಭಜನೆಯಿಂದಾಗುವ ಮನುಷ್ಯ ಪರಿಣಾಮಗಳ ಚಿತ್ರಣ ಆಗಾಗ ನೋಡುತ್ತಲೇ ಇರುವ ನಾವು, ವನ್ಯಜೀವಿಗಳ ಕುಟುಂಬಗಳನ್ನು ಒಡೆದು ಉಂಟುಮಾಡುವ ಪರಿಣಾಮಗಳನ್ನು ಗಮನಿಸುವುದೇ ಇಲ್ಲ.  ಶರಾವತಿ ಕಣಿವೆಯ ಕೆಂಜಳಿಲು, ಸಿಂಹಬಾಲದ ಕೋತಿ ಮುಂತಾದ ಜೀವಿಗಳ ನಾಶಕ್ಕೆ ಜಲಾಶಯಗಳೇ ಕಾರಣ ಎಂಬುದು ವಿಪರ್ಯಾಸ.

ಕಳ್ಳಸಾಗಾಣಿಕೆಯಿಂದಲೂ ಜೀವವೈವಿಧ್ಯ ವಿನಾಶ ಹೆಚ್ಚುತ್ತಿದೆ.  ಪ್ರತಿವರ್ಷ ಸಾವಿರಾರು ನಕ್ಷತ್ರಮೀನುಗಳು, ಕಡಲಾಮೆಗಳು, ಇಮ್ಮಂಡೆ ಹಾವು, ಮೊಸಳೆಗಳು ಹೀಗೆ ಅಂತಾರಾಷ್ಟ್ರೀಯ ವಿಮಾನನಿಲ್ದಾಣಗಳಲ್ಲಿ, ಬಂದರುಗಳಲ್ಲಿ ಹಿಡಿದ ಸುದ್ದಿಗಳು ಕಾಣಿಸುತ್ತವೆ.  ಇವುಗಳಿಗೆಲ್ಲಾ ಪ್ರಮುಖ ಮಾರುಕಟ್ಟೆ ಚೀನಾ, ಜಪಾನ್ ಹಾಗೂ ಕೊರಿಯಾಗಳು.  ಜೀರುಂಡೆ, ಚಿಟ್ಟೆ, ಪಕ್ಷಿಗಳು, ಘೇಂಡಾಮೃಗ, ಚಿರತೆ, ಹಾವು, ಹಲ್ಲಿಗಳು. ಕೆಲವೊಮ್ಮೆ ಇಡೀ ಇಡೀ ಸಾಗಾಣಿಕೆಯೂ ಇದೆ.  ಕೆಲವೊಮ್ಮೆ ಅಂಗಾಂಗಳನ್ನಷ್ಟೇ ಕಳುಹಿಸುವುದೂ ಇದೆ.  ಕೆಲವಷ್ಟನ್ನು ಆಹಾರಪದಾರ್ಥಗಳಾಗಿ ಕಳುಹಿಸುವಿಕೆಯೂ ಇದೆ.  ಹೀಗೆ ಕೇವಲ ಭಾರತದಿಂದ ೨೦ ಸಾವಿರ ಡಾಲರ್ ವಾರ್ಷಿಕ ವಹಿವಾಟು ನಡೆಯುತ್ತಿದೆ ಎಂಬುದು ಒಂದು ಸಣ್ಣ ಊಹೆ.  ಇಷ್ಟು ದಿನ ನಾಟಾ, ಉಪಕರಣಗಳನ್ನು ತಯಾರಿಸುವ ಮರಗಳು, ಔಷಧೀಯ ಸಸ್ಯಗಳ ಕಳ್ಳಸಾಗಾಣಿಕೆ ಮಾತ್ರ ಪ್ರಮುಖ ಸುದ್ದಿಯಾಗುತ್ತಿತ್ತು.  ಟ್ರಾಫಿಕ್ ಇಂಡಿಯಾ ಎನ್ನುವ ಸಂಸ್ಥೆ ಕಳ್ಳಸಾಗಾಣಿಕೆಯ ಕರಾಳಮುಖಗಳನ್ನೆಲ್ಲಾ ಬಯಲಿಗೆಳೆಯುತ್ತಿದೆ.  ಇದರಲ್ಲಿ ಎಷ್ಟೋ ಅರಣ್ಯಾಧಿಕಾರಿಗಳು, ಸಚಿವರುಗಳೂ ಇದ್ದಾರೆ ಎಂಬುದನ್ನೂ ಸಹ ಸಂಸ್ಥೆಯ ಮುಖ್ಯಸ್ಥ ಸಮೀರ್‌ಸಿನ್ಹಾ ಆತಂಕದಿಂದ ಹೇಳುತ್ತಾರೆ.  ಅವರ ಜೀವವೇ ಅಪಾಯದಂಚಿನಲ್ಲಿರುವುದು (ಅವರ ಸಂಸ್ಥೆಯ ಸಂಶೋಧನೆಗಳಿಂದ) ವಿಷಾದನೀಯ.  ಆದರೂ ಸಂಸ್ಥೆಯು ಚೀನಾ, ಜಪಾನ್ ಸರ್ಕಾರಗಳೊಂದಿಗೆ ಈ ಕುರಿತು ಮಾತುಕತೆಗಳನ್ನಾಡುತ್ತಿದೆ.  ಇದೇ ರೀತಿ ಅವರು ಕಂಡಕಂಡ ಜೀವಿಗಳನ್ನೆಲ್ಲಾ ಕೊಂದು ಉಪ್ಪಿನಕಾಯಿ ಮಾಡಿಕೊಂಡು ತಿಂದರೆ ಭಾರತದ ವನ್ಯಜೀವಿಲೋಕ ಸರ್ವನಾಶ ಖಂಡಿತ ಎಂಬುದರ ಮನವರಿಕೆ ಮಾಡಿಕೊಡಲು ಸಂಸ್ಥೆಯು ಪ್ರಯತ್ನಿಸುತ್ತಿದೆ.

ಬುಡಕಟ್ಟು ಜನಾಂಗ, ಮಾಂಸಾಹಾರ ತಿನ್ನುವವರು, ಅಲೆಮಾರಿಗಳು, ಸಿಳ್ಳೆಖ್ಯಾತರು ಹೀಗೆ ಅನೇಕ ಜನಾಂಗಗಳ ಮೂಲ ಆಹಾರವೇ ವನ್ಯಜೀವಿಗಳು.  ಅಲೆಮಾರಿಗಳು ಮುಂಗುಸಿ ಕಂಡರೆ ಬೆಂಬಿಡದೇ ಹಿಡಿಯುತ್ತಾರೆ.ತಿನ್ನಲು ಹಾಗೂ ಔಷಧೀಯ ಕಾರಣಗಳಿಗೆ.  ಹಾವುಗಳು, ಕಾಡುಬೆಕ್ಕು, ಅಳಿಲುಗಳು, ಉಡ ಮುಂತಾದ ಸಣ್ಣಗಾತ್ರದ ಜೀವಿಗಳೇ ಇವರ ಬೇಟೆ.  ಆದರೆ ಸರ್ಕಾರ ಬೇಟೆಯನ್ನು ನಿಷೇಧಿಸಿದೆ.  ಇವರಿಗೆ ಬೇಟೆ ಬಿಟ್ಟು ಬೇರೇನೂ ಗೊತ್ತಿಲ್ಲ. ಗಡ್ಡೆಗೆಣಸು, ಸೊಪ್ಪು, ಕಾಡಿನ ಹಣ್ಣು ತರಕಾರಿಗಳು ಇವರ ಹೊಟ್ಟೆ ತುಂಬಿಸದು.  ನಗರಗಳಿಗೆ ಬರಲಾರರು.  ಕಾಡಿನಲ್ಲೇ ಇರಲಾರರು.   ಏನು ಮಾಡಬೇಕು?  ಇದು ಒರಿಸ್ಸಾದ ಬುಡಕಟ್ಟು ಮಹಿಳೆ ಇನಾಸಿನ್‌ಬಾಯಿಯ ಪ್ರಶ್ನೆ.

ಅರಣ್ಯದಲ್ಲಿ ಬದುಕುವುದು ನಮ್ಮ ಜೀವನಕ್ರಮ.  ಹುಲಿ ಜಿಂಕೆಯನ್ನು, ಜಿಂಕೆ ಹುಲ್ಲನ್ನು ತಿನ್ನುವಂತೆ ನಾವು ಹುಲಿಯನ್ನೋ, ಜಿಂಕೆಯನ್ನೋ ತಿನ್ನುತ್ತೇವೆ.  ಹುಲಿ ಎಂದರೆ ಬೆಕ್ಕಿದ್ದಂತೆ.  ಆನೆ ಎಂದರೆ ಒಂದು ತಿಂಗಳ ಆಹಾರ ಸಿಕ್ಕಂತೆ.  ಆದರೂ ಆನೆಯ ಮಾಂಸ ರುಚಿಯಿಲ್ಲದ ಕಾರಣ ತಿನ್ನುವುದಿಲ್ಲ ಬಿಡಿ.  ನರಿ, ಕಿರುಬಗಳೇ ವಾಸಿ ಎನ್ನುವ ಅವರು ತಮ್ಮ ಆಹಾರಪದ್ಧತಿಯನ್ನವರು ಬಿಚ್ಚಿಡುತ್ತಾರೆ.

ಗಂಡಸರ ಕೆಲಸ ಬೇಟೆ.  ಸತ್ತಪ್ರಾಣಿಗಳನ್ನು ಸಿಗಿದು ಚರ್ಮ ಒಣಗಿಸಿ ಮಾರುವುದು ಹೆಂಗಸರ ಕೆಲಸ.  ಅದರಿಂದ ಸಿಗುವ ಕಾಸು ಬಟ್ಟೆ ಹಾಗೂ ಇತರ ಆಹಾರವಸ್ತುಗಳಿಗೆ ಮಾತ್ರ ಸಾಕಾಗುತ್ತದೆ.  ವ್ಯಾಪಾರಿಗಳು ಕೊಡುವ ವಿಷದ ಟಾಬ್ಲೆಟ್ ಬಳಸಿದರೆ ಮಾಂಸ ತಿನ್ನಲು ಆಗದು.  ಆಗ ಅಕ್ಕಿ, ಗೋಧಿ ಏನೆಲ್ಲಾ ಕೊಳ್ಳಬೇಕಾಗುತ್ತದೆ. ಮಕ್ಕಳು ಹಕ್ಕಿಗಳ, ಮಂಗಗಳ ಧ್ವನಿ ಅನುಕರಿಸುವುದರಲ್ಲಿ ಚಾಣಾಕ್ಷರು.  ಹಕ್ಕಿಗಳಂತೆ ಕೂಗಿ ಬೇರೆ ಹಕ್ಕಿಗಳು ತಮ್ಮ ಬಳಿ ಬರುವಂತೆ ಮಾಡುತ್ತಾರೆ.  ಇವರು ಚಾಟಿಬಿಲ್ಲಿನಿಂದ ಕಲ್ಲು ಬೀಸಿ [ಕವಣೆ] ಹಕ್ಕಿಗಳನ್ನು ಕೆಡವುತ್ತಾರೆ.

ಬೇಟೆ ನಿಷೇಧದಿಂದಾಗಿ ಹಕ್ಕಿಪಿಕ್ಕಿ ಜನಾಂಗದ ಗಂಡಸರೆಲ್ಲಾ ಜೈಲು ಸೇರಿದ್ದಾರೆ.  ಹೆಂಗಸರು ಪರ್ಯಾಯ ದಾರಿಯನ್ನು ಸರ್ಕಾರ ತೋರಿಸುತ್ತದೆ ಎಂದು ಕಾಯುತ್ತಿದ್ದಾರೆ.  ಕಾಡಿನಿಂದ ಯಾವ ಆದಾಯವೂ ಇಲ್ಲ.  ಎಲ್ಲರೂ ಹುಲಿಗಳು ಹಾಗೂ ಇತರ ಪ್ರಾಣಿಗಳ ಸಂಖ್ಯೆ ಕ್ಷೀಣಿಸುತ್ತಿದೆ ಎಂದು ಯೋಚಿಸುತ್ತಾರೆ.   ನಮ್ಮ ಅವನತಿ ಯಾರೂ ಕೇಳುತ್ತಿಲ್ಲ.  ನಮಗೆ ನಮ್ಮ ಬದುಕೇ ದೊಡ್ಡದಲ್ಲವೇ? ಇನ್‌ಸಿನ್‌ಬಾಯಿಯ ಪ್ರಶ್ನೆ ನಿಮ್ಮದೂ, ನಮ್ಮದೂ ಸಹ ಅನ್ನಿಸುವುದಿಲ್ಲವೇ?

ಸರ್ಕಾರ ಇವರ ಮಕ್ಕಳಿಗೋಸ್ಕರ ಶಾಲೆ ನಡೆಸುತ್ತಿದೆ.  ಅವರು ಖಂಡಿತಾ ಕಾಡಿಗೆ ಹೋಗಲಾರರು.  ಸರ್ಕಾರದ ಸವಲತ್ತುಗಳು ಸಿಕ್ಕರೆ ಯಾರೂ ಕಾಡಿಗೆ ಹೋಗುವುದಿಲ್ಲ ಎನ್ನುತ್ತಾರೆ.  ಆದರೆ ವ್ಯಾಪಾರಿಗಳ ಆಮಿಷ ಇವರ ಹೆಂಡ ಹಾಗೂ ಇತರ ವ್ಯಸನಗಳನ್ನು ಪೂರೈಸುತ್ತದೆ.   ನಿಮಗೆ ಪ್ರಾಣಿಗಳು ಬದುಕುವುದು ದೊಡ್ಡದು.  ನಮಗೆ ಅದರ ಬೇಟೆಯೇ ದೊಡ್ಡದು ಎನ್ನುವ ಇವರನ್ನು ಶಿಕ್ಷಣದ ಮೂಲಕ ಮುಖ್ಯವಾಹಿನಿಗೆ ತರಬೇಕು ಹೊರತಾಗಿ ಶಿಕ್ಷೆಯ ಮೂಲಕವಲ್ಲ.

ಕೊನೆಯದಾಗಿ ನಮ್ಮ ಧಾರ್ಮಿಕ ಕ್ಷೇತ್ರಗಳೆಲ್ಲಾ ಇರುವುದು ದಟ್ಟಕಾಡಿನಲ್ಲಿ.  ಶಬರಿಮಲೈ, ಶ್ರೀಶೈಲ, ತಿರುಪತಿ, ಮಲೆಮಹದೇಶ್ವರಸ್ವಾಮಿ ಇವರೆಲ್ಲಾ ಇರುವುದು ದಟ್ಟಕಾಡಿನಲ್ಲಿ.  ಭಕ್ತಿಯು ಅದಮ್ಯತೆಯಿಂದ ಪಾರಾಕಾಷ್ಠೆಗೆ ತಲುಪಿದೆ.  ಜನರು ತಂಡತಂಡವಾಗಿ ದೇವರ ದರ್ಶನಕ್ಕೆ ನುಗ್ಗುತ್ತಿದ್ದಾರೆ.  ಇಷ್ಟು ಪ್ರಮಾಣದ ಅತಿಕ್ರಮಣವನ್ನು ಯಾವ ಕಾಡೂ ಸಹಿಸದು.  ಅಲ್ಲಿನ ಜೀವಿಗಳಿಗೆ ಇದು ದೊಡ್ಡ ಸಮಸ್ಯೆಯೂ ಹೌದು.  ಮೋಜಿಗಾಗಿ, ಭಕ್ತಿಗಾಗಿ, ನೆಮ್ಮದಿಗಾಗಿ, ಬದುಕಿಗಾಗಿ ಹೀಗೆ ಪ್ರತಿಯೊಂದಕ್ಕೂ ಕಾಡನ್ನೇ ಅವಲಂಬಿಸಿರುವ ನಮಗೆ ಕಾಡಿನ ಸಂರಕ್ಷಣೆ ಎನ್ನುವುದು ಮಾತ್ರ ಹೊರೆಯಾಗಿದೆ.