ನಾವು ಕೆಲವೊಮ್ಮೆ ಅತ್ತಲೂ ಇಲ್ಲದೆ, ಇತ್ತಲೂ ಇಲ್ಲದೆ ಬದುಕಿಬಿಡುತ್ತೇವೆ; ನಾವು ಯಾವ ವರ್ಗಕ್ಕೆ ಸೇರಿದವರೆಂದು ಹೇಳುವುದೇ ಕಷ್ಟವೆಂಬಂತೆ ಎರಡೂ ಬದಿಯ ಗುಣವಿಶೇಷಗಳಲ್ಲಿ ಕೆಲವನ್ನು ಆವಾಹಿಸಿಕೊಂಡು, ನಮಗೇ ಕಲಮಲ ಆಗುವ ರೀತಿ ಇದ್ದುಬಿಡುತ್ತೇವೆ. ಇದು ಸಿದ್ಧಾಂತಗಳ ವಿಷಯದಲ್ಲೇ ಆಗಬಹುದು; ಲೌಕಿಕ, ಪಾರಮಾರ್ಥಿಕ ಯಾವುದೂ ಆಗಬಹುದು. ಆದರೆ, ಅಧಮವೋ, ಮಧ್ಯಮವೋ, ಉತ್ತಮವೋ, ಕನಿಷ್ಠ ಪಕ್ಷ ನಾವು ಜೀವಿಗಳು ಎಂಬುದಂತೂ ಖಚಿತ ತಾನೇ? ಆದರೆ, ಇಲ್ಲೊಂದು ಗುಂಪಿನ ಸೂಕ್ಷ್ಮಾಣುಜೀವಿಗಳನ್ನು ಜೀವಿಗಳು ಎನ್ನಲು ಹಿಂದೆಮುಂದೆ ನೋಡಬೇಕಾಗಿದೆ! ಇದಕ್ಕೆ ಕಾರಣ, ಅವು, ಜೀವಿಗಳ ಗುಣವಿಶೇಷಗಳ ಜೊತೆಗೇ ನಿರ್ಜೀವ ವಸ್ತುಗಳ ಗುಣವಿಶೇಷಗಳನ್ನೂ ಉಳ್ಳವು ಎಂಬುದು. ‘ವೈರಸ್’ ಅಥವಾ ವೈರಾಣುಗಳು  – ಇವುಗಳ ಸಾಮ್ರಾಜ್ಯದ ಹೆಸರನ್ನು ನೀವು ಕೇಳಿಯೇ ಇರುತ್ತೀರ: ಆದರೆ, ನೀವು ಪ್ರತೀ ಬಾರಿ ಈ ಹೆಸರು ಕೇಳಿದಾಗ , ಆ ಪದವು ಈ ಸೂಕ್ಷ್ಮಾಣುಜೀವಿಗೇ ಸಂಬಂಧ ಪಟ್ಟಿದ್ದೇನೂ ಆಗಿರಬೇಕಿಲ್ಲ. ಸಾಮಾನ್ಯವಾಗಿ ಗಣಕಯಂತ್ರಗಳು, ತಂತ್ರಾಂಶಗಳನ್ನು ಕಾಡುವ ಮಾರಕ ‘ಕೋಡ್’ಗಳಿಗೂ ವೈರಸ್ ಎಂದೇ ಹೆಸರು. ಸೂಕ್ಷ್ಮಾಣು ಜೀವಿ ವೈರಸ್ನ ಹಾನಿಕಾರಕ ಪರಿಣಾಮಗಳು ಮತ್ತು ಕಾರ್ಯವೈಖರಿಗೆ ಹೋಲುವಂತೆಯೇ ಈ ಗಣಕಯಂತ್ರ ತಂತ್ರಾಂಶದ ಕೋಡ್ ಕೂಡ ವರ್ತಿಸುವ ಕಾರಣಕ್ಕೆ, ಈ ಹೆಸರನ್ನು ನೀಡಲಾಗಿದೆ.

ವೈರಸ್ಗಳು ಜೀವಿಗಳೇ? ಅಥವಾ ನಿರ್ಜೀವ ವಸ್ತುಗಳೇ? ಈ ಪ್ರಶ್ನೆಗಳಿಗೆ ವಿಶ್ವವಿದಿತ ಸಮರ್ಪಕ ಉತ್ತರ ಇನ್ನೂ ಸಿಕ್ಕಿಲ್ಲ; ಸಾಮಾನ್ಯವಾಗಿ ಎಲ್ಲಾ ಜೀವಿಗಳ ಜೀವಕೋಶದೊಳಗೆ ಇರುವ ಜೀವದ್ರವ್ಯವು, ಅಥವಾ ಅದಕ್ಕೆ ಹೋಲುವಂತಹ ಮಾಧ್ಯಮವೂ ವೈರಸ್ನಲ್ಲಿ ಇಲ್ಲ. ಇತರ ಜೀವಿಗಳಲ್ಲಿ ನಡೆಯುವಂತಹಾ ಯಾವುದೇ ಚಯಾಪಚಯ ಕ್ರಿಯೆಯೂ ವೈರಸ್ಗಳಲ್ಲಿ ನಡೆಯುವುದಿಲ್ಲ; ಅಂದರೆ ಉಸಿರಾಟ. ದೇಹದ ಬೆಳವಣಿಗೆ, ತನ್ನಿಂತಾನೆ ಸಂತಾನೋತ್ಪತ್ತಿ ಇತ್ಯಾದಿ ಯಾವುದು ವೈರಾಣುಗಳಲ್ಲಿ ಇಲ್ಲ. ಇತರ ಜೀವಿಗಳಂತೆ ಎರಡೆರಡು ಬಗೆಯ ನ್ಯೂಕ್ಲಿಕ್ ಆಮ್ಲಗಳನ್ನು ಕೂಡ ಇಲ್ಲಿ ಕಾಣಲಾಗದು; ರಾಸಾಯನಿಕಗಳನ್ನು ಸ್ಫಟಿಕೀಕರಣಗೊಳಿಸಿ ಶೇಖರಿಸಿ ಇಡುವಂತೆ, ವೈರಾಣುಗಳ ಸ್ಫಟಿಕಗಳನ್ನು ಮಾಡಿ ಶೇಖರಿಸಿ ಇಡಬಹುದು ಎಂದರೆ ಇದೆಲ್ಲಾದರೂ ಜೀವಿಯಾಗಿರಲು ಸಾಧ್ಯವೇ ಎನಿಸುತ್ತದೆ ಅಲ್ಲವೇ? ಆದರೆ, ಇವು ಜೀವಿಗಳೇನೋ ಎಂಬಂತಹ ಹಲವು ಗುಣಲಕ್ಷಣಗಳನ್ನೂ ಕಾಣಬಹುದು; ಉದಾಹರಣೆಗೆ, ಒಂದೇ ಆದರೂ ಸರಿಯೇ, ನ್ಯೂಕ್ಲಿಕ್ ಆಮ್ಲದ ಇರುವು, ಜೊತೆಗೇ ಪ್ರೋಟೀನ್ ಕವಚ, ಕಿಣ್ವಗಳ ಇರುವು, ಇತರ ಜೀವಿಯ ಒಳಹೊಕ್ಕು, ಆ ಜೀವಿಯ ಜೀವಕೋಶದೊಳಗಿನ ಮಾಧ್ಯಮವನ್ನು ಬಳಸಿಕೊಂಡು ಸಂತಾನೋತ್ಪತ್ತಿ ನಡೆಸುವ ಸಾಧ್ಯತೆ, ಇತರ ಜೀವಿಗಳಲ್ಲಿ ಕಾಯಿಲೆಗಳನ್ನು ಉಂಟುಮಾಡುವುದು. ಹೀಗಾಗಿ, ಜೀವಿಯೋ ಅಲ್ಲವೋ ಎಂಬ ಜಿಜ್ಞಾಸೆಗೆ ಉತ್ತರ ಸರಳವಿಲ್ಲ. ಸಧ್ಯಕ್ಕೆ, ವೈರಸ್ ಒಂದು ಸೂಕ್ಷ್ಮಾಣುಜೀವಿ ಎಂದು ಪರಿಗಣಿಸಿ, ಅವುಗಳ ಬಗ್ಗೆ ಮೂಲಭೂತ ವಿವರಗಳನ್ನು ಪರಾಮರ್ಶಿಸೋಣ.

ವೈರಸ್ಗಳು  ಅತ್ಯಂತ ಸರಳ ದೇಹರಚನೆ ಹೊಂದಿದ್ದು, ಅವುಗಳ ದೇಹದಲ್ಲಿ ಮುಖ್ಯವಾಗಿ ಕೇವಲ ಎರಡು ಘಟಕಗಳು ಇರುತ್ತವೆ: ಒಂದು ವಂಶವಾಹಿ, ಮತ್ತೊಂದು ಅದನ್ನು ಕಾಪಾಡಲು ಇರುವ ಪ್ರೋಟೀನ್ ಕವಚ, ಇಷ್ಟೇ! ಎಷ್ಟು ಸರಳ ದೇಹರಚನೆಯ ವೈರಸ್ಗಳು ಎಂತಹ ಆಟಾಟೋಪ ಸೃಷ್ಟಿಸುತ್ತವೆ ಎಂದರೆ, ದೊಡ್ಡ ದೊಡ್ಡ ಪ್ರಾಣಿಗಳು, ಅಷ್ಟೇ ಏಕೆ, ನಾವು ಮನುಷ್ಯರೂ ಅವುಗಳ ಮುಂದೆ ತಲೆಬಾಗಲೇ ಬೇಕಾಗಿದೆ. ಭಯಂಕರ ಕಾಯಿಲೆಗಳನ್ನು ಸೃಷ್ಟಿಸುವುದರಲ್ಲಿ ವೈರಸ್ಗಳು ಜಗತ್ಪ್ರಸಿದ್ಧ. ಸರಳ ದೇಹರಚನೆಯ ಹೊರತಾಗಿಯೂ, ಎಲ್ಲರಲ್ಲೂ ತಲ್ಲಣ ಸೃಷ್ಟಿಸುವ ವೈರಸ್ಗಳಿಂದ ನಾವೂ ಒಂದೆರಡು ಪಾಠಗಳನ್ನು ಕಲಿಯಬೇಕೇನೋ!

ವೈರಸ್ ಎಂಬ ಹೆಸರಿನ ಮೂಲವು ಇದರ ರೋಗಕಾರಕ, ಹಾನಿಕಾರಕ ಅಂಶವೇ; ಗ್ರೀಕ್, ಲ್ಯಾಟಿನ್ ಮತ್ತು ಸಂಸ್ಕೃತದಲ್ಲಿ ರೋಗಕಾರಕ, ಅಪಾಯಕಾರಿ ಎಂಬುದನ್ನು ಸೂಚಿಸುವ ‘ವಿಷ’, ‘ವಿರುಲೆಂಟ್’ ಪದಗಳು ವೈರಸ್ ಪದದ ಮೂಲ ಎನ್ನುತ್ತದೆ ಸೂಕ್ಷ್ಮಜೀವಾಣು ಇತಿಹಾಸ. ಕಣ್ಣಿಗೆ ಕಾಣದ ಈ ಸೂಕ್ಷ್ಮಾಣು ಜೀವಿ, ತಾನು ಉಂಟುಮಾಡಿದ ರೋಗದ ಮುಖಾಂತರವೇ, ಮೊದಲು ಬೆಳಕಿಗೆ ಬಂದಿದ್ದು. ರೇಬಿಸ್ ಕಾಯಿಲೆಯ ಬಗ್ಗೆ ಅಧ್ಯಯನ ಮಾಡುತ್ತಿದ್ದ ಜೀವವಿಜ್ಞಾನಿ ಲೂಯಿ ಪಾಸ್ಚರ್, ಬ್ಯಾಕ್ಟೀರಿಯಾಗಿಂತಲೂ ಸಣ್ಣದಾದ ಯಾವುದೋ ಸೂಕ್ಷ್ಮಾಣುಜೀವಿಯ ಇರುವನ್ನು ಊಹಿಸಿದ; ಬ್ಯಾಕ್ಟೀರಿಯಾಗಿಂತಲೂ ಸಣ್ಣದಾದ ಜೀವಿ ಇದೆಯೇ ಎಂಬುದನ್ನು ಸಾಬೀತು ಪಡಿಸಲು, ನಂತರದ ಬೆಳವಣಿಗೆಗಳಲ್ಲಿ, ಚಾರ್ಲ್ಸ್ ಚೇಂಬರ್ಲ್ಯಾಂಡ್ ಎಂಬ ಸೂಕ್ಷ್ಮಜೀವಾಣುವಿಜ್ಞಾನಿ ತಯಾರಿಸಿದ ಶೋಧಕವೊಂದು ಸಹಕಾರಿಯಾಯಿತು; ಈ ಶೋಧಕವು ಬ್ಯಾಕ್ಟೀರಿಯಾಗಿಂತಲೂ ಬಹಳ ಸಣ್ಣ ಗಾತ್ರದ ರಂಧ್ರಗಳನ್ನುಳ್ಳ ಕಾರಣ, ಬ್ಯಾಕ್ತೀರಿಯಾವು ಆ ಶೋಧಕದ ಮೂಲಕ ಹಾಯದೇ, ಮೇಲೆ ಚರಟವಾಗಿ ಉಳಿದುಬಿಡುತ್ತಿತ್ತು; ಶೋಧಕದ ಮೂಲಕ ಹರಿದು ಬಂದ ದ್ರವದಲ್ಲಿ, ಬ್ಯಾಕ್ಟೀರಿಯಾ ಇಲ್ಲದ್ದರಿಂದ, ಆ ದ್ರವವನ್ನು ಯಾವುದಾದರೂ ಜೀವಿಗೆ ನೀಡಿದರೆ, ಯಾವುದೇ ರೋಗ ಉಂಟಾಗಬಾರದು ಅಲ್ಲವೇ? ಆದರೂ, ರೋಗ ಉಂಟಾಯ್ತು ಎಂದರೆ ಆ ದ್ರವದಲ್ಲಿ ಬ್ಯಾಕ್ಟೀರಿಯಾಗಿಂತಲೂ ಚಿಕ್ಕದಾದ ರೋಗಕಾರಕ ಜೀವಿ ಇದೆ ಎಂದಾಯ್ತಲ್ಲ? ಆ ರೋಗಕಾರಕ ಜೀವಿಯೇ ವೈರಾಣು; ಇಲ್ಲಿ ವಿವರಿಸಲಾದ ಬಗೆಯಲ್ಲಿಯೇ ಸಂಶೋಧನೆ ನಡೆಸಿ, ರೋಗತಪ್ತ ತಂಬಾಕು ಗಿಡದ ಎಲೆಗಳ ದ್ರವದಿಂದ, ಮೊದಲ ವೈರಸ್ಸನ್ನು,  ದಿಮಿತ್ರಿ ಇವನೋವ್ಸ್ಕಿ ಎಂಬ ರಷ್ಯನ್ ಜೀವವಿಜ್ಞಾನಿ ಹೊರತೆಗೆದ, ಲೋಕಕ್ಕೆ ಹೊಸ ಬಗೆಯ ಜೀವಿಯನ್ನು ಪರಿಚಯಿಸಿದ. ಮಾರ್ಟಿನಸ್ ಬೈಜರಿನ್ಕ್, ಫ್ರೆಡೆರಿಕ್ ಲೋಯೆಫ್ಲರ್ ಅವರಂತಹ ಹಲವಾರು ಜೀವವಿಜ್ಞಾನಿಗಳು ವೈರಸ್ಗಳ ಬಗ್ಗೆ ಹೊಸ ಹೊಸ ಅಧ್ಯಯನಗಳನ್ನು ನಡೆಸಿದರು ಮತ್ತು ಅಚ್ಚರಿದಾಯಕ ಆವಿಷ್ಕಾರಗಳಿಗೆ ಕಾರಣರಾದರು. ವೈರಸ್ಗಳು ದ್ರವರೂಪೀ ಜೀವಿಗಳು ಎಂದು ಬೈಜರಿನ್ಕ್ ಪ್ರತಿಪಾದಿಸಿದ್ದ ಬೆನ್ನಲ್ಲೇ ವೆಂಡೆಲ್ ಸ್ಟಾನ್ಲಿ ಎಂಬ ವಿಜ್ಞಾನಿ, ವೈರಸ್ಗಳನ್ನು ಸ್ಫಟಿಕೀಕರಣಗೊಳಿಸಿ, ಅದು ಸಾಮಾನ್ಯ ಜೀವಿಯಲ್ಲ, ನಿರ್ಜೀವ ರಾಸಾಯನಿಕಗಳಂತೆ ಘನಿರ್ಭವಿಸಬಹುದು ಎಂದು ತೋರಿಸಿಕೊಟ್ಟು ಜಗತ್ತನ್ನೇ ನಿಬ್ಬೆರಗಾಗಿಸಿದ; ಇದರಿಂದ ವೈರಾಣುಗಳ ಬಗೆಗಿನ ಸಂಶೋಧನೆಗಳಿಗೆ ಹೊಸ ದಿಕ್ಕು, ಹೊಸ ಆಯಾಮ ದೊರಕಿತು. ವೈರಸ್ಗಳ ಬಗ್ಗೆ ಹೆಚ್ಚೆಚ್ಚು ತಿಳಿಯುತ್ತಾ, ಅವು ಉಂಟು ಮಾಡುತ್ತಿದ್ದ ರೋಗಗಳು, ಆ ರೋಗಗಳು ಹರಡುವ ಬಗೆ, ಅವುಗಳ ಚಿಕಿತ್ಸೆಯ ಸಾಧ್ಯತೆಗಳು – ಇವೆಲ್ಲವೂ ಅರಿವಿಗೆ ನಿಲುಕುತ್ತಾ ಸಾಗಿತು.

ಆವಾಸಸ್ಥಾನ

ವೈರಸ್ಗಳು ಒಂದು ಜೀವಿಯ ಜೀವಕೋಶದ ಹೊರಗೆ ಇರುವಾಗ, ಕೇವಲ ಒಂದು ನಿರ್ಜೀವ ಧೂಳಿನ ಕಣದಂತೆ, ಸುಪ್ತವಾಗಿರುತ್ತದೆ; ಗಾಳಿ, ನೀರು, ಮಣ್ಣಿನ ಮೂಲಕ ಯಾವುದಾದರೂ ಸಸ್ಯ, ಕೀಟ, ಪ್ರಾಣಿ  ಅಥವಾ ಮನುಷ್ಯನ ದೇಹದೊಳಗೆ ಪ್ರವೇಶ ಪಡೆದ ನಂತರ , ಆ ಜೀವಿಯ ಜೀವಕೋಶವೇ ಅವುಗಳ ಆವಾಸಸ್ಥಾನವಾಗುತ್ತದೆ. ಅಲ್ಲಿ ಸೇರಿದ ತಕ್ಷಣ, ಸುಪ್ತವಾಗಿದ್ದ ವೈರಾಣು ಜಾಗೃತವಾಗಿ, ಅತಿಥೇಯ ಜೀವಿಯ ಜೀವಕೋಶದಲ್ಲಿನ ವಂಶವಾಹಿ ನ್ಯೂಕ್ಲಿಕ್ ಆಮ್ಲಗಳನ್ನು ತನ್ನ ಕೈವಶವಾಗಿಸಿಕೊಂಡು, ತನಗೆ ಅನುಕೂಲವಾಗುವ ಕಾರ್ಯಚಟುವಟಿಕೆಗಳನ್ನು ನಡೆಸುವಂತೆ ನಿರ್ದೇಶಿಸುತ್ತದೆ. ಅತಿಥೇಯ ಜೀವಕೋಶದಲ್ಲಿನ ಜೀವದ್ರವ್ಯ, ಪ್ರೋಟೀನ್, ಕಿಣ್ವಗಳು, ಆಹಾರ ಸಾಮಾಗ್ರಿ, ನ್ಯೂಕ್ಲಿಕ್ ಆಮ್ಲಗಳನ್ನು ಬಳಸಿಕೊಂಡು ಸಂತಾನೋತ್ಪತ್ತಿ ನಡೆಸುತ್ತವೆ ಮತ್ತು ಕಾಲಾಂತರದಲ್ಲಿ ಒಂದು ವೈರಾಣು ನೂರಾಗಿ, ನೂರು ಸಾವಿರವಾಗಿ ಹೊರಬರುತ್ತವೆ. ಈ ಇಡೀ ಪ್ರಕ್ರಿಯೆಯೇ ಅತಿಥೇಯ ಜೀವಿಯಲ್ಲಿ ರೋಗವಾಗಿ, ರೋಗಲಕ್ಷಣಗಳ ರೂಪದಲ್ಲಿ ಗೋಚರಿಸುತ್ತದೆ.

ರೂಪವಿಜ್ಞಾನ

ಸುಮಾರು ೫೦೦೦ ಪ್ರಭೇದಗಳನ್ನುಳ್ಳ ವೈರಾಣುಗಳ ಸಾಮ್ರಾಜ್ಯದಲ್ಲಿ, ಅತ್ಯಂತ ದೊಡ್ಡ ವೈರಾಣುವಿನ ಗಾತ್ರ ಕೇವಲ ೧೪೦೦ ನ್ಯಾನೋಮೀಟರ್ ಅಷ್ಟೇ!  ವೈರಾಣುಗಳ ಅಧ್ಯಯನಕ್ಕೆ ಆಪ್ಟಿಕಲ್ ಸೂಕ್ಷ್ಮದರ್ಶಕವು ಖಂಡಿತಾ ಸಾಲದು; ಅತ್ಯಂತ ಶಕ್ತ ಎಲೆಕ್ಟ್ರಾನ್ ಸೂಕ್ಷ್ಮದರ್ಶಕಗಳು ಮಾತ್ರ ನಮಗೆ ವೈರಾಣುವಿನ ರೂಪವನ್ನು ಪರಿಚಯಿಸಲು ಸಾಧ್ಯ. ವೈರಾಣುಗಳು ಒಂದಕ್ಕಿಂತ ಒಂದು ವಿಭಿನ್ನವಾಗಿರುವುದು ತಮ್ಮ ಪ್ರೋಟೀನ್ ಹೊರಕವಚದ ಸಂಯೋಜನೆ, ಗಾತ್ರ ಹಾಗೂ ಆಕಾರದಲ್ಲಿ, ಜೊತೆಗೇ ನ್ಯೂಕ್ಲಿಕ್ ಆಮ್ಲದ ಬಗೆಯಲ್ಲಿ.

ವೈರಾಣುವಿನ ಪ್ರೋಟೀನ್ ಹೊರಕವಚವನ್ನು ‘ಕ್ಯಾಪ್ಸಿಡ್’ ಎಂದೂ, ಅದರ ಘಟಕಗಳನ್ನು ‘ಕ್ಯಾಪ್ಸೋಮಿಯರ್’ ಎಂದೂ ಕರೆಯಲಾಗುತ್ತದೆ; ಈ ಕವಚದ ಒಳಗೆ ಇರುವ ಡಿ.ಎನ್.ಎ ಅಥವಾ ಆರ್.ಎನ್.ಎ ವಂಶವಾಹಿಯು, ಈ ಪ್ರೋಟೀನ್ ಕವಚದ ಘಟಕಗಳು ಹೇಗೆ ಒಂದಕ್ಕೊಂದು ಅಂಟಿಕೊಂಡು, ಯಾವ ಆಕಾರದಲ್ಲಿ ಕವಚದ ರೂಪ ಪಡೆಯಬೇಕು ಎಂಬುದನ್ನು ನಿರ್ಧರಿಸುತ್ತದೆ.

ಸುರುಳಿಯಾಕಾರದ ಹೊರಕವಚ: ಬಹಳಷ್ಟು ವೈರಸ್ಗಳು ಸುರುಳಿಯಾಕಾರದ ಹೊರಕವಚವನ್ನು ಉಳ್ಳದ್ದು ಕಂಡುಬಂದಿದೆ; ಪ್ರೋಟೀನ್ ಘಟಕಗಳು ಒಂದಕ್ಕೊಂದು ಸೇರಿ ಸರಪಳಿಯಾಗಿ, ಆ ಸರಪಳಿಯು ಒಂದು ಕೇಂದ್ರ ಅಕ್ಷದ ಸುತ್ತ ಸುರುಳಿಸುತ್ತಿ, ಹೊರಕವಚದ ನಿರ್ಮಾಣವಾಗುತ್ತದೆ. ಇಂತಹ ವೈರಾಣುಗಳು ಹೊರಗಿನಿಂದ ಕೋಲಿನಂತೆ ಉದ್ದುದ್ದ ಕಂಡುಬಂದರೂ, ಕೂಲಂಕುಶವಾಗಿ ಗಮನಿಸಿದಾಗ, ಸುರುಳಿಯಾಕಾರದ ಹೊರಕವಚ ಕಾಣಸಿಗುತ್ತದೆ. ಮೊದಲು ಕಂಡುಹಿಡಿಯಲಾದ ವೈರಾಣುವಾದ ‘ತಂಬಾಕು ಮೊಸಾಯಿಕ್ ವೈರಾಣು’, ಇದೇ ಸುರುಳಿಯಾಕಾರದ ಹೊರಕವಚ ಉಳ್ಳವೆಂದು ಕಂಡುಬಂದಿದೆ.

ಹೊದಿಕೆಯುಳ್ಳ ಹೊರಕವಚ: ಹೊರಕವಚಕ್ಕೊಂದು ಹೊದಿಕೆಯೇ ಎಂದು ಅಚ್ಚರಿ ಪಡುತ್ತಿದ್ದೀರಾ? ಹೌದು; ವೈರಸ್ಗಳು ತಮ್ಮ ವಂಶವಾಹಿಯ ನಿರ್ದೇಶನದಂತೆ ನಿರ್ದಿಷ್ಟ ಬಗೆಯ ಹೊರಕವಚವನ್ನು ತಯಾರಿಸುತ್ತದೆ; ಆದರೆ, ಅತಿಥೇಯ ಜೀವಕೋಶವನ್ನು ಒಡೆದು ಹೊರಬರುವಾಗ, ಕೆಲವು ವೈರಸ್ಗಳು ಆ ಜೀವಕೋಶದ ಕೋಶಪದರವನ್ನು ತನ್ನ ಸುತ್ತ ಸುತ್ತಿಕೊಂಡು ಹೊರಬರುತ್ತದೆ; ತನ್ನ ರೋಗಕಾರಕ ಗುಣವನ್ನು ಹೆಚ್ಚಿಸಿಕೊಂಡು, ನೈಸರ್ಗಿಕ ಅಥವಾ ಕೃತಕ ಪ್ರತಿರೋಧಕಗಳ ವಿರುದ್ಧ ಹೆಚ್ಚಿನ ಸುರಕ್ಷೆ ಪಡೆಯಲು ಈ ಹೊದಿಕೆ ಸಹಾಯಕ. ಹಾಗಾಗಿ, ವೈರಾಣುಗಳು ಈ ಹೊದಿಕೆಯನ್ನು ಹೊರಕವಚದ ಸುತ್ತಲೂ ಹೊದ್ದ ಕಾರಣ, ಹೊದಿಕೆಯೇ ಎರಡನೆಯ ಹೊರಕವಚದಂತೆ ಕಾಣುತ್ತದೆ. ಇಂತಹ ಹೊದಿಕೆಯುಳ್ಳ ಹೊರಕವಚದ ವರ್ಗವನ್ನು ಪ್ರತಿನಿಧಿಸುವ ವೈರಾಣುಗಳ ಒಂದು ಮುಖ್ಯ ಉದಾಹರಣೆಯೆಂದರೆ, ಅತ್ಯಂತ ಅಪಾಯಕಾರಿಯಾದ ಎಡ್ಸ್ ರೋಗವನ್ನು ಉಂಟುಮಾಡುವ ಎಚ್.ಐ.ವಿ,

ವಿಂಶತಿ ಮುಖಿ ಹೊರಕವಚ: ನೋಡಲು ಬಹಳ ಸುಂದರವಾಗಿ ಕಾಣುವ ಈ ಹೊರಕವಚ, ೨೦ ಸಮತಲ ಮುಖಗಳನ್ನುಳ್ಳ ಆಕಾರದಲ್ಲಿ ಕಂಡುಬರುತ್ತದೆ; ಸಾಮಾನ್ಯವಾಗಿ ಇಂತಹ ಹೊರಕವಚದಲ್ಲಿ ೬೦ ‘ಕ್ಯಾಪ್ಸೋಮಿಯರ್’ ಘಟಕಗಳು ಮೂರು ಘಟಕಗಳಿಗೊಂದರಂತೆ ತ್ರಿಕೋನಾಕೃತಿಗಳನ್ನು ರಚಿಸಿ, ಒಂದು ತ್ರಿಕೋನಕ್ಕೆ ಮತ್ತೊಂದು ಸೇರಿ ೨೦ ಮುಖಗಳ ರಚನೆಯಾಗಿ, ವಿಂಶತಿ ಮುಖಿ ಹೊರಕವಚವು ತಯಾರಾಗುತ್ತದೆ. ಅಡೆನೋ ವೈರಾಣುಗಳು ಇಂತಹ ಕವಚವನ್ನುಳ್ಳ ವೈರಸ್ಗಳಿಗೆ ಉತ್ತಮ ಉದಾಹರಣೆ.

ಸಂಕೀರ್ಣ ಹೊರಕವಚ: ಹಲವಾರು ವೈರಾಣುಗಳ ಹೊರಕವಚವು ಯಾವುದೇ ಒಂದು ಸರಳ ಹಾಗೂ ನಿರ್ದಿಷ್ಟ ಆಕಾರವನ್ನು ಹೋಲುವುದಿಲ್ಲ. ಅಂತಹ ವೈರಾಣುಗಳ ಹೊರಕವಚವು ಆಕಾರ ಹಾಗೂ ಸಂಯೋಜನೆಯಲ್ಲಿ ಸಂಕೀರ್ಣವಾಗಿದ್ದು, ಪಾಕ್ಸ್ ವೈರಾಣು ಹಾಗೂ ಬ್ಯಾಕ್ಟೀರಿಯೋಫಾಜ್ಗಳು ಇದಕ್ಕೆ ಉತ್ತಮ ಉದಾಹರಣೆ.

ವರ್ಗೀಕರಣ:

ವೈರಾಣುಗಳನ್ನು ಅವುಗಳ ರೂಪವಿಜ್ಞಾನ, ಅವುಗಳೊಳಗಿನ ನ್ಯೂಕ್ಲಿಕ್ ಆಮ್ಲದ ಬಗೆ ಹಾಗೂ ಅವು ಯಾವ ಅತಿಥೇಯ ಜೀವಿಯೊಳಗೆ ಜೀವನ ನಡೆಸಿ, ರೋಗ ಉಂಟುಮಾಡುತ್ತವೆ ಎಂಬುದರ ಆಧಾರದ ಮೇಲೆ ಬಗೆಬಗೆಯಾಗಿ ವಿಂಗಡಣೆ ಮಾಡಲಾಗಿದೆ.  ರೂಪವಿಜ್ಞಾನ ಆಧಾರಿತ ವರ್ಗೀಕರಣವನ್ನು ನಾವು ಈಗಾಗಲೇ ಹೊರಕವಚಕ್ಕೆ ಸಂಬಂಧಿಸಿದಂತೆ ಗಮನಿಸಿದ್ದೇವೆ.

ಅತಿಥೇಯ ಜೀವಿ ಆಧಾರಿತ ವರ್ಗೀಕರಣ: ವೈರಾಣುಗಳನ್ನು ಸ್ಥೂಲವಾಗಿ ಸಸ್ಯರೋಗಕಾರಕ ವೈರಾಣುಗಳು, ಪ್ರಾಣಿರೋಗಕಾರಕ ವೈರಾಣುಗಳು ಹಾಗೂ ಬ್ಯಾಕ್ಟೀರಿಯೋಫಾಜ್ ಎಂಬ ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ;

ಸಸ್ಯರೋಗಕಾರಕ ವೈರಾಣುಗಳು, ಆಹಾರ ಬೆಳೆಗಳು ಹಾಗೂ ವಾಣಿಜ್ಯ ಬೆಳೆಗಳಲ್ಲಿ ರೋಗವುಂಟು ಮಾಡಿ, ಇಳುವರಿಯ ಅಪಾರ ಪ್ರಮಾಣದ ನಷ್ಟಕ್ಕೆ ಕಾರಣವಾಗುತ್ತವೆ; ಒಂದು ಗಿಡದಿಂದ ಮತ್ತೊಂದಕ್ಕೆ ಪಕ್ಷಿ/ಪ್ರಾಣಿ/ಕೀಟಗಳ ಮೂಲಕ, ಗಾಯದಿಂದ ಹೊರ ಒಸರುವ ದ್ರವದ ಮೂಲಕ ಹರಡುತ್ತವೆ; ವೈರಾಣು ಪೀಡಿತ ಸಸ್ಯದ ಪರಾಗದಲ್ಲೂ ಅಥವಾ ಬೀಜದಲ್ಲೂ ವೈರಾಣು ಇರಬಹುದಾಗಿದ್ದು, ಆ ಸಸ್ಯದ ಮುಂದಿನ ತಲೆಮಾರುಗಳೂ ರೋಗಪೀಡಿತವಾಗಿಯೇ ಮುಂದುವರೆಯುವ ಸಾಧ್ಯತೆ ಇರುತ್ತದೆ. ಆಲೂಗಡ್ಡೆ ಬೆಳೆಯ ವೈರಾಣು, ಹೂಕೋಸು ಮೊಸಾಯಿಕ್  ವೈರಾಣು, ಬಾರ್ಲಿ ಪಟ್ಟೆ ರೋಗದ ವೈರಾಣು, ಟೊಮೇಟೊ ಮೊಸಾಯಿಕ್ ವೈರಾಣು, ತಂಬಾಕು ಮೊಸಾಯಿಕ್ ವೈರಾಣು, ಸೌತೆ ಬೆಳೆಯ ಮೊಸಾಯಿಕ್ ವೈರಾಣು – ಇವೆಲ್ಲಾ ಸಾಮಾನ್ಯವಾಗಿ ಸಸ್ಯಗಳನ್ನು ಕಾಡುವ ವೈರಾಣುಗಳು.

ಪ್ರಾಣಿರೋಗಕಾರಕ ವೈರಾಣುಗಳು ಸಣ್ಣ ಕೀಟಗಳಿಂದ ಮೊದಲ್ಗೊಂಡು ಮನುಷ್ಯರವರೆಗೂ ಪ್ರಾಣಿಗಳಲ್ಲಿ ನೂರಾರು ರೋಗಗಳನ್ನು ಉಂಟುಮಾಡುತ್ತವೆ; ಇವುಗಳನ್ನು, ಮತ್ತೂ ಮುಂದುವರೆದು, ಕಶೇರುಕಗಳಲ್ಲಿ ಹಾಗೂ ಅಕಶೇರುಕಗಳಲ್ಲಿ ರೋಗವುಂಟುಮಾಡುವ ವೈರಾಣುಗಳೆಂದು ವರ್ಗೀಕರಣ ಮಾಡಲಾಗಿದೆ. ಸಾಮಾನ್ಯ ಶೀತ ನೆಗಡಿ ಕೆಮ್ಮಿನಿಂದ ಮೊದಲ್ಗೊಂಡು ಏಡ್ಸ್, ಸಿಡುಬು, ಡೆಂಗೂ, ಅನಿಯಮಿತ ರಕ್ತಸ್ರಾವ ಜ್ವರ, ಇತ್ತೀಚಿನ ಎಬೋಲಾದವರೆಗೆ ಹಲವು ಪ್ರಾಣಾಂತಿಕ ಕಾಯಿಲೆಗಳಿಗೆ ವೈರಾಣುಗಳೇ ಕಾರಣ.

ಸೂಕ್ಷ್ಮಾಣುಜೀವಿಯೊಂದರಲ್ಲಿ ಮತ್ತೊಂದು ಸೂಕ್ಷ್ಮಾಣುಜೀವಿಯು ರೋಗವುಂಟು ಮಾಡುತ್ತದೆ ಗೊತ್ತೇ? ಹೀಗೆ, ಬ್ಯಾಕ್ತೀರಿಯಾಗಳ ಪಾಲಿಗೆ ಹಾನಿಕಾರಕವಾಗಿರುವ ವೈರಸ್ಗಳನ್ನು ಬ್ಯಾಕ್ಟೀರಿಯೋಫಾಜ್ ಎನ್ನುತ್ತಾರೆ; ಇವು, ಬ್ಯಾಕ್ಟೀರಿಯಾಗಳನ್ನು ಅತಿಥೇಯ ಜೀವಿಗಳಾಗಿ ಬಳಸಿಕೊಳ್ಳುತ್ತಾ, ಬ್ಯಾಕ್ಟೀರಿಯಾದ ಜೀವಕೋಶದೊಳಗಿನ ಅಂಶಗಳನ್ನು ತನ್ನ ನಿರ್ದೇಶನದಂತೆ ನಡೆದುಕೊಳ್ಳುವ ಹಾಗೆ ಮಾಡಿ, ತಮ್ಮ ಸಂತಾನೋತ್ಪತ್ತಿ ನಡೆಸಿ, ಕಡೆಗೆ ಬ್ಯಾಕ್ಟೀರಿಯಾವನ್ನು ಕೊಂದು ಹೊರಬರುತ್ತವೆ. ಟಿ-೧೨, ಎಂ ೧೩ , ಎಂ.ಎಸ್ ೨ – ಇವೆಲ್ಲಾ ಬ್ಯಾಕ್ಟೀರಿಯೋಫಾಜ್ಗಳ ಉತ್ತಮ ಉದಾಹರಣೆಗಳು.

‘ವಂಶವಾಹಿ ವಸ್ತು’ ಆಧಾರಿತ ವರ್ಗೀಕರಣ:

ವೈರಾಣುಗಳಲ್ಲಿ ಯಾವ ನ್ಯೂಕ್ಲಿಕ್ ಆಮ್ಲವು ವಂಶವಾಹಿ ವಸ್ತುವಾಗಿದೆ ಮತ್ತು ಆ ವಂಶವಾಹಿ ವಸ್ತುವು ಒಂದೆಳೆಯದ್ದೋ ಅಥವಾ ಎರಡೆಳೆಯದ್ದೋ ಎಂಬುದರ ಆಧಾರದ ಮೇಲೆ, ವರ್ಗೀಕರಣ ಮಾಡಲಾಗಿದೆ. ಒಂದೆಳೆ ಧನಾತ್ಮಕ ಆರ್.ಎನ್.ಎ, ಒಂದೆಳೆ ಋಣಾತ್ಮಕ ಆರ್.ಎನ್.ಎ, ಎರಡೆಳೆ ಧನಾತ್ಮಕ/ ಋಣಾತ್ಮಕ ಸಂಯುಕ್ತ ಆರ್.ಎನ್.ಎ,  ಒಂದೆಳೆ ಡಿ.ಎನ್.ಎ, ಎರಡೆಳೆ ಡಿ.ಎನ್.ಎ, ಎಂಬ ಹೆಸರಿನ ವರ್ಗಗಳಲ್ಲಿ, ಆ ನ್ಯೂಕ್ಲಿಕ್ ಆಮ್ಲವನ್ನುಳ್ಳ ವೈರಾಣುಗಳನ್ನು ವಿಂಗಡಿಸಲಾಗಿದೆ.

ಹೀಗೆ ಬಗೆ ಬಗೆಯ ಸಾವಿರಾರು ವೈರಾಣುಗಳು ಇತರ ಸೂಕ್ಷ್ಮಾಣು ಜೀವಿಗಳಂತೆ ನಮಗೆ ಉಪಕಾರಿಯೂ ಹೌದು, ಅಪಾಯಕಾರಿಯೂ ಹೌದು. ನೈಸರ್ಗಿಕ ಹಾಗೂ ಮಾನವನಿರ್ಮಿತ ಉಪಯುಕ್ತತೆ ಹಾಗೂ ವೈರಾಣುಗಳು ಉಂಟುಮಾಡುವ ಕಾಯಿಲೆಗಳ ಬಗ್ಗೆ ವಿವರವಾಗಿ ಮುಂದಿನ ಲೇಖನದಲ್ಲಿ ತಿಳಿಯೋಣ.

– ಕ್ಷಮಾ ವಿ ಭಾನುಪ್ರಕಾಶ್