ನಾವು ಸೇವಿಸುವ ಧಾನ್ಯ, ಕಾಯಿ, ಹಣ್ಣುಗಳ ರೂಪದ ಸಸ್ಯಾಹಾರವು, ಕೀಟ ಅಥವಾ ಪ್ರಾಣಿಗಳ ಪರಾಗಸ್ಪರ್ಶಕ್ರಿಯೆಯಿಂದ ಆದದ್ದು ಎಂಬ ವಿಷಯ ತಿಳಿದಿದೆಯಲ್ಲವೇ? ಬಳಸುವ ನೀರು, ಗಾಳಿ, ಕಾಡು ಅಥವಾ ಜೌಗು ಪ್ರದೇಶದಲ್ಲಿ ಶುಚಿಯಾಗುತ್ತದೆ ಎಂಬುದು ತಿಳಿದಿದೆಯೇ? ‘ಜೀವಿ ವೈವಿಧ್ಯತೆ’ (Biodiversity) ಯು ಒಂದು ‘ಝೆಂಕರಿಸುವ’ ಪದವೆಂದು ಬಣ್ಣಿಸಲಾಗಿದೆ. ಜೀವಿ ವೈವಿಧ್ಯತೆಯ ಮೂಲತತ್ವ ಪರಿಸರ ಸಂಶೋಧನೆಯ ‘ಹೃದಯ’ಎಂದೇ ಹೇಳುತ್ತಾರೆ. ಜೀವವೆಂದರೆ ಜೀವಿ ವೈವಿಧ್ಯತೆ. ನಮ್ಮ ಜೀವನವೇ ವೈವಿಧ್ಯಮಯ. ನೀವು, ನಾವು, ಎಲ್ಲರೂ, ಎಲ್ಲ ಜೀವಿಗಳು ಜೀವಿವೈವಿಧ್ಯತೆಯ ಭಾಗ. ಜೀವಿ ವೈವಿಧ್ಯತೆ ವಿಷಯದ ಮನನದಲ್ಲಿ ಮುಖ್ಯವಾಗಿ ಭೂಮಿಯ ಮೇಲಿರುವ ಜೀವರಾಶಿಗಳ ಪ್ರಾಮುಖ್ಯದ ಅರಿವು ಮೂಡಿಸುವುದು, ಜನಸಾಮಾನ್ಯರ ಕ್ಷೇಮವನ್ನು ಕಾಪಾಡುವುದು ಮತ್ತು ಬಡತನ ನಿರ್ಮೂಲನೆ ಮಾಡುವುದು, ಹೀಗೆ ಹಲವಾರು ಧ್ಯೇಯಗಳಿದೆ.

ಜೀವಿ ವೈವಿಧ್ಯತೆ ಭೂಮಿಯ ಮೇಲಿರುವ ವಿವಿಧ ರೀತಿಯ ಜೀವಿಗಳಲ್ಲಿನ ಜೀನ್‌ಗಳು, ಪ್ರಭೇದಗಳು, ಒಟ್ಟಾರೆ ಪರಿಸರದಲ್ಲಿರುವ ಜೀವಿಗಳನ್ನು ಒಳಗೊಂಡಿದೆ. ಇದರಲ್ಲಿ ಪ್ರತಿಯೊಂದು ಕಣ್ಣಿಗೆ ಕಾಣುವ ಸಸ್ಯ ಮತ್ತು ಪ್ರಾಣಿಗಳೇ ಅಲ್ಲದೇ ಕಣ್ಣಿಗೆ ಕಾಣದ ಸೂಕ್ಷ್ಮಜೀವಿಗಳು ಅಂದರೆ ಬ್ಯಾಕ್ಟಿರಿಯಾಗಳು, ಶಿಲೀಂಧ್ರಗಳು ಮತ್ತು ವೈರಾಣುಗಳೂ ಸೇರಿರುತ್ತವೆ. ಭೂಮಿಯ ಮೇಲೆ ಎಲ್ಲೆಡೆ ಜೀವಿವೈವಿಧ್ಯತೆ ಇದೆ. ವಿಶ್ವಸಂಸ್ಥೆಯ ಪ್ಲೀನರಿ ಮೀಟಿಂಗ್‌ನಲ್ಲಿ ಮೇ ತಿಂಗಳ 22ನೇ ದಿನವನ್ನು ‘ಅಂತರರಾಷ್ಟ್ರೀಯ ಜೀವಿವೈವಿಧ್ಯತೆಯ ದಿನ’ವೆಂದು ಘೋಷಿಸಲಾಗಿದೆ. ಇದರ ಮುಖ್ಯ ಉದ್ದೇಶ ಜೀವಿ ವೈವಿಧ್ಯತೆಯ ಬಗ್ಗೆ ಅರಿವು ಮೂಡಿಸುವುದು.

ಜೀವಿ ವೈವಿಧ್ಯತೆಯ ಪ್ರಾಮುಖ್ಯತೆ

ನಾವು, ನಾವು ಸಾಕಿದ ಪ್ರಾಣಿಗಳು ಮಾನವ ನಿರ್ಮಿಸಿದ ಮನೆ ಮತ್ತು ವ್ಯವಸ್ಥೆಗಳನ್ನು ಒಂದು ಕೃತಕವಾದ ಪರಿಸರದಲ್ಲಿ ಇರಿಸಿ, ಪರಿಸರದಿಂದ ದೂರ ಒಂದು ಕವಚದಲ್ಲಿದ್ದೇವೆ ಎಂಬ ಭ್ರಮೆಯಲ್ಲಿದ್ದೇವೆ. ಪ್ರಕೃತಿಯನ್ನು ನಮಗೆ ಬೇಕಾದ ರೀತಿಯಲ್ಲಿ ತಿರುಚಲು, ಪ್ರಯತ್ನಗಳು ನಡೆಯುತ್ತಿವೆ. ನಿಜವಾಗಿಯೂ ನಾವು ಯಾರೂ ಪರಿಸರದಿಂದ ಹೊರಗೆ ಇರಲು ಸಾಧ್ಯವೇ ಇಲ್ಲ.  ಕಾರಣ ನಾವು ಪರಿಸರದಿಂದಲೇ ಬಂದವರು -ಅದರಲ್ಲಿನ ಆಹಾರ, ಗಾಳಿ, ನೀರು ಎಲ್ಲವನ್ನೂ ಬಳಸಿ ಬದುಕುತ್ತಿದ್ದೇವೆ. ಅನೇಕ ಪರಿಸರ ವ್ಯೆಹಗಳು (Ecosystems)ನಮಗೆ ಬೇಕಾದ ಎಲ್ಲ ಬೇಕು, ಬೇಡಗಳನ್ನು ಪೂರೈಸುತ್ತಿವೆ.  ನೀರು ಮತ್ತು ಗಾಳಿ ಶುದ್ದೀಕರಿಸಲು, ಪರಾಗ ಸ್ಪರ್ಶ ಕ್ರಿಯೆಯಿಂದ ಆಹಾರ ತಯಾರಿಸಲು, ಆಕ್ಸಿಜನ್ ಪುನರುಜ್ಜೀವನಗೊಳಿಸಲು, ಸ್ವಾಭಾವಿಕವಾಗಿ ರೋಗ ನಿಯಂತ್ರಿಸಲು, ಪ್ರವಾಹ ಮತ್ತು ಭೂಸವೆತದ ನಿಯಂತ್ರಣ, ಮಾನವನ ಚಟುವಟಿಕೆಗಳಿಂದ ಹೊರಬೀಳುವ ನಿರುಪಯುಕ್ತ ವಸ್ತುಗಳನ್ನು ಸ್ವಚ್ಛಮಾಡಲು ಮತ್ತು ವಿಷಯುಕ್ತ ವಸ್ತುಗಳನ್ನು ಹೊರಹಾಕಲು ಜೀವಿ ವೈವಿಧ್ಯತೆಯು ನಮಗೆ ಅತ್ಯವಶ್ಯಕವಾಗಿದೆ. ಇದರಿಂದ ನಮಗೆ ಆಹಾರ, ಮರಮುಟ್ಟುಗಳು, ನಾರು, ಇಂಧನ, ರಸಾಯನಿಕಗಳು ಮತ್ತು ಔಷಧಿಗಳು ದೊರೆಯುತ್ತವೆ. ಪ್ರಪಂಚದ ಮಾರುಕಟ್ಟೆಯಲ್ಲಿ ಪ್ರತಿವರ್ಷ, ಆರ್ಥಿಕ ವೆಚ್ಚ ಹೆಚ್ಚುತ್ತಿದೆ. ಪ್ರಪಂಚದಲ್ಲಿ ಪರಿಸರ ವ್ಯವಸ್ಥೆಗಳಿಂದ (Ecosystems) ಪಡೆಯುತ್ತಿರುವ ಸೇವೆಗಳ ಮೌಲ್ಯದ ಅಂದಾಜು 16ರಿಂದ 64 ಮಿಲಿಯನ್ ಡಾಲರ್‌ಗಳೆಂದು ತಿಳಿದಿದೆ. ಜಗತ್ತಿನ ಯಾವುದೇ ಭಾಗದ ಮಾನವ ಸಂಸ್ಕೃತಿಯನ್ನು ಗಮನಿಸಿದಾಗ, ಪರಿಸರ ಮತ್ತು ಪ್ರಾಣಿಗಳು ಮತ್ತು ಸಸ್ಯಗಳ ಜತೆಗೆ ಅಭೇದ್ಯ ನಂಟಸ್ತಿಕೆಯಿದೆ. ಪ್ರಕೃತಿಯಲ್ಲಿ ಗಿಡ ಮರ, ಪ್ರಾಣಿಗಳ ಸುಂದರ ಪ್ರಪಂಚ ನೆಮ್ಮದಿಯನ್ನುಂಟು ಮಾಡುತ್ತದೆ. ಮಾನವನ ವಿವಿಧ ರೀತಿಯ ಸಂಸ್ಕೃತಿಗಳು ಈವರೆಗೆ ತಾನು ಬೆಳೆಸಿದ ಪ್ರಾಣಿ, ಸಸ್ಯಗಳ ವೈವಿಧ್ಯತೆಯನ್ನು ಉಳಿಸಿಕೊಳ್ಳುತ್ತ ಬಂದಿವೆ. ಜೀವಿ ವೈವಿಧ್ಯವು ಸೌಂದರ್ಯೋಪಾಸನೆಯ ವಿಷಯವೂ ಹೌದು. ಪರಿಸರ ಪ್ರವಾಸ, ಪಕ್ಷಿಗಳ ವೀಕ್ಷಣೆ, ಕಾಡುಪ್ರಾಣಿಗಳ ವೀಕ್ಷಣೆ, ತೋಟಗಾರಿಕೆ, ಪ್ರಾಣಿಗಳನ್ನು ಸಾಕುವುದು ಮುಂತಾದ ಮಾನವ ಚಟುವಟಿಕೆಗಳಲ್ಲಿ ಇವು ಕಂಡುಬರುತ್ತವೆ. ಮಾನವ ಬದುಕಿ ಉಳಿಯಲು ಜೀವಿ ವೈವಿಧ್ಯತೆ ಕಾರಣವೆಂಬುದು ಇಂದು ಪ್ರತಿಯೊಬ್ಬರಿಗೂ ನಿರ್ದುಷ್ಟವಾಗಿ ತಿಳಿದಿರುವ ವಿಷಯ.

ಜಗತ್ತಿನ ಎಲ್ಲ ದೇಶಗಳಲ್ಲಿ ಮೂರು ವಿಧದ ಸಂಪತ್ತುಗಳಿವೆ. ಅವುಗಳೆಂದರೆ ವಾಸ್ತವಿಕ (Material),ಸಾಂಸ್ಕೃತಿಕ (Cultural)ಮತ್ತು ಜೀವಿ ವೈವಿಧ್ಯತೆ (Biodiversity).  ಜೀವಿಗಳಲ್ಲಿನ ಜೀನ್‌ಗಳು ಮತ್ತು ಪ್ರಭೇದಗಳು ಇಂದಿನ  ಗಮನ ಕೇಂದ್ರ ವಿಷಯಗಳು.  ಏಕೆಂದರೆ ಇವುಗಳಿಗೆ ತೊಂದರೆ ಉಂಟಾಗುತ್ತಿದೆ. ಮಾನವ ಜನ ಸಂಖ್ಯೆ ಹೆಚ್ಚಿರುವುದು ಇದರ ಒಂದು ಮುಖ್ಯ ಕಾರಣ. ಜನಸಂಖ್ಯೆ ಹೆಚ್ಚಿದ ಪ್ರಯುಕ್ತ ಜೀವಿಗಳ ಸಂಪತ್ತಿನ ಮೇಲೆ ಅಗಾಧ ಒತ್ತಡವುಂಟಾಗಿದೆ. ಈ ನಿಟ್ಟಿನಲ್ಲಿ ಜೀವಿ ವೈವಿಧ್ಯತೆಯನ್ನು ಕಾಪಾಡಿಕೊಂಡು ಬರಲು ಶ್ರಮಿಸುತ್ತಿರುವ ಮಹತ್ತರ ಸಂಸ್ಥೆಗಳು ಪ್ರಪಂಚದಾದ್ಯಂತ ಕಂಡುಬರುತ್ತವೆ.

ಅವುಗಳು ಯಾವುವೆಂದರೆ:

1) IUCN : International Union for Conservation of Nature and Natural Resources.

2) SSC : Species Survival Commission

3) CITIES : Convention of International Trade in Endangered Species of Wild Flora and Fauna

4) TRAFFIC: Trade Records Analysis of Fauna and Flora in Commerce

5) CBD : Convention of Biological Diversity

6) WWF : World Wide Fund for Nature

7) WCMC : World Conservation Monitoring Centre

ಸಾವಿರಾರು ವರ್ಷಗಳಿಂದ ಮಾನವ ಇತರ ಜೀವಿಗಳನ್ನು ವಿವಿಧ ರೀತಿಗಳಲ್ಲಿ ಬಳಸಿಕೊಂಡಿದ್ದಾನೆ. ದುರುಪಯೋಗವನ್ನೂ ಮಾಡಿದ್ದಾನೆ ಎಂದರೆ ತಪ್ಪಾಗಲಾರದು.  ಪ್ರಪಂಚದೆಲ್ಲೆಡೆಯ ಜೀವಿ ವೈವಿಧ್ಯತೆ ಮುಖ್ಯವಾದ ವಿಷಯವೆಂದು ಪರಿಗಣಿಸಲೇ ಇಲ್ಲ!  ಜೀವಿವೈವಿಧ್ಯತೆ ಜೀವಗೋಲದ ಶಕ್ತಿ. ಇದಿಲ್ಲದೆ ಮನುಷ್ಯನಿಲ್ಲ ಎಂಬುದು ಬೆಳಕಿಗೆ ಬಂದಿದ್ದು ಇತ್ತೀಚೆಗಷ್ಟೇ. ವ್ಯಾಪಾರಕ್ಕಾಗಿ ಮತ್ತು ಸ್ವಪ್ರಯೋಜನಕ್ಕಾಗಿ ಜೀವಿ ವೈವಿಧ್ಯತೆಯನ್ನು ದುರುಪಯೋಗಮಾಡಿ, ವಿನಾಶದಂಚಿಗೆ ಮಾನವ ದೂಡುತ್ತಿರುವ ಅಂಶ ತಿಳಿದದ್ದೂ ಇತ್ತೀಚೆಗೆ.

ಜೀವಿ ವೈವಿಧ್ಯತೆ ಮತ್ತು ಪರಿಸರವ್ಯೆಹ, ಕಾಡುಗಳನ್ನು ಕಾಪಾಡುವುದು, ನಮ್ಮ ಆದ್ಯ ಕರ್ತವ್ಯ. ನಮ್ಮ ಜೀವ, ಜೀವನಗಳಿಗೆ ಆಧಾರವಾಗಿರುವ ಪ್ರಕೃತಿಯ ಸಮೃದ್ಧ ದೃಶ್ಯಗಳನ್ನು ಅನುಭವಿಸುವುದು ಮತ್ತು ಜೀವಿ ವೈವಿಧ್ಯತೆಗೆ ನಮ್ಮಿಂದ ಧಕ್ಕೆ ಬಾರದಂತೆ ಬದುಕುವುದರಿಂದ ಜೀವಗೋಲದ ಸುಸ್ಥಿರತೆ ಸಾಧಿಸಬಹುದು. ಇದು ಮಾನವನ ಮಾನಸಿಕ ಮತ್ತು ಭೌತಿಕ ಆರೋಗ್ಯಗಳಿಗೆ ಪೂರಕವಾಗುತ್ತದೆ.

ಜೀವಿ ವೈವಿಧ್ಯತೆಯ ಮುಖ್ಯ ಉದ್ದೇಶಗಳು:

1)   ಅಳಿದು ಹೋಗುತ್ತಿರುವ ಮತ್ತು ಅಳಿವಿನಂಚಿನಲ್ಲಿರುವ ಪ್ರಭೇದಗಳನ್ನು ಕಾಪಾಡುವುದು.

2)   ಪ್ರತಿಯೊಂದು ಪ್ರಭೇದವನ್ನು ಅಳಿದುಹೋಗದಂತೆ ನೋಡಿಕೊಳ್ಳುವುದು.

3)   ಎಲ್ಲ ವಿಧದ ವಿವಿಧ ಪರಿಸರ ವ್ಯೆಹಗಳನ್ನು ಕಾಪಾಡಿಕೊಳ್ಳುವುದು.

ಇವೆಲ್ಲದರಿಂದ ಮಾನವ ಜೀವಿಜಾತಿ ಅಳಿದು ಹೋಗದಂತೆ ಉಳಿಸಿಕೊಳ್ಳಬಹುದು ಎಂಬುದನ್ನು ಖಚಿತವಾಗಿ ಮನಗಾಣಬೇಕು.

ಜೀವಿ ವೈವಿಧ್ಯತೆಗೆ ಆಗಿರುವ ಆತಂಕಗಳು:

1)   ಜೀವಿಗಳ ಪರಿಸರ ಕ್ಷೀಣಿಸುತ್ತಿರುವುದು ಭೇದ ಮತ್ತು ಛಿದ್ರಛಿದ್ರವಾಗಿರುವುದು.

2)   ಬೇರೆಡೆಯಿಂದ ಸ್ಥಳಿಕವಲ್ಲದ ಹೊಸ ಪ್ರಭೇದಗಳನ್ನು ಆಮದು ಮಾಡಿಕೊಳ್ಳುವುದು.

3)   ಹೀಗೆ ತಂದ ಹೊಸ ಪ್ರಭೇದಗಳಿಂದಾಗುವ ಪರಿಣಾಮಗಳು

4)   ಜೀವಿವೈವಿಧ್ಯತೆಯ ದುರುಪಯೋಗ

5)   ನೆಲ, ನೀರು, ಗಾಳಿ ಮತ್ತು ವಾತಾವರಣಗಳ ಮಾಲಿನ್ಯ ಸಮಸ್ಯೆ.

6)   ಅತಿಯಾದ ಬೇಸಾಯ ಮತ್ತು ಕಾಡನ್ನು ಅತಿಕ್ರಮಿಸಿದ ಬೇಸಾಯ

7)   ಏಕ ರೀತಿಯ ಬೆಳೆ ತೆಗೆಯುವ ಪದ್ಧತಿ

ಈ ಜಗತ್ತಿನಲ್ಲಿ ಅಂದಾಜಿನ ಪ್ರಕಾರ 5ರಿಂದ 50ಮಿಲಿಯನ್ ಪ್ರಭೇದಗಳಿವೆಯೆಂದು ಹೇಳಲಾಗುತ್ತಿದೆ. ಆದರೆ ಇಲ್ಲಿಯವರೆಗೆ 1.8ಮಿಲಿಯನ್ ಪ್ರಭೇದಗಳನ್ನು ಗುರುತಿಸಿ ದಾಖಲು ಮಾಡಲಾಗಿದೆ. ಮಾನವನು ಹಲವಾರು ಪ್ರಭೇದಗಳ ವಿನಾಶಕ್ಕೆ ಕಾರಣವೆಂದೂ ತಿಳಿದಿದೆ.  ಬೇರೆ ಬೇರೆ ಪ್ರಭೇದಗಳ ವಿನಾಶವು ಹೆಚ್ಚಾಗುತ್ತಿದೆ. ಒಂದು ಅಂದಾಜಿನ ಪ್ರಕಾರ 14,000 – 40,000ಪ್ರಭೇದಗಳು ಪ್ರತಿವರ್ಷ ಉಷ್ಣವಲಯದ ಕಾಡುಗಳಲ್ಲಿ ವಿನಾಶದಂಚಿಗೆ ಸಾಗಿವೆ,  ಅಥವಾ ವಿನಾಶವಾಗುತ್ತಿವೆ. ಕ್ರಿ.ಶ. 2000 ವರ್ಷದಿಂದೀಚೆಗೆ ಆರು ಮಿಲಿಯನ್ ಹೆಕ್ಟೇರ್‌ನಷ್ಟು ಅರಣ್ಯಗಳ ನಾಶವಾಗಿದೆ.

ಅಂತಾರಾಷ್ಟ್ರೀಯ ಜೀವಿವೈವಿಧ್ಯ ವರ್ಷೊ– 2010ಎಂದು ಘೋಷಿತವಾದರೂ ಮಾನವನಿಂದ ಜೀವಿ ವೈವಿಧ್ಯತೆ ಮೇಲಾಗುವ ದುಷ್ಪರಿಣಾಮಗಳನ್ನು ಇನ್ನೂ ತಿಳಿಯದೆ ಹೋದಲ್ಲಿ, ನಮ್ಮ ವಿನಾಶದ ಗೋರಿಯನ್ನು ನಾವೇ ತೋಡಿಕೊಂಡ ಸ್ಥಿತಿ ತಲುಪುತ್ತೇವೆ. ಐಯುಸಿಎನ್ ಪ್ರಕಾರ, ಈ ದೊಡ್ಡ ವಿಸ್ತೃತ ಪ್ರಪಂಚದಲ್ಲಿ ಜಾಲ ಸದೃಶವಾಗಿ ಬದುಕುತ್ತಿರುವ ಪ್ರಾಣಿ ಮತ್ತು ಸಸ್ಯಗಳು ಅವು ವಾಸಿಸುವ ಸ್ಥಳಗಳು ವಿಷಮ ಪರಿಸ್ಥಿತಿಯಲ್ಲಿವೆ. ಅಂತಾರಾಷ್ಟ್ರೀಯ ವರ್ಷದ ಜೀವಿ ವೈವಿಧ್ಯತೆ ಚಿಹ್ನೆಯ ವಿನ್ಯಾಸದಲ್ಲಿ ಜೀವಿವೈವಿಧ್ಯ ಮತ್ತು ಅದರ ಸುರಕ್ಷತೆಯನ್ನು ಸೂಚಿಸಲಾಗಿದೆ.

ವಿಶ್ವಸಂಸ್ಥೆಯ ಜೀವಿ ವೈವಿಧ್ಯತೆಯ ಚಿಹ್ನೆಯ ತಿರುಳಿನ ಮೂರು ಅಂಶಗಳು ಹೀಗಿವೆ :

1)  2010ನೇ ವರ್ಷದ ಅಚ್ಚುಕಟ್ಟಿನಲ್ಲಿ ಚಳುವಳಿ ಚಿಹ್ನೆಯ ಅಂಶಗಳಿವೆ.

2)  ಚಿತ್ರದಲ್ಲಿ ಜೀವಿವೈವಿಧ್ಯತೆಯ ಸಂಕೇತಗಳಿವೆ -ಅವುಗಳೆಂದರೆ ಮೀನುಗಳು, ನೀರಿನ ಅಲೆಗಳು, ಫ್ಲೆಮಿಂಗೋ ಪಕ್ಷಿ, ವಯಸ್ಕ ಮಾನವ ಮತ್ತು ಒಂದು ಮಗು.

3)  ಚಳುವಳಿಯ ಶಿರೋನಾಮೆ, ಅಂತಾರಾಷ್ಟ್ರೀಯ ‘ಜೀವಿೊವೈವಿಧ್ಯತೆ ವರ್ಷ – 2010’

‘ಜೀವಿ ವೈವಿಧ್ಯತೆಯೇ ಜೀವ, ಜೀವಿ ವೈವಿಧ್ಯತೆಯೇ ನಮ್ಮ ಜೀವನ’ ಇದು ಅಂತಾರಾಷ್ಟ್ರೀಯ ಜೀವಿವೈವಿಧ್ಯತೆಯ ವರ್ಷದ ಧ್ಯೇಯ ಮಂತ್ರ.

ಅಂತಾರಾಷ್ಟ್ರೀಯ ಜೀವಿ ವೈವಿಧ್ಯತೆಯ ವರ್ಷ – 2010ರ ಮೂಲ ತತ್ವಗಳು :

  • ಸಾಮಾನ್ಯ ಜನರಲ್ಲಿ ಜೀವಿ ವೈವಿಧ್ಯತೆಯ ಪ್ರಾಮುಖ್ಯತೆ ಮತ್ತು ನಮ್ಮ ಉಳಿವಿಗಾಗಿ ಮಾಡಬೇಕಾದ ಕೆಲಸಗಳ ಅರಿವು ಮೂಡಿಸುವುದು. ಮತ್ತು ಜೀವಿವೈವಿಧ್ಯತೆಗೆ ಆಗುವ ಕಂಟಕಗಳ ಬಗ್ಗೆ ವಿವರಣೆ.
  • ಜೀವಿವೈವಿಧ್ಯತೆಯನ್ನು ಉಳಿಸಿಕೊಳ್ಳಲು ಅರಿವನ್ನು ಉಂಟು ಮಾಡುವ ಪ್ರಯತ್ನ ಜನಸಾಮಾನ್ಯರಲ್ಲಿ ಮೂಡಿಸುವುದು ಮತ್ತು ತಿಳಿದಿರುವ ವಿಷಯವನ್ನು ಅಳವಡಿಸಿಕೊಳ್ಳುವುದು.
  • ಈ ನಿಟ್ಟಿನಲ್ಲಿ ಹೊಸ ಯೋಜನೆಗಳನ್ನು ಉತ್ತೇಜಿಸುವುದು.
  • ಪ್ರತಿಯೊಂದು ಸಂಸ್ಥೆ, ಅಂಗಸಂಸ್ಥೆಗಳು ಮತ್ತು ಸರ್ಕಾರಗಳು ಜೀವಿವೈವಿಧ್ಯತೆಯ ನಷ್ಟವನ್ನು ನಿಲ್ಲಿಸಲು ತಕ್ಷಣ ಪರಿಹಾರ ಮಾರ್ಗಗಳನ್ನು ತೆಗೆದುಕೊಳ್ಳುವುದು.

2010ರ ಜೀವಿ ವೈವಿಧ್ಯತೆ ಕಾಪಾಡುವ ಪ್ರಯತ್ನದಲ್ಲಿ ಪಣತೊಟ್ಟಿರುವವರನ್ನೂ ಒಡಗೂಡಿ, ಚಿಂತನೆ ನಡೆಸಿ ಅವರ ಕಾರ್ಯಕ್ರಮಗಳಲ್ಲಿ ಪಾಲುಗೊಳ್ಳಬೇಕು.