ಕುಡಿತ ಮತ್ತು ಜೂಜು ಈ ಎರಡೂ ಮನುಷ್ಯನನ್ನು ಅತ್ಯಂತ ಪ್ರಾಚೀನ ಕಾಲದಿಂದಲೂ ವಶಪಡಿಸಿಕೊಂಡ ಎರಡು ‘ವ್ಯಸನ’ಗಳು. ಅಮೆರಿಕಾದ ನಾಗರಿಕ ಜೀವನದಲ್ಲಿ ಈ ಎರಡೂ ಸಾಕಷ್ಟು ವ್ಯಾಪಕವಾಗಿ ಹೆಣೆದುಕೊಂಡಿವೆ. ಅದರಲ್ಲೂ ಜೂಜಾಡುವುದು ಒಂದು ಕಲೆ ಹಾಗೂ ಉದ್ಯಮವಾಗಿ ಇಲ್ಲಿ ಬೆಳೆದಿದೆ. ಅದಕ್ಕಾಗಿಯೇ ಮೀಸಲಾದ ಕೆಲವು ಜೂಜಿನ ಕೇಂದ್ರಗಳಿವೆ. ಅವುಗಳಲ್ಲಿ ಲಾಸ್‌ವೇಗಾಸ್, ಟಾಹೋ ಸರೋವರ ಮತ್ತು ಅಟ್ಲಾಂಟಿಕ್ ಸಿಟಿ ಇವುಗಳನ್ನು ಹೆಸರಿಸಬಹುದು. ನಾನು ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ಎರಡು ಮೂರು ದಿನ ಇದ್ದರೂ, ಟಾಹೋ ಸರೋವರ ತೀರಕ್ಕೆ ನನ್ನನ್ನು ಕರೆದೊಯ್ಯುವುದಾಗಿ ಅಲ್ಲಿನ ಗೆಳೆಯರು ಮನಸ್ಸು ಮಾಡಿದ್ದರೂ, ಸಮಯದ ಅಭಾವದಿಂದ ಅಲ್ಲಿಗೆ ಹೋಗಲು ಸಾಧ್ಯವಾಗಲಿಲ್ಲ. ಇನ್ನು ಲಾಸ್ ಏಂಜಲೀಸ್‌ನಲ್ಲಿ ನಾನು ಇದ್ದರೂ ಅಲ್ಲಿಗೆ ಹತ್ತಿರವಾದ ಸುಪ್ರಸಿದ್ಧವಾದ ಜೂಜಿನ ನಗರ ಲಾಸ್‌ವೇಗಾಸ್‌ಗೆ ಹೋಗಲು ಆಗಲೇ ಇಲ್ಲ. ಆದಕಾರಣ ಅಮೆರಿಕಾವನ್ನು ಬಿಡುವ ಮೊದಲು ಅಟ್ಲಾಂಟಿಕ್ ಸಿಟಿಯ ಜೂಜಿನ ಕೇಂದ್ರವನ್ನಾದರೂ ನೋಡಬೇಕೆಂದು ನಿಶ್ಚಯಿಸಿದ್ದೆ.

ಕಳೆದ ಸೆಪ್ಟೆಂಬರ್ ಹತ್ತರಿಂದ, ಹರಿಹರೇಶ್ವರ ಅವರ ಪಾಟ್ಸ್‌ಟೌನಿನಿಂದ ಪ್ರಾರಂಭವಾದ ನನ್ನ ಪರ‍್ಯಟನ, ಅಕ್ಟೋಬರ್ ಹದಿಮೂರಕ್ಕೆ ಮುಗಿದು, ಮತ್ತೆ ರಂಗಾಚಾರ್ಯರ ಊರಾದ ನ್ಯೂಟೌನ್‌ನಿಂದ ಕೇವಲ ಎರಡೂವರೆ ಗಂಟೆಗಳ  ಕಾರಿನ ದಾರಿಯ ಮೂಲಕ, ಪಾಟ್ಸ್‌ಟೌನ್‌ಗೆ ಬಂದು ಮುಟ್ಟಿದ ಕೂಡಲೆ, ನಾನು ಅಟ್ಲಾಂಟಿಕ್ ಸಿಟಿಗೆ ಹೋಗಿಬರುತ್ತೇನೆ ಎಂದು ಹೇಳಿದ್ದನ್ನು ಕೇಳಿ ಹರಿಹರೇಶ್ವರ ದಂಪತಿಗಳು ಸ್ವಲ್ಪ ಆಶ್ಚರ್ಯ ಹಾಗೂ ಗಾಬರಿಗಳನ್ನು ವ್ಯಕ್ತಪಡಿಸಿದರು. ಅವರಿಗೆ ಬಹುಶಃ ನನ್ನ ವಿಚಾರದಲ್ಲಿ ಇದ್ದ ಗೌರವಪೂರ್ವಕವಾದ ಹಲವು ಭ್ರಮೆಗಳೆ ಅವರ ಈ ಪ್ರತಿಕ್ರಿಯೆಗೆ ಕಾರಣ ಎಂದು ನಾನು ಊಹಿಸಲು ತಡವಾಗಲಿಲ್ಲ. ತುಂಬ ಸೀರಿಯಸ್ಸಾಗಿ ತೋರುವ – ಒಂದು ಕಾಲಕ್ಕೆ ತನಗೆ ಪಾಠ ಹೇಳಿದ ‘ಗುರು’ಗಳಾಗಿದ್ದ – ಈ ಪ್ರೊಫೆಸರ್ ಅವರು ಅಟ್ಲಾಂಟಿಕ್ ಸಿಟಿಯಂಥ ಜೂಜಿನ ಕೇಂದ್ರವನ್ನು ನೋಡಲು ಅಪೇಕ್ಷೆ ಪಡಬಹುದೆಂಬ ವಿಚಾರವೇ ಶ್ರೀಮತಿ ನಾಗಲಕ್ಷ್ಮಿಯವರಿಗೆ ಸ್ವಲ್ಪ ಗಾಬರಿಯ ವಿಷಯವಾಗಿತ್ತೇನೋ. ಧರ್ಮರಾಯ ನಂಥವನೇ ಜೂಜಾಡಿ ರಾಜ್ಯಕೋಶಾದಿಗಳನ್ನು ಕಳೆದುಕೊಂಡ ವಿಚಾರ ಅವರಿಗೆ ತಿಳಿಯದ್ದೇನೂ ಅಲ್ಲ. ಇಷ್ಟರ ಮೇಲೆ ನಾನು ಧರ್ಮರಾಯನೂ ಅಲ್ಲ, ಹಾಗೆ ಜೂಜಾಡಿ ಸೋಲಲು ನನ್ನ ಬಳಿ ಯಾವ ರಾಜ್ಯವೂ ಇಲ್ಲ; ಕೇವಲ ಕುತೂಹಲಕ್ಕಾಗಿ ಹೊರಟಿದ್ದೇನೆ – ಎಂಬುದನ್ನು ಸ್ಪಷ್ಟಪಡಿಸಿದ ಮೇಲೆ, ಅವರಿಬ್ಬರೂ ನನ್ನ ನಿಲುವನ್ನು ಒಪ್ಪಿಕೊಂಡರು. ಹರಿಹರೇಶ್ವರ ಅವರೆ ನಾನು ಅಟ್ಲಾಂಟಿಕ್ ಸಿಟಿಗೆ ಹೋಗಿಬರಲು ಅಗತ್ಯವಾದ ವ್ಯವಸ್ಥೆಗಳನ್ನು ಮಾಡಿಕೊಟ್ಟರು.

ಪಾಟ್ಸ್‌ಟೌನ್‌ನಿಂದ ಅಟ್ಲಾಂಟಿಕ್ ಸಿಟಿಗೆ ಬಸ್ಸಿನಲ್ಲಿ ಎರಡೂವರೆ ಗಂಟೆಗಳ ದಾರಿ. ಅವತ್ತು (೧೬.೧೦.೮೭) ಬೆಳಿಗ್ಗೆ ಎಂಟೂವರೆಗೆ ನನ್ನನ್ನು ಬಸ್ಸು ಹತ್ತಿಸಿದ ಹರಿಹರೇಶ್ವರ ಅವರು ಮತ್ತೆ ಸಂಜೆ ಏಳೂವರೆಯ ವೇಳೆಗೆ ಇದೇ ಸ್ಥಳಕ್ಕೆ ಬಂದು ಮನೆಗೆ ಕರೆದೊಯ್ಯುವುದಾಗಿ ಹೇಳಿದರು. ನಾನು ಹತ್ತಿ ಕೂತದ್ದು ಸೊಗಸಾದ ‘ಲಗ್ಷುರಿ’ ಬಸ್. ಒಳಗೆ ಹೋಗಿ ಕೂತು ನೋಡುತ್ತೇನೆ., ಬಸ್ ಡ್ರೈವರ್ ಮುದುಕಾ ಅಂದರೆ ಮುದುಕ. ವಯಸ್ಸು ಎಪ್ಪತ್ತರ ಮೇಲಾಗಿರಬಹುದು. ಸುಕ್ಕು ಮುಖದ, ಕೆಂಪು ಬಣ್ಣದ ಎತ್ತರವಾದ ಆಳು. ಅಟ್ಲಾಂಟಿಕ್ ಸಿಟಿಗೆ ಹೋಗಿಬರುವ ಹದಿನೈದು ಡಾಲರ್‌ಗೆ ಟಿಕೆಟ್ಟನ್ನು ನನ್ನ ಕೈಗೆ ಕೊಡುವಾಗಲೂ ಆತನ ಕೈ ನಡುಗುತ್ತಿತ್ತು. ಇಂತ ಡ್ರೈವರ್ ಈ ಬಸ್ಸನ್ನು ಬಿಟ್ಟಾನು ಹೇಗೆ ಎಂದು ಆತಂಕ ನನಗೆ. ಬಸ್ಸು ಹೊರಟಾಗ ಹಾಗೂ ಮುಂದೆ ಹೋದಾಗ ಇಡೀ ಬಸ್ಸಿನಲ್ಲಿ ನನ್ನ ಜತೆ ಇಬ್ಬರೋ ಮೂವರೋ ಪ್ರಯಾಣಿಕರು. ಅವರೂ ವಯಸ್ಸಾದವರೇ. ಬಸ್ಸು ವೇಗವಾಗಿ ಚಲಿಸತೊಡಗಿದಂತೆ ಈ ವಯೋವೃದ್ಧ ಸಾರಥಿಯನ್ನು ಕುರಿತು ನಾನು ಪಟ್ಟ ಸಂಶಯ ನಿರಾಧಾರವಾದುದೆಂಬಷ್ಟರಮಟ್ಟಿಗೆ ಇಡೀ ಬಸ್ಸಿನ ಮೇಲೆ ಆತನಿಗೆ ಹತೋಟಿಯಿರುವುದನ್ನು ಕಂಡು ನಾನು ಬೆರಗಾದೆ. ಮುಂದಿನ ನಿಲುಗಡೆಯಲ್ಲಿ ಒಂದಷ್ಟು ಜನ ಮುದುಕ ಮುದುಕಿಯರು ಬಸ್ಸು ಹತ್ತಿದರು; ಇನ್ನೂ ಮುಂದಿನ ನಿಲುಗಡೆಯಲ್ಲಿ ಬಸ್ಸು ಭರ್ತಿಯಾಯಿತು. ನೋಡುತ್ತೇನೆ, ಬಸ್ಸಿನ ತುಂಬ ಬರೀ ಹಣ್ಣೆಲೆಗಳೇ. ಬಂದು ಕೂತವರೆಲ್ಲ ವೃದ್ಧರು, ಮಹಾವೃದ್ಧರು. ಡ್ರೈವರ್‌ನಿಂದ ಹಿಡಿದು, ಬಸ್ಸಿನಲ್ಲಿ ಕೂತ ಪ್ರಯಾಣಿಕರವರೆಗೆ ಎಲ್ಲಾ ಮುದುಕರೇ, ನನ್ನನ್ನೂ ಸೇರಿಸಿಕೊಂಡಂತೆ. ಆದರೆ ಈ ವಯೋವೃದ್ಧರ ಮಧ್ಯೆ ನಾನೇ ‘ತರುಣ’ ಎಂದು ಸಮಾಧಾನಪಟ್ಟುಕೊಳ್ಳುವಂತಿತ್ತು ಈ ಪ್ರಯಾಣಿಕರ ವೃಂದ.

ಎರಡೂವರೆ ಗಂಟೆಗಳ ಪ್ರಯಾಣದ ನಂತರ ನಾನು ಅಟ್ಲಾಂಟಿಕ್ ಸಿಟಿಯ ಜೂಜಿನ ಕಟ್ಟೆಯಲ್ಲಿ ಇಳಿದೆ. ಆಗ ಬೆಳಗಿನ ಹನ್ನೊಂದು ಗಂಟೆ. ಮತ್ತೆ ಸಂಜೆ ಐದು ಗಂಟೆಗೆ, ಇದೇ ಸ್ಥಳನಲ್ಲಿ ಬಸ್ಸಿನ ನಂಬರ್ ಗುರುತಿಟ್ಟುಕೊಂಡು ಹತ್ತಬೇಕೆಂದು ತಿಳಿಸಲಾಯಿತು. ಮತ್ತು ಇಳಿಯುವಾಗ ನನ್ನ ಕೈಗೆ ಮೂರು ಕೂಪನ್‌ಗಳನ್ನು ಕೊಡಲಾಯಿತು. ಒಂದು, ಜೂಜಾಡಲು ನಾನು ಪಡೆದುಕೊಳ್ಳಬೇಕಾದ ಮುಂಗಡ ಹಣಕ್ಕೆ; ಎರಡನೆಯದು, ಮಧ್ಯಾಹ್ನದ ಊಟಕ್ಕೆ ; ಮೂರನೆಯದು, ಇನ್ನೂ ಒಂದು ಸಲ ಇಲ್ಲಿಗೆ ಬರುವುದಾದರೆ ಆಗ ಜೂಜಾಡಲು ಪಡೆಯಬಹುದಾದ ಹಣಕ್ಕೆ. ಪಾಟ್ಸ್‌ಟೌನ್‌ನಿಂದ ಇಲ್ಲಿಗೆ ನಾನು ಬಂದು ಹೋಗಲು ಕೊಟ್ಟ ಪ್ರಯಾಣದ ವೆಚ್ಚ ಹದಿನೈದು ಡಾಲರ್ ಮಾತ್ರ. ಇವರು ಈಗ ಕೂಪನ್‌ಗಳ ಮೂಲಕ ಮಾಡಿದ ವ್ಯವಸ್ಥೆ, ಈ ಜೂಜಿನ ಕೇಂದ್ರದವರದೇ. ಈ ಕೂಪನ್‌ಗಳನ್ನು ಹಿಡಿದು ನಾನು, ದೊಡ್ಡದೊಂದು ಕಟ್ಟಡದ ಎತ್ತರದ ಹಾಗೂ ಅಗಲವಾದ ಗಾಜಿನ ಬಾಗಿಲು ತಳ್ಳಿಕೊಂಡು ಒಳಗೆ ಪ್ರವೇಶಮಾಡಿದೆ.  ಅದೊಂದು ಭಾರೀ ಮಹಲು, ಝಗಝಗ ದೀಪ – ಗಿಜಿ ಗಿಜಿ ಜನ. ನಾನು ಬೆಪ್ಪುತಕ್ಕಡಿಯಂತೆ ಕೈಯಲ್ಲಿ ಕೂಪನ್ ಹಿಡಿದು ಏನು ಮಾಡಲೂ ತೋಚದೆ ಸುಮ್ಮನೆ ನಿಂತೆ. ಒಬ್ಬಳು ಚಿನ್ನದ ಬಣ್ಣದ ತಲೆಗೂದಲ ಚೆಲುವೆ ನನ್ನ ಬಳಿಗೆ ಬಂದು ‘ಹಾಯ್’ ಎಂದು ನಗೆಬೀರಿ, ‘ನಿಮಗೆ ಸಹಾಯ ಮಾಡಲೆ’ ಎಂದು ಕೇಳಿದಳು. ಅವಳ ಹಿಂದೆ ಹೋದೆ. ಒಂದೆಡೆ ಅವಳು ಕೌಂಟರ್ ಅನ್ನು ತೋರಿಸಿ, ನಿಮ್ಮ ಒಂದು ಕೂಪನ್ – ಮೊದಲನೆಯದು, ಅದನ್ನು ಅಲ್ಲಿ ಕೊಡಿ, ನಿಮಗೆ ಜೂಜಾಡಲು ಒಂದಷ್ಟು ಡಾಲರ್ ಕೊಡುತ್ತಾರೆ, ತೆಗೆದುಕೊಳ್ಳಿ,  Have a nice time ಅಂದು, ಮತ್ತೆ ಬಳುಕುತ್ತಾ ಹೊರಟೇ ಹೋದಳು. ಅವಳಿಗೆ ಥ್ಯಾಂಕ್ಸ್ ಹೇಳಿ, ಆಕೆ ತೋರಿಸಿದ ಕೌಂಟರ್‌ನಲ್ಲಿ ಕೂಪನ್ ಕೊಟ್ಟೆ. ನನ್ನ ಕೈಗೆ ಹತ್ತು ಡಾಲರ್‌ಗಳಷ್ಟು, ನಾಣ್ಯಗಳ ಒಂದು ಪ್ಯಾಕೆಟ್ ಬಂತು. ಇಪ್ಪತ್ತೈದು ಮತ್ತು ಐವತ್ತು ಸೆಂಟುಗಳ (ನಮ್ಮಲ್ಲಿನ ೨೫ ; ೫೦ ಪೈಸೆ ಅಂದುಕೊಳ್ಳಬಹುದು) ನಾಣ್ಯಗಳು. ಅದನ್ನು ಹಿಡಿದು ಮುಂದೆ ಹೋದೆ. ಸಾಲು ಸಾಲಾಗಿ ಹಲವು ಹತ್ತು ಬಗೆಯ ಆಟಗಳು. ನನಗೆ ಅವುಗಳ ತಲೆ – ಬುಡವೇ ತಿಳಿಯುವಂತಿರಲಿಲ್ಲ. ಸುಮ್ಮನೆ ಸ್ವಲ್ಪ ಹೊತ್ತು ವಿಸ್ತಾರವಾದ ಭವನದೊಳಗೆ, ಯಾರು ಯಾರು ಹೇಗೆ ಜೂಜಾಡುತ್ತಾರೆ ನೋಡೋಣ ಎಂದು ಸುತ್ತಾಡಿದೆ. ಒಂದೆಡೆ ಸಾಲು ಸಾಲಾಗಿ ಅಳವಡಿಸಿದ ಪೆಟ್ಟಿಗೆಯಂಥ ಯಂತ್ರಗಳು. ಆ ಪೆಟ್ಟಿಗೆಯ ತೂತೊಂದರಲ್ಲಿ ನಾಣ್ಯವನ್ನು ತೂರಿಸಿ, ಅದು ಒಳಗೆ ಬಿದ್ದ ಸದ್ದಾದೊಡನೆ ಅದಕ್ಕೆ ಲಗತ್ತಾದ ಹ್ಯಾಂಡಲ್ ಒಂದನ್ನು ಎಳೆದರೆ, ಬಳಬಳನೆ, ಯಂತ್ರಕ್ಕೆ ಜೋಡಿಸಿದ ಸಣ್ಣ ಖಾನಿಯೊಂದರೊಳಗೆ ಅದೇ ಬೆಲೆಯ ನಾಣ್ಯಗಳು ಸುರಿಯುತ್ತಿದ್ದವು. ಬೇರೆ ಬೇರೆ ನಾಣ್ಯಗಳಿಗೇ ಬೇರೆ ಬೇರೆ ಯಂತ್ರಗಳು. ಆ ಬೆಲೆಯ ನಾಣ್ಯವನ್ನು ತೂರಿಸಿ, ಹ್ಯಾಂಡಲ್ ಎಳೆದರೆ, ಅದೃಷ್ಟವಿದ್ದರೆ ನಾಣ್ಯಗಳ ಸುರಿಮಳೆ; ಇಲ್ಲದಿದ್ದರೆ ಇಲ್ಲ. ನಾನೂ ನನಗೆ ಕೊಡಲಾದ ಹತ್ತು ಡಾಲರ್ ಹಣದಲ್ಲಿ ಇಪ್ಪತ್ತೈದು ಸೆಂಟ್ ಒಂದನ್ನು  ಇಂಥ ಯಂತ್ರದ ತೂತಿನೊಳಗೆ ತೂರಿಸಿ, ಜೋಡಿಸಿದ ಹ್ಯಾಂಡಲ್ ಎಳೆದೆ. ಬಳಬಳನೆ ಇಪ್ಪತ್ತೈದು ಸೆಂಟ್‌ಗಳ ಹದಿನೈದು – ಇಪ್ಪತ್ತು ನಾಣ್ಯಗಳು ಉದುರಿದವು. ಒಳ್ಳೆಯ ಬೋಣಿಗೆ ಎಂದು ಖುಷಿಯಾಯಿತು. ಶುರುವಾಯಿತು ನೋಡಿ ಜೂಜಿನ  ಚಪಲ. ಮೊದಲ ಕಂತಿನಲ್ಲಿ ಅನಾಯಾಸವಾಗಿ ಕೈಗೆ ಬಂದ ಈ ಹಣವನ್ನೇ ಬಳಸಿ ಸ್ವಲ್ಪ ಹೊತ್ತು ಆಡಿದೆ. ಯಾಕೋ ಅದೃಷ್ಟ ಕೈಕೊಟ್ಟಿತು. ನಾನು ತೂರಿಸಿದ ಒಂದೊಂದು ನಾಣ್ಯವನ್ನು ಯಂತ್ರ ನಿಷ್ಕರುಣವಾಗಿ ಮತ್ತು ನಿಶ್ಶಬ್ದವಾಗಿ ನುಂಗಿ ಹಾಕಿತು. ಏನು ಮಾಡಿದರೂ ಅದರ ಬಾಯಿಂದ, ಏನೂ ಉದುರಲಿಲ್ಲ. ನನ್ನ ಬಳಿ-ಅವರು ಕೊಟ್ಟದ್ದೆ ಇನ್ನೂ ಒಂದಿಷ್ಟು ಇತ್ತಲ್ಲ, ಪ್ರಯತ್ನ ಮಾಡೋಣ ಎಂದುಕೊಂಡು, ಬೇರೆ ಬೇರೆ ಸಾಲಿನ ಯಂತ್ರಗಳನ್ನು  ಸಮೀಪಿಸಿ, ಒಂದರ್ಧಗಂಟೆ ಆಡಿದೆ. ಒಂದೊಂದು ಸಲ, ಒಂದೋ ಎರಡೋ ನಾಣ್ಯಗಳು ಉದುರಿ, ಇನ್ನೂ ಸ್ವಲ್ಪ ಆಡೋಣ ಎನ್ನುವ ಸೆಳೆತವನ್ನು ತಪ್ಪಿಸಿಕೊಳ್ಳಲಾರದೆ ಹೋದೆ. ಬರುಬರುತ್ತಾ ನನಗೆ ಕೂಪನ್ ಮೂಲಕ ಕೊಡಲಾದ ಹತ್ತು ಡಾಲರ್ ಚಿಲ್ಲರೆ ಹಣವಷ್ಟನ್ನೂ, ಸವೆಯುವ ತನಕ ಬಳಸಿ ಆಡಿದೆ. ಅಷ್ಟೂ ನಾಣ್ಯಗಳೂ ಯಂತ್ರದ ಹೊಟ್ಟೆಯೊಳಗೆ ಜೀರ್ಣವಾಗಿ ನಾನು ಬರಿಗೈ ಆದೆ. ‘ಬರಿಗೈ’ ಅಂದರೆ, ಈ ವ್ಯವಸ್ಥೆಯವರು ಕೊಟ್ಟ ಹತ್ತು ಡಾಲರ್ ಮತ್ತು ಅದು ಆಗಾಗ ಗಳಿಸಿಕೊಟ್ಟ ಮತ್ತೂ ಒಂದಿಷ್ಟು ಚಿಲ್ಲರೆ – ಎಲ್ಲವೂ ಖರ್ಚಾಯಿತು ಎಂದು ಅರ್ಥ. ಆದರೆ ಇರಲಿ ಎಂದು ಒಂದಷ್ಟು ಡಾಲರುಗಳನ್ನು ಜೇಬಿನಲ್ಲಿರಿಸಿಕೊಂಡಿದ್ದೆ, ಪಾಟ್ಸ್‌ಟೌನ್‌ನಿಂದ ಹೊರಡುವಾಗ. ಆ ಹಣದ ಕಡೆಗೂ ನನ್ನ ಕೈ ಹೋಯಿತು. ಇದನ್ನೂ ಬಳಸಿ ಸ್ವಲ್ಪ ಕಾಲ ಯಾಕೆ ಆಡಬಾರದು; ಅದೃಷ್ಟವಿದ್ದರೆ ಒಂದಷ್ಟು ಹಣ ಕೈಗೆ ಬಂದರೂ ಬರಬಹುದು ಎಂಬ ಸೆಳೆತಗಳು ನನ್ನನ್ನು ಕಾಡತೊಡಗಿದವು. ಜೂಜಾಡುವವರ ಮನಸ್ಸು ಎಂಥ ಆಕರ್ಷಣೆಗಳಿಗೆ ಒಳಗಾಗಬಹುದು ಎಂಬುದನ್ನು ನಾನು ಸಾಕ್ಷಾತ್ತಾಗಿ ಅನುಭವಿಸಿದೆ. ಈ ಅನುಭವದ ಲಾಭವೇ ಸಾಕು ಅಂದುಕೊಂಡು, ಜೂಜಿನ ಮೋಜಿಗೆ ಸೆಳೆಯುವ ಮನಸ್ಸಿಗೆ ಕಡಿವಾಣ ಹಾಕಿ, ಅದನ್ನು ಕೇವಲ ಪ್ರೇಕ್ಷಕನ ಭಾವದಲ್ಲಿ ನಿಲ್ಲಿಸಿದೆ. ಆ ಭಾರೀ ಭವನದೊಳಗೆ ಜನ-ಜನ-ಜನ, ವಿವಿಧ ಕ್ರೀಡೆಗಳಲ್ಲಿ ಮೈಮರೆತ ಜನ. ಝಗಝಗ ಬೆಳಕುಗಳ ಮಧ್ಯೆ ಝಣ ಝಣ ಹಣದ ಸದ್ದು. ವಿಸ್ತಾರವಾದ ಈ ಸಭಾಭವನದ ಮೂಲೆ ಮೂಲೆಗಳಲ್ಲಿ ಹಾಡಿನ, ಕುಣಿತದ ವ್ಯವಸ್ಥೆ. ಆ ಹಾಡಿನ ಮೋಡಿ ಇಡೀ ಆವರಣವನ್ನು ರಾಗರಂಜಿತವನ್ನಾಗಿ ಮಾಡುವಾಗ, ರಭಸದಿಂದ ಜೂಜಿನ ಮೋಜಿನಲ್ಲಿ ಮಗ್ನವಾದವರ ಬಳಿಗೇ, ಮೊಲೆಗಟ್ಟಿನ, ನಳಿತೋಳ್ಗಳ, ಅರ್ಧಲಂಗದ ಅಪ್ಸರೆಯರು ಪಾನೀಯದ ಬಟ್ಟಲುಗಳನ್ನಿಟ್ಟ ತಟ್ಟೆಗಳನ್ನು ಹಿಡಿದು ಬಳುಕುತ್ತಾ ಬಂದು, ನೀಡುವ ಪಾನೀಯಗಳನ್ನು ಕುಡಿಯುತ್ತಾ ಮತ್ತೂ ರಭಸದಿಂದ ಜೂಜಿನಲ್ಲಿ ತೊಡಗುತ್ತಾರೆ ಜನ. ಆ ರಂಗಿನ – ಆ ಝಣಝಣ ಜಗತ್ತಿನ ವಿಸ್ತಾರದಲ್ಲಿ ವಿವಿಧ ವಿಲಾಸವನ್ನು ನೋಡಿದಾಗ, ಇದೊಂದು ಮಹಾಭಾರತದ ಮಯನಿರ್ಮಿತ ಸಭಾಭವನವೇ ಅನ್ನಿಸಿತು. ಆ ಭವನದ ಮಧ್ಯೆ ಅಲ್ಲಲ್ಲಿ ಎತ್ತರವಾದ ಹಾಲುಗಲ್ಲಿನ ಪುರುಷ ವಿಗ್ರಹಗಳಿದ್ದವು. ಆದರೆ ಅವೆಲ್ಲ ಕೇವಲ ಬರೀ ಬೆತ್ತಲೆ ದಿಗಂಬರ ಮೂರ್ತಿಗಳು. ಇದರರ್ಥ, ಇಲ್ಲಿಗೆ ಬಂದವರು ಎಲವನ್ನೂ ಕಳೆದುಕೊಂಡು ಕೊನೆಗೆ ಹೀಗೆ ದಿಗಂಬರ ಚಕ್ರವರ್ತಿಗಳಾಗುತ್ತಾರೆ ಎಂಬುದನ್ನು ಈ ವಿಗ್ರಹಗಳು ಸೂಚಿಸುತ್ತವೆಯೋ ಏನೋ!

ನಾನು ಈ ಭವನದ ಎರಡನೆಯ ಹಂತದಲ್ಲಿ ಒಂದು ರೆಸ್ಟೋರಾಂಟನ್ನು ಹುಡುಕಿಕೊಂಡು ಹೋಗಿ, ನನಗೆ ಕೊಡಲಾದ ಊಟದ ಕೂಪನ್ ಕೊಟ್ಟು ಒಂದಷ್ಟು ಉಪಹಾರ ಮಾಡಿದೆ. ಈ ಮೇಲಿನ ಹಂತದ ವಿಸ್ತಾರದೊಳಗಿನ ಅಂಗಡಿ ಮಳಿಗೆಗಳಂತೂ ದಂಗುಬಡಿಸುವ ವಸ್ತು ವೈವಿಧ್ಯದಿಂದ ಕೂಡಿವೆ. ಸಾಕಷ್ಟು ಹೊತ್ತು ಝಗ ಝಗಿಸುವ ಅಂಗಡಿಗಳೊಳಗೆ ಸುತ್ತಾಡಿ, ಕೆಳಗಿಳಿದು ಕಟ್ಟಡದ ಹಿಂದಕ್ಕೆ ಬಂದರೆ ತೆರೆಮೊರೆಯುವ ಅಟ್ಲಾಂಟಿಕ್ ಮಹಾಸಾಗರ. ಬೆಳ್ಳಗೆಯ ನುಣ್ಮಳಲಿನ ವಿಸ್ತಾರವಾದ ತೀರವನ್ನು ರುಬ್ಬುವ ಅಲೆಗಳನ್ನು ನೋಡುತ್ತಾ ಸ್ವಲ್ಪ ಹೊತ್ತು ನಿಂತೆ. ಮಧ್ಯಾಹ್ನದ ಹಿತವಾದ ಬಿಸಿಲಿನಲ್ಲಿ ಈ ಕಡಲ ತೀರದ ಉದ್ದಕ್ಕೂ ಸಾಲಾದ, ವಿವಿಧ ದೇಶದ ವಸ್ತುಗಳನ್ನು ಮಾರುವ ಅಂಗಡಿಗಳು, ರೆಸ್ಟೋರಾಂಟುಗಳು, ಪಾನೀಯದ ಕಟ್ಟೆಗಳು, ಮತ್ತಷ್ಟು ಜೂಜಿನ ಮಹಲುಗಳು. ಈ ಮಹಲುಗಳ ಒಳಗೆ ವಿವಿಧ ಕ್ರೀಡೆಗಳು ಮತ್ತು ಅವುಗಳಿಗೆ ಮೆತ್ತಿಕೊಂಡ ಜನಗಳು. ಒಂದು ಆಶ್ಚರ್ಯದ ಸಂಗತಿಯೆಂದರೆ, ಈ ಜೂಜಿನ ಮೋಜುಗಳಲ್ಲಿ ತೊಡಗಿದವರೆಲ್ಲ ಬಹುಮಟ್ಟಿಗೆ ವಯಸ್ಸಾದವರೇ. ಇದೇನು ತರುಣರಿಗೆ ಹೇಳಿ ಮಾಡಿಸಿದ ಸ್ಥಳವಲ್ಲವೋ ಎನ್ನುವಂತೆ ಬರೀ ಮುದುಕ ಮುದುಕಿಯರೇ ಇದಾರಲ್ಲ ಅನ್ನಿಸಿತು. ಆದರೆ ಇವತ್ತು ಶುಕ್ರವಾರ. ವಾರದ ಐದೂ ದಿನಗಳ ಕಾಲ ಉದ್ಯೋಗಗಳಲ್ಲಿ ತೊಡಗಿರುವ ಬಹುಸಂಖ್ಯಾತರು, ಈ ದಿನ ಎಲ್ಲಿ ಕಾಣುತ್ತಾರೆ? ಅವರೆಲ್ಲಾ ಶನಿವಾರ – ಭಾನುವಾರಕ್ಕಾಗಿ ಕಾಯಬೇಕು. ಹೀಗಾಗಿ, ಶನಿವಾರ ಭಾನುವಾರ ಬಿಟ್ಟರೆ ಉಳಿದ ದಿನಗಳಲ್ಲಿ ಇಲ್ಲಿಗೆ ಬರಲು ಸಾಧ್ಯವಾಗುವುದು ವಯೋವೃದ್ಧರಿಗೆ ಮಾತ್ರ. ವಾಸ್ತವವಾಗಿ ಈ ಎಲ್ಲ ವಿನೋದ ವಿಹಾರಗಳ ಅಗತ್ಯ ಹೆಚ್ಚಾಗಿರುವುದು ಅವರಿಗೇ. ಅಮೆರಿಕಾದ ಮುದುಕರಿಗೆ ‘ಸೀನಿಯರ್ ಸಿಟಿಜನ್ಸ್’ (ಹಿರಿಯ ಪೌರರು) ಎಂಬುದು ಗೌರವಪೂರ್ವಕವಾದ ಹೆಸರು. ಆದರೆ ಅವರ ಪಾಡು ಮಾತ್ರ ಹೇಳಿಕೊಳ್ಳುವಂಥದಲ್ಲ. ಹಡೆದ ಮಕ್ಕಳಿಂದ ದೂರವಾಗಿ, ಏಕಾಂಗಿಗಳಾಗಿ, ವಿಷಾದದ ಕಳೆಯನ್ನು ಹೊತ್ತು ದಿನತಳ್ಳುವ ಈ ಮುದುಕರಿಗೆ, ಇಂಥ ಸ್ಥಳಗಳೇ ಕಾಲ ಕಳೆಯಲು ತಕ್ಕ ಆಕರ್ಷಣೆಯ ಕೇಂದ್ರಗಳು. ಈ ಜೂಜಿನ ಕೇಂದ್ರಗಳಲ್ಲಿ ಕಿಕ್ಕಿರಿದ ಆ ಅಪರವಯಸ್ಕರನ್ನು ನೋಡಿದರೆ ಅಯ್ಯೋ ಅನ್ನಿಸುತ್ತದೆ.

ಮತ್ತೆ ಸಂಜೆ ಐದರ ವೇಳೆಗೆ ಬಸ್ಸು ಹತ್ತಿ, ಬಸ್ಸಿನ ತುಂಬಾ ತುಂಬಿಕೊಂಡ ವೃದ್ಧರ ಮಧ್ಯೆ ಪ್ರಯಾಣ ಮಾಡಿ, ಏಳೂವರೆಯ ವೇಳೆಗೆ ಪಾಟ್ಸ್‌ಟೌನ್‌ನಲ್ಲಿ ಇಳಿದಾಗ, ಹರಿಹರೇಶ್ವರ ಅವರು ನನಗಾಗಿ ಕಾದಿದ್ದರು. ಅವರ ಜತೆ ಮನೆ ತಲುಪಿದಾಗ ಪ್ರೊ. ಆರ್. ವೈ. ಧಾರವಾಡಕರ್ ಅವರು ಮುಗುಳ್ನಗೆಯಿಂದ ಸ್ವಾಗತಿಸಿದರು. ಮರುದಿನ ಮತ್ತು ಅದರ ಮುಂದಿನ ದಿನ (ಶನಿವಾರ – ಭಾನುವಾರ), ‘ಅಮೆರಿಕನ್ನಡ’ ಪತ್ರಿಕೆಯ ವತಿಯಿಂದ, ಚೆರ್ರಿಹಿಲ್ ಎಂಬ ಊರಿನ ಹತ್ತಿರದ ವೂರಿರ್ ಎಂಬ ಹಳ್ಳಿಯಲ್ಲಿ ಅಮೆರಿಕಾದ ಕನ್ನಡ ಬರಹಗಾರರಿಗೆ ಹರಿಹರೇಶ್ವರ ದಂಪತಿಗಳು ವ್ಯವಸ್ಥೆಗೊಳಿಸಿದ್ದ ಕನ್ನಡ ಸಾಹಿತ್ಯಕ್ಕೆ ಸಂಬಂಧಪಟ್ಟ ಕಾರ್ಯಾಗಾರದ workshop ಜವಾಬ್ದಾರಿಯನ್ನು ನಾನು, ಪ್ರೊ. ಧಾರವಾಡಕರ್ ಮತ್ತು ಟಿ.ಎಸ್. ಸತ್ಯನಾಥ್, ಮೂವರೂ ವಹಿಸಿಕೊಂಡಿದ್ದ ಕಾರಣ, ಶ್ರೀಮತಿ ನಾಗಲಕ್ಷ್ಮಿಯವರು ಸಡಗರದಿಂದ ಅದಕ್ಕೆ ಅಗತ್ಯವಾದ ಪರಿಕರಗಳ ಸಿದ್ಧತೆಯಲ್ಲಿ ತೊಡಗಿದ್ದರು.