ಕನ್ನಡದ ಹಿತ್ತಿಲಿಗೊಂದು ಇಂಗ್ಲೀಷ್ ಹೆಸರಿನ ಗಿಡ. ಎರೆಡು ರೀತಿಯಲ್ಲಿ ಈ ಗಿಡ ಬೆಳೆಯುವುದು ಒಳ್ಳೆಯದು. ವರ್ಷದಲ್ಲಿ ೯ತಿಂಗಳು ಹೂವು ಬಿಡುತ್ತಿರುತ್ತೆ. ಪದೇ ಪದೇ ರೀಪಾಟಿಂಗ್ ಮಾಡ ಬೇಕಿಲ್ಲ. ಎರೆಡು ಮೂರು ವರ್ಷಕ್ಕೊಮ್ಮೆ ಹೊಸ ಗಿಡ ಮಾಡಿಕೊಂಡರೆ ಸಾಕು. ವಾರದಲ್ಲಿ ಒಂದೆರೆಡು ಬಾರಿ ನೀರು ಹಾಕಿದರೆ ಆಯಿತು.  ಹೆಚ್ಚು ಗೊಬ್ಬರದ ಆವಶ್ಯಕತೆ ಇಲ್ಲ. ರೋಗ ರುಜಿನದ ಕಾಟವಿಲ್ಲ.

ಪುಟ್ಟ ಪುಟ್ಟ ಹೂಗಳ ಗೊಂಚಲು. ಕೆಂಪು, ಗುಲಾಬಿ, ಬಿಳಿ, ದ್ವಿವರ್ಣದ ಹೂಗಳು, ಎರೆಡು ಸುತ್ತಿನ ಹೂಗಳು. ಹತ್ತಾರು ಬಗೆಯ ಹೂಗಳು. ಚಿತ್ತಾಕರ್ಶಕ ಎಲೆಗಳ ಮಧ್ಯದಿಂದ ಎತ್ತರಕ್ಕೆ ಸೆಟೆದು ನಿಲ್ಲುವ ಹೂ ಮನ ಮೋಹಕ.  ಹೂ ಒಣಗಿದ ನಂತರ ಬೀಜವಾಗುವಾಗ ತುದಿ ಕೊಕ್ಕಿನಂತೆ ಚೂಪಾಗಿ, ಉದ್ದಕ್ಕೆ ನೇರವಾಗಿ ಎದ್ದು  ಕಾಣುವದರಿಂದ ಇದಕ್ಕೆ ‘ಕ್ರೇನ್ ಬಿಲ್’ ಎಂಬ ಹೆಸರೂ ಇದೆ.

ಜೆರೇನಿಯಂ ಡಬಲ್,

ಹೆಚ್ಚು ಬಿಸಿಲು ಅಂದರೆ ಕಡೆಯ ಪಕ್ಷ ದಿನದಲ್ಲಿ ೬-೭ ಗಂಟೆ ಬಿಸಿಲು ಬೀಳುವ ಜಾಗದಲ್ಲಿ ಗಿಡ ನೆಡಬೇಕಾದುದು ಮುಖ್ಯ. ಬಿಸಿಲಿದ್ದಾಗಲೇ ಹೆಚ್ಚು ಹೂವು ಬಿಡುವುದು.  ಛಳಿ ಇರುವ  ದಿನಗಳಲ್ಲಿ  ಈ ಗಿಡದಲ್ಲಿ ಹೂವು ಬಿಡುವುದಿಲ್ಲ. ಛಳಿ ಕಳೆದ ನಂತರ ಗಿಡವನ್ನು ಹೊಸ ಕುಂಡಕ್ಕೆ ವರ್ಗಾಯಿಸ ಬಹುದು.  ಕುಂಡಕ್ಕೆ ಬೆರೆಸುವ ಮಣ್ಣಿನ ಜೊತೆಗೆ ಹೆಚ್ಚು ಸಾವಯವಯುಕ್ತ ಗೊಬ್ಬರ ಸೇರಿಸಿದರೆ ಹೆಚ್ಚು ಕಾಲ ತೇವಾಂಶ ಉಳಿಯುತ್ತದೆ. ನೀರು ಬಸಿದು ಹೋಗುವ ಮಣ್ಣು ಸೂಕ್ತ.

ಇನ್ನು ಗಿಡದ ಕಾಂಡದ ತುಂಡಿನಿಂದ ಹೊಸ ಗಿಡ ಬೆಳೆಸ ಬಹುದು. ತುದಿಯ ನಾಲ್ಕಾರು ಎಲೆ ಇರಬೇಕಾದುದು ತುಂಬ ಮುಖ್ಯ. ಕೆಳಗಿನ ಎಲೆಗಳನ್ನು ತೆಗೆಯ ಬೇಕು. ೩ರಿಂದ ೫ ಇಂಚು ಉದ್ದ ಇರುವ ತುಂಡಿನ ತುದಿಯನ್ನು  ಒಂದೂವರೆ ಇಂಚಿನಷ್ಟು ಆಳದಲ್ಲಿ  ಮರಳಿನಲ್ಲಿ ನೆಟ್ಟರೆ, ಸ್ವಲ್ಪ ದಿನದಲ್ಲೇ ಬೇರು ಬಂದು   ಹೊಸ ಗಿಡ ಸಿದ್ಧ. ಹತ್ತಾರು ಕಡ್ಡಿಗಳನ್ನು ಒಂದೇ ಕುಂಡದಲ್ಲಿ ನೆಡ ಬಹುದು. ಗಾಳಿಯಾಡುವಷ್ಟು ದೂರ ದೂರವಿದ್ದರೆ ಸಾಕು. ಕುಂಡದ ಮಿಶ್ರಣ ನೆನೆಯುವಷ್ಟು ನೀರು ಹಾಕಿ ಮೇಲಿನಿಂದ ಒಂದು ಪ್ಲಾಸ್ಟಿಕ್ ಚೀಲ ಹಾಕಿಟ್ಟರೆ ಬಹಳ ದಿನದ ವರೆಗೆ ನೀರು ಹಾಕಬೇಕಿಲ್ಲ. ಬೇರು ಬಿಟ್ಟ ಕಡ್ಡಿಗಳನ್ನು ಸಣ್ಣ ಕುಂಡಗಳಿಗೆ ವರ್ಗಾಯಿsಸ ಬಹುದು.

ಐವೀ ಜೆರೇನಿಯಂ, ತೂಗು ಕುಂಡದಲ್ಲಿ

ನರ್ಸರಿಗಳಲ್ಲಿ ಹೈಬ್ರಿಡ್ ಗಿಡಗಳೂ ದೊರೆಯುತ್ತವೆ. ಬೀಜಗಳಿಂದಲೂ ಗಿಡ ಮಾಡ ಬಹುದು. ಪ್ಲಗ್ ಟ್ರೇಗಳಲ್ಲಿ ಬೀಜ ನಾಟಿ ಮಾಡ ಬೇಕು. ಸ್ವಲ್ಪ ನಿಧಾನ ವಾದರೂ ಗಿಡ ಚೆನ್ನಾಗಿ ಬೆಳೆದ ಮೇಲೆ ನಾಟಿ ಮಾಡ ಬೇಕು. ಬೆಳೆದ ಗಿಡದಲ್ಲಿ ತಾಯಿ ಗಿಡದಲ್ಲಿ ಬಿಡುವ ಬಣ್ಣದ್ದೇ ಹೂವು ಬರುವ ಖಾತರಿ ಇಲ್ಲ. ಸ್ವಲ್ಪ ಭಿನ್ನವಾಗಿರ ಬಹುದು.

ನಾಟಿ ಮಾಡಿದ ಗಿಡಗಳಲ್ಲಿ ಹೊಸ ಎಲೆಗಳು ಸಾಕಷ್ಟು ಬರುವವರೆಗೆ ಹೆಚ್ಚುವರಿ  ಗೊಬ್ಬರದ ಆವಶ್ಯಕತೆ ಇಲ್ಲ. ಕೇವಲ ತೇವಾಂಶ ಕಾಪಾಡಿಕೊಳ್ಳ ಬೇಕಷ್ಟೆ. ಜೆರೇನಿಯಂ ಗಿಡಗಳು ಹೊರಾಂಗಣದಲ್ಲಿ ಬೆಳೆದಷ್ಟೇ ಚೆನ್ನಾಗಿ ಒಳಾಂಗಣದಲ್ಲೂ  ಬೆಳೆಯುತ್ತೆ. ಸುಂದರವಾದ  ಎಲೆಗಳೇ ಸಾಕು, ನೋಡುಗರ ಮನ ಸೆಳೆಯಲು. ಹೊರಗೆ ಸಾಲಿನಲ್ಲಿ ಹಾಕ ಬಹುದು. ಕುಂಡಗಳಲ್ಲಿ ಬೆಳೆದಾಗಲೂ, ಅವುಗಳ ಸೌಂದರ್ಯಕ್ಕೆ ಕುಂದು ಬರುವುದಿಲ್ಲ.

ಜೆರೇನಿಯಂ ಕುಂಡಗಳ ಸಾಲು ಜೋಡಣೆ

ಐವಿ ಜೆರೇನಿಯಂ ಸಣ್ಣದಾಗಿ ಹಬ್ಬುವ ಗಿಡ. ತೂಗು ಕುಂಡಗಳಿಗೆ ಹೇಳಿ ಮಾಡಿಸಿದ್ದು. ಆಗಿಂದ್ದಾಗ್ಯೆ ಒಣಗಿದ ಎಲೆಗಳನ್ನು ತೆಗೆಯುತ್ತಿರ ಬೇಕು. ತುಂಬ ಎಲೆಗಳಿರುವ ಗಿಡವಾದ್ದರಿಂದ ನೀರು ಹಿಡಿದಿಟ್ಟು ಕೊಳ್ಳುತ್ತದೆ. ಬರ ತಡೆಯುವ ಶಕ್ತಿ ಸಾಕಷ್ಟಿದೆ. ಬೆಳೆಯುವ ಹಂತದಲ್ಲಿ ವಾರಕ್ಕೊಮ್ಮೆ ದ್ರವ ಗೊಬ್ಬರ ಕೊಟ್ಟರೆ ಹೆಚ್ಚು ಹೂಗಳು ಬಿಡುತ್ತವೆ.

ಇದೇ ಸಸ್ಯ ಕುಟುಂಬಕ್ಕೆ ಸೇರಿದ ‘ಸೆಂಟೆಡ್ ಜೆರೇನಿಯಂ’ ಬರೀ ಸುವಾಸಿತ ಎಲೆಗಳುಳ್ಳ ಗಿಡ. ಹೂವಿನ ಜೊತೆ ಕಟ್ಟಲು ಉಪಯುಕ. ಗುಲಾಬಿಗೆ ಹಿಂಬದಿಯಿಂದ ಅಲಂಕಾರಿಕವಾಗಿ ಜೋಡಿಸಿದ ಜೆರೇನಿಯಂಗೆ ಮದುವೆ ಮನೆಗಳಲ್ಲಿ ಹೆಚ್ಚಿನ ಪ್ರಾಶಸ್ತ್ಯ. ಇದರಿಂದ ತೆಗೆಯುವ ಸುವಾಸಿತ ಎಣ್ಣೆಗೆ ಎಲ್ಲಿಲ್ಲದ ಬೇಡಿಕೆ. ಹಲವು ಔಷಧಗಳ ತಯಾರಿಕೆಯಲ್ಲಿ, ಸೊಳ್ಳೆ ವಿಕರ್ಶಕ ಬತ್ತಿಗಳಲ್ಲಿ ಎಣ್ಣೆಯ ಬಳಕೆ.

ಸಾಲಿನ ಸುಂದರತೆ

ಕೊನೆ ಹನಿ: ಜೆರೇನಿಯಂ ಗಿಡಗಳು ಎಲ್ಲ ನರ್ಸರಿಗಳಲ್ಲೂ ದೊರೆಯುತ್ತದೆ. ಛಳಿಗಾಲ ಮುಗಿದ ಮೇಲೆ, ಹೊರಗಿನ ಉಷ್ಣಾಂಶ ಜಾಸ್ತಿಯಾದ ಮೇಲೆ ಸಸಿಯನ್ನು  ಕುಂಡಕ್ಕೆ ವರ್ಗಾಯಿಸ ಬಹುದು.

ಜೆರೇನಿಯಂನ ವರ್ಣ ಸಂಯೋಜನೆ

– ಚಿತ್ರಗಳು : ಎಆರ್ ಎಸ್ ಶರ್ಮ