೧೯೦೪ರಲ್ಲಿ ಬೇಸಿಗೆ ಕಾಲದ ಒಂದು ದಿನ. ಜರ್ಮನಿಯ ಬಾದ್ ನಾಹೀಂ ನಗರದ ಚಿಕಿತ್ಸಾಲಯದಲ್ಲಿ ಭಾರತೀಯರೊಬ್ಬರು ಸಾವು ಬದುಕಿನ ತೂಗುಯ್ಯಾಲೆಯಲ್ಲಿ ಮಲಗಿದ್ದರು. ಅವರು ಹತ್ತೊಂಬತ್ತನೆಯ ಶತಮಾನದ ಪ್ರಸಿದ್ಧ ಪುರುಷರಲ್ಲೊಬ್ಬರು. ಮಹತ್ತರ ಕಾರ್ಯಗಳನ್ನು ಸಾಧಿಸಿ ತಮ್ಮ ದೇಶವನ್ನು ಪ್ರಗತಿಯ ಪಥಕ್ಕೆ ಒಯ್ದ ತೃಪ್ತಿಯು ಅವರ ಕಣ್ಣುಗಳಲ್ಲಿ ಮೂಡಿತ್ತು. ಸಾರ್ಥಕ ಬದುಕಿನಲ್ಲಿ ಕಂಡ ಎರಡು ಮೂರು ಕನಸುಗಳು ಇನ್ನೂ ರೂಪಗೊಳ್ಳಲಿಲ್ಲವೆಂಬ ನಸು ಚಿಂತೆ ಕಾಡಿತು. ತಮ್ಮ ಪಕ್ಕದಲ್ಲಿದ್ದ ಸಹೋದರನಿಗೆ “ನಾನು ಮಾಡಿರುವ ಕೆಲಸಗಳನ್ನು ಬೆಳೆಸಿ, ಬೆಳೆಸಲು ಸಾಧ್ಯವಾಗದಿದ್ದರೆ ಇರುವುದನ್ನು ಕಾಪಾಡಿಸಿಕೊಂಡು ಬನ್ನಿ” ಎಂದು ತಿಳಿಸಿದರು.

‘ಭಾರತದ ಕೈಗಾರಿಕೆಗಳ ಜನಕ’ ಎನಿಸಿದ್ದರು ಆ ಮೇಧಾವಿ. ಅವರ ಮಾತನ್ನು ಅವರ ಕುಟುಂಬ ವರ್ಗದವರು ಶಿರಸಾವಹಿಸಿ ಅವರ ಕಾರ್ಯಗಳನ್ನು ವೃದ್ಧಿಪಡಿಸಿ, ಕನಸುಗಳಿಗೆ ರೂಪ ಕೊಟ್ಟು ಭಾರತದ ಪ್ರಗತಿಗೆ ಸಾಕಷ್ಟು ಸೇವೆ ಸಲ್ಲಿಸಿದರು. ಅ ಮೇಧಾವಿಯೇ ಜೆಮ್‌ಸೆಟ್‌ಜಿ ನಸೆರ್ ವಾಂಜಿ ತಾತಾ.

ತಾತಾ ಇನ್‌ಸ್ಟಿಟ್ಯೂಟ್ !
ಭಾರತ ವಿಜ್ಞಾನ ಸಂಸ್ಥೆ!

ಭಾರತದಲ್ಲಿ ಯಾರು ಇದರ ಹೆಸರು ಕೇಳಿಲ್ಲ ! ಬೆಂಗಳೂರಿನಲ್ಲಿರುವ ಈ ಪ್ರಸಿದ್ಧ ವಿಜ್ಞಾನ ಸಂಸ್ಥೆಯ ಹೆಸರು ದೇಶ ವಿದೇಶಗಳಲ್ಲಿ ಪ್ರಸಿದ್ಧ ಸಿ.ವಿ. ರಾಮನ್, ಭಾಭಾ, ವಿಕ್ರಮ ಸಾರಾಭಾಯ್ ಮೊದಲಾದ ಪ್ರಸಿದ್ಧ ವಿಜ್ಞಾನಿಗಳು ಇಲ್ಲಿ ಸಂಶೋಧನೆ ಮಾಡಿದ್ದಾರೆ. ಭಾರತವನ್ನು ಆಧುನಿಕ ವಿಜ್ಞಾನ ಯುಗಕ್ಕೆ ಕರೆತಂದ ಕೀರ್ತಿಯಲ್ಲಿ ಬಹುಭಾಗ ಈ ಸಂಸ್ಥೆಗೆ ಸೇರಬೇಕು.

ಈ ಸಂಸ್ಥೆಯ ಹೆಸರಿನಲ್ಲಿರುವ ‘ತಾತಾ’ ಇವರೇ ಜೆಮ್‌ಸೆಟ್‌ಜಿ ನಸೆರ್‌ವಾಂಜಿ ತಾತಾ. ತಾತಾ ಇನ್‌ಸ್ಟಿಟ್ಯೂಟ್‌ನ ಸ್ಥಾಪನೆಗೆ ಕಾರಣರಾದವರು.

ತಾತಾ ಮನೆತನ

ಹೊರದೇಶಗಳಲ್ಲಿ ಶತ್ರುಗಳ ಆಕ್ರಮಣ, ಕೋಟಲೆಗಳಿಗೆ ಗುರಿಯಾಗಿ ಓಡಿಬಂದ ಅನೇಕ ಜನಾಂಗಗಳಿಗೆ ಆಶ್ರಯವನ್ನು ನೀಡಿ ಕಾಪಾಡಿರುವ ಕೀರ್ತಿ ಭಾರತ ದೇಶಕ್ಕೆ ಪ್ರಥಮವಾಗಿ ಸಲ್ಲುತ್ತದೆ. ಏಳನೆಯ ಶತಮಾನದಲ್ಲಿ ಪರ್ಷಿಯಾ ದೇಶವು ಅರಬ್ಬಿಯವರ ದಾಳಿಗೆ ತುತ್ತಾಯಿತು. ಜರಾತುಷ್ಟ್ರ ಎಂಬಾತ ಆ ದೇಶದ ಮಹಾಪ್ರವಾದಿ. ಅವನ ಅನುಯಾಯಿಗಳು ತಮ್ಮ ತಾಯಿನಾಡನ್ನು ಬಿಟ್ಟು ಭಾರತಕ್ಕೆ ವಲಸೆ ಬಂದು ಗುಜರಾತಿನ ಸುತ್ತಲಿನ ಭಾಗಗಳಲ್ಲಿ ನೆಲೆಸಿದರು. ಅಂತಹ ನೆಲೆಗಳಲ್ಲಿ ಬರೋಡ ಸಂಸ್ಥಾನದ ಸೂರತ್ತಿಗೆ ಕೆಲವು ಮೈಲಿಗಳ ದೂರದಲ್ಲಿದ್ದ ನವಸಾರಿ ಎಂಬ ಗ್ರಾಮವೂ ಒಂದು. ಈ ಪಾರಸಿಯವರಲ್ಲಿ ವ್ಯಾಪಾರಿಗಳೂ ಮತ್ತು ಗುರುವರ್ಗಕ್ಕೆ ಸೇರಿದವರೂ ಇದ್ದರು. ಗುರುವರ್ಗಕ್ಕೆ ಸೇರಿದವರಲ್ಲಿ ಕೆಲವರು ಮುಂದೆ ವ್ಯಾಪಾರಿಗಳಾದರು. ಗುರುವರ್ಗದ ಪಾರಸಿಯವರ ಪೀಳಿಗೆಯ ಹದಿನಾರನೆಯ ತಲೆಮಾರಿನಲ್ಲಿ ಬೆರಾಮ್ ಎಂಬುವವನು ‘ತಾತಾ’ ಎಂಬ ಹೆಸರನ್ನು ಪಡೆದನು. ಇದೇ ತಾತಾ ಮನೆತನದಲ್ಲಿ ೧೮೨೨ ರಲ್ಲಿ ನವಸಾರಿಯಲ್ಲಿ ನಸೆರ್‌ವಾಂಜಿ ತಾತಾ ಹುಟ್ಟಿದರು. ನಸೆರ್‌ವಾಂಜಿ ಚಿಕ್ಕ ವಯಸ್ಸಿನಲ್ಲೇ ವನಸಾರಿಯಲ್ಲಿದ್ದ ಶ್ರೀಮಂತ ವರ್ತಕನ ಬಳಿ ವ್ಯಾಪಾರದಲ್ಲಿ ಪರಿಶ್ರಮ ಪಡೆದುಕೊಂಡರು. ಮುಂದೆ ವಿದೇಶಗಳಲ್ಲಿ ಸಂಚರಿಸಿದರು, ಶ್ರೀಮಂತರಾದರು. ೧೮೩೯ನೇ  ಮಾರ್ಚಿ ೩ನೇ ತಾರೀಖು ನಸೆರ್‌ವಾಂಜಿಯವರಿಗೆ ಗಂಡು ಮಗು ಜನಿಸಿತು; ಆಗ ಅವರಿಗೆ ಹದಿನೇಳೇ ವರ್ಷ ವಯಸ್ಸು. ಆ ಮಗುವೇ ಜೆಮ್‌ಸೆಟ್‌ಜಿ ನಸೆರ್‌ವಾಂಜಿ ತಾತಾ.

ವಿದ್ಯಾಭ್ಯಾಸ

ಜೆಮ್‌ಸೆಟ್‌ಗೆ ಹದಿಮೂರು ವರ್ಷಗಳಾದಾಗ ತಂದೆ ಅವರನ್ನು ಮುಂಬಯಿಗೆ ಕರೆದುಕೊಂಡು ಹೋಗಿ ಪಂಡಿತರಿಂದ ವಿದ್ಯೆ ಹೇಳಿಸಿದರು. ಅನಂತರ ಎಲ್‌ಫಿನ್‌ಸ್ಟನ್ ಕಾಲೇಜಿನಲ್ಲಿ ಓದು ಸಾಗಿತು. ವಿದ್ಯಾರ್ಥಿಯಾಗಿದ್ದಾಗಲೇ ಗುರು ಮನೆತನದ ಹೀರಾಬಾಯಿ ಎಂಬ ಪಾರಸಿ ಕನ್ಯೆಯೊಂದಿಗೆ ಮದುವೆ ಆಯಿತು. ಜೆಮ್‌ಸೆಟ್‌ಜಿ ೧೮೫೮ರಲ್ಲಿ ಪದವೀಧರರಾದರು.

ವ್ಯಾಪಾರದ ಜಗತ್ತಿನಲ್ಲಿ

ಜೆಮ್‌ಸೆಟ್‌ಜಿಯವರ ವಿದ್ಯಾಭ್ಯಾಸ ಸಾಗುತ್ತಿದ್ದಾಗಲೇ ಅವರ ತಂದೆಯವರು ಹತ್ತಿ, ಅಫೀಮು, ರೇಷ್ಮೆ, ದಾಲ್ಚಿನ್ನಿ ಮೊದಲಾದ ವಸ್ತುಗಳಲ್ಲಿ ಚೀನಾದೊಂದಿಗೆ ವ್ಯಾಪಾರ ನಡೆಸುತ್ತಿದ್ದರು. ಜೆಮ್‌ಸೆಟ್‌ಜಿ ಮೊದಲು ವಕೀಲರೊಬ್ಬರ ಬಳಿ ಕೆಲಸಕ್ಕೆ ಸೇರಿದರು. ಅವರಿಗೆ ೨೦ ವರ್ಷಗಳಾಗಿದ್ದಾಗ ೧೮೫೯ರಲ್ಲಿ ಮೊದಲನೆ ಮಗ ದೊರಾಬ್ಜಿ ಹುಟ್ಟಿದರು. ಗೃಹಕೃತ್ಯದ ಹೊಣೆಗಾರಿಕೆಯು ಹೆಚ್ಚಾಯಿತು. ಜೆಮ್‌ಸೆಟ್‌ಜಿ ತಂದೆಯ ವ್ಯವಹಾರದಲ್ಲಿ ಸೇರಬೇಕಾಯಿತು. ತಂದೆಯಿಂದ ವಾಣಿಜ್ಯದ ಅನುಭವ, ಮಾರ್ಗದರ್ಶನ ಪಡೆದರು. ಅವರ ತಂದೆ ಚೀನಾದೊಡನೆ ವ್ಯಾಪಾರದ ಅಭಿವೃದ್ಧಿಗಾಗಿ ಅವರನ್ನು ೧೮೫೯ರ ಡಿಸೆಂಬರಿನಲ್ಲಿ ಹಾಂಕಾಂಗ್‌ಗೆ ಕಳುಹಿಸಿದರು. ಅದು ಅವರ ಮೊದಲನೆಯ ವಿದೇಶ ಯಾತ್ರೆ. ಆಗಿನ ಕಾಲದಲ್ಲಿ ವಿದೇಶ ಪ್ರಯಾಣ ಎಂದರೆ ಹಡಗಿನಲ್ಲೆ. ಅದೂ ಆವಿಯ ಹಡಗು. ಪ್ರಯಾಣ ತುಂಬ ಕಷ್ಟಕರವಾಗಿತ್ತು. ಎಂಜಿನ್ ಕೊಠಡಿಯ ಬಿಸಿ ಪ್ರಯಾಣಿಕರಿಗೆ ತಾಕುತ್ತಿತ್ತು. ಸೆಖೆಗೆ ಮೈಯೆಲ್ಲ ಬೆವತು ಹೋಗುತ್ತಿತ್ತು. ಆದರೆ ಹಡಗಿನಲ್ಲಿ ಮಂಜುಗಡ್ಡೆ ಇರಲಿಲ್ಲ. ದೇಶದಿಂದ ದೇಶಕ್ಕೆ ಸಾಗಿಸುತ್ತಿದ್ದ ಪ್ರಾಣಿಗಳು, ಪಕ್ಷಿಗಳು, ಅವುಗಳ ಆಹಾರ ಎಲ್ಲ ಪ್ರಯಾಣಿಕರ ಜೊತೆಗೇ! ಅವಕ್ಕೆ ಬೇರೆ ಸ್ಥಳವಿರಲಿಲ್ಲ. ಆದರೂ ಜೆಮ್‌ಸೆಟ್‌ಜೀ ಹಲವು ಬಾರಿ ಹಡಗಿನಲ್ಲಿ ಪ್ರಯಾಣ ಮಾಡಿದರು. ತಾತಾ ಕಂಪೆನಿಯ ಶಾಖೆಗಳು ಪ್ಯಾರಿಸ್, ನ್ಯೂಯಾರ್ಕ್, ಷಾಂಘೈ, ಹಾಂಕಾಂಗ್ ಮತ್ತು ಟೋಕಿಯೊದಲ್ಲಿದ್ದವು. ಜೆಮ್‌ಸೆಟ್‌ಜಿ ಪರ್ವ ದೇಶಗಳ ಮಾರುಕಟ್ಟೆಗಳ ಸ್ಥಿತಿಯನ್ನು ಚೆನ್ನಾಗಿ ತಿಳಿದುಕೊಂಡರು. ಹಿಂತಿರುಗಿದಾಗ ಚೀನೀ ರಿಕ್ಷಾಗಳನ್ನು ತಂದರು. ಮುಂಬಯಿಯ ರಸ್ತೆಗಳಲ್ಲಿ ಚೀನೀ ರಿಕ್ಷಾಗಳ ಹರಿದಾಟವು ಒಂದು ಮೋಜಿನ ದೃಶ್ಯವಾಗಿತ್ತು.

ತಾತಾರವರು ಗಿರಾಕಿಗಳೊಡನೆ ಧೈರ್ಯವಾಗಿ ಮಾತನಾಡಿದರು.

ಏರಿಳಿತಗಳು

೧೮೭೧ರಲ್ಲಿ ಅಮೆರಿಕ ದೇಶದ ಉತ್ತರ ಭಾಗ ದಕ್ಷಿಣ ಪ್ರಾಂತಗಳ ನಡುವೆ ಯಾದವಿ ಕಲಹ ಪ್ರಾರಂಭವಾಯಿತು. ಅಮೆರಿಕದಿಂದ ಇಂಗ್ಲೆಂಡಿಗೆ ಸತತವಾಗಿ ಆಗುತ್ತಿದ್ದ ಹತ್ತಿಯ ಸರಬರಾಜು ನಿಂತುಹೋಯಿತು. ಈ ಸಂದರ್ಭದ ಲಾಭ ಪಡೆದು ಜೆಮ್‌ಸೆಟ್‌ಜಿ ಭಾರತದಿಂದ ಇಂಗ್ಲೆಂಡಿಗೆ ಹತ್ತಿಯನ್ನು ಸರಬರಾಜು ಮಾಡಿದರು. ಹತ್ತಿಯ ಬೆಲೆ ಏರಿ ವ್ಯಾಪಾರವು ಭರದಿಂದ ಸಾಗಿತು. ಲಾಭ ಅಧಿಕವಾಗಿ ಬಂತು. ಆದರೆ ಕಾಲವು ಒಂದೇ ರೀತಿ ಇರುವುದೆಲ್ಲಿ? ಯಾದವಿ ಕಲಹವು ಅಂತ್ಯಗೊಂಡಂತೆ ಹತ್ತಿಯ ಬೆಲೆ ಒಮ್ಮೆಗೇ ಇಳಿದುಹೋಯಿತು. ಅದೃಷ್ಟಲಕ್ಷ್ಮಿ ಮುನಿದಳು. ವ್ಯಾಪಾರವು ಕುಸಿದು ಜೆಮ್‌ಸೆಟ್‌ಜಿ ನಷ್ಟಕ್ಕೆ ಒಳಗಾದರು. ಅದು ಅವರ ಸತ್ತ್ವಪರೀಕ್ಷೆಯ ಕಾಲ. ನಷ್ಟವನ್ನು ಸಹಿಸಿ ಕಂಪೆನಿಯ ಹೆಸರನ್ನು ಉಳಿಸಲು ದೃಢ ನಿರ್ಧಾರ ಮತ್ತು ಚಾಕಚಕ್ಯತೆ ಅಗತ್ಯವಾಗಿದ್ದವು. ಅವರೇ ತಮ್ಮ ಕಂಪೆನಿಯ ವ್ಯವಹಾರಕ್ಕಾಗಿ ಇಂಗ್ಲೆಂಡಿಗೆ ಹೋದರು. ಅಲ್ಲಿ ಕಂಪೆನಿಯವರು ಹಣ ಕೊಡಬೇಕಾಗಿದ್ದ ಗಿರಾಕಿಗಳನ್ನು ಎದುರಿಸಬೇಕಾಯಿತು. ಅವರದು ಬರಿಗೈ. ಆದರೂ ಎಷ್ಟು ಧೈರ್ಯದಿಂದ, ಪ್ರಾಮಾಣಿಕತೆಯಿಂದ ಗಿರಾಕಿಗಳೊಡನೆ ಮಾತನಾಡಿದರೆಂದರೆ, ಎಲ್ಲ ವ್ಯವಹಾರವನ್ನೂ ಜೆಮ್‌ಸೆಟ್‌ಜಿಯವರಿಗೇ ಗಿರಾಕಿಗಳು ಒಪ್ಪಿಸಿದರು. ಭಾರತಕ್ಕೆ ಹಿಂತಿರುಗಿದಾಗ ತಂದೆಯ ವ್ಯಾಪಾರವೂ ಇಳಿಮುಖವಾಗಿತ್ತು. ತಂದೆ ಮತ್ತು ಮಗ ಆಸ್ತಿಗಳನ್ನು ಮಾರಿ ಸಾಲವನ್ನು ತೀರಿಸಬೇಕಾಯಿತು.

ಕೈಗಾರಿಕೆಗಳ ಜಗತ್ತು

ಅದೇ ಕಾಲಕ್ಕೆ ಇಂಗ್ಲೆಂಡ್ ಮತ್ತು ಅಬಿಸೀನಿಯಾ ನಡುವೆ ಯುದ್ಧ ಪ್ರಾರಂಭವಾಯಿತು. ಜೆಮ್‌ಸೆಟ್‌ಜಿ ಬ್ರಿಟಿಷ್ ಸೈನ್ಯಗಳಿಗೆ ಆಹಾರ ಸಾಮಗ್ರಿಗಳನ್ನು ಒದಗಿಸುವ ಒಪ್ಪಂದ ಮಾಡಿಕೊಂಡರು. ಅದರಿಂದ ಅವರಿಗೆ ಲಾಭ ಬಂತು. ಬಂದ ಹಣದಿಂದ ಮುಂಬಯಿಯ ಚಿಂಚ್ ಪಾಕ್ಲಿಯಲ್ಲಿ ನಷ್ಟಕ್ಕೆ ಗುರಿಯಾಗಿದ್ದ ಒಂದು ಎಣ್ಣೆಯ ಗಿರಣಿಯನ್ನು ಕೊಂಡರು. ಕೆಲವು ಸ್ನೇಹಿತರ ಪಾಲುಗಾರಿಕೆಯೊಂದಿಗೆ ಆ ಗಿರಣಿಯು ಹತ್ತಿಯ ಬಟ್ಟೆಗಳನ್ನು ನೇಯುವ ಕಾರ್ಖಾನೆಯಾಗಿ ಮಾರ್ಪಟ್ಟಿತು. ಇದನ್ನು ‘ಅಲೆಗ್ಸಾಂಡ್ರ ಮಿಲ್’ ಎಂದು ಕರೆದರು. ಇದು ಜೆಮ್‌ಸೆಟ್‌ಜಿಯವರ ಜೀವನದ ಪ್ರಾರಂಭ. ಅಲ್ಲಿಂದ ಮುಂದೆ ಅವರು ಮ್ಯಾಂಚೆಸ್ಟರ್‌ಗೆ ತೆರಳಿ ಹತ್ತಿ ಕೈಗಾರಿಕೆ ಬಗೆಗೆ ವಿಶೇಷವಾಗಿ ಅರಿತರು.

೧೮೭೩ರಲ್ಲಿ ಜೆಮ್‌ಸೆಟ್‌ಜಿ ಆಧುನಿಕ ಯಂತ್ರೋಪಕರಣಗಳನ್ನು ನೋಡಿಬರಲು ಇಂಗ್ಲೆಂಡಿಗೆ ಪ್ರಯಾಣ ಬೆಳೆಸಿದರು. ಇಂಗ್ಲೆಂಡಿನ ಲಂಕಾಷೈರ್ ಕಾರ್ಖಾನೆಗಳಲ್ಲಿ ಆಗ ನಡೆಯುತ್ತಿದ್ದುದೇನು? ಭಾರತದಿಂದ ಆಮದು ತಯಾರಾಗುತ್ತಿತ್ತು. ಸಿದ್ಧವಾದ ಬಟ್ಟೆ ಮತ್ತೆ ಭಾರತಕ್ಕೇ ರಫ್ತಾಗುತ್ತಿತ್ತು. ಕಚ್ಚಾ ಹತ್ತಿಯನ್ನು ಒದಗಿಸುವ ಭಾರತಕ್ಕೆ ಈ ಗತಿ! ಜೆಮ್‌ಸೆಟ್‌ಜಿ ಅಲ್ಲಿಂದ ಹಿಂತಿರುಗಿದ ಕೂಡಲೇ ಭಾರತದಲ್ಲಿ ಆಧುನಿಕ ಹತ್ತಿಬಟ್ಟೆಯ ಸ್ಥಾಪನೆಗೆ ಕೈಹಾಕಿದರು.

ಹತ್ತಿಬಟ್ಟೆಯ ಕೈಗಾರಿಕೆಗೆ ಮುಂಬಯಿಯೊಂದೇ ಸರಿಯಾದ ಸ್ಥಳ, ಬೇರೆ ಸ್ಥಳವೇ ಇಲ್ಲ ಎಂದು ಭಾವಿಸಿದ್ದ ಕಾಲ ಅದು. ಹಾಗೆ ಭಾವಿಸುವುದರಲ್ಲಿ ಅರ್ಥವಿದ್ದಿತು. ಉದ್ಯಮಕ್ಕೆ ಕಚ್ಚಾವಸ್ತವು ಸಮೀಪದಲ್ಲಿ ದೊರೆಯುವಂತಿರಬೇಕು. ಲಾಭ ತರುವಂತಹ ಮಾರುಕಟ್ಟೆಯೂ ಸಮೀಪದಲ್ಲಿರಬೇಕು. ಕಲ್ಲಿದ್ದಲು ಮತ್ತು ನೀರು ಸುಲಭವಾಗಿ ಸದಾ ಒದಗುವಂತಿರಬೇಕು. ಈ ಮೂರು ಮುಖ್ಯಾಂಶಗಳನ್ನು ಮನನ ಮಾಡಿಕೊಂಡು ಜಬಲ್‌ಪರದ ಬಳಿ ಸ್ಥಳವೊಂದನ್ನು ಆಯ್ಕೆ ಮಾಡಿದರು. ಆದರೆ ಆ ಸ್ಥಳದಲ್ಲಿ ಫಕೀರನೊಬ್ಬನು ಸಮಾಧಿಯನ್ನು ಸ್ಥಾಪಿಸಿ ಅನೇಕ ಯಾತ್ರಿಕರನ್ನು ಆಕರ್ಷಿಸಿದ್ದ. ಮತೀಯ ಗೊಂದಲಕ್ಕೆ ಅವಕಾಶವಾಗಬಹುದೆಂದು ಹೆದರಿದ ಸರ್ಕಾರ ಜೆಮ್‌ಸೆಟ್‌ಜಿಯವರಿಗೆ ಅನುಮತಿ ನೀಡಿಲ್ಲ. ಅವರು ತಮ್ಮ ಉದ್ಯಮಕ್ಕಾಗಿ ಮುಂದೆ ನಾಗಪರದ ಬಳಿ ಸ್ಥಳ ಹುಡುಕಿದರು. ಮುಂಬಯಿಗೆ ಐನೂರು ಮೈಲಿ ದೂರದಲ್ಲಿದ್ದ ಸ್ಥಳ ಅದು. ಅಲ್ಲಿ ಹತ್ತಿಯ ಬೆಳೆ ಸಮೃಧ್ಧವಾಗಿತ್ತು. ಸಮೀಪದಲ್ಲಿಯೆ ಎಕರೆಗಳಷ್ಟು ಭೂಮಿಯನ್ನು ಅಗ್ಗವಾಗಿ ಕೊಂಡು ಪ್ರದೇಶವನ್ನು ಮಟ್ಟ ಮಾಡುವ ದೊಡ್ಡ ಕಾರ್ಯವನ್ನು ಕೈಗೊಂಡರು. ಸ್ಥಳೀಯ ಶ್ರೀಮಂತನೊಬ್ಬನನ್ನು ಸಹಾಯಕ್ಕಾಗಿ ಬೇಡಿದರು. ಅವನು ಅವರ ಯೋಜನೆ ಕಾರ್ಯಸಾಧ್ಯವಲ್ಲ ಎಂದು ಹೆದರಿ ಹಣ ನೀಡಲಿಲ್ಲ. ಜೆಮ್‌ಸೆಟ್‌ಜಿಯವರ ಯೋಜನೆ ಸಫಲಗೊಂಡಾಗ ಅದೇ ಶ್ರೀಮಂತನು “ತಾತಾರವರು ಮಣ್ಣಿಗೆ ಬಂಗಾರ ಹಾಕಲಿಲ್ಲ. ಭೂಮಿಯಲ್ಲಿ ಮಣ್ಣು ಹಾಕಿ ಬಂಗಾರವನ್ನು ತೆಗೆದರು” ಎಂದು ಒಪ್ಪಿಕೊಂಡ. ಕಾರ್ಖಾನೆಯನ್ನು ಸ್ಥಾಪಿಸುವ ಕಾರ್ಯವು ನಿರಂತರವಾಗಿ ಸಾಗಿತು. ಜೆಮ್‌ಸೆಟ್‌ಜಿ ಪಾಲುದಾರರ ಲಾಭವು ಕಡಿಮೆಯಾಗಬಾರದೆಂದು ತಮ್ಮ ವೇತನದ ಹಣದಲ್ಲಿ ಮೂರನೆ ಒಂದು ಭಾಗವನ್ನು ಮಾತ್ರ ಪಡೆಯುತ್ತಿದ್ದರು. ಅವಿಶ್ರಾಂತವಾಗಿ ದುಡಿದು ಯಂತ್ರಗಳ ಜೋಡಣೆ ಕಾರ್ಯವನ್ನು ನೋಡಿಕೊಂಡರು. ಮುಂಬಯಿ ಮತ್ತು ಅಹಮದಾಬಾದ್‌ನಿಂದ ದೂರವಾಗಿ ಪ್ರಾರಂಭವಾಗಲಿದ್ದ ದೇಶದ ಪ್ರಥಮ ಬಟ್ಟೆ ಕಾರ್ಖಾನೆ ಅದು.

೧೮೭೭ ನೆಯ ಜನವರಿ ಒಂದನೆಯ ದಿನ, ಹೊಸ ವರ್ಷದ ದಿನ, ನಾಗಪುರದ ಚರಿತ್ರೆಯಲ್ಲಿ ಹೊಸ ಯುಗವನ್ನೆ ಪ್ರಾರಂಭಿಸಿತು. ಅಂದು ಜೆಮ್‌ಸೆಟ್‌ಜಿಯವರ ಹತ್ತಿ ಬಟ್ಟೆ ಕಾರ್ಖಾನೆಯ ಆರಂಭ. ಅದೇ ದಿನ ವಿಕ್ಟೋರಿಯ ಮಹಾರಾಣಿಯು ಇಂಡಿಯ ದೇಶದ ಚಕ್ರವರ್ತಿನಿಯೆಂದು ಘೋಷಣೆಯಾಗಿದ್ದರಿಂದ ಕಾರ್ಖಾನೆಗೆ ‘ಎಂಪ್ರೆಸ್ ಮಿಲ್’ ಎಂದು ಹೆಸರಾಯಿತು. ಮುಂದೆ ಜೆಮ್‌ಸೆಟ್‌ಜಿಯವರಿಗೆ ತೊಂದರೆ ತಪ್ಪಲಿಲ್ಲ. ಇಂಗ್ಲೆಂಡಿನಿಂದ ಕಾರ್ಖಾನೆಗೆ ತಂದಿದ್ದ ಯಂತ್ರಗಳು ಅಗ್ಗದ ಯಂತ್ರಗಳಾಗಿದ್ದುದರಿಂದ ನೂಲು ಮತ್ತು ಬಟ್ಟೆಗಳ ಗುಣಮಟ್ಟ ತೃಪ್ತಿಕರವಾಗಿರಲಿಲ್ಲ. ಮರು ವರ್ಷ ಜೆಮ್‌ಸೆಟ್‌ಜಿ ಮತ್ತೆ ಯುರೋಪ್‌ಗೆ ಪ್ರಯಾಣ ಮಾಡಿದರು. ಪ್ಯಾರಿಸ್ ಪ್ರದರ್ಶನವನ್ನು ಕೆಲವು ದಿನ ವೀಕ್ಷಿಸಿ ತಮ್ಮ ಕಾರ್ಖಾನೆಗೆ ಹೊಸ ಯಂತ್ರಗಳನ್ನು ಕೊಳ್ಳಲು ಇಂಗ್ಲೆಂಡಿಗೆ ಹೋದರು. ಹೊಸ ಯಂತ್ರಗಳಿಂದ ಸಜ್ಜಾದ ಮಿಲ್ ಲಾಭ ನೀಡಿತು.

ಕೆಲಸಗಾರರಿಗಾಗಿ

ಜೆಮ್‌ಸೆಟ್‌ಜಿ ಎಲ್ಲಾ ಲಾಭವನ್ನೂ ತಮಗಾಗಿ ಇರಿಸಿಕೊಳ್ಳಲಿಲ್ಲ. ಕಾರ್ಮಿಕರ ಸ್ಥಿತಿಗತಿಗಳನ್ನು ಉತ್ತಮ ಪಡಿಸಲು ಹಣವನ್ನು ವಿನಿಯೋಗಿಸಿದರು. ಕೆಲಸ ಮಾಡುವಾಗ ಕೆಲಸಗಾರರಿಗೆ ತಕ್ಕಷ್ಟು ಗಾಳಿ, ಬೆಳಕು ಇರಬೇಕು ಎಂದು ಎಚ್ಚರಿಕೆ ವಹಿಸಿದ ಮೊದಲನೆಯ ಭಾರತೀಯ ಕಾರ್ಖಾನೆ ‘ಎಂಪ್ರೆಸ್ ಮಿಲ್’. ನಿವೃತ್ತರಾದವರಿಗೆ ವಿಶ್ರಾಂತಿವೇತನ ಮತ್ತು ಗ್ರಾಚ್ಯುಟಿ(ಒಟ್ಟಿಗೆ ಒಂದಿಷ್ಟು ಹಣ ಕೊಡುವುದು) ಸೌಲಭ್ಯಗಳನ್ನು ಕಲ್ಪಿಸಿದರು. ಪ್ರಥಮ ಬಾರಿಗೆ ದೇಶದಲ್ಲಿ ಪ್ರಾವಿಡೆಂಟ್ ಫಂಡ್ ಪದ್ಧತಿಯನ್ನು (ಎಂದರೆ ಪ್ರತಿ ಕೆಲಸಗಾರನ ಸಹಾಯಕ್ಕೆ ಹಣ)ತಮ್ಮ ಉದ್ಯಮದಲ್ಲಿ ಜಾರಿಗೆ ತಂದರು. ಪ್ರತಿವರ್ಷ ಎಲ್ಲರಿಗೂ ಒಂದು ತಿಂಗಳ ಬೋನಸ್(ಎಂದರೆ ಹೆಚ್ಚಾಗಿ ಕೊಡುವ ಹಣ) ದೊರೆಯುವಂತಾಯಿತು. ಶ್ರದ್ಧಾವಂತ ದುಡಿಮೆಗಾರರಿಗೆ ಬಹುಮಾನಗಳು. ಕಾರ್ಖಾನೆಯ ಅಪಘಾತಗಳಲ್ಲಿ ನೊಂದವರಿಗೆ ಪರಿಹಾರದ ಹಣ ನೀಡುವಂತಾದುದಲ್ಲದೆ, ಕೆಲಸಗಾರರಿಗೆ ಆಸ್ಪತ್ರೆ, ವಾಚನಾಲಯ, ಪುಸ್ತಕಭಂಡಾರ ಮತ್ತು ಪಾಠಶಾಲೆಗಳ ಏರ್ಪಾಡುಗಳಾದವು.

ದೂರದೃಷ್ಟಿ

ಜೆಮ್‌ಸೆಟ್‌ಜಿಯವರು ಅವಿಶ್ರಾಂತವಾಗಿ ದುಡಿಯುತ್ತಿದ್ದರೂ ಹೊಸ ವಿಧಾನಗಳ ಬಗ್ಗೆ ಸದಾ ಯೋಚನೆ ನಡೆಸಿದ್ದರು. ಭಾರತದ ಸಾಮಾನ್ಯ ದರ್ಜೆಯ ಹತ್ತಿಯಿಂದ ಉತ್ತಮ ನೂಲನ್ನು ಉತ್ಪಾದಿಸುವ ಕ್ರಮಕ್ಕೆ ಕೈಹಚ್ಚಿದರು. ಹಳೆಯ ಮಾದರಿ ಯಂತ್ರಸಾಮಗ್ರಿಗಳಿಂದ ತಯಾರಿಸುವುದಕ್ಕಿಂತಲೂ ಎರಡರಷ್ಟು ನೂಲನ್ನು ದುಂಡು ಕದರುಗಳಿಂದ ತಯಾರಿಸುವುದು ಸಾಧ್ಯವೆಂಬುದನ್ನು ಅವರು ಅರಿತರು. ಅದರಿಂದಾಗಿ ಮ್ಯಾಂಚೆಸ್ಟರ್‌ಗೂ ಮತ್ತು ಮುಂಬಯಿಗೂ ಪರಸ್ಪರ ಪೈಪೋಟಿ ನಡೆಯುವುದು ಅಸಾಧ್ಯವಲ್ಲವೆನಿಸಿತು. ಭಾರತದಲ್ಲಿ ಪ್ರಥಮವಾಗಿ ದುಂಡು ಕದರುಗಳನ್ನು ಅಳವಡಿಸಿದ ಕೀರ್ತಿ ಅವರದು.

ದೇಶ ಮೊದಲು

ರಾಜಕೀಯ ಸಭೆಗಳಿಂದ ದೂರವಾಗಿದ್ದರೂ ಜೆಮ್‌ಸೆಟ್‌ಜಿಯವರು ದೇಶಾಭಿಮಾನಿಗಳಾಗಿದ್ದರು. ರಾಜಕೀಯದಲ್ಲಿ ಅವರು ಆಸಕ್ತಿ ವಹಿಸಿದುದು ದೇಶಪ್ರೇಮದಿಂದ. ಅದರಲ್ಲಿ ಸ್ವಾರ್ಥವಿರಲಿಲ್ಲ. ದೇಶವು ಎಂದಿಗೂ ಅವರಿಗೆ ಪ್ರಥಮ, ಅನಂತರ ಅವರು ಮತ್ತು ಅವರ ವ್ಯವಹಾರಗಳು. ಅವರು ಕೈಹಚ್ಚಿದ ಎಲ್ಲಾ ಮಹೋದ್ಯಮಗಳಲ್ಲೂ ಅದು ಎದ್ದು ಕಾಣುವ ಹಿರಿಯ ಗುಣ. ಭಾರತ ರಾಷ್ಟ್ರೀಯ ಕಾಂಗ್ರೆಸ್‌ಗೆ ಪರ್ಣ ಬೆಂಬಲಿಗರಾಗಿದ್ದು ತಮ್ಮ ಕಡೆಯ ದಿನದವರೆಗೆ ಅದರ ಸದಸ್ಯರಾಗಿದ್ದರು.

ಜೆಮ್‌ಸೆಟ್‌ಜಿ ತಮ್ಮ ವ್ಯವಹಾರವನ್ನು ಪಾಂಡಿಚೇರಿಗೂ ವಿಸ್ತರಿಸಲು ಯೋಚಿಸಿದರು. ಅಲ್ಲಿನ ಕಾರ್ಖಾನೆಗಳಲ್ಲಿ ‘ಗಿನಿ’ ಎಂಬ ಆಕರ್ಷಕ ನೀಲವರ್ಣದ ಬಟ್ಟೆಯು ತಯಾರಾಗಿ ನ್ಯೂಗಿನಿ ಮೊದಲಾದ ಫ್ರೆಂಚ್ ವಸಾಹತುಗಳಿಗೆ ರಫ್ತಾಗುತ್ತಿತ್ತು. ಫ್ರೆಂಚ್ ಸರ್ಕಾರವು ಆ ವಿಶೇಷ ರೀತಿಯ ಬಣ್ಣದ ಉದ್ಯಮವನ್ನು ಫ್ರಾನ್ಸಿಗೆ ಒಯ್ಯಲು ಪ್ರಯತ್ನಿಸಿತು. ಜೆಮ್‌ಸೆಟ್‌ಜಿ ಆ ಬಟ್ಟೆಯ ಮಾದರಿಗಳನ್ನು ತರಿಸಿ ತಮ್ಮ ಎಂಪ್ರೆಸ್ ಮಿಲ್‌ನಲ್ಲಿ ತಯಾರಿಸಿ ನೋಡಿದರು. ಪ್ರಯತ್ನವು ಸಫಲವಾಗಿ ಬಟ್ಟೆಗೆ ಫ್ರೆಂಚ್ ಮಾರುಕಟ್ಟೆ ಸಿಕ್ಕಿತು.

‘ಸ್ವದೇಶಿ’ ಚಳವಳಿಯ ಕಾಲ ಅದು. ‘ಸ್ವದೇಶಿ ವಸ್ತುಗಳನ್ನೇ ಕೊಳ್ಳಿರಿ’ ಎಂಬುದು ದೇಶಪ್ರೇಮಿಗಳ ಘೋಷಣೆ. ಭಾರತ ತಯಾರಿಸುತ್ತಿದ್ದುದು ಒರಟು ಬಟ್ಟೆ. ಭಾರತಕ್ಕೆ ನಯವಾದ ಬಟ್ಟೆಗಳನ್ನು ಕಳುಹಿಸುತ್ತಿದ್ದ ಬ್ರಿಟಿಷರೊಂದಿಗೆ ಪೈಪೋಟಿ ನಡೆಸುವ ಹಂಬಲ ಜೆಮ್‌ಸೆಟ್‌ಜಿ ತಾತಾರವರಿಗೆ, ಮುಂಬಯಿಯ ಚಿಂಚ್‌ಪಾಕ್ಷಿಯಲ್ಲಿ ಸ್ಥಳ ಹುಡುಕಿ ‘ಸ್ವದೇಶಿ ಮಿಲ್’ ಸ್ಥಾಪನೆಗೆ ಸಿದ್ಧತೆ ನಡೆಸಿದರು. ಕೆಲಸ ಸಾಗುತ್ತಿದ್ದಂತೆ ಮುಂಬಯಿಗೆ ಒಂಬತ್ತು ಮೈಲಿ ದೂರದ ಕುರ್ಲಾದಲ್ಲಿ ‘ಧರಂಶಿ ಮಿಲ್’ ಮಾರಾಟಕ್ಕೆ ಬಂದಿತು. ೧೩೦೦ ಮಗ್ಗಗಳು ಮತ್ತು ಒಂದು ಲಕ್ಷ ಕದರುಗಳು ಇದ್ದ ಆ ಕಾರ್ಖಾನೆ ನಾಲ್ಕು ಸಾರಿ ನಷ್ಟಕ್ಕೆ ಒಳಗಾಗಿ ತತ್ತರಿಸುತ್ತಾ ನಿಂತಿತ್ತು. ತಾತಾರವರು ಧರಂಶಿ ಕಾರ್ಖಾನೆಯನ್ನು ಅದರ ಮೂಲ ಬೆಲೆಯ ಆರನೆಯ ಒಂದು ಭಾಗಕ್ಕೆ ಅಗ್ಗವಾಗಿ ಕೊಂಡು ಅದಕ್ಕೆ ‘ಸ್ವದೇಶಿ ಮಿಲ್’ ಎಂದು ಹೆಸರು ಕೊಟ್ಟರು. ತಾತಾ ಅಂಡ್ ಸನ್ಸ್ ಕಂಪೆನಿಯು ಕಾರ್ಖಾನೆಯ ‘ಏಜೆಂಟ್’ ಆಯಿತು. ಕುರ್ಲಾದಲ್ಲಿ ತಯಾರಾದ ಬಟ್ಟೆಗಳಿಗೆ ಪಾಂಡಿಚೇರಿಯಲ್ಲಿ ಬಣ್ಣ ಹಾಕಿಸಿ ಚೀನಾ ಮತ್ತು ಉತ್ತರ ಆಫ್ರಿಕಾ ತೀರಗಳಿಗೆ ರವಾನಿಸಿದರು. ಕರ್ಮವೀರ ತಾತಾರಿಗೆ ತೊಂದರೆ ತಪ್ಪಲಿಲ್ಲ. ಕಾರ್ಖಾನೆಯ ಯಂತ್ರಗಳು ಬಹಳ ಹಳೆಯವಾಗಿ, ಕೆಟ್ಟು ಹೋಗಿದ್ದುದರಿಂದ ತಯಾರಾದ ಬಟ್ಟೆಗಳ ಗುಣಮಟ್ಟ ಸಮರ್ಪಕವಾಗಿರಲಿಲ್ಲ. ವಿದೇಶಿ ಮಾರುಕಟ್ಟೆ ಗೆಲ್ಲಲು ಸಾಧ್ಯವಾಗದೆ ನಷ್ಟ ಸಂಭವಿಸಿತು. ಕಂಪೆನಿಯ ಷೇರುಗಳು ಮೂಲ ಬೆಲೆಯ ಕಾಲುಭಾಗಕ್ಕೆ ಇಳಿದುಹೋದವು. ಪಾಲುದಾರರಿಗೆ ಲಾಭ ದೊರೆಯಲಿಲ್ಲ. ಕಂಪೆನಿ ಮುಚ್ಚಿ ಹೋಗುವ ಭೀತಿ ಕಾಣಿಸಿತು. ತಾತಾರರ ಆರೋಗ್ಯವು ಕೆಟ್ಟು ಚಿಕಿತ್ಸೆಗಾಗಿ ಇಂಗ್ಲೆಂಡ್ ಸೇರಿದರು. ಹಿಂತಿರುಗಿದ ಮೇಲೆ ಸ್ವದೇಶಿ ಮಿಲ್‌ನ ನಷ್ಟವನ್ನು ಸರಿಪಡಿಸಿ ತಾತಾ ಅಂಡ್ ಸನ್ಸ್ ಕಂಪೆನಿಯ ಕೀರ್ತಿ ರಕ್ಷಣೆಗಾಗಿ ನಿಂತರು. ಅದಕ್ಕಾಗಿ ತಮ್ಮ ಸ್ವಂತ ಆಸ್ತಿಗಳನ್ನು ಬಳಸಬೇಕಾಯಿತು.

ಹೊಸ ಯಂತ್ರಗಳು ಜೋಡಿಸಲ್ಪಟ್ಟವು. ದುಂಡು ಕದರುಗಳು ಅಳವಡಿಸಲ್ಪಟ್ಟು ಆಧುನಿಕ ವಾತಾವರಣ ಮೂಡಿತು. ಕಾರ್ಖಾನೆಯು ಸುಗುಮವಾಗಿ ನಡೆಯುವಂತಾದ ಮೇಲೆ ಕೆಲಸಗಾರರ ಹಿತಗಳಿಗೆ ಆದ್ಯತೆ ನೀಡಿದರು. ಪದವೀಧರರಿಗೆ  ತರಬೇತು ನೀಡಲು ಏರ್ಪಾಡು ಮಾಡಿದರು.

ವಿದ್ಯಾರ್ಥಿಗಳಿಗಾಗಿ

ತಾತಾರವರ ಕಾರ್ಯಕಲಾಪಗಳು ಹತ್ತಿಯಿಂದ ನೂಲು ತಯಾರಿಸುವುದು. ಬಟ್ಟೆ ನೇಯುವುದು ಮತ್ತು ಅವನ್ನು ಮಾರಾಟ ಮಾಡುವುದು ಇವುಗಳಲ್ಲೇ ಕೊನೆಗೊಳ್ಳಲಿಲ್ಲ. ಅವರ ಸೇವೆ, ಸಾಹಸಗಳು ಬಹುಮುಖವಾದವು. ತಾತಾ ವ್ಯಾಪಾರಿಗಳಾದರೂ ವಿದ್ಯಾವಂತರು. ವಿದ್ಯೆಯ ಮಹತ್ತ್ವ ಅವರಿಗೆ ಚೆನ್ನಾಗಿ ಗೊತ್ತಿತ್ತು. ಉನ್ನತ ವಿದ್ಯಾಭ್ಯಾಸದಲ್ಲಿ ಆಸಕ್ತಿಯುಳ್ಳವರು ಹಣವಿಲ್ಲದೆ ಹೋದರೆ ಅದನ್ನು ಮುಂದುವರಿಸದೆ ನಿಲ್ಲಿಸಿಬಿಡುತ್ತಾರೆ. ಅದರಿಂದಾಗಿ ಮೇಧಾವಿಗಳ ಪ್ರತಿಭೆಯು ವಿಕಾಸಗೊಳ್ಳಲು ಮಾರ್ಗವೇ ಇರುವುದಿಲ್ಲ. ಭಾರತದ ವಿಶ್ವವಿದ್ಯಾನಿಲಯಗಳಲ್ಲಿ ಉತ್ತಮ ದರ್ಜೆಯಲ್ಲಿ ಉತ್ತೀರ್ಣರಾದವರು ಯುರೋಪಿಗೆ ಹೋಗಿ ಇಂಡಿಯನ್ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ನಿಪುಣರಾಗುತ್ತಿದ್ದ ಮತ್ತು ದೊಡ್ಡ ಹುದ್ದೆಗಳನ್ನು ಹಿಡಿಯುತ್ತಿದ್ದ ಕಾಲ ಅದು. ಮೇಧಾವಿಗಳು ಬಡವರಾದ ಪಕ್ಷಕ್ಕೆ ಅಂತಹ ಅವಕಾಶ ಸಾಧ್ಯವಿರಲ್ಲಿಲ್ಲ. ಅಂತಹವರ ನೆರವಿಗಾಗಿ ೧೮೯೨ರಲ್ಲಿ ತಾತಾ ಒಂದು ನಿಧಿಯನ್ನು  ಏರ್ಪಡಿಸಿದರು. ತಾತಾರವರ ನಿಧಿ ಸೌಲಭ್ಯದಿಂದ ಕೈಗಾರಿಕೆ. ಶಿಲ್ಪ ವ್ಯವಸಾಯ, ವೈದ್ಯ, ವಾಣಿಜ್ಯ ಮೊದಲಾದ ವಿಷಯಗಳಲ್ಲಿ ಭಾರತೀಯರು ವಿದೇಶಗಳಲ್ಲಿ ತೇರ್ಗಡೆ ಹೊಂದಿ ಬಂದರು.

ತಾತಾ ವಿಜ್ಞಾನ ಮಂದಿರ ಹಾಗೂ ತಾತಾ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗಳ ಕನಸು ಕಂಡು ನನಸು ಮಾಡಲು ಕಾರಣರಾದರು ಜೆ.ಎನ್. ತಾತಾ

ಭಾರತದಲ್ಲಿ ರೇಷ್ಮೆ ಕೈಗಾರಿಕೆ ಸ್ಥಾಪಿಸಬೇಕೆಂಬ ಇಚ್ಛೆಯಿಂದ ೧೮೯೩ರಲ್ಲಿ ತಾತಾ ಜಪಾನಿಗೆ ಭೇಟಿ ಕೊಟ್ಟರು. ಜಪಾನಿನ ಹವಾಗುಣಕ್ಕೆ ಹೋಲುವ ಸ್ಥಳವನ್ನು ಮೈಸೂರಿನಲ್ಲಿ ಹುಡುಕಿದರು. ಟಿಪ್ಪು ಸುಲ್ತಾನನ ಕಾಲದಲ್ಲಿಯೇ ಈ ಕೈಗಾರಿಕೆಯು ಅಭಿವೃದ್ಧಿಯಲ್ಲಿತ್ತೆಂಬ ಸಂಗತಿಯು ಅವರಿಗೆ ಉತ್ತೇಜನ ಕೊಟ್ಟಿತು. ಮೈಸೂರಿನ ದಿವಾನರಾಗಿದ್ದ ಶೇಷಾದ್ರಿ ಅಯ್ಯರ್‌ರೊಂದಿಗೆ ಮಾತನಾಡಿದ ಮೇಲೆ ಸ್ಥಳದ ಆಯ್ಕೆ ಆಯಿತು. ರೇಷ್ಮೆ ವ್ಯವಸಾಯದ ಅಧ್ಯಯನಕ್ಕಾಗಿ ಒಂದು ಫಾರಮ್ ರಚಿತವಾಗಿ ಮೂರು ತಿಂಗಳ ಅವಧಿಯ ಉದ್ಯೋಗಾರ್ಥಿ ಶಿಕ್ಷಣಕ್ಕೆ ಏರ್ಪಾಡಾಯಿತು.

ಹಡಗು ಬಾಡಿಗೆಯ ಯುದ್ಧ

ಭಾರತವು ಕೈಗಾರಿಕಾ ರಾಷ್ಟ್ರವಾಗಿಲ್ಲವೆಂಬುದು ತಾತಾರವರ ಚಿಂತೆಯಾಗಿತ್ತು. ದೇಶದಲ್ಲಿ ಕಬ್ಬಿಣ, ಕಲ್ಲಿದ್ದಲು, ಹವಾಗುಣ, ಮಾನವಶಕ್ತಿ ಎಲ್ಲವೂ ಇವೆ. ಆದರೆ ಸಾಕಷ್ಟು ಕಾರ್ಖಾನೆಗಳಿಲ್ಲ. ಭಾರತೀಯ ವಸ್ತುಗಳನ್ನು ಹೊರದೇಶಗಳಿಗೆ ಸಾಗಿಸುವುದೂ ದೊಡ್ಡ ಸಮಸ್ಯೆ ಆಗಿತ್ತು. ಹಡಗಿನ ಕಂಪೆನಿಗಳೆಲ್ಲವೂ ವಿದೇಶೀಯರ ಹತೋಟಿಯಲ್ಲಿದ್ದವು. ಭಾರತದ ಸರಕುಗಳನ್ನು ಸಾಗಿಸಲು ಅವು ಹೆಚ್ಚಿನ ದರಗಳನ್ನು ಹೇರುತ್ತಿದ್ದವು. ತಾತಾರವರು ಜಪಾನಿಗೆ ತೆರಳಿ ಅಲ್ಲಿನ ಹಡಗು ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಂಡು ಭಾರತದ ವಸ್ತುಗಳ ಸಾಗಾಣಿಕೆಗಾಗಿ ಒಂದು ಸಂಸ್ಥೆಯನ್ನು ಸ್ಥಾಪಿಸಿದರು. ವಿದೇಶದ ‘ಪಿ ಅಂಡ್ ಒ ಕಂಪೆನಿ’ ಗೂ ತಾತಾರವರ ಹೊಸ ಹಡಗು ಕಂಪೆನಿಗೂ ಪೈಪೋಟಿ ಆರಂಭವಾಯಿತು. ವಿದೇಶಿ ಕಂಪೆನಿಯು ಸಾಗಾಣಿಕೆಯ ದರವನ್ನು ಅಧಿಕವಾಗಿ ಇಳಿಸಿತು. ಕೆಲವು ತಿಂಗಳ ಕಾಲ ನಡೆದ ‘ಹಡಗು ಬಾಡಿಗೆ ಯುದ್ಧ’ ದ ಪರಿಣಾಮವಾಗಿ ತಾತಾರವರ ಜಪಾನಿ ಕಂಪೆನಿಯು ನಷ್ಟಕ್ಕೆ ಒಳಗಾಯಿತು. ಅವರು ವಿಶೇಷವಾಗಿ ಹಣ ನೀಡಿ ಕಂಪೆನಿಯನ್ನು ಉಳಿಸಬೇಕಾಯಿತು. ತಾತಾರವರ ಸಾಹಸದಿಂದ ಭಾರತಕ್ಕೆ ಪ್ರಯೋಜನವಾಗದಿದ್ದರೂ ಅದರಿಂದ ಜಪಾನಿಗೆ ಪರೋಕ್ಷವಾದ ಅನುಕೂಲತೆಗಳು ದೊರೆತವು. ಪೈಪೋಟಿ ನಡೆಸಿದ ‘ಪಿ ಅಂಡ್ ಒ ಕಂಪೆನಿ’ ಯು ತಾತಾರವರ ಬಗೆಗೆ ಗೌರವವನ್ನು ಉಳಿಸಿಕೊಂಡು ಬಂದಿತು.

ಭಾರತೀಯರಿಗಾಗಿ

ಯುರೋಪಿಯನ್ ಬಹಜುಗಳವರು ಮುಂಬಯಿ ತೀರ ಪ್ರದೇಶಗಳಲ್ಲಿ ತಮಗೆ ಸೇರಿದ ಕಟ್ಟಡಗಳಿಗೆ ಅತ್ಯಂತ ಅಧಿಕವಾಗಿ ಬಾಡಿಗೆ ವಸೂಲು ಮಾಡುತ್ತಿದ್ದುದನ್ನು ಕಂಡು ಅವರಿಗೆ ನೋವಾಯಿತು. ತಮ್ಮ ದೇಶದ ಜನರಿಗೆ ವಸತಿ ಸೌಕರ್ಯಗಳನ್ನು ಕಲ್ಪಿಸಬೇಕೆಂಬ ಉದ್ದೇಶ ಬಂತು. ಅಲ್ಲಿಂದಾಚೆಗೆ ಕಟ್ಟಡಗಳನ್ನು ಕಟ್ಟಿಸುವುದು ಒಂದು. ಹವ್ಯಾಸವಾಯಿತು. ಎಲ್ಲಾ ವರ್ಗದ ಜನರಿಗೆ ಅನುಕೂಲವಾಗುವಂತೆ ಸಣ್ಣ ಮನೆಗಳನ್ನೂ ಯುರೋಪಿಯನ್ನರಿಗಾಗಿ ಬಂಗಲೆಗಳನ್ನೂ ಕಟ್ಟಿಸಿದರು.

ವಿದೇಶಗಳಲ್ಲಿ ಪ್ರವಾಸಿಗಳಿಗೆ ದೊರೆಯುವಷ್ಟು ವಸತಿ ಸೌಲಭ್ಯಗಳನ್ನು ನಮ್ಮಲ್ಲಿಯೂ ದೊರಕಿಸಬೇಕೆಂಬುದು ತಾತಾರವರ ಉದಾರವಾದ ಮತ್ತು ಪ್ರಮುಖ ವ್ಯಾಪಾರಿ ಕೇಂದ್ರ ನಗರವಾದ ಮುಂಬಯಿಗೆ ಅದರ ಘನತೆಗೆ ತಕ್ಕ ಆಧುನಿಕ ಹೋಟೆಲು ಇರಲಿಲ್ಲ. ಇದಕ್ಕಾಗಿ ಅವರು ೧೮೯೮ರಲ್ಲಿ ಸಮುದ್ರತೀರದಲ್ಲಿ ವಿಶಾಲ ಸ್ಥಳವೊಂದನ್ನು ೯೯ ವರ್ಷಗಳ ಬಾಡಿಗೆ ಒಪ್ಪಂದದ ಮೇಲೆ ಪಡೆದು ಆಧುನಿಕ ಕಟ್ಟಡದ ಆಸ್ತಿಭಾರ ಹಾಕಿದರು. ಆದರೆ ಮೂರು ಎಕರೆ ವಿಸ್ತೀರ್ಣದಲ್ಲಿ ೨೫ ಲಕ್ಷ ರೂಪಾಯಿ ವೆಚ್ಚದೊಡನೆ ನಾಲ್ಕು ನೂರು ಕೋಣೆಗಳನ್ನೊಳಗೊಂಡು ನಿಂತ ಆ ಬೃಹತ್ ಕಟ್ಟಡವು ಪೂರೈಸಿದ್ದು ಅವರು ಕಾಲವಾದ ನಂತರ, ಅದೇ ಇಂದಿನ ಸುಪ್ರಸಿದ್ದ ತಾಜಮಹಲ್ ಹೋಟೆಲ್.

ತಾತಾ ವಿಜ್ಞಾನ ಮಂದಿರ

ದೊಡ್ಡವರ ಯೋಜನೆಗಳು ಎಂದಿಗೂ ದೊಡ್ಡವು ಎಂಬುದಕ್ಕೆ ತಾತಾರವರು ಸೊಗಸಾದ ನಿದರ್ಶನ. ಅವರಿಗೆ ಬುದ್ಧಿಚಾತುರ್ಯ ಮತ್ತು ಉದಾರ ಮನೋಭಾವದೊಂದಿಗೆ ಮಹಾ ದೇಶಾಭಿಮಾನ, ಭಿವಿಷ್ಯದ ವರ್ಷಗಳಲ್ಲಿ ವಿಜ್ಞಾನ ಎಷ್ಟು ಮುಖ್ಯವಾಗುತ್ತದೆ ಎಂಬುದನ್ನು ಆಗಲೇ ಮನಗಂಡಿದ್ದರು ತಾತಾ. ರಾಷ್ಟ್ರದ ಭಾಗ್ಯ ವಿಜ್ಞಾನ- ಕೈಗಾರಿಕೆಗಳ ಅಡಿಪಾಯದ ಮೇಲೆ ನಿಲ್ಲುತ್ತದೆ. ಇಲ್ಲಿ ವಿಜ್ಞಾನ ಬೆಳೆಯುವುದಕ್ಕೆ- ಪ್ರತಿಭೆ ಇರುವ ವಿಜ್ಞಾನಿಗಳು ಕೆಲಸ ಮಾಡುವುದಕ್ಕೆ ಒಂದು ಸಂಶೋಧನಾ ಕೇಂದ್ರ ಇರಬೇಕು ಎಂಬುದನ್ನು ಅರ್ಥಮಾಡಿಕೊಂಡಿದ್ದರು. ವೈಜ್ಞಾನಿಕ ಪರಿಶೋಧನೆಗಳಿಗೆ ಪಾಶ್ಚಾತ್ಯ ದೇಶದ ವಿದ್ಯಾರ್ಥಿಗಳಿಗಿರುವ ಸೌಕರ್ಯವನ್ನು ನಮ್ಮ ದೇಶದ ವಿದ್ಯಾರ್ಥಿಗಳಿಗೂ ಕಲ್ಪಿಸುವುದಕ್ಕಾಗಿ ದೊಡ್ಡಯೋಚನೆ ಹೊಳೆಯಿತು. ಅಂತಹ ಕಾರ್ಯ ಸಾಧಿಸಲು ಪೂರ್ಣ ಜ್ಞಾನ, ಅಪಾರ ತಾಳ್ಮೆ ಮತ್ತು ಅಧಿಕ ಮೇಧಾವಿ ಶಕ್ತಿ ಅಗತ್ಯ. ಪಶ್ಚಿಮ ದೇಶಗಳಲ್ಲಿ ಸಂಚರಿಸಿ ಅಲ್ಲಿನ ಪ್ರತಿಭಾವಂತರೊಡನೆ ವಿಷಯಗಳನ್ನು ವಿಚಾರಮಾಡಿ ತಿಳಿದುಕೊಂಡು ಬರಲು ವಿದ್ಯಾವಂತರೂ, ದಕ್ಷರೂ ಆದ ಬಿ.ಜೆ.ಪಾದ್‌ಷಾ ಎಂಬುವರನ್ನು ವಿದೇಶಕ್ಕೆ ಕಳುಹಿಸಿದರು. ಅವರು ಯುರೋಪ್ ಮತ್ತು ಅಮೆರಿಕಗಳಲ್ಲಿ ಸಂಚರಿಸಿ ಅನೇಕ ವಿಷಯಗಳನ್ನು ಸಂಗ್ರಹಿಸಿಕೊಂಡು ಭಾರತಕ್ಕೆ ಹಿಂತಿರುಗಿದರು.

ತಾತಾರವರ ಶಾಸ್ತ್ರಾನ್ವೇಷಣ ಶಾಲೆಗೆ ತಗಲುವ ವೆಚ್ಚಗಳ ಅಂದಾಜು ಸಿದ್ಧವಾಯಿತು. ವಿಜ್ಞಾನ ಮಂದಿರದ ಕಟ್ಟಡಗಳು, ಪ್ರಯೋಗಶಾಲೆಗಳು, ವಿದ್ಯಾರ್ಥಿ ಮತ್ತು ಅಧ್ಯಾಪಕರ ವಸತಿಗೃಹಗಳು ಮುಂತಾದವುಗಳ ರಚನೆಗೆ ಬೇಕಾಗುವ ಮೊತ್ತ ಮೂವತ್ತು ಲಕ್ಷ ರೂಪಾಯಿಗಳೆಂದು ಅಂದಾಜಾಯಿತು.

’ಹಣದ ಬೆಲೆ ಇಳಿದಿದೆ ಎಂದು ನಾವು ಕೇಳುತ್ತಿರುತ್ತೇವೆ. ಅಲ್ಲವೆ?’

ಈಗ ಒಂದು ರೂಪಾಯಿಗೆ ನಾವು ಎಷ್ಟು ಸಾಮಾನುಕೊಳ್ಳಬಹುದು? ಹತ್ತು ವರ್ಷದ ಹಿಂದೆ ಬರುತ್ತಿದ್ದಷ್ಟು ಸಾಮಾನುಗಳು ಈಗ ಬರುವುದಿಲ್ಲ. ಐವತ್ತು ವರ್ಷದ ಹಿಂದೆ ಬರುತ್ತಿದ್ದಷ್ಟು ಸಾಮಾನುಗಳು ಹತ್ತು ವರ್ಷದ ಹಿಂದೆ ಬರುತ್ತಿರಲಿಲ್ಲ. ಇದರಿಂದಲೇ ಹಣದ ಬೆಲೆ ಇಳಿದಿದೆ ಎನ್ನುವುದು.

ಹೀಗೆ ನೋಡಿದರೆ ತಾತಾ ಅವರು ವಿಜ್ಞಾನ ಮಂದಿರದ ಯೋಜನೆ ಮಾಡಿದಾಗಿನ ಮೂವತ್ತು ಲಕ್ಷ ರೂಪಾಯಿ ಎಂದರೆ ಈಗಿನ ಸುಮಾರು ಹತ್ತು ಹನ್ನೆರಡು ಕೋಟಿಯಷ್ಟು ಆದೀತು.

ಇಷ್ಟೊಂದು ಹಣವನ್ನು ತಾತಾ ತಮ್ಮ ಮತದವರಿಗೆ ಸಹಾಯ ಮಾಡುವುದಕ್ಕೆ ಉಪಯೋಗಿಸಬಾರದೆ? ಪಾರಸಿಗಳಲ್ಲೆ ಎಷ್ಟೋ ಜನ  ಬಡವರಿದ್ದಾರಲ್ಲ? ಎಂದು ಕೆಲವರು ಪಾರಸಿಗಳು ಎಂದುಕೊಂಡರು, ಆಕ್ಷೇಪಿಸಿದರು.

ಆ ರೀತಿ ಅಭಿಪ್ರಾಯಪಟ್ಟವರಿಗೆ ತಾತಾ ಹೀಗೆ ಉತ್ತರ ಕೊಟ್ಟರು: “ಆಸ್ಪತ್ರೆ, ಛತ್ರಗಳನ್ನು ಕಟ್ಟಿಸುವುದು ಪಾರಸಿಗಳಲ್ಲಿ ಬಹಳವಾಗಿ ರೂಢಿಯಲ್ಲಿದೆ. ಬಡವರಿಗೆ ಅನ್ನ, ಬಟ್ಟೆ, ಔಷಧಿ ಒದಗಿಸುವುದು ಧರ್ಮಕಾರ್ಯಗಳೇ, ಅವಷ್ಟೇ ಅತ್ಯುತ್ತಮವೆಂದು ನಾನು ಭಾವಿಸುವುದಿಲ್ಲ. ನಿರ್ಬಲರಾದವರಿಗೆ ಮತ್ತು ಸಹಾಯವಿಲ್ಲದವರಿಗೆ ಸಹಾಯ ಮಾಡುವ ಮಾತ್ರದಿಂದ ಒಂದು ದೇಶ ಅಥವಾ ಸಮಾಜ ಅಭಿವೃದ್ಧಿಗೆ ಬರುವುದಿಲ್ಲ. ವಿದ್ಯಾವಂತರಿಗೆ, ಮೇಧಾವಿಗಳಿಗೆ ಸಹಾಯ ಮಾಡಿದರೆ ಅವರಿಂದ ದೇಶಕ್ಕೆ ಅತ್ಯುತ್ತಮ ಸೇವೆಯು ಸಲ್ಲುವುದಕ್ಕೆ ಅನುಕೂಲ ಏರ್ಪಡಿಸಿದಂತಾಗುತ್ತದೆ. ನನಗೆ ಇಂತಹ ಉದ್ದೇಶವಿರುವುದರಿಂದ ಸಣ್ಣ ಧರ್ಮಕಾರ್ಯಗಳಿಂದ ಪಾರಸಿಗಳಿಗೆ ಮಾತ್ರವೇ ಪ್ರಯೋಜನವಾಗುವಂತೆ ಏರ್ಪಾಡು ಮಾಡುವುದರಲ್ಲಿ ಅರ್ಥವಿಲ್ಲ” ಇಷ್ಟು ವಿಶಾಲ ಮನೋಭಾವ ತಾತಾ ಅವರದು.

ಪ್ರಯತ್ನಕ್ಕೆ ಕೈಹಾಕಿದೊಡನೆ ಕಾರ್ಯರೂಪಕ್ಕೆ ಬರಲು ಅದು ಸಣ್ಣ ಕೆಲಸವೆ? ತಾತಾರವರ ಯೋಜನೆಗೆ ಭಾರತ ಸರ್ಕಾರದ ಅನುಮತಿ, ಸಹಾಯ ಬೇಕಾಗಿದ್ದಿತು. ಯೋಜನೆಗೆ ಒಪ್ಪಿಗೆ ಕೊಡಲೇ ದೊರೆಯಲಿಲ್ಲ. ಅನಂತರ ವ್ಯಾಪಾರ ಸಂಬಂಧದಲ್ಲಿ ತಾತಾ ಒಮ್ಮೆ ಮೈಸೂರಿಗೆ ಬಂದಾಗ, ದಿವಾನರಾದ ಶೇಷಾದ್ರಿ ಅಯ್ಯರ್‌ರವರಿಗೆ ತಮ್ಮ ಯೋಜನೆ ವಿವರಿಸಿದರು. ವೈಜ್ಞಾನಿಕ ಮಂದಿರವನ್ನು ಬೆಂಗಳೂರಿನಲ್ಲಿ ಸ್ಥಾಪಿಸುವುದಾದರೆ ಮೈಸೂರು ಸರ್ಕಾರದಿಂದ ಉದಾರ ಸಹಾಯ ದೊರೆಯುವುದೆಂದು ದಿವಾನರಿಂದ ಭರವಸೆ ಬಂದಿತು.

ಯೋಜನೆಯು ರೂಪುಗೊಳ್ಳಲು ದಾರಿಯು ಇನ್ನೂ ಸುಗಮವಾಗಿರಲಿಲ್ಲ. ಭಾರತ ಸರ್ಕಾರದ ಅಭಿಪ್ರಾಯದಂತೆ ಪ್ರಖ್ಯಾತ ವಿಜ್ಞಾನಿ ವಿಲಿಯಂ ರ‍್ಯಾಂಸೆ ಎಂಬುವವರನ್ನು ಇಂಗ್ಲೆಂಡಿನಿಂದ ಕರೆಸಿದರು. ಅವರ ವೆಚ್ಚಗಳನ್ನೆಲ್ಲಾ ತಾತಾ ವಹಿಸಿಕೊಂಡರು. ೧೯೦೨ರಲ್ಲಿ ತಾತಾ ಲಂಡನ್ನಿಗೆ ತೆರಳಿ ಬ್ರಿಟಿಷ್ ಸರ್ಕಾರಕ್ಕೆ ಮನವಿ ಮಾಡಿಕೊಂಡರು. ಇಷ್ಟಾದ ಮೇಲೆ ಸರ್ಕಾರ ಯೋಜನೆಗೆ ಒಪ್ಪಿಗೆ ನೀಡಿತು. ಹತ್ತು ವರ್ಷಗಳ ಕಾಲ ವರ್ಷಕ್ಕೆ ಎರಡು ಸಾವಿರ ಪೌಂಡುಗಳ ಹಣ ಸಹಾಯ ಕೊಡುವುದಾಗಿ ತಿಳಿಸಿತು. ವಿಜ್ಞಾನ ಮಂದಿರದ ಸ್ಥಾಪನೆಗೆ ಮುಂಬಯಿಗೆ ಸಮೀಪದಲ್ಲಿರುವ ಟ್ರಾಂಬೆ ಎಂಬ ಸ್ಥಳವನ್ನು ಮೊದಲು ಆಯ್ಕೆ ಮಾಡಲಾಯಿತು. ಅನಂತರ ರ‍್ಯಾಂಸೆಯವರ ವರದಿಯಂತೆ ಬೆಂಗಳೂರು ನಗರವು ಸರ್ವೋತ್ತಮವೆಂದು ಖಚಿತಗೊಳಿಸಲಾಯಿತು. ಆಗ ಮೈಸೂರಿನ ಮಹಾರಾಜರಾಗಿದ್ದ ಶ್ರೀಮನ್ನಾಲ್ವಡಿ ಕೃಷ್ಣರಾಜ ಒಡೆಯರು ಉದಾರ ಆಶ್ರಯವನ್ನಿತ್ತರು. ಅವರು ೩೭೨ ಎಕರೆಗಳಷ್ಟು ವಿಶಾಲವಾದ ಜಮೀನನ್ನು ಉಚಿತವಾಗಿ ಕೊಟ್ಟದ್ದು ಮಾತ್ರವಲ್ಲದೆ ಕಟ್ಟಡ ಕಟ್ಟಿಸುವುದಕ್ಕೆ ಐದು ಲಕ್ಷ ರೂಪಾಯಿಗಳನ್ನು ನೀಡಿದರು.

ತಾತಾರವರು ಸುಮಾರು ಮೂವತ್ತು ಲಕ್ಷ ರೂಪಾಯಿಗಳನ್ನು ಬೆಲೆಬಾಳುವ ತಮ್ಮ ಆಸ್ತಿಗಳ ಉತ್ಪತ್ತಿಯನ್ನು ಮಂದಿರದ ಖರ್ಚುವೆಚ್ಚಗಳಿಗೆ ಉಪಯೋಗಿಸಿಕೊಳ್ಳಬಹುದು ಎಂದು ಹೇಳಿದರು. ಅಲ್ಲದೆ ವರ್ಷಕ್ಕೆ ೮೦೦೦ ರೂಪಾಯಿ ದ್ರವ್ಯಸಹಾಯಕ್ಕೂ ಒಪ್ಪಿದರು.

ತಾತಾ ವಿಜ್ಞಾನ ಮಂದಿರ ಭಾರತಕ್ಕೆ ಅಮೂಲ್ಯ ಕೊಡುಗೆ. ಇದು ರೂಪ ತಾಳುವುದರೊಳಗೆ ಜೆಮ್‌ಸೆಟ್‌ಜಿ ತೀರಿಕೊಂಡರು.

ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ

ತಾತಾರವರು ಪ್ರಾರಂಭಿಸಿದ ಮುಂದಿನ ಕೈಗಾರಿಕೆಯು ಅವರನ್ನು ಇಡೀ ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಲ್ಲೇ ಅವರ ಹೆಸರನ್ನು ವಿಖ್ಯಾತಗೊಳಿಸಿತು.  ಬ್ರಿಟಿಷ್ ರಾಜ್ಯಭಾರವು ಭಾರತದಲ್ಲಿ ನೆಲೆಗೊಂಡ ಮೇಲೆ ಕಬ್ಬಿಣ ಮತ್ತು ಉಕ್ಕು ಸುಲಭ ಬೆಲೆಗೆ ಅಮದಾಗುವುದಕ್ಕೆ ಪ್ರಾರಂಭವಾಯಿತು. ನಮ್ಮ ಕಬ್ಬಿಣದ ಕೈಗಾರಿಕೆಯು ಮೂಲೆಗೆ ಬಿದ್ದುಹೋಯಿತು. ಜರ್ಮನಿ ದೇಶದ ಖನಿಜ ಶಾಸ್ತ್ರಜ್ಞನೊಬ್ಬನು ಭಾರತದ ಮಧ್ಯಪ್ರಾಂತಕ್ಕೆ ಸೇರಿದ ಲೋಹರಾ ಎಂಬ ಸ್ಥಳದಲ್ಲಿ ಕಬ್ಬಿಣದ ಅದಿರುಗಳು ಹೇರಳವಾಗಿವೆಯೆಂಬ ವರದಿ ನೀಡಿದ್ದ ಆದರೆ ಆ ಕಬ್ಬಿಣವನ್ನು ಕರಿಗಿಸಲು ಸಮೀಪದ ವರೋರಾ ಎಂಬ ಸ್ಥಳದಲ್ಲಿ ದೊರೆಯುವ ಕಲ್ಲಿದ್ದಲಿನ ಶಾಖವು ಕಡಮೆ ಇರುವುದರಿಂದ ಕಬ್ಬಿಣ ಕರಗಿಸಲು ಅದು ಯೋಗ್ಯವಲ್ಲವೆಂದು ಅಭಿಪ್ರಾಯಪಡಲಾಗಿತ್ತು. ವರದಿ ತಾತಾರವರ ಮನಸ್ಸಿನಲ್ಲಿ ನಿಂತಿತು. ಲೋಹಾರಾದ ಕಬ್ಬಿಣವನ್ನು ವರೋರಾದ ಕಲ್ಲಿದ್ದಲಿನಿಂದ ಕರಗಿಸುವ ವಿಧಾನವನ್ನು ತಿಳಿಯಲು ಇಂಗ್ಲೆಂಡಿಗೆ ಹೋದರು. ಗಣಿ ಕೆಲಸಕ್ಕಾಗಿ ಭಾರತ ಸರ್ಕಾರದಿಂದ ರಿಯಾಯಿತಿ ಬೇಡಿದರು. ವಾರ್ಧಾದಿಂದ ವರೋರಾವರೆಗಿನ ರೈಲ್ವೆ ವಿಭಾಗವನ್ನು ತಮ್ಮ ಕಂಪೆನಿಯ ಹತೋಟಿಗೆ ಕೇಳಿದರು. ಆಗಿನ ನಿಯಮಗಳ ಪ್ರಕಾರ ಗಣಿ ಕೆಲಸಗಳನ್ನು ನಡೆಸಲು ಖಾಸಗಿ ಜನರಿಗೆ ಸರ್ಕಾರ ಸುಲಭವಾಗಿ ಅವಕಾಶ ಕೊಡುತ್ತಿರಲಿಲ್ಲ. ವೈಸರಾಯ್ ಲಾರ್ಡ್ ಲಾರೆನ್ಸ್‌ರವರು “ ಈ ವಿಷಯದಲ್ಲಿ ಖಾಸಗಿ ಜನರಿಗೆ ಉತ್ತೇಜನ ಕೊಟ್ಟರೆ ಸರ್ಕಾರಕ್ಕೆ ಬರತಕ್ಕ ಹಣವನ್ನು ದೋಚಿಕೊಂಡಾಂತಾಗುತ್ತದೆ” ಎಂದು ಹೇಳುತ್ತಿದ್ದರು. ಸರ್ಕಾರವು ತಾತಾರವರಿಗೆ ಯಾವ ಸಹಕಾರವನ್ನೂ ನೀಡಲಿಲ್ಲ.

ಲಾರ್ಡ್ ಕರ್ಜನ್‌ವೈಸರಾಯ್ ಆದಾಗ ಗಣಿ ಕೆಲಸಗಳಿಗೆ ಸಂಬಂಧಿಸಿದ ನಿಬಂಧನೆಗಳ ತಿದ್ದುಪಾಟ ಆಯಿತು. ೧೯೦೦ರಲ್ಲಿ ತಾತಾ ಇಂಗ್ಲೆಂಡಿಗೆ ತೆರಳಿ ಅಲ್ಲಿನ ಮಂತ್ರಿ ಲಾರ್ಡ್ ಜಾರ್ಜ್ ಹ್ಯಾಮಿಲ್ಟನ್‌ರವರನ್ನು ಕಂಡು ತಮ್ಮ ಇಪ್ಪತ್ತು ವರ್ಷಗಳ ಪ್ರಯತ್ನವನ್ನು ಅವರಿಗೆ ನಿವೇದಿಸಿಕೊಂಡರು. ಉತ್ತೇಜನವು ದೊರೆಯಿತು. ಆ ಕಾಲದಲ್ಲಿ ಗಣಿ ಕೆಲಸವು ನಮ್ಮ ದೇಶಕ್ಕೆ ಹೊಸತು. ಧೈರ್ಯಶಾಲಿಗಳ ಗುಂಡಿಗೆಯನ್ನೂ ಕುಗ್ಗಿಸುವಂತಹದು. ಕಬ್ಬಿಣ ಕರಗಿಸುವ ವಿಧಾನವನ್ನು ತಿಳಿದು ಬರಲು ತಾತಾ ಬರ್ಮಿಂಗಹ್ಯಾಂ, ಜರ್ಮನಿ  ಮತ್ತು ಪಿಟ್ಸ್‌ಬರ್ಗ್‌ಗಳಿಗೆ ಭೇಟಿಕೊಟ್ಟು, ಸಿ.ಎಂ.ವೆಲ್ಡ್ ಎಂಬ ದಕ್ಷ ಇಂಜಿನಿಯರನ್ನು ತಮ್ಮೊಡನೆ ಮುಂಬಯಿಗೆ ಕರೆತಂದರು. ಕಬ್ಬಿಣದ ಅದಿರುಗಳ ಭೂ ಪರಿಶೀಲನೆ ಕಾರ್ಯವೊಂದಕ್ಕೇ ಐದು ಲಕ್ಷ ರೂಪಾಯಿ ವೆಚ್ಚವಾಯಿತು. ಬಿಹಾರ್ ಸಂಸ್ಥಾನದ ಸಾಕ್ಷಿ ಎಂಬ ಸ್ಥಳವು ಖನಿಜಕ್ಕೆ ಸಮೀಪವಾಗಿದ್ದು ಕಾರ್ಖಾನೆಗೆ ಯೋಗ್ಯ ಸ್ಥಳವೆಂದು ಗೊತ್ತಾಯಿತು. ತಾತಾರವರಿಗೆ ಭೂಮಿಯ ಋಣ ತೀರಿತ್ತು. ಅವರು ಕಾಲವಾದ ಮೇಲೆಯೇ ಕಾರ್ಖಾನೆಯ ಕೆಲಸವನ್ನು ಪೂರೈಸಿದರು. ಅಂದಿನ ಸಾಕ್ಷಿ ಹಳ್ಳಿಯು ಇಂದು ತಾತಾರವರ ನೆನಪಿನಲ್ಲಿ ಜೆಮ್‌ಷೆಡ್‌ಪುರವೆಂಬ ಹೆಸರಿನಲ್ಲಿ ನಗರವಾಗಿ ಹರಡಿ ನಿಂತಿದೆ. ಇಪ್ಪತ್ತೆಂಟು ಚದರ ಮೈಲಿಗಳಷ್ಟು ವಿಸ್ತಾರದಲ್ಲಿ ಭವ್ಯವಾಗಿ ನಿಂತ ಕಾರ್ಖಾನೆಯಲ್ಲಿ ಹನ್ನೊಂದು ಸಾವಿರ ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಇಪ್ಪತ್ತನೆಯ ಶತಮಾನದ ಪ್ರಾರಂಭದಲ್ಲಿ ರೂಪುಗೊಂಡ ಈ ಉದ್ಯಮದಿಂದಾಗಿ ಭಾರತದ ಕೈಗಾರಿಕೆಗಳ ಇತಿಹಾಸದಲ್ಲಿ ತಾತಾ ನೂತನ ಶಾಕೆಯೊಂದರ ಆರಂಭಕ್ಕೆ ಕಾರಣರಾದರು.

ವಿದ್ಯುಚ್ಛಕ್ತಿ ಉತ್ಪಾದನೆ

ಪಶ್ಚಿಮ ಘಟ್ಟಗಳಲ್ಲಿ ಹರಿಯುವ ನೀರಿನ ಪ್ರವಾಹದಿಂದ ವಿದ್ಯುಚ್ಛಕ್ತಿಯನ್ನು ಉತ್ಪತ್ತಿ ಮಾಡಬೇಕೆಂಬುದು ತಾತಾರವರ ಮೂರನೆಯ ಮಹಾ ಸಂಕಲ್ಪವಾಗಿದ್ದಿತು. ಆ ಪ್ರದೇಶದಲ್ಲಿ ಪ್ರತಿವರ್ಷವೂ ಅಧಿಕವಾಗಿ ಸುರಿಯುವ ಮಳೆನೀರು ಯಾವ ಪ್ರಯೋಜನವೂ ಇಲ್ಲದೆ ವ್ಯರ್ಥವಾಗಿ ಹರಿದು ಸಮುದ್ರವನ್ನು ಸೇರುತ್ತಿತ್ತು. ಆ ನೀರನ್ನು ಶೇಖರಿಸಿ  ಅದರ ಶಕ್ತಿಯಿಂದ ಅನೇಕ ಪ್ರಯೋಜನ ಕಾರಿ ಕೆಲಸಗಳನ್ನು ನಡೆಸಬಹುದೆಂಬುದು ತಾತಾರವರನ್ನು ಮೂವತ್ತು ವರ್ಷಗಳಿಂದ ಕಾಡಿದ ಆಲೋಚನೆ. ಕಲ್ಲಿದ್ದಲಿಗೆ ಬದಲಾಗಿ ವಿದ್ಯುಚ್ಛಕ್ತಿಯಿಂದ ಯಂತ್ರಗಳನ್ನು ನಡೆಸಿದರೆ ಕಾಲ ಮತ್ತು ಹಣದ ಉಳಿತಾಯವಾಗುವುದಲ್ಲದೆ, ನಗರಗಳಿಗೆ ಅಪಾಯಕಾರಿಯಾದ ಮಲಿನ ಹೊಗೆಯೂ ತಪ್ಪುತ್ತದೆ. ನಿಪುಣರ ಸಲಹೆ ಪಡೆದು ತಾತಾ ಹುರುಪಿನಿಂದ ಕೈಹಾಕಿದರು. ಆದರೆ ಕೆಲಸ ಪೂರೈಸುವುದನ್ನು ತಾತಾರವರು ನೋಡಲಿಲ್ಲ. ಅವರು ಪ್ರಾರಂಭಿಸಿದ ತಾತಾ ಹೈಡ್ರೋ ಎಲೆಕ್ಟ್ರಿಕ್ ಪವರ್ ಸಪ್ಲೈ ಕಂಪೆನಿಯು ೧೯೧೫ರಲ್ಲಿ ಮುಂಬಯಿ ನಗರವನ್ನು ವಿದ್ಯುಚ್ಛಕ್ತಿಯಿಂದ ಬೆಳಗಿಸಿತು.

ಸಾಹಸಮಯ ಜೀವನ ಮುಗಿಯಿತು

ನಾಡಿನ ಹಿತಕ್ಕಾಗಿ ನಾನಾ ಪ್ರಕಾರವಾಗಿ ಶ್ರಮಿಸಿದ ತಾತಾರವರ ಶರೀರವು ಅರವತ್ತೈದು ವರ್ಷಗಳ ದೀರ್ಘ ಪರಿಶ್ರಮದಿಂದ ಜೀರ್ಣವಾಗಿತ್ತು. ೧೯೦೪ರಲ್ಲಿ ಅವರ ಆರೋಗ್ಯವು ಕೆಟ್ಟಾಗ ವೈದ್ಯರು ಚಿಕಿತ್ಸೆಗಾಗಿ ಜರ್ಮನಿಗೆ ಹೋಗಬೇಕೆಂದು ಸೂಚಿಸಿದರು. ತಾತಾರವರಿಗೆ ಪರ್ಷಿಯನ್  ಕೊಲ್ಲಿಗೆ ಹೋಗುವ ಇಚ್ಛೆ. ಅವರ ಬಂಧುವೊಬ್ಬರು, ‘ತಮಗೂ ಅನಾರೋಗ್ಯ. ಈಜಿಪ್ಟ್‌ಗೆ ಹೋಗಲು ತಾತಾ ಒಪ್ಪಿದರು. ಒಂದು ತಿಂಗಳು ಕೈರೊದಲ್ಲಿದ್ದು ಮಗ ಮತ್ತು ಸೊಸೆಯೊಂದಿಗೆ ನೇಪಲ್ಸ್‌ಗೆ ಪ್ರಯಾಣ ಕೈಗೊಳ್ಳುವ ಹೊತ್ತಿಗೆ ಅವರ ಹೆಂಡತಿ ಹೀರಾಬಾಯಿಯವರು ಮೃತರಾದ ಸುದ್ದಿ ಬಂತು. ಅನಂತರ ಅವರು ಜರ್ಮನಿಯ ಬಾದ್ ನಾಹೀಂ ಸೇರಿದರು. ಖಾಯಿಲೆಯು ಉಲ್ಬಣಿಸಿದಾಗ ತಮ್ಮ ಸೋದರ ಆರ್.ಡಿ. ತಾತಾರವರಿಗೆ ತಮ್ಮ ಜೀವನದ ಉದ್ದೇಶಗಳನ್ನು ವಿವರಿಸಿ ತಮ್ಮ ಮಕ್ಕಳೊಂದಿಗೆ  ಸಹಕರಿಸಿ ಕಾರ್ಯಗಳನ್ನು ಮುಂದುವರಿಸಬೇಕೆಂದು ಸೂಚಿಸಿದರು.

೧೯೦೪ರ ಮೇ ೧೯ರಂದು ಜೆಮ್‌ಸೆಟ್‌ಜಿ ತಾತಾ ಶಾಂತಿಯುತವಾಗಿ ನಿದ್ರೆಯಲ್ಲಿ ಕಾಲವಾದರು.

’ನಾನು ಮಾಡಿರುವ ಕೆಲಸಗಳನ್ನು ಬೆಳೆಸಿ’

ಸಾರ್ಥಕ ಸ್ಮಾರಕಗಳು

ತಾತಾರವರ ಮರಣದ ನಂತರ ಅವರ ಎರಡು ದೊಡ್ಡ ಕನಸುಗಳು ನಿಜರೂಪ ತಾಳಿದವು. ೧೯೦೯ರಲ್ಲಿ ವೈಸ್‌ರಾಯ್ ಲಾರ್ಡ್ ಮಿಂಟೊರವರು ಬೆಂಗಳೂರಿನ ವೈಜ್ಞಾನಿಕ ಸಂಶೋಧನಾ ಮಂದಿರಕ್ಕೆ ಅಂಗೀಕಾರ ನೀಡಿದರು. ೧೯೧೧ರಲ್ಲಿ ಸಾಕ್ಚಿಯ ತಾತಾ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಕುಲುಮೆಯಿಂದ ಕಬ್ಬಿಣದ ಪ್ರಥಮ ಧಾರೆ ಹರಿದುಬಂತು. ಇಂದು ಈ ಕಾರ್ಖಾನೆ ವರ್ಷಕ್ಕೆ ಇಪ್ಪತ್ತು ಲಕ್ಷ ಟನ್ ಉಕ್ಕನ್ನು ಉತ್ಪತ್ತಿ ಮಾಡುತ್ತಿದೆ.

ತಾತಾ ಎಣ್ಣೆ ಕಾರ್ಖಾನೆಯು ಸ್ಥಾಪನೆಗೊಂಡ ಕಳಿಮಟ್ಟಿ ಎಂಬ ಸ್ಥಳದಲ್ಲಿ ಇಂದು ತಾತಾನಗರವೆಂಬ ಅತ್ಯಾಧುನಿಕ ನಗರವೇ ನಿರ್ಮಾಣಗೊಂಡಿದೆ. ಮುಂಬಯಿಯ ತಾತಾ ಕಾರ್ಖಾನೆಯು ಭಾರತದ ಅಮೂಲ್ಯ ಆಸ್ತಿ. ತಾತಾ ಆಯಿಲ್ ಮಿಲ್ಸ್, ತಾತಾ ಸಿಮೆಂಟ್ ಕಂಪೆನಿ, ತಾತಾ ಇನ್ಷುರೆನ್ಸ್ ಕಂಪೆನಿ, ತಾತಾ ಇಂಡಸ್ಟ್ರಿಯಲ್ ಬ್ಯಾಂಕ್ ಮುಂತಾದ ಅಸಂಖ್ಯಾತ ಹೆಸರುಗಳಲ್ಲಿ ರಾರಾಜಿಸುವ ಸಂಸ್ಥೆಗಳು ಕರ್ಮವೀರ ಜೆಮ್‌ಸೆಟ್‌ಜಿ ತಾತಾರವರ ಸಾರ್ಥಕ ಜೀವನದ ಶ್ಲಾಘನೀಯ ಸ್ಮಾರಕಗಳಾಗಿವೆ.

ಕಾರ್ಯಸಾಧಕ ಕನಸುಗಾರ

ಬಡವರ ವಿಚಾರವೆಂದರೆ ತಾತಾ ಅವರ ಕಣ್ಣುಗಳಲ್ಲಿ ನೀರು ತುಂಬುತ್ತಿತ್ತು. ದಯೆ ಎಂಬುದು ಅವರ ಜೀವನಾಡಿಯಲ್ಲಿ ಹುದುಗಿದ್ದ ಒಂದು ವಿಶೇಷ ಗುಣ. ದೇಶಬಾಂಧವರ ಮೇಲೆ ಅವರಿಗೆ ಅಪಾರ ಪ್ರೇಮ. ಅವರ ತಂದೆ ತೀರಿಕೊಂಡ ನಂತರ ವಿಶಾಲವಾದ ‘ನವಸಾರಿ ಎಸ್ಟೇಟ’ನ್ನು ಸಾರ್ವಜನಿಕರ ಮನರಂಜನೆಗಾಗಿ ಫಲಪುಷ್ಪಗಳ ಉದ್ಯಾನವನ್ನಾಗಿಯೂ ಮೃಗಗಳ ಸಂಗ್ರಹಾಲಯವನ್ನಾಗಿಯೂ ಪರಿವರ್ತಿಸಿದರು. ನಮ್ಮ ಜನರ ಅಜ್ಞಾನ, ದಾಸ್ಯ, ದಾರಿದ್ರ್ಯಗಳನ್ನು ಕಂಡು ನೊಂದುಕೊಳ್ಳುತ್ತಿದ್ದರು. “ನಮ್ಮ ಜನರು ಪಾಶ್ಚಾತ್ಯರಂತೆ ಸದಾ ಕರ್ತವ್ಯನಿರತರಾಗಿರಬೇಕು, ಜಪಾನೀಯರಂತೆ ಕಾರ್ಯಕುಶಲರಾಗಿ ಲಾಭದಾಯಕವಾದ ಕೈಗಾರಿಕೆಗಳಲ್ಲಿ ತೊಡಗಿರಬೇಕು. ನಮ್ಮ ರೈತರು ವಿದ್ಯಾವಂತರಾಗಿ ಸುಧಾರಿತ ವ್ಯವಸಾಯ ಪದ್ಧತಿಗಳನ್ನು ಅನುಸರಿಸಬೇಕು. ಹೀಗಾದಲ್ಲಿ ಮಾತ್ರ ನಮ್ಮ ದೇಶದ ಬಡತನ ದೂರವಾದೀತು” ಎಂದು ಪದೇ ಪದೇ ಹೇಳುತ್ತಿದ್ದರು. ಸ್ವಾತಂತ್ರ್ಯ ಪಡೆಯದ ಯಾವ ದೇಶವೂ ಪ್ರಗತಿಗೆ ಬರಲು ಸಾಧ್ಯವಿಲ್ಲವೆಂಬುದು ಅವರ ಅಭಿಪ್ರಾಯ.

೧೮೯೭ರಲ್ಲಿ ರಷ್ಯಾ ದೇಶದ ಡಾಕ್ಟರ್ ಹಾಫ್‌ಕಿನ್ ಎಂಬುವವನು ಪ್ಲೇಗ್ ರೋಗದ ವಿರುದ್ಧ ಚುಚ್ಚುಮದ್ದನ್ನು ಕಂಡುಹಿಡಿದ. ಭಾರತೀಯರ ಮೂಢನಂಬಿಕೆ ಮತ್ತು ಇಂಗ್ಲಿಷ್ ವೈದ್ಯರ ಮತ್ಸರದ ಪರಿಣಾಮವಾಗಿ ಭಾರತದಲ್ಲಿ ಆ ಚಿಕಿತ್ಸಾ ಕ್ರಮಕ್ಕೆ ಉತ್ತೇಜನವು ಜಾಗ್ರತೆಯಾಗಿ ದೊರೆಯಲಿಲ್ಲ. ಮದ್ದಿನ ಲಸಿಕೆಯಿಂದ ಕುಷ್ಠರೋಗ ಮತ್ತು ಸಿಡುಬು ಸಂಭವಿಸುತ್ತದೆಯೆಂಬ ವದಂತಿ ಹರಡಿತು. ತಾತಾರವರು ಹಾಫ್‌ಕಿನ್‌ನ ಸಂಶೋಧನೆಯ ಬೆಲೆಯನ್ನು ಆರಿತಿದ್ದರು. ಸಮಾಜದ ಹಿತಕ್ಕಾಗಿ ತಾವೇ ಚುಚ್ಚುಮದ್ದನ್ನು ಹಾಕಿಸಿಕೊಂಡು, ತಮ್ಮ ಸೇವಕರಿಗೂ ಹಾಕಿಸಿದರು. ಮಗ ದೊರಾಬ್ಜಿಯ ಭಾವಿ ಮಾವನವರಾದ ಕರ್ನಲ್ ಎಚ್.ಜೆ.ಭಾಭಾರವರು ತಾತಾರವರನ್ನು ನೋಡಲು ಬಂದಿದ್ದರು. ತಾತಾ ಅವರಿಗೂ ಚುಚ್ಚುಮದ್ದನ್ನು ಬಿಡದೆ ಹಾಕಿಸಿದರು. ಹೀಗಾಗಿ ಮಾರಕ ರೋಗವೊಂದಕ್ಕೆ ಮುಂಜಾಗ್ರತೆಯ ಚಿಕಿತ್ಸೆಯು ನಿರಾತಂಕವಾಗಿ ರೂಢಿಗೆ ಬಂದಿತು.

ಕಾರ್ಯದಕ್ಷತೆ, ಸಹನೆ, ಧೈರ್ಯ ಜೌದಾರ್ಯಗಳ ಸಾಕಾರವೆನಿಸಿದ ತಾತಾರವರು ಭಾರತೀಯರಿಗೆಲ್ಲಾ ಆದರ್ಶ ಪುರುಷರು, ಭಾರತವು ಕೈಗಾರಿಕೆಗಳಲ್ಲಿ ಬಹಳವಾಗಿ ಹಿಂದುಳಿದು ಜನರು ಆ ವಿಚಾರದಲ್ಲಿ ಇನ್ನೂ ನಿದ್ರಾವಸ್ಥೆಯಲ್ಲಿದ್ದಾಗ ದೇಶದ ಕೈಗಾರಿಕೆ ಮತ್ತು ವಾಣಿಜ್ಯವನ್ನು ಮುಂದುವರಿಸಿ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸಲು ತಾತಾರವರು ಮಾಡಿರುವಷ್ಟು ಕೆಲಸಗಳನ್ನು ಮತ್ತಾರೂ ಮಾಡಿಲ್ಲ. ಅವರು ಕೇವಲ ಭಾರತದ ಪ್ರಜೆ ಅಲ್ಲ. ಇಡೀ ಪ್ರಪಂಚದ ಪ್ರಜಾವರ್ಗಕ್ಕೆ ಸೇರಿದವರು.

ತಾತಾರವರು ವಿಶೇಷ ಎತ್ತರವಾಗಿರಲಿಲ್ಲ. ಗಂಭೀರವಾದ ಮುಖದಲ್ಲಿ ಹೊಳಪಾದ ಕಣ್ಣುಗಳು. ಹುಲುಸಾದ ಗಡ್ಡವಿತ್ತು. ಸಣ್ಣಪಾರಸಿ ಟೋಪಿ ಧರಿಸುತ್ತಿದ್ದರು. ಆಡಂಬರವಿಲ್ಲದ ಸರಳ ಜೀವನದ ಶೇಕಡ ನೂರು ಭಾಗ ಭಾರತೀಯರು ಕಷ್ಟಜೀವಿ, ಮಿತಭಾಷಿ ಮತ್ತು ನಿಸ್ವಾರ್ಥಿಗಳು. ಯಾವಾಗಲೂ ಅರ್ಥಪೂರ್ಣವಾದ ಹೊಂಗನಸುಗಳನ್ನು ಕಾಣುತ್ತಿದ್ದ ಭಾವುಕರು. ಆ ಕನಸುಗಳನ್ನು ನನಸಾಗಿ ಮಾಡಬಲ್ಲ ಧೀರರು. ಅವರು ಬಹು ಶ್ರೀಮಂತರಾಗಿದ್ದರು. ಆದರೆ ಎಷ್ಟು ಬಾರಿ ಕಷ್ಟಗಳನ್ನು ಎದುರಿಸಿದರೂ, ನಷ್ಟವನ್ನು ಅನುಭವಿಸಿದರೂ ಲೆಕ್ಕವಿಲ್ಲ. ಆದರೆ ತಾರುಣ್ಯದಲ್ಲಿ ಲಂಡನ್ನಿನಲ್ಲಿ ಪಟ್ಟ ಕಷ್ಟ ನೋಡಿದ್ದೇವೆ. ಹಿಂದಿರುಗಿದರೆ ತಂದೆಯ ವ್ಯಾಪಾರದ ವ್ಯವಹಾರಗಳೇ ಕುಸಿಯುತ್ತಿದ್ದವು. ತಂದೆ-ಮಗ ಇಬ್ಬರೂ ತಮ್ಮ ಸ್ವಂತ ಆಸ್ತಿಯನ್ನು ಮಾರಿ ಸಾಲ ತೀರಿಸಿದರು. ಅವರು ಬಟ್ಟೆಯ ಕಾರ್ಖಾನೆಗೆ ನಾಗಪುರದ ಬಳಿ ಭೂಮಿ ಕೊಂಡಾಗ, ಆ ಪ್ರದೇಶದಲ್ಲಿ ಹೆಚ್ಚು ಜನರೇ ವಾಸಿಸುತ್ತಿರಲಿಲ್ಲ. ಎತ್ತಿನ ಗಾಡಿಯೇ ಜನರಿಗೆ, ಸಾಮಾನುಗಳಿಗೆ ಮುಖ್ಯವಾಹನ. ಇತರ ಕೈಗಾರಿಕಾ ಪ್ರಭುಗಳು ತಾತಾ ಅವರನ್ನು ಹಾಸ್ಯ ಮಾಡಿದರು. ಅವರು ಎಂಪ್ರೆಸ್ ಮಿಲ್ ಪ್ರಾರಂಭಿಸಿದಾಗ ಕೆಲಸಗಾರರು ಸರಿಯಾಗಿ ಕೆಲಸಕ್ಕೆ ಬರುತ್ತಿರಲಿಲ್ಲ. ಮದುವೆಗಳ ಕಾಲ, ಸುಗ್ಗಿಯ ಕಾಲ ಇವುಗಳಲ್ಲಿ ಕೆಲಸಗಾರರು ಬಂದರೆ ಬಂದರು, ಇಲ್ಲದಿದ್ದರೆ ಇಲ್ಲ. ಅವರಿಗಾಗಿ ಮನೆಗಳನ್ನು ಕಟ್ಟಿಸಿಕೊಟ್ಟರು ಬರಲೊಲ್ಲರು. ಧರಂಶಿ ಕಾರ್ಖಾನೆ ಕೊಂಡುಕೊಂಡ ಮೇಲೂ ಕೆಲಸಗಾರರು ಸಿಕ್ಕುವುದೇ ಕಷ್ಟವಾಯಿತು. ಅವರಿಗೆ ಮನೆಗಳನ್ನು ಕಟ್ಟಿಸಿಕೊಟ್ಟು ಹೆಚ್ಚಿನ ಕೂಲಿ ಕೊಡುತ್ತೇವೆ ಎಂದರೂ ಕೆಲಸಗಾರರಿಲ್ಲ. ಕಾರ್ಖಾನೆ ಪ್ರಾರಂಭದಲ್ಲಿ ಲಾಭ ಸಂಪಾದಿಸದೆ ಹೋದಾಗ, ಇದರ ‘ಷೇರು’ (ಪಾಲು)ಗಳ ಬೆಲೆಯಲ್ಲಿ ಮುಕ್ಕಾಲು ಭಾಗ ಇಳಿದುಹೋಯಿತು. ಕಂಪೆನಿ ಮುಳುಗಿಯೇ ಹೋಯಿತು ಎಂದು ಬಹುಮಂದಿ ಭಾವಿಸಿದರು. ಸ್ವದೇಶಿ ಮಿಲ್ ಸ್ಥಿತಿ ಸಹ ಸಮರ್ಪಕವಾಗಿರಲಿಲ್ಲ. ತಾತಾ ಅವರು ತಮ್ಮ ಆಸ್ತಿಯ ಒಂದು ಭಾಗವನ್ನು ಮಾರಿ ಹಣದ ಕಷ್ಟವನ್ನು ಎದುರಿಸಬೇಕಾಯಿತು. ಅವರು ಕಾಂಗ್ರೆಸ್ ಪರವಾಗಿದ್ದಾರೆ. ಬ್ರಿಟಿಷ್ ಸರ್ಕಾರದ  ವಿರೋಧಿಗಳು ಎಂಬ ಕಾರಣದಿಂದ ಸರ್ಕಾರವೂ ಬಹುಮಟ್ಟಿಗೆ ಅವರಿಗೆ ವಿರೋಧವಾಗಿಯೆ ಇದ್ದಿತು. ಎಲ್ಲ ಕಷ್ಟನಷ್ಟಗಳನ್ನೂ ಎದುರಿಸಿ, ತಮ್ಮ ಬುದ್ಧಿಶಕ್ತಿ, ಪ್ರಾಮಾಣಿಕತೆ, ಶ್ರಮ ಇವುಗಳಿಂದ ವಿಜಯವನ್ನು ಗಳಿಸಿದ ಹೋರಾಟದ ಬದುಕು ತಾತಾ ಅವರದು.

ಎಲ್ಲ ಕ್ಷೇತ್ರಗಳಲ್ಲಿ ಅವರ ಸಾಹಸ, ದೂರದೃಷ್ಟಿ ಅಸಾಧಾರಣ. ತಾತಾ ವಿಜ್ಞಾನ ಮಂದಿರ, ತಾತಾ ಉಕ್ಕಿನ ಕಾರ್ಖಾನೆ-ಇವು ಅವರ ಈ ಗುಣಗಳಿಗೆ ಬೃಹತ್ ರೂಪದ ಸಾಕ್ಷಿಗಳು. ಹೋಲಿಕೆಯಿಂದ ಸಣ್ಣದಾಗಿ ತೋರಬಹುದಾದ ವಿಷಯಗಳಲ್ಲಿಯೂ ಅವರು ಇತರರಿಗಿಂತ ಎಷ್ಟೋ ಮುಂದಿದ್ದರು. ಚೀನಾದಿಂದ ರಿಕ್ಷಾಗಳನ್ನು ತಂದರು. ಭಾರತದಲ್ಲಿ ಗಾಡಿಗಳಿಗೆ ರಬ್ಬರ್ ಟೈರ್ ಮೊಟ್ಟಮೊದಲು ಹಾಕಿಸಿದವರು ಅವರು. ಮುಂಬಯಿಗೆ ಮೊದಲು ಮೋಟಾರ್ ಕಾರ್ ತಂದವರು ಅವರು. ೧೮೯೯ರಲ್ಲಿ ಮಳೆ ಬಾರದ ಜಲಕ್ಷಾಮವಾದಾಗ, ‘ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆ ಕೊಳವೆಯ ಭಾವಿಗಳನ್ನು ತೋಡಿಸಬೇಕು ಎಂದು ಸಲಹೆ  ಮಾಡಿತು. ಆ ಹೊತ್ತಿಗಾಗಲೆ ತಾತಾರವರು  ತಜ್ಞರಿಂದ ಪರೀಕ್ಷೆ ಮಾಡಿಸಿ, ಜಲಕ್ಷಾಮವಿದ್ದ ಒಂದು ಜಿಲ್ಲೆಯಲ್ಲಿ ಕೊಳವೆಯ ಭಾವಿಯನ್ನು ತೋಡಿಸಿದ್ದರು. ಬೇರೆ ದೇಶಗಳಿಗೆ ಮಾವಿನ ಹಣ್ಣುಗಳನ್ನು ರಫ್ತು ಮಾಡುವ ಪ್ರಯತ್ನವನ್ನೂ ಅವರು ಮಾಡಿದ್ದರು.

ತಾತಾರವರು ಹುಟ್ಟಿದಾಗ ಪ್ರಪಂಚದ ವ್ಯಾಪಾರಿ ಸರಕುಗಳು ಕುದುರೆ, ಎತ್ತುಗಳ ಬೆನ್ನಿನ ಮೇಲೆ ಮತ್ತು ಸಣ್ಣ ಹಡಗುಗಳ ಮೂಲಕ ಸಾಗುತ್ತಿದ್ದವು. ಭಾರತದಲ್ಲಿ ಆಗ ಇನ್ನೂ ರೈಲು ಬಂದಿರಲಿಲ್ಲ. ತಾತಾರವರು ತೀರಿಕೊಳ್ಳುವ ಹೊತ್ತಿಗೆ ದೇಶದ ಒಂದು ತುದಿಯೊಂದಿಗೆ ಇನ್ನೊಂದು ತುದಿಯನ್ನು ರೈಲು ಸಂಪರ್ಕ ಕೂಡಿಸಿತ್ತು. ಆಧುನಿಕ ಸಂಶೋಧನೆ, ನಿರ್ಮಾಣ ಮತ್ತು ಕೈಗಾರಿಕೆಗಳಿಂದ ವಿಶದ್ಚ ಸ್ವರೂಪವೇ ಬದಲಾಯಿಸಿತ್ತು. ಅವರ ಹುಟ್ಟು ಮತ್ತು ಸಾವಿನ ನಡುವಣ ಅರವತ್ತೈದು ವರ್ಷಗಳ ಕಾಲಾವಧಿಯಲ್ಲಿ ಜೆಮ್‌ಸೆಟ್‌ಜಿ ನಸೆರ್‌ವಾಂಜಿ ತಾತಾರವರು ಪ್ರಪಂಚಕ್ಕೆ ನೀಡಿದುದು ಅಪಾರವಾದ ಕಾಣಿಕೆ.