ಧಾರ್ಮಿಕ ಸೇವೆಯ ಜೊತೆ ಜೊತೆಗೆ ಕಲಾ ಸೇವೆಯೂ ನಿರಂತರವಾಗಿ ನಡೆಯುತ್ತಿರಲೆಂಬ ಸದುದ್ದೇಶದಿಂದ ಸುತ್ತೂರು ಮಠದ ಲಿಂಗೈಕ್ಯ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು ೧೯೮೩ ರಲ್ಲಿ ಸ್ಥಾಪಿಸಿದ ಸಂಸ್ಥೆಯೇ ಜೆ. ಎಸ್. ಎಸ್. ಸಂಗೀತ ಸಭಾ. ಈಗಿನ ಗೌರವಾಧ್ಯಕ್ಷರಾಗಿರುವ ಜಗದ್ಗುರು ಶ್ರೀ ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ತಮ್ಮ ಗುರುಗಳ ಆಶಯವನ್ನು ಅನೂಚಾನರಾಗಿ ಪಾಲಿಸಿಕೊಂಡು ಬರುತ್ತಿದ್ದಾರೆ.

ಎರಡು ದಶಕಗಳಿಗೂ ಮೀರಿದ ಈ ಅವಧಿಯಲ್ಲಿ ಸಂಸ್ಥೆ ಕರ್ನಾಟಕ ಶಾಸ್ತ್ರೀಯ ಸಂಗೀತದ ಬೆಳವಣಿಗೆಯ ಪೋಷಣೆಯ ದಿಕ್ಕಿನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು ಹಲವು ವೈವಿಧ್ಯಮಯ ಕಲಾ ಪ್ರಕಾರದ ಕಾರ್ಯಕ್ರಮಗಳನ್ನು ನಡೆಸುತ್ತ ಕಲಾವಿದರ ಹಾಗೂ ಕಲಾರಸಿಕರ ಅಭಿಮಾನ ಗಳಿಸಿದೆ.

ನಮ್ಮ ನಾಡಿನ ಕಲಾವಿದರು ಮಾತ್ರವಲ್ಲದೇ ಅಂತರರಾಷ್ಟ್ರೀಯ ಮಟ್ಟದ ಹೊರ ನಾಡುಗಳ ಕಲಾವಿದರೂ ಪಾಲ್ಗೊಂಡು ಇಲ್ಲಿಯವರೆಗೆ ಈ ಸಭೆಯ ವತಿಯಿಂದ ಐನೂರಕ್ಕೂ ಹೆಚ್ಚು ಕಾರ್ಯಕ್ರಮಗಳು ನಡೆದಿವೆ.

ಕಳೆದ ಹನ್ನೆರಡು ವರ್ಷಗಳಿಂದ ಪ್ರತಿ ವರ್ಷವೂ ಸ್ಥಾಪಕಾಚಾರ್ಯ ಜಗದ್ಗುರುಗಳ ಸಂಸ್ಮರಣೆಯಲ್ಲಿ ಸಂಗೀತ ಸಮ್ಮೇಳನವನ್ನು ನಡೆಸಿ ಸಂಸ್ಥೆ ಸಮ್ಮೇಳನಾಧ್ಯಕ್ಷರಿಗೆ “ಸಂಗೀತ ಕಲಾನಿಧಿ” ಪ್ರಶಸ್ತಿಯೊಡನೆ ಸುವರ್ಣ ಪದಕವನ್ನಿತ್ತು ಗೌರವಿಸುತ್ತ ಬಂದಿದೆ. ಇದೇ ಸಂದರ್ಭದಲ್ಲಿ ಕಲಾವಿದರು. ಕಲಾ ಪೋಷಕರು. ಕಲಾ ಸಂಸ್ಥೆಗಳು ಮತ್ತು ಕಲಾ ವಿಮರ್ಶಕರನ್ನೂ ಆಹ್ವಾನಿಸಿ ಗೌರವಿಸಲಾಗುತ್ತಿದೆ.

ಸಂಗೀತ ತ್ರಿಮೂರ್ತಿಗಳ ಉತ್ಸವ, ಯುವ ಸಂಗೀತೋತ್ಸವ, ಬಾಲ ಪ್ರತಿಭಾ ಉತ್ಸವ, ಮೈಸೂರು ವಾಗ್ಗೇಯಕಾರರ ಉತ್ಸವ, ಶಿವಶರಣರ ಸಂಗೀತೋತ್ಸವ ಮುಂತಾದ ಜನಪ್ರಿಯ ಉತ್ಸವಗಳು ಈ ಸಂಸ್ಥೆಯ ವತಿಯಿಂದ ನಡೆಯುತ್ತಿವೆ. ಸಮ್ಮೇಳನದ ಅಂಗವಾಗಿ ಪ್ರಕಟವಾಗುವ ’ನಾದ ನಮನ’ ಹಲವಾರು ಮೌಲಿಕ ಪುಸ್ತಕಗಳು ಈ ಸಂಸ್ಥೆಯ ಕೊಡುಗೆ. ಪ್ರತಿ ಹುಣ್ಣಿಮೆಯ ದಿನ ಸುತ್ತೂರು ಮಠದ ಮೈಸೂರು ಶಾಖೆಯ ಸುಂದರ ಪರಿಸರದಲ್ಲಿ ನಡೆಯುವ “ಬೆಳದಿಂಗಳ ಸಂಗೀತ” ಒಂದು ಅದ್ಭುತ ಅನುಭವ ಮೂಡಿಸುವ ಪರಿಕಲ್ಪನೆ. ಇಂತಹ ವೈಶಿಷ್ಟ್ಯಪೂರ್ಣ ಕಾರ್ಯಕ್ರಮಗಳನ್ನು ಕಲಾ ರಸಿಕರಿಗೆ ನೀಡುತ್ತಿರುವ ಜೆ.ಎಸ್.ಎಸ್. ಸಂಗೀತ ಸಭಾ ರಾಜ್ಯ ಸಂಗೀತ ನೃತ್ಯ ಅಕಾಡೆಮಿಯ ೨೦೦೪-೦೫ರ ಸಾಲಿನ ವಾರ್ಷಿಕ ಪ್ರಶಸ್ತಿ ಪಡೆದಿದೆ.