(ಕ್ರಿ.ಶ. ೧೮೯೨-೧೯೬೪) (ಜೀವಿಗಳ ಜೀನ್ ರಚನೆ ಮತ್ತು ಗುಣಗಳು)

ವಿಶ್ವವಿಖ್ಯಾತ ತಳಿಶಾಸ್ತ್ರಜ್ಞ ಜೆ.ಬಿ.ಎಸ್. ಹಾಲೆನ್ ೧೮೯೨ರಲ್ಲಿ ಇಂಗ್ಲೆಂಡಿನಲ್ಲಿ ಜನಿಸಿದರು. ಇವರು ಪ್ರತಿಭಾವಂತ ಜೀವವಿಜ್ಞಾನಿ ಮಾತ್ರವೇ ಆಗಿರಲಿಲ್ಲ. ಗಣಿತಶಾಸ್ತ್ರ, ವೈದ್ಯಶಾಸ್ತ್ರ, ತತ್ವಜ್ಞಾನ ಮೊದಲಾದ ಇತರ ಅನೇಕ ಕೆತ್ರಗಳಲ್ಲೂ ಗಣನೀಯವಾಗಿ ಕಾರ್ಯ ಮಾಡಿದ ಒಬ್ಬ ಮಹಾ ವಿಜ್ಞಾನಿ ಕೂಡ ಆಗಿದ್ದರು. ಜೀವವಿಕಾಸ ಕುರಿತಾದ ಸಿದ್ಧಾಂತಕ್ಕೆ ಗಣಿತಶಾಸ್ತ್ರವನ್ನು ಅನ್ವಯಿಸಿರುವುದು ಈ ವಿಜ್ಞಾನಿಯ ಒಂದು ಬಹುಮುಖ್ಯ ಸಾಧನೆ. ಇವರು ಇಂಗ್ಲೆಂಡಿನಲ್ಲಿ ಜನಿಸಿದವರಾದರೂ ತಮ್ಮ ಕೊನೆಯ ದಿನಗಳನ್ನು ಭಾರತದ ಪ್ರಜೆಯಾಗಿ ಭಾರತದಲ್ಲೇ ಕಳೆದರು. ಭಾರತದಲ್ಲಿ ವಿಜ್ಞಾನದ ಅಭಿವೃದ್ಧಿಗಾಗಿ ಶ್ರಮಿಸಿದರು.

ಸಾಮರ್ಥ್ಯವುಳ್ಳ ಜೀವಿ ಪ್ರಭೇದ ಬದುಕಿ ಉಳಿಯುತ್ತದೆ, ಉಳಿದವುಗಳು ನಾಶವಾಗುತ್ತವೆ ಎಂಬುದು ಡಾರ್ವಿನ್ನನ ವಿಕಾಸವಾದದ ತಾತ್ಪರ್ಯ, ‘ನೈಸರ್ಗಿಕ ಆಯ್ಕೆ’ ನಿಯಮವನ್ನು ಕುರಿತು ಅವರು ಹೇಳಿದರು. ಆದರೆ ಜೀವಿಗಳು ಹೇಗೆ ಹುಟ್ಟುತ್ತವೆ? ಅವುಗಳ ವಿಶಿಷ್ಟ ಲಕ್ಷಣಗಳು ಏನು? ಎಂಬ ಬಗ್ಗೆ ಡಾರ್ವಿನ್ ಸಮರ್ಪಕ ಉತ್ತರ ನೀಡಿಲ್ಲ. ಈ ಬಗ್ಗೆ ಗ್ರೆಗೊರ್ ಮೆಂಡೆಲ್ ಅನೇಕ ಪ್ರಯೋಗಗಳನ್ನು ಮಾಡಿ ಸಂಬಂಧಪಟ್ಟ ನಿಯಮಗಳನ್ನು ಕಂಡುಹಿಡಿದಿದ್ದರು. ಜೀನ್ ಕಣಗಳು ಮಾರ್ಪಾಟಿಲ್ಲದೆ ಪೀಳಿಗೆಯಿಂದ ಪೀಳಿಗೆಗೆ ರವಾನಿಸಲ್ಪಡುವುದರಿಂದ ಜೀವಿಯ ಅನುವಂಶಿಕ ಗುಣಗಳು ಬದಲಾವಣೆಯಿಲ್ಲದೆ ಮುಂದಿನ ಪೀಳಿಗೆಗಳಿಗೆ ವರ್ಗಾಯಿಸಲ್ಪಡುತ್ತವೆ ಎಂಬುದನ್ನು ಮೆಂಡೆಲ್ ಕಂಡುಹಿಡಿದರು.

ಜನಸಮುದಾಯಗಳ ಜೀನ್ ರಚನೆ ಮತ್ತು ಗುಣಗಳನ್ನು ಕುರಿತು ಹಾಲೆನ್ ಸ್ವಾರಸ್ಯಕರ ಅಂಶಗಳನ್ನು ಕಂಡು ಹಿಡಿದ್ದಾರೆ. ನೈಸರ್ಗಿಕ ಆಯ್ಕೆ ಜೀನ್ ವಿಕೃತಿಯ ಪರಿಣಾಮವನ್ನು ಸರಿದೂಗಿಸಬಹುದೆಂದು ಇವರು ತೋರಿಸಿಕೊಟ್ಟಿದ್ದಾರೆ.

ಜನಸಮುದಾಯಗಳ ಜೀನ್ ರಚನೆಯಲ್ಲಿ ಆಗಬಹುದಾದ ಬದಲಾವಣೆಗಳ ಬಗ್ಗೆ ಹಾಲೆನ್ ಹಾಕಿದ ಲೆಕ್ಕಾಚಾರಗಳು ಸರಿಯೆಂದು ಈಗ ಕಂಡುಬಂದಿದೆ.

ಮಾನವ ಶರೀರದ ಮೇಲೆ ಆಗುವ ಒತ್ತಡದ ಪರಿಣಾಮಗಳನ್ನು ಕುರಿತು ಪರೀಕ್ಷಿಸಲು ಅವರು ತನ್ನನ್ನು ತಾನೇ ಒಂದು ಪ್ರಯೋಗ ವಸ್ತುವಾಗಿ ಬಳಸಿಕೊಂಡಿದ್ದರು.

ಸೈಟೊಕ್ರೋಮ್ ಆಕ್ಸಿಡೇಸ್ ಎಂಬ ಕಿಣ್ವವನ್ನು (ಎಂಜೈಮ್) ಕಂಡು ಹಿಡಿದದ್ದು ರಾಸಾಯನಿಕ ಕೆತ್ರದಲ್ಲಿನ ಅವರ ಒಂದು ಸಾಧನೆ. ಅಮೋನಿಯಂ ಕ್ಲೋರೈಡ್ ಮನುಷ್ಯನ ಮೇಲೆ ಎಂಥ ಪರಿಣಾಮ ಉಂಟು ಮಾಡುತ್ತದೆ ಎಂಬುದನ್ನು ಕಂಡು ಹಿಡಿಯಲು ಅವರು ಖುದ್ದಾಗಿ ಅದರ ದ್ರಾವಣವನ್ನು ಕುಡಿದಿದ್ದರು.

ಟಿಟನಸ್ ಮತ್ತು ಸೆಳೆತಗಳಿಗೆ ಸೂಕ್ತವಾದ ಚಿಕಿತ್ಸೆಯನ್ನು ಕಂಡು ಹಿಡಿದಿರುವುದು ವೈದ್ಯಕ್ಷೇತ್ರದಲ್ಲಿ ಅವರು ಮಾಡಿದ ಒಂದು ಗಮನಾರ್ಹ ಸಾಧನೆ.

ರಾಜಕೀಯ ಕೆತ್ರದಲ್ಲಿ ಮಾರ್ಕ್ಸವಾದಿ ಆಗಿದ್ದ ಅವರು ಸೂಯೆಜ್ ಕಾಲುವೆ ಬಗ್ಗೆ ಬ್ರಿಟನ್ ತೋರಿದ ವಸಾಹತುಶಾಹಿ ಧೋರಣೆಯನ್ನು ಪ್ರತಿಭಟಿಸಿ ಆ ದೇಶವನ್ನೇ ತೊರೆದು ಭಾರತದಲ್ಲಿ ಬಂದು ನೆಲೆಸಿದರು. ೧೯೫೯ರಲ್ಲಿ ಭಾರತೀಯ ಪೌರತ್ವವನ್ನೂ ಪಡೆದರು.

ಜೆ.ಬಿ.ಎಸ್. ಹಾಲೆನ್ ೧೯೬೪ರಲ್ಲಿ ನಿಧನರಾದರು.