ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಭರತ ಕಲಾನಿಕೇತನ ಸಂಸ್ಥೆಯನ್ನು ನಡೆಸುತ್ತಿರುವ ಶ್ರೀ ಜೆ.ವಿ. ರಮಣಮೂರ್ತಿ ಅವರು ಮುಖ್ಯ ವಾಹಿನಿಯಲ್ಲಿ ಪಡೆಯಬೇಕಾದ ಹೆಸರನ್ನು ಪಡೆಯದೆ ಹಿಂದುಳಿದದ್ದು ಸೋಜಿಗದ ವಿಷಯ. ಹಲವು ದಶಕಗಳ ಹಿಂದೆಯೇ ಬೆಂಗಳೂರಿನಲ್ಲಿ ಕೂಚಿಪುಡಿ ನೃತ್ಯ ಶಿಕ್ಷಣ ನೀಡಲು ಆರಂಭಿಸಿದ ಶ್ರೀಯುತರು ಭರತನಾಟ್ಯವನ್ನೂ ಬಲ್ಲವರು. ತಮ್ಮ ಶಾಲೆಯಲ್ಲಿ ಭರತನಾಟ್ಯ ಮತ್ತು ಕೂಚಿಪುಡಿ ಎರಡೂ ಪದ್ಧತಿಗಳಲ್ಲಿ ಶಿಕ್ಷಣ ನೀಡುತ್ತಾರೆ.

ಶ್ರೀ ಜೆ.ವಿ. ರಮಣಮೂರ್ತಿಯವರು ಕೂಚಿಪುಡಿ ನೃತ್ಯ ಪ್ರಕಾರದಲ್ಲಿ ಶಿಕ್ಷಣ ಪಡೆದಿದ್ದು ಈಗ ಕೂಚಿಪುಡಿ ಪ್ರಕಾರದಲ್ಲಿ ಜೀವಂತ ಇತಿಹಾಸವಾಗಿರುವ ಡಾ. ವೆಂಪಟ್ಟಿ ಚಿನ್ನ ಸತ್ಯಂ ಅವರ ಸಣ್ಣ ವೆಂಪಟ್ಟಿ ಪೆದ್ದ ಸತ್ಯಂ ಅವರ ಬಳಿ. ಜೊತೆಗೆ ರಾಮಯ್ಯ ಪಿಳ್ಳೈ ಅವರ ಮಾರ್ಗದರ್ಶನದಲ್ಲಿ ರಮಣಮೂರ್ತಿ ಭರತನಾಟ್ಯ ಪದ್ಧತಿಯನ್ನೂ ಅಭ್ಯಾಸ ಮಾಡಿದ್ದಾರೆ.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಖ್ಯಾತ ನೃತ್ಯಗುರು ಶ್ರೀಮತಿ ಸುನಂದಾದೇವಿ ಮತ್ತು ಶ್ರೀ ಪಿ.ಸಿ. ಸುಬ್ರಮಣ್ಯ ಅವರೂ ಸೇರಿದಂತೆ ಅವರ ಹಲವಾರು ಶಿಷ್ಯರೂ ಮಾಧ್ಯಮದಲ್ಲಿ ಜನಪ್ರಿಯತೆ ಪಡೆದಿದ್ದರೂ, ಗುರು ರಮಣಮೂರ್ತಿ ಹಿಂದೆಯೇ ಉಳಿದುಬಿಟ್ಟರು.

ಹಲವಾರು ನೃತ್ಯ ರೂಪಕಗಳನ್ನು ರಮಣಮೂರ್ತಿ ಸಂಯೋಜಿಸಿದ್ದಾರೆ. ಜೊತೆಗೆ ದೇಶಾದ್ಯಂತ ನೂರಾರು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಇವರ ಮಾರ್ಗದರ್ಶನದಲ್ಲಿ ಭರತನಾಟ್ಯ ಮತ್ತು ಕೂಚಿಪುಡಿ ಎರಡೂ ಪದ್ಧತಿಗಳಲ್ಲಿ ಕೆಲವು ಯಶಸ್ವೀ ರಂಗಪ್ರವೇಶಗಳಾಗಿವೆ.

ಶ್ರೀ ಜೆ.ವಿ. ರಮಣಮೂರ್ತಿ ಅವರಿಗೆ ೨೦೦೬-೦೭ಸಾಲಿನ ತನ್ನ ವಾರ್ಷಿಕ ಪ್ರಶಸ್ತಿಯನ್ನಿತ್ತು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಗೌರವಿಸಿದೆ.