೧೪-೧-೧೯೩೨ ರಂದು ಕೋಲಾರದಲ್ಲಿ ಜನಿಸಿದ ವೆಂಕಟರಮಣಪ್ಪನವರ ವಿದ್ಯೆ, ವ್ಯಾಸಂಗ, ದುಡಿಮೆ ಎಲ್ಲವೂ ಬೆರಳಚ್ಚುಗಾರರಾಗಿಯೇ. ಮೊದಲಿನಿಂದಲೂ ಸಂಗೀತದಲ್ಲಿ ತೀವ್ರ ಆಸಕ್ತಿ, ಅಭಿರುಚಿ ಬೆಳೆಸಿಕೊಂಡಿದ್ದ ಇವರನ್ನು  ಮನೆಯವರೂ ಪ್ರೋತ್ಸಾಹಿಸಿದರು. ಕೋಲಾರದ ಮೃದಂಗ ವಿದ್ವಾಂಸರಾಗಿದ್ದ ಕೆ.ಪಿ. ನಾರಾಯಣ ಅವರಲ್ಲಿ ಮೃದಂಗ ವಾದನದ ಶಿಕ್ಷಣ ಪಡೆದರು. ಮುಂದೆ ಚೆನ್ನೈನ ದಕ್ಷಿಣಾಮೂರ್ತಿ ಮತ್ತು ಪಾಲ್ಘಾಟ್, ಕೆ.ಯು. ಕೃಷ್ಣಮಣಿ ಅವರಲ್ಲಿ ಉನ್ನತ ಶಿಕ್ಷಣ ಪಡೆದರು. ಹೀಗೆ ಶಿಕ್ಷಣ ಸಾಧನೆಗಳ ಮೂಲಕ ಪರಿಣತರಾದ ವೆಂಕಟರಮಣಪ್ಪ ನಾಡಿನಲ್ಲೂ ಹೊರ ನಾಡಿನ ಹಲವೆಡೆಗಳಲ್ಲೂ ಹೆಸರು ವಾಸಿಯಾದ ವಿದ್ವಾಂಸರಿಗೆ ಪಕ್ಕವಾದ್ಯ ನುಡಿಸಿ ಮೆಚ್ಚುಗೆಗೆ ಪಾತ್ರರಾದರು.

ಸಂಗೀತ ಕಛೇರಿಗಳಿಗೆ ಮಾತ್ರವಲ್ಲದೆ ನಾಟಕ, ಹರಿಕಥೆಗಳಿಗೂ ಪಕ್ಕವಾದ್ಯ ಸಹಕಾರ ನೀಡುವ ಇವರು ಗಾಯನ ಹರಿಕಥೆ ಮಾಡುವುದರಲ್ಲೂ ಸಮರ್ಥರು. ರಾಷ್ಟ್ರೀಯ ಸಂಗೀಥ ನೃತ್ಯೋತ್ಸವ, ಹಂಪಿ ಉತ್ಸವ, ಧರ್ಮಸ್ಥಳದ ಸರ್ವಧರ್ಮ ಸಮ್ಮೇಳನ, ಮುಳಬಾಗಿಲಿನ ಪುರಂದರೋತ್ಸವ ಮುಂತಾದೆಡೆ ಸಕ್ರಿಯವಾಗಿ ಸೇವೆ ಸಲ್ಲಿಸುವ ಇವರ ಪ್ರತಿಭೆ ಬಹುಮುಖವಾದುದು. ಆಕಾಶವಾಣಿಯ ಮೂಲಕವೂ ಇವರ ಕಾರ್ಯಕ್ರಮಗಳು ಪ್ರಸಾರವಾಗುತ್ತವೆ.

ಹಲವಾರು ಸಂಸ್ಥೆಗಳಿಂದ ಸನ್ಮಾನಗಳನ್ನೂ, ಬಿರುದುಗಳನ್ನೂ ಪಡೆದಿರುವ ಇವರ ಸೇವೆಯನ್ನು ಗುರುತಿಸಿ ರಾಜ್ಯ ಸಂಗೀತ ನೃತ್ಯ ಅಕಾಡೆಮಿ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ನೀಡಿ ಸನ್ಮಾನಿಸಿದೆ. ಶ್ರೀಯುತರು ಈಗಲೂ ಸಂಗೀತ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ.