ಜೆ.ಸಿ. ಕುಮಾರಪ್ಪಗಾಂಧೀಜಿಯವರು ತೋರಿಸಿದ ಮಾರ್ಗದಲ್ಲಿ ಅತ್ಯಂತ ಪ್ರಾಮಾಣಿಕವಾಗಿ ನಡೆದ ದೇಶಸೇವಕರು. ವಿದೇಶಗಳಲ್ಲಿ ಅತ್ಯುಚ್ಚ ಶಿಕ್ಷಣ ಪಡೆದ ಕುಮಾರಪ್ಪನವರು ಬಹು ಶ್ರೀಮಂತರಾಗಿ ಬದುಕಬಹುದಾಗಿತ್ತು. ಗಾಂಧೀಜಿಯ ಪ್ರಭಾವಕ್ಕೊಳಗಾಗಿ ಸರಳ ಜೀವನ, ಉದಾತ್ತ ಚಿಂತನದ ಜೀವನವನ್ನು ಆರಿಸಿದರು. ಭಾರತದ ಸ್ವಾತಂತ್ರ ಕ್ಕಾಗಿ ಸೆರೆಮನೆಗೆ ಹೋದರು. ಗ್ರಾಮಗಳಿಗೆ ನ್ಯಾಯವನ್ನು ದೊರಕಿಸಿಕೊಡಲು ಬಾಳನ್ನು  ಮುಡಿಪಾಗಿಟ್ಟರು.

ಜೆ.ಸಿ. ಕುಮಾರಪ್ಪ

ಭಾರತದಲ್ಲಿ ಐದೂವರೆಲಕ್ಷಕ್ಕೂ ಹೆಚ್ಚು ಹಳ್ಳಿಗಳಿವೆ. ನೂರಕ್ಕೆ ಎಂಬತ್ತು ಜನ ವಾಸಮಾಡುವುದು ಅಲ್ಲೇ. ವ್ಯವಸಾಯ ಅವರ ಮುಖ್ಯ ಉದ್ಯೋಗ. ನಮ್ಮ ಬಾಳು, ಬದುಕು, ಸಂಸ್ಕೃತಿ, ಕೃಷಿ, ಕೈಗಾರಿಕೆ, ಶಿಕ್ಷಣ ಎಲ್ಲದರ ಮೂಲ ಗ್ರಾಮಜೀವನ. ಈಗಲೂ ನಮ್ಮ ದೇಶದ ಆಧಾರ ಗ್ರಾಮಗಳೇ. ಕಳೆದ ನೂರುವರ್ಷಗಳಿಂದೀಚೆಗೆ ಪಟ್ಟಣಗಳಲ್ಲಿ ದೊಡ್ಡ ದೊಡ್ಡ ಕಾರ್ಖಾನೆಗಳೂ ಯಂತ್ರಗಳೂ ಬೆಳೆದು ಹಳ್ಳಿಯ ಉದ್ಯೋಗಗಳು ಹಾಳಾದವು. ಜನ ಬಡವರಾದರು. ವ್ಯವಸಾಯ ಒಂದು ಬಿಟ್ಟರೆ ಬೇರೆ ಉದ್ಯೋಗಗಳೇ ಹಳ್ಳಿಯಲ್ಲಿ ಉಳಿಯಲಿಲ್ಲ.

ಭಾರತ ಸ್ವತಂತ್ರವಾಗುವುದಕ್ಕೆ ಮುಂಚೆ ಪಟ್ಟಣಗಳ ಮೂಲಕ ಹಳ್ಳಿಯ ಸಂಪತ್ತೆಲ್ಲ ಇಂಗ್ಲೆಂಡಿಗೆ ಹರಿಯುತ್ತಿತ್ತು. ಆಗ ಇಂಗ್ಲಿಷರು ನಮ್ಮ ದೇಶವನ್ನು ಆಳುತ್ತಿದ್ದರು. ಈಗ ದೊಡ್ಡ ನಗರಗಳಿಗೆ ಹರಿಯುತ್ತಿದೆ. ಹೀಗೆ ನಡೆದರೆ ನಮ್ಮದೇಶದ ಬಹುಪಾಲು ಜನ ಉದ್ಯೋಗವಿಲ್ಲದೆ ಬಡ ಹಳ್ಳಿಗರಾಗಿ ಉಳಿಯುತ್ತಾರೆ. ಹೀಗಾಗಬಾರದು ಎಂದು ನಮ್ಮನ್ನು ಮೊದಲು ಎಚ್ಚರಿಸಿದವರು ಮಹಾತ್ಮ ಗಾಂಧಿ. ‘‘ಹಳ್ಳಿಗಳನ್ನು ಉತ್ತಮಸ್ಥಿತಿಯಲ್ಲಿ ಉಳಿಸಿಕೊಳ್ಳಿ, ಇಂಗ್ಲಿಷ್ ರಾಜ್ಯವನ್ನು ಕೊನೆಗಾಣಿಸಿ’’ ಎಂದರು. ಗಾಂಧಿಯವರ ವಿಚಾರಗಳನ್ನು ಹೇಗೆ ಕಾರ‍್ಯಗತ ಮಾಡುವುದು ಎಂದು ಹೇಳಿಕೊಟ್ಟವರು ಮೇಧಾವಿ ದೇಶಭಕ್ತ ಜೋಸೆಫ್ ಕಾರ್ನಿಲಿಯಸ್ ಕುಮಾರಪ್ಪ. ೧೯೩೦ ರಿಂದ ೧೯೪೮ ರವರೆಗೂ ಗಾಂಧಿಯವರ ಒಡನಾಡಿಯಾಗಿ ಗ್ರಾಮ ಪುನಾರಚನೆಯ ಶಾಸ್ತ್ರವನ್ನೇ ಅವರು ರಚಿಸಿಕೊಟ್ಟಿದ್ದಾರೆ.

ಠಾಕುಠೀಕಿನ ತರುಣ ಸಂತರಾದರು

ಸಾಮಾನ್ಯ ರೈತನ ಗುಡಿಸಲು. ಮಣ್ಣು ತಡಿಕೆಗಳ ಗೋಡೆ, ಸಗಣಿಯಿಂದ ಸಾರಿಸಿದ ನೆಲ, ಸುತ್ತಲೂ ಗ್ರಾಮ ಕೈಗಾರಿಕೆಗಳ ಸಲಕರಣೆಗಳು. ನೇಗಿಲು, ರಾಟೆ,ಗಾಣ, ಚಿಕ್ಕಿ (ಬೀಸುವಕಲ್ಲು), ಕುಂಬಾರನ ಚಕ್ರ, ಬಡಗಿಯ ಉಳಿ, ಕಮ್ಮಾರನ ತಿದಿ, ಚಮ್ಮಾರನ ತೊಗಲು ಇವುಗಳ ಮಧ್ಯೆ ಸದಾ ಕೆಲಸ. ಸದಾ ಶಿಕ್ಷಣ. ಅಲ್ಲೇ ಒಂದು ಚಿಕ್ಕ ಕೋಣೆಯಲ್ಲಿ ಪುಸ್ತಕ ಭಂಡಾರ. ನೆಲದ ಮೇಲೆ ಚಾಪೆ, ಒಂದು ಓಟ ಮೇಜು. ಶುಭ್ರವಾದ ಬಿಳಿ ಖಾದಿ ಉಡುಪು, ಕಚ್ಚೆ ಪಂಚೆಗೂ ಪಾಯಿಜಾಮಕ್ಕೂ ಮಧ್ಯದ ಕಡಿಮೆ ಬಟ್ಟೆಯ ಲಾಡಿಹಾಕಿದ ‘‘ಧೋತಿಜಾಮ’’, ಗ್ರಾಮೀಣ ಚಪ್ಪಲಿ. ಇದು ಕುಮಾರಪ್ಪನವರು ಮೂವತ್ತು ವರ್ಷಗಳು ಬದುಕಿದ ರೀತಿ. ಅತ್ಯುನ್ನತ ಪದವಿಗಳನ್ನು ಪಡೆದ ವಿದ್ವಾಂಸ. ಹೇರಳ ಹಣ ಸಂಪಾದನೆ; ಠಾಕುಠೀಕಿನ ಜೀವನ ನಡೆಸಿದ ತರುಣ ಕುಮಾರಪ್ಪ ಗಾಂಧೀ ಆಶ್ರಮಕ್ಕೆ ಸೇರಿದೊಡನೆ ಸಂತರಾದರು. ಗ್ರಾಮೋದ್ಧಾರಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟರು. ಆದರ್ಶ ಗ್ರಾಮಸ್ಥರಾದರು. ಗಾಂಧೀ ಬಳಗದಲ್ಲಿ ಅವರೊಬ್ಬ ಸೀಮಾಪುರುಷ. ಅಮೂಲ್ಯ ರತ್ನ.

ತಾಯಿಯ ಪ್ರಭಾವ

ಜೆ.ಸಿ.ಕುಮಾರಪ್ಪ ಹುಟ್ಟಿದ್ದು ಮಧ್ಯಮ ವರ್ಗದ ಭಾರತೀಯ ಕ್ರಿಶ್ಚಿಯನ್ ಕುಟುಂಬದಲ್ಲಿ. ೧೮೯೨ರ ಜನವರಿ ನಾಲ್ಕರಂದು. ತಂದೆ ಜೋಸೆಫ್ ಕಾರ್ನಿಲಿಯಸ್ ಮದರಾಸು ಸರ್ಕಾರದ ಲೋಕೋಪಯೋಗಿ ಇಲಾಖೆ ಅಧಿಕಾರಿ. ಅವರ ಮನೆತನದ ಹೆಸರು ಕುಮಾರಪ್ಪ. ತಂಜಾವೂರಿನಲ್ಲಿ ಕೆಲಸ. ಅವರ ದೊಡ್ಡ ಸಂಸಾರದ ಒಂಬತ್ತನೆಯ ಮಗು ‘‘ಚಲ್ಲದೊರೈ’’. ಇಬ್ಬರು ಅಣ್ಣಂದಿರು ಒಬ್ಬ ತಮ್ಮ ಮತ್ತು ಸೋದರಿಯರೊಡನೆ ಬೆಳೆದರು. ಮನೆಮಾತು ತಮಿಳು. ಎಸ್ತರ್ ರಾಜನಾಯಕಮ್ ಈ ತುಂಬು ಸಂಸಾರದ ಪ್ರೇಮಮಯೀ ತಾಯಿ. ಧರ್ಮಭೀರು. ಏಸುಕ್ರಿಸ್ತನ ಬೋಧೆಗಳಲ್ಲಿ ಅಪಾರ ನಿಷ್ಠೆ. ಬಾಳಿನಲ್ಲೂ ಅದರಂತೆ ನಡೆಯುತ್ತಿದ್ದರು. ಆಕೆಯ ಪ್ರಭಾವವನ್ನು ಕುಮಾರಪ್ಪ ಹೀಗೆ ನೆನೆದಿದ್ದಾರೆ:

‘‘ನನ್ನ ತಾಯಿ ಸ್ಕೂಲು ಕಾಲೇಜುಗಳ ಶಿಕ್ಷಣ ಪಡೆದವಳಲ್ಲ. ಆದರೆ ತುಂಬ ಸುಸಂಸ್ಕೃತಳು. ಶ್ರದ್ಧಾವಂತ ಕೆಸ್ತಳು. ತಮಿಳು ಗ್ರಂಥಗಳನ್ನು ಓದಿದ್ದರು. ಸರಳ ಜೀವಿ. ಪರೋಪಕಾರ ಕಾರ‍್ಯಗಳಲ್ಲಿ ಸದಾ ತಲ್ಲೀನರಾಗಿರುತ್ತಿದ್ದರು. ದುಃಖಿತರಿಗೆ ಅಳಿಲು ಸೇವೆಯಾದರೂ ಆಕೆಗೆ ಆನಂದ. ಯಾವ ಧಾರ್ಮಿಕ ಗ್ರಂಥವೂ ಮಾಡಲಾರದಷ್ಟು ಪ್ರಭಾವ ಅವರಿಂದ ನನಗೆ ಆಯಿತು. ನನ್ನ ಹೃದಯವನ್ನು ಹಸನು ಮಾಡಿದ ತಾಯಿ ಅವರು.’’

ಕ್ರಿಸ್ತನ ಮಾತು ಮರೆತಿರಾ?

ಪ್ರಾಣಿಗಳನ್ನು ಕಂಡರೆ ಚಲ್ಲದೊರೆಗೆ ಅಪಾರ ಪ್ರೇಮ. ‘ಬಾತುಗಳನ್ನು ಕೋಳಿ ಸಾಕು’ ಎಂದು ತಾಯಿ ಪ್ರೋತ್ಸಾಹಿಸಿದರು. ಮೊಟ್ಟೆಗಳನ್ನು ಮಾರಿ ಬಂದ ಹಣ ತಾಯಿಯ ದಾನಗಳಿಗೆ ಮೀಸಲು. ಅದರ ಲೆಕ್ಕಪತ್ರಗಳನ್ನೆಲ್ಲ ಚಲ್ಲದೊರೈ ಅಚ್ಚುಕಟ್ಟಾಗಿ ಇಡುತ್ತಿದ್ದ. ಕೆಸ್ತ ಮತ ಸಂಪ್ರದಾಯದಲ್ಲಿ ತನ್ನ ಸಂಪಾದನೆಯ ಹತ್ತನೇ ಒಂದು ಭಾಗವನ್ನು ಧಾರ್ಮಿಕ ಕಾರ‍್ಯಗಳಿಗೆ ಮೀಸಲಾಗಿಡುವುದು ಪದ್ಧತಿ. ಅದನ್ನು ‘‘ಟೈದ್’’ ಎಂದು ಕರೆಯುತ್ತಾರೆ. ತನಗಾಗಿ ಆದಷ್ಟು ಕಡಿಮೆ ವಚ್ಚ, ಇತರರಿಗಾಗಿ ಆದಷ್ಟು ಉದಾರಸಹಾಯ ಎಂದು ಈ ತತ್ವವನ್ನು ಹಿಗ್ಗಿಸಿದರು ಎಸ್ತರ್. ಮಕ್ಕಳು ದೊಡ್ಡವರಾಗಿ ಸಂಪಾದನೆ ಮಾಡುತ್ತಿದ್ದ  ಕಾಲದಲ್ಲೂ ಈ ವೃದ್ಧೆ ಸಾರ್ವಜನಿಕ ಸೇವಾ ಕಾರ‍್ಯಗಳಿಗೆ ಅವರಿಂದ ಆದಷ್ಟು ಹೆಚ್ಚು ಹಣವನ್ನು ಮೀಸಲಾಗಿ ಡಿಸುತ್ತಿದ್ದರು. ಕ್ರಿಸ್ತನ ಬೋಧೆಯನ್ನೇ ಗಾಂಧೀಜಿ ‘‘ಕಾಮಯೇ ದುಃಖತಪ್ತಾನಾಂ ಪ್ರಾಣಿನಾಮ್ ಆರ್ತಿನಾಶನಂ’’ ಎಂದು ದಿನದ ಪ್ರಾರ್ಥನೆಯಲ್ಲಿ ಸೇರಿಸಿದ್ದರು. ಕುಮಾರಪ್ಪ ಈ ಧರ್ಮವನ್ನು ತಿಳಿದುಕೊಂಡಿದ್ದು ತಾಯಿಯ ಶಿಕ್ಷಣದಿಂದ. ಒಂದು ಘಟನೆಯನ್ನು ಅವರು ಹೀಗೆ ವಿವರಿಸಿದ್ದಾರೆ.

‘‘ಒಂದು ಭಾನುವಾರ ಕೊಡೈಕೆನಾಲಿನ ಚರ್ಚಿನಲ್ಲಿ ಪ್ರಾರ್ಥನೆಗೆ ಸೇರಿದ್ದೆವು. ಚೀಣಾದಲ್ಲಿ ದೊಡ್ಡ ಕ್ಷಾಮದಿಂದ ಸಾವಿರಾರು ಜನ ಸಾಯುತ್ತಿದ್ದಾರೆ ಎಂಬ ಸುದ್ದಿ ಬಂದಿತ್ತು. ಮನೆಗೆ ಬಂದು ಒಳ್ಳೆಯ ಊಟ ಹಾಕಿ ನಮ್ಮ ತಾಯಿ ಎಲ್ಲರನ್ನೂ ಒಟ್ಟಿಗೆ ಕರೆದರು. ‘ಚೀಣಾದಲ್ಲಿ ಜನ ಹಸಿವಿನಿಂದ ಸಾಯುತ್ತಿದ್ದಾರೆ. ನಾವಿಲ್ಲಿ ಬಿರಿಯ ಉಂಡು ಮೋಜು ಮಾಡುತ್ತೇವೆ. ಅವರ ಹಸಿವನ್ನಿಂಗಿಸಲು ಪ್ರಯತ್ನಿಸುವ ಕರುಣೆ ನಮಗಿಲ್ಲವೇ? ಕ್ರಿಸ್ತನ ಮಾತು ಮರೆತಿರಾ? ಈ ಚಂದಾ ಪಟ್ಟಿಗೆ ನೀವು ಕೂಡಿಟ್ಟ ಹಣವನ್ನೆಲ್ಲಾ ಬರೆಯಿರಿ’ ಎಂದರು. ನಮಗೆ ನಾಚಿಕೆಯಾಗಿ ಹಾಗೇ ಮಾಡಿದೆವು. ಅಷ್ಟೇ ಅಲ್ಲದೆ ಸ್ವಯಂಸೇವಕರಾಗಿ ಮನೆ ಮನೆಗೆ ಹೋಗಿ ಹಣ ಶೇಖರಿಸಿ ಎಂದರು ತಾಯಿ. ಎಲ್ಲರೂ ಪ್ರಯತ್ನಿಸಿ ಚರ್ಚಿನ ಮೂಲಕ ಚೀಣಾದ ಸಹೋದರರಿಗೆ ಸಹಾಯಧನ ಕಳುಹಿಸಿದೆವು. ಮಾತೃಪ್ರೇಮದ ಅಧಿಕಾರವನ್ನು ತಾಯಿ ನಮ್ಮ ಶಿಕ್ಷಣಕ್ಕೆ ಹೀಗೆ ಉಪಯೋಗಿಸಿದರು. ಇದು ನನಗೆ ಸಿಕ್ಕಿದ ಅಮೂಲ್ಯ ‘ಗೃಹಶಿಕ್ಷಣ’.’’

ವಿದ್ಯಾಭ್ಯಾಸ

ಕಡಲೂರಿನ ಸೇಂಟ್ ಜೋಸೆಫ್ ಶಾಲೆಯ ನಂತರ ಮದರಾಸಿನ ಡೋವ್‌ಟನ್ ಯುರೋಪಿಯನ್ ಸ್ಕೂಲುಗಳಲ್ಲಿ ಓದಿದರು ಕುಮಾರಪ್ಪ. ಆ ವೇಳೆಗೆ ತಂದೆ ಮದ್ರಾಸಿಗೆ ವರ್ಗವಾಗಿ ಬಂದರು. ಮುಂದೆ ಸೇಂಟ್‌ಪಾಲ್ಸ್ ಪ್ರೌಢಶಾಲೆ ಮತ್ತು ವೆಸ್ಲಿನ್ ಮಿಷನ್ ಕಾಲೇಜು ಸೇರಿದರು. ಅತ್ಯುತ್ತಮ ಶಿಕ್ಷಣ ಕೊಡಿಸಬೇಕು ಎಂದು ತಂದೆಯ ಹಂಬಲ. ಪಾಠಗಳಲ್ಲಿ ಮುಂದಿರುವುದಷ್ಟೇ ಅಲ್ಲ, ಸತ್ಯನಿಷ್ಠೆ ಮಾನವೀಯತೆ ಧೈರ‍್ಯ ಸಾಹಸಗಳನ್ನು ತುಂಬಿಕೊಳ್ಳುವ ಹಂಬಲ ಚಲ್ಲ ದೊರೆಯದು.

ಅಣ್ಣಂದಿರಿಬ್ಬರೂ ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಾಕ್ಕೆ ಹೋದರು. ಆಗಿನ್ನೂ ಚಲ್ಲ ದೊರೈ ಶಾಲೆ ಮುಗಿಸಿರಲಿಲ್ಲ. ಅವರಿಬ್ಬರೂ ಹಿಂತಿರುಗಿ ಬಂದು ಸಂಪಾದನೆ ಮಾಡಿ ತಾವು ಶಿಕ್ಷಣಕ್ಕಾಗಿ ಪಡೆದ ಹಣವನ್ನು ತಂದೆಗೆ ಹಿಂದಕ್ಕೆ ಕೊಟ್ಟರು. ಈ ಕರ್ತವ್ಯ ನಿಷ್ಠೆ ಚಲ್ಲ ದೊರೆಗೆ ಪಾಠವಾಯಿತು. ಅನಂತರ ತಂದೆ ಕಾರ್ನಿಲಿಯಸ್ ಚಲ್ಲ ದೊರೆಯನ್ನೂ ಅವರ ತಮ್ಮ ಭರತನ್ ಕುಮಾರಪ್ಪನನ್ನೂ ವಿದೇಶೀ ವ್ಯಾಸಂಗಕ್ಕೆ ಕಳುಹಿಸಿದರು. ೧೯೧೩ರಲ್ಲಿ ಇಂಗ್ಲೆಂಡಿನಲ್ಲಿ ಪ್ರಸಿದ್ಧ ಸಂಸ್ಥೆಯೊಂದರಲ್ಲಿ ಲೆಕ್ಕ ಪತ್ರ ಪರೀಕ್ಷಕ ಶಿಕ್ಷಣ (ಅಕೌಂಟೆನ್ಸಿ) ಕ್ಕೆ ಸೇರಿ ಐದು ವರ್ಷ ಇದ್ದರು. ಗಣಿತಶಾಸ್ತ್ರ ಮತ್ತು ಅರ್ಥಶಾಸ್ತ್ರಗಳಲ್ಲೂ ಪ್ರವೀಣರಾದರು. ಜೊತೆಗೆ ಅಪ್ಪಟ ಫರಂಗಿಯವರಂತೆ ಆದರು. ಇಂಗ್ಲೆಂಡಿನ ಕಂಪೆನಿ ತನ್ನಲ್ಲೇ ಕೆಲಸ ಕೊಡುತ್ತೇನೆಂದು ಹೇಳಿತು. ತಂದೆಗೆ ಇಚ್ಛೆಯಿರಲಿಲ್ಲ. ತಾಯಿಗಂತೂ ತನ್ನ ಮಗ ಭಾರತಕ್ಕೆ ಹಿಂತಿರುಗುವುದೇ ಇಲ್ಲವೇನೋ ಎಂಬ ಭಯ. ‘ಅವನನ್ನು ಹಿಂತಿರುಗಿ ಕಳುಹಿಸಿ’ ಎಂದು ಆ ಕಂಪೆನಿಗೇ ಬರೆದರು; ಪದವೀಧರ ಜೆ.ಸಿ.ಕುಮಾರಪ್ಪ ಹಿಂತಿರುಗಿದರು. ಮುಂಬಯಿಯಲ್ಲಿ ದೊಡ್ಡ ಅಕೌಂಟೆಂಟ್ ಆದರು. ಧಾವರ‍್ಸ್ ಕಾಲೇಜ್ ಆಫ್ ಕಾಮರ್ಸ್‌ನಲ್ಲಿ ಪಾಠ ಹೇಳಿದರು. ಸಂಪಾದನೆಯಲ್ಲೂ ಮುಂದಾದರು. ಆದರೆ ಇನ್ನೂ ಹೆಚ್ಚು ವ್ಯಾಸಂಗ ಮಾಡಬೇಕೆಂಬ ಹಂಬಲವೂ ಇತ್ತು.

ಭಾರತದ ಹಳ್ಳಿಗಳ ಅಧ್ಯಯನ

೧೯೨೭ರಲ್ಲಿ ಅಣ್ಣ ಜಗದೀಶ್ ಮೋಹನದಾಸ ಕುಮಾರಪ್ಪ ಅಮೆರಿಕದ ಕೊಲಂಬಿಯ ವಿಶ್ವ ವಿದ್ಯಾನಿಲಯದಲ್ಲಿದ್ದರು. (ಜೆ.ಎಂ.ಕುಮಾರಪ್ಪ ಕೆಲವು ಕಾಲ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ ದ್ದವರು.) ಅಮೆರಿಕಕ್ಕೆ ಬಾ ಎಂದು ತಮ್ಮನನ್ನು ಆಹ್ವಾನಿಸಿದರು. ಸುಮ್ಮನೆ ನೋಡಲೆಂದು ಅಮೆರಿಕಕ್ಕೆ ಹೋದರು ಜೆ.ಸಿ.ಕುಮಾರಪ್ಪ. ಆದರೆ ಮತ್ತೆ ಕಾಲೇಜು ಸೇರಿದರು. ಸಿರಾಕ್ಯೂಸ್ ವಿಶ್ವವಿದ್ಯಾನಿಲಯದಲ್ಲಿ ಸಾರ್ವಜನಿಕ ಆಡಳಿತ (ಪಬ್ಬಿಕ್ ಅಡ್ಮಿನಿಸ್ಟ್ರೇಷನ್) ದಲ್ಲಿ ಬಿ.ಎಸ್‌ಸಿ. ಪದವಿ ಪಡೆದರು. ಕೊಲಂಬಿಯಾಗೆ ಹೋಗಿ ಡಾಕ್ಟರ್ ವಿಲಿಯಮ್ ಪೆಕ್ ಎಂಬ ಪ್ರಸಿದ್ಧ ವಿದ್ವಾಂಸರಲ್ಲಿ ಸಾರ್ವಜನಿಕ ಹಣಕಾಸು ವಿಷಯ ವ್ಯಾಸಂಗ ಮಾಡಿದರು. ಭಾರತದ ಹಣಕಾಸಿನ ಸ್ಥಿತಿಯನ್ನು ಆಳವಾಗಿ ಅಭ್ಯಾಸ ಮಾಡಿ ‘‘ಭಾರತದ ಬಡತನ ಹಾಗೂ ಅದರ ಹಣಕಾಸು ವ್ಯವಸ್ಥೆ’’ ಎಂಬ ಉತ್ಕೃಷ್ಟ ಪ್ರಬಂಧ ಸಿದ್ಧಮಾಡಿದರು. ಚಲ್ಲದೊರೆಯ ತೀಕ್ಷ ಬುದ್ಧಿ ಆಳವಾದ ಜ್ಞಾನಗಳು ಬೆಳಕಿಗೆ ಬಂದವು. ಅಷ್ಟೇ ಅಲ್ಲ, ತನ್ನ ದೇಶ ಅದೆಷ್ಟು ಬಡತನದಲ್ಲಿ ಮುಳುಗಿದೆ, ಅದೆಂತಹ ಹೀನಸ್ಥಿತಿಯಲ್ಲಿದೆ, ಬ್ರಿಟಿಷರು ಹಳ್ಳಿಗಳ ಸಂಪತ್ತನ್ನು ಹೇಗೆ ದೋಚುತ್ತಿದ್ದಾರೆ ಎಂಬುದೆಲ್ಲ ತಿಳಿಯಿತು. ಭಾರತದ ಸೇವೆಯೇ ನನ್ನ ಪ್ರಥಮ ಕರ್ತವ್ಯ ಎಂದು ಸಂಕಲ್ಪ ಮಾಡಿಕೊಂಡರು ಚಲ್ಲ ದೊರೆ.

ಹಿಂತಿರುಗಿ ಬಂದೊಡನೆ ಜೋಸೆಫ್ ಚಲ್ಲದೊರೆ ತಮ್ಮ ಭಾರತೀಯ ಹೆಸರನ್ನು ಮಾತ್ರ ಇಟ್ಟುಕೊಂಡರು. ಅಲ್ಲಿಂದಾಚೆ ಅವರು ಪ್ರೊಫೆಸರ್ ಜೆ.ಸಿ.ಕುಮಾರಪ್ಪ ಎಂದೇ ಪ್ರಸಿದ್ಧರಾದರು. ಜನಸೇವೆಗೆ ಹೇಗೆ ತೊಡಗುವುದು ಎಂದು ಈ ಪ್ರಸಿದ್ಧ ವಿದ್ವಾಂಸನಿಗೆ ಹೊಳೆದಿರಲಿಲ್ಲ. ಆ ಸಮಯಕ್ಕೆ ಮಹಾತ್ಮ ಗಾಂಧಿಯವರನ್ನು ಕಂಡು ತಾವು ಬರೆದಿದ್ದ ಪ್ರಸಿದ್ಧ ಪ್ರಬಂಧ ತೋರಿಸಬೇಕು ಎಂದು ಆಸೆಯಾಯಿತು. ಅವರ ಬಾಳು ಹೊಸ ದಾರಿ ಹುಡುಕುತ್ತಿತ್ತು.

ಗಾಂಧೀಜಿಗೆ ಪ್ರಬಂಧ

೧೯೨೯ ರ ವೇಳೆಗೆ ಗಾಂಧೀಜಿ ಭಾರತದ ಮಹಾ ನಾಯಕ. ಈ ದೇಶದ ಬಡಜನತೆಯ ಪ್ರತಿನಿಧಿ. ಬ್ರಿಟಿಷರ ಆಳ್ವಿಕೆ ಇಲ್ಲಿಂದ ತೊಲಗಬೇಕು ಎಂದು ಅಹಿಂಸಕ ಸಮರ ಹೂಡಿದ್ದರು. ಅವರ ಜೀವನ, ಚಿಂತನ, ಅಧ್ಯಯನ ಗಮನ ಎಲ್ಲವೂ ಗ್ರಾಮಾಭಿಮುಖ. ಅಹಮದಾಬಾದಿನ ಬಳಿ ಸಬರಮತಿ ಆಶ್ರಮದಲ್ಲಿ ನೆಲೆಸಿದ್ದರು. ಒಮ್ಮೆಮುಂಬಯಿಗೆ ಬಂದಾಗ ಕುಮಾರಪ್ಪ ಗಾಂಧಿಯವರನ್ನು ಭೇಟಿಯಾಗಲು ಬಂದರು. ವಿದೇಶೀ ಪದವಿ ಪಡೆದ ಈ ಶ್ರೀಮಂತ ಠಾಕುಠೀಕಿನ ತರುಣ ಎಲ್ಲಿ? ತುಂಡು ಪಂಚೆಯ ಬೈರಾಗಿ ಗಾಂಧಿ ಎಲ್ಲಿ? ಧೈರ‍್ಯಮಾಡಿ ಅವರಿಳಿದುಕೊಂಡಿದ್ದ ಮಣಿಭವನಕ್ಕೆ ಹೋದರು. ಆದರೆ ರಾಷ್ಟ್ರನಾಯಕರ ಸಭೆಯಲ್ಲಿದ್ದ ಗಾಂಧೀಜಿಯನ್ನು ಕಾಣಲಾಗಲಿಲ್ಲ. ಕಾರ‍್ಯದರ್ಶಿ ಪ್ಯಾರೇಲಾಲರನ್ನು ಕಂಡು ತಮ್ಮ ಪ್ರಬಂಧವನ್ನು ಗಾಂಧೀಜಿಗೆ ತೋರಿಸಿ ಎಂದು ಕೇಳಿಕೊಂಡರು. ತಮ್ಮ ವಿಳಾಸದ ಕಾರ್ಡನ್ನು ಬಿಟ್ಟು ಹಿಂತಿರುಗಿದರು. ಅಷ್ಟು ದೊಡ್ಡ ಜವಾಬ್ದಾರಿ ಹೊತ್ತ ರಾಷ್ಟ್ರನಾಯಕನಿಗೆ ತನ್ನ ಪ್ರಬಂಧ ನೋಡುವ ಇಚ್ಛೆಯಾಗಲೀ ಸಮಯವಾಗಲೀ ಇರಲಾರದು ಎಂದುಕೊಂಡರು ಕುಮಾರಪ್ಪ. ಆದರೆ ‘‘ಭಾರತದ ಬಡತನ ಏಕೆ?’ ಎಂದು ಬರೆದ ಬರಹ ಗಾಂಧೀಜಿಯನ್ನೂ ಆಕರ್ಷಿಸಿತು. ಕೂಡಲೇ ಪ್ಯಾರೇಲಾಲರು ಕುಮಾರಪ್ಪನವರಿಗೆ ಫೋನ್ ಮೂಲಕ ತಿಳಿಸಿದರು, ‘೧೯೨೯ರ ಮೇ ೯ ರಂದು ಮಧ್ಯಾಹ್ನ ೨.೩೦ ಕ್ಕೆ ಸಬರಮತಿಗೆ ಬಂದು ಗಾಂಧಿಯವರನ್ನು ಭೇಟಿಯಾಗಬೇಕು’. ಇದನ್ನು ಕೇಳಿದ ಕುಮಾರಪ್ಪ ಕುಣಿದಾಡಿಬಿಟ್ಟರು. ಇಷ್ಟು ಸರಳವಾಗಿ ಇಂಥ ಚಿಕ್ಕವನಿಗೆ ಗಾಂಧೀಜಿ ತೋರಿದ ಗೌರವ ಕಂಡು ಬೆರಗಾದರು.

ಗಾಂಧೀ ಪ್ರಭಾವದ ಮೋಡಿ

ಸಮಯಕ್ಕೆ ಸರಿಯಾಗಿ ಸಬರಮತಿ ತಲುಪಿದರು ಕುಮಾರಪ್ಪ. ಅಚ್ಚುಕಟ್ಟಿನ ಸಿಲ್ಕ್ ಸೂಟು, ಕೈಯಲ್ಲಿ ಬೆತ್ತ, ಇಂಗ್ಲಿಷರಂತೆಯೇ ನಡೆನುಡಿ, ಶ್ರೀಮಂತಿಕೆಯ ಒಣ ಠೀವಿಯೂ ಇತ್ತು. ಆಶ್ರಮದ ಅತಿಥಿಗೃಹ ಸರಳವಾಗಿತ್ತು. ನೆಲದ ಮೇಲೆ ಒಂದು ಚಾಪೆ. ನವೀನ ಸಲಕರಣೆಗಳಿಲ್ಲದ ಸಾದಾ ಬಚ್ಚಲುಮನೆ. ಇದನ್ನು ಕಂಡು ಇಲ್ಲಿ ತಂಗುವುದು ಹೇಗೆ? ಎಂದುಕೊಂಡರು ಕುಮಾರಪ್ಪ. ಆದಷ್ಟು ಬೇಗ ಹೊರಟುಬಿಡಬೇಕು ಎಂದು ನಿಶ್ಚಯಿಸಿಕೊಂಡರು. ತಮ್ಮ ಕೈಪೆಟ್ಟಿಗೆ ಅಲ್ಲಿಟ್ಟು ನೇರವಾಗಿ ಗಾಂಧೀಜಿ ಭೇಟಿಗೆ ಹೋದರು. ಗುರುಶಿಷ್ಯರ ಈ ಮೊದಲ ಭೇಟಿಯ ವರ್ಣನೆ ಅವರ ಮಾತುಗಳಲ್ಲೇ ಕೇಳಬೇಕು:

‘‘ಆಶ್ರಮದ ಮರದ ಕೆಳಗೆ ಒಂದು ಕಟ್ಟೆ. ಸಗಣಿಯಿಂದ ಸ್ವಚ್ಛವಾಗಿ ಸಾರಿಸಿದ ನೆಲ. ಅಲ್ಲೇ ಕುಳಿತು ಚರಕದಿಂದ ನೂಲುತ್ತಿದ್ದ ಒಬ್ಬ ಮುದುಕ. ಅರೆ ಬೆತ್ತಲೆ. ನನಗೆ ಕುತೂಹಲವಾಯಿತು. ನಾನೆಂದೂ ಚರಕ ನೋಡಿರಲಿಲ್ಲ. ಭೇಟಿಗೆ ಇನ್ನೂ ಹತ್ತು ನಿಮಿಷ ಸಮಯ ಇತ್ತು. ಆ ಮುದುಕ ನನ್ನನ್ನು ಗಮನಿಸಲಿಲ್ಲ. ನನ್ನ ಕೈಗೋಲಿನ ಮೇಲೆ ಮುಂದಕ್ಕೆ ಬಾಗಿ ಬಿರುಗಣ್ಣಿನಿಂದ ನೋಡುತ್ತಾ ನಿಂತೆ. ಐದು ನಿಮಿಷ ಆಯಿತು. ಆತ ತನ್ನ ಸೊಂಟದ ಗಡಿಯಾರ ನೋಡಿ ಕತ್ತೆತ್ತಿದರು. ಮಂದಹಾಸದಿಂದ ‘ನೀವೇ ಕುಮಾರಪ್ಪನೇ?’’ ಎಂದರು. ಅಲ್ಲಿಯವರೆಗೆ ನಾನು ನೋಡಲು ಬಂದ ಗಾಂಧೀ ಇವರೇ ಇರಬಹುದೇ ಎಂಬ ಕಲ್ಪನೆ ಕೂಡ ಇರಲಿಲ್ಲ. ಆ ಕ್ಷಣ ಮಿಂಚಿತು. ‘‘ನೀವೇ ಗಾಂಧಿಯವರೇ?’’ ಎಂದೆ. ಅವರು ತಲೆಯಾಡಿಸಿದರು. ತಕ್ಷಣ ನನ್ನ ಸೂಟನ್ನೂ ಗಮನಿಸದೆ ನೆಲದ ಮೇಲೆ ಕುಳಿತೆ. ಕಾಲು ಮಡಿಸಿ ಕೂರಲಾಗಲಿಲ್ಲ. ಕಾಲುಗಳನ್ನು ಹೊರಕ್ಕೆ ಚಾಚಿ ಪಕ್ಕಕ್ಕೆ ಕುಳಿತೆ. ಇದನ್ನು ಕಂಡ ಒಬ್ಬ ಆಶ್ರಮವಾಸಿ ಕಾಲುಮಣೆಯೊಡನೆ ಓಡಿಬಂದರು. ‘‘ಮೇಲೆಯೇ ಕುಳಿತುಕೊಳ್ಳಿ’’ ಎಂದರು ಗಾಂಧೀ. ‘‘ನೀವು ಕೆಳಗೆ ಕುಳಿತಿದ್ದೀರಿ, ನಾನು ಮೇಲೆ ಕೂರಲಾರೆ’’  ಎಂದೆ. ಮಾತು ಪ್ರಾರಂಭವಾಯಿತು. ‘‘ನಾನು ನಿಮ್ಮ ಪ್ರಬಂಧ ಓದಿದ್ದೇನೆ, ತುಂಬ ಚೆನ್ನಾಗಿದೆ’ ಎಂದರು. ನನಗೆ ಸ್ವರ್ಗವೇ ಸಿಕ್ಕಂತಾಯಿತು. ನಂತರ ಕಣ್ಣಿನಂಚಿನ ತುಂಟನೋಟದಿಂದ ‘‘ನೀವು ಗುಜರಾತ್ ವಿದ್ಯಾಪೀಠದ ಉಪಕುಲಪತಿಗಳನ್ನು ನೋಡಿ ಮಾತನಾಡಿ. ಅವರಾರು ಗೊತ್ತೇ? ಇದೀಗ ಕಾಲುಮಣೆ ತಂದಿದ್ದ ಮಹನೀಯರು. ಅವರು ಹೆಸರು ಕಾಕಾ ಕಾಲೇಲ್ಕರ್’’ ಎಂದರು.’’

ಈ ನಡೆ ನುಡಿಗಳ ಆತ್ಮೀಯತೆ ಕುಮಾರಪ್ಪನವರನ್ನು ಸೂರೆಗೊಂಡಿತು. ಅವರ ಸ್ವಪ್ರತಿಷ್ಠೆಯ ಹೆಮ್ಮೆ ಕೊಚ್ಚಿಹೋಯಿತು. ಈ ಮಹಾನುಭಾವನ ನೆರಳಲ್ಲೇ ನಾನು ಕೆಲಸ ಮಾಡಬೇಕು ಎಂದುಕೊಂಡರು. ಅಲ್ಲಿಂದಾಚೆ ಅವರ ಜೀವನದ ರೀತಿಯೇ ಬದಲಾಗಿಬಿಟ್ಟಿತು.

ಕುಮಾರಪ್ಪನವರ ವಿಚಾರಗಳೂ ಗಾಂಧೀಜಿಯದೂ ಅರ್ಥಶಾಸ್ತ್ರದ ವಿಷಯದಲ್ಲಿ ಒಂದೇ ಆಗಿದ್ದವು. ಭಾರತದ ಹಳ್ಳಿಗಳ ಅಧ್ಯಯನವೇ ಮುಖ್ಯ ಎಂದು  ಇಬ್ಬರೂ ಮನಗಂಡಿದ್ದರು. ‘‘ನೀವು ನಮ್ಮ ಹಳ್ಳಿಗಳ ಕೂಲಂಕಷ ಸಮೀಕ್ಷೆ ನಡೆಸಿಕೊಡಿ’’ ಎಂದು ಕೇಳಿದರು ಗಾಂಧೀಜಿ. ಕಾಕಾ ಕಾಲೇಲ್ಕರರಿಗೆ ಕುಮಾರಪ್ಪನವರ ವೇಷಭೂಷಣ ಗಳನ್ನೂ ಇಂಗ್ಲಿಷ್ ಮಾದರಿಯ ನಡೆಯನ್ನೂ ಕಂಡು ಅವರು ಹಳ್ಳಿಗಳಲ್ಲೇನು ಮಾಡಿಯಾರು’? ಎಂದು ಸಂಶಯ ಬಂತು. ಅಲ್ಲದೆ ಹಳ್ಳಿಗರ ಭಾಷೆ ಗುಜರಾತಿ. ಇದವರಿಗೆ ಬರುವುದಿಲ್ಲ ಎಂದರು. ಇದನ್ನು ಕೇಳಿ ಕುಮಾರಪ್ಪ ಮುಂಬಯಿಗೆ ಹಿಂತಿರುಗಿಬಿಟ್ಟರು. ಗಾಂಧೀಜಿಯ ಪತ್ರಬಂತು. ಕೂಡಲೇ ಸಬರಮತಿಗೆ ಬಂದು ಗ್ರಾಮ ಸಮೀಕ್ಷೆ ಕೈಕೊಳ್ಳಬೇಕೆಂದು ಒತ್ತಾಯ ಮಾಡಿದ್ದರು. ಕಾಲೇಲ್ಕರರ ಅಡ್ಡಿಗಳನ್ನವರು ಪುರಸ್ಕರಿಸಲೇ ಇಲ್ಲ. ಕುಮಾರಪ್ಪನವರ ಸಾಮರ್ಥ್ಯದಲ್ಲಿ ಗಾಂಧೀಜಿಗೆ ಅಪಾರ ಭರವಸೆ ಮೂಡಿತ್ತು. ಕುಮಾರಪ್ಪ ಹಿಂತಿರುಗಿ ವಿದ್ಯಾಪೀಠ ಸೇರಿದರು.

ಯಂಗ್ ಇಂಡಿಯಾ

೧೯೩೦ ರಲ್ಲಿ ಗಾಂಧೀಜಿ ತಮ್ಮ ಪ್ರಖ್ಯಾತ ದಂಡಿ ಯಾತ್ರೆಗೆ ಹೊರಟರು. ಉಪ್ಪಿನ ಸತ್ಯಾಗ್ರಹ ಘೋಷಿಸಿದ್ದರು. ಆ ಸಮಯಕ್ಕೆ ತಮ್ಮ ವಾರಪತ್ರಿಕೆ ‘ಯಂಗ್ ಇಂಡಿಯಾ’ ವನ್ನು ಕುಮಾರಪ್ಪನವರಿಗೆ ವಹಿಸಿದರು. ಮಹದೇವ ದೇಸಾಯಿ ಅವರೂ ಬಂಧಿತರಾಗಿದ್ದರು. ಆಶ್ರಮಕ್ಕೆ ಕೇವಲ ಒಂದು ವರ್ಷದ ಕೆಳಗೆ ಬಂದ ತಮಿಳುನಾಡಿನ ಈ ಕ್ರಿಶ್ಚಿಯನ್ ಆಧುನಿಕ ತರುಣನಿಗೆ ಪತ್ರಿಕೆ ವಹಿಸಿದ್ದನ್ನು ಕಂಡು ಲೋಕವೇ ಚಕಿತವಾಯಿತು. ಮೊದಲನೇ ಸಂಚಿಕೆಯಲ್ಲೇ ಕುಮಾರಪ್ಪನವರ ಪ್ರಖರ ಲೇಖನ ಸತ್ಯಾಗ್ರಹಿಗಳಿಗೆ ಅಗಾಧ ಸ್ಫೂರ್ತಿ ಕೊಟ್ಟಿತು. ಹಿಂದೆಯೇ ಗಾಂಧೀಜಿ ಕುಮಾರಪ್ಪ ನವರ ‘‘ಸಾರ್ವಜನಿಕ ಹಣಕಾಸು ಮತ್ತು ನಮ್ಮ ಬಡತನ’’ ಪ್ರಬಂಧವನ್ನು ‘ಯಂಗ್ ಇಂಡಿಯಾ’ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಿಸಿ ಓದುಗರಿಗೆ ತಾನೇ ಅವರ ಪರಿಚಯ ಮಾಡಿದ್ದರು. ಮುಂದೆ ಅದು ಪುಸ್ತಕವಾಯಿತು. ಗಾಂಧಿಜಿಯೇ ಮುನ್ನುಡಿ ಬರೆದರು. ಗ್ರಾಮ ಸಮೀಕ್ಷೆ ಕೈಗೊಂಡು ಕುಮಾರಪ್ಪ ಗುಜರಾತಿನ ಮಾಥರ್ ತಾಲ್ಲೂಕಿನ ಹಳ್ಳಿಗಳ ಸ್ಥಿತಿಯನ್ನು ನಿಖರವಾಗಿ ದೇಶದ ಮುಂದಿಟ್ಟರು. ಬ್ರಿಟಿಷ್ ಸರ್ಕಾರದ ಅನೀತಿ ಕ್ರಮಗಳಿಂದ ನಮ್ಮ ಸ್ಥಿತಿ ಹೇಗೆ ಅಧೋಗತಿಗಿಳಿದಿದೆ ಎಂದು ಅಂಕಿ ಅಂಶಗಳಿಂದ ತೋರಿಸಿಕೊಟ್ಟರು. ಭಾರತ ದೇಶ ಸ್ವತಂತ್ರವಾಗದೆ ಇದು ಸರಿಹೋಗದು ಎಂದು ಎಲ್ಲರಿಗೂ ಅರಿವಾಯಿತು. ಜನತೆಯ ಅಂತಃಕರಣವನ್ನು ಕಲಕಿತು. ಬ್ರಿಟಿಷರ ಕುರುಡು ಬೆಂಬಲಿಗರ ಮತ್ತು ಅನೇಕ ವಿದ್ಯಾವಂತರ ಕಣ್ಣು ತೆರೆಸಿತು.

ಸತ್ಯಾಗ್ರಹಿಯಾಗಿ

ಯಂಗ್ ಇಂಡಿಯಾ ಪತ್ರಿಕೆಯಲ್ಲಿ ವಿದೇಶೀ ಸರ್ಕಾರವನ್ನು ಕುಮಾರಪ್ಪ ನಿರ್ಭಯವಾಗಿ ಟೀಕಿಸುತ್ತಿದ್ದರು. ಜನತೆಯನ್ನು ಹುರಿದುಂಬಿಸಿ ಸತ್ಯಾಗ್ರಹವನ್ನು ಬೆಂಬಲಿಸುತ್ತಿದ್ದರು. ಉಪ್ಪಿನ ಸತ್ಯಾಗ್ರಹದಲ್ಲಿ ಶಸ್ತ್ರ ಸಜ್ಜಿತ ಸರ್ಕಾರದ ಕ್ರೂರ ದಬ್ಬಾಳಿಕೆಯನ್ನು ಖಂಡಿಸಿ ಬರೆದರು. ಭಾರತದ ಕೆಸ್ತ ಜನಾಂಗ ತಾವು ವಿದೇಶೀಯರೆಂದು ಭಾವಿಸದೆ ಭಾರತದ ಸ್ವಾತಂತ್ರ  ಸಂಗ್ರಾಮದಲ್ಲಿ ಪಾಲ್ಗೊಳ್ಳಬೇಕು ಎಂದರು. ಗಾಂಧೀಜಿಯದು ಅಹಿಂಸೆ ಮತ್ತು ಸತ್ಯ ಮಾರ್ಗ. ಅವರು ಏಸುಕ್ರಿಸ್ತನ ನಿಜವಾದ ಪ್ರತಿರೂಪ. ನಿಷ್ಠಾವಂತ ಕೆಸ್ತರಿಗೆ ಅವರನ್ನನುಸರಿಸುವುದೇ ಧರ್ಮ. ಹಿಂಸಾಮಾರ್ಗ ಹಿಡಿದು ಕ್ರೂರ ಯುದ್ಧಗಳಲ್ಲಿ ತೊಡಗಿರುವ ಪಾಶ್ಚಾತ್ಯ ಕ್ರಿಶ್ಚಿಯನ್ ರಾಷ್ಟ್ರಗಳು ಧರ್ಮಕ್ಕೆ ದ್ರೋಹ ಬಗೆದಿವೆ. ಭಾರತದ್ದು ಪ್ರೇಮ ಮಾರ್ಗ, ಮಾನವೀಯ ಮಾರ್ಗ, ಅದನ್ನು ಅರ್ಥ ಮಾಡಿಕೊಳ್ಳಿ ಎಂದು ಕುಮಾರಪ್ಪ ಪ್ರಭಾವಯುತವಾಗಿ ಬರೆದರು. ಅಧಿಕಾರಿಗಳಿಗೆ ನಿರ್ಭಯರಾಗಿ ಎಚ್ಚರಿಕೆ ಕೊಟ್ಟರು. ‘‘ಭಾರತದ ಬ್ರಿಟಿಷ್ ಅಧಿಕಾರಿಗಳು ಸವಿನಯ ಸೇವಕರಲ್ಲ, ಅನಾಗರಿಕ ಆಳುಗಳು’’ ಎಂದು ಬರೆದರು. ಇಂಥ ಬರಹಗಳಿಂದ ಬ್ರಿಟಿಷರು ಕೆರಳಿದರು. ‘‘ಜನರನ್ನು ದಂಗೆ ಏಳಲು ಪ್ರೇರೇಪಿಸುತ್ತಿದ್ದೀರಿ’’ ಎಂದು ಆಪಾದಿಸಿ ಬ್ರಿಟಿಷ್ ನ್ಯಾಯಾಲಯ ೧೯೩೧ರಲ್ಲಿ ಕುಮಾರಪ್ಪನವರಿಗೆ ಒಂದೂವರೆ ವರ್ಷ ಕಠಿಣ ಸಜಾ ವಿಧಿಸಿ ಜೈಲಿಗೆ ಹಾಕಿತು. ಕೋರ್ಟಿನಲ್ಲಿ ಕುಮಾರಪ್ಪ ನ್ಯಾಯಾಧೀಶರಿಗೆ ಉತ್ತರ ಕೊಟ್ಟರು. ‘‘ದಾಸ್ಯದಲ್ಲಿರುವ ಭಾರತದ ಜನ ಅಗತ್ಯವಾಗಿ ನಿರ್ಭಯವಾಗಿ ವಿದೇಶೀ ಆಳ್ವಿಕೆಯನ್ನು ಪ್ರತಿಭಟಿಸಲೇಬೇಕು. ದಬ್ಬಾಳಿಕೆಗೆ ಹೆದರಬಾರದು. ಅದೇ ಸತ್ಯಾಗ್ರಹ ತತ್ವ. ಅಹಿಂಸೆಯಿಂದ ನಡೆಯುವ ಮಾರ್ಗವೇ ಸರಿ. ಅದರಂತೆ ಸಂತೋಷದಿಂದ ಶಿಕ್ಷೆ ಅನುಭವಿಸುತ್ತೇನೆ’ ಅಂದರು. ಈ ಕೆಚ್ಚೆದೆಯ ವೀರನ ಮಾತಿಗೆ ನ್ಯಾಯಾಧೀಶರು ತಲೆ ತಗ್ಗಿಸಿದರು. ಸ್ವಾತಂತ್ರ ಸಂಗ್ರಾಮದಲ್ಲಿ ಕುಮಾರಪ್ಪ ಅಮೋಘ ಪಾತ್ರ ವಹಿಸಿದರು.

ಗಾಂಧೀ-ಇರ್ವಿನ್ ಒಪ್ಪಂದವಾಯಿತು. ಕುಮಾರಪ್ಪ ಅವಧಿಗೆ ಮುಂಚೆ ಬಿಡುಗಡೆಯಾದರು. ಆ ವರ್ಷ ಕರಾಚಿಯಲ್ಲಿ ಕಾಂಗ್ರೆಸ್ ಅಧಿವೇಶನ ನಡೆಯಿತು. ಭಾರತ ಇಂಗ್ಲೆಂಡ್ ಮಧ್ಯದ ಹಣಕಾಸು ವ್ಯವಹಾರವನ್ನು ವಿಮರ್ಶಿಸಲು ಒಂದು ತಜ್ಞರ ಸಮಿತಿ ನೇಮಿಸಿದರು. ಅದಕ್ಕೆ ಕುಮಾರಪ್ಪ ಅಧ್ಯಕ್ಷರು. ‘‘ಪ್ರೊಫೆಸರ್ ಕುಮಾರಪ್ಪ ಅತ್ಯಂತ ಯೋಗ್ಯ ವಿದ್ವಾಂಸರು ಅರ್ಥಶಾಸ್ತ್ರ ತಜ್ಞರು. ಅವರು ದಕ್ಷ ಕೆಲಸಗಾರರು’’ ಎಂದರು ಗಾಂಧೀಜಿ. ಆ ಸಮಿತಿ ಯಶಸ್ವಿಯಾಗಿ ಕೆಲಸ ಮಾಡಿತು. ಈಸ್ಟ್ ಇಂಡಿಯಾ ಕಂಪೆನಿ ಎಂಬ ವ್ಯಾಪಾರೀ ಸಂಸ್ಥೆಯ ಮೂಲಕ ಬಂದ ಇಂಗ್ಲಿಷರು ಹೇಗೆ ತಮ್ಮ ವ್ಯಾಪಾರದ ರಕ್ಷಣೆಗಾಗಿ ನಮ್ಮ ದೇಶವನ್ನು ದರೋಡೆ ಮಾಡಿದರು ಎಂದು ಆ ಸಮಿತಿ ಸ್ಪಷ್ಟಮಾಡಿತು. ಮೊದಲನೇ ಮಹಾ ಯುದ್ಧವಾಯಿತು. ಭಾರತಕ್ಕೂ ಆ ಯುದ್ಧಕ್ಕೂ ಯಾವ ಸಂಬಂಧವೂ ಇರಲಿಲ್ಲ. ಆದರೂ ಭಾರತ ಸರ್ಕಾರ ಕೋಟ್ಯಂತರ ರೂಪಾಯಿ ಯುದ್ಧಕ್ಕಾಗಿ ಹಾಳು ಮಾಡಿತು. ಇಂಥ ದುಂದುವೆಚ್ಚಗಳಿಂದ ಭಾರತದ ಜನ ದಟ್ಟ ದರಿದ್ರರಾದರು. ಅದನ್ನು ಬ್ರಿಟಿಷ್ ಸರ್ಕಾರ ತುಂಬಿಕೊಡಬೇಕು ಎಂದು ಕುಮಾರಪ್ಪ ವಾದಿಸಿದರು.

೧೯೩೧ ರಲ್ಲಿ ಗಾಂಧೀಜಿ ಮತ್ತು ಮಹದೇವ ದೇಸಾಯಿ ದುಂಡು ಮೇಜಿನ ಪರಿಷತ್ತಿಗೆ ಇಂಗ್ಲೆಂಡಿಗೆ ಹೋದರು. ಆಗ ಮತ್ತೆ ಕುಮಾರಪ್ಪ ‘ಯಂಗ್ ಇಂಡಿಯಾ‘‘ಪತ್ರಿಕೆಯ ಸಂಪಾದಕರಾದರು. ಅದೇ ರೀತಿ  ನಿರ್ಭಯವಾಗಿ ಸತ್ಯಸಂಗತಿಗಳನ್ನು ಬರೆದರು. ಗಾಂಧಿಯವರ ಸಂದೇಶಗಳನ್ನು ಎತ್ತಿ ಹಿಡಿದರು. ಬ್ರಿಟಿಷ್ ಸರ್ಕಾರ ಕಿಡಿಕಿಡಿಯಾಯಿತು. ಎರಡನೇ ಬಾರಿ ಅವರನ್ನು ಜೈಲಿಗೆ ಹಾಕಿದರು. ಎರಡೂವರೆ ವರ್ಷ ಕಠಿಣ ಶಿಕ್ಷೆ ಕೊಟ್ಟರು. ನಾಸಿಕ ಜೈಲಿನಲ್ಲಿಟ್ಟರು. ಜೈಲಿನೊಳಗೆ ಇತರ  ಖೈದಿಗಳಿಗಾಗುತ್ತಿದ್ದ ಅನ್ಯಾಯಗಳನ್ನು ಸಹಿಸದೆ ಕುಮಾರಪ್ಪ ಅಲ್ಲೂ ಹೋರಾಡಿದರು.

ಬಿಹಾರಿನ ಭೂಕಂಪ

೧೯೩೪ ರಲ್ಲಿ ಜೈಲಿನಿಂದ ಹೊರಬಂದರು. ಆ ವರ್ಷ ಬಿಹಾರದಲ್ಲಿ ಭೀಕರ ಭೂಕಂಪ ಆಯಿತು. ಸಾವಿರಾರು ಜನ ಸತ್ತರು. ಲಕ್ಷಾಂತರ ಜನ ಮನೆ ಮಠಗಳನ್ನು ಕಳೆದುಕೊಂಡರು, ಅಸಂಖ್ಯಾತ ಮಕ್ಕಳು ಅನಾಥರಾದರು. ದೇಶಕ್ಕೆ ದೇಶವೇ ದುಃಖದಲ್ಲಿ ಮುಳುಗಿತು. ಎಲ್ಲರೂ ಬಿಹಾರಿನ ಸಹಾಯಕ್ಕೆ ಧಾವಿಸಿದರು. ಆಗ ಅಲ್ಲಿ ಬಾಬು ರಾಜೇಂದ್ರ ಪ್ರಸಾದರು ಸೇವಾಕಾರ‍್ಯದ ನಾಯಕರಾದರು. ಅವರ ಬೆಂಬಲಿಗರಾಗಿ ದುಡಿದವರು ಸೇಠ್‌ಜಮ್ನಾಲಾಲಬಜಾಜರು ಮತ್ತು ಜೆ.ಸಿ.ಕುಮಾರಪ್ಪ. ಕೋಟ್ಯಂತರ ರೂಪಾಯಿ ಧನಸಹಾಯ ಸುರಿಯಿತು. ಬಟ್ಟೆಬರೆ ಔಷಧಿ ಸಲಕರಣೆಗಳು ಪ್ರವಾಹವಾಗಿ ಹರಿದವು. ಸಾವಿರಾರು ಸ್ವಯಂಸೇವಕರು ಬಂದು ದುಡಿದರು. ಇದನ್ನೆಲ್ಲ ಪೋಲಾಗದಂತೆ ವ್ಯವಸ್ಥೆ ಮಾಡುವ ಜವಾಬ್ದಾರಿ ಕುಮಾರಪ್ಪನವರ ಮೇಲೆ ಇತ್ತು. ಇಷ್ಟು ಅಗಾಧ ಪ್ರಮಾಣದ ಪರಿಹಾರಕಾರ್ಯ ಎಲ್ಲೂ ನಡೆದಿರಲಿಲ್ಲ. ಅದನ್ನು ಕೈಗೊಂಡಿದ್ದು ಸರ್ಕಾರ ಅಲ್ಲ, ಒಂದು ಸ್ವಯಂಸೇವಾ ಸಮಿತಿ. ರಾಜೇನ್ ಬಾಬುಗಳೂ ಕುಮಾರಪ್ಪನವರೂ ಈ ಕಾರ‍್ಯ ನೆರವೇರಿಸಿದಾಗ ಜನ ಕೃತಜ್ಞತೆಯಿಂದ ಕೈಮುಗಿದರು. ಕುಮಾರಪ್ಪ ಕಾಸಿಗೆ ಕಾಸು ಲೆಕ್ಕ ಇಡುತ್ತಿದ್ದರು. ಅನಾವಶ್ಯಕವಾಗಿ ಒಂದು ಕಾಸೂ ಪೋಲಾಗದಂತೆ ನೋಡಿಕೊಂಡರು. ಗಾಂಧೀಜಿ ಅಲ್ಲಿಗೆ ಬಂದಾಗಲೂ ಅವರ ಸಿಬ್ಬಂದಿ ಖರ್ಚಿಗೆ ಹಣ ಕೊಡುವುದಿಲ್ಲ ಎಂದು ನಿಷ್ಠುರವಾಗಿ ಹೇಳಿಬಿಟ್ಟರು. ಪ್ರತಿಯೊಂದು ರೂಪಾಯಿಗೂ ಲೆಕ್ಕ ಒಪ್ಪಿಸಿದರು. ರಾಜೇಂದ್ರ ಬಾಬುಗಳು ಬೆರಗಾಗಿ ಕೃತಜ್ಞತೆಯಿಂದ ಹೀಗೆ ಹೇಳಿದರು. ‘‘ಪರಿಹಾರ ಕಾರ್ಯವನ್ನು ಅತ್ಯಂತ ಪ್ರಾಮಾಣಿಕವಾಗಿ ನಿಃಸ್ವಾರ್ಥ ರೀತಿಯಲ್ಲಿ ನಡೆಸಿ ಅದರ ಖಚಿತ ಲೆಕ್ಕಪತ್ರಗಳನ್ನಿಟ್ಟು, ರಾತ್ರಿ-ಹಗಲು ದುಡಿದು ಸಾರ್ವಜನಿಕರಿಗೆ ಲೆಕ್ಕ ಒಪ್ಪಿಸಿ ಕುಮಾರಪ್ಪ ಬಿಹಾರದ ಪ್ರಾಣ ರಕ್ಷಕರೂ ಮಾನರಕ್ಷಕರೂ ಆಗಿದ್ದಾರೆ.’’ ಬಿಹಾರ ಭೂಕಂಪದಲ್ಲಿ ನೊಂದವರ ಸೇವೆಯೊಡನೆ ಗ್ರಾಮ ಪುನಾರಚನೆಯ ವಿಚಾರವನ್ನು ಕುಮಾರಪ್ಪ ಜನರ ಮುಂದಿಟ್ಟರು. ಅದಕ್ಕಾಗಿ ಮುಂದೆ ಒಂದು ಸಂಘವನ್ನೇ ಕಟ್ಟಿದರು.

ಅಖಿಲಭಾರತ ಗ್ರಾಮೋದ್ಯೋಗ ಸಂಘ

ಸಮಗ್ರ ಗ್ರಾಮ ಪುನಾರಚನೆ ಗಾಂಧೀ ಮಾರ್ಗದ ಗುರಿ. ಸ್ವಾತಂತ್ರ  ಹೋರಾಟದ ಕಾಲದಲ್ಲೇ ದೇಶ ಇದನ್ನಂಗೀಕರಿಸಿತ್ತು. ಕಾಂಗ್ರೆಸ್ ೧೯೩೪ ರಲ್ಲಿ ಒಂದು ನಿರ್ಣಯ ಮಾಡಿತು. ಸ್ವದೇಶಿ ಅಂದರೆ ಪಟ್ಟಣದ ಸಾಹುಕಾರಿಕೆಗೆ ಪ್ರೋತ್ಸಾಹವಲ್ಲ, ಗ್ರಾಮ ಕೈಗಾರಿಕೆಗಳ ಏಳಿಗೆ ಎಂದು ಸ್ಪಷ್ಟಮಾಡಿತು. ಗಾಂಧಿಯವರೇ ಅದನ್ನು ಸೂಚಿಸಿದರು. ಕಾಂಗ್ರೆಸ್ಸಿನ ಆಶ್ರಯದಲ್ಲಿ ಅಖಿಲಭಾರತ ಗ್ರಾಮೋದ್ಯೋಗ ಸಂಘ ಸ್ಥಾಪಿಸಿದರು. ಅದೇ ನಿರ್ಣಯದಲ್ಲಿ ಕುಮಾರಪ್ಪನವರೇ ಅದಕ್ಕೆ ಕಾರ್ಯದರ್ಶಿ ಆಗಬೇಕೆಂದು ಕೋರಲಾಯಿತು. ಆ ಸಭೆಯಲ್ಲಿ ಕುಮಾರಪ್ಪ ಹಾಜರಿರಲಿಲ್ಲ. ಪತ್ರಿಕೆಗಳಲ್ಲಿ ಸುದ್ದಿ ಬಂದಾಗ ಅವರು ಗಾಂಧೀಜಿಗೆ ಬರೆದು ‘ಇದೇನು ಮಾಡಿದಿರಿ?’ ಎಂದು ಕೇಳಿದರು. ತಕ್ಷಣ ಬಾಪುವಿನ ವಿನಯಪೂರ್ವಕ ಉತ್ತರ ಬಂತು. ‘‘ನಿಮ್ಮ ಒಪ್ಪಿಗೆ ಪಡೆಯುವ ಮುಂಚೆಯೇ ನಿರ್ಣಯ ಮಾಡಿದೆವು. ತಪ್ಪನ್ನು ಕ್ಷಮಿಸಿ ಕೂಡಲೇ ಕಾರ‍್ಯ ಪ್ರಾರಂಭಿಸಿ. ನೀವೇ ಅದರ ಮೊದಲ ಸ್ವಯಂ ಸೇವಕರು. ಧನ ಸಹಾಯ ಬರುತ್ತದೆ. ಚಿಂತೆಬೇಡ’’ ಎಂದಿದ್ದರು. ಕುಮಾರಪ್ಪ ಮರುಮಾತನಾಡಲಿಲ್ಲ. ವರ್ಧಾದಲ್ಲಿನ ಮಹಿಳಾಶ್ರಮದಲ್ಲಿ ೧೯೩೪ ರ ಡಿಸೆಂಬರ್ ೧೪ ರಂದು ಅಖಿಲಭಾರತ ಗ್ರಾಮೋದ್ಯೋಗ ಸಂಘ ಸ್ಥಾಪಿಸಿದರು. ಗಾಂಧೀಜಿ ಮಾರ್ಗದರ್ಶಕರು.ಕುಮಾರಪ್ಪ ಅದರ ಪ್ರಾಣ. ಅಲ್ಲಿಂದಾಚೆ ಹದಿನಾಲ್ಕು ವರ್ಷ ಇಬ್ಬರೂ ಈ ಮಹಾಸಂಘವನ್ನು ಬೆಳೆಸಿದರು. ರಾಜಕೀಯದಿಂದ ಕುಮಾರಪ್ಪ ದೂರವಾಗಿ ತಮ್ಮ ಜೀವನ ಸರ್ವಸ್ವವನ್ನೂ ಗ್ರಾಮೋದ್ಧಾರ ಕಾರ್ಯದಲ್ಲಿ ತೊಡಗಿಸಿದರು. ಗ್ರಾಮೋದ್ಯೋಗಗಳೇ ಭಾರತ ಜನ ಜೀವನದ ಜೀವಾಳ. ಅದು ನಶಿಸಿದರೆ ಲಕ್ಷಾಂತರ ಹಳ್ಳಿಗರ ಬಾಳು ನರಕವಾಗುತ್ತದೆ. ದಾರಿದ್ರ  ಹೆಚ್ಚುತ್ತದೆ. ಅದನ್ನು ತಡೆಗಟ್ಟಿ ಹಳ್ಳಿಗಳಲ್ಲಿ ಹಳ್ಳಿಗರಿಗಾಗಿ ಹಳ್ಳಿಗರಿಂದಲೇ ನಡೆಸಲ್ಪಡುವ ಗ್ರಾಮ ಕೈಗಾರಿಕೆಗಳು ಸ್ಥಾಪಿತವಾಗಬೇಕು. ದೊಡ್ಡ ಕೈಗಾರಿಕೆಗಳು, ಗಿರಣಿಗಳು ಇವುಗಳು ಗ್ರಾಮದ ಉದ್ಯೋಗಗಳನ್ನು ಕಸಿದುಕೊಂಡು ಅವರನ್ನು ನಿರ್ಗತಿಕರನ್ನಾಗಿ ಮಾಡುತ್ತಿವೆ. ಇದು ತಪ್ಪಿ ಗ್ರಾಮದ ಕೈಗಾರಿಕೆಗಳಿಗೆ ಸಹಾಯಕವಾಗುವಂತೆ ಪಟ್ಟಣಗಳ ವ್ಯವಸ್ಥೆಯಾಗಬೇಕು ಎಂದರು ಕುಮಾರಪ್ಪ. ಆಧುನಿಕ ವಿಜ್ಞಾನ ಅದಕ್ಕೆ ಪೋಷಕವಾಗಬೇಕು ಎಂದು ಹಿಂದಿನ ಹಲವು ಗ್ರಾಮೋದ್ಯೋಗಗಳಿಗೆ ಹೊಸ ಸಲಕರಣೆಗಳ ಸಂಶೋಧನೆ ನಡೆಸಿದರು.

ಮಗನವಾಡಿ

ವರ್ಧಾದಲ್ಲೇ ಒಂದು ಪ್ರತ್ಯೇಕ ಸಂಸ್ಥೆ ಮಾಡಿದರು. ಪ್ರಖ್ಯಾತ ರಚನಾತ್ಮಕ ಕಾರ‍್ಯಕರ್ತರೂ ಗಾಂಧೀಜಿಯ ಬಂಧುವೂ ಆಗಿದ್ದ ಮಗನಲಾಲ ಗಾಂಧಿ ಅವರ ನೆನಪಿಗಾಗಿ ಜಮ್ನಾಲಾಲ್ ಬಜಾಜರು ದಾನಮಾಡಿದ ಸ್ಥಳದಲ್ಲಿ ‘ಮಗನವಾಡಿ’ ಸ್ಥಾಪಿತವಾಯಿತು. ಸಂಘದ ಸರಳವಾದ ಕಟ್ಟಡಗಳು ನಿರ್ಮಾಣವಾದವು. ಎಲ್ಲವೂ ಕುಮಾರಪ್ಪನವರ ಯೋಜನೆಯಂತೆ ವ್ಯವಸ್ಥೆಯಾಯಿತು. ಗ್ರಾಮಗಳಲ್ಲಿ ಯಾವುದು ಸಾಧ್ಯವೋ ಯಾವುದು ಅತ್ಯಗತ್ಯವೋ ಯಾವುದು ಪೂರ್ಣ ಉದ್ಯೋಗ ಕೊಡುವುದೋ ಅಂಥ ಕೈಗಾರಿಕೆಗಳನ್ನು ಉತ್ತಮಪಡಿಸಲು ಇದು ಸಂಶೋಧನಾಲಯವಾಯಿತು. ಅನೇಕ ಮೇಧಾವೀ ಕಾರ‍್ಯಕರ್ತರು ಬಂದು ಸೇರಿದರು. ಮಾದರಿ ಉಪಕರಣಗಳ ‘ಮಗನ್ ಸಂಗ್ರಹಾಲಯ’ ನಿರ್ಮಾಣವಾಯಿತು. ಈಗ ಅದು ಪ್ರಖ್ಯಾತ ಶಿಕ್ಷಣಸಂಸ್ಥೆ ಆಗಿದೆ. ಗಾಂಧೀಜಿಯವರು ರೂಪಿಸಿಕೊಟ್ಟ ಗ್ರಾಮರಾಜ್ಯದ ನಕ್ಷೆಯನ್ನು ಇಲ್ಲೇ ತಯಾರಿಸಿದರು ಕುಮಾರಪ್ಪ. ಗಾಂಧೀಜಿ ೧೯೩೬ ರ ಏಪ್ರಿಲ್‌ನಲ್ಲಿ ವರ್ಧಾದ ಬಳಿ ಇರುವ ಸೇವಾಗ್ರಾಮಕ್ಕೆ ಬಂದು ನೆಲಸಿದರು. ಅವರು ಸುತ್ತಲೂ ಗ್ರಾಮ ಪುನರುಜ್ಜೀವನದ ಮತ್ತು ಭಾರತದ ಹೊಸಬಾಳಿಗೆ ಮಾರ್ಗ ದರ್ಶನ ಮಾಡುವ ಅನೇಕ ಸಂಸ್ಥೆಗಳು ಹುಟ್ಟಿಕೊಂಡವು. ಅಖಿಲಭಾರತದ ಖಾದಿ ಸಂಸ್ಥೆ, ಗೋಸೇವಾ ಸಂಘ, ಮೂಲಶಿಕ್ಷಣ ಪ್ರಯೋಗಶಾಲೆ, ಪ್ರಕೃತಿ ಚಿಕಿತ್ಸಾ ಸಂಘ, ಕುಷ್ಠರೋಗಿ ಸೇವಾಸಂಸ್ಥೆ, ಪೌನಾರಿನ ವಿನೋಬಾಜಿ ಆಶ್ರಮ, ಮಹಿಳಾಶ್ರಮ – ಈ ಎಲ್ಲ ಸಂಸ್ಥೆಗಳೂ ಒಂದಕ್ಕೆ ಒಂದು ಪೋಷಕವಾದವು. ಗಾಂಧೀಜಿ ಯಾವ ಭಾರತ ಸಮಾಜವನ್ನು ನಿರ್ಮಿಸಬಯಸಿದರೋ ಅದರ ಸರ್ವಾಂಗ ಸಂಪೂರ್ಣ ನಕ್ಷೆ ದೇಶದ ಮುಂದೆ ಸ್ಪಷ್ಟವಾಗಿ ಮೂಡಿತು. ಅಹಿಂಸಾತ್ಮಕವಾದ ಕ್ರಾಂತಿಗೆ ಈ ರಚನಾತ್ಮಕ ಸಂಸ್ಥೆಗಳೇ ಪ್ರಧಾನ ಸ್ಪೂರ್ತಿಕೇಂದ್ರಗಳಾದವು.

ಕುಮಾರಪ್ಪ ಮಗನವಾಡಿಯಲ್ಲಿ ಸುಧಾರಿಸಿಕೊಟ್ಟ ಗ್ರಾಮೋದ್ಯೋಗಗಳ ತಂತ್ರಜ್ಞಾನ ಅಮೂಲ್ಯ. ಎಲ್ಲಕ್ಕೂ ಹೊಸ ರೂಪಕೊಟ್ಟರು. ಸ್ವಪರಿಪೂರ್ಣವಾದ ಸ್ವಾವಲಂಬೀ ಗ್ರಾಮಜೀವನಕ್ಕೆ ಇದು ತಳಹದಿ. ಗ್ರಾಮದ ಜನ ಈಗ ದೊಡ್ಡ ಬಂಡವಾಳಸ್ಥರ, ರಾಜಕೀಯ ಅಧಿಕಾರ ಸ್ಪರ್ಧಿಗಳ ಮತ್ತು ಮೂಢನಂಬಿಕೆಗಳ ದಾಸರಾಗಿ ಸಂಕಟಕ್ಕೊಳಗಾಗಿದ್ದಾರೆ. ಮೂಕಸೇವಕರಾಗಿ ದರಿದ್ರರಾಗುತ್ತಿದ್ದಾರೆ. ಅದನ್ನು ನಿವಾರಿಸುವುದೇ ಸ್ವಾತಂತ್ರ . ಅದರ ಗುರಿ ನೆಮ್ಮದಿಯ ಗ್ರಾಮ ಸ್ವರಾಜ್ಯ. ಪರಸ್ಪರ ಸಹಕರಿಸಿ ಇಡೀ ಗ್ರಾಮ ಒಂದು ಕುಟುಂಬವಾಗಿ ಅಗತ್ಯ ವಸ್ತುಗಳನ್ನೆಲ್ಲ ಉತ್ಪಾದನೆ ಮಾಡಿಕೊಂಡು ಯಾರಲ್ಲಿಯೂ ದೈನ್ಯದಿಂದ ಯಾಚಿಸದೆ ಆತ್ಮಗೌರವದಿಂದ ಬಾಳಬೇಕು. ಆಗ ಮಾತ್ರ ಭಾರತ ಸಮೃದ್ಧವಾಗುತ್ತದೆ. ಅದರ ರೂಪ, ಸಂಸ್ಕೃತಿ, ಸಭ್ಯತೆ, ವಿದ್ಯೆ, ವಿಜ್ಞಾನ ಎಲ್ಲವೂ ಲೋಕಕ್ಕೇ ಶಾಂತಿಯ ಕಲೆಯನ್ನು ಕಲಿಸುತ್ತದೆ ಎಂದರು ಗಾಂಧೀಜಿ. ಕುಮಾರಪ್ಪ ಈ ಬಯಕೆಗೆ ವ್ಯವಹಾರದ ಚೌಕಟ್ಟನ್ನು ನಿರ್ಮಿಸಿದರು. ಗ್ರಾಮದ ಪ್ರತಿಯೊಂದು ಸಲಕರಣೆಯನ್ನೂ ಸುಧಾರಿಸಿಕೊಟ್ಟರು. ಹೊಸ ಹೊಸ ಭಾಗಗಳನ್ನು ಸೇರಿಸಿ ಆಧುನಿಕಗೊಳಿಸಿದರು. ಹೊಸರೂಪದ ಎತ್ತಿನಗಾಣ, ಭಾರವಿಲ್ಲದ ಎತ್ತಿನಗಾಡಿ, ಸುಲಭವಾಗಿ ತಿರುಗಿಸುವ ಬೀಸುವಕಲ್ಲು. ಹೊಗೆಯಿಲ್ಲದ ಒಲೆ ಮತ್ತು ದೀಪ, ಕೈತಯಾರಿಕೆಯ ಕಾಗದ, ಗ್ರಾಮದಲ್ಲೇ ಸೋಪುತಯಾರಿಕೆ, ಜೇನುಸಾಕಾಣೆ, ತಾಳೆಬೆಲ್ಲದ ಅಲೆ ಮನೆ, ಭತ್ತ ಕುಟ್ಟಲು ಕಾಲಿನ ಒನಕೆ, ಲೋಹದ ಗುಂಡು ಜೋಡಿಸಿದ ಕುಂಬಾರನ ಚಕ್ರ. ಹೀಗೆ ವರ್ಧಾ ತಯಾರಿಕೆಯ ಗ್ರಾಮೋದ್ಯೋಗ ಉಪಕರಣಗಳು ನೂರಾರು.

ಜೀವನಕಲೆ-ಸ್ವಾವಲಂಬನೆ

‘ಸರಳಜೀವನ ಮತ್ತು ಉದಾತ್ತ ಚಿಂತನ’ ಇದು ಭಾರತದ ಆದರ್ಶ. ಗ್ರಾಮ ಸಂಸ್ಕೃತಿಯಲ್ಲಿ ಅದು ಹೆಣೆದುಕೊಂಡಿದೆ. ಯಾರಿಗೂ ಅಡಿಯಾಳಾಗಿ ಬಾಳದೆ ಪರಸ್ಪರ ಪ್ರೇಮದಿಂದ ಕುಟುಂಬದ ಸದಸ್ಯರಂತೆ ಬಾಳುವ ಸಮಾಜವೇ ಅತ್ಯಂತ ಶ್ರೇಷ್ಠ ಸಮಾಜ. ಅಲ್ಲಿ ಬಾಳು ಸರಳ ಜೀವನದ ಅತ್ಯಾವಶ್ಯಕ ವಸ್ತುಗಳಲ್ಲಿ ಸ್ವಾವಲಂಬನೆ. ಅನ್ನ ಬಟ್ಟೆ ಮನೆ ಮತ್ತು ಉದ್ಯೋಗ ಇವುಗಳಿಗಾಗಿ ಯಾರನ್ನೂ ಅವಲಂಬಿಸದೆ ಒಂದು ಗ್ರಾಮಸಮಾಜ ಬಾಳಿದಾಗ ಅದು ನಿಜವಾದ ಸ್ವರಾಜ್ಯ. ಅದಕ್ಕೆ ಒಳ್ಳೆಯ ಶಿಕ್ಷಣ ಬೇಕು. ಶರೀರಶ್ರಮ ಪ್ರತಿಯೊಬ್ಬರೂ ಮಾಡಬೇಕು. ಎಲ್ಲರಿಗೂ ಇರುವಷ್ಟನ್ನೇ ತಾನೂ ಇಟ್ಟುಕೊಳ್ಳಬೇಕು. ಒಳ್ಳೆಯ ಆರೋಗ್ಯಕರ ಜೀವನಕ್ಕೆ ಬೇಕಾದುದು ಎಲ್ಲರಿಗೂ ದೊರೆಯುವುದು ಕಷ್ಟವಲ್ಲ. ಒಬ್ಬೊಬ್ಬರೂ ಜಾಣತನದಿಂದ ಅನಾವಶ್ಯಕ ವಸ್ತುಗಳ ಬಳಕೆಯನ್ನು ತಗ್ಗಿಸಿದರೆ ಇಡೀ ಸಮಾಜ ನೆಮ್ಮದಿಯಾಗುತ್ತದೆ. ಕುಮಾರಪ್ಪ ಈ ತತ್ವಗಳನ್ನು ಪ್ರತಿಪಾದಿಸಿದರು. ತಮ್ಮ ನಿತ್ಯಜೀವನವನ್ನೂ ಹಾಗೇ ರೂಪಿಸಿದರು. ಅವರ ಆಶ್ರಮ ಜೀವನದಲ್ಲಿ ಪ್ರತಿಯೊಬ್ಬರೂ ಕಾಯಕದಲ್ಲಿ ತೊಡಗಲೇಬೇಕಾಗಿತ್ತು.

ಗಾಂಧೀಜಿಯೂ ಕೆಲಸ ಮಾಡಬೇಕು

ಮಗನವಾಡಿಗೆ ಒಮ್ಮೆ ಗಾಂಧೀಜಿ ಬಂದು ತಂಗಿದರು. ಕುಮಾರಪ್ಪನವರ ಕುಟೀರದಲ್ಲಿ ಎಲ್ಲರೂ ಮನೆಗೆಲಸದಲ್ಲಿ ಪಾಲ್ಗೊಳ್ಳಬೇಕು ಎಂದು ನಿಯಮ. ಗಾಂಧೀಜಿಯ ಸರದಿಯೂ ಬಂತು. ಮುಸುರೆಯ ಪಾತ್ರೆಗಳನ್ನು ತಿಕ್ಕಬೇಕಾಯಿತು. ಗಾಂಧೀ, ಕುಮಾರಪ್ಪ ಇಬ್ಬರೂ ಈ ಕೆಲಸದಲ್ಲಿ ತೊಡಗಿದ್ದರು. ಕೈಕಾಲು ಮುಖ ಎಲ್ಲಾ ಮಸಿ. ಕಾಯಿಗುಂಜಿನಿಂದ ಎಷ್ಟು ಉಜ್ಜಿದರೂ ಹೋಗದು. ಅಷ್ಟರಲ್ಲಿ ಅಲ್ಲಿಗೆ ಕಸ್ತೂರಿಬಾ ಬಂದರು. ಬೇರೆ ಮುಖ್ಯ ಕೆಲಸಗಳಿಗೆ ಗಾಂಧೀಜಿ ಕೂಡಲೇ ಹೋಗಬೇಕಾಗಿತ್ತು. ತಡವಾಯಿತಲ್ಲ ಎಂದು ಆಕೆ ಸಿಟ್ಟಾದರು. ರೇಗಿ  ಗಾಂಧೀಜಿಯ ಕೈಯಿಂದ ಪಾತ್ರೆಗಳನ್ನು ಎಳೆದು ಕಿತ್ತುಕೊಂಡರು. ‘‘ನೀವು ಇನ್ನು ಹೊರಡಿ!  ನಾನು ತಿಕ್ಕುತ್ತೇನೆ’’ ಎಂದು ಕೆಂಗಣ್ಣು ಮಾಡಿಕೊಂಡು ಆರ್ಭಟಿಸಿದರು. ಗಾಂಧೀಜಿಗೆ ಹಿಡಿಸಲಾರದ ನಗು. ಕುಮಾರಪ್ಬನವರನ್ನು ನೋಡಿ ‘‘ನೀವು ಅದೃಷ್ಟವಂತರು. ನಿಮ್ಮ ಮೇಲೆ ಹೀಗೆ ಅಧಿಕಾರ ಮಾಡಲು ನಿಮಗೆ ಹೆಂಡತಿಯೇ ಇಲ್ಲ. ನನ್ನ ಸಂಸಾರದ ಶಾಂತಿಯನ್ನುಳಿಸಿ ಕೊಳ್ಳಲು ನನ್ನ ಹೆಂಡತಿಯ ಮಾತನ್ನು ಕೇಳಲೇಬೇಕು. ನಾನು ಹೊರಡುತ್ತೇನೆ, ಕಸ್ತೂರಿಬಾ ಮಿಕ್ಕ ಕೆಲಸ ಮುಗಿಸುತ್ತಾಳೆ’’ ಎಂದರು. ‘‘ನಿಮ್ಮ ಅರ್ಧಾಂಗಿ ಅದನ್ನು ಪೂರ್ತಿ ಮಾಡುವುದಾದರೆ ಏನೂ ಅಡ್ಡಿಯಿಲ್ಲ’’ ಎಂದು ಚಟಾಕಿ ಹಾರಿಸಿದರು ಕುಮಾರಪ್ಪ. ಎಲ್ಲರೂ ನಕ್ಕರು. ಆದರೆ ಕಾಯಕದ ಮಹತ್ವವನ್ನೆಲ್ಲರೂ ಗೌರವಿಸಿದರು. ಗಾಂಧೀಜಿ ದಿನವೂ ನೂಲುವ ಕಾಯಕದಲ್ಲಿ ತೊಡಗುತ್ತಿದ್ದರು. ಶಿಷ್ಯ ಕುಮಾರಪ್ಪನವರಿಗೂ ಶರೀರಶ್ರಮ ಅಷ್ಟೇ ಪವಿತ್ರವ್ರತ. ಶ್ರಮಜೀವಿಗಳೇ ಸಮಾಜದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿದ್ದಾರೆ. ಅವರೇ ಬಾಳಿನ ಆಧಾರ. ಅವರೊಡನೆ ನಮ್ಮ ಜೀವನ ಸುಗುಮವಾಗಿ ಬೆರೆತು ಹೋಗಬೇಕು. ಬುದ್ಧಿಯ ಕೆಲಸ ಮಾಡುವವರೂ ಕೈ ಕೆಸರು ಮಾಡಿಕೊಳ್ಳುವ ಕಾರ್ಯ ಮಾಡಬೇಕು. ಹಾಗೆಯೇ ಶ್ರಮಜೀವಿಗಳೂ ಬೌದ್ಧಿಕ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಆಗ ಒಂದು ಸಮರಸ ಸಮಾಜ ಆಗುತ್ತದೆ. ಇದೇ ಜೀವನ ಕಲೆ. ಕುಮಾರಪ್ಪನವರ ಜೀವನ ಅದಕ್ಕೊಂದು ಭವ್ಯ ನಿದರ್ಶನ.

ಸಹಬಾಳ್ವೆ

ನಮ್ಮ ಸುತ್ತಲಿನ ಕುಶಲಕರ್ಮಿಗಳು ಉತ್ಪಾದಿಸುವ ವಸ್ತುಗಳೇ ನಮಗೆ ಸರ್ವಶ್ರೇಷ್ಠ. ಅದನ್ನು ಬಳಸುವುದು ನಮ್ಮ ಸಮಾಜ ಧರ್ಮ. ಪಕ್ಕದ ತಮ್ಮನ ಉದ್ಯೋಗ ಬೆಳೆಯುವಂತೆ ನಾವು ಬಳಕೆ ಮಾಡಬೇಕು. ಇದು ಹಣದ ವ್ಯವಹಾರದಿಂದ ಅಳೆಯುವ ಮಾತಲ್ಲ. ಎಲ್ಲರೂ ನೆಮ್ಮದಿಯಿಂದ ಕೂಡಿ ಬಾಳುವ ಸೂತ್ರ. ಹಳ್ಳಿಯ ರೈತನೊಂದಿಗೆ ನೇಕಾರ, ಬಡಗಿ, ಕುಂಬಾರ, ಗಾಣಿಗ, ಕಮ್ಮಾರ, ಚಮ್ಮಾರ ಇವರೆಲ್ಲ ಅಭಿವೃದ್ಧಿಯಾಗಬೇಕು. ಅದೇ ಗ್ರಾಮ ರಾಜ್ಯದ ಅಡಿಗಲ್ಲು. ಐದೂವರೆ ಲಕ್ಷ ಹಳ್ಳಿಗಳನ್ನು ಬಿಟ್ಟು ಬೇರೆ ಭಾರತವಿಲ್ಲ. ದೇಶದ ಬುದ್ದಿಶಕ್ತಿಯೆಲ್ಲಾ ಪರದೇಶಿ ಪೋಷಣೆಯಲ್ಲಿ ಪೋಲಾಗುತ್ತಿದೆ. ಅದೆಲ್ಲವೂ ಗ್ರಾಮಾಭಿಮುಖವಾಗಬೇಕು. ಇದು ಕುಮಾರಪ್ಪನವರು ದಿನವೂ ಬೋಧಿಸುತ್ತಿದ್ದ ಸಂದೇಶ.

ಮತ್ತೆ ಜೈಲಿನಲ್ಲಿ

೧೯೪೨ ರಲ್ಲಿ ಭಾರತ ಸ್ವಾತಂತ್ರ ಕ್ಕಾಗಿ ಕೊನೆಯ ಸತ್ಯಾಗ್ರಹ ನಡೆಯಿತು. ‘ಬ್ರಿಟಿಷರೇ, ಭಾರತ ಬಿಟ್ಟು ತೊಲಗಿ’ ಎಂದು ಗಾಂಧೀಜಿ ಘೋಷಣೆ ಮಾಡಿದರು. ಆ ಕೂಡಲೇ ಬ್ರಿಟಿಷ್ ಸರ್ಕಾರ ದೇಶದ ಅಗ್ರನಾಯಕರನ್ನೆಲ್ಲ ಹಿಡಿದು ಸೆರೆಯಲ್ಲಿ ಹಾಕಿತು. ಯಾವ ವಿಚಾರಣೆಯೂ ಇಲ್ಲದೆ ಒಂದೂವರೆ ವರ್ಷ ಕುಮಾರಪ್ಪನವರು ಜೈಲಿನಲ್ಲಿರ ಬೇಕಾಯಿತು. ಅವರು ಮುಂಬಯಿ, ವರ್ಧಾ ಮತ್ತು ನಾಗಪುರ ಜೈಲುಗಳಲ್ಲಿದ್ದರು. ಅನಂತರ ಅವರನ್ನು ವಿಚಾರಣೆಗೊಳಪಡಿಸಿದರು. ದಂಗೆಯೆಬ್ಬಿಸಿದರೆಂದು ಆಪಾದಿಸಿದರು. ಎರಡೂವರೆ ವರ್ಷ ಕಠಿಣ ಶಿಕ್ಷೆ ವಿಧಿಸಿದರು. ೧೯೪೩ ರಿಂದ ೧೯೪೫ ರ ವರೆಗೆ ಜಬ್ಬಲ್‌ಪುರ ಸೆರೆಮನೆಯಲ್ಲಿ ಕುಮಾರಪ್ಪ ಶಿಕ್ಷೆ ಅನುಭವಿಸಿದರು.

ಬಿಡುಗಡೆಯಾದಾಗ ಆರೋಗ್ಯ ಕೆಟ್ಟಿತ್ತು. ವರ್ಧಾದ ಹವೆ ಒಗ್ಗಲಿಲ್ಲ. ಅಲ್ಲೇ ಹತ್ತಿರದ ಸೇಲ್ಡಾ ಹಳ್ಳಿಯಲ್ಲಿ ಒಂದು ಕೃಷಿಕ್ಷೇತ್ರ ನಿರ್ಮಿಸಿ ವಾಸಮಾಡುತ್ತಿದ್ದರು.

ವ್ಯವಸಾಯ ಮತ್ತು ಕೈಗಾರಿಕೆಗಳೆರಡೂ ಏಕಕಾಲದಲ್ಲಿ ಬೆಳೆದು ಅಭಿವೃದ್ಧಿಯಾಗುವ ಪ್ರಯೋಗಗಳನ್ನು ಮಾಡಿದರು. ಗಾಂಧೀಜಿಯೇ ಜೊತೆಗೂಡಿ ಅನೇಕ ವಿಷಯಗಳಲ್ಲಿ ಕುಮಾರಪ್ಪನವರ ಸಲಹೆಯಂತೆ ನಡೆದರು. ಒಂದು ಸಮಗ್ರ ಗ್ರಾಮಸೇವಾ ಯೋಜನೆ ಆ ಕಾಲಕ್ಕೆ ದೇಶದ ಮುಂದೆ ಬಂತು. ವ್ಯವಸಾಯ, ಕೈಗಾರಿಕೆ, ನ್ಯಾಯ, ಶಿಕ್ಷಣ, ರಕ್ಷಣೆ, ಸಂಸ್ಕೃತಿ ಎಲ್ಲದರಲ್ಲೂ ಸ್ವಯಂಪೂರ್ಣವಾಗಿ ಸರ್ವೋದಯ ಸಾಧಿಸುವ ಗ್ರಾಮಗಳು ಹೇಗಿರಬೇಕು ಎಂಬ ನಕ್ಷೆ ಸ್ಪಷ್ಟವಾಯಿತು. ಸ್ವತಂತ್ರ ಭಾರತದಲ್ಲಿ ಇಂಥ ಗ್ರಾಮಗಳ ನಿರ್ಮಾಣ ಆದರೆ ಮಾತ್ರ ಎಲ್ಲರ ಕ್ಷೇಮ ಸಾಧ್ಯ ಎಂದರು ಗಾಂಧೀಜಿ. ತಮ್ಮ ‘ಕನಸಿನ ಭಾರತ’ದ ಪೂರ್ಣಚಿತ್ರ ನಿರ್ಮಿಸಲು ಕುಮಾರಪ್ಪ ಎಷ್ಟು ಸಹಾಯಕರಾದರು ಎಂದು ಗಾಂಧೀಜಿ ಅನೇಕ ಕಡೆ ಸ್ಮರಿಸಿದ್ದಾರೆ. ಅವರಿಗೆ ‘‘ಡಾಕ್ಟರ್ ಆಫ್ ವಿಲೇಜ್ ಇಂಡಸ್ಟ್ರೀಸ್’’ ಗ್ರಾಮಕೈಗಾರಿಕೆಗಳ ಉನ್ನತ ತಜ್ಞ-ಎಂಬ ಬಿರುದನ್ನೇ ಕೊಟ್ಟರು ಗಾಂಧೀಜಿ.

೧೯೪೭ ರ ಆಗಸ್ಟ್ ೧೫ ರಂದು ಭಾರತ ಸ್ವತಂತ್ರವಾಯಿತು. ಆ ದಿನ ಗಾಂಧೀಜಿ ಕಲ್ಕತ್ತದಲ್ಲಿ ನಿರಾಶ್ರಿತರ ಕಣ್ಣೀರೊರೆಸುತ್ತಾ ಉಪವಾಸ ಮಾಡಿದರು. ಕುಮಾರಪ್ಪ ಆಗ ಯೂರೋಪ್ ಪ್ರವಾಸದಲ್ಲಿದ್ದರು. ಕರಾಚಿಯ ಮೂಲಕ ಭಾರತಕ್ಕೆ ಹಿಂತಿರುಗಿದರು. ಕೂಡಲೇ ಗಾಂಧೀಜಿಯೆಡೆಗೆ ಧಾವಿಸಿ ಸೇವೆಗೆ ಸಿದ್ಧರಾದರು. ಮತೀಯ ದಂಗೆಗಳಿಂದ ಕಂಗೆಟ್ಟ ಜನತೆಯನ್ನು ಸಂತೈಸಿದರು. ರಾಷ್ಟ್ರನಾಯಕರಲ್ಲಿ ಮೊದಲು ಗ್ರಾಮಗಳ ಕಡೆ ಗಮನ ಕೊಡಿ ಎಂದು ಆಗ್ರಹದಿಂದ ಬೇಡಿದರು. ನಿಷ್ಠುರ ಸತ್ಯವನ್ನು ನಿರ್ಭಯವಾಗಿ ನುಡಿದರು. ಪಾಶ್ಚಾತ್ಯದೇಶಗಳ ಕುರುಡು ಅನುಕರಣೆ ಮಾಡಬೇಡಿ ಎಂದರು. ಗಾಂಧೀ ಮಾರ್ಗವನ್ನು ಹೃತ್ಪೂರ್ವಕವಾಗಿ ಪ್ರಾಮಾಣಿಕವಾಗಿ ಅನುಷ್ಠಾನ ಮಾಡುವಂತೆ ಯೋಜನೆಗಳನ್ನೇ ದೇಶದ ಮುಂದಿಟ್ಟರು.

೧೯೪೮ ರಲ್ಲಿ ಗಾಂಧೀಜಿಯ ಕೊಲೆಯಾಯಿತು. ಕುಮಾರಪ್ಪನವರಿಗೆ ದೊಡ್ಡ ಆಘಾತವಾಯಿತು. ದೇಶದ ಆತ್ಮಶಕ್ತಿಯೇ ನಿರ್ಬಲವಾಯಿತು ಎನಿಸಿತು. ಆಚಾರ‍್ಯ ವಿನೋಬಾ ಅವರ ನೇತೃತ್ವದಲ್ಲಿ ಸರ್ವೋದಯ ಸಮಾಜ ಸ್ಥಾಪನೆಯಾಯಿತು. ಕುಮಾರಪ್ಪನವರ ಆರೋಗ್ಯ ತುಂಬ ಕೆಟ್ಟುದರಿಂದ ಹೆಚ್ಚು ಓಡಾಡಲು ಸಾಧ್ಯವಾಗಲಿಲ್ಲ. ತಮ್ಮ ಬೆಂಬಲವನ್ನು ಸದಾ ನೀಡುತ್ತಾ ಕಾರ‍್ಯಕರ್ತರಿಗೆ ಹಿನ್ನೆಲೆಯ ಸ್ಫೂರ್ತಿಯಾದರು.

ವಿಶ್ವಶಾಂತಿ ದೂತ

‘‘ಆಡುವುದು ಶಾಂತಿಯ ಮಾತು, ಮಾಡುವುದು ಯುದ್ಧ ಸಿದ್ಧತೆ! ಇದೇಕೆ ಈ ಬೂಟಾಟಿಕೆ? ಶಸ್ತ್ರಬಲ ನಿರಾಕರಿಸಿ ಪ್ರೇಮಬಲ ಬೆಳೆಸಿ. ಮಹಾತ್ಮಗಾಂಧಿ ತೋರಿದ ದಾರಿಯಲ್ಲಿ ನಡೆಯಿರಿ’’ -ಹಲವಾರು ಅಂತರರಾಷ್ಟ್ರೀಯ ಶಾಂತಿ ಸಮ್ಮೇಳನಗಳಲ್ಲಿ ಕುಮಾರಪ್ಪ ಈ ಭಾವಪೂರ್ಣ ಮನವಿ ಮಾಡುತ್ತ ವಿಶ್ವದ ಬಲಯುತ ರಾಷ್ಟ್ರಗಳಲ್ಲೆಲ್ಲಾ ಸುತ್ತಾಡಿದರು. ೧೯೪೮ ರಲ್ಲಿ ಇಂಗ್ಲೆಂಡಿನಲ್ಲಿ ನಡೆದ ಯುದ್ಧ ವಿರೋಧಿಗಳ ಅಂತರರಾಷ್ಟ್ರೀಯ ಸಮ್ಮೇಳನಕ್ಕೆ ಹೋದರು. ೧೯೫೧ ರಲ್ಲಿ ಭಾರತದ ಸೌಹಾರ್ದ ನಿಯೋಗದೊಂದಿಗೆ ಚೀಣಾ ಮತ್ತು ಜಪಾನ್‌ಗಳಲ್ಲಿ ಪ್ರವಾಸ ಮಾಡಿದರು. ೧೯೫೨ ರಲ್ಲಿ ರಷ್ಯದಲ್ಲಿ ಅಂತರರಾಷ್ಟ್ರೀಯ ಅರ್ಥಶಾಸ್ತ್ರಜ್ಞರ ಸಮ್ಮೇಳನಕ್ಕೆ ಹೋದರು. ಅದೇ ವರ್ಷ ಜರ್ಮನಿಯಲ್ಲಿ ವಿಶ್ವಶಾಂತಿ ಸಮ್ಮೇಳನಕ್ಕೆ ಭಾರತದ ಪ್ರತಿನಿಧಿಯಾದರು. ರಷ್ಯದಲ್ಲಿ ಮತ್ತೊಂದು ಅಂತರರಾಷ್ಟ್ರೀಯ ಶಾಂತಿವಾದಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಈ ಸಮ್ಮೇಳನಗಳ ಮುಂದಿನ ಅಧಿವೇಶನಗಳಿಗಾಗಿ ೧೯೫೪ ರಲ್ಲಿ ಜರ್ಮನಿ, ಬಲ್ಗೇರಿಯಾ ಮತ್ತು ಬ್ರಿಟನ್‌ಗಳಲ್ಲಿ ಪ್ರವಾಸ ಮಾಡಿದರು. ಹೋದೆಡೆಯೆಲ್ಲ ಈ ವಿಶಿಷ್ಟ ಶಾಂತಿದೂತನ ಅಹಿಂಸಾ ಸಂದೇಶ ಲಕ್ಷಾಂತರ ಮಾನವ ಹೃದಯಗಳನ್ನು ಸೂರೆಗೊಂಡಿತು. ಸರ್ವಾಧಿಕಾರೀ ಮನೋಭಾವದ ರಾಜಕೀಯ ವ್ಯವಸ್ಥೆಗಳನ್ನು ಬಿಟ್ಟು ಜನತೆಯ ಪ್ರೇಮ ಗಳಿಸಿ ಅವರ ಪೂರ್ಣ ಸಹಕಾರದಿಂದ ಶಾಂತಿಯುತ ಮಾನವೀಯ ಸಮಾಜ ನಿರ್ಮಿಸಿ ಎಂದು ಕಳಕಳಿಯಿಂದ ಪ್ರಾರ್ಥಿಸಿದರು. ಸಣ್ಣ ಸಣ್ಣ ಉದಾಹರಣೆಗಳಿಂದ ಯುದ್ಧಕೋರರ ಕಪಟವನ್ನು ತೋರಿಸಿಕೊಟ್ಟರು. ಶ್ರೀಮಂತರ ಅತಿಭೋಗದಿಂದ ಪ್ರಪಂಚದ ರೈತರು ಹೇಗೆ ಹಸಿವಿನಿಂದ ಸಾಯುತ್ತಿದ್ದಾರೆ ಎಂದು ವಿವರಿಸಿದರು. ಸಿಗರೇಟು ಸೇದುವವರನ್ನು ಕುರಿತು ಒಂದು ಸಭೆಯಲ್ಲಿ ‘‘ನೀವು ಸೇದುವ ಸಿಗರೇಟಿಗಾಗಿ ಹೊಗೆಸೊಪ್ಪನ್ನು ಬೆಳೆಸಲು ಭಾರತದ ಲಕ್ಷಾಂತರ ಎಕರೆ ಫಲವತ್ತಾದ ಜಮೀನು ಹಾಳಾಗುತ್ತದೆ. ಅಲ್ಲಿನ ರೈತರು ಅನ್ನವಿಲ್ಲದೆ ಸಾಯುತ್ತಿದ್ದಾರೆ. ಬಂದೂಕ ಹಿಡಿದು ಅವರನ್ನು ದುಡಿಸುತ್ತಾರೆ. ನಿಮಗೆ ಕರುಣೆಯಿದ್ದರೆ ಈ ಅಮಾನುಷ ಅಭ್ಯಾಸ ಬಿಡಿ’’ ಎಂದರು. ಆಂಗ್ಲ ಮಹಿಳೆಯೊಬ್ಬರು ಕಣ್ಣೀರಿಟ್ಟು ಅವರ ಬಳಿ ಬಂದು ‘‘ನನಗೆ ಈ ವಿಷಯವನ್ನು ಯಾರೂ ತಿಳಿಸಿರಲಿಲ್ಲ. ಇಂಥ ಕ್ರೂರ ವರ್ತನೆಗೆ ನಾನೂ ಭಾಗಿ, ನನ್ನ ಅಭ್ಯಾಸಗಳನ್ನು ಇಂದಿನಿಂದಲೇ ಬದಲಿಸು ತ್ತೇನೆ’’ ಎಂದರಂತೆ. ಸಾಮಾನ್ಯರ ಹೃದಯಗಳನ್ನು ಗೆದ್ದು ಕುಮಾರಪ್ಪ ವಿಶ್ವಶಾಂತಿದೂತರೆನಿಸಿಕೊಂಡರು.

ಗಾಂಧೀಜಿ ಮಾರ್ಗವನ್ನು ನೆನಪಿಡೋಣ

ಕೊನೆಯ ದಿನಗಳಲ್ಲಿ ಕುಮಾರಪ್ಪ ತಮಿಳುನಾಡಿನ ಮಧುರೆ ಬಳಿಯ ಕಲ್ಲುವಟ್ರೆಯಲ್ಲೇ ವಾಸಿಸುತ್ತಿದ್ದರು. ಸ್ವತಂತ್ರ ಭಾರತದಲ್ಲಿ ಗ್ರಾಮಗಳ ಪುನರುಜ್ಜೀವನಕ್ಕೆ ನಾಯಕರು ಗಮನಕೊಡಬೇಕೆಂದು ಪದೇ ಪದೇ ಎಚ್ಚರಿಸುತ್ತಿದ್ದರು. ಅಂದಿನ ರಾಷ್ಟ್ರಾಧ್ಯಕ್ಷ ರಾಜೇಂದ್ರ ಪ್ರಸಾದರು ಕುಮಾರಪ್ಪನವರ ಗುಡಿಸಿಲಿಗೆ ಬಂದು ಕುಳಿತಾಗ ಕುಮಾರಪ್ಪ ‘‘ಗಾಂಧಿಮಾರ್ಗ ಮರೆಯಾಗುತ್ತಿದೆ. ಭಾರತದ ಬಡ ಜನಕೋಟಿಗೆ ಅದನ್ನು ಬಿಟ್ಟರೆ ಬೇರೆ ಮಾರ್ಗವಿಲ್ಲ. ವಿಶ್ವಶಾಂತಿ ಭಾರತದ ಈ ಸರ್ವೋದಯ ಆಂದೋಲನದ ಯಶಸ್ಸಿನ ಮೇಲೆ ಆಧಾರಿತವಾಗಿದೆ. ಆ ಕಡೆ ದಿಟ್ಟತನದಿಂದ ಹೆಜ್ಜೆಯಿಡೋಣ-ಸತ್ಯ ಅಹಿಂಸೆಗಳ ಅಮೋಘಪಥ ಭಾರತದಲ್ಲಿ ನೆಲೆಯೂರಲಿ’’ ಎಂದು ಬಿನ್ನವಿಸಿದರು.

೧೯೬೦ ರಲ್ಲಿ ಅವರ ಅನಾರೋಗ್ಯ ಉಲ್ಬಣಿಸಿತು. ಮದರಾಸಿಗೆ ಚಿಕಿತ್ಸೆಗೆ ಬಂದರು. ಆಸ್ಪತ್ರೆ ಸೇರಬೇಕಾಯಿತು. ಅದೇ ವರ್ಷ ಜನವರಿ ೩೦ ರಂದು ತನ್ನ ಗುರು ಗಾಂಧೀಜಿಯ ಹನ್ನೆರಡನೆಯ ಪುಣ್ಯತಿಥಿಯಂದು ಜೆ.ಸಿ. ಕುಮಾರಪ್ಪ ನಿಧನರಾದರು. ಅವರ ಅಮೋಘ ಸೇವೆ  ಭಾರತದ ನಿತ್ಯಸ್ಮರಣೆಯಲ್ಲಿ ಸದಾ ಹಸಿರಾಗಿರುತ್ತದೆ.