ಹಸಿವಾಗುತಿದೆ ಅಮ್ಮಾ,
ಹಲನೂಡಮ್ಮಾ:
ಕಡವರದ ತವರಿಂದೆ
ಬಡತನಕೊಲಿದು ಬಂದೆ;
ಇಂಗಡಲ ಸೊಗದಿಂದೆ
ನಿನ್ನೊಡಲಿಗಿಳಿತಂತೆ
ಒಲುಮೆ ಸೆರೆಯಾಗಿ;
ಅಮೃತದ ಕುಮಾರನಾಂ
ಕೂಗುವೆನಮೃತಕಾಗಿ!

ರೋದಿಡುವ ಈ ಬಾಯಿ,
ಅಯ್ಯೊ ಈ ಬಡಪಾಯಿ,
ಕ್ಷೀರಸಾಗರಶಾಯಿ?
ಎಂಬ ಶಂಕೆಯೆ, ತಾಯಿ?
ತಿಳಿಯಮ್ಮ ತೂಗಿ:
ನಿದ್ರಾ ಸಮುದ್ರವನೆ
ಮಥಿಸುವೆನಮೃತಕಾಗಿ!

ನಿನಗರಿದೆ ನನ್ನ ನೆಲೆ?
ನಿನಗರಿದೆ ನನ್ನ ಬೆಲೆ
ಶಿಶುವಾನು ಶಿವನ ಕಳೆ;
ಕವಿ ಕಲೆಯ ಕೀರ್ತಿ ಬೆಳೆ;
ಒಲುಮೆ ಹಣ್ಣಾಗಿ,
ಅಮೃತದ ಕುಮರನಾಂ
ಜನಿಸಿಹೆನಮೃತಕಾಗಿ!

ನನ್ನ ಬಾಳುಗಳೊಲುಮೆ
ತಣ್ಪು ಬೆಂಕಿಯ ಕುಲುಮೆ;
ರತಿನೋಂಪಿಯರಿಕಲ್ಪಿ
ಕೃತಿಯ ಸೃಜಿಸುವ ಶಿಲ್ಪಿ.
ನಿನ್ನರಕೆಗಾಗಿ,
ಅಮೃತದ ಕುಮಾರನಾಂ
ಬಂದಿಹೆನಮೃತಕಾಗಿ!

ಬಿದಿಗೆದಿಂಗಳ್‌ದೋಣಿ
ಮುಗಿಲಲೆಯನಲೆವಂತೆ,
ವರಕವಿಯ ಸುರವಾಣಿ
ಜಗದೆದೆಯ ಹೋಗುವಂತೆ,
ನಿನ್ನತಿಥಿಯಾಗಿ
ಅಮೃತದ ಕುಮಾರನಾಂ
ಬಂದಿಹೆನಮೃತಕಾಗಿ!