ನಿದ್ದೆ ಸಾಕೆದ್ದೇಳೊ, ನನ್ನ ಮುದ್ದು ಕಂದಯ್ಯ;
ಹೊದ್ದ ಕತ್ತಲೆಯೊದ್ದು ಬೆಳಗೇಳುತಿದೆ ನೋಡೊ,
ಮುದ್ದು ಕಂದಯ್ಯ!

ಕೈಲಾಸದಲ್ಲಿ ಶಿವ ಪಾರ್ವತಿಯರೆದ್ದು
ಗಂಗೆಯ ಮಿಂದು ಹಿಂದಿರುಗುವರದೆ ಕಾಣೊ
ಮುಡಿಯ ಕೊಡಹಿದ ತುಂತುರಿಳಿಯುತಿಬ್ಬನಿಯಾಗಿ
ಮಿರುಗಿದೆ ಹೂವಲೆ ಹಸುರು ಹುಲ್ಲಿನ ಮೇಲೆ
ಮುತ್ತು ಬಿತ್ತಿದವೋಲೆ ಕಣ್ಗೆ ಮುತ್ತೊತ್ತಿ!
ನಿದ್ದೆ ಸಾಕೆದ್ದೇಳೊ, ನನ್ನ ಮುದ್ದು ಕಂದಯ್ಯ;
ಹೊದ್ದ ಕತ್ತಲೆಯೊದ್ದು ಬೆಳಗೇಳುತಿದೆ ನೋಡೊ,
ಮುದ್ದು ಕಂದಯ್ಯ!

ಇಣಿಕಿಣಿಕಿ ನಾಚಿ ಮರೆಯಾಗುತಿದೆ ಚುಕ್ಕಿ;
ಗೂಡಿನಿಂದೆದ್ದು ಹಾರಾಡಿ ಹಾಡಿದೆ ಹಕ್ಕಿ.
ಮಕರಂದವೀಂಟುವ ಜೇನುಗಾನವ ಕೇಳಿ
ಅಲರಿಂದ ಅಲರಿಗೆ ಅಲೆದಾಡುತಿದೆ ಗಾಳಿ.
ಕಿರಣ ಚಾಮರದಿಂದೆ ಗಗನ ಜಗಲಿಯ ಗುಡಿಸಿ,
ಮಳೆಯ ಬಿಲ್ಲಿನ ಪುಡಿಯ ಮುಗಿಲ ರಂಗೋಲಿಯನು
ಜಗವ ಮೋಹಿಸುವಂತೆ ಹಗುರಾಗಿ ಸಿಂಗರಿಸಿ,
ಸೂರ್ಯದೇವನ ರಾಣಿ ಪೂರ್ವದಿಗ್ ದ್ವಾರದಲಿ
ನಿಂತಿರುವಳದೊ ತಾನೆ ಮಂಗಳಾರತಿಯಾಗಿ,
ಶೃಂಗಾರ ರತಿಯಾಗಿ,ಸೌಂದರ್ಯ ಕೃತಿಯಾಗಿ, ದಿವಸ ಪತಿಗಾಗಿ!
ನಿದ್ದೆ ಸಾಕೆದ್ದೇಳೊ, ನನ್ನ ಮುದ್ದು ಕಂದಯ್ಯ;
ಹೊದ್ದ ಕತ್ತಲೆಯೊದ್ದು ಬೆಳಗೇಳುತಿದೆ ನೋಡೊ,
ಮುದ್ದು ಕಂದಯ್ಯ!

ಇರುಳು ಬಾನಿಂದಿಳಿದು ಗಿರಿಯ ನೆತ್ತಿಗೆ ಬಂದು
ಸಾನು ತಪ್ಪಲ ಸಿರಿಯ ಮೇಯುತಲೈ ತಂದು
ಕಣಿವೆ ಕಣಿವೆಯ ಸೇರಿದುಣ್ಣೆಮಂಜಿನ ಮಂದೆ
ಬಿಸಿಲ ಸಿಂಹನ ಕಿರಣ ಕೇಸರಗಳಿಗಂಜಿ,
ವೈರಿ ಕಾಣುವ ಮುಂದೆ ಓಡುವಂದದಿ ಹಂದೆ,
ಬಂದ ರೂಪಂಗೆಟ್ಟು ಬಂದ ಬಟ್ಟೆಯ ಬಿಟ್ಟು
ಹಿಂಜರಿಯುತಿದೆ ಹಿಂಜಿ, ಹೆದರಿ,
ನಾನಾ ದೆಸೆಗೆ ಕೆಟ್ಟು, ಕೆದರಿ.
ನಿದೆ ಸಾಕೆದ್ದೇಳೊ, ನನ್ನ ಮುದ್ದು ಕಂದಯ್ಯ;
ಹೊದ್ದ ಕತ್ತಲೆಯೊದ್ದು ಬೆಳಗೇಳುತಿದೆ ನೋಡೊ,
ಮುದ್ದು ಕಂದಯ್ಯ!

ಮರನೆರಲು ಗಿರಿಯೇರಿ, ಗಿರಿನೆಳಲು ದರಿಹಾರಿ,
ಬಂಡೆಯ ನೆರಳೆದ್ದು ಬಳಿಯ ಬಂಡೆಯನೇರಿ;
ಹುತ್ತ ಗೋಪುರ ನೆಳಲು ಮರನೆತ್ತಿಯನೆ ಮೀರಿ;
ಮತ್ತೆ ಹೊದೆಹೊದೆ ನೆಳಲು ರಂಗೋಲಿ ಹಸೆಯಂತೆ,
ಮುತ್ತು ಕರಿಮಣಿ ಕೋದ ಚಿತ್ರ ಝಲ್ಲರಿಯಂತೆ,
ಅಗಲಲಾರದೆ ಇರುಳು ಹಗಲಪ್ಪಿದೋಲಂತೆ,
ಬೇಳಕು ಕತ್ತಲೆಯೆರಡೂ ಹಾಸು ಹೊಕ್ಕಾದಂತೆ
ಹುಲ್ಲಲ್ಲಿ ಕಲ್ಲಲ್ಲಿ ನೆಲದಲ್ಲಿ ಅಲ್ಲಲ್ಲಿ
ತಮ್ಪಾಯ್ತು; ಚೆಲ್ವಾಯ್ತು; ತೂಗುವುಯ್ಯಲೆಯಾಯ್ತು;
ಆನಂದ ಶಿಶುಗೊಂದು ಸಿರಿದೊಟ್ಟಿಲಾಯ್ತು.
ನಿದ್ದೆ ಸಾಕೆದ್ದೇಳೊ, ನನ್ನ ಮುದ್ದು ಕಂದಯ್ಯ;
ಹೊದ್ದ ಕತ್ತಲೆಯೊದ್ದು ಬೆಳಗೇಳುತಿದೆ ನೋಡೊ,
ಮುದು ಕಂದಯ್ಯ!

ಹೊದೆಯ ಹಕ್ಕೆಯನುಳಿದು ಜಿಂಕೆತಾಯೊಡಗೂಡಿ
ಕಾಡಂಚು ಕಟ್ಟಿದ ಹೊಳೆಯ ದಂಡೆಗೆ ಬಂದು
ರಾಸಿ ದಿಣ್ಣೆಯ ಮಳಲ ನುಣ್ಪುಹಾಸಿನ ಮೇಲೆ
ಬಾಲ ಬಿಸಿಲಿಗೆ ತನ್ನ ಮೆಯ್ಯನೊಡ್ದಿದ ಮರಿಯ
ಮುದ್ದು ಮೆಯ್ಯನು ನೆಕ್ಕುವಕ್ಕರೆಗೆ ಹಾಲುಕ್ಕಿ
ಸೋರುತಿರಲಾ ಕೆಚ್ಚಲನೆ ಲೆಕ್ಕಿಸದೆ ನಿಂತು
ನಿನ್ನನ್ನೊ ನನ್ನನ್ನೊ ನೆನೆಯುತ್ತೆ ಬಯಸುತ್ತೆ

ಕಣ್ ನಟ್ಟು ಕಿವಿನಿಮಿರಿ ಮೈಮರೆತಿದೆ.
ಹಕ್ಕಿಯಲಿ ಕಾಡನ್ನೊ ಮೊರೆ ತೆರೆಯ ಹೊನಲನ್ನೊ
ತಾಯನ್ನೊ ತನ್ನನ್ನೊ ಮತ್ತೆ ಮರೆತೇನನ್ನೊ –
ಕಣ್‌ನಟ್ಟು ಕಿವಿನಿಮಿರಿ ಮೈಮರೆತಿದೆ.
ನಿದ್ದೆ ಸಾಕೆದ್ದೇಳೊ, ನನ್ನ ಮುದು ಕಂದಯ್ಯ;
ಹೊದ್ದ ಕತ್ತಲೆಯೊದ್ದು ಬೆಳಗೇಳುತಿದೆ ನೋಡೊ,
ಮುದ್ದುಕಂದಯ್ಯ!

ಹಕ್ಕಿಕರೆ ಹೊಳೆಯಮೊರೆ ಜಿಂಕೆಮರಿ ಕೂಡಿ
ಕಾಡಂಚು ಕಟ್ಟಿದ ಹೊಳೆಮಳಲೊಳಾಡಿ
ನಲಿದಾಡಿ ಕುಣಿದಾಡಿ ಕೂಗಾಡಲೇಳಯ್ಯ,
ಹೊತ್ತಾಯಿತೇಳಯ್ಯ, ಓ ನನ್ನ ಕಂದಯ್ಯ;
ನಿದ್ದೆ ಸಾಕೆದ್ದೇಳೊ, ನನ್ನ ಮುದ್ದು ಕಂದಯ್ಯ;
ಹೊದ್ದ ಕತ್ತಲೆಯೊದ್ದು ಬೆಳಗೇಳುತಿದೆ ನೋಡೊ,
ಮುದ್ದು ಕಂದಯ್ಯ!