ಓ ತೃಷಿತ ಚಂಚರೀಕ,
ಬಾರ, ಹೃದಯಪುಂಡರೀಕ
ನಿನ್ನನರಳಿ ಕಾದಿದೆ!
ಎದೆಯ ತುಂಬ ಮಧುವನಿಟ್ಟು
ದಾರಿಯೆಡೆಗೆ ದಿಟ್ಟಿಯಿಟ್ಟು
ಬಯಸಿ ನೋಡಿ ಕಾದಿದೆ!

ಉದಯ ಅಚಲದಲಿ ರವಿ
ಬರುವ ಚಿಹ್ನೆಯರುಣ ಛವಿ
ಓಕುಳಿಯನೆ ಚೆಲ್ಲಿದೆ!
ಸರೋವರದ ಸಲಿಲ ಮುಖತೆ,
ಪ್ರಿಯಜನರಾ ಪ್ರೇಮಸುಖಕೆ,
ಓಕುಳಿಯನೆ ಚೆಲ್ಲಿದೆ!

ಮೂಡಣೆಲರು ತೀಡುತಿದೆ;
ಕೆರೆಯ ನೀರು ನಡುಗುತಿದೆ;
ಹೂ ಬಟ್ಟಲು ಬಳುಕಿದೆ.
ಮಧುಭಾರಕೆ ಪದುಮ ಪಾತ್ರೆ
ಪೂರ್ವ ಪಶ್ವಿಮಕ್ಕೆ ಯಾತ್ರೆ:
ಮಕರಂದವೊ? ತುಳುಕಿದೆ!

ಬಾರ ಬೇಗ ಚಂಚರೀಕ,
ಬಾರ, ಹೃದಯಪುಂಡರೀಕ
ಹಂಬಲಿಸಿದೆ ನಿನ್ನನೆ.
ಬೇಗ ಹಿಂಡಿ ಹೀರು ನನ್ನ
ಜೇನು ಸೋರಿ ಹೋಹ ಮುನ್ನ,
ಪ್ರೇಮ ಪಾನ ಧನ್ಯನೆ!