ಸೋವಿಯಟ್ ಸೈನ್ಯಗಳ್ ನಾಜೀ ಪತಾಕಮಮ್
ಮುರಿಯುತಿವೆ ಖಾರ್ಕೋವಿನೊಳ್;
ಚೀಣಾ ಜಪಾನುಗಳ್ ಸಂಧಿಸಿವೆ ಬರ್ಮದೊಳ್
ಸಾವ್ ಬದುಕು ಸಂಗ್ರಾಮದೊಳ್.
ಅತ್ತಾ ಅಮೇರಿಕೆಯೊಳಾಯುಧಂಗಳ ಸೃಷ್ಟಿ;
ಇತ್ತ ಇಂಗ್ಲೆಂಡಿನೊಳ್ ಚರ್ಚಿಲ್ ವಚನ ವೃಷ್ಟಿ!

ಯುದ್ಧಸಿದ್ಧತೆಯುಳಿದ ಕರ್ಮಗಳಿಗಿಂದೆಲ್ಲಿ
ಬಹುಮಾನ ಬಿರುದುಗಳ ಬೆಲೆಯ ಮಾತು?
ಆದರೂ ಎದೆತಟ್ಟಿ ಹೇಳುವೆನು ನಾನಿಲ್ಲಿ: –
ನನ್ನ ಕೆಲಸಕೆ ಮಾತ್ರ ದೇವನೋತು
ಹರಸುವನು ಲೋಕವನು! ಕೆಲಸವೇನೆಂಬೆಯೇನ್?
ಒಂದು ವರುಷದ ಚೈತ್ರ, ನನ್ನೆಳೆಯನು,
ಮಲಗಿ ನಿದ್ರಿಸುತಿಹನು: ಪೀಡಿಸುವ ನೊಣಗಳನ್
ನಿದ್ದೆಗೆಡದಂತೆವೊಳ್ ಸೋವುತಿಹೆನು!