ದೇವರ ಹರಕೆಯ ಬಾನಿಂ ಭೂಮಿಗೆ
ನೀಡಿದ ಕೈ ಈ ಕಂದನ ಮೈ!
ಈ ಮುದ್ದೀ ಸೊಗಸೀ ಪೆಂಪಿಂಪಂ
ಮಾಡಬಲ್ಲುದೇನನ್ಯರ ಕೈ?

ನೋಡಾ, ತುಂಬು ಸರೋವರವೀ ಕಣ್:
ಆಕಾಶದ ಶಿವನಂ ಪ್ರತಿಫಲಿಸಿ
ಅತ್ತಿಂದಿತ್ತಲ್ ಇತ್ತಿಂದತ್ತಲ್
ಚಲಿಸುತ್ತಿವೆ ಸಾಗರಗಳ ಸಂಚಲಿಸಿ!

ಅಣ್ಣನ ಕಾಲಿದು ಪುಣ್ಯದ ಕಾಲು:
ಮೇರುಪರ್ವತವನೇರಿದ ಕಾಲು;
ದೇವಗಂಗೆಯೊಳೀಜಿದ ಕಾಲು;
ಹೊನ್ನಿನ ಹುಡಿಯಲಿ, ಹಾಲ್ಕೆನೆ ಕೆಸರಲಿ
ಸಿಂಗರಗೊಂಡಿವೆ ಈ ಕಾಲು!

ಕನ್ನಡಿ ಹಿಡಿದಿದೆ ಬ್ರಹ್ಮಾಂಡಕೆ ಈ
ಕಂದನ ಮುಖದರ್ಪಣ ಕಾಣಾ!
ಸೂರ್ಯ ಚಂದ್ರರಲೆಯುತ್ತಿಹರಲ್ಲಿ;
ಉರಿದಿವೆ ತಾರಾ ಕೋಟಿಗಳಲ್ಲಿ;
ಹೊಳೆ ತೊರೆ ಹರಿದಿವೆ; ಮುನ್ನೀರ್ ಮೊರೆದಿವೆ;
ಪರ್ವತ , ಕಾನನ, ಖಗಮೃಗ ಮೆರೆದಿವೆ;
ಸೃಷ್ಟಿಯೊಳೇನೇನಿಹುದೋ ಎಲ್ಲಾ
ಈ ಮುಖದೊಳೆ ಕವಿ ಕಾಣಲು ಬಲ್ಲ:
ನಿನಗೂ ಕಾಣುವ ಕಣ್ಣದ್ದರೆ ಕಾಣಾ,
ಬರೆದುದನೋದುವ ಬಲ್ ಜಾಣಾ!