ಕರುಬಿದನು ಸಂಸಾರಿ;
ಕವಿ ನಲಿದನು!
ಹೂವಿಡಿದ ಸೂರ್ಯಕಾಂತಿಯ ಗಿಡಗಳೆಡೆಯಲ್ಲಿ
ವೈಶಾಖದುದಯ ಸೂರ್ಯನ ಕಾಂತಿಯಲ್ಲಿ
ಬೀಸಿಬಹ ಹೊತ್ತರೆಯ ತಣ್ಣನೆಯೆಲರಿನಲ್ಲಿ
ಕಣ್ಗೊಸಗೆಯಾಗುತಿರೆ, ಮನಸಿನಲ್ಲಿ
ಕರುಬಿದನು ಸಂಸಾರಿ;
ಕವಿ ನಲಿದನು!

ಹಸುರು ಗಿಡಗಳ ಹಸುರು ತೊಟ್ಟಿನ ತುದಿಗಳಲ್ಲಿ
ಹೊಚ್ಚ ಹೊಸ ಹೊನ್ನ ಹಳದಿಯ ಹೂಗಳಲ್ಲಿ
ಹಳದಿ ಸವಿ ಹೂಹುಡಿಯ ಕಿರುಹೊರೆಯ ದುಡಿವಡಿಯ
ಮೊರೆವಳಿಗಳನು ನೋಡಿ, ತೊರೆದು ನುಡಿಯ
ಕರುಬಿದನು ಸಂಸಾರಿ;
ಕವಿ ನಲಿದನು!

ಹೇಮಸುಮ ಸೌಂದರ್ಯ, ಮಕರಂದ ಮಾಧುರ್ಯ,
ಝೇಂಕರಿಸುವಾರಡಿಗಳೊಕ್ಕೊರಲಿನಿಂಪು,
ಕಲ್ಪನೆಯ ರಸದ ಭಾವದ ನೆನಹಿನೌದಾರ್ಯ,
ಸಂತೋಷ ಲಕ್ಷ್ಮಿಯಪ್ಪುಗೆಯಲಂಪು:
ಕರುಬಿದನು ಸಂಸಾರಿ;
ಕವಿ ನಲಿದನು!

ನನ್ನ ಮನೆಯಂಗಳದಿ ನಾ ನಟ್ಟು ನೀರ್ವೊಯ್ದು
ಬೆಳೆದ ಹೂವಿನ ಜೇನು ನನಗಿಲ್ಲವೆಂದು,
ಕಂಡವರ ಮನೆಯ ಬಂಡಾಳ್ಗಳಿಲ್ಲಿಗೆ ಬಂದು
ಕೊಂಡೊಯ್ಯುತಿಹರೆನ್ನನವರಿಗೆಂದು
ಕರುಬಿದನು ಸಂಸಾರಿ;
ಕವಿ ನಲಿದನು!