ಕುಣಿಯುತ ಬಾ, ಕುಣಿಯುತ ಬಾ,
ಕುಣಿಯುತ ಬಾ, ಕಂದಯ್ಯ;
ತಂದೆತಾಯಿಯರ ಕಲೆಯ ಕಣ್ ನವಿಲ
ಕುಣಿಸಿ ತಣಿಸಿ ಬಾ, ಕಂದಯ್ಯ.
ಮಲೆಯ ಅಡವಿಯಲಿ ಚಿಮ್ಮಿ ಜಿಂಕೆಮರಿ
ತನ್ನಮ್ಮನೆಡೆಗೆ ನೆಗೆವಂತೆ ಬಾ;
ಬೆಟ್ಟನೆತ್ತಿಯಿಂದುರುಳಿ ಕಲ್ಗಳಲಿ
ಸುತ್ತಿ ಸುಳಿವ ತೊರೆಯಂತೆ ಬಾ!

ಕಂಪುಸುಗ್ಗಿಯಾ ತಂಪುದೋಂಟದಲಿ
ಎಲರಿನೊಡನೆ ನಲಿವಲರಾಗಿ;
ಹೂ ತಳಿರಸೊಂಪು, ಹಕ್ಕಿಕೊರಲಿಂಪು,
ಹಡೆದವರ ಹೆಂಪು ನೀನಾಗಿ,
ಬದುಕನೊಲಿಸಿ ಬಾ, ಬಾಳ ನಲಿಸಿ ಬಾ,
ಎದೆಯನುಲಿಸಿ ಬಾ, ಕಂದಯ್ಯ;
ತಂದೆತಾಯಿಯರ ಕಲೆಯ ಕಣ್ ನವಿಲ
ಕುಣಿಸಿ ತಣಿಸಿ ಬಾ, ಕಂದಯ್ಯ್!