ಕೇಳ್ದೊಡನೆ ಚಿಮ್ಮಿತಾನಂದದೋಕುಳಿಬುಗ್ಗೆ
ತುಂಬಿದೆದೆ ಬಾನಲ್ಲಿ ಮಳೆಯ ಬಿಲ್ಲನು ಕಟ್ಟಿ!
ನಂದನ ವನದ ಕಲ್ಪತರು ಶಿಖರವನು ಮುಟ್ಟಿ
ಕವಿಯ ಕಲ್ಪನೆ, ಇಂದ್ರನಮರಾವತಿಗೆ ಲಗ್ಗೆ
ನುಗ್ಗಿತೆನೆ, ನೆಗೆಯುತೈರಾವತದ ಬೆನ್ಗೇರಿ,
ದೇವಗಂಗೆಯ ಮಿಯುತಮೃತದ ಮಡುವನೀಂಟಿ,
ದಿಕ್ಪಾಲ ಪುರಗಳು ಚರಿಸುತೆಲ್ಲೆಯ ದಾಂಟಿ,
ಮೈಮರೆತುದೆನ್ನ ಗುರುದೇವನಂಘ್ರಿಯ ಸಾರಿ
ನಮಿಸುತೆ ಕೃತಜ್ಞತಾ ಭಕ್ತಿಯಲಿ! – ಗುರು, ನಿನ್ನ
ಕೃಪೆ ನನ್ನ ಸತಿಸುತರ ಮೇಣೆನ್ನ ಮೇಲಿರಲಿ
ಸರ್ವದಾ. ಶ್ರದ್ಧೆ ಬಳುಕದೆ ನಿತ್ಯವಾಗಿರಲಿ
ನಿನ್ನ ಮಹಿಮೆಯೊಳಮಗೆ. ಪ್ರೇಮಾಂಗಿನಿಯ ನನ್ನ
ಕುವರನಾಗಲಿ ಪೂರ್ಣಚಂದ್ರಸಮ ತೇಜಸ್ವಿ:
ಕಾಂತಿ ಶಾಂತಿಯನಿತ್ತು ನಲಿಸುವ ರಸತಸ್ವಿ!