ಬಂದನಿದೊ ಕೋಕಿಲೋಲ್ಲಾಸ ಚೈತ್ರಂ, ಕವಿಯ
ಜೀವನ ಸುಖ ವಹಿತ್ರಂ. ಆಗಮನ ಸಂಭ್ರಮಕೆ
ಸಮೆದಿಹಳ್ ಲೋಕಮಾತೆಯೆ ವಸಂತೋದಾರ
ಸಹ್ಯಸೀಮೆಯ ವಿಪಿನರಂಗಮಂ. ಸುಡುವಿಸಿಲ್
ತವಿದಿಹುದು ಮೊದಲ ಮುಂಗಾರ್ಮಳೆಯ ಹದಸಿರಿಯ
ತಣ್ಪಿಂದೆ. ನೆಲದ ಬಿರಿದೆದೆ ಪುಲ್ಪಸುರ್ಪಿಂದೆ
ಬೆಸುಗೆಗೊಂಡಿದೆ ಮರಳಿ, ವಿರಹಿ ಹೃದಯದ ಮಿಲನ
ಪುಲಕ ಕೃತಿಯಂತೆ. ತೀಡಿದೆ ಶೀತಲಾನಿಲಂ
ಸಹ್ಯಾದ್ರಿ ವನಶಿರಕೆ ಶೈಶಿರಸಸ್ಕ್ರತಿ ಪುನರ್
ಜನ್ಮಿಸಿದವೋಲ್. ತಳಿರ ಸುಳಿವಿನಿತುಮಿಲ್ಲದೆಯೆ,
ಓಕುಳಿಯನೆರಚುವಾ ಜೀರ್ಕೊಳವಿ ನಿಲ್ವಂತೆ,
ಪೂತು ನಿಂತಿದೆ ಕೆಂಪುವೂ ಸಾಲ್ಮರಂ, ರತಿಯೆ
ಕೃತಿಗೆಯ್ದು ಮನ್ಮಥನ ಬಾಸಿಗಮೆನಲ್. ಹೊಂಗೆ,
ನೆಳಲ ನೆಯ್ಯುವ ಪಸುರ ಪೊಸತಳಿರುಡೆಯನುಟ್ಟು,
ತನ್ನ ಪಾದಕೆ ತಾನೆ ಕುಸುಮ ಧವಳಾಕ್ಷತೆಯ
ರಂಗವಲ್ಲಿಯನಿಕ್ಕಿ, ಮಂಗಳವನುಲಿಯುತಿದೆ
ಭೃಂಗಸಂಗದ ಕಂಠದೋಂಕಾರ ಝೇಂಕೃತಿಯ
ಸಾಮಸಂಗೀತಮಂ. ಹಳದಿವೂ ಸಾಲ್ಮರಂ
ಹೊನ್ನರಿಲ ಸೇಸೆಯಂ ಸೂಸಿ ಶುಭಮಕ್ಕೆಂದು
ನಿನ್ನನಾಶೀರ್ವದಿಸುತಿಹುದು, ಓ ನನ್ನೆದೆಯ
ಶಿಶುಮೂರ್ತಿ, ಕೋಕಿಲೋದಯ ಚೈತ್ರ! ಬಗ್ಗಿಸೆಲೆ
ಕೋಗಿಲೆಯೆ, ನಿನ್ನ ಸಗ್ಗದ ತೂರ್ಯಮಂ. ಉಲಿಯಿರೈ,
ಮಲೆಯ ನೋಟದ ಚೆಲ್ವು ತಾಂ ಬೀಣೆಯಾಗಲಾ
ಶಾಂತಿ ಮೌನದ ತಂತಿಯಂ ಮೀಂಟೆ ಮಿಡಿಯುತ್ತೆ
ಕವಿಗೆ ರಸರೋಮಾಂಚನವನೀವ, ಓ ಮಲೆಯ
ಗರಿವೆತ್ತ ರಸಿಕರಿರ, ಮುಂದೆ ನಿಮ್ಮೊಡನುಲಿವ
ಗಿರಿವನ ಪ್ರಿಯ ಸಖನ ಪುಣ್ಯ ಜನ್ಮೊತ್ಸವಂ
ಸಂಭವಿಸಿತಿಂದು! ಕೈಲಾಸದಿಂದಿಳಿತಂದು
ಹರಸಿಹರು ಶಿವಶಿವಾಣಿಯರಾತನಂ; ಸಿರಿಯ
ಕೂಡೆ ವೈಕುಂಠದಿಂ ಬಂದು ಕಮಲಾಕ್ಷನುಂ;
ವೀಣಾ ಕರದ ಸರಸ್ವತಿಯೊಡನೆ ಅವತರಿಸಿ
ಹರಸಿಹನು ಬ್ರಹ್ಮಂ, ಕಲಾಕೋವಿದಂ. ಬಲ್ಲ
ಋಷಿಗಳುಂ, ಮತ್ತೆಲ್ಲ ಗುರುಗಳುಂ, ಮೇಣಖಿಲ
ಕವಿಗಳುಂ ಸರ್ವದೇವತೆಗಳುಂ ಬಂದಿಲ್ಲಿ
ಹರಸುತಿರೆ ದಿವ್ಯ ಕಂದನ ಜೀವಮಾನಮಂ,
ನೀಡುತಿರೆ ತಮ್ಮ ತಮ್ಮಾತ್ಮೀಯ ದಾನಮಂ,
ನಾನೀವೆನಿದೊ ನಿನಗೆ ಈ ಪ್ರೀತಿತಾನಮಂ,
ಮಂತ್ರಛಂದಃ ಪೂರ್ಣ ಕವಿಹೃದಯಗಾನಮಂ!