ಬಳೆಯುತಿರೆ ದಿವ್ಯಾರ್ಭಕಂ ಗರ್ಭಗುಡಿಯಲ್ಲಿ
ನಿನ್ನ ಮೈ, ಗರ್ಭಿಣಿಯೆ, ದೇವಾಲಯಂ; ಪೂಜ್ಯೆ
ನೀನೆನಗೆ. ಓ ಲಕ್ಷ್ಮಿ, ಓ ಸೃಷ್ಟಿಸಾಮ್ರಾಜ್ಯೆ,
ನಿನ್ನ ಕರ್ಮದ ಮಹಿಮೆ ನಿನಗರಿಯದೆ: ಬಳ್ಳಿ

ಹೂ ಹಡೆವುದಲ್ತೆ? ಸಾಮಾನ್ಯಪಾಮರ ದೃಷ್ಟಿ
ಕಾಣದದರಲಿ ಕೃತಿರಹಸ್ಯದ ಪವಾಡಮಂ;
ಬ್ರಹ್ಮಶಿಲ್ಪಿಯ ಪರಮ ಕಲೆಯ ಕೈವಾಡಮಂ
ಕಂಡು ರೋಮಾಂಚ ರಸವಶನು ಕವಿ! ತವ ಸೃಷ್ಟಿ

ಕವಿಕೃತಿಗೆ ಕೀಳಲ್ಲ. ಪೇಳ್ವವಂಗರಿಯದಿರೆ
ಕೇಳ್ವ ರಸಿಕಂಗರಿಯದಿಹುದೆ ವರಕೃತಿ ಮಹಿಮೆ?
ತನ್ನ ತಾನರಿಯದು ಮಹತ್ತು, ಕೈಮುಗಿಯದಿರೆ
ಜಗತ್ತು: ರಾಮಾನುಚರನಾಂಜನೇಯಂಗುಪಮೆ!

ಪೂರ್ಣಾಂಗಿ, ತೇಜಸ್ವಿ ಪೂರ್ಣಚಂದ್ರ ಶರೀರೆ,
ಶಿವಕೃತಿ ಕಲಾರಂಗಮೆನಗೆ ನೀನ್, ಓ ನೀರೆ!