ನಾ ನಿನಗೆ ನೀನೆನಗೆ ಜೇನಾಗುವಾ!
ರಸ ದೇವಗಂಗೆಯಲಿ ಮೀನಾಗುವಾ!
ಹೂವಾಗುವಾ ಹಣ್ಣಾಗುವಾ
ರತಿರೂಪಿ ಭಗವತಿಗೆ ಮುಡಿಪಾಗುವಾ!

ಶಿವನೆನ್ನ ಸುಖಕೆ ಸುಖಿ;
ಶಿವೆ ನಿನ್ನ ಸುಖಕೆ ಸುಖಿ;
ಶಿವಶಿವೆಯರಾ ಸುಖವ
ಸವಿವಖಿಲ ಲೋಕ ಸುಖಿ!
ಬಾ ಬಾರ, ಬಾರ, ಸಖಿ,
ನಾ ನಿನಗೆ ನೀನೆನಗೆ ಜೇನಾಗುವಾ!
ರಸ ದೇವಗಂಗೆಯಲಿ ಮೀನಾಗುವಾ!

ಬಿಂಬ ಚುಂಬನ ರಸದ
ಅಗ್ನಿ ಆನಂದದಲಿ
ಕರಗೆ ಕೈಲಾಸ,
ವಕ್ಷದಾಲಿಂಗನದ
ಇಕ್ಷುಪೀಡನಕುಣ್ಣೆ
ಕ್ಷೀರೋಧಿಹಾಸ,
ಚಂದ್ರಮಂಟಪದಲ್ಲಿ
ಇಂದ್ರ ಇಂದ್ರಯಕುದಿಸೆ
ಭೋಗ ಸಂತ್ರಾಸ,
ಗಂಗೆಯಮುನೆಯ ತೊಡೆಯ
ತುಂಗಭದ್ರೆಗೆ ಮೂಡೆ
ತೀರ್ಥ ನಿಃಶ್ವಾಸ,

ಬಾ ಬಾರ, ಬಾರ ಸಖಿ,
ನಾ ನಿನಗೆ ನೀನೆನಗೆ ಜೇನಾಗುವಾ!
ರಸದೇವಗಂಗೆಯಲಿ ಮೀನಾಗುವಾ!

ರಾಮಚಂದ್ರನ ಮನದ
ಮಾದೇವಿ ಸೀತೆ,
ಪುಂಡರೀಕನ ಪಡೆದ
ಶ್ರೀ ಮಹಾಶ್ವೇತೆ
ತಮ್ಮ ಹರಕೆಯನೊಸಗೆಮಂಚವಝ ಮಾಡಿ,
ವಿರಹದುದಿರಿಯನು ಕುದಿಸಿ
ಹಾಲು ಪುಣ್ಯವ ಹಾಸಿ,
ಹೂವು ಸುಖವನೆ ಹೊದಿಸಿ
ಮಿಲನ ಮಧುವನು ಸೂಸಿ,
ಕರುಣಿಸಲಿ ಕೃಪೆಮಾಡಿ
ತಮ್ಮ ನೋಂಪಿಯ ಸುಧಾರಕ್ಷೆ ನೀಡಿ!
ಬಾ ಬಾರ, ಬಾರ ಸಖಿ,
ನಾ ನಿನಗೆ ನೀನೆನಗೆ ಜೇನಾಗುವಾ!
ರಸದೇವಗಂಗೆಯಲಿ ಮೀನಾಗುವಾ!