ಮೊದಲನೆಯ ಮಿಲನವೇನ್?
ಅಹುದು ಈ ಜನ್ಮದಲಿ!
ಇಲ್ಲದಿರೆ, ಮರೆತ ಚಿರ ಪರಿಚಿತೆಯನಿನ್ನೊಮ್ಮೆ
ಇದಿರುಗೊಂಡಂತಾದುದೇಕೆ?-
ಜನ್ಮ ಜನ್ಮಾಂತರದ ನಲ್ಲೆಯಾಕೆ!

ಕುಳಿತು ಕಾಯುತ್ತಿದ್ದೆ ಗಗನದಂತೆ
ಪ್ರಣಯಿ ನಾನು;
ಕತ್ತಲೆಗೆ ಕೆಮ್ಮಿಂಚು ಬಳುಕಿ ಬರುವಂತೆ
ಬಂದೆ ನೀನು,
ಓ ನನ್ನ ಚಿರಪರಿಚಿತೆ!
ನೀ ನನ್ನ ಗುರುತಿಸಿದೆ;
ನಾ ನಿನ್ನ ಗುರುತಿಸಿದೆ;
ಕರಗಿದುದು ಬಹು ಜನ್ಮ ಕಾಲದೇಶದ ಹಿರಿಯ
ಕರಿಯ ಕಲ್ ಗೋಡೆ
ನಾ ನಿನ್ನ ನೀನೆನ್ನ ನೋಡೆ!
ಚೆಲುವೆ, ಶರಣಾದೆ ನೀನೆನ್ನನೊಪ್ಪಿ;
ಸಂಪೂರ್ಣನಾದೆ ನಾ ನಿನ್ನನಪ್ಪಿ!
ನಾನು ಮಾತಿನ ಹೊಳೆಯ ಹೊನಲಾಗಿ ಹರಿದೆ,
ಸವಿನುಡಿಯ ಮಳೆಯ ಕರೆದೆ;
ನೀನು ಮೌನದ ಬಂಡೆಯಂದದಲಿ ಕುಳಿತೆ
ನೀರ್ ನಡುವೆ ನಲ್ ಮೊರೆಯನಾಲಿಸುತ, ಓ ನನ್ನ ಲಲಿತೆ! –  –
ಅಯ್ಯೊ ಆ ಜೇನಿರುಳು ಬೆಳಗಾದುದೇಕೆ?
ನಮ್ಮಿರ್ವರಾ ಬಿಗಿದ ನಲ್ಮೆತೋಳ್ ತಾವರೆಯ ಸೆರೆಗೆ
ಬಿಡುಗಡೆಯ ಹಾಳು ರವಿ ಉದಯಿಸಿದನೇಕೆ?