ಮೂಡಿ ಬಂದಾ ಉದಯರವಿ ನೋಡು ಕಂದಾ!
ಬಿಸಿಲ ನೆವದಲಿ ಶಿವನ ಕೃಪೆಯ ತಂದ!
ಹಬ್ಬುತಿದೆ ಜಗಕೆಲ್ಲ ಹೊಂಬೆಳಕಿನಾನಂದ:
ಏನು ಚಂದಾ ಲೋಕವಿದು ಏನು ಚಂದ!

ಓಕುಳಿಯನಾಡುತಿದೆ ಕೆನೆಮುಗಿಲ ಲೋಕದಲಿ
ನಿನ್ನ ಕೆನ್ನೆಯ ಕೆಂಪು: ಕಾಣು, ಕಂದಾ!
ಜೋಗುಳವನುಲಿಯುತಿದೆ ಹಕ್ಕಿಗಳ ಹಾಡಿನಲಿ
ನಿನ್ನ ಸವಿಗೊರಲಿಂಪು: ಕೇಳು, ಕಂದಾ!

ವಿಶ್ವವೆಲ್ಲಾ ಸೇರಿ ವಿಶ್ವಾಸದಲಿ ಕೋರಿ
ಪಡೆದಂದವೀಯೊಡಲ ಚಂದ, ಕಂದಾ,
ವಿಶ್ವಾತ್ಮವನೆ ಸಾರಿ, ವಿಶ್ವದೊಲವನೆ ತೋರಿ,
ವಿಶ್ವದಾನಂದವಾಗೆನ್ನ ಕಂದಾ!