ನೀನೆಮ್ಮ ಪ್ರಾರ್ಥನೆಯ ಶಿಶು ಕಣಾ, ತೇಜಸ್ವಿ;
ಬರಿಯ ತನುಜಾತನಲ್ಲಹುದಾತ್ಮಜಾತನುಂ..
ಮೆಯ್ಯ ಭೋಗಕೆ ಮನದ ಯೋಗದ ಮುಡಿಪನಿತ್ತು
ನಮ್ಮಾಶೆ ಬಿಜಯಗಯಸಿದೆ ನಿನ್ನನೀ ಜಗಕೆ
ಪೆತ್ತು. ತನುವಿನ ಭೀಮತೆಗೆ ಮನದ ಭೂಮತೆಯೆ
ಕಾರಣಂ. ಕಾಯ ಕಾಂತಿಗೆ ತಾಯಿ ತಂದೆಯರ
ಮೆಯ್ಯ ತೇಜಂ ಮಾತ್ರಮಲ್ತಾತ್ಮದೋಜಮುಂ
ಕಾರಣಂ.

ಕವಿಯ ಬೃಹದಾಲೋಚನಾ ಸಾರಂ,
ಕವಿಕಲ್ಪನೆಯ ಮಹಾ ಭೂಮ ಭಾವಂಗಳುಂ,
ಕವಿ ಶರೀರದ ನಾಳದಲಿ ಹರಿವ ನೆತ್ತರೊಳ್
ತೇಲುತಿಹ ಸಹ್ಯಾದ್ರಿ ಪರ್ವತಾರಣ್ಯಮುಂ,
ಕವಿ ಸವಿದ ಸೂರ್ಯ ಚಂದ್ರೊದಯಸ್ತಾದಿಗಳ
ಜಾಜ್ವಲ್ಯ ಸೌಂದರ್ಯಮುಂ, ಜೀವ ದೇವರಂ
ಹುಟ್ಟು ಸಾವಂ ಸೃಷ್ಟಿಯುದ್ದೇಶಮಿತ್ಯಾದಿ
ಸಕಲಮಂ ಧ್ಯಾನಿಸಿ ಮಥಿಸಿ ಮುಟ್ಟಿಯನುಭವಿಸಿ
ಕಟ್ಟಿದ ಋಷಿಯ ‘ದರ್ಶನ’ದ ರಸ ಮಹತ್ವಮುಂ,
ಪೃಥಿವಿ ಸಾಗರ ಗಗನಗಳನಪ್ಪಿ ಕವಿ ಪೀರ್ದ
ನೀಲ ಶ್ಯಾಮಲ ಭೀಮ ಮಹಿಮೆಯುಂ, ತತ್ವದಿಂ
ಕಾವ್ಯದಿಂ ವಿಜ್ಞಾನದಿಂದಂತೆ ಋಷಿಗಳಿಂ
ಕವಿಗಳಿಂದಾಚಾರ್ಯವರ್ಯರಿಂ ಪಡೆದಖಿಲ
ಸುಜ್ಞಾನ ಕೃಪೆಯುಂ ನೆರಪಿ ಪಡೆದಿಹವು ನಿನ್ನ
ವ್ಯಕ್ತಿತ್ವಮಂ: ನೀನೆಮ್ಮ ಪ್ರಾರ್ಥನೆಯ ಶಿಶು ಕಣಾ,
ತೇಜಸ್ವಿ: ತನುಜಾತನಹುದಾತ್ಮಜಾತನುಂ!