ಅರುಣಗಿರಿಯ ಮೇಲೆ ಸ್ವರ್ಣಕಿರಣ ತತಿಯ ಪಸರಿಸಿ
ಮೂಡುತಿಹನು ಲೋಕಕರುಣ ನಯನ ಮೂರುತಿ;
ಮರೆಯುತಿಹುದು ಧರಣಿರಮೆಯ ಕರತಲದಲಿ ಸೊಗಯಿಸಿ
ಚೈತ್ರವನದ ಕುಸುಮ ಕುಲದ ಮಂಗಳಾರತಿ!

ಕೋಟಿ ಬಿಂದು ಹಿಮ ಮರೀಚಿ: ಪ್ರಕೃತಿ ವಸನ ಜಲಮಣಿ;
ಪಕ್ಷಿ ಲಕ್ಷ ಗೀತಿ: ಮಧುರವಾದ್ಯ ಮೇಲನ;
ಹರಿವ ಹೊಳೆಯ ಹೊನಲೋಕುಳಿ: ರಾಗಭೋಗ ರಸಫಣಿ;
ಕಂಪಿನಲರ ತಂಪಿನೆಲರೆ: ಪ್ರಾಣಖೇಲನ!

ಹೇಮಾಂಗಿನಿ – ಪ್ರೇಮಸತಿ, ಮಮ ಜೀವನ ಮಧುರತಿ,
ಬಾರೆ, ನೀರೆ, ಕಲಾವಿಪಿನ ಕಾಮ್ಯರಂಗದಿ
ಒಲಿವ, ಉಲಿವ, ನಲಿವ; ಬರಲಿ ವಿಸ್ಕ್ರತಿಯಾ ರಸಮೃತಿ!
ತೇಲಾಡಲಿ ತ್ರೈಭುವನಂ ರತ ತರಂಗದಿ!