ಹೂಗೆಂಪಿನಂಚಿನಾ
ಗಿಳಿಹಸುರು ಸೀರೆ
ತುಂಬು ಮೆಯ್ಯನು ತುಂಬಿ
ಕಣ್ಗೊಸಗೆ ಬೀರೆ;
ಬಿಲ್ಲೆದೆಯ ಬಾಗಿಂದೆ
ಬಾಚು ಮುಡಿ ಸೋರೆ,
ಹೆಣೆ ಜಡೆಯ ಕೈಗಳಲಿ
ಪೊನ್ಮಿಂಚು ತೋರೆ;
ಮುದ್ದು ಮೊಗದಲಿ ಮಿನುಗೆ
ಮೂಗಿನಾ ತಾರೆ,
ಚೆಲ್ವು ಚೆಂಜೇನ್ಗೆಳಸಿ
ಬಾಳು ಬಾಯಾರೆ;
ಎದೆ ನಲಿಯೆ ಮೆರೆದಳಾ
ಹದಿನಾರು ಚೈತ್ರದಾ
ನನ್ನವಳು ನೀರೆ!

ನೋಡಿದೆನು ಕಣ್ ತಣಿಯೆ:
ಕಣ್ ದಣಿಯಲಿಲ್ಲ.
ಓ ನನ್ನ ಪೆಣ್ ಮಣಿಯೆ,
ನಿನಗೆಣೆಯೆ ಇಲ್ಲ! –

ರವಿಯುದಯ? ಶಶಿಯುದಯ?
ಹೂದಿಂಗಳುದಯ?
ಕೃತಿಯ ಮದುರಸದುದಯ? –
ನೀನವಕೆ ಹೃದಯ!
ನೀನವಕೆ ಹೃದಯ!
ಕಲೆ, ಕೀರ್ತಿ, ಸಿರಿಯೆಲ್ಲ
ನೀನಲ್ಲದಿನ್ನಿಲ್ಲ;

ನೀನೆ ನನಗೆಲ್ಲ!
ಕಣ್ಗೆ ಸುಂದರಿಯಾಗಿ,
ಮನಕೆ ಮಂಗಳೆಯಾಗಿ,
ಚೆಲ್ವು ಒಳ್ವುಗಳೆರಡು
ಬೆರೆಯುತೊಂದಾಗಿ
ಬಂದಿರುವೆ ನೀನೆನಗೆ
ಪ್ರೇಮಸತಿಯಾಗಿ:
ನಿಂದಿರುವೆ ಕಣ್ ಮುಂದೆ
ಹೇಮಲತೆಯಾಗಿ!