ನಮ್ಮ ಮನೆಯೊಳಗಿರವುದೊಂದೆ ಗೊಂಬೆ;
ನವರಾತ್ರಿಗೊಂಬೆ!
ಅದರ ಕಣ್ಣೊಳಗಿಹುದೊ ದೇವಲೋಕ;
ತೊದಲೊಳೊ ಅಶೋಕ!
ಅದರ ಜೇನ್ದುಟಿಯಿಂದಲಿಳಿವುದಮೃತ!
ಅದು ಒಪ್ಪದಿಹುದೆಲ್ಲ ಮಾಯೆ, ಅನೃತ!
ಅದರ ಸುಸ್ಮಿತ ನಮಗೆ ಸುಖಜೀವಿತ;
ಶುಶ್ರೂಷೆಯೇ ಸಕಲ ಪುಣ್ಯವ್ರತ!

ಅಳುವುದದು, ನಗುವುದದು, ಮೌನಿಯಲ್ಲ;
ಸುರಿವುದದು ಜೊಲ್ಲ!
ನುಡಿವುದದು ಕೈಲಾಸದವರ ಸೊಲ್ಲ;
ನಮಗರ್ಥವಲ್ಲ!
ನಮ್ಮ ಮನೆಗೆಂತು ಬಂತದುವೆ ಗುಟ್ಟು;
ದೇವರೂ ಹೇಳನಯ್ ಬಾಯಿ ಬಿಟ್ಟು!
ಒಲವಿಗಾನಂದವನು ತೊಟ್ಟುತೊಟ್ಟು
ಹೆಪ್ಪೆರೆದು, ಕಡೆದು, ಪಡೆದೆವೆನೆ ‘ರಟ್ಟು’!

ಕಂಡ ಕಂಡರಿಗೆಲ್ಲ ಕರೆಯ ನೀಡಿ,
“ನೀವ್‌ ಬಂದು ನೋಡಿ”
ಎಂದದಕೆ ಬಣ್ಣಸಿಂಗಾರ ಮಾಡಿ
ತೋರ್ಪೆವೆನೆ, ಓಡಿ
ತಾಯ ಸೆರಗಿನ ಮರೆಗೆ ಹೆದರಿಹೊಕ್ಕು
“ನಿಮ್ಮ ಸುಖವನ್ಯರೀಕ್ಷಿಸಲು ಮಿಕ್ಕು
ಸವಿಯಹುದೆ?” ಎಂದು ಮೂದಲಿಸಿ ನಕ್ಕು
ನಗಿಸುವುದು, ನಮ್ಮ ಅಲ್ಪತೆಯನೊಕ್ಕು!

ಆನೆ ಅಂಬಾರಿಗಳ ಮೇಲೆ ಏರಿ,
ಜನರೆಲ್ಲ ಸೇರಿ
ಕಿಕ್ಕಿರಿದು ತುಂಬಲಿಕ್ಕೆಲದ ದಾರಿ,
ಅರಸರ ಸವಾರಿ,
ಅಬ್ಬರಿಸೆ ತುತ್ತೂರಿ ಯದ್ಧಭೇರಿ
ಸೈನಿಕರ ಜಯಘೋಷ ಅಶ್ವಹೇಷ,
ಮೆರವಣಿಗೆ ಹೋಹ ನೋಟವನು ಮೀರಿ
ಮೆರೆವುದೀ ಕಂದನೊಡನಾಡುವಂದ!