ನನ್ನೀ ಅನರ್ಹತೆಯು ನಡುಗುತಿಹುದೀ ನಿನ್ನ
ಕೃಪೆಯಮೃತ ವರ್ಷಧಾರೆಯಲಿ ಮಿಂದು;
ಅರಸನೇರಲ್ ಕರೆಯೆ ತಿರುಕಿ ಕಂಪಿಸುವಂತೆ
ರತ್ನ ಸಿಂಹಾಸನದ ಕೆಲದಿ ನಿಂದು!

ಚಕ್ರಾಧಿಪತ್ಯಗಳನಾಳ್ವವರಿಗೇನಿಹುದೆ
ಕವಿಯ ಸಂತೋಷದೊಳಗೊಂದು ಬಿಂದು?
ವಿದ್ಯೆ ಕೀರ್ತಿಗಳೊಂದುಗೂಡಿದಂದದೊಳಿಂದು
ಲೋಕಕೈತಂದಿಹನು ಪೂರ್ಣ – ಇಂದು!

ಸಂದವರ ಪುಣ್ಯವೋ? ಬಂದವನ ಪುಣ್ಯವೋ?
ತಂದೆ ತಾಯಿಯರ ಪುಣ್ಯವಿದೊ, ಗುರುವೆ?
ನನ್ನ ಕೈಹಿಡಿದಾಕೆಯಾ ಬಿನ್ನಪದ ಹಣ್ಣೊ?
ಇನ್ನೇನು ಕಾರಣವೊ ಕಾಣೆ, ಓ ಗುರುವೆ!