ಬಂದನು ಕಾಣ್ ಅದೊ ಮಳೆಯಾಗಿ
ಆಕಾಶದ ಅತಿಥಿ!
ಪೃಥಿವಿಯ ಕೃಪಣತೆಯನು ನೀಗಿ
ಆಶೀರ್ವಾದದ ಕೃಪೆಯಾಗಿ
ಬಂದನು ಆಕಾಶದ ಅತಿಥಿ
ಕಾಣ್ಅದೊ ಮಳೆಯಾಗಿ.

ತೆಂಗಡಿಕೆಯ ಗರಿಗೈ ಬೀಸಿ
ಸುಸ್ವಾಗತಿಸಿದೆ ಪೃಥಿವಿ;
ಪುಳಕಿಸುತಿದೆ ಪೊಸ ತೃಣರೋಮಂ
ಮರ್ತ್ಯವ ಸೋಂಕಲ್ ಸ್ವರ್ಧಾಮಂ!
ಬಿಲ್ ಕಟ್ಟಿಹನದೊ ಕಾಣ್ ಕಾಮಮ್:
ವಾಸಕಸಜ್ಜಿಕೆ ಪೃಥಿವಿ!

ಬಂದನು ಬಂದನು ಬಾನತಿಥಿ:
ಕುಣಿ, ಕರೆ, ಗೆಲ್ಲುಲಿಗೈ!
ಗಾನಂ ಗೆಯ್ಯಲಿ ಪಕ್ಷಿರುತಿ;
ಹೂಮಳೆಯೆರಚಲಿ ಸಸ್ಯರತಿ;
ಜೈ ಜೈ ಬಾರೈ ಬಾನತಿಥಿ!
ಜೈ ಜೈ ಜೈ ಜೈ ಜೈ !