ಕಳುಹಿಸು ಯೋಗ್ಯನನು,
ಹೇ ಗುರುವೇ,
ಕಳುಹಿಸು ಭಾಗ್ಯನನು,
ಶ್ರೀ ಗುರುವೇ.

ಕಳುಹಿಸು ಮಂಗಳ ಚೆಲುವನನು,
ಲೋಕವನೊಲಿವನನು;
ಬಾಳಿನ ಬವರವ ಗೆಲುವನನು,
ನಿನ್ನೊಳೆ ನಿಲುವನನು. –

ಕಳುಹು ಆವೇಶದ ಪುತ್ರನನು,
ದೇಶದ ಮಿತ್ರನನು;
ಕಳುಹು ಪವಿತ್ರ ಚರಿತ್ರನನು,
ಗೌರವ ಪಾತ್ರನನು. –

ಕಳುಹು ಕಲಾರಸ ಭಕ್ತನನು,
ಕಾವ್ಯಾಸಕ್ತನನು;
ಕನ್ನಡ ಸೇವಾ ಶಕ್ತನನು
ನಿನ್ನಡಿ ಯುಕ್ತನನು. –

ಕಳುಹು ನಿರಂಕುಶ ಮುಕ್ತನನು
ಮೌಢ್ಯ ವಿರಕ್ತನನು;
ಕಳಹು ಮನೋ ಸ್ವಾತಂತ್ರ್ಯನನು,
ಶಿವ ಪರ ತಂತ್ರನನು. –

ಕಳುಹಿಸು ನಿತ್ಯ ನವೀನನನು,
ಸತ್ಯಾಧೀನನನು;
ಮಹಿಮೆಗೆ ಮಾತ್ರವೆ ದೀನನನು,
ಕವಿ ಸಮಗಾನನನು. –

ಕೃಪೆ ಅನಂತಕೆ ಪಾತ್ರನನು,
ಪ್ರಿಯ ರುಚಿ ಗಾತ್ರನನು;
ಕಳುಹು ಸದಿಚ್ಛಾ ಸೂತ್ರನನು,
ಚೇತನ ನೇತ್ರನನು!