ಬಂದಿದಾನೆ ಬಂದಿದಾನೆ
ಇಂದು ಮನೆಗೆ ಬಂದಿದಾನೆ
ನನ್ನ ದೇವರು.
ತಂದಿದಾನೆ ತಂದಿದಾನೆ
ತನ್ನ ತಾನೆ ತಂದಿದಾನೆ
ನನ್ನ ದೇವರು.

ದಯಾ ಶಾಂತಿ ಕೃಪಾಮೂರ್ತಿ
ಅಗಣ್ಯಪುಣ್ಯ ಕಲಾಕೀರ್ತಿ
ನನ್ನ ದೇವರು
ಬಂದಿದಾನೆ ಬಂದಿದಾನೆ
ತನ್ನ ತಾನೆ ತಂದಿದಾನೆ
ನನ್ನ ದೇವರು.

ಸ್ಕ್ರತಿ, ವಿಸ್ಕ್ರತಿ, ಮೃತಿ, ಸಂಸ್ಕ್ರತಿ,
ಸರ್ವ ರಸಾವೇಶ ಕೃತಿ,
ಶಿವ, ಪಾರ್ವತಿ, ಗುರು, ಗಣಪತಿ,
ಕ್ರಿಸ್ತ-ಬುದ್ಧ ಬಹುಸಂಸ್ಕ್ರತಿ,
ಕೃಷ್ಣ-ರಾಮ ಬಹು ಆಕೃತಿ
ನನ್ನ ದೇವರು
ಬಂದಿದಾನೆ ಬಂದಿದಾನೆ
ತನ್ನ ತಾನೆ ತಂದಿದಾನೆ
ನನ್ನ ಸದ್ಗುರು.

ಗಿರಿ ಅರಣ್ಯ ಗಗನರೂಪಿ
ನದೀ ಸರಸ್ ಸಮುದ್ರರೂಪಿ
ಪಕ್ಷಿಕೋಟಿ ಗಾನರೂಪಿ
ಲಕ್ಷರಮ್ಯ ದೃಶ್ಯರೂಪಿ

ನನ್ನ ದೇವರು
ಇಂದು ಮನೆಗೆ ಬಂದಿದಾನೆ
ತನ್ನ ತಾನೆ ತಂದಿದಾನೆ
ಜಗ ಜಗದ್ಗುರು.

ತಂದೆ ತಾಯಿ ತಂಗಿಯಾಗಿ
ನೆನಹಿನೊಂದು ಬುತ್ತಿಯಾಗಿ,
ಕೆಳೆಯನಾಗಿ, ಕಂದನಾಗಿ,
ಉಸಿರಿಗುಸಿರನೊಸೆದು ಬೆಸೆದು
ತನ್ನತನವನೆನ್ನೊಳೆಸೆದು
ಕೈಹಿಡಿದೀ ಮಡದಿಯಾಗಿ,
ಸ್ನೇಹರೂಪಿ ಪ್ರೇಮರೂಪಿ
ಧರ್ಮಸಹಿತ ಕಾಮರೂಪಿ
ನನ್ನ ದೇವರು
ಬಂದಿದಾನೆ ಬಂದಿದಾನೆ
ತನ್ನ ತಾನೆ ತಂತಿದಿದಾನೆ
ನಂದ ಶಿವಗುರು.

ನವಿಲುಕಲ್ಲ ಮೇಲೆ, ನಿಶೆಯ
ಅಂಚಿನಲ್ಲಿ, ಮೂಡುವುಷೆಯ
ಮಂಜುಗಡಲ ಬೆಳಗಿನಂತೆ,
ಅಲೆಯಲೆಯಲೆ ಅಲೆವ ಮಲೆಯ
ಬಾನ ಕರೆಯ ಮೋಡಗೊಲೆಯ
ಕವಿಶೈಲದ ಸಂಜೆಯಂತೆ
ನನ್ನ ದೇವರು
ಬಂದಿದಾನೆ ಬಂದಿದಾನೆ
ತನ್ನ ತಾನೆ ತಂದಿದಾನೆ
ರಸದ ಸುರತರು.

ಸಹ್ಯಾದಿಯ ಮಲೆಚೆಲುವೋಲ್
ಬ್ರಹ್ಮಾದ್ರಿಯ ಬಾನ್ ಗೆಲುವೋಲ್
ಜೋಗದ ಜಲಪಾತದವೋಲ್
ಫಾಲ್ಗುಣ ಪ್ರಾಭಾತದವೋಲ್,
ಬೇಲೂರಿನ ಹಳೆಬೀಡಿನ
ಬೆಳ್ಗೊಳದಾ ಗೊಮಟೇಶನ
ಸುರಕಲ್ಪಿತ ಚಿರಶಿಲ್ಪದ
ಸೌಂದರ್ಯದ ಸನ್ನಿಧಿವೋಲ್
ನನ್ನ ದೇವರು
ಬಂದಿದಾನೆ ಬಂದಿದಾನೆ
ಕಣ್ಣಮುಂದೆ ನಿಂದಿದಾನೆ
ನನ್ನ ಹೃದ್ಗುರು.

ಸರ್ವದೇಶ ಸರ್ವಕಾಲ
ಸರ್ವಕಾವ್ಯ ಸರ್ವಕಲಾ
ಕವಿಸಾಹಸ ಋಷಿಸಾಹಸ
ಸರ್ವಸಾಧನಾತ್ಮರೂಪಿ,
ಭುವನಸರ್ವ ಬುದ್ಧಿರೂಪಿ
ಸೃಷ್ಟಿಸರ್ವ ಸಿದ್ಧಿರೂಪಿ
ನನ್ನ ದೇವರು
ಬಂದಿದಾನೆ ಬಂದಿದಾನೆ
ಇಂದು ಮನೆಗೆ ಬಂದಿದಾನೆ
ಇದೊ ಸುಹೃದ್ಗುರು!
ಜಗ ಜಗದ್ಗುರು!
ನನ್ನ ದೇವರು!