ಅತ್ತ ಮುದ್ದಿನ ತನಯ,
ಇತ್ತ ಮುದ್ದಿಸುವಿನಿಯ;
ಎರಡೊಲುವುಗಳ ನಡುವೆ
ಪವಡಿಸಿಹ ಚೆಲುವೆ,
ನಿನ್ನೆದೆಯ ನಂದನದಿ
ಆನಂದ ಮಂಚದಲಿ
ಉಯ್ಯಾಲೆಯಾಡುತಿದೆ
ಸಂಸಾರ ಸಾರ!

ಹಣೆಯದಯ ಗಿರಿಯಲ್ಲಿ
ಕುರುಳಿರುಳನೋಸರಿಸಿ
ದಳದಳಗಳರಳುತಿರೆ
ಉಷೆತಾವರೆ,
ಮೊಗದ ಮಲೆನಾಡಿನಲಿ
ಅಲೆವ ಕಣ್ಣಿನಕವಿಗೆ
ಸೊಬಗುಸೊಡರೌ ನಿನ್ನ
ಮೂಗುತಿಯ ‘ಬೆಳ್ಳಿ’!

ನಿನ್ನ ಬಳೆ ಕಿಂಕಿಣಿಯೊ
ಹಕ್ಕಿಗೊರಳಿನ ದನಿಯೊ?
ಪ್ರಕೃತಿಗೇಂ ಪ್ರತಿನಿಧಿಯೊ?
ಸನ್ನಿಧಿಯೊ? ನಿಧಿಯೊ?
ನೀಂ ನಿಸರ್ಗದ ಮೂರ್ತಿ;
ಸಾಮಾನ್ಯತಾ ಕೀರ್ತಿ;
ಕವಿಗೆ ಸ್ವರ್ಗಸ್ಫೂರ್ತಿ,
ಸಹಧರ್ಮಿಣಿ!

ಅಂದು ನಾಂ ಪ್ರಕೃತಿಯಲಿ
ಮತೆ ಸಂಸ್ಕ್ರತಿಯಲ್ಲಿ
ಭಾವುಕ ತಪಸ್ಸಿನಲಿ
ರಸದರ್ಶಿಯಾದೆ:
ನಿನ್ನಾತ್ಮ ನಂದನದಿ
ಹರಿಯಲಾನಂದ ನದಿ
ಮಿಂದು ನಾನಿಂದೊಮ್ಮೆ
ರಸಲೀನವಾದೆ!