ನನ್ನ ಚಿನ್ನದ ಚೆಲುವೆ,
ನನ್ನ ಹೂವಿನ ಒಲವೆ,
ನನ್ನ ಪುಣ್ಯದ ಫಲವೆ,
ದೂರವೇತಕೆ ನಿಲುವೆ?
ಹತ್ತಿರಕೆ ಬಾ!

ರತಿಪತಿಯ ಹಣೆಗಣ್ಣೆ,
ರಸದ ಬಾಳೆಯ ಹಣ್ಣೆ,
ಹಾಲು ಜೇನಿನ ಬೆಣ್ಣೆ,
ಮಲೆಯ ಮೋಹದ ಹೆಣ್ಣೆ,
ತೋಳ್ಸೆರೆಗೆ ಬಾ!

ತುಟಿಗೆ ತುಟಿ ಮುತ್ತಿಟ್ಟು,
ಎದೆಗೆ ಎದೆಯೊತ್ತಿಟ್ಟು,
ಆತ್ಮಕಾತ್ಮದ ಗುಟ್ಟು
ಹೊಳೆವಂತೆ ಬಿಗಿ ಕಟ್ಟು:
ಬಾ, ಬೇಗ ಬಾ!