ಹೂ ಹಿಡಿದು ಮುಡಿ ಮಣಿದು
ನಿಂತಿರುವ, ಓ ಗಿಡವೆ,
ನಿಚ್ಚ ದೂಳಾಡಿದಾ
ಕಂದನಿಲ್ಲದೆ ‘ಬೆಕೋ’
ಪಾಳು ಬಿದ್ದಿದೆ ನಿನ್ನ
ಬೋಳು ಬುಡವೆ!
ಜಡೆ ಮಾತ್ರ ಮುತ್ತೈದೆ,
ಅಡಿಗಿಲ್ಲ ಒಡವೆ!
ತಲೆಯೆಲ್ಲ ಶ್ರೀಮಂತೆ,
ಕಾಲು ಕೈ ಬಡವೆ!
ಒಲಿದ ಕಂದನ ಸಂಗ
ಮರಳಿ ನಿನಗೊದವೆ
ಐದೆತನದೊಡನೊಡನೆ
ಮರಳುವುದು ಮದುವೆ.
ಅದುವರೆಗೆ ನೀನೆಷ್ಟೆ
ಹೂ ಮುಡಿದರೂ, – ಅಷ್ಟೆ:
ವಿಚಿತ್ರ ವಿಧವೆ!