ನೀನಜ್ಜಿ ಮನೆಗೆಯ್ದು
ಆಗಿತ್ತು ದಿನವೈದು.
ಏಕಾಂತಕವಚತ್ತು
ಏಕಾಂಗಿ ಬೇಸತ್ತು,
ಹನುಮನನು ಬೀಳ್ಕೊಟ್ಟು
ರಾಮಾಯಣವನಿಟ್ಟು
ವಾಲ್ಮೀಕಿಯನು ಬಿಟ್ಟು,
ಹೊರ ಅಂಗಳಕೆ ಬಂದೆ;
ತೆಂಗು ಮರದಡಿ ನಿಂದೆ:

ಎರಡು ವರುಷದ ಹಿಂದೆ
ನಿನ್ನುಸಿರ ತಂದ
ನಿನ್ನ ಮೋಹದ ತಂದೆ,
ಓ ನನ್ನ ಕಂದ!
ಸುಳ್ಳಲ್ಲ, ತೇಜಸ್ವಿ,
ಎರಡೆ ವರುಷದ ತೆಂದೆ:
ನಾವಿಬ್ಬರೊಂದೆ!

ಗಂಟೆ ಎಂಟರ ಹೊತ್ತು;
ಬೆಚ್ಚನೆಳಬಿಸಿಲಿತ್ತು.
ತೆಂಗು ಹೂವಲ್ಲಲ್ಲಿ
ದೂಳೆದ್ದ ನೆಲದಲ್ಲಿ
ನಿನ್ನಾಡುವೊಲದಲ್ಲಿ
ಮುದ್ದು ಚೆಲ್ಲಿ
ಮುತ್ತಿನೋಲೆರಚಿತ್ತು
ರಂಗವಲ್ಲಿ.
ಗೆರೆಗೆರೆಯ ಕರಿನೆಳಲು
ನಡುಗುತಿರೆ ನೆಲದಲಿ
ಗಾಳಿ ಮರ್ಮರಿಸಿತ್ತು
ಗರಿಗಳಲ್ಲಿ.
ಗೋಡೆಯೆಡೆ ಗಿಡದಲ್ಲಿ
ಎಲೆ ಹೆಣೆದು ಮರೆಸಿದ್ದ
ಹತ್ತಿಯಾ ಮೆತ್ತನೆಯಾ
ಗೂಡಿನಲ್ಲಿ
ನಿನ್ನ ಟುವ್ವಿಯ ಹಕ್ಕಿ?….
ಇಲ್ಲ! ಎಲ್ಲಿ?
ಮುದ್ದು ಬೀಡನು ಬಿಟ್ಟು
ಹೋಯಿತೆಲ್ಲಿ?
ಹುಡುಕುತಿರೆ ಕಣ್‌ಸುಳಿಸಿ,
ಓ, ಅಲ್ಲಿ ನೋಡಲ್ಲಿ:
ಗೂಡನೂ ಹಾಡನೂ
ಎರಡನೂ ತೊರೆದು,
ಮೂಕ ಶೋಕದ ಚಿಂತೆ
ಸ್ವಪ್ನದಲಿ ಸುಳಿವಂತೆ,
ಗರಿಹೊರಗೆ ದಣಿದುದೆನೆ,
ನೋಡು, ಕುಪ್ಪಳಿಸುತಿದೆ
ಹರೆಹರೆಗೆ ಹರಿದು.
ಫಕ್ಕನೇನಿದು ಕಾಲ್ಗೆ
ನಿನ್ನ ಮೆಯ್ ಕೋಮಲತೆ
ಸೋಂಕಿದಂತೆ?
ದೇಶಮಾಯೆಯ ಮೀರಿ
ಶಿವಮೊಗ್ಗೆಯೆನೆ ಸೇರಿ
ಅಪ್ಪಿದಂತೆ!
ರೋಮಾಂಚನಂ ಬೆತ್ತು
ನೆಲವ ನೋಡಿದರಿತ್ತು
ದೂಳುರಾಸಿ!
ಎದುರುಗೊಂಡಿತು ಕಣ್ಣ
ಕೈಯ ಮುದ್ರಿಕೆ ಸಣ್ಣ,
ಕೊಂಚ ಮಾಸಿ! –
ನೀ ಮಾಡಿದಾ ರಾಸಿ!
ನಿನ್ನ ಕೈಯಚ್ಚು!
ನಿನ್ನ ಮೆಯ್ಯನು ಮಾಸಿ
ಬಯ್ಸಿಕೊಂಡಾ ರಾಸಿ
ಇಂದಾಯ್ತು ಮೆಚ್ಚು:
ಕಂದನಕ್ಕರೆಬುತ್ತಿ
ಮತ್ತೆ ಮತ್ತದನೊತ್ತಿ
ಸ್ವರ್ಶಸುಖಿಯಾದೆ! –
ಯಾರು ಹುಚ್ಚೆಂದರೂ
ನನಗೆ ಮರ್ಯಾದೆ!