ನೀನು ಅಮ್ಮನ ಕೂಡಿ
ಅಜ್ಜಿ ಮನೆಗೆ
ಹೋದಿರುಳು ಬೆಳಗಾಯ್ತು
ಎಂತೊ ಕೊನೆಗೆ.
ಎಂತು ತಿಳಿಸಲಿ ಹೇಳು
ಹಸುಳೆ ನಿನಗೆ?
ನಿಮ್ಮ ನೆನಹಿನ ಉರಿಯೆ
ಹೊತ್ತಿತೆನಗೆ!
ಪಕ್ಕದಲಿ ನೀನೆಲ್ಲಿ?
ನಿನ್ನಮ್ಮನೆಲ್ಲಿ?
ಶೂನ್ಯತೆಯೆ ಮಲಗಿತ್ತು
ಇಡಿ ಮಂಚದಲ್ಲಿ?
ಸುಯ್ಯತಲ್ಲಿಂದೆದು
ಒಂದೆನಂಗಳಕಲ್ಲಿ
ನೀನಾಡಿದಾ ಮುದ್ದು
ಮಣ್ಣಿನಲ್ಲಿ
ಕಂಡೆನೊಂದಲ್ಪಮಂ,
ಬೆಂದೆದೆಗೆ ತಣ್ಪೀವ
ಸವಿಸೊದೆಯ ತಲ್ಪಮಂ:
ಒಂದು ಕರಟದ ಚಿಪ್ಪು,
ಮಣ್ಣಿಡಿದ ಬಿರಿದೊಡೆದ
ನೀನಾಡಿದಾ ಚಿಪ್ಪು,
ಮಣ್ಣಾಟದಾ ಚಿಪ್ಪು,
ನಿನ್ನಾಟದಾ ಚಿಪ್ಪು
ನೀನಾಡಿದಾ ಮುದ್ದು
ಮಣ್ಣಿನಲ್ಲಿ
ಪರದೇಶಿಯಾಗಿದ್ದು
ಪರದೇಶಿಯೋಲ್ ಬಿದ್ದು
ಹನಿಯ ತಂದುದು ನನ್ನ
ಕಣ್ನಿನಲಿ!

ಕಾಣಲಾ ನಿನ್ನೊಲುಮೆ
ಚಿಮ್ಮಿತಕ್ಕರೆ ಚಿಲುಮೆ.
ಅದನ್ನೆತ್ತಿ, ಎದೆಗೊತ್ತಿ,
ದೇವರ ಮನೆಗೆ ಬಂದೆ:
ನೈವೇದ್ಯವನೆ ತಂದೆ!
ನಿನ್ನ ನೆನಹಿನ ನಿಧಿಯ
ಆ ಕರಟ ಚಿಪ್ಪು
ಹೂವು ಹಣ್ಣಿಗೆ ಮಿಗಿಲು
ಗುರುದೇವಗೊಪ್ಪು:
ಬೇರೆ ಹೂವಿಡಲಿಲ್ಲ:
ಬೇರೆ ಹಣ್ಣಿಡಲಿಲ.
ನನ್ನ ಮುಡುಪಿಗೆ, ಬಲ್ಲೆ,
ದೇವರೊಪ್ಪಿದನು;
ನನ್ನ ಕಂದನ ಕರಟ
ಚಿಪ್ಪನಪ್ಪಿದನು!
ಆ ಚಿಪ್ಪು ಚಿಪ್ಪಲ್ಲ:
ದೇವರೇಂ ಬೆಪ್ಪಲ್ಲ!
ಅಕ್ಕರೆಯ ಜತೆಮಾಡಿ
ಏನಾದರೇಂ ನೀಡಿ:
ನೈವೇದ್ಯವೆಲ್ಲ!