ಆಡಿ, ಓಡಿ, ಕಾಡಿ, ಬೇಡಿ,
ನಲಿಸಿ ನಲಿವ ಕಂದನಿಲ್ಲ;
ಬದುಕನೊಂದು ಗಾನಮಾಡಿ
ಒಲಿಸಿ ಒಲಿವ ನಲ್ಲೆಯಿಲ್ಲ,
ಕಂದನಿಲ್ಲ, ನಲ್ಲೆಯಿಲ್ಲ,
ನಾನೊಬ್ಬನೆ ಮಂಚವೆಲ್ಲ!
ಉಸಿರನೆಷ್ಟನೆಳೆದುಕೊಳಲಿ
ಶ್ವಾಸಕೋಶ ತುಂಬಲೊಲ್ಲ!
ಅತ್ತ ಹೊರಳಿ, ಇತ್ತ ಹೊರಳಿ,
ನಿದ್ದೆಗೆಟ್ಟಿತೂಹೆ ಕೆರಳಿ.
ತೊಳಲಿ, ತೊಳಲಿ, ಕಡೆಗೆ ಬಳಲಿ
ಮನನು ಕನಸನಪ್ಪಿತು!
ಕೊನೆಗೆ, ಕನಸಿನಾಚೆಯಲಿ
ನಿದ್ದೆಬೊಮ್ಮದೈಕ್ಯದಲ್ಲಿ
ಮಿಲನಶಾಂತಿ ಒಪ್ಪಿತು!