ಏಕಾಂಗಿ, ಏಕಾಂಗಿ, ಏಕಾಂಗಿ,
ಅಯ್ಯೊ ನಾನೇಕಾಂಗಿ!
ಓ ಶಿವಾ, ನಿನ್ನನುಳಿದಾರನೂ ಕಾಣೆ ನಾನ್
ನನಗನವರತ ಸಂಗಿ!
ಹೆತ್ತವರು ಸತ್ತರೆಂದೋ;
ಸತ್ತರೊಡವುಟ್ಟಿದವರೂ.
ಚಿತ್ತದಲಿ ಸಮಸಖರನಿನ್ನುಮಾನ್ ಪಡೆದಿಲ್ಲ.-
ಕೈಹಿಡಿದ ಸತಿಗೋ
ತಾಯಿ ತಂದೆಯರಿಹರು; ತವರಿಹುದು;
ನಾನೆ ಸರ್ವಸ್ವವಲ್ಲ.
ಮುದ್ದು ಕಂದಂಗಿಹಳು ಮುದ್ದಾಡುವಾ ತಾಯಿ.
ಕಡೆಗೆ ನಾನೊಬ್ಬನೇ ಬೀದಿನಾಯಿ!
ಏಕಾಂಗಿ, ಏಕಾಂಗಿ, ಏಕಾಂಗಿ,
ಅಯ್ಯೊ ನಾನೇಕಾಂಗಿ!
ಓ ಶಿವಾ, ನಿನ್ನನುಳಿದಾರನೂ ಕಾಣೆ ನಾನ್
ನನಗನವರತ ಸಂಗಿ!