ನೀನು ತವರಿಗೆ ಹೋದೆ;
ನಾನೊಬ್ಬನಾದೆ:
ಹೆಬ್ಬುಲಿಯ ಬಾಯಂತೆ
ಘೋರವಾಯ್ತು;
ತಬ್ಬಲಿಯ ಕೈಯಂತೆ
ಶೂನ್ಯವಾಯ್ತು!

ನಿನ್ನ ಬಿಟ್ಟಿರಲಾರೆ,
ನನ್ನೊಲುಮೆ ನೀರೆ:
ನೀರೊಳಗೆ ಬಿದ್ದಂತೆ
ಉಸಿರು ಕಟ್ಟಿ
ಪ್ರಾಣ ತುಡಿವುದು, ಕಾಂತೆ,
ಎದೆಯ ಮೆಟ್ಟಿ!

ಹಗಲು ಇರುಳೂ ನಿನ್ನ
ನೆನೆನೆನೆದು ನನ್ನ
ಪ್ರೇಮಶೀಲಾತ್ಮ ಶಿಶು
ರೋದಿಸುತಿದೆ;
ಕೈಚಾಚಿ ಶೂನ್ಯವನೆ
ಶೋಧಿಸುತಿದೆ!