ವಂದಿಸುವೆ ಚರಣಾರವಿಂದಕ್ಕೆ ಮುಡಿಯಿಟ್ಟು:
ಇಂದು ಆಶೀರ್ವದಿಸು ಕಂದನನು, ಗುರುದೇವ;
ಮುಂದೆ ಬರುವಂದು ಸಂಸಾರಿ ನಾನು!
ಬಿದ್ದಂದು ಮೇಲೆತ್ತಿ, ನೆಚ್ಚಿತ್ತು, ಸಂತವಿಸಿ,
ಬ್ರಹ್ಮಚರ್ಯದೊಳೆಂತು ನಚ್ಚಿಂದೆ ಕಾಯ್ದಿಹೆಯೊ
ಅಂತೆ ಸಂಸಾರಿಯನು ಸಲಗು ನೀನು!

ನಲ್ಮೆಯಿಂದೆನ್ನ ನಲ್ಲೆಯ ಕೈಯ ಮೇಲುಪಿಂದೆ
ಪಿಡಿಯುತಾದರದಿ ನೋಯದವೋಲೆ ನಿನ್ನಡಿಗೆ
ನಮ್ಮೆದೆಗಳೊಂದೆಹೂ ಮುಡಿಪನಿಡುವೆ;
ಪ್ರೇಮನೈವೇದ್ಯವನೆ ಪೂಜೆಗೊಡುವೆ!
ಸರಸಮೋಹಕೆ ಮನವ ಮಾರಿ ನಿನ್ನನು ಮರೆತು
ಜಡಹೃದಯನಾಗದಂತೆನಗೆ ಕೃಪೆಗೈ, ಗುರುವೆ,
ಓ ಎನ್ನ ಜೀವನದ ಕಲ್ಪತರುವೆ!

ಆಶೀರ್ವದಿಸು ನನ್ನ ಈ ಬಯಕೆ ಕೈಗೂಡುವಂತೆ!
ಆಶಿರ್ವದಿಸು ನಮ್ಮಿರ್ವರೆದೆಗಳೊಂದಾಗುವಂತೆ!
ಆಶೀರ್ವದಿಸು ನಿನ್ನ ದಿವ್ಯೆಚ್ಛೆ ನಮತಾಗುವಂತೆ!