ತೆಂಗಿನ ಮರದಡಿ ನಾನೂ ನೀನೂ,
ಯೌವನ ಶಿಶುತನಗಳ ಜೋಡಿ,
ನಮ್ಮಿಬ್ಬರ ನೆಳಲೂ ಎಳಬಿಸಿಲೂ
ಕುಣಿಕುಣಿದಾಡಿರೆ ಜತೆಗೂಡಿ
ತಲ್ಲಣಿಸೆದೆ ತ್ರೈಭುವನಾಕ್ಷಿ;
ಶಿವ ಸಾಕ್ಷಿ!

ಮರ್ಮರ ಗೈದಿದೆ ಗರಿಯಲಿ ಗಾಳಿ.
ಎಲೆದೊಟ್ಟಿಲೊಳದೊ ಕಿರಣ ಶಿಶು
ತಳತಳ ನಲಿದಿದೆ ಮುದವನು ತಾಳಿ:
ನಮ್ಮಂತೆಯೆ ಅದಕೂ ಮನಸು!
ಇಂಚರವುಲಿಯುತ್ತಿದೆ ಹಕ್ಕಿ,
ಸುಖವುಕ್ಕಿ!

ಇರುಳುಸಿರಿಂದುದುರಿದ ತೆಂಗಿನ ಹೂ,
ತರಗೆಲೆ, ಪುಡಿದೂಳ್, ಕಲ್, ಮಣ್ಣು,
ಬಣ್ಣದ ಚಿಟ್ಟೆಯ ರೆಕ್ಕೆಯ ಕಣ್ಣು, –
ಇವೆ ಸರ್ವೋತ್ತಮ ಸಂಪತ್ತು! –
ಗಣಿಯಲ್ಲೇನಿದೆ ಇಲ್ಲಿದೆ ಕಾಣ್
ಐಸಿರಿಗಣ್!

ಸಾಮಾನ್ಯತೆ ಭಗವಂತನ ರೀತಿ;
ಸಾಮಾನ್ಯವೆ ಭಗವತ್ ಪ್ರೀತಿ.
ರಾಜ್ಯವನುರುಳಿಸಿ ಕಟ್ಟುವ ಕೀರ್ತಿ,
ವೈರಿಯನೆದೆಮೆಟ್ಟುವ ಕೀರ್ತಿ –
ಪೋ! ತೆಗೆ! ಪೈಶಾಚಸ್ಫೂರ್ತಿ!
ಬರಿ ನೇತಿ!

ಸಂಸಾರದ ಸಾಧನೆಗಿದೆ ಸಿದ್ಧಿ:
ಸಕಲೈಶ್ವರ್ಯದ ಸುಖಕಿದೆ ಕಣ್:
ಕಂದನೊಡನೆ ಕುಣಿದಾಡುವ ಬುದ್ಧಿ;
ಕಂದನ ಸಿರಿಮೆಯ್ಗಂಟಿದ ಮಣ್!
ಇನ್ನೆಲ್ಲರಸುವೆ? ಇಲ್ಲಿದೆ, ಕಾಣ್,
ಈಶನ ಕಣ್!