ಹರಸುವನಿದೊ ಕವಿ: ನಿನ್ನಯ ತಂದೆ:
ಈ ಮೊರೆ ಮರುದನಿಮೊರೆಯಲಿ ಜೀವನದಲಿ ಮುಂದೆ!
ವಿಕ್ರಮ ಸಂವತ್ಸರದೀ ಸಂಧ್ಯೆ
ಚೈತ್ರ ಬಹುಳ ಸಪ್ತಮಿಯಿನನಿಂದೆ
ಉಜ್ಜ್ವಲರಾಗಿಣಿಯಾಗಿರೆ, ಬಂದೆ!
ಕಂದನೊಲಿದೆತ್ತಿ,
ಕವಿಹೃದಯಕ್ಕೊತ್ತಿ,
ತುಂಗೆಯ ನೀರ್ ಕರೆಯನು ಆಲಿಸಿ ನಿಂದೆ.

ಬಂಡೆಯ ನಡು ಧುಮುಕುತ್ತಿದೆ ನಿರ್ಝರದೊಲ್ ಜಲಘೋಷ.
ತೆರೆ ತೆರೆ ತೆರೆ ಅವ್ವಳಿಸಿದೆ ನೆಗೆಯುವ ನೀರ್ ಆವೇಶ.
ನೊರೆ ನೊರೆ ನೊರೆ ಉಕ್ಕುತ್ತಿದೆ ಮುತ್ತಿನ ಗೊಂಚಲ್ ಬುಗ್ಗೆ:
ಸೌಂದರ್ಯ ಸಿರಿದುರ್ಗಕೆ ರಸದಪ್ರತಿಹತ ಲಗ್ಗೆ!

ಕೇಳಿಸದೀ ಬೈಗಿನ ಹಕ್ಕಿಗಳುಲಿ:
ಧ್ವನಿಲೋಕವೆ ಲಯವೀ ನೀರ್ ಮೊರೆಯಲಿ!
ಸತ್ಯದ ಕರೆ, ಧರ್ಮದ ಕರೆ,
ಸೌಂದರ್ಯದ ಕರೆ, ಸೌಹಾರ್ದದ ಕರೆ,
ದೇಶದ ಕರೆ, ಭಾಷೆಯ ಕರೆ,
ತ್ಯಾಗದ ಭೋಗದ ಯೋಗದ ಕರೆ,
ಸಾಕ್ಷಾತ್ ಲೋಕೇಶ್ವರನಾತ್ಮದ ಕರೆ,
ಎಲ್ಲ ಕರೆಗಳೂ ಕರೆಯುತ್ತಿವೆ ಕೇಳ್;
ಈ ನೀರ್ ಕೊರಲಲಿ ಮೊರೆಯುತ್ತಿವೆ ಕೇಳ್;
ಆಲಿಸು ಕೇಳ್;
ಆಲಿಸಿ ಕೇಳ್:
ಆಲಿಸಿ, ಪಾಲಿಸಿ, ಕಂದಾ, ಬಾಳ್!
ಹರಸುವನಿದೊ ಕವಿ: ನಿನ್ನಯ ತಂದೆ:
ಈ ಮೊರೆ ಮರುದನಿಮೊರೆಯಲಿ ಜೀವನದಲಿ ಮುಂದೆ!
ತಂದೆಯ ಬಯಕೆಗೆ ಮೇಣ್ ಕವಿ ಹರಕೆಗೆ,
ಕೊನೆಯಿಲ್ಲದ ಈ ಕಾನನರಾಜಿಯೆ ಸಾಕ್ಷಿ;
ಬಾನ್ ಮುಟ್ಟುವ ಈ ಪರ್ವತ ಪಂಕ್ತಿಯೆ ಸಾಕ್ಷಿ;
ನಕ್ಷತ್ರದ ನೆಲ ಈ ಆಕಾಶವೆ ಸಾಕ್ಷಿ;
ಎಲ್ಲೆಲ್ಲಿಯು ಇಹ ಶ್ರೀಗುರುದೇವನೆ ಚಿರ ಸಾಕ್ಷಿ!