ವ್ಯಾಸಪೂರ್ಣಿಮೆಯಿರುಳ ಕೊನೆಯ ಜಾವಂ ಜಗುಳಿ
ಜಾರುತಿದೆ. ವೈಶಾಖ ಶುದ್ಧದಂತ್ಯದ ರಜನಿ
ಸಾರುತಿದೆ ಪಶ್ಚಿಮಕೆ, ಪ್ರಾಗ್ ಜ್ಯೋತಿ ಭೀತಿಯಿಂ
ಪ್ರಾಚ್ಯಗಿರಿಯಂ ಪರಿತ್ಯಜಿಸಿ. ಮುಂಗಾರ್ ಮಳೆಗೆ
ಮಿಂದ ಮಲೆಬನಗಳಿಂದಲೆಯುತಿದೆ ಪೊಸಮಲರ
ಕಂಪಾಂತ ತಂಬೆಲರ ಸೊಂಪು. ಬೇಲಿಯ ಮೇಲೆ
ಮಲರ್ದ ಮಲ್ಲಿಗೆ ಹೊದರಿನಲ್ಲಿ ಮಡಿವಳ ಹಕ್ಕಿ
ತೊಡಗಿಹುದು ತನ್ನ ಸಿಳ್ ಸಂಗೀತಮಂ. ಜಗದ
ಜಡನಿದ್ದೆಯಂ ಬಡಿಯುತತೆಳ್ಚರಿಸುವಂತೆವೋಲ್
ಕ್ರೈಸ್ತ ದೇವಾಲಯದ ಗೋಪುರ ಬೃಹದ್ ಘಂಟೆ
ಘೋಷಿಸುತ್ತಿದೆ ಭವ್ಯಮಾಧುರ್ಯಮಂ. ಕಾಣ್
ವೈಶಾಖ ಬಹುಳದಾದಿಯ ದಿವಸದೇವನದೊ
ಮೆಲ್ಲನೆಯೆ ಕಣ್ದೆರೆಯುತಿಹನದ್ರಿ ಸಂಧಿಸುವ
ಆ ಐಂದ್ರವ್ಯೋಮದಲಿ.

ತೇಜಸ್ವಿ ಸೋದರನೆ,
ಹೇಮಾಂಗಿನಿಯ ತನೂಭವನೆ, ಹೇ ನನ್ನಾತ್ಮ
ನವ್ಯತಾ ದೇವತಾ ಪ್ರತ್ಯಕ್ಷರೂಪಿ, ಓ
ಕೋಕಿಲೋದಯ ಚೈತ್ರ, ಹರಸುವೆನು ಹೆಸರಿಟ್ಟು,
ಹೆಸರಿನ ಹಿರಿಮೆ ಉಸಿರಿಗೂ ಬರಲಿ ಎಂದೊಲಿದು
ಬಯಸಿ: – ತೊಟ್ಟಿಲಾಗಲಿ ನಿನಗೆ ಉಪನಿಷತ್ತಿನ
ದಿವ್ಯ ಸಂಸ್ಕೃತಿಯ ಋಷಿದರ್ಶನಂ, ಸಕಲ ಭೂ
ಭಾಗಗಳ ಮಾನವರ ಉದ್ಧಾರ ಸಾಹಸದ
ಶತಮಾನ ಕೃತಿಗಳ ತಪಃಫಲಂ ನಿನಗಕ್ಕೆ
ಸ್ತನ್ಯಪೀಯೂಷಪಾನಂ, ವಿಧ್ಯ ಸಹ್ಯಾದ್ರಿ
ಮಲಯಮಿತ್ಯಾದಿ ಪರ್ವತಂಗಳುಂ, ಜುಹ್ನುಜಾ
ಜಮುನಾದಿ ತುಂಗಭದ್ರಾ ತರಂಗಿಣಿಗಳುಂ
ನಿನಗಕ್ಕೆ ಭಾರತದ ಬಾಲ್ಯದಾಡುಂಬೊಲದ
ಸಂಗಾತಿಗಳ್, ಸರ್ವಲೋಕ ಶೈಲೇಶ್ವರಂ
ನಿನಗಕ್ಕೆ ತಾಂ ಪ್ರತಿಸ್ಪರ್ಧಿ, ಹೈಮಾಚಲಂ,
ಧವಳಗಿರಿ ಶಿರವರೇಣ್ಯಂ, ಮಾನಸ, ಸರೋ-
ಜನ್ಮ ಮಹಿಮಂ! ಶ್ವಾಸಕೋಶಗಳಕ್ಕೆ ನಿನಗೆ
ಸಾಗರಾಕಾಶಗಳ್!

ಶಂಕರ ಶ್ರೀಬುದ್ಧಿ,
ರಾಮಾನುಜನ ಹೃದಯ ಕ್ರಿಸ್ಥ ಬುದ್ಧರ ಮಹಾ
ಸಾತ್ವಿಕ ಕೃಪಾ ಸ್ಥೈರ್ಯ, ಗಾಂಧಿಯ ದಯಾ ಧೈರ್ಯ,
ಶ್ರೀರಾಮಕೃಷ್ಣ ಮೇಣ್ ವಿವೇಕಾನಂದರಾ
ಧರ್ಮದೌದಾರ್ಯಾದಿ ಸವೇಶ್ರೇಯಂಗಳುಂ
ಬಂದು ಹರಸಲಿ ನಿನ್ನನೆನ್ನ ಕಂದಾ! ವ್ಯಾಸ
ವಾಲ್ಮೀಕಿ ಮೊದಲಪ್ಪ ಕವಿವರೇಣ್ಯರ್ ಬಂದು
ಸಿಂಚಿಸಲಿ ಪ್ರತಿಭಾ ಕವಂಡಲುಗಳಿಂ ತಂತಮ್ಮ
ಕಾವ್ಯ ಕೃಪೆಯಂ! ನಿಖಿಲ ಭುವನ ಶ್ರೇಷ್ಠ ಗಾಯಕರ್
ಶಿಲ್ಪಿಗಳ್‌ ವರ್ಣಶಿಲ್ಪಿಗಳೆಲ್ಲರೈತಂದು
ತಂತಮ್ಮ ದಿವ್ಯಕಲೆಯಂ ಪ್ರಚೋದಿಸಲಿ ಮೇಣ್
ಪ್ರಿಯದಿಂ ಪ್ರತಿಷ್ಠಿಸಲಿ ಈ ನನ್ನ ಚಿಣ್ಣನೀ
ಕೋಕಿಲೋದಯ ಚೈತ್ರನಾತ್ಮಮಂದಿರದಮೃತ
ಪೀಠದಲಿ!

ಈ ಹರಕೆಗಿಂ ಮಿಗಿಲ್ ಹಿರಿಹರಕೆ
ಇರ್ಪೊಡಾ ಹರಕೆಯಿಂ ಯೋಗ ದಿವ್ಯಜ್ಞಾನಿ
ಜಗದೀಶ್ವರಗೆ ಬಿಡುವೆನೈ; ಬೇಡಿಕೊಳ್, ಕಂದಾ!

ನೀನ್ ಬಂದ ಈ ಜಗಂ ನೀನ್ ಬಿಡುವ ಆ ಜಗಕೆ
ಕೀಳಾಗುವಂತೆ ಬಾಳ್: ಇಂದಲ್ಲಿ, ಪಶ್ಚಿಮದಿ
ಮಾನವೀಯತೆ ಮಾಣ್ದು ತಾಂಡವಂಗೈಯುತಿದೆ
ನೀಚ ರಾಕ್ಷಸತೆ, ಯಾಂತ್ರಿಕ ಕ್ರೌರ್ಯದಾ ರುದ್ರ
ರಣದಲ್ಲಿ. ಪೆಣ್ಗಳಂ ಮಕ್ಕಳಂ ಬಲಿಗೆಯ್ದು
ತಣಿಸುತಿರುವರು ಸಮರಚಂಡಿಯಂ. ಸೆಣಸುತಿವೆ
ಹಣೆಗೆ ಹಣೆ ಘಟ್ಟಿಸುತ್ತೆರಡು ದುಶ್ಯಕ್ತಿಗಳ್
ಲೋಕ ಚಕ್ರಾಧಿಪತ್ಯಕ್ಕೆ. ಆ ದುಷ್ಕರ್ಮ
ಶಕ್ತಿದ್ವಯಂಗಳುಂ ಹೇಳ ಹೆಸರಿಲ್ಲದೆಯೆ

ಒಂದರಿಂದೊಂದಳಿದು ಶೋಕವೊಂದುಳಿಯಲಾ
ಶೋಕಕೊಂದೊಳ್ಪಿನಾಕಾರಮಂ ನೀಡಲ್ಕೆ
ನೀಂ ಸತ್ಕೃತಿಯ ಲಸಚ್ಛಲ್ಪಿವರನಗೆಂದು
ಹರಸುವೆನು; ಹರಸುವೆನೊ ಗುರದೇವನಂ ನುತಿಸಿ; ಮೇಣ್
ನನ್ನನಾಶೀರ್ವದಿಸಿ ಗೃಹಸ್ಥಾಶ್ರಮಕ್ಕೊಯ್ದು,
ಧರ್ಮದೌದಾರ್ಯಮಂ ಪೇಳೆ ಪಶ್ವಿಮಕೆಯ್ದಿ,
ಐರೋಪ್ಯ ಯುದ್ಧದಾ ಕ್ರೌರ್ಯ ಭೂಮಿಯೊಳಿರ್ಪ
ನನ್ನ ಆ ಸಿದ್ಧೇಶ್ವರಾನಂದ ಸ್ವಾಮಿಜಿಗೆ
ಸುಕ್ಷೇಮಮಕ್ಕೆಂದು ಬಯಸಿ ನಲ್ಬಯಕೆಯಂ!