ಭಾರತದಲ್ಲಿ ಶೇಕಡಾ ೭೦ ರಷ್ಟು ಜನರು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಕೃಷಿಯೇ ಗ್ರಾಮೀಣ ಜನರ ಮುಖ್ಯ ಕಸುಬು. ಭಾರತವು ಜೇನುಕೃಷಿಗೆ ಅಗತ್ಯವಾದ ಹವಾಮಾನ ಮತ್ತು ಸಸ್ಯ ಸಂಪತ್ತನ್ನು ಹೊಂದಿದ್ದು ಜೇನುಕೃಷಿಯನ್ನು ಉನ್ನತ ಮಟ್ಟದಲ್ಲಿ ಮಾಡಬಹುದಾಗಿದೆ. ಗ್ರಾಮೀಣ ಪ್ರದೇಶದ ಜನತೆಗೆ ತಮ್ಮ ಕೃಷಿ ಮತ್ತು ಇತರ ಕಸಬುಗಳಿಂದ ದೊರೆಯುವ ಆದಾಯವು ತಮ್ಮ ಜೀವನಕ್ಕೆ ಸಾಲದೆ ಅರ್ಥಿಕವಾಗಿ ತುಂಬಾ ಹಿಂದುಳಿಯಲು ಕಾರಣವಾಗಿದೆ. ಈ ಹಿನ್ನಲೆಯಲ್ಲಿ ದಿನನಿತ್ಯದ ಕೃಷಿ ಕಸುಬುಗಳ ಜೊತೆಗೆ ಜೇನುಕೃಷಿಯನ್ನು ಉಪಕಸುಬಾಗಿ ಪ್ರಾರಂಭಿಸಿದಲ್ಲಿ ಆರ್ಥಿಕ ಮಟ್ಟ ಸ್ವಲ್ಪ ಮಟ್ಟಿಗಾದರೂ ಸುಧಾರಿಸುವುದರಲ್ಲಿ ಸಂದೇಹವಿಲ್ಲ.

ಜೇನುಕೃಷಿ ಉಳಿದೆಲ್ಲಾ ಕೃಷಿಗಳಿಗಿಂತ ಭಿನ್ನವಾಗಿದೆ. ಇದು ಪರಿಸರದಲ್ಲಿನ ಸಸ್ಯಸಂಪತ್ತನ್ನು ಅವಲಂಭಿಸಿದ್ದು ಹೂಗಳಲ್ಲಿ ವ್ಯರ್ಥವಾಗುವ ಮಕರಂದದಿಂದ ಜೇನುತುಪ್ಪ ಉತ್ಪತ್ತಿಯಾಗುತ್ತವೆ. ಆದುದರಿಂದ ಮನುಷ್ಯನು ಜೇನುನೊಣಗಳನ್ನು ಆಹಾರ ಸಿಕ್ಕುವ ಕಡೆ ಜೇನು ಕುಟುಂಬಗಳನ್ನು ಇಟ್ಟರೆ ಸಾಕು ತಾವೇ ಆಹಾರವನ್ನು ಶೇಖರಿಸುತ್ತವೆ. ಈ ಕೃಷಿ ಕಡಿಮೆ ಬಂಡವಾಳದಲ್ಲಿ ಮಾಡುವಂತಹ ಉಪಕಸುಬು. ವಿಶೇಷವಾಗಿ ನೀರನ್ನು ಬಳಸಬೇಕಿಲ್ಲ ಹಾಗೂ ವಿದ್ಯುತ್ತಿನ ಅವಶ್ಯಕತೆ ಇರುವುದಿಲ್ಲ. ಅಗತ್ಯವೆನಿಸಿದರೆ ಮನೆಗಳ ಮೇಲೂ ಸಾಕಬಹುದು. ಇದು ಮನೆಯ ಹತ್ತಿರವೇ ಉದ್ಯೋಗವನ್ನು ಒದಗಿಸುತ್ತದೆ. ಜನಾಂಗ ಮತ್ತು ಕುಟುಂಬದ ನಡುವೆ ಸಹಕಾರವನ್ನು ಏರ್ಪಡಿಸುತ್ತದೆ. ಜೇನುಕೃಷಿ ಮಕ್ಕಳು, ವೃದ್ದರು ಸ್ತ್ರೀಯರೂ ಎನ್ನದೇ ಸಮಾಜದ ಎಲ್ಲರೂ ಮಾಡಬಹುದಾದ ಉಪಕಸುಬಾಗಿದೆ.

ತುಡುವೆ ಜೇನುಕುಟುಂಬಗಳಿಂದ ವರ್ಷವೊಂದಕ್ಕೆ ಸರಾಸರಿ ೮ – ೧೦ ಕಿ. ಗ್ರಾಂ. ಜೇಣುತುಪ್ಪ ಸಿಕ್ಕಿದರೆ ಯೂರೋಪಿಯನ್ ಜೇನುಕುಟುಂಬಗಳಿಂದ ಸರಾಸರಿ ೨೦ – ೩೦ ಕಿ. ಗ್ರಾಂ. ಜೇನುತುಪ್ಪವನ್ನು ಪಡೆಯಬಹುದು. ಜೇನುತುಪ್ಪಕ್ಕೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಬೇಡಿಕೆ ಇದ್ದು ಕಿ.ಗ್ರಾಂ. ಜೇನುತುಪ್ಪಕ್ಕೆ ೮೦ – ೧೦೦ ರೂಗಳು ಸಿಗುತ್ತದೆ. ಈ ಕೃಷಿಗೆ ಹೆಚ್ಚಿನ ಜನಶಕ್ತಿ ಬೇಕಾಗಿರುವುದಿಲ್ಲ. ವಿರಾಮದ ವೇಳೆಯಲ್ಲಿ ಇವುಗಳ ಬಗ್ಗೆ ಸ್ವಲ್ಪ ಗಮನ ಹರಿಸಿದರೆ ಸಾಕು. ಶತ್ರುಗಳ ಮತ್ತು ಆಹಾರದ ಕೊರತೆಯಿಂದಾಗಿ ಜೇನುನೊಣಗಳನ್ನು ರಕ್ಷಿಸಿದರೆ ಉತ್ತಮ ಆದಾಯ ಸಿಗುತ್ತದೆ. ಈ  ಬಗ್ಗೆ ಗ್ರಾಮೀಣ ಜನತೆಗೆ ಸಾಕಷ್ಟು ತರಬೇತಿಯ ಅವಶ್ಯಕತೆ ಇರುತ್ತದೆ.

ಅರಣ್ಯಪ್ರದೇಶಗಳಲ್ಲಿ ದೊರೆಯುವ ಹೆಜ್ಜೇನು ಮತ್ತು ಕೋಲುಜೇನು ಕುಟುಂಬಗಳಿಂದ ಜೇನು ತುಪ್ಪವನ್ನು ವೈಜ್ಞಾನಿಕವಾಗಿ ಪಡೆದು ಅವುಗಳನ್ನು ನಾಶ ಮಾಡದೆ ರಕ್ಷಿಸಬೇಕಾಗಿದೆ. ಹೆಜ್ಜೇನು ಕುಟುಂಬಗಳಿಂದ ಹೆಚ್ಚಿನ ಜೇನುತುಪ್ಪ ಮತ್ತು ಮೇಣವು ದೊರೆಯುತ್ತದೆ. ಕೋಲುಜೇನುತುಪ್ಪವು ಪರಿಸರದಲ್ಲಿ ಕಡಿಮೆ ಪ್ರಮಾಣದಲ್ಲಿ ದೊರೆತರೂ ಔಷಧೀಯ ಗುಣಗಳಿರುವುದರಿಂದ ಹೆಚ್ಚಿನ ಬೇಡಿಕೆ ಇದೆ.

೧೯೮೫ – ೮೬ ರ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಸುಮಾರು ಒಂದು ಮಿಲಿಯನ್ ತುಡುವೆ ಮತ್ತು ಯೂರೋಪಿಯನ್ ಜೇನುಕುಟುಂಬಗಳಿವೆ ಎಂದು ಅಂದಾಜು ಮಾಡಲಾಗಿದ್ದು ವಾರ್ಷಿಕ ೧೮,೦೦೦ ಮೆಟ್ರಿಕ್ ಟನ್ ಜೇನುತುಪ್ಪವನ್ನು ಪಡೆಯಲಾಗಿದೆ. ಅಲ್ಲದೆ ಸುಮಾರು ೪೦,೦೦೦ ಹಳ್ಳಿಗಳು ಜೇನು ಸಾಕಾಣಿಕೆಯಲ್ಲಿ ತೊಡಗಿದ್ದು ಸುಮಾರು ೨,೫೦,೦೦೦ ಜನರಿಗೆ ಅರೆಕಾಲಿಕ ಉದ್ಯೋಗವನ್ನು ಕಲ್ಪಿಸಿದೆ. ಭಾರತದಲ್ಲಿ ಸುಮಾರು ೧೬೦ ಮಿಲಿಯನ್ ಹೆಕ್ಟೇರು ಪ್ರದೇಶದಲ್ಲಿ ಬೆಳೆ ಬೆಳೆಯಲಾಗುತ್ತಿದ್ದು ಅದರಲ್ಲಿ ೫೫ ಮಿಲಿಯನ್ ಹೆಕ್ಟೇರುಗಳಲ್ಲಿ ಕೀಟಗಳ ಪರಾಗಸ್ಪರ್ಶ ಅವಶ್ಯಕವಿರುವ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಆದುದರಿಂದ ಭಾರತದಲ್ಲಿ ಆಹಾರ ಬೆಳೆಗಲ್ಲಿ ಉತ್ತಮ ಪರಾಗ ಸ್ಪರ್ಶಕ್ಕಾಗಿಯೇ ಈಗ ನಮ್ಮಲ್ಲಿರುವ ಕೇವಲ ಒಂದು ಮಿಲಿಯನ್ ಜೇನುಕುಟುಂಬಗಳಿಂದ ೧೫೦ ಮಿಲಿಯನ್ ಜೇನು ಕುಟುಂಬಗಳಿಗೆ ಹೆಚ್ಚಿಸಬೇಕಾಗಿದೆ.

೧೯೮೬ ರಲ್ಲಿ ಪ್ರಖ್ಯಾತ ಕೃಷಿ ವಿಜ್ಞಾನಿ ಡಾ. ಎಂ.ಎಸ್. ಸ್ವಾಮಿನಾಥನ್‌ರವರು ಆಹಾರ ಮತ್ತು ಕೃಷಿ ಸಂಸ್ಥೆಯ ಮಾಹಿತಿ ಮುನ್ನುಡಿಯಲ್ಲಿ ಎಷ್ಟೇ ಆಹಾರದ ಉತ್ಪಾದನೆ ದೇಶದಲ್ಲಿದ್ದರೂ ಪ್ರತಿ ದಿನವು ನೂರಾರು ಮಿಲಿಯನ್ ಬಡಜನರು ಆಹಾರವಿಲ್ಲದೆ ತೊಂದರೆಗೀಡಾಗಿದ್ದಾರೆ. ಆದುದರಿಂದ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಹಸಿವನ್ನು ನಿವಾರಿಸಲು ಜೇನುಕೃಷಿಯು ಉತ್ತಮ ಕಸುಬಾಗಬೇಕಾಗಿದೆ. ಕಡಿಮೆ ಬಂಡವಾಳದಲ್ಲಿ ಜೇನುನೊಣಗಳಿಂದ ಆಹಾರ ಮತ್ತು ಆದಾಯವನ್ನು ಹೆಚ್ಚಿಸುವುದಲ್ಲದೆ ಬೆಳೆಗಳ ಉತ್ಪಾದನೆಯನ್ನೂ ಹೆಚ್ಚಿಸುತ್ತದೆ ಎಂದು ತಿಳಿಸಿದ್ದಾರೆ.

ಜೇನು ಕೃಷಿಯಲ್ಲಿ ಆಧುನಿಕ ತಾಂತ್ರಿಕತೆಯನ್ನು ಪ್ರತಿಯೊಬ್ಬ ಕೃಷಿಕರು ಪರಿಪಾಲಿಸಿ ಇದರಿಂದಾಗುವ ಲಾಭವನ್ನು ಹೆಚ್ಚಿಸಬಹುದು. ಮೊದಲನೆಯದಾಗಿ ಸಂಶೋಧನಾಧಾರಿತ ನೂತನ ಮಾದರಿಯ ಪೆಟ್ಟಿಗೆಗಳನ್ನು ಉಪಯೋಗಿಸಿ ಜೇನುನೊಣಗಳ ಕುಟುಂಬಗಳನ್ನು ಸಾಕುವುದು. ವೈಜ್ಞಾನಿಕ ರೀತಿಯ ಜೇನುಸಾಕಣೆಯಲ್ಲಿ ಉಪಯೋಗಿಸುವ ಭಾರತೀಯ ಮಾನಕ ಬ್ಯೂರೋರವರು (ಬಿ.ಐ.ಎಸ್.) ದೃಢೀಕರಿಸಿರುವ ಗುಣಮಟ್ಟದ ಮರದ ಪೆಟ್ಟಿಗೆಯನ್ನು ಉಪಯೋಗಿಸಬೇಕು. ಈ ಪೆಟ್ಟಿಗೆಯಲ್ಲಿ ಜೇನುನೊಣಗಳಿಗೂ ಸ್ಥಳಾವಕಾಶವಿದ್ದು ಗೂಡಿಗೆ ಬೇಕಾದ ವಾತಾವರಣವನ್ನು ಒದಗಿಸುತ್ತದೆ ಹಾಗೂ ಸುಲಭವಾಗಿ ಚೌಕಟ್ಟುಗಳನ್ನು ಪರೀಕ್ಷೆ ಮಾಡಲು ಸಾಧ್ಯವಾಗುತ್ತದೆ. ತುಡುವೆ ಜೇನು ಮತ್ತು ಯೂರೋಪಿಯನ್ ಜೇನುನೊನಗಳಿಗೆ ಪೆಟ್ಟಿಗೆಗಳು ಬೇರೆ ಬೇರೆಯಗಿದ್ದು ಯೂರೋಪಿಯನ್ ಜೇನುನೊಣಗಳ ಪೆಟ್ಟಿಗೆಗಳು ತುಡುವೆ ಜೇನುನೊಣಗಳ ಪೆಟ್ಟಿಗೆಯ ಸುಮಾರು ಎರಡರಷ್ಟು ಗಾತ್ರವಿರುತ್ತವೆ. ಸುಮಾರು ೨೦ – ೪೦ ಸಾವಿರ ಜೇನುನೊಣಗಳು ವಾಸಿಸಲು ಪೆಟ್ಟಿಗೆಯಲ್ಲಿ ಸ್ಥಳಾವಕಾಶವಿರುತ್ತದೆ. ಹವಾನಿಯಂತ್ರಣದ ಜೊತೆಗೆ ಅವುಗಳ ಶತ್ರುಗಳ ಸುಲಭವಾಗಿ ದಾಳಿ ಮಾಡಲು ಅವಕಾಶವಿರುವುದಿಲ್ಲ. ಆಧುನಿಕ ಮಾದರಿಯ ಜೇನು ಕೃಷಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಜೇನುಗೂಡುಗಳನ್ನು ಉಪಯೋಗಿಸಿ ಕಸಿ ಮಾಡುವುದರ ಮೂಲಕ ರಾಣಿನೊಣಗಳನ್ನು ಪಡೆದು ಕುಟುಂಬಗಳ ಸಂಖ್ಯೆಯನ್ನು ಹೆಚ್ಚಿಸಬಹುದು. ರಾಣಿ ನೊಣಗಳ ಉತ್ಪಾದನೆಯಲ್ಲಿ ರಾಣಿ ಕಣಗಳನ್ನು ಕೃತಕವಾಗಿ ನಿರ್ಮಾಣ ಮಾಡಿ ಅಂತಹ ಕಣಗಳಲ್ಲಿ ಮೊದಲ ಹಂತದ ಮರಿಹುಳುವನ್ನು ವಿಶೇಷವಾದ ಉಪಕರಣದ ಸಹಾಯದಿಂದ ವರ್ಗಾಯಿಸಿ ಕಸಿಮಾಡುವುದರಿಂದ ರಾಣಿನೊಣಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಉತ್ಪಾದಿಸಬಹುದು.

ಜೇನುಕೃಷಿಗೆ ಉಪಕರಣಗಳಾದ ಜೇನುಪೆಟ್ಟಿಗೆಗಳು, ಮೇಣದ ತಳಹದಿ ಹಾಳೆಗಳು, ಜೇನು ತೆಗೆಯುವ ಯಂತ್ರ ಮತ್ತು ಇತರ ಅಗತ್ಯ ಉಪಕರಣಗಳ ತಯಾರಕರಿಗೆ ಆಯಾ ಕೈಗಾರಿಕೆಗಳಲ್ಲಿ ಉದ್ಯೋಗ ಸಿಕ್ಕಿದಂತಾಗುತ್ತದೆ. ಜೇನುಕೃಷಿಯ ಉತ್ಪನ್ನಗಳನ್ನು ಮಾರಾಟ ಮಾಡಲು ಮತ್ತು ಜೇನುತುಪ್ಪದ ಸಂಸ್ಕರಣೆಯಲ್ಲಿ ಉದ್ಯೋಗಗಳು ಸೃಷ್ಟಿಯಾಗುತ್ತವೆ. ಜೇನುನೊಣದ ಉತ್ಪನ್ನಗಳನ್ನು ಹತ್ತಿರದ ಜೇನುಕೃಷಿ ಸಹಕಾರ ಸಂಘಕ್ಕೆ ಮಾರಿ ಆದಾಯಗಳಿಸಬಹುದಾಗಿದೆ. ಜೇನುಕೃಷಿಯು ಗ್ರಾಮೀಣ ಮಹಿಳೆಗೂ ಅತಿ ಸೂಕ್ಷ್ಮ ಹಾಗೂ ಸುಲಭವಾಗಿದ್ದು ಇದರಲ್ಲಿ ಹೆಚ್ಚಿನ ಪರಿಶ್ರಮವಿಲ್ಲವಿರುವುದರಿಂದ, ಬಿಡುವಿರುವಾಗ ಮನೆಯ ಅಂಗಳದಲ್ಲಿಯೇ ಜೇನುಕೃಷಿಯಲ್ಲಿ ತೊಡಗುವುದರಿಂದ ಆರ್ಥಿಕ ಆದಾಯ ಹೆಚ್ಚುತ್ತದೆ. ಜೇನುತುಪ್ಪದಲ್ಲಿ ಮನುಷ್ಯನ ಆರೋಗ್ಯಕ್ಕೆ ಅವಶ್ಯಕವಾದ ಅನೇಕ ಪದಾರ್ಥಗಳಿರುವುದರಿಂದ ಜೇನುತುಪ್ಪ ಸೇವನೆಯಿಂದ ಜೇಣುಕೃಷಿಕರ ಮತ್ತು ಇತರರ ಆರೋಗ್ಯವೂ ಉತ್ತಮವಾಗಿರುತ್ತದೆ.

ಭಾರತದಲ್ಲಿ ಸುಮಾರು ೧೨೦ ಮಿಲಿಯನ್ ಜೇನು ಕುಟುಂಬಗಳನ್ನು ಸಾಕಣೆ ಮಾಡುವ ಸಾಮರ್ಥ್ಯವಿದ್ದು, ೬ ಮಿಲಿಯನ್‌ಗೂ ಹೆಚ್ಚು ಗ್ರಾಮೀಣ ಜನತೆಗೆ ಸ್ವಯಂ ಉದ್ಯೋಗಾವಕಾಶಗಳನ್ನು ಒಗಿಸುತ್ತದೆ. ಈ ಕುಟುಂಬಗಳಿಂದ ೧.೨ ಮಿಲಿಯನ್ ಟನ್ ಜೇನುತುಪ್ಪ ಮತ್ತು ೧೫,೦೦೦ ಟನ್ ಜೇನುಮೇಣವನ್ನು ಪಡೆಯಬಹುದಾಗಿದ್ದು ಸುಮಾರು ೫ ಮಿಲಿಯನ್ ಬಡಕುಟುಂಬಗಳಿಗೆ ಆದಾಯವನ್ನೊದಗಿಸುತ್ತದೆ.