ಜೇನುನೊಣಗಳು ಸಂಘಜೀವಿಗಳು. ಒಂದು ಸುವ್ಯವಸ್ಥಿತ ಜೇನು ಕುಟುಂಬದಲ್ಲಿ ಒಂದೇ ರಾಣಿನೊಣ, ಸುಮಾರು ಐದು ಸಾವಿರದಿಂದ ಐವತ್ತು ಸಾವಿರಕ್ಕೂ ಹೆಚ್ಚು ಕೆಲಸಗಾರ ಜೇನುನೊಣಗಳಿರುತ್ತವೆ. ನೂರಾರು ಗಂಡು ನೊಣಗಳು ಹೊಸರಾಣಿಗಳು ಬೆಳೆಯುವಾಗ ಮತ್ತು ಪರಾಗ ಮತ್ತು ಮಕರಂದ ದೊರೆಯುವ ಕಾಲಗಳಲ್ಲಿ ಸಾಮಾನ್ಯವಾಗಿ ಉತ್ಪತ್ತಿಯಾಗುತ್ತವೆ. ಕೆಲಸಗಾರ ನೊಣಗಳು ಕುಟುಂಬದ ಎಲ್ಲ ಕಾರ್ಯಗಳನ್ನು ಜವಾಬ್ದಾರಿಯಿಂದ ನಿರ್ವಹಿಸುತ್ತವೆ.

ಕೆಲಸಗಾರ ನೊಣಗಳು :  ಕೆಲಸಗಾರ ನೊಣಗಳು ಗಾತ್ರದಲ್ಲಿ ರಾಣಿ ಮತ್ತು ಗಂಡು ಜೇನುನೊಣಗಳಂತೆ ಚಿಕ್ಕವು. ಅನೇಕ ಪೀಳಿಗೆಗಳ ಮೂಲವಾಗಿ ಮಾತೃತ್ವದ ಲಕ್ಷಣವನ್ನು ಉಳಿಸಿಕೊಂಡು ವಿಶೇಷ ಜೈವಿಕ ಗುಣಗಳನ್ನು ಹೊಂದಿವೆ. ಈ ಗುಣಗಳು  ಕುಟುಂಬ ಜೀವನಕ್ಕೆ ಅಗತ್ಯವಿದ್ದು ಯಾವಾಗಲೂ ಕುಟುಂಬದಲ್ಲಿ ಇವುಗಳಿಗೆ ಕೆಲಸದ್ದೊಂದೇ ಚಿಂತೆ. ಆದುದರಿಂದ ಇವುಗಳನ್ನು ಕೆಲಸಗಾರ ನೊಣಗಳೆಂದು ಕರೆಯುವುದು ರೂಢಿಯಲ್ಲಿದೆ.

ತಮ್ಮ ಕುಟುಂಬಕ್ಕೋಸ್ಕರ ಮೊಟ್ಟೆ ಇಡುವುದನ್ನು ಬಿಟ್ಟು ಉಳಿದೆಲ್ಲ ಕೆಲಸ ಕಾರ್ಯಗಳನ್ನು ಮಾಡುತ್ತವೆ. ಇವು ತಮ್ಮ ಜೀವಿತಾವಧಿಯ ಮೊದಲ ಮೂರು ವಾರಗಳಲ್ಲಿ ಗೂಡಿನೊಳಗೆ ಮಾಡಬಹುದಾದಂತಹ ಕಾರ್ಯಗಳನ್ನು ನಿರ್ವಹಿಸಿದರೆ, ನಂತರದ ದಿನಗಳಲ್ಲಿ ಗೂಡಿನ ಹೊರಗೆ ಮಾಡಬಹುದಾದ ಕೆಲಸಗಳನ್ನು ನಿರ್ವಹಿಸುತ್ತವೆ. ಕೆಲಸಗಾರ ನೊಣಗಳು ಹುಟ್ಟಿ ೮ – ೧೦ ದಿನಗಳ ನಂತರ ಹೊರಗಡೆ ಹಾರುವುದನ್ನು ಕಲಿಯುತ್ತವೆ. ವಾತಾವರಣವು ಒಣ ಹವೆಯಿಂದ ಕೂಡಿದ ಸಮಯದಲ್ಲಿ ಗುಂಪು ಗುಂಪಾಗಿ ಗೂಡಿನಿಂದ ಹೊರಬಂದು ಗೂಡಿನ ಮುಂದೆ ಸ್ವಲ್ಪ ಸಮಯ ವಿಶ್ರಮಿಸಿ ರೆಕ್ಕೆಯಾಡಿಸುತ್ತವೆ. ಈ ರೀತಿ ಮಾಡುವುದರಿಂದ ಹಾರುವುದನ್ನು ಕಲಿಯುವುದು ಮಾತ್ರವಲ್ಲದೆ ತಮ್ಮ ಗೂಡಿನ ಜಾಗ ಮತ್ತು ಸ್ಥಿತಿಯನ್ನು ಗುರುತಿಸುವುದನ್ನು ಕಲಿಯುತ್ತವೆ.

ಕೆಲಸಗಾರ ನೊಣಗಳು ಪ್ರಾಯಕ್ಕನುಗುಣವಾಗಿ ಗೂಡಿನ ಕಾರ್ಯವೈಖರಿಯ ಅನುಭವಗಳನ್ನು ಪಡೆಯುತ್ತವೆ. ಇವುಗಳಿಗೆ ಇದೊಂದು ನಿಸರ್ಗದ ಕೊಡುಗೆಯಾಗಿದ್ದು ಗೂಡಿನಲ್ಲಿ ಮಾಡಬೇಕಾದ ಎಲ್ಲಾ ಕಾರ್ಯಗಳನ್ನು, ವಿವಿಧ ಪ್ರಾಯದಲ್ಲಿ ಮಾಡಿ ನಂತರ ಸಾಯುತ್ತವೆ. ಶತ್ರುಗಳನ್ನು ಓಡಿಸುವುದಕ್ಕೆ ಶರೀರದ ಹಿಂಭಾಗದಲ್ಲಿ ತುದಿಯಲ್ಲಿ ವಿಶಿಷ್ಟವಾದ ಕೊಂಡಿ ಎರಿಗಳನ್ನು ಕಟ್ಟಲು ಹೊಟ್ಟೆಯಡಿಯಲ್ಲಿ ಮೇಣ ಉತ್ಪಾದಿಸುವ ಗ್ರಂಥಿಗಳು, ಪರಾಗವನ್ನು ಹೊತ್ತು ತರಲು ಹಿಂಗಾಲುಗಳಲ್ಲಿ ಪರಾಗ ಬುಟ್ಟಿ. ಮಕರಂದವನ್ನು ತರಲು ಹೊಟ್ಟೆಯೊಳಗೆ ಮಧುಕೋಶ, ಕುಟುಂಬದ ಇತರ ನೊಣಗಳನ್ನು ಆಕರ್ಷಿಸಿ ಒಂದೆಡೆ ಕೂಡಲು ಬೇಕಾಗುವ ಆಕರ್ಷಣಾ ದ್ರವವನ್ನು ಹೊರ ಸೂಸುವ ಗ್ರಂಥಿಗಳು, ಮರಿಗಳನ್ನು ಪೋಷಿಸಲು ರಾಜಶಾಹಿ ರಸವನ್ನು ಉತ್ಪಾದಿಸುವ ಗ್ರಂಥಿಗಳು ಮೊದಲಾದ ವಿಶಿಷ್ಟ ಅಂಗಗಳನ್ನು ಹೊಂದಿರುತ್ತವೆ. ಅಲ್ಲದೆ ಸ್ವಾಭಾವಿಕವಾಗಿ ಮಕರಂದ ಮತ್ತು ಪರಾಗ ಸಿಗುವ ಸ್ಥಳವನ್ನು ವಾಸಕ್ಕನುಗುಣವಾದ ಸ್ಥಳವನ್ನು ಗುರುತಿಸಿ ಇತರ ನೊಣಗಳಿಗೆ ಸೂಚಿಸಲು ನೃತ್ಯಗಳನ್ನು ಮಾಡುವ ಕಲೆಯನ್ನು ಹೊಂದಿವೆ.

ರಾಣಿನೊಣ : ರಾಣಿನೊಣ ಕುಟುಂಬದ ಗಂಡು ಮತ್ತು ಕೆಲಸಗಾರ ನೊಣಗಳಿಗಿಂತ ದೊಡ್ಡದಾಗಿದ್ದು, ಹೊಟ್ಟೆಯ ತುದಿ ಚೂಪು ಮತ್ತು ರೆಕ್ಕೆಗಳು ಸಂಪೂರ್ಣವಾಗಿ ಹೊಟ್ಟೆಯನ್ನು ಮುಚ್ಚಿರುವುದಿಲ್ಲ. ಒಂದು ಕುಟುಂಬದಲ್ಲಿ ಸಾಮಾನ್ಯವಾಗಿ ಒಂದೇ ರಾಣಿ ನೊಣವಿರುತ್ತದೆ.

ಮೊಟ್ಟೆ ಇಡುತ್ತಿರುವ ರಾಣಿ ಜೇನುನೊಣವನ್ನು ಸುತ್ತುವರೆದಿರುವ ಕೆಲಸಗಾರ ‘ದಾದಿ’ ನೊಣಗಳು

 ಇದು ಪರಿಪೂರ್ಣ ಹೆಣ್ಣುನೊಣವಾಗಿದ್ದು ಕೆಲವು ಬಾರಿ ಕುಟುಂಬಗಳನ್ನು ಬಿಟ್ಟು ಹೊರಗಡೆ ಹಾರಾಡಿ ಗೂಡಿಗೆ ಹಿಂತಿರುಗುತ್ತದೆ. ಮೊದಲನೆಯದಾಗಿ ರಾಣಿನೊಣವು ಸುತ್ತಮುತ್ತಲಿನ ಪರಿಸರಕ್ಕೆ ಹೊಂದಿಕೊಳ್ಳಲು ಮತ್ತು ಎರಡನೆಯದಾಗಿ ಲೈಂಗಿಕ ಸಂಪರ್ಕಕ್ಕೋಸ್ಕರ ಗಂಡುನೊಣಗಳು ಗುಂಪಾಗಿರುವ ಸ್ಥಳಕ್ಕೆ ಹಾರಿ ಹೋಗುತ್ತದೆ. ಈ ರೀತಿಯ ಹಾರಾಟವನ್ನು ‘ಕೂಡುವಿಕೆಯ ಹಾರಾಟ’ ಅಥವಾ ‘ಪ್ರಸ್ತದ ಹಾರಾಟ’ ಎಂದು ಕರೆಯಲಾಗುತ್ತದೆ. ಕೊನೆಯದಾಗಿ ಕುಟುಂಬವು ಪಾಲಾಗುವ ಸಮಯದಲ್ಲಿ ರಾಣಿನೊಣವು ಗೂಡನ್ನು ಬಿಟ್ಟು ಕೆಲಸಗಾರ ನೊಣಗಳೊಂದಿಗೆ ಹೊರಗೆ ಹೋಗುತ್ತದೆ. ರಾಣಿನೊಣದ ಮುಖ್ಯ ಕೆಲಸ ಮೊಟ್ಟೆ ಇಡುವುದು. ಇದು ಕುಟುಂಬದ ಅಗತ್ಯತೆಗೆ ಅನುಗುಣವಾಗಿ ಮೊಟ್ಟೆಗಳನ್ನು ಇಡುತ್ತವೆ (ಚಿತ್ರ ೨೧).

ಕೋಷ್ಠಕ. : ಕುಟುಂಬದಲ್ಲಿರುವ ಮೂರು ಜಾತಿಯ ಜೇನುನೊಣಗಳಲ್ಲಿರುವ ವ್ಯತ್ಯಾಸಗಳು

  ರಾಣಿ ನೊಣ ಕೆಲಸಗಾರ ನೊಣ ಗಂಡು ನೊಣ
೧. ಸಂಖ್ಯೆ ಒಂದು ಕುಟುಂಬದಲ್ಲಿ ಒಂದೇ ಒಂದು ರಾಣಿ ಇರುತ್ತದೆ ಕುಟುಂಬದಲ್ಲಿ ೧೦೦೦೦ ರಿಂದ ೫೦೦೦ ಕೆಲಸಗಾರ ನೊಣಗಳು ಇರುತ್ತವೆ ಹೊಸ ರಾಣಿಗಳನ್ನು ಬೆಳೆಸುವ ಕಾಲದಲ್ಲಿ ನೂರಾರು ಗಂಡು ನೊಣಗಳು ಇರುತ್ತವೆ.
೨. ಲಿಂಗ ಪರಿಪೂರ್ಣ ಗರ್ಭವತ್ತಾದ ಹೆಣ್ಣು ನಿರ್ಲಿಂಗ ಹೆಣ್ಣು. ಗರ್ಭಕೋಶ ಸರಿಯಾಗಿ ಬೆಳೆದಿರುವುದಿಲ್ಲ ಪರಿಪೂರ್ಣ ಲಿಂಗವಿರುವ ಗಂಡು ನೊಣ
೩. ಗಾತ್ರ ಇತರೆ ನೊಣಗಳಿಗಿಂತ ದೊಡ್ಡದಾಗಿರುತ್ತದೆ ಸಾಧಾರಣ ಗಾತ್ರ ಕೆಲಸಗಾರ ನೊಣಗಳಿಗಿಂತ ದೊಡ್ಡದಾಗಿರುತ್ತದೆ.
೪. ರೆಕ್ಕೆ ರೆಕ್ಕೆಗಳು ಹೊಟ್ಟೆಯನ್ನು ಪೂರ್ಣವಾಗಿ ಮುಚ್ಚಿರುವುದಿಲ್ಲ ಹೊಟ್ಟೆಯು ರೆಕ್ಕೆಗಳಿಂದ ಪೂರ್ಣ ಮುಚ್ಚಿಕೊಂಡಿರುತ್ತದೆ ಹೊಟ್ಟೆಯು ರೆಕ್ಕೆಗಳಿಂದ ಪೂರ್ಣ ಮುಚ್ಚಿಕೊಂಡಿರುತ್ತದೆ
೫. ಮುಳ್ಳು ಮುಳ್ಳು ಬಗ್ಗಿರುತ್ತದೆ ಮತ್ತು ಉದ್ದವಾಗಿ ನುಣುಪಾಗಿರುತ್ತದೆ ಚುಚ್ಚುವ ಮುಳ್ಳು ಚೂಪಾಗಿದ್ದು ಹಿಂದಕ್ಕೆ ಬಾಗಿದ ಕೊಂಡಿಗಳಿರುತ್ತವೆ ಚುಚ್ಚುವ ಮುಳ್ಳುಗಳಿರುವುದಿಲ್ಲ
೬.ಹೊಟ್ಟೆ ಹೊಟ್ಟೆಯು ಚೂಪಾಗಿ V ಆಕಾರದಲ್ಲಿರುತ್ತದೆ ಹೊಟ್ಟೆಯು ಚೂಪಾಗಿ V ಆಕಾರದಲ್ಲಿರುತ್ತದೆ ಹೊಟ್ಟೆಯು ಮೊಂಡಾಗಿರುತ್ತದೆ
೭. ಪರಾಗ ಬುಟ್ಟಿಗಳು  ಪರಾಗ ಬುಟ್ಟಿಗಳಿರುವುದಿಲ್ಲ ಪರಾಗ ಬುಟ್ಟಿಗಳು ಪ್ರಧಾನವಾಗಿರುತ್ತವೆ ಪರಾಗ ಬುಟ್ಟಿಗಳಿರುವುದಿಲ್ಲ
೮. ಮೇಣದ ಗ್ರಂಥಿಗಳು ಮೇಣದ ಗ್ರಂಥಿಗಳು ಇರುವುದಿಲ್ಲ ಮೇಣದ ಗ್ರಂಥಿಗಳು ಪ್ರಧಾನವಾಗಿರುತ್ತವೆ ಮೇಣದ ಗ್ರಂಥಿಗಳು ಇರುವುದಿಲ್ಲ
೯. ಆಹಾರ ಒದಗಿಸುವಿಕೆ ಆಹಾರಕ್ಕೆ ಕೆಲಸಗಾರ ನೊಣಗಳನ್ನು ಅವಲಂಬಿಸಿರುತ್ತವೆ ಆಹಾರವನ್ನು ಸಂಗ್ರಹಿಸಿ, ತಾವೂ ತಿಂದು, ಇತರರಿಗೂ ಒದಗಿಸುತ್ತವೆ ಕೆಲಸಗಾರ ನೊಣಗಳನ್ನು ಅವಲಂಭಿಸಿರುತ್ತವೆ
೧೦. ಬೆಳವಣಿಗೆಯ ಅವಧಿ ಮೊಟ್ಟೆಯಿಂದ ಪ್ರೌಢಾವಸ್ಥೆಯವರೆಗೆ ೧೬ ದಿನಗಳು ೨೧ ದಿನಗಳು ೨೪ ದಿನಗಳು
೧೧. ಕಣಗಳ ಗಾತ್ರ ಅತಿದೊಡ್ಡದು ಸಾಮಾನ್ಯ ಗಾತ್ರ ದೊಡ್ಡದು

ರಾಣಿ ನೊಣವು ಕೆಲಸಗಾರ ನೊಣಗಳು ಸ್ರವಿಸುವ ರಾಜಶಾಹಿರಸದ ಜೊತೆಗೆ ಪಚನಗೊಂಡ ಆಹಾರವನ್ನು ತಿನ್ನುತ್ತದೆ. ರಾಣಿಯು ಮೊಟ್ಟೆ ಇಡುವ ಸಂಖ್ಯೆ ಆಹಾರದ ಗುಣಮಟ್ಟ ಹಾಗೂ ಪ್ರಮಾಣವನ್ನು ಅವಲಂಭಿಸಿದ್ದು ವಯಸ್ಸು ಕೂಡ ಮೊಟ್ಟೆ ಇಡುವ  ಕ್ರಿಯೆಯ ಮೇಲೆ ಪರಿಣಾಮ ಬೀರುತ್ತವೆ. ಎಳೆ ವಯಸ್ಸಿನಲ್ಲಿ  ಹೆಚ್ಚಿನ ಮೊಟ್ಟೆಗಳನ್ನಿಡುವ ರಾಣಿನೊಣ ವಯಸ್ಸಾದಂತೆ ಕಡಿಮೆ ಮೊಟ್ಟೆಗಳನ್ನಿಡುತ್ತದೆ. ಆಹಾರ ಅಭಾವವಿರುವ ಕಾಲ ಮತ್ತು ವಾತಾವರಣವು ಹೆಚ್ಚು ಉಷ್ಣ / ಶೀತದಿಂದ ಕೂಡಿ ಕೆಲವು ಕಾಲ ಮೊಟ್ಟೆಯನ್ನಿಡದೆ ಉಳಿಯುವ ಸಾಧ್ಯತೆ ಇರುತ್ತದೆ. ರಾಣಿಗೆ ವಯಸ್ಸಾದಂತೆಲ್ಲ ಮೊಟ್ಟೆ ಇಡುವ ಶಕ್ತಿ ಕಡಿಮೆಯಾಗುತ್ತದೆ ಲಾಭದಾಯಕ ಜೇನು ಸಾಕಣೆಗೆ ಪ್ರತಿ ಎರಡುವರ್ಷಕ್ಕೊಮ್ಮೆ ಹಳೆಯ ರಾಣಿಯನ್ನು ತೆಗೆದು ಹೊಸ ರಾಣಿಯನ್ನು ಒದಗಿಸುವುದು ಸೂಕ್ತ. ರಾಣಿ, ಗಂಡು ಜೇನುನೊಣ ಮತ್ತು ಕೆಲಸಗಾರ ಜೇನುನೊಣಗಳ ಪ್ರಮುಖ ಗುಣಗಳ ಹೋಲಿಕೆಯನ್ನು ಕೋಷ್ಟಕ ೪ ರಲ್ಲಿ ತೋರಿಸಲಾಗಿದೆ.

ಗಂಡು ನೊಣ : ಗಂಡು ನೊಣಗಳು ಗಾತ್ರದಲ್ಲಿ ಕೆಲಸಗಾರ ನೊಣಗಳಿಗಿಂತ ಸುಮಾರು ದೊಡ್ಡವು, ಕುಟುಂಬದಲ್ಲಿ ಇವುಗಳನ್ನು ಡ್ರೋನ್‌ಗಳೆಂದು ಕರೆಯುತ್ತಾರೆ. ಕಪ್ಪು ಮಿಶ್ರಿತ ಕಂದು ಬಣ್ಣ. ವರ್ಷದ ಒಂದೆರಡು ಋತುವಿನಲ್ಲಿ ಮಾತ್ರ ಕಂಡು ಬರುತ್ತವೆ (ಚಿತ್ರ ೨೨). ಇವುಗಳ ಮುಖ್ಯ ಕೆಲಸವೆಂದರೆ ಕನ್ಯಾರಾಣಿಯನ್ನು ಸಂಪರ್ಕಿಸಿ ಗರ್ಭಧರಿಸುವಂತೆ ಮಾಡುವುದು. ನೂರಾರು ಗಂಡು ನೊಣಗಳಲ್ಲಿ ಕೆಲವೇ ನೊಣಗಳಿಗೆ ಮಾತ್ರ ಅವಕಾಶವಿದ್ದು ಇವು ಲೈಂಗಿಕ ಸಂಪರ್ಕದ ನಂತರ ಸಾಯುತ್ತವೆ. ಇವುಗಳಿಗೆ ಆಹಾರವನ್ನು ಸಂಗ್ರಹಿಸುವ ರಚನೆಗಳಿಲ್ಲದಿದ್ದರೂ ಹೆಚ್ಚು ಆಹಾರವನ್ನು ತಿನ್ನುವ ಗುಣವನ್ನು ಪಡೆದಿದ್ದು ಪ್ರತಿ ಗಂಡು ನೊಣಕ್ಕೆ ೩ – ೫ ಕೆಲಸಗಾರ ನೊಣಗಳು ಸಂಗ್ರಹಿಸುವ ಆಹಾರ ಬೇಕಾಗುತ್ತದೆ ಎಂದು ತಿಳಿಯಲಾಗಿದೆ. ಗಾತ್ರದಲ್ಲಿ ದಪ್ಪವಾಗಿರುವುದರಿಂದ ದೊಡ್ಡದಾದ ಕಣಗಳಲ್ಲಿ ಬೆಳೆಯುತ್ತವೆ. ಗಂಡು ನೊಣಗಳ ಜೀವನಾವಧಿ ಕಾಲ ಸುಮಾರು ೨- ೩ ತಿಂಗಳುಗಳು (ಕೋಷ್ಠಕ ೫).

ಎಪಿಸ್‌ಮೆಲ್ಲಿಫೆರಾ ಪ್ರಭೇದದ ಗಂಡು ಜೇನುನೊಣ

ಕೋಷ್ಠಕ : ಕುಟುಂಬದಲ್ಲಿ ವಿವಿಧ ಜಾತಿಯ ಜೇನುನೊಣಗಳ ಬೆಳವಣಿಗೆಯ ಅವಧಿ

 

 

ಮೊಟ್ಟೆ

ಹುಳು

ಕೋಶ

ಒಟ್ಟು (ದಿನಗಳು)

ಪ್ರೌಢನೊಣದ ಅವಧಿ

ರಾಣಿನೊಣ ೭ – ೮ ೧೫ – ೧೬ ೩-೪ ವರ್ಷಗಳು
ಗಂಡುನೊಣ ೧೪ ೨೪ ೬೦- ೯೦ ದಿನಗಳು
ಕೆಲಸಗಾರ ನೊಣ ೧೧- ೧೨ ೧೯ – ೨೦ ೪೦-೬೦ ದಿನಗಳು

ಜೀವನ ಚರಿತ್ರೆ : ಜೇನು ನೊಣ ಮುಖ್ಯವಾಗಿ ನಾಲ್ಕು ಹಂತಗಳಲ್ಲಿ ಬೆಳವಣಿಗೆಯಾಗುತ್ತದೆ. ಅವುಗಳೆಂದರೆ ಮೊಟ್ಟೆ, ಹುಳು, ಕೋಶ ಮತ್ತು ಪ್ರೌಢಾವಸ್ಥೆಗಳು (ಚಿತ್ರ ೨೩). ಜೇನು ನೊಣಗಳಲ್ಲಿ ಈ ರೀತಿಯ ಬೆಳವಣಿಗೆಯನ್ನು ಪೂರ್ಣರೂಪಾಂತರವೆಂದು ಕರೆಯಲಾಗುತ್ತದೆ. ರಾಣಿ ಮೊಟ್ಟೆ ಇಡುವ ಮೊದಲು ಕೆಲಸಗಾರ ನೊಣಗಳು ಕಣಗಳನ್ನು ಸ್ವಚ್ಛಗೊಳಿಸುತ್ತವೆ. ವಿವಿಧ ಜಾತಿಯ ಜೇನು ನೊಣಗಳ ಬೆಳವಣಿಗೆ ಅವುಗಳು ತಿನ್ನುವ ಆಹಾರದ ಗುಣ ಮತ್ತು ಪ್ರಮಾಣವನ್ನು ಅವಲಂಭಿಸಿದ್ದು ಮರಿಹುಳು ರಾಣಿ ನೊಣವಾಗಿ ಬೆಳೆಯಬೇಕಾದರೆ ಮರಿ ಹುಳುವಿನ ಪೂರ್ಣ ಹಂತದಲ್ಲಿ ರಾಜಶಾಹಿ ರಸವನ್ನು ತಿನ್ನಬೇಕಾಗುತ್ತದೆ (ಕೋಷ್ಠಕ ೬).

ಜೇನುನೊಣದ ನಾಲ್ಕು ಹಂತಗಳು ೧. ಮೊಟ್ಟೆ ೨. ಹುಳು ೩. ಕೋಶ ೪. ಗೂಡಿನಿಂದ ಹೊರಬರುತ್ತಿರುವ ವಯಸ್ಕ ಜೇನುನೊಣ

ಮೊಟ್ಟೆ :  ಮೊಟ್ಟೆ ಬಿಳಿ ಬಣ್ಣವಿದ್ದು ಒಂದು ತುದಿ ಉಬ್ಬಿರುತ್ತದೆ. ಮೊಟ್ಟೆಯ ಗಾತ್ರ ಜೇನು ನೊಣಗಳ ವಿವಿಧ ಪ್ರಭೇದಗಳ ನಡುವೆ ಸ್ವಲ್ಪ ವ್ಯತ್ಯಾಸಗೊಳ್ಳುತ್ತದೆ. ಹೆಜ್ಜೇನಿನ ಮೊಟ್ಟೆಗಳು ಇತರೆ ಜೇನು ಪ್ರಭೇದಗಳ ಮೊಟ್ಟೆಗಳಿಗಿಂತ ಗಾತ್ರದಲ್ಲಿ ದೊಡ್ಡವಾಗಿದ್ದರೆ ಕೋಲು ಜೇನು ನೊಣದ ಮೊಟ್ಟೆಗಳು ಚಿಕ್ಕವಾಗಿರುತ್ತವೆ. ಆದರೆ ತುಡುವೆ ಜೇನು ಮತ್ತು ಯೂರೋಪಿಯನ್ ಜೇನು ನೊಣಗಳ ಮೊಟ್ಟೆಗಳ ಗಾತ್ರದಲ್ಲಿ ಹೆಚ್ಚಿನ ವ್ಯತ್ಯಾಸ ಕಂಡು ಬರುವುದಿಲ್ಲ. ಸಾಮಾನ್ಯವಾಗಿ ಆರೋಗ್ಯವಂತ ಜೇನು ಕುಟುಂಬದಲ್ಲಿ ರಾಣಿ ನೊಣವು ಮಾತ್ರ ಮೊಟ್ಟೆಯನ್ನಿಡುತ್ತದೆ.

ಕೋಷ್ಠಕ : ಜೇನುನೊಣಗಳ ಬೆಳವಣಿಗೆಯ ಹಂತಗಳು

ಹಂತಗಳು

ಮೊಟ್ಟೆ ಇಟ್ಟ ದಿನದಿಂದ ಬೆಳವಣಿಗೆ (ದಿನಗಳಲ್ಲಿ)

ಕೆಲಸಗಾರ

ರಾಣಿ

ಗಂಡು

ಮೊಟ್ಟೆಯೊಡೆಯುವಿಕೆ ೩.೦೦ ೩.೦೦ ೩.೦೦
ಮರಿಯ ಮೊದಲ ಹಂತ ೩.೫೦ ೩.೫೦ ೪.೦೦
ಮರಿಯ ಎರಡನೆ ಹಂತ ೪.೫೦ ೪.೫೦ ೫.೦೦
ಮರಿಯ ಮೂರನೆ ಹಂತ ೫.೫೦ ೫.೫೦ ೬.೦೦
ಮರಿಯ ನಾಲ್ಕನೆ ಹಂತ ೬.೫೦ ೬.೫೦ ೭.೦೦
ಕಣ ಮುಚ್ಚುವಿಕೆ ೮ – ೯ ೮.೦೦ ೧೦.೦೦
ಗೂಡು ಕಟ್ಟುವಿಕೆ ೧೦.೦೦ ೯.೦೦ ೧೨.೦೦
ಐದನೇ ಹಂತದಿಂದ ಕೋಶದ ಹಂತ ೧೧.೦೦ ೧೦.೦೦ ೧೪.೦೦
ಕೋಶದ ಕಣ್ಣು ನಸುಗೆಂಪಾಗುವಿಕೆ ೧೪.೦೦ ೧೧.೦೦ ೧೬.೦೦
ಕೋಶದ ಕಣ್ಣು ಕೆಂಪಾಗುವಿಕೆ ೧೫.೦೦ ೧೨.೦೦ ೧೮.೦೦
ಕೋಶದ ಹೊಟ್ಟೆ ಹಳದಿಯಾಗುವಿಕೆ ೧೮.೦೦ ೧೪.೦೦ ೨೦.೦೦
ಕೋಶದ ಮೀಸೆ ಕಪ್ಪಾಗುವಿಕೆ ೨೦.೦೦ ೧೫.೦೦ ೨೨.೦೦
ಕಣದಿಂದ ಹೊರಬರುವಿಕೆ ೨೧.೦೦ ೧೬.೦೦ ೨೪.೦೦

(ಅಬ್ರೋಲ್ , ೧೯೯೭)

ಜೇನು ನೊಣಗಳ ‘)’ ಆಕಾರದಲ್ಲಿದ್ದು ತೆಳುವಾದ ಹೊರ ಪೊರೆಯಿಂದ ರಕ್ಷಿಸಲ್ಪಟ್ಟಿರುತ್ತದೆ, ಸೂಕ್ಷ್ಮದರ್ಶಕದ ಮೂಲಕ ವೀಕ್ಷಿಸಿದಾಗ ಮೊಟ್ಟೆಯ ಹೊರಮೇಲ್ಮೈ ಪಂಚಕೋನದ ಕಣಗಳಿಂದ ಕೂಡಿರುವುದು ಕಂಡು ಬರುತ್ತದೆ. ಅದರಲ್ಲಿ ಕೋಶರಸ, ಕೋಶ ಕೇಂದ್ರ ಮತ್ತು ಭಂಡಾರಗಳಿರುತ್ತವೆ. ರಾಣಿ ಎರಡು ರೀತಿಯ ಮೊಟ್ಟೆಗಳನ್ನಿಡುತ್ತದೆ. ಫಲವತ್ತಾದ ಮತ್ತು ಫಲವತ್ತಲ್ಲದ ಮೊಟ್ಟೆಗಳು, ಫಲವತ್ತಾದ ಮೊಟ್ಟೆಗಳು ಕೆಲಸಗಾರ ಮತ್ತು ರಾಣಿ ನೊಣವಾಗಿ ಬೆಳವಣಿಗೆಯಾದರೆ ಫಲವತ್ತಲ್ಲದ ಮೊಟ್ಟೆಗಳು ಗಂಡು ನೊಣಗಳಾಗಿ ಬೆಳವಣಿಗೆಯಾಗುತ್ತವೆ. ಮೊಟ್ಟೆಯಿಟ್ಟ ಕೆಲವು ಗಂಟೆಗಳ ನಂತರ ಮೊಟ್ಟೆ ವಿಭಜನೆಯಾಗಿ ಅದರ ಸುತ್ತ ಪೊರೆಯು ಬೆಳೆದು ಕಣಗಳು ಒಂದಕ್ಕೊಂದು ವಿಸ್ತರಿಸಿ ಎರಡು ಪದರಗಳಿಂದ ಕೂಡಿದ ಭ್ರೂಣವಾಗಿ ಪರಿವರ್ತನೆಗೊಳ್ಳುತ್ತದೆ. ಹೀಗೆ ಮೊಟ್ಟೆಯಿಂದ ಮರಿಹುಳು ಮೂರು ದಿನಗಳಲ್ಲಿ ಹೊರಬರುತ್ತದೆ.

ಮರಿಹುಳುವಿನ ಬೆಳವಣಿಗೆ : ಪ್ರಾರಂಭದಲ್ಲಿ ಮರಿಹುಳು C ಆಕಾರವಿದ್ದು ಕಾಲುಗಳನ್ನು ಹೊಂದಿರುವುದಿಲ್ಲ. ಹುಳು ಮೊದಲು ಹೊಳೆಯುವ ಬಿಳಿ ಬಣ್ಣವಿದ್ದು ಬೆಳೆದಂತೆಲ್ಲಾ ಬಿಳಿಮಿಶ್ರಿತ ಕಂದು ಬಣ್ಣಕ್ಕೆ ತಿರುಗಿ ತುಂಡುಗಳು ಸ್ಪಷ್ಟವಾಗಿ ವಿಂಗಡನೆಯಾಗುತ್ತವೆ. ಮರಿ ಹುಳುವಿನ ತಲೆ ದುಂಡಾಕಾರದ ಉಬ್ಬುಗಳಿಂದ ಕುಡಿ ಅವು ಕುಡಿಮೀಸೆಯ ಮೊಗ್ಗುಗಳು ಮತ್ತು ದವಡೆಗಳನ್ನು ಒಂದು ಗೂಡಿಸುತ್ತವೆ. ಎದೆಯ ಭಾಗದಲ್ಲಿ ಎರಡು ಜೊತೆ ಉಸಿರು ರಂಧ್ರಗಳಿದ್ದು ಎರಡನೆ ಮತ್ತು ಮೂರನೆ ತುಂಡಿನಲ್ಲಿ ರೆಕ್ಕೆಗಳ ಮೊಗ್ಗುಗಳು ಕಂಡು ಬರುತ್ತವೆ. ಹೊಟ್ಟೆಯ ಕೊನೆ ಎರಡು ತುಂಡುಗಳನ್ನು  ಹೊರತುಪಡಿಸಿ ಗಾತ್ರದಲ್ಲಿ ಹೆಚ್ಚೂ ಕಡಿಮೆ ಒಂದೇ  ಸಮನಾಗಿರುತ್ತದೆ. ಉಸಿರು ರಂಧ್ರಗಳು ಹೊಟ್ಟೆಯ ಮೊದಲ ಎಂಟು ತುಂಡುಗಳಲ್ಲಿ ಕಂಡು ಬರುತ್ತವೆ.

ಕೋಶಾವಸ್ಥೆ : ಜೇನು ಮರಿಯ ಕೋಶಾವಸ್ಥೆಯಲ್ಲಿ ತನ್ನ ಸುತ್ತಲೂ ರೇಷ್ಮೆಯಂತಹ ಸ್ರವಿಸಿದ ಎಳೆಗಳಿಂದ ಸುತ್ತುವರೆದಿದ್ದು ಮಂದಗತಿಯಲ್ಲಿರುತ್ತದೆ. ಈ ಹಂತದಲ್ಲಿಅದರ ಬಾಯಿಯ ಭಾಗಗಳು, ಕೂಡು ಕಣ್ಣುಗಳು, ಕುಡಿಮೀಸೆಗಳ ಬೆಳವಣಿಗೆಯಾಗಿ, ಎದೆ ಮತ್ತು ಹೊಟ್ಟೆಯ ಉಂಗುರಾಕಾರದ ತುಂಡುಗಳು ವಿಂಗಡನೆಯಾಗುತ್ತವೆ. ಕೋಶದ ಹಂತವು  ಮುಂದುವರೆದಂತೆಲ್ಲಾ ಬಣ್ಣದಲ್ಲಿ ಬದಲಾವಣೆಯಾಗಿ ಕೂಡು ಕಣ್ಣುಗಳು ಮೊದಲು ಕೇಸರಿ ಬಣ್ಣದಿಂದಲೂ ನಂತರ ನೇರಳೆ ಮತ್ತು ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಹಾಗೆಯೇ ಕೂದಲುಗಳ ಮತ್ತು ಹೊರ ಚರ್ಮದ ಬೆಳವಣಿಗೆಯಾಗುತ್ತದೆ (ಕೋಷ್ಠಕ ೬).

ಕೆಲಸಗಾರ ನೊಣದ ಜೀವನ ಚರಿತ್ರೆ : ಕೆಲಸಗಾರ ನೊಣದ ಮೊಟ್ಟೆಯಿಂದ ಪ್ರೌಢಾವಸ್ಥೆಯ ವಿವಿಧ ಹಂತಗಳ ಹೋಲಿಕೆಯನ್ನು ಚಿತ್ರ ೨೩ ರಲ್ಲಿ ತೋರಿಸಲಾಗಿದೆ.  ಮೊಟ್ಟೆ ಇಟ್ಟ ಮೂರು ದಿನಗಳ ನಂತರ ಭ್ರೂಣದ ತೂಕವು ಉಲ್ಬಣಗೊಂಡು ನಂತರ ಹುಳುವಾಗಿ ಆಹಾರವನ್ನು ತಿನ್ನಲು ಆರಂಭಿಸುತ್ತದೆ. ಇತರೆ ಕೀಟಗಳಂತೆ ಜೇನು ನೊಣಗಳಲ್ಲಿ ಭ್ರೂಣವು ಮೊಟ್ಟೆಯಲ್ಲಿನ ಭಂಡಾರದಿಂದ ಆಹಾರವನ್ನು ಪಡೆಯುತ್ತದೆ. ಕೆಲಸಗಾರ ದಾದಿನೊಣಗಳು ಮರಿ ಹುಳುಗಳಿಗೆ ತಮ್ಮ ಹೈಪೋಪೆರೆಂಜಿಯಲ್‌ಮತ್ತು ದವಡೆ ಗ್ರಂಥಿಗಳಿಂದ ಸ್ರವಿಸಿದ ರಾಜಶಾಹಿ ರಸವನ್ನು ಕಣಗಳಲ್ಲಿ ಶೇಖರಿಸುತ್ತವೆ. ಈ ಆಹಾರವು ಮರಿ ಹುಳುಗಳಿಗೆ ಅಗತ್ಯವಾದ ಸಸಾರಜನಕ, ಜೀವಸತ್ವಗಳು ಮತ್ತು ಇತರೆ ಅವಶ್ಯಕ ಆಹಾರ ಪದಾರ್ಥಗಳನ್ನು ಒದಗಿಸುತ್ತದೆ. ಮೊದಲ ಮೂರು ದಿನಗಳವರೆಗೆ ದಾದಿ ನೊಣಗಳು ಚಿಕ್ಕವಯಸ್ಸಿನ ಜೇನು ಮರಿಗಳಿಗೆ ರಾಜಶಾಹಿರಸವನ್ನು ಇತರೆ ಹಂತದ ಮರಿಗಳಿಗೆ ರಾಜಶಾಹಿರಸದ ಜೊತೆಗೆ ಜೇನುತುಪ್ಪ ಮತ್ತು ಪರಾಗಗಳಿಂದ ಕೂಡಿದ ಆಹಾರವನ್ನು ತಿನ್ನಿಸುತ್ತವೆ. ಹುಳುಗಳು ಸುಮಾರು ೫ ದಿನಗಳು ಬೆಳೆದು ಆಹಾರ ತಿನ್ನುವುದನ್ನು ನಿಲ್ಲಿಸಿದ ಕೂಡಲೆ ಕೆಲಸಗಾರ ನೊಣಗಳು ಕಣದ ಬಾಯನ್ನು ಮೇಣದಿಂದ ಮುಚ್ಚುತ್ತವೆ. ಪೂರ್ಣ ಬೆಳೆದ ಹುಳು ರೇಷ್ಮೆಯಂತಹ ಎಳೆಗಳನ್ನು ಸ್ರವಿಸಿ ಸುತ್ತುವರೆಯುತ್ತದೆ. ಕೋಶಾವಸ್ಥೆಯ ಹಂತದಲ್ಲಿ ಪ್ರೌಢನೊಣದ  ಅವಶ್ಯಕ ಅಂಗಾಂಗಗಳ ಬೆಳವಣಿಗೆಯಾಗಿ ಪೂರ್ಣ ಬೆಳವಣಿಗೆಯ ನಂತರ ತನ್ನ ದವಡೆಗಳಿಂದ ಕಣದ ಮೇಣದ ಕವಚವನ್ನು ತೆಗೆದು ಕಂದು ಬಣ್ಣದಿಂದ ಕೂಡಿದ ಪ್ರೌಢನೊಣ ಹೊರಬರುತ್ತದೆ.

ಕೆಲಸಗಾರ ನೊಣಗಳ ಕಾರ್ಯಚಟುವಟಿಕೆಗಳು : ಕೆಲಸಗಾರ ನೊಣಗಳು ಕುಟುಂಬದ ಎಲ್ಲಾ ಕಾರ್ಯಗಳಲ್ಲಿ ವಯಸ್ಸಿಗನುಗುಣವಾಗಿ ತೊಡಗುತ್ತವೆ. ಅವುಗಳೆಂದರೆ ೧. ಉಷ್ಣತೆಯನ್ನು ನಿಯಂತ್ರಿಸುವುದು ೨. ಮರಿಗಳನ್ನು ಪೋಷಿಸುವದು ೩. ಎರಿ ಕಟ್ಟುವುದು ೪. ಕಣಗಳಿಗೆ ಮುಚ್ಚಳ ಹಾಕುವುದು ೫. ದ್ವಾರ ಪಾಲನೆ ೬. ಪರಾಗ, ಮಕರಂದ, ನೀರು ಮುಂತಾದವುಗಳನ್ನು ತರುವುದು, ಜೇನುನೊಣ ತನ್ನ ವಯಸ್ಸಿಗನುಗುಣವಾಗಿ ವಿವಿಧ ಕಾರ್ಯ ಚಟುವಟಿಕೆಗಳನ್ನು ನಿರ್ವಹಿಸುತ್ತದೆ:

ಕಣಗಳನ್ನು ಶುದ್ಧೀಕರಿಸುವುದು – ೧೧ ರಿಂದ ೩೦ ದಿನಗಳು

ಎರಿ ಕಟ್ಟುವುದು – ೯ ರಿಂದ ೧೭ ದಿನಗಳು

ಗೂಡನ್ನು ಶುಚಿಗೊಳಿಸುವುದು – ೧೭ ರಿಂದ ೩೦ ದಿನಗಳು

ಮಕರಂದ ಸ್ವೀಕರಿಸುವುದು – ೧೧ ರಿಂದ ೨೯ ದಿನಗಳು

ಗೂಡನ್ನು ಕಾಯುವುದು – ೨೦ ದಿನಗಳ ನಂತರ

ಆಹಾರ ತರುವುದು – ೨೩ ದಿನಗಳ ನಂತರ

ಇದರ ಜೊತೆಗೆ ಕೆಲಸಗಾರ ನೊಣಗಳು ಕುಟುಂಬದ ಅವಶ್ಯಕತೆಯನುಸಾರ ವಿವಿಧ ಕಾರ್ಯಗಳನ್ನು ನಿರ್ವಹಿಸುತ್ತವೆ.

ಉಷ್ಣತೆಯ ನಿಯಂತ್ರಣ : ಗೂಡಿನಲ್ಲಿ ಸರಾಸರಿ ಉಷ್ಣತೆ ೩೩ – ೩೫ ಡಿಗ್ರಿ ಸೆ. ಇರುವಾಗ ಜೇನುನೊಣಗಳ ಚಟುವಟಿಕೆಗಳು ಹೆಚ್ಚು ಚುರುಕಾಗಿ ನಡೆಯುತ್ತವೆ. ಗೂಡಿನಲ್ಲಿ ಸದಾ ಇದೇ ಉಷ್ಣತೆಯನ್ನು ಸ್ವತಃ ಜೇನುನೊಣಗಳೇ ನಿಯಂತ್ರಿಸುತ್ತವೆ. ಈ ನಿಗದಿತ ಉಷ್ಣತೆಯು ಜೇನುನೊಣಗಳು ಮೇಣವನ್ನು ಸ್ರವಿಸಿ, ಎರಿಯನ್ನು ಕಟ್ಟಲು, ಮರಿಗಳನ್ನು ಸಾಕಣೆ ಮಾಡಲು ಮತ್ತು ಮಕರಂದವನ್ನು ಜೇನು ತುಪ್ಪವನ್ನಾಗಿ ಪರಿವರ್ತಿಸಲು ಅತ್ಯಗತ್ಯ. ಜೇನುನೊಣಗಳು ಎದೆಯ ಸ್ನಾಯುಗಳಿಂದ ಮತ್ತು ಗುಂಪುಗೂಡುವುದರಿಂದ ಕುಟುಂಬದ ಉಷ್ಣತೆಯನ್ನು ಉಂಟು ಮಾಡುತ್ತವೆ. ಜೇಣು ಮರಿಗಳು ಸ್ರವಿಕೆಯನ್ನು ಸ್ರವಿಸುವ ಮೂಲಕ ಜೇನುನೊಣಗಳು ಎರಿಯನ್ನು ಸುತ್ತುವರೆದು ಉಷ್ಣತೆಯನ್ನು ಉಂಟು ಮಾಡಿ ಮರಿಗಳು ಆರೋಗ್ಯವಾಗಿ ಬೆಳೆಯಲು ಸಹಕಾರಿಯಾಗುತ್ತವೆ. ಇದರ ಜೊತೆಗೆ ಜೇನು ಮರಿಗಳೂ ತಮ್ಮ ಚಯಾಪಚಯ ಕ್ರಿಯೆಯ ಮೂಲಕ ಉಷ್ಣತೆಯನ್ನು ಉಂಟುಮಾಡುತ್ತವೆ. ಕುಟುಂಬದಲ್ಲಿ ಉಷ್ಣತೆ ಹೆಚ್ಚಾದಾಗ ನೀರನ್ನು ತಂದು ರೆಕ್ಕೆಗಳನ್ನು ನಿಧಾನವಾಗಿ ಬೀಸುವುದರ ಮೂಲಕ ತಂಪುಗೊಳಿಸುತ್ತವೆ.

ಉಷ್ಣತೆ ನಿಯಂತ್ರಿಸಲು ರೆಕ್ಕೆ ಬೀಸುತ್ತಿರುವ ಕೆಲಸಗಾರ ಜೇನುನೊಣ

ಮರಿಗಳ ಪೋಷಣೆ : ಜೇನು ಕುಟುಂಬದಲ್ಲಿ ರಾಣಿ ನೊಣವು ಮೊಟ್ಟೆ ಇಡುವುದರೊಂದಿಗೆ ಮರಿ ಸಾಕಣೆ ಪ್ರಾರಂಭವಾಗುತ್ತದೆ. ರಾಣಿ ಮೊಟ್ಟೆಯಿಡುವ ಸಮಯದಲ್ಲಿ ಅನೇಕ ಕೆಲಸಗಾರ ನೊಣಗಳು ರಾಣಿಯನ್ನು ಸುತ್ತುವರೆದು ಹೆಚ್ಚಿನ ಆಹಾರವನ್ನು ಕಾಲ ಕಾಲಕ್ಕೆ ತಿನ್ನಿಸುತ್ತವೆ. ರಾಣಿಯು ಮೊಟ್ಟೆಯನ್ನು ಕಣದೊಳಗೆ ಇಡುತ್ತದೆ. ಕೆಲವು ವೇಳೆ ಕಣದ ಹೊರಗಡೆ ಇಟ್ಟರೂ ಕೆಲಸಗಾರ ನೊಣಗಳು ಅವುಗಳನ್ನು ಕಣದೊಳಗೆ ಸೇರಿಸುತ್ತವೆ. ಎಳೆವಯಸ್ಸಿನ ಕೆಲಸಗಾರ ನೊಣಗಳು ಜೇನು ಮರಿಗಳಿಗೆ ಅಗತ್ಯ ಆಹಾರವಾದ ರಾಜಶಾಹಿರಸವನ್ನು ಸ್ರವಿಸುತ್ತವೆ ಮತ್ತು ಸ್ರವಿಸಲು ಪರಾಗವು ಅತ್ಯಾವಶ್ಯಕವಾಗಿದ್ದು ಸಸಾರಜನಕ, ಖನಿಜಗಳು, ಅಮೈನೋ ಆಮ್ಲಗಳು ಮತ್ತು ಜೀವಸತ್ವಗಳಿರುತ್ತವೆ. ರಾಣಿಯು ಪೂರ್ಣಾವಸ್ಥೆಯುದ್ದಕ್ಕೂ ರಾಜಶಾಹಿರಸವನ್ನು ತಿಂದರೆ ಕೆಲಸಗಾರ ಮತ್ತು ಗಂಡು ಜೇನುಮರಿಗಳು ಮೂರುದಿನಗಳ ನಂತರದ ಮರಿಹುಳು ಹಂತದಲ್ಲಿ ಜೇನುತುಪ್ಪ ಮತ್ತು ಪರಾಗಗಳನ್ನು ತಿನ್ನುತ್ತವೆ.

ಎರಿಗಳನ್ನು ಕಟ್ಟುವುದು : ಕೆಲಸಗಾರ ನೊಣಗಳು ತಮ್ಮ ಹೊಟ್ಟೆಯ ತಳಭಾಗದಲ್ಲಿರುವ ತಟ್ಟಿಯಾಕಾರದ ನಾಲ್ಕು ಜೊತೆ ಮೇಣದ ಗ್ರಂಥಿಗಳಿಂದ ಮೇಣವನ್ನು ಸ್ರವಿಸುತ್ತವೆ. ಈ ಗ್ರಂಥಿಗಳು ಸುಮಾರು ೯ – ೧೭  ದಿನಗಳ ವಯಸ್ಸಿನ ಕೆಲಸಗಾರ ನೊಣಗಳಲ್ಲಿ ಬೆಳವಣಿಗೆಯಾಗಿರುತ್ತವೆ. ಹೊಸ ಜಾಗದಲ್ಲಿ ಗೂಡನ್ನು ನಿರ್ಮಿಸಲು ಸಿದ್ಧತೆಯಿರುವ ಸಂದರ್ಭದಲ್ಲಿ ಹೆಚ್ಚು ಮೇಣದ ಅವಶ್ಯಕವಿದ್ದು ಗೂಡು ಕಟ್ಟುವಾಗ ಲಾಲಾ ರಸವನ್ನು ಬೆರಸಿ ಕಟ್ಟುತ್ತವೆ. ಕೆಲವೊಮ್ಮೆ ಸಂಸಾರ  ಕೋಣೆಯ ಎರಿಗಳಿಗೆ ಕೋಶದ ಹಂತದ ಮರಿಗಳಿಂದ ಸ್ರವಿತವಾದ ರೇಷ್ಮೆಯಂತಹ ಫೈಬ್ರಿನ್ ಸಸಾರಜನಕಗಳು ಸೇರಲ್ಪಡುತ್ತವೆ. ಈ ರೇಷ್ಮೆಯಂತಹ ಎಳೆಗಳು ಸಂಸಾರ ಕೋಣೆಯ ಕಣಗಳನ್ನು ಗಟ್ಟಿಯಾಗಿಟ್ಟಿರುತ್ತವೆ. ಆಧುನಿಕ ಜೇನು ಕೃಷಿಯಲ್ಲಿ ಜೇನುನೊಣಗಳಿಗೆ ಜೇನುಮೇಣದಿಂದ ತಯಾರಿಸಿದ ಹಾಳೆಗಳನ್ನು ನೀಡುವುದರಿಂದ ಬೇಗನೆ ಎರಿಗಳನ್ನು ಕಟ್ಟಲು ಸಹಾಯಕವಾಗುತ್ತದೆ.

ಕಣಗಳಿಗೆ ಮುಚ್ಚಳ ಹಾಕುವುದು : ಜೇನುಮರಿಗಳು ಕೋಶವಾಗುವ ಪ್ರಾರಂಭದಲ್ಲಿ ಮತ್ತು ಜೇನುತುಪ್ಪ ತುಂಬಿರುವ ಕಣಗಳನ್ನು ಕೆಲಸಗಾರ ನೊಣಗಳು ಮೇಣದ ಮುಚ್ಚಳಗಳಿಂದ ಮುಚ್ಚುತ್ತವೆ. ಜೇನುಮರಿಗಳ ಮತ್ತು ಜೇನುತುಪ್ಪದ ಮೇಲಿನ ಮುಚ್ಚಳಗಳ ನಡುವೆ ಕೆಲವು ವ್ಯತ್ಯಾಸಗಳಿದ್ದು ಮರಿಗಳ ಮೇಲಿನ ಮುಚ್ಚಳವನ್ನು ಕೇವಲ ಎಳೆವಯಸ್ಸಿನ ನೊಣಗಳು ಹೊಸ ಮೇಣದಿಂದ ಹಾಕಿದರೆ, ಜೇನುತುಪ್ಪದ ಮೇಲಿನ ಮುಚ್ಚಳವನ್ನು ಎಲ್ಲಾ ವಯಸ್ಸಿನ ಜೇನುನೊಣಗಳು ಮೊದಲು ಹಳೆಯ ಮೇಣದಿಂದ ಮತ್ತು ನಂತರ ಹೊಸ ಮೇಣದಿಂದ ಮುಚ್ಚಳವನ್ನು ರಚಿಸುತ್ತವೆ.

ದ್ವಾರ ಪಾಲನೆ : ಕೆಲಸಗಾರ ನೊಣಗಳಲ್ಲಿ ವಿಷದ ಕೊಂಡಿ ಪೂರ್ಣ ಬೆಳವಣಿಗೆಯಾದಾಗ ದ್ವಾರ ಪಾಲನೆಯಲ್ಲಿ ತೊಡಗುತ್ತವೆ. ಈ ನೊಣಗಳು ಜೇನುತುಪ್ಪವನ್ನು ಕದಿಯುವುದು ಮತ್ತು ದಾರಿ ತಪ್ಪಿ ಬರುವ ಜೇನುನೊಣಗಳ ಮೇಲೆ ದಾಳಿ ಮಾಡುತ್ತವೆ. ಈ ಕ್ರಿಯೆಯಲ್ಲಿ ವಿಷದ ಕೊಂಡಿಯನ್ನು ಬಳಸುತ್ತವೆ. ದ್ವಾರಪಾಲನೆ ನಿಗದಿತ  ಚೋದಕ ದ್ರವಗಳನ್ನು ಅವಲಂಬಿಸಿದ್ದು ಬಲಿಷ್ಠ ಜೇನುಗೂಡುಗಳಲ್ಲಿ ಹೆಚ್ಚು ಮೊಟ್ಟೆ, ಮರಿ ಮತ್ತು ಜೇನು ತುಪ್ಪವಿರುವಲ್ಲಿ ಅತಿ ಹೆಚ್ಚು  ಭದ್ರತೆಯನ್ನು ಒದಗಿಸುತ್ತವೆ. ಹೆಜ್ಜೇನು ನೊಣಗಳು ಸಿಟ್ಟಿನಿಂದ ಹೆಚ್ಚು ಚುಚ್ಚುವ ಗುಣವನ್ನು ಪಡೆದಿದ್ದು ಚುಚ್ಚುವಿಕೆಯ ಭಯ ಮತ್ತು ವಿಷದಿಂದ ಅನೇಕ ಜನ ತೊಂದರೆಗೀಡಾಗಿರುವ ನಿದರ್ಶನಗಳಿವೆ. ಇದೇ ರೀತಿ ಆಫ್ರಿಕಾದ ಕೆಲ ಜೇನು ಉಪಪ್ರಭೇದಗಳು ‘ಕಿಲ್ಲರ್’ ಜೇನುನೊಣಗಳೆಂದು ಹೆಸರು ಪಡೆದಿದ್ದು ಗುಂಪಾಗಿ ಹೆಚ್ಚು ದೂರದವರೆಗೆ ಹಿಮ್ಮೆಟ್ಟಿ ಶತ್ರುವಿನ ಮೇಲೆ ಧಾಳಿ ನಡೆಸುವ ಗುಣವನ್ನು ಹೊಂದಿವೆ. ತುಡುವೆ ಜೇನು ನೊಣಗಳು ಶತ್ರುಗಳನ್ನು ಹಿಮ್ಮೆಟ್ಟಿಸುವ ಪ್ರತೀಕವಾಗಿ ‘ಹಿಸ್’ ಎಂಬ ಶಬ್ದವನ್ನುಂಟುಮಾಡುತ್ತವೆ.

ಪರಾಗ ಮತ್ತು ಮಕರಂದದ ಶೇಖರಣೆ : ಬೆಳೆದ ಕೆಲಸಗಾರ ನೊಣಗಳು ಪರಾಗ, ಮಕರಂದ, ನೀರು, ಜೇನು ಅಂಟು ಮುಂತಾದವುಗಳನ್ನು ಅನೇಕ ಬಗೆಯ ಸಸ್ಯಗಳ ಹೂಗಳಿಂದ ತರುತ್ತವೆ. ಪರಾಗವನ್ನು ಅವುಗಳ ಬುಟ್ಟಿಯಿಂದ ಕಣದೊಳಗೆ ಇಡುತ್ತವೆ, ಮಕರಂದವನ್ನು ಕಣಗಳಲ್ಲಿ ಇಡುವಲ್ಲಿ ಕುಟುಂಬದ ಎಳೆ ವಯಸ್ಸಿನ ನೊಣಗಳು ಭಾಗಿಯಾಗಿರುತ್ತವೆ. ಪರಾಗ ಮತ್ತು ಮಕರಂದವನ್ನು ಹೂವಿನ ಬಣ್ಣ, ಹೂವಿನ ರಚನೆ, ಪರಾಗದ ಮೃದುತ್ವ, ಮಕರಂದದಲ್ಲಿನ ಸಕ್ಕರೆ ಅಂಶ ಮುಂತಾದ ಗುಣಗಳಿಂದ ನಿರ್ಧರಿಸಿ ಶೇಖರಿಸುತ್ತವೆ. ಆಹಾರಕ್ಕೆಂದು ಹೊರಟ ನೊಣಗಳು ಹೆಚ್ಚು ಪರಾಗವು ಸಿಗುವಾಗ ಪರಾಗ ಬುಟ್ಟಿಯಲ್ಲಿ ಶೇಖರಿಸಿ ಗೂಡಿಗೆ ಮರಳಿದರೆ, ಮಕರಂದ ತರುವ ನೊಣಗಳು ಮಕರಂದವನ್ನು ತಮ್ಮ ಜೇನು ಹೊಟ್ಟೆಯಲ್ಲಿ ತುಂಬಿಸಿಕೊಂಡು ಕಿಣ್ವಗಳೊಂದಿಗೆ ಕಣಗಳಲ್ಲಿ ಶೇಖರಿಸುತ್ತವೆ. ಜೇನು ಕುಟುಂಬಕ್ಕೆ ನೀರಿನ ಅವಶ್ಯಕತೆ ಇರುವುದರಿಂದ ಶುದ್ಧವಾದ ನೀರಿನ್ನು ತಮ್ಮ ಜೀವನಕ್ರಿಯೆಗಳಿಗೆ ಹಾಗೂ ಕುಟುಂಬವನ್ನು ತಂಪುಗೊಳಿಸುವಿಕೆಗಾಗಿ ತರುತ್ತವೆ. ಈ ರೀತಿ ಕೆಲಸಗಾರ ನೊಣಗಳು ಜೀವನನಿಡೀ ಸತತವಾಗಿ ದುಡಿದು ಸಾಮಾನ್ಯವಾಗಿ ೪೦ -೬೦ ದಿನಗಳು ಜೀವಿಸಿ ಸಾಯುತ್ತವೆ.

ಕೆಲಸಗಾರ ಜೇನುನೊಣಗಳಿಂದ ಪರಾಗ ಮತ್ತು ಮಕರಂದ ಶೇಖರಣೆ

ರಾಣಿ ನೊಣದ ಜೀವನ ಚರಿತ್ರೆ : ರಾಣಿ ನೊಣಗಳು ಫಲಿತ ಮೊಟ್ಟೆಗಳಿಂದ ಬೆಳವಣಿಗೆಯಾಗುತ್ತವೆ. ರಾಣಿಯ ಬೆಳವಣಿಗೆ ದಾದಿ ನೊಣಗಳು ಒದಗಿಸುವ ರಾಜಶಾಹಿರಸದ ಪ್ರಮಾಣವನ್ನು ಅವಲಂಬಿಸಿರುತ್ತದೆ. ಕೆಲಸಗಾರ ಮರಿಹುಳುವಿನ ಆಹಾರದಲ್ಲಿ ಶೇ. ೧೨ ರಷ್ಟು ಸಕ್ಕರೆ ಪ್ರಮಾಣವಿದ್ದರೆ ರಾಣಿ ಹುಳುವಿನ ಆಹಾರವು ಶೇ. ೩೪ ರಷ್ಟು ಸಕ್ಕರೆಯನ್ನು ಹೊಂದಿರುತ್ತದೆ. ಆಹಾರದಲ್ಲಿನ ಹೆಚ್ಚಿನ ಸಕ್ಕರೆ ಪ್ರಮಾಣ ರಾಣಿ ಹುಳುವನ್ನು ಹೆಚ್ಚಾಗಿ ಆಹಾರ ತಿನ್ನುವಂತೆ ಪ್ರೇರೇಪಿಸಿ ದೊಡ್ಡದಾಗಿ ಬೆಳೆಯಲು ಸಹಕಾರಿಯಾಗುತ್ತದೆ. ಕೋಶದ ಹಂತದಲ್ಲಿ ಚೋದಕ ರಾಸಾಯನಿಕಗಳಿಂದ ಕೆಲಸಗಾರ ನೊಣಗಳು ಸುತ್ತುವರಿಯುವಂತೆ ಮಾಡಿ ಅಂಗಾಂಗಗಳ ಬೆಳವಣಿಗೆಯಾಗಿ  ದವಡೆಗಳಿಂದ ಮೇಣದ ಮುಚ್ಚಳವನ್ನು ತೆರೆದು ಹೊರಬರುತ್ತವೆ. ರಾಣಿನೊಣ ತನ್ನ   ಜೀವನವಿಡೀ ದಾದಿ ನೊಣಗಳಿಂದ ತಿನ್ನಿಸಲ್ಪಡುತ್ತದೆ.

ರಾಣಿನೊಣ ಜೋಡಿಯಾಗುವಿಕೆ : ಕನ್ಯಾರಾಣಿ ಕಣದಿಂದ ಹೊರಬಂದ ಕುಟುಂಬದಲ್ಲಿ ಬೇರೆ ರಾಣಿನೊಣಗಳು ಬೆಳವಣಿಗೆಯಾಗುತ್ತಿದ್ದಲ್ಲಿ ಅವುಗಳನ್ನು ಕೊಂಡಿಯಿಂದ ಚುಚ್ಚಿ ಸಾಯಿಸುತ್ತದೆ. ಆದರೆ ಮತ್ತೊಂದು ರಾಣಿನೊಣ ಬೆಳವಣಿಗೆಯಾಗಿದ್ದಲ್ಲಿ ಅದು ಅಗತ್ಯ ಸಂಖ್ಯೆಯ ಗಂಡು ಮತ್ತು ಕೆಲಸಗಾರ ನೊಣಗಳೊಂದಿಗೆ ಬೇರೆ ಕಡೆ ಹೋಗಿ ನೆಲೆಸಿ ಹೊಸ ಕುಟುಂಬ ಸ್ಥಾಪಿಸುವ ಸಾಧ್ಯತೆ ಇರುತ್ತದೆ. ಕಣದಿಂದ ಹೊರಬಂದ ಕೆಲವು ದಿನಗಳವರೆಗೆ ರಾಣಿನೊಣ ಕುಟುಂಬದಾದ್ಯಂತ ಓಡಾಡುವ ಮೂಲಕ ಕೆಲಸಗಾರ ನೊಣಗಳೊಂದಿಗೆ ಬೆರೆತು ನಂತರ ರೆಕ್ಕೆಗಳನ್ನು ಬೀಸುತ್ತ ಕುಟುಂಬದಿಂದ ಹೊರ ಬಂದು ಬೆಳಕಿಗೆ ಹೊಂದಿಕೊಂಡು ಹಾರಾಟವನ್ನು ಕಲಿಯುತ್ತದೆ. ಹಾರಾಟವನ್ನು ಕಲಿಯುತ್ತದೆ. ಹಾರಾಟವನ್ನು ಕಲಿತ ಕನ್ಯಾರಾಣಿ ಮೊದಲು ಗಂಡು ಜೇನು ನೊಣಗಳನ್ನು ಚೋದಕ ರಾಸಾಯನಿಕಗಳ ಮೂಲಕ ಆಕರ್ಷಿಸಿ ಸಂಜೆಯ ವೇಳೆ ಗಾಳಿಯಲ್ಲಿ ಅನೇಕ ಗಂಡುನೊಣಗಳೊಂದಿಗೆ ಜೋಡಿಯಾಗಿ ಗೂಡನ್ನು ಸೇರುತ್ತದೆ. ರಾಣಿನೊಣ ಗಂಡು ಜೇನುನೊಣಗಳೊಡನೆ ಜೋಡಿಯಾಗಿ ವಿವಿಧ ಹಂತಗಳನ್ನು ಚಿತ್ರದಲ್ಲಿ ತೋರಿಸಲಾಗಿದೆ (ಚಿತ್ರ ೨೬).

ರಾಣಿ ಮತ್ತು ಜೇನುನೊಣಗಳ ಜೋಡಿಯಾಗುವಿಕೆ

ರಾಣಿನೊಣ ಜೋಡಿಯಾದ ನಂತರ ಕೆಲಸಗಾರ ನೊಣಗಳು ಉತ್ಸಾಹದಿಂದ ಆಹಾರವನ್ನು ತಿನ್ನಿಸುತ್ತವೆ. ಇದರಿಂದಾಗಿ ರಾಣಿ ಮೂರ್ನಾಲ್ಕು ದಿನಗಳಲ್ಲಿ ಮೊಟ್ಟೆಗಳನ್ನಿಡಲು ಸಾಧ್ಯವಾಗುತ್ತದೆ. ಮೊದಲು ರಾಣಿಯು ಎರಿಗಳ ಮೇಲೆ ಓಡಾಡಿ ಕಣಗಳ ಶುದ್ಧತೆಯನ್ನು ತಲೆ ಮತ್ತು ಮುಂದಿನ ಕಾಲುಗಳನ್ನು ಕಣದೊಳಗೆ ತೂರಿಸುವುದರ ಮೂಲಕ ಹೊಟ್ಟೆಯ ತುದಿಯನ್ನು ಕಣದೊಳಗೆ ತೂರಿಸಿ ಒಂದೊಂದು ಕಣದಲ್ಲಿ ಒಂದೊಂದೇ ಮೊಟ್ಟೆಯನ್ನಿಡುತ್ತದೆ. ಆಹಾರದ ಲಭ್ಯತೆಗನುಗುಣವಾಗಿ ದಿನಕ್ಕೆ ಸುಮಾರು ೫೦೦ ರಿಂದ ೧೦೦೦ ಮೊಟ್ಟೆಗಳನ್ನು ಇಡುತ್ತದೆ. ೨ ವರ್ಷಗಳ ವಯಸ್ಸಿನ ನಂತರ ರಾಣಿನೊಣದ ಮೊಟ್ಟೆ ಇಡುವ ಗುಣವು ಕ್ಷೀಣಿಸಿದರೂ ಅದು ೩ – ೪ ವರ್ಷಗಳವರೆಗೆ ಬದುಕಿರುತ್ತದೆ.

ಗಂಡು ಜೇನು ನೊಣದ ಜೀವನ ಚರಿತ್ರೆ :  ಗಂಡು ಜೇನುನೊಣಗಳ ಕಣಗಳು ಗಾತ್ರದಲ್ಲಿ ಸ್ವಲ್ಪ ದೊಡ್ಡವಾಗಿದ್ದು ಸಾಮಾನ್ಯವಾಗಿ ಎರಿಯ ತುದಿ ಭಾಗಗಳಲ್ಲಿ ನಿರ್ಮಿಸುತ್ತವೆ. ಹೊಸ ರಾಣಿನೊಣಗಳು ಗೂಡಿನಲ್ಲಿ ಬೆಳೆಯುವಾಗ ಗಂಡು ನೊಣಗಳು ಸಂಖ್ಯೆ ಸಾಮಾನ್ಯವಾಗಿ ಹೆಚ್ಚಾಗುತ್ತದೆ. ಗಂಡು ಜೇನು ನೊಣಗಳು ರಾಣಿಯ ಫಲರಹಿತ ಮೊಟ್ಟೆಗಳಿಂದ ಬೆಳವಣಿಗೆಯಾಗುತ್ತವೆ. ಮರಿ ಹುಳುವಿನ ೧ – ೨ ದಿನಗಳವರೆಗಿನ ಆಹಾರದಲ್ಲಿ  ಶೇ. ೭ – ೮ ಹಾಗೂ ೩- ೫ ದಿನಗಳವರೆಗಿನ ಮರಿಹುಳುವಿನ ಆಹಾರದಲ್ಲಿ ಶೇ. ೨೫ ರಷ್ಟು ಸಕ್ಕರೆ ಅಂಶವಿರುತ್ತದೆ. ೧ – ೩ ದಿನಗಳ ವಯಸ್ಸಿನ ಗಂಡು ನೊಣದ ಮರಿಗೆ ಕೆಲಸಗಾರ ನೊಣಗಳು ರಾಜಶಾಹಿರಸವನ್ನು ಅನಂತರ ಪರಾಗ ಮತ್ತು ಜೇನುತುಪ್ಪದಿಂದ ಕೂಡಿದ ರಸವನ್ನು ತಿನ್ನಿಸುತ್ತವೆ. ೭ ದಿನಗಳ ವಯಸ್ಸಿನವರೆಗೆ ಮರಿಹುಳು ದಪ್ಪವಾಗಿ ಬೆಳೆದು ಹೆಚ್ಚಿನ ಆಹಾರವನ್ನು ಸೇವಿಸುತ್ತದೆ. ಗಂಡು ನೊಣಗಳ ಬೆಳವಣಿಗೆ ಕೆಲಸಗಾರ ಮತ್ತು ರಾಣಿ ನೊಣಗಳ ಬೆಳವಣಿಗೆಯ ಅವಧಿಗಿಂತ ಹೆಚ್ಚಾಗಿರುತ್ತದೆ ಇದರ ಕೋಶದ ಹಂತವು ರಾಣಿಯ ಕೋಶದ ಹಂತಕ್ಕಿಂತ ಸುಮಾರು ೬ ದಿನಗಳು ಹೆಚ್ಚಾಗಿರುತ್ತದೆ.

ಗಂಡು ಜೇನುಮರಿಹುಳುಗಳು ಪ್ರೌಢ ನೊಣಗಳಾಗಿ ಬೆಳವಣಿಗೆಯಾದಾಗ ಅವುಗಳಿಗೆ ಪರಾಗವು ಅವಶ್ಯಕವಾಗಿರುತ್ತದೆ. ಹೆಚ್ಚು ಸಮಯವನ್ನು ಎರಿಗಳ ಮೇಲೆ ಕಳೆಯುವುದರಿಂದ ದಾದಿ ನೊಣಗಳು ಪರಾಗ, ಜೇನುತುಪ್ಪ ಮತ್ತು ಗ್ರಂಥಿಗಳ ದ್ರವ ಸ್ರವಿಕೆಯನ್ನು ತಿನ್ನಿಸುತ್ತವೆ. ಜೋಡಿ ಹಾರಾಟವನ್ನು ಪ್ರಾರಂಭಿಸುವ ಮೊದಲು ಜೇನುತುಪ್ಪವನ್ನು ತಿನ್ನುತ್ತವೆ. ಇವುಗಳು ಕೆಲಸಗಾರ ನೊಣಗಳಿಗಿಂತ ಹೆಚ್ಚಿನ ಎತ್ತರದವರೆಗೂ ಹಾರುವ ಶಕ್ತಿಯನ್ನು ಪಡೆದಿದ್ದು ಹಾರಾಟದ ಸಮಯದಲ್ಲಿ ಕನ್ಯಾರಾಣಿಯನ್ನು ಆಕರ್ಷಿಸಲು ಚೋದಕ ದ್ರವವನ್ನು ಹೊರಸೂಸುತ್ತವೆ. ಇದರಿಂದಾಗಿ ರಾಣಿಯು ಗಂಡು ನೊಣಗಳೊಂದಿಗೆ ಯಶಸ್ವಿಯಾಗಿ ಲೈಂಗಿಕವಾಗಿ ಜೋಡಿಯಾಗಲು ಸಾಧ್ಯವಾಗುತ್ತದೆ.

ರಾಣಿಯು ಜೋಡಿಯಾದಾಗ ಅದರ ಕೊಂಡಿಯ ಭಾಗವು ತೆರೆಯಲಾಗಿ ಹಾರಾಟದಲ್ಲಿರುವ ಗಂಡು ನೊಣಗಳು ರಾಣಿಯನ್ನು ಹಿಂಬಾಲಿಸಿ ತಮ್ಮ ಮುಂಗಾಲುಗಳಿಂದ ರಾಣಿಯನ್ನು ಹಿಡಿದು ಜೋಡಿಯಾಗುವುದರ ಮೂಲಕ ವೀರ್ಯಾಣುಗಳು ರಾಣಿಯ ವೀರ್ಯಾಣು ಚೀಲದಲ್ಲಿ ಶೇಖರಣೆಯಾಗುತ್ತವೆ. ಸಾಮಾನ್ಯವಾಗಿ ಗಂಡುನೊಣಗಳು ೨ – ೩ ತಿಂಗಳುಗಳ ಕಾಲ ಬದುಕಿರುತ್ತವೆ.