ಜೇನುನೊಣಗಳ ಪುರಾತನ ಕಾಲದಿಂದಲೂ ಹೆಚ್ಚಿನ ಮನ್ನಣೆಯನ್ನು ಪಡೆದಿವೆ. ಸ್ಪೈನ ರಾಷ್ಟ್ರದ ಮೆನ್ಸಿಯಾದ ಬೈ ಕಾರ್ಪಸ್  ಹತ್ತಿರದ ಕ್ಯೂವಾಸ್ ಡೆಲ್ ಆರಾನ ಎಂಬಲ್ಲಿರುವ ಪುರಾತನ ಸ್ಮಾರಕದ ಶಿಲಾಭಿತ್ತಿಯ ಮೇಲೆ ಕೆಂಪು ಬಣ್ಣದಲ್ಲಿ ಕಾಡುಜೇನನ್ನು ಸಂಗ್ರಹಿಸುತ್ತಿರುವವರ ಚಿತ್ರವನ್ನು ಕ್ರಿ. ಪೂ. ೬೦೦೦ ರಲ್ಲಿಯೇ ಬಿಡಿಸಲಾಗಿದೆ. ಸುಮಾರು ೪೦೦೦ ವರ್ಷಗಳ ಹಿಂದೆಯೇ ತಲೆಯನ್ನು ಕೆಳಕ್ಕೆ ಬಾಗಿಸಿ ರೆಕ್ಕೆಗಳನ್ನು ಸ್ವಲ್ಪ ಮೇಲೆತ್ತಿದ ಜೇನುನೊಣದ ಚಿತ್ರವು ಈಜಿಪ್ಟ್ ದೇಶದ ರಾಜಚಿಹ್ನೆಯಾಗಿದ್ದು ಈ ದೇಶದ ಫೆರೋಗಳಿಗೆ ಜೇನುನೊಣದ ನಿಸ್ವಾರ್ಥತೆ, ನಿರ್ಭಯತೆ, ಸ್ವಚ್ಛತೆ ಮತ್ತು ಶಿಸ್ತುಗಳ ಸಂಕೇತವಾಗಿತ್ತು. ಅವರು ಜೇನುಕುಟುಂಬಗಳನ್ನು ಸಾಗಿಸಲು ಸುಟ್ಟ ಜೇಡಿಮಣ್ಣಿನ ಮಡಿಕೆಗಳನ್ನು ಬಳಸುತ್ತಿದ್ದರು.

ಕ್ರಿ. ಪೂ. ೧೦೦೦ ರಲ್ಲಿ ಅಸ್ಸೀರಿಯಾ ದೇಶವು ಜೇನಿನ ಮತ್ತು ಒಲೀವ್ ಮರಗಳ ನಾಡೆಂದು ಹೆಸರು ಪಡೆದಿತ್ತು. ಕ್ರಿ.ಪೂ. ಒಂಬತ್ತನೇ ಶತಮಾನದ ಮೊದಲನೆ ಸ್ಮಾರ್ಗನ್ನನ ಹಾಗೂ ಅವನ ನಂತರದ ಆಳ್ವಿಕೆಯಲ್ಲಿ ಸತ್ತವರ ದೇಹಗಳಿಗೆ ಕೆಲವು ದಿನಗಳವರೆಗೆ ಜೇನುಮೇಣವನ್ನು ಹಚ್ಚಿ ಜೇನಿನಲ್ಲಿ ಮುಳುಗಿಸಿಡಲಾಗುತ್ತಿತ್ತು. ಗ್ರೀಕರು ದೋಣಿಗಳ ಮೇಲೆ ಜೇನುಗೂಡುಗಳನ್ನು ಮಕರಂದ ಭರಿತ ಹೂಗಳಿರುವ ಸ್ಥಳಗಲಿಗೆ ಕೊಂಡೊಯ್ದು ಜೇನನ್ನು ಸಂಗ್ರಹಿಸುತ್ತಿದ್ದರು ಮತ್ತು ಸಿರಿವಂತ ನಗರಗಳಲ್ಲಿ ಆಯುಧದ ಮೇಲೆ ಜೇನುನೊಣಗಳ ಚಿತ್ರಗಳನ್ನು ಚಿತ್ರಿಸುತ್ತಿದ್ದರು. ಜೇನುತುಪ್ಪವನ್ನು ಬಾಲ ಯೇಸುವಿಗೆ ಆಹಾರವಾಗಿ ನೀಡಲಾಗುತ್ತಿದ್ದು, ಸಸ್ತನಿ ಪ್ರಾಣಿಗಳು ಜೇನುಗೂಡುಗಳ ಮೇಲೆ ದಾಳಿ ಮಾಡುವುದು, ಚಿಂಪಾಂಜಿಗಳು ಕೈಗಳನ್ನು ಆಯುಧಗಳಂತೆ ಬಳಸಿ ಜೇನುಗೂಡಿನ ಮೊಟ್ಟೆಮರಿಗಳನ್ನು ನಾಶಪಡಿಸಿ ನಾಶಪಡಿಸಿ ಜೇನನ್ನು  ನೆಕ್ಕುವುದು ಹಾಗೂ ಮನುಷ್ಯನು ಜೇನನ್ನು ಉಪಯೋಗಿಸುತ್ತಿದ್ದ ವಿಧಾನಗಳು ಬೈಬಲ್‌ನಲ್ಲಿ ಕಂಡು ಬರುತ್ತದೆ. ಮನುಷ್ಯನು ಹೆಜ್ಜೇನು ಗೂಡುಗಳಿಂದ ಮೇಣವನ್ನು ಸಂಗ್ರಹಿಸುವ ದೃಶ್ಯಗಳನ್ನು  ಕ್ರಿ. ಪೂ ೯೮೩ರಿಂದೀಚಿಗೆ ಚೀನಾದಲ್ಲಿ ಕಂಡು ಬರುತ್ತವೆ.

ಕ್ರಿ. ಪೂ. ೩೮೪ ರಿಂದ ೩೨೨ರಲ್ಲಿ ಜೀವಿಸಿದ ಅರಿಸ್ಟಾಟಲ್‌ ತಮ್ಮ ಬರಹಗಳಲ್ಲಿ ಗ್ರೀಕರನ್ನು ‘ಬೀ ಮಾಸ್ಟರ್’ಗಳು ಎಂದು ಸೂಚಿಸಿದ್ದಾರೆ. ಜೇನು ನೊಣಗಳ ಬಗೆಗಿನ ಅವರ ಅನುಭವಗಳು ಮುಖ್ಯವಾಗಿ ‘ಹಿಸ್ಟೋರಿಯಾ ಅನಿಮಾಲಿಯಂ’ ಪುಸ್ತಕದ ಐದು ಮತ್ತು ಒಂಬತ್ತನೇ ಭಾಗಗಳಲ್ಲಿ ಮುದ್ರಿತವಾಗಿವೆ. ಅರಿಸ್ಟಾಟಲ್‌ಜೇನು ಕುಟುಂಬದಲ್ಲಿ ರಾಜ ಅಥವಾ ಆಡಳಿತ ನಡೆಸುವ ನೊಣವಿದೆ ಎಂದು ಮತ್ತು ಪರಾಗ ತರುವುದನ್ನು ತಪ್ಪಾಗಿ ಜೇನುಮೇಣವೆಂದು ತಿಳಿಸಿದ್ದರು. ಜೇನುಮರಿಗಳ ಬೆಳವಣಿಗೆಯ ಕಾಲದಲ್ಲಿ ಜೇನುನೊಣಗಳು ನೀರನ್ನು ಗೂಡಿಗೆ ತರುವಿಕೆ ಮತ್ತು ಸಂಘಟನೆಯ ಬಗ್ಗೆ ಪ್ರಪ್ರಥಮವಾಗಿ ವಿವರಣೆ ನೀಡಿದ ವ್ಯಕ್ತಿ ಇವರಾಗಿದ್ದಾರೆ.

ವಲಸೆ ಹೋಗಿ ಆಹಾರ ದೊರಕಿಸಿಕೊಳ್ಳುತ್ತಿದ್ದ ಆದಿ ಮಾನವರು ಒಮದು ಪ್ರದೇಶದಲ್ಲಿ ಸ್ವಲ್ಪಕಾಲದವರೆಗೆ ಉಳಿಯುತ್ತಿದ್ದ ಸಂದರ್ಭದಲ್ಲಿ ಜೇನು ಕುಟುಂಬಗಳನ್ನು ಗಮನಿಸಿ ಜೇನುತುಪ್ಪ, ಜೇಣುನೊಣಗಳ ಮರಿಗಳು ಹಾಗೂ ಪರಾಗವನ್ನೊಳಗೊಂಡ ಎರಿಗಳನ್ನು ಕಿತ್ತು ತಿನ್ನುತ್ತಿದ್ದರು. ಮಾನವನು ಸ್ಥಿವಾಗಿ ನೆಲೆಸಿದ ನಂತರ ಮರದ ಪೊಟರೆಗಳಿಂದ ಜೇನುಗೂಡುಗಳನ್ನು ಬೇರ್ಪಡಿಸಿ ತಮ್ಮ ವಾಸಸ್ಥಳದ ಸಮೀಪದಲ್ಲಿಯೇ ಇಟ್ಟುಕೊಂಡು ಜೇನುತುಪ್ಪವನ್ನು ಪಡೆಯುವ ಪರಿಪಾಠ ಬೆಳೆದು ಬಂದಿತು. ಕ್ರಮೇಣ ಆ ಕಾಲದಿಂದಲೇ ಜೇನುಕುಟುಂಬಗಳನ್ನು ಸಾಕುವುದಕ್ಕೆ ಹೆಣೆದ ಬುಟ್ಟಿಗಳು ಮತ್ತು  ಮಡಕೆಗಳು ಬಳಕೆಗೆ ಬಂದವು. ಜೇನುತುಪ್ಪ ಮತ್ತು ಮೇಣವನ್ನು ಪಡೆಯಲು ಜೇನುಗೂಡುಗಳನ್ನು ನೀರಿನೊಳಗೆ ಮುಳುಗಿಸಿ ನೊಣಗಳನ್ನು ಕೊಂದು, ಜೇನುತುಪ್ಪದ ಎರಿಗಳನ್ನು ಕೈಯಿಂದ ಹಿಂಡಿ ಜೇನುತುಪ್ಪವನ್ನು ಪಡೆಯುವ ವಿಧಾನ ಬಹಳ ಕಾಲದವರೆಗೆ ರೂಢಿಯಲ್ಲಿತ್ತು.

ರೋಮನ್ನರ ಕಾಲದಲ್ಲಿ ಜೇನು ಸಾಕಣೆ : ರೋಮನ್ನರ ಕಾಲದಲ್ಲಿ ಜೇನುನೊಣಗಳ ವಿಚಾರದ ಬರಹಗಳಲ್ಲಿ ಪ್ರಸಿದ್ಧಿ ಪಡೆದವರೆಂದರೆ ಮಾಸ್ಟರ್ ಜೇನುಕೃಷಿಕರೆಂದೇ ಹೆಸರಾಗಿದ್ದ ಪ್ರಾಯೋಗಿಕ ಜೇನುಕೃಷಿಕರಾದ ಕ್ಯಾಟೊ, (ಕ್ರಿ. ಪೂ. ೨೩೪-೧೪೯), ವ್ಯಾರೋ (ಕ್ರಿ. ಪೂ. ೧೧೬-೨೭), ಕಾಲುಮೆಲ್ಲ (ಕ್ರಿ. ಶ. ೧ – ೬೮) ಮತ್ತು ಪ್ಯಲ್ಲಡಿಯಸ್ (ಕ್ರಿ. ಶ. ೩೦೦). ರೋಮನ್ನರಲ್ಲಿ ವ್ಯಾರೋ ಮತ್ತು ಕಾಲುಮೆಲ್ಲರ ಸೇವೆಯನ್ನು ಹೆಚ್ಚಾಗಿ ಸ್ಮರಿಸಲಾಗಿದ್ದು ಅವರಲ್ಲಿ ವ್ಯಾರೋರವರು ಜೇನು ಕೃಷಿ ಒಂದು ಉತ್ತಮ ಉದ್ದಿಮೆಯಾಗಿದ್ದು ಒಂದು ವರ್ಷಕ್ಕೆ ೫೦೦೦ ಪೌಂಡುಗಳವರೆಗೂ ಜೇನುತುಪ್ಪ ಸಿಗುತ್ತದೆಂದು ತಿಳಿಸಿದ್ದಾರೆ. ಇವರು ಜೇನು ಕುಟುಂಬಗಳನ್ನು ಇಡುವ ಸ್ಥಳ, ಬೆಳೆಸುವ ರೀತಿ ಮತ್ತು ಅವುಗಳ ನಿರ್ವಹಣೆಯ ರೀತಿಯನ್ನು ತಿಳಿದುಕೊಂಡಿದ್ದರು. ಕ್ರಿ. ಶ. ೧೫೦೦ ಮತ್ತು ೧೮೫೭ ರ ಅವಧಿಯಲ್ಲಿ ಜೇನು ಸಾಕಾಣೆಯ ವಿವಿಧ ವಿಧಾನಗಳು ಬೆಳಕಿಗೆ ಬಂದವು. ೧೮೦೦ ಕ್ಕೂ ಮುನ್ನ ಜೇನುಕೃಷಿಯಲ್ಲಿನ ಗಮನೀಯ ಬೆಳವಣಿಗೆಗಳನ್ನು ಕೋಷ್ಟಕ ೧ ರಲ್ಲಿ ತಿಳಿಸಲಾಗಿದೆ. ೧೫೬೮ ರಲ್ಲಿ ಜರ್ಮನಿಯ ನಿಕೆಲ್ ಜಾಕೋಬ್‌ರು ಮೊಟ್ಟೆ ಮತ್ತು ಮರಿಗಳಿಂದ ಕೂಡಿದ ರಾಣಿ ಇರುವ ಕುಟುಂಬದಲ್ಲಿ ಹೊಸರಾಣಿ ಬೆಳವಣಿಗೆಯಾಗುವುದನ್ನು ಕಂಡುಕೊಂಡರು. ಅದೇ ರೀತಿ ಸ್ಪೈನ್‌ನ ಟೋರ್ಸರು ೧೫೮೬ ರಲ್ಲಿ ರಾಣಿಯು ಕುಟುಂಬದಲ್ಲಿ ಮೊಟ್ಟೆ ಇಡುವುದನ್ನು ತಿಳಿಯಪಡಿಸಿದರು.

ಹದಿನೇಳನೆ ಶತಮಾನದಲ್ಲಿ ಜೇನು ಸಾಕಣೆ : ಜೇನು ಕುಟುಂಬಗಳ ನೈಸರ್ಗಿಕ ಸ್ಥಳಗಳನ್ನು ಹುಡುಕಿ ಜೇನುತುಪ್ಪವನ್ನು ತೆಗೆಯುತ್ತಿದ್ದ ಪುರಾವೆಗಳು ಯೂರೋಪ್. ಮೆಡಿಟರೇನಿಯನ್ ಭಾಗ, ಆಫ್ರಿಕಾದ ಉಷ್ಣವಲಯದ ಮತ್ತು ಉತ್ತರ ಅಮೆರಿಕಾದ ಭಾಗಗಳಿಂದ ಕ್ರಿ. ಶ. ೧೬೨೧ ರಿಂದ ಕಂಡು  ಬರುತ್ತವೆ. ಜಾನ್ ಸ್ವಾಮರ್ಡಮ್‌ರವರು ಕ್ರಿ.ಶ. ೧೬೩೭ ರಿಂದ ೧೬೮೦ ರವರೆಗೂ ಜೇನುನೊಣಗಳ ಸಂಶೋಧನೆಗಳಲ್ಲಿ ತೊಡಗಿ ಜೇನುನೊಣಗಳ ಜೀವನ ಚರಿತ್ರೆಯನ್ನು ಪ್ರಕಟಿಸಿದರು. ತುಡುವೆ ಜೇನುನೊಣಗಳು ಮರಗಳ ಪೊಠರೆಗಳಲ್ಲಿ ವಾಸಿಸುವ ಜಾಗ, ಚುಚ್ಚುವ ಗುಣ ಮತ್ತು ಅವುಗಳಿಂದ ಜೇನುತುಪ್ಪವನ್ನು ಕೈಯಿಂದ ತೆಗೆಯುತ್ತಿದ್ದ ವಿಧಾನಗಳು ಕ್ರಿ.ಶ. ೧೬೮೧ ರಿಂದ ಶ್ರೀಲಂಕಾದಲ್ಲಿ ಕಂಡು ಬರುತ್ತವೆ. ಮೋಸಸ್ ರುಸ್ಡೆನ್ ರವರು ಇಂಗ್‌ಎಂಡಿನ ರಾಜ ಎರಡನೆ ಚಾರ್ಲ್ಸರವರಿಗೆ ‘ಬೀ ಮಾಸ್ಟರ್’ ಆಗಿದ್ದರು ಹಾಗೂ ಅವರ ನಿರ್ದೇಶನದಂತೆ ಜೇನುನೊಣಗಳ ಬಗ್ಗೆ ಒಂದು ಪುಸ್ತಕವನ್ನು ಪ್ರಕಟಿಸಿದರು.

ಹದಿನೆಂಟನೇ ಶತಮಾನದಲ್ಲಿ ಜೇನು ಸಾಕಣೆ : ಡಿ ರೇಮರ್ (೧೭೩೪ – ೧೭೪೨) ರವರು ತಮ್ಮ ಗ್ರಂಥದಲ್ಲಿ ಜೇನುನೊಣಗಳ ಮತ್ತು ಕಣಗಳ ವಾಸ್ತು ಶಿಲ್ಪಶಾಸ್ತ್ರದ ಬಗ್ಗೆ ವರ್ಣಿಸಿ ಕೆಲಸಗಾರ ನೊಣಗಳನ್ನು ನಿರ್ಲಿಂಗಿಗಳೆಂದು ಕರೆದಿದ್ದಾರೆ. ಇಂಗ್ಲೆಂಡಿನ ರೆವೆರೆಂಡ್ ಜಾನ್ ತೋರ್ಲಿಯರವರು ೧೭೪೪ ರಲ್ಲಿ ಪ್ರಕಟಿಸಿದ ‘ಮೆಲ್ಲಸ್ಸೆಲೋಜಿಯ ದಿ ಫೀಮೇಲ್ ಮೋನಾರ್ಕಿ’ ಎಂಬ ಪುಸ್ತಕದಲ್ಲಿ ಜೇನುನೊಣವನ್ನು ಒಂದು ಬಗೆಯ ಕೀಟವು ಮನುಷ್ಯನಿಗೆ ಪ್ರಪಂಚದಾದ್ಯಂತ ಬಹಳ ಉಪಕಾರಿಯಾಗಿ ದುಡಿಯುತ್ತಿದೆ ಎಂದಿದ್ದಾರೆ. ಲೇಖಕರು ತಮ್ಮ ಪುಸ್ತಕದಲ್ಲಿ ಜೇನುನೊಣಗಳು ತಮ್ಮ ಹೊಟ್ಟೆಯಲ್ಲಿ ನೀರು ಮತ್ತು ಮಕರಂದವನ್ನು ಶೇಖರಿಸಿಕೊಂಡು ಗೂಡಿಗೆ ಮರಳುತ್ತವೆ ಎಂದು ವರ್ಣಿಸಿದ್ದಾರೆ. ಜೇನುಕುಟುಂಬದಲ್ಲಿನ ದಪ್ಪವಾದ ನೊಣವು ಹೆಣ್ಣಾಗಿದ್ದು, ಗಂಡುನೊಣಗಳು ರಾಣಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸುತ್ತವೆ ಎಂದು ತಿಳಿದಿದ್ದ ಇವರು ಜೇನುನೊಣಗಳನ್ನು ಗಂಧಕದ ಹೊಗೆಯಿಂದ ಸಾಯಿಸುವುದನ್ನು ವಿರೋಧಿಸುತ್ತಿದ್ದರು.

ಫ್ರಾಂಕೋಯಿಸ್ ಹ್ಯೂಬರ್ (೧೭೫೦ – ೧೮೩೧) ರವರು ಸ್ಪೈನ್ ಮೂಲಕ ‘ದಿ ಎನ್ಸೈಕ್ಲೋಪಿಡಿಯಾ ಬ್ರಿಟಾನಿಕ’ ಎಂಬ ಪುಸ್ತಕದಲ್ಲಿ ಜೇನುನೊಣಗಳ ಜೀವನ ಚರಿತ್ರೆಯ ಬಗ್ಗೆ ವರ್ಣಿಸಿದ್ದಾರೆ. ಅವರು ಸತ್ತ ಮೇಲೆ ಅವರ ಮಗ ಪ್ರಕಟಿಸಿದ ಹ್ಯೂಬರ್‌ರವರ ನೆನಪುಗಳ ಮಾಲೆಯಲ್ಲಿ ಜೇನುನೊಣಗಳು ರೆಕ್ಕೆ ಬೀಸುವುದರ ಮೂಲಕ ಗಾಳಿಯನ್ನು ಪಡೆಯುವುದು. ಕೆಲಸಗಾರ ನೊಣಗಳು ರಾಣಿ ನೊಣಗಳ ಮೊಟ್ಟೆ ಮತ್ತು ಮರಿಗಳಿಂದ ನೊಣಗಳನ್ನು ಬೆಳೆಸುವುದು, ರಾಣಿ ನೊಣ ಹಾರಾಟದಲ್ಲಿಯೇ ಜೋಡಿಯಾಗುವುದು, ಮರಿಗಳ ಸಾಕಣೆಗೆ ಪರಾಗದ ಅತ್ಯಗತ್ಯತೆ, ಮರಿಗಳ ಬೆಳವಣಿಗೆಯಲ್ಲಿನ ಗೂಡಿನ ಉಷ್ಣತೆ ಸಾಮಾನ್ಯವಾಗಿ ೩೫ ಡಿಗ್ರಿ ಸೆ. ಇರುವುದು, ಎರಿಕಟ್ಟುವ ವಿಧಾನ ಮತ್ತು ಜೇನುನೊಣಗಳ ಕುಡಿಮೀಸೆಗಳ ಕಾರ್ಯದ ವಿವರ ಮುಂತಾದ ಆವಿಷ್ಕಾರಗಳನ್ನು ೧೮೯೨ ರಲ್ಲಿ ಪ್ರಕಟಿಸಿದ್ದರು. ಇದರಿಂದಾಗಿ ಹ್ಯೂಬರ್‌ರವರು ‘ಜೇನು ಸಾಕಣೆಯ ದೊರೆ’ ಎಂದೇ ಹೆಸರುವಾಸಿಯಾಗಿದ್ದರು.

ಕೋಷ್ಠಕ : ಕ್ರಿ.. ೧೮೦೦ ಕ್ಕೂ ಮೊದಲು ಜೇನುಕೃಷಿ ಇತಿಹಾಸದಲ್ಲಿನ ಕೆಲವು  ಗಮನೀಯ ಬೆಳವಣಿಗೆಗಳು

ಬೆಳವಣಿಗೆ

ಪ್ರಕಟಿಸಿದ ವರ್ಷ

ಪ್ರಕಟಿಸಿದವರು

ಪ್ರಕಟಿಸಿದ ರಾಷ್ಟ್ರ

ಮೊಟ್ಟೆ, ಮರಿಗಳಿಂದ ಕೂಡಿದ ರಾಣಿ ರಹಿತ ಕುಟುಂಬದಲ್ಲಿ ಹೊಸರಾಣಿ ಬೆಳವಣಿಗೆ ೧೫೬೮ ನಿಕೆಲ್ ಜಾಕೊಬ್ ಜರ್ಮನಿ
ರಾಣಿ ಕುಟುಂಬದಲ್ಲಿ ಮೊಟ್ಟೆಗಳನ್ನಿಡುವುದು ೧೫೮೬ ಲೂಯಿಸ್ ಮೆಂಡೆಜ್ ಸ್ಪೈನ್
ಡ್ರೋನುಗಳು – ಗಂಡು ೧೬೦೯ ಚಾರ್ಲ್ಸ್ ಬಟ್ಲರ್ ಇಂಗ್ಲೆಂಡ್
ಕೆಲಸಗಾರ ನೊಣಗಳು – ಹೆಣ್ಣು ೧೬೩೭ ರಿಚರ್ಡ್ ರೆಮ್ನಂಟ್ ಇಂಗ್ಲೆಂಡ್
ಮೇಣದ ಪಟ್ಟಿಗಳನ್ನು ಕೆಲಸಗಾರ ನೊಣಗಳ ಹೊಟ್ಟೆಯ ಮೇಲೆ ಗಮನಿಸಿದ್ದು ೧೬೮೪ ಮಾರ್ಟಿನ್ ಜಾನ್ ಜರ್ಮನಿ
ಜೇನುನೊಣಗಳಿಂದ ಜೇನು ಅಂಟಿನ ಶೇಖರಣೆ ೧೭೩೯ ಡೀ ರೀಮರ್ ಫ್ರಾನ್ಸ್
ಸಿಹಿಅಂಟು ಹೇನುಗಳಿಂದ ಉತ್ಪಾದನೆ ೧೭೩೯ ಡೀ ರೀಮರ್ ಫ್ರಾನ್ಸ್
ಜೇನುನೊಣಗಳು ಪರಾಗವನ್ನು ಒಂದೇ ಬಗೆಯ ಹೂಗಳಿಂದ ಪ್ರತಿ ಹಾರಾಟದಲ್ಲಿ ತರುವಿಕೆ ೧೭೫೦ ಆರ್ಥರ್ ಡಾಮ್ಸ್ ಐರಲೆಂಡ್
ರಾಣಿಯ ವೀರ್ಯಾಣು ಚೀಲದ ವರ್ಣನೆ ೧೭೫೦ ಆರ್ಥರ್ ಡಾಮ್ಸ್ ಐರಲೆಂಡ್
ರಾಣಿ ಮತ್ತು ಗಂಡುನೊಣಗಳ ಸಂಯೋಗ ವರ್ಣನೆ ೧೭೭೧ ಆಂಟೋನ್ ಜಾನ್ ಆಸ್ಟ್ರೀಯ
ಕೆಲಸಗಾರ ನೊಣಗಳು ನೃತ್ಯಗಳನ್ನು ಸಂವಹನ ಕ್ರಿಯೆಗೆ ಬಳಸುವುದು ೧೭೮೮ ಅರ್ನೆಸ್ಟ್ ಸ್ಪಿಟ್ಜನರ್ ಜರ್ಮನಿ
ಕೆಲಸಗಾರ ನೊಣಗಳಿಗೆ ಅಂಡಾಶಯವಿದ್ದು ಮೊಟ್ಟೆ ಇಡುವಿಕೆ ೧೭೯೨ ಫ್ರಾಂಕೋಯಿಸ್ ಹ್ಯೂಬರ್ ಸ್ವಿಟ್ಜರ್‌ಲ್ಯಾಂಡ್

(ಎವಕ್ರೇನ್ , ೧೯೯೦)

ಹತ್ತೊಂಬತ್ತನೆ ಶತಮಾನದಲ್ಲಿ ಜೇನು ಸಾಕಣೆ : ೧೯ ನೇ ಶತಮಾನದ ಮೊದಲಿನಲ್ಲಿಯೇ ಜೇನು ಸಾಕಾಣಿಕೆಯು ಕ್ರಾಂತಿಕಾರಿ ಉದ್ಯಮವಾಗಿತ್ತು. ಈ ಶತಮಾನದಲ್ಲಿ ಜೇನು ಕೃಷಿಯ ಬಗ್ಗೆ ಹೆಚ್ಚಿನ ಆವಿಷ್ಕಾರಗಳನ್ನು ಮಾಡಲಾಯಿತು. ಯೋರೋಪಿಯನ್ನರಲ್ಲಿ ಎಡ್ವರ್ಡ ಬೇವನ್‌ರವರ ಬರಹಗಳು ಜೇನುಸಾಕಾಣಿಕೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡುತ್ತವೆ. ಜರ್ಮನಿಯ ಜೋಹಾನ್ಸ್ ಮೆಹರಿಂಗ್‌ರವರು ಕ್ರಿ.ಶ. ೧೮೫೭ ರಲ್ಲಿ ಕೃತಕ ಮೇಣದ ಹಾಳೆಗಳ ತಯಾರಿಕೆಯನ್ನು ಕಂಡುಕೊಂಡಿದ್ದರಿಂದಾಗಿ ವಾಣಿಜ್ಯವಾಗಿ ಮೇಣದ ಹಾಳೆಗಳನ್ನು ಉತ್ಪಾದಿಸಲು ಸಾಧ್ಯವಾಯಿತು. ಆಸ್ಟ್ರೀಯಾದ ಪ್ರಾಂಜ್‌ವಾನ್ ಹೃಷ್ಕ ರವರು ಕ್ರಿ.ಶ. ೧೮೬೫ ರಲ್ಲಿ ಜೇನು ತೆಗೆಯುವ ಯಂತ್ರಗಳಿಂದ ತುಪ್ಪವನ್ನು ತೆಗೆಯಲು ಪ್ರಾರಂಭಿಸಲಾಯಿತು.

ಜೋಹಾನ್ಸ್ ಜೀರ್ಜಿನ್ (೧೮೧೧-೧೯೦೬) ರವರು ಪಟ್ಟಿಗಳಿಂದ ಕುಡಿದ ಜೇನುಪೆಟ್ಟಿಗೆಗಳನ್ನು ತಯಾರಿಸಲಾಗಿ ಲಾಂಗ್‌ಸ್ಟ್ರೋತ್ ಸ್ಥಳಾಂತರ ಚೌಕಟ್ಟಿನ ಪೆಟ್ಟಿಗೆಗಳನ್ನು ಆವಿಷ್ಕರಿಸಲು ಸಾಧ್ಯವಾಯಿತು. ಇವರು ಜೇನುನೊಣಗಳಲ್ಲಿ ಅನಿಷೇಚಕ ಬೆಳವಣಿಗೆಯ ಸಿದ್ಧಾಂತವನ್ನು ಪ್ರಕಟಿಸಿದರು. ಜೀರಜಿನ್ ಕೇವಲ ಆವಿಷ್ಕಾರಿಯೇ ಆಗದೆ ಸ್ವತಃ  ಜೇನುಕೃಷಿಕರೇ ಆಗಿದ್ದರು. ೧೮೪೮ ರಲ್ಲಿ ‘ಥಿಯರಿ ಅಂಡ್ ಪ್ರಾಕ್ಟೀಸ್ ಆಫ್ ದಿ ನ್ಯೂ ಬೀ ಫ್ರೆಂಡ್’ ಎಂಬ ಪುಸ್ತಕವನ್ನು ಪ್ರಕಟಿಸಿದ ಇವರು ೧೮೫೩ ರಲ್ಲಿ ಇಟಾಲಿಯನ್ ಜೇನುನೊಣಗಳನ್ನು ಮೊಟ್ಟಮೊದಲಿಗೆ ಸಾಕಲು ಪ್ರಾರಂಭಿಸಿದರು. ಹತ್ತೊಂಬತ್ತನೇ ಶತಮಾನದಲ್ಲಿ ಜೇನುಕೃಷಿಯಲ್ಲಿ ಹೆಚ್ಚಿನ ಪ್ರಗತಿಯನ್ನು ಮುಖ್ಯವಾಗಿ ಅಮೆರಿಕಾದ ಆವಿಷ್ಕಾರಿಗಳಿಂದ ಸಾಧಿಸಲಾಯಿತು. ಅವರುಗಳಲ್ಲಿ ಆಧುನಿಕ ಜೇನು ಕೃಷಿಯ ಪಿತಾಮಹರಾದ ಲಾಂಗ್‌ಸ್ಟ್ರೋತ್, ವಾಣಿಜ್ಯ ಜೇನು ಕೃಷಿಯ ಪಿತಾಮಹ, ಮೋಸಸ್ ಕ್ವಿನ್ ಬಿ, ಅಮೆರಿಕನ್ ಜೇನು ಉಪಕರಣಗಳ ತಯಾರಕರಾದ ರೂಟ್‌ರವರು ಪ್ರಮುಖರು. (ಕೋಷ್ಠಕ ೨).

ಲಾಂಗ್‌ಸ್ಟ್ರೋತ್‌ರು (೧೮೧೦ – ೧೮೯೫) ಫಿಲಿಡೆಲ್ಫಿಯಾದಲ್ಲಿ ಜನಿಸಿದ ಗಣಿತಶಾಸ್ತ್ರಜ್ಞರು. ಇವರು ಜೇನುನೊಣಗಳ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದು ತಮ್ಮ ಊರಿನಲ್ಲಿ ಒಂದು ಮಧುವನವನ್ನು ಸ್ಥಾಪಿಸಿ ೧೮೫೧ ರಲ್ಲಿ ಜೇನುಪೆಟ್ಟಿಗೆ ಚೌಕಟ್ಟುಗಳ ನಡುವಿನ ನಿಗದಿತ ಜಾಗ ‘ಬಿ ಸ್ಪೇಸ್’ ಅನ್ನು ಕಂಡು ಹಿಡಿದುದಲ್ಲದೇ ಸ್ಥಳಾಂತರಿ ಚೌಕಟ್ಟಿನ ಜೇನು ಪೆಟ್ಟಿಗೆಯನ್ನು ಆವಿಷ್ಕರಿಸಿ ಅದರ ಭೌತಿಕ ಆಸ್ತಿ ಹಕ್ಕನ್ನು ಕೂಡ ಪಡೆದರು. ಇವರು ‘ದಿ ಹೈವ್ ಅಂಡ್ ಹನಿ ಬೀ’ ಎಂಬ ಪುಸ್ತಕದ ಮೊದಲ ಮುದ್ರಣವನ್ನು ಪ್ರಕಟಿಸಿದರು.

ಜೇನುಕೃಷಿಗೆ ಮೋಸಸ್ ಕ್ವೀನಬೀ ಯವರ ಕಾಣಿಕೆ ಪ್ರಾಯೋಗಿಕವಾಗಿದ್ದು, ವಿವಿಧ ಜೇನುಪೆಟ್ಟಿಗೆಗಳನ್ನು ಆವಿಷ್ಕರಿಸಿದ ನಂತರ ಅಮೇರಿಕೆಯ ದಢಾಂಥ್ ಖಾಸಗಿ ಸಂಸ್ಥೆಯವರು ಕ್ರಮವಾದ ಅಳತೆಗಳ ಆಧಾರದ ಮೇಲೆ ಜೇನುಪೆಟ್ಟಿಗೆಗಳನ್ನು ತಯಾರಿಸಿದರು, ಇವರು ಪ್ರಥಮ ಬಾರಿಗೆ ಹೊಗೆತಿದಿಯನ್ನು ಆವಿಷ್ಕರಿಸಿದರೆ, ಬಿಂಗ್ಯಾರವರು ಅದನ್ನು ಅಭಿವೃದ್ಧಿ ಪಡಿಸಿದರು. ಇವರು ಮೇಣ ತೆಗೆಯುವ ಚಾಕುವನ್ನು ತಯಾರಿಸಿದ ನಂತರ ‘ಮಿಸ್ಟರೀಸ್ ಆಫ್ ಬೀಕೀಪಿಂಗ್ ಎಕ್ಸ್‌ಪ್ಲೈನ್ಡ್’ ಎಂಬ ಪುಸ್ತಕವನ್ನು ೧೮೫೩ ರಲ್ಲಿ ಪ್ರಕಟಿಸಿದರು.

ಕೋಷ್ಠಕ : ಆಧುನಿಕ ಜೇನುಕೃಷಿಯಲ್ಲಿ ಕೆಲವು ಗಮನೀಯ ಐತಿಹಾಸಿಕ ಬೆಳವಣಿಗೆಗಳು

ಬೆಳವಣಿಗೆ

ಪ್ರಕಟಿಸಿದ ವರ್ಷ

ಪ್ರಕಟಿಸಿದವರು

ಪ್ರಕಟಿಸಿದ ರಾಷ್ಟ್ರ

ಚೌಕಟ್ಟುಗಳಿಂದ ಕೂಡಿದ ಜೇನು ಪೆಟ್ಟಿಗೆ ೧೮೫೧ ಎಲ್.ಎಲ್ ಲಾಂಗ್‌ಸ್ಟ್ರೋತ್ ಅಮೆರಿಕ
ಮೇಣದ ಹಾಳೆಗಳು ೧೮೫೭ ಜೆ.ಮೆಹರಿಂಗ್ ಜರ್ಮನಿ
ರಾಣಿಗಳನ್ನು ಅಂಚೆಯ ಮೂಲಕ ರವಾನಿಸಿದ್ದು ೧೮೬೩ ಸಿ. ಜೆ. ರಾಬಿನ್‌ಸನ್‌ ಅಮೆರಿಕ
ಜೇನು ತೆಗೆಯುವ ಯಂತ್ರ ೧೮೬೫ ಎಫ್. ಹ್ರುಷ್ಕ ಆಸ್ಟ್ರೀಯ
ಮೇಣದ ತಳಹದಿ ಹಾಳೆ ಮಾಡುವ ರೋಲರ್‌ಗಳು ೧೮೭೩ ಎಫ್. ವೀಸ್ ಅಮೆರಿಕ
ಹೊಗೆ ತಿದಿ ಕಂಡುಹಿಡಿದು ಅಭಿವೃದ್ಧಿ ಪಡಿಸಿದ್ದು ೧೮೭೫ ಎಂ. ಕ್ವಿನ್‌ಬಿ ಟಿ.ಎಫ್. ಬಿಂಗ್ಯಾಮ್ ಅಮೆರಿಕ
ವಾಣಿಜ್ಯವಾಗಿ ರಾಣಿ ನೊಣ ಸಾಕುವಿಕೆ ೧೮೮೩ ಹೆಚ್. ಆಲೆ ಅಮೆರಿಕ
ಕೃತಕ ರಾಣಿ ಕಣಗಳಿಂದ ರಾಣಿ ಬೆಳೆಸುವಿಕೆ ೧೮೮೯ ಜಿ.ಎಂ. ಡೂಲಿಟ್ಲ್ ಅಮೆರಿಕ
ಪರಾಗಸ್ಪರ್ಶ ಕ್ರಿಯೆಗೆ ಜೇನು ಕುಟುಂಬಗಳ ಬಳಕೆ ೧೮೯೫ ಎಂ.ಬಿ. ವೈಟ್ ಅಮೆರಿಕ
ರಾಣಿಯ ಕೃತಕ ಗರ್ಭಧಾರಣೆ ೧೯೨೬ ಎಲ್.ಆರ್. ವ್ಯಾಟ್ಸನ್ ಅಮೆರಿಕ
ಜೇನುನೊಣಗಳಲ್ಲಿ ನರ್ತನ ೧೯೬೭ ಕಾರ್ಲ್ ವೊನ್ ಪ್ರಿಶ್ ಆಸ್ಟ್ರೀಯ
ತುಡುವೆ ರಾಣಿಯ ಕೃತಕ ಗರ್ಭಧಾರಣೆ ೧೯೭೩ ಜೆ. ವಾಯ್ಕೆ ಪೋಲ್ಯಾಂಡ್
ಜೇನುನೊಣಗಳ ವಂಶವಾಹಿ ವರ್ಣನೆ ೨೦೦೪ ರಿಚರ್ಡ ಗಿಬ್ಸ್ ಅಮೆರಿಕ

ಮಿಲ್ಲರ್‌ರವರು (೧೮೩೧ – ೧೯೨೦) ಅಮೆರಿಕೆಯಲ್ಲಿ ಉತ್ತಮ ಶಿಕ್ಷಕರಾಗಿದ್ದರು. ಇವರ ಜೇನುಕೃಷಿಯಲ್ಲಿನ ಆಸಕ್ತಿ ೧೮೬೧ ರಲ್ಲಿ ಅವರ ಪತ್ನಿಯರೊಡನೆ ಜೇನುನೊಣಗಳ ಹಿಂಡನ್ನು ಹಿಡಿಯುವುದರೊಂದಿಗೆ ಆರಂಭವಾಯಿತು. ಇವರು ಜೇನುಕೃಷಿಯ ಬಗ್ಗೆ ಹೆಚ್ಚಿ ವೈಜ್ಞಾನಿಕ ಮಾಹಿತಿಗಳನ್ನು ನೀಡಿರುವುದಲ್ಲದೆ ‘ಅಮೆರಿಕನ ಬೀ ಜರ್ನಲ್’ ಎಂಬ ಜೇನುಕೃಷಿ ನಿಯತಕಾಲಿಕೆಯ ತಾಂತ್ರಿಕ ಸಂಪಾದಕರೂ ಆಗಿದ್ದರು. ಇವರು ಜೇನುಕೃಷಿಗೆ ಸಂಬಂಧಿಸಿದಂತೆ ಅನೇಕ ಪುಸ್ತಕಗಳನ್ನು ಬರೆದಿದ್ದು ಅವುಗಳಲ್ಲಿ ‘ಜೇನು ಕೃಷಿಯ ೧೦೦೦ ಪ್ರಶ್ನೆಗಳಿಗೆ ಉತ್ತರಗಳು ಮತ್ತು ಜೇನುನೊಣಗಳೊಡನೆ ೫೦ ವರ್ಷಗಳು’ ಎಂಬ ಗ್ರಂಥವು ಪ್ರಸಿದ್ಧಿ ಪಡೆದಿವೆ. ಇವರು ಅನೇಕ ಜೇನುಕೃಷಿ ಉಪಕರಣಗಳನ್ನು ಅಭಿವೃದ್ಧಿಪಡಿಸಿದರಲ್ಲದೆ, ಇವರ ರಾಣಿ ಬೆಳೆಸುವಿಕೆಯ ವಿಧಾನವು ಹೆಚ್ಚಿನ ಪ್ರಸಿದ್ಧಿ ಪಡೆದಿವೆ.

ಜೇನುಕೃಷಿಯನ್ನು ವಾಣಿಜ್ಯ ಕೃಷಿಯನ್ನಾಗಿ ಮೊದಲ ಬಾರಿಗೆ ಅಭಿವೃದ್ಧಿ ಪಡಿಸಿದವರೆಂದರೆ ಎ. ಐ. ರೂಟ್‌ರವರು. ಇವರು ಅಮೆರಿಕಾದ ಓಹಿಯೋ ರಾಜ್ಯದವರು. ಜೇನುಕೃಷಿಯ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದ ಇವರು ೧೮೬೯ ರಲ್ಲಿ ಜೇನು ತೆಗೆಯುವ ಯಂತ್ರದ ಲೋಪಗಳನ್ನು ಕಂಡು ಹಿಡಿದು ಅಭಿವೃದ್ಧಿಗೊಳಿಸಿದರು. ೧೮೭೩ ರಲ್ಲಿ ‘ಗ್ಲೀನಿಂಗ್ಸ್ ಆಫ್ ಬೀ ಕಲ್ಚರ್’ ಎಂಬ ಪುಸ್ತಕವನ್ನು ಪ್ರಕಟಿಸಿದ ನಂತರ ಈ ಪುಸ್ತಕವನ್ನು ‘ದಿ ಎ.ಬಿ.ಸಿ ಆಫ್ ಬೀ ಕಲ್ಚರ್’ ಎಂದು ಮರು ಪ್ರಕಟಿಸಿದರು. ಇದರ ಮುದ್ರಣವು ಇವರ ಮಗ ಇ.ಐ. ರೂಟ್‌ರವರಿಂದ ಮುಂದುವರೆದು ‘ದಿ ಎ.ಬಿ.ಸಿ. ಅಂಡ್ ಎಕ್ಸ್. ವೈ.ಜಡ್ ಆಫ್ ಬೀ ಕಲ್ಚರ್’ ಎಂಬ ಹೆಸರಿನಿಂದ ಪ್ರಕಟಣೆಗೊಂಡಿದೆ.

೨೦ನೇ ಶತಮಾನದಲ್ಲಿ ಜೇನುಸಾಕಣೆ : ಇಪ್ಪತ್ತನೇ ಶತಮಾನದಲ್ಲಿ ಪ್ರಪಂಚದಾದ್ಯಂತ ಹೆಚ್ಚಿನ ಪ್ರಗತಿಯನ್ನು ಸಾಧಿಸಿದ್ದು ಉತ್ತಮ ತಳಿಗಳನ್ನು ಅಭಿವೃದ್ಧಿಗೊಳಿಸಿ ಅಧಿಕ ಪ್ರಮಾಣದ ಜೇನುತುಪ್ಪವನ್ನು ಉತ್ಪಾದಿಸಲಾಗುತ್ತದೆ. ಜೇನುನೊಣಗಳಿಗೆ ತಗಲುವ ರೋಗಗಳನ್ನು ಪೂರ್ಣವಾಗಿ ನಿಯಂತ್ರಿಸಲಾಗಿದ್ದು ಭೀಕರ ಪೀಡೆ ನುಸಿ, ವ್ಯರೋವ ಡಿಸ್ಟ್ರಕ್ಟರ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ನುಸಿ ನಿರೋಧಕ ಕುಟುಂಬಗಳನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ. ೧೯೬೦ ರ ದಶಕದಲ್ಲಿನ ಕಾರ್ಲ್‌ವಾನ್‌ಪ್ರಿಶ್‌ರ ಜೇನುನೊಣಗಳ ನೃತ್ಯಗಳ ಆವಿಷ್ಕಾರದಿಂದ ಅವುಗಳ ಸಂವಹನದ ಮಾಧ್ಯಮವನ್ನು ತಿಳಿಯಲಾಯಿತು. ಜೇನುನೊಣಗಳು ಸಾಮಾಜಿಕ ಜೀವನದ ಕೀಟಗಳಾದುದರಿಂದ ಅವುಗಳ ಉನ್ನತಗುಣಗಳನ್ನು ಗುರ್ತಿಸಿ ರಿಚರ್ಡ್ ಗಿಬ್ಸ್‌ರು ಎಪಿಎಸ್ ಮೆಲ್ಲಿಫೆರಾ ಜೇನುನೊಣದ ವಂಶವಾಹಿ ರಚನೆ ಮತ್ತು ಕಾರ್ಯಗಳನ್ನು ತಿಳಿಯುವ ಪ್ರಯತ್ನ ಮಾಡಿದರು. ಈ ಬೆಳವಣಿಗೆಯಿಂದ ಮುಂದಿನ ವರ್ಷಗಳಲ್ಲಿ ಜೇನುಕೃಷಿ ಸಂಬಂಧಿಸಿದ ಸಮಸ್ಯೆಗಳನ್ನು ಸುಲಭವಾಗಿ ನಿವಾರಿಸಬಹುದಲ್ಲದೇ ಇತರ ಸಾಮಾಜಿಕ ಕೀಟಗಳ ಸಂಶೋಧನೆಗಳಿಗೂ ಸಹಕಾರಿಯಾಗಲಿದೆ.

ವಿಶ್ವದ ಜೇನುಕೃಷಿಯ ಬಗ್ಗೆ ಒಂದು ಪಕ್ಷಿ ನೋಟ : ಪ್ರಪಂಚದಲ್ಲಿ ರಷ್ಯಾ, ಚೀನಾ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನಗಳು ಅತಿ ಹೆಚ್ಚಿನ ಜೇನುತುಪ್ಪವನ್ನು ಉತ್ಪಾದಿಸುತ್ತಿವೆ. ಯೂರೋಪಿನಲ್ಲಿ ಒಂದು ಚದರ ಕಿ.ಮೀ.ಗೆ ೩.೨ ಜೇನುಕುಟುಂಬಗಳಿದ್ದು ಪ್ರಪಂಚದಲ್ಲಿಯೇ ಮಂಚೂಣಿಯಲ್ಲಿದ್ದು ಜೇನುಕೃಷಿಯು ಉಪಕಸಬುದಾರರೂ ಪ್ರತಿ ಮನೆಯೊಂದಕ್ಕೆ ಸುಮಾರು ೧೦ ಜೇನು ಕುಟುಂಬಗಳಿರುವುವು. ಯೂರೋಪ್ ಖಂಡದಲ್ಲಿ ಜೇನುಕೃಷಿಗೆ ಸಂಬಂಧಿಸಿದಂತೆ ಸೂಕ್ತ ಕಾಯಿದೆಗಳಿದ್ದು ಅನೇಕ ಜೇನುಕೃಷಿಕರ ಸಂಘ ಸಂಸ್ಥೆಗಳು ಸ್ಥಾಪನೆಗೊಂಡಿವೆ.

ರಷ್ಯಾ ಸಂಯುಕ್ತ ಸಂಸ್ಥಾನಗಳಲ್ಲಿ ಜೇನುಕೃಷಿಯ ಶಿಕ್ಷಣ ಮತ್ತು ಸಂಶೋಧನೆಗೆ ಹೆಚ್ಚಿನ ಆದ್ಯತೆ ಕೊಟ್ಟಿದ್ದು ಪ್ರತಿ ಕುಟುಂಬದಿಂದ ೨೪ ಕಿ.ಗ್ರಾಂ ಜೇನುತುಪ್ಪವನ್ನು ಪಡೆಯಲಾಗುತ್ತಿದೆ. ಉತ್ತರ ಅಮೆರಿಕಾದಲ್ಲಿ ಯಾವ ಮೂಲ ಜೇನುನೊಣ ಪ್ರಭೇದಗಳಿಲ್ಲದೆ ಅವರು ಸಾಕಣೆ ಮಾಡುತ್ತಿರುವ ಇಟಾಲಿಯನ್ ಜೇನುನೊಣವು ಯುರೋಪ್‌ನಿಂದ ತರಿಸಿರುವುದಾಗಿದೆ. ಅಧಿಕ ರಾಣಿನೊಣದ ಉತ್ಪಾದನೆ, ಪ್ಯಾಕೇಜ ನೊಣದ ಉತ್ಪಾದನೆ, ಮತ್ತು ಜೇನುನೊಣಗಳ ಪರಾಗಸ್ಪರ್ಶ ಇವೆಲ್ಲವೂ ಮೊದಲಬಾರಿಗೆ ಆರಂಭವಾಯಿತು. ಈ ದೇಶದಲ್ಲಿ ಒಂದು ಚದರ ಕಿ.ಮೀ.ಗೆ ೦.೦೭ ಜೇನು ಕುಟುಂಬಗಳಿದ್ದು ಅನೇಕ ಜೇನುಕೃಷಿ ಸಂಘಗಳಿವೆ. ಮಧ್ಯ ಅಮೆರಿಕಾದಲ್ಲಿ ಜೇನು ಕುಟುಂಬಗಳ ಸಂಖ್ಯೆ ಒಂದು ಚದರ ಕಿ.ಮೀ.ಗೆ ೧.೩ ಆಗಿದ್ದು ವರ್ಷವಿಡೀ ಮಕರಂದ ಮತ್ತು ಪರಾಗವು ದೊರೆಯುತ್ತದೆ. ದಕ್ಷಿಣ ಅಮೆರಿಕಾದ ಬ್ರೆಜಿಲ್‌ನಲ್ಲಿ ಜೇನುತುಪ್ಪದ ಉತ್ಪಾದನೆ ಮತ್ತು ಮಟ್ಟದಲ್ಲಿದ್ದರೂ ಇತರ ದೇಶಗಳಿಗೆ ಹೋಲಿಸಿದರೆ ತೀರಾ ಕಡಿಮೆಯಾಗಿದೆ. ಆಸ್ಟ್ರೇಲಿಯಾದಲ್ಲಿ ಹೆಚ್ಚು ಪ್ರವೇಶ ಒಣಭೂಮಿಯಿಂದ ಕೂಡಿದ್ದು ಒಂದು ಚದರ ಕಿ.ಮೀ.ಗೆ ೦.೦೭ ಜೇನುಕುಟುಂಬಗಳನ್ನು ಹೊಂದಿದ್ದು ಹೆಚ್ಚಿನ ಜೇನುಸಾಕಣೆಯನ್ನು ಉಪ ಉಷ್ಣವಲಯದ ಪ್ರದೇಶಗಳಲ್ಲಿ ಯೂರೋಪಿಯನ್ ಜೇನುನೊಣದೊಂದಿಗೆ ಮಾಡಲಾಗುತ್ತಿದ್ದರೆ ನ್ಯೂಗಿನಿ ಪ್ರದೇಶಗಳಲ್ಲಿ ತುಡುವೆ ಜೇನುನೊಣಗಳ ಸಾಕಣೆ ಮಾಡಲಾಗುತ್ತಿದೆ.

ಏಷಿಯಾದಲ್ಲಿ ಕಂಡುಬರುವ ಅನೇಕ ಜೇನು ಪ್ರಭೇದಗಳಲ್ಲಿ, ತುಡುವೆ ಜೇನುನೊಣವು ಈ ಖಂಡದ ಮೂಲ ಜೇನುನೊಣವಾಗಿದ್ದು, ಯೂರೋಪಿಯನ್ ಜೇನುನೊಣವನ್ನು ಪರಿಚಯಿಸಿ ಸಾಕಲಾಗುತ್ತಿದೆ. ಏಷಿಯಾ ಖಂಡದಲ್ಲಿ ಪ್ರಪಂಚದ ಒಟ್ಟು ೧/೪ ಭಾಗದಷ್ಟು ಜೇನುಕುಟುಂಬಗಳಿದ್ದು ಅಷ್ಟೇ ಜೇನುತುಪ್ಪವನ್ನು ಉತ್ಪತ್ತಿ ಮಾಡಲಾಗುತ್ತಿದೆ. ಇದರಲ್ಲಿ ಚೀನಾ ದೇಶವು ಏಷಿಯಾ ಖಂಡದ ಅರ್ಧದಷ್ಟು ಜೇನುಕುಟುಂಬಗಳನ್ನು ಹೊಂದಿ ಜೇನುತುಪ್ಪವನ್ನು ಇತರ ದೇಶಗಳಿಗೆ ರಫ್ತು ಮಾಡುತ್ತಿದ್ದು ಇಲ್ಲಿ ಕೋಲುಜೇನು ಮತ್ತು ಹೆಜ್ಜೇನು ಸೇರಿದಂತೆ ನಾಲ್ಕು ಮುಖ್ಯ ಜೇನು ಪ್ರಭೇಗಳು ವಿಸ್ತಾರಗೊಂಡಿವೆ.

ಯೂರೋಪಿಯನ್ ಜೇನುನೊಣಗಳನ್ನು ಯೂರೋಪ್ ರಾಷ್ಟ್ರಗಳಿಂದ ಪ್ರಪಂಚದಾದ್ಯಂತ ಸಾಗಿಸಿ ಸಾಕಣೆ ಮಾಡಲಾಗುತ್ತಿದೆ. ಪರಾಗಸ್ಪರ್ಶ ಕ್ರಿಯೆಯಲ್ಲಿ ಜೇನುನೊಣಗಳ ಪಾತ್ರವನ್ನು ಗಮನಿಸಿ ವಿವಿಧ ಬೆಳೆಗಳಲ್ಲಿ ಅವುಗಳನ್ನು ಉಪಯೋಗಿಸಿಕೊಳ್ಳಲಾಗುತ್ತಿದೆಯಲ್ಲದೆ ಬೆಳೆಗಳ ಫಸಲಿನ ಉತ್ಪಾದನೆಯಲ್ಲಿ ಗಮನೀಯ ಪಾತ್ರವನ್ನು ವಹಿಸಿದೆ. ಜೇನುನೊಣಗಳನ್ನು ಪಿಡಿಸುವ ಬ್ಯಾಕ್ಟೀರಿಯಾ, ವೈರಸ್, ಏಕಕೋಶಿಯ, ಶಿಲೀಂಧ್ರ ಹಾಗೂ ಅನೇಕ ರೀತಿಯ ಕೀಟಬಾಧೆಯನ್ನು ನಿವಾರಿಸಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆಯಾ ಸ್ಥಳಗಳಿಗೆ ಹೊಂದಾಣಿಕೆಯಾಗುವಂತೆ ರೋಗ ರಹಿತ ಸೂಕ್ತ ಜೇನುನೊಣದ ಕುಟುಂಬಗಳನ್ನು ಗುರುತಿಸಿ ಉತ್ತಮ ಇಳುವರಿ ನೀಡುವ ಜೇನುನೊಣದ ತಳಿಗಳನ್ನು ಪ್ರಪಂಚದಾದ್ಯಂತ ಅಭಿವೃದ್ಧಿ ಪಡಿಸಲಾಗುತ್ತಿದೆ. ಜೇನುಕೃಷಿಯ ಉತ್ಪನ್ನಗಳ ಶೇಖರಣಾ ಮತ್ತು ಸಂಸ್ಕರಣಾ ವಿಧಾನಗಳನ್ನು ಅಭಿವೃದ್ಧಿ ಪಡಿಸಿ ಹೆಚ್ಚು ಕಾಲ ಕೆಡದಂತೆ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಜೇನುನೊಣಗಳ ಪರಾಗ ಮತ್ತು ರಾಜಶಾಯಿರಸದ ಶೇಖರಣೆ ಹಾಗೂ ಜೇನುನೊಣಗಳಲ್ಲಿ ವಿಷದ ಶೇಖರಣೆಯ ಬಗ್ಗೆ ಸಂಶೋಧನೆಗಳನ್ನು ಕೈಗೊಂಡು ಅವುಗಳ ಉತ್ಪಾದನೆಯ ಪ್ರಗತಿಯನ್ನು ಸಾಧಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ.

ಭಾರತದಲ್ಲಿ ಜೇನು ಕೃಷಿ : ಭಾರತದ ದೇಶದಲ್ಲಿ ಜೇನು ನೊಣಗಳನ್ನು ನೂತನ ಶಿಲಾಯುಗದ ಕಾಲದಿಂದಲೂ ಸಾಕಣೆ ಮಾಡುತ್ತಿದ್ದುದು ಕಂಡುಬರುತ್ತದೆ. ಭಾರತದಲ್ಲಿ ಪುರಾತನ ಕಾಲದಿಂದಲೇ ಜೇನುಸಾಕಾಣಿಕೆ ರೂಢಿಯಲ್ಲಿತ್ತು ಎನ್ನುವುದಕ್ಕೆ ಋಗ್ವೇದ (ಕ್ರಿ.ಪೂ. ೪೫೦೦ – ೧೫೦೦), ಉಪನಿಷತ್ (ಕ್ರಿ.ಪೂ. ೪೦೦), ರಾಮಾಯಣ ಮತ್ತು ಮಹಾಭಾರತ ಮಹಾಕಾವ್ಯಗಳಲ್ಲಿ ಉಲ್ಲೇಖಗಳಿವೆ.

ಮಧ್ಯ ಭಾರತದ ರಜತ್ ಪ್ರಪಾತ್‌ನಲ್ಲಿ ಕಂಡು ಬಂದಿರುವ ಮಧ್ಯಶಿಲಾಯುಗದ ನಂತರದ ಅವಧಿಯ ಒಂದು ಶಿಲಾ ಚಿತ್ರ. ಚಿತ್ರದಲ್ಲಿ ಹೆಜ್ಜೇನಿನ ಗೂಡಿನಿಂದ (ಏಪಿಸ್ ಡಾರ್ಸೆಟ) ಜೇನು ಸಂಗ್ರಹಿಸುತ್ತಿರುವುದನ್ನು ರಚಿಸಲಾಗಿದೆ.

ಪ್ರಾಚೀನ ಭರತದಲ್ಲಿ ಜೇನುನೊಣಗಳನ್ನು ದೇವತೆಗಳ ಸಹಚರರೆಂದು ತಿಳಿಯಲಾಗಿದೆ. ಕ್ರಿ.ಪೂ. ಸುಮಾರು ೩೦೦೦ ರಿಂದ ೨೦೦೦ ಕಾಲದಲ್ಲಿ ಬರೆದ ಭಾರತದ ಪವಿತ್ರ ಗ್ರಂಥವಾದ ಮಹಾಭಾರತ ಜೇನುನೊಣಗಳ ಹಾಗೂ ಜೇನುತುಪ್ಪದ ಮಹತ್ವ ಬಗ್ಗೆ ತಿಳಿಸುತ್ತದೆ. ಈ ಗ್ರಂಥದಲ್ಲಿ ದೇವರುಗಳಾದ ವಿಷ್ಣು, ಶ್ರೀಕೃಷ್ಣ ಮತ್ತು ದೇವೆಂದ್ರರನ್ನು ಪುಷ್ಪಗಳ ಮಕರಂದದಲ್ಲಿ ಹುಟ್ಟಿದವರೆಂದೂ, ವಿಷ್ಣುವನ್ನು ಅರಳಿದ ತಾವರೆ ಹೂವಿನ ಮೇಲೆ ವಿಶ್ರಮಿಸುತ್ತಿರುವ ಬಗ್ಗೆ ವರ್ಣಿಸಲಾಗಿದೆ. ಕ್ರಿ.ಪೂ ೧೦೦೦ ದ ಕಾಲದಲ್ಲಿ ಮನು ಎಂಬ ರಾಜನ ಕಾನೂನುಗಳ ಪ್ರಕಾರ ಆರನೇ ಒಂದರಷ್ಟು  ಜೇನುತುಪ್ಪವನ್ನು ಪಡೆಯಬಹುದೆಂದು ತಿಳಿಸಲಾಗಿದೆ. ಜೇನುನೊಣಗಳನ್ನು ಬೇಟೆಯಾಡಿರುವುದನ್ನು ಮಧ್ಯ ಭಾರತದ ಭೀಂಬೇಟ್ಕ ಎಂಬಲ್ಲಿ ಹಳೆಶಿಲಾಯುಗದ ಕಾಲದಲ್ಲಿ ಗುಹೆಗಳ ಕಲ್ಲಿನ ಮೇಲೆ ಕೆತ್ತಲಾಗಿದೆ. ಮಧ್ಯಶಿಲಾಯುಗದ ನಂತರದಲ್ಲಿ ಹೆಜ್ಜೇನು ಕುಟುಂಬಗಳಿಂದ ಜೇನುಸಂಗ್ರಹಿಸುತ್ತಿರುವ ಶಿಲಾಚಿತ್ರಗಳು ಮಧ್ಯಭಾರತದಲ್ಲಿ ಕಂಡುಬರುತ್ತವೆ (ಚಿತ್ರ ೧).

ಸಾಂಪ್ರದಾಯಿಕ ಸಾಕಾಣಿಕೆ ಪದ್ಧತಿಯಲ್ಲಿ ಮರದ ದಿಂಡುಗಳು, ಬಿದರಿನ ಬೊಂಬುಗಳು ಮತ್ತು ಮನೆಯ ಗೋಡೆಗಳಲ್ಲಿ ಅಡಗಿಸಲಾದ ಮಣ್ಣಿನ ಮಡಿಕೆಗಳಲ್ಲಿ ಜೇನು ಕುಟುಂಬಗಳನ್ನು ಆಕರ್ಷಿಸಿ ಸಾಕಣೆ ಮಾಡುವುದು ಭಾರತದಾದ್ಯಂತ ೧೯ ನೇ ಶತಮಾನದ ಅಂತ್ಯದವರೆಗೆ ಕಂಡುಬರುತ್ತದೆ. ಈ ಗೂಡುಗಳು ಹೊರತೆಗೆಯಬಹುದಾದ ಚೌಕಟ್ಟುಗಳಿಂದ ಕೂಡಿರುವುದು ಕೆಲವೆಡೆ ಇಂದಿಗೂ ಕಂಡುಬರುತ್ತವೆ. ಆದರೆ ೧೮೫೧ ರ ನಂತರದಲ್ಲಿ ಲಾಂಗ್‌ಸ್ಟ್ರೋತರ ಸ್ಥಳಾಂತರಿ ಜೇನು ಪೆಟ್ಟಿಗೆಗಳು ಬಳಕೆಗೆ ಬಂದ ನಂತರ ಜೇನುಕೃಷಿಯು ಭಾರತದಲ್ಲಿ ಹೊಸ ರೂಪವನ್ನು ತಾಳಿತು. ಭಾರತದಲ್ಲಿ ಸ್ಥಳಾಂತರಿ ಚೌಕಟ್ಟುಗಳಿಂದ ಕೂಡಿದ ಜೇನುಪೆಟ್ಟಿಗೆಗಳಲ್ಲಿ ಜೇನು ಸಾಕುವುದನ್ನು ಪಶ್ಚಿಮ ಬಂಗಾಳದಲ್ಲಿ ೧೮೮೨ ಮತ್ತು ಪಂಜಾಬಿನಲ್ಲಿ ೧೮೮೪ ರಲ್ಲಿ ಮೊಟ್ಟ ಮೊದಲಿಗೆ ಪ್ರಾರಂಭಿಸಲಾಯಿತು. ಆದರೆ ದಕ್ಷಿಣ ಭಾರತದಲ್ಲಿ  ೧೯೧೦ ರಲ್ಲಿ ರೆವರೆಂಡ್ ಫಾದರ್ ನ್ಯೂಟನ್‌ರು ತುಡುವೆ ಜೇಬು ಕುಟುಂಬಗಳಿಗೆ ಅನ್ವಯವಾಗುವಂತಹ ಜೇನು ಪೆಟ್ಟಿಗೆಯನ್ನು ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯಲ್ಲಿ ಅಭಿವೃದ್ಧಿಪಡಿಸಿದರು. ಭಾರತದಲ್ಲಿ ಲಾಂಗ್‌ಸ್ಟ್ರೋತ ಜೇನು ಪೆಟ್ಟಿಗೆಗಳನ್ನು ಸಾಮಾನ್ಯವಾಗಿ ಯೂರೋಪಿಯನ್ ಜೇನುನೊಣ, ಎಪಿಎಸ್ ಮೆಲ್ಲಿಫೆರಾ ಮತ್ತು ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ತುಡುವೆ ಜೇನುನೊಣಗಳ ಸಾಕಾಣಿಕೆಗೆ ಬಳಸಲಾಗುತ್ತಿದೆ. ತುಡುವೆ ಜೇನುನೊಣಗಳನ್ನು ಭಾರತೀಯ ಮಾನಕ ಬ್ಯೂರೊ (ಬಿ.ಐ.ಎಸ್.) ಪ್ರಮಾಣೀಕರಿಸಿದ ಜೇನು ಪೆಟ್ಟಿಗೆಗಳಲ್ಲಿ ಸಾಕಣೆ ಮಾಡಲಾಗುತ್ತಿದ್ದು ಲಾಂಗ್‌ಸ್ಟ್ರೋತರು ನೀಡಿದ ‘ಬೀ ಸ್ಪೇಸ್’ ಸೂತ್ರದ ಆಧಾರದ ಮೇಲೆ ಈ ಜೇನುಪೆಟ್ಟಿಗೆಯನ್ನು ತುಡುವೆ ಜೇನುನೊಣಗಳಿಗೆ ಅನುಕೂಲವಾಗುವಂತೆ ಅಭಿವೃದ್ಧಿಪಡಿಸಲಾಗಿದೆ.

ಭಾರತದಲ್ಲಿ ಆಧುನಿಕ ಜೇನುಸಾಕಣೆ ಕೇರಳಾ ರಾಜ್ಯದ ತಿರುವನಂತಪುರದಲ್ಲಿ ೧೯೧೭, ಮೈಸೂರಿನಲ್ಲಿ ೧೯೨೫, ಕಾಶ್ಮೀರದಲ್ಲಿ ೧೯೨೭, ಚೆನ್ನೈನಲ್ಲಿ ೧೯೩೧, ಕರ್ನಾಟಕ ರಾಜ್ಯದ ಕೊಡಗಿನಲ್ಲಿ ೧೯೩೮ ಮತ್ತು ಉತ್ತರ ಪ್ರದೇಶದಲ್ಲಿ ೧೯೩೮ ರಿಂದ ಪ್ರಾರಂಭವಾಯಿತು. ಭಾರತದ ಜೇನು ಕೃಷಿಕರು ೧೯೩೮-೩೯ ರಲ್ಲಿ ‘ಅಖಿಲ ಭಾರತ ಜೇನುಕೃಷಿಕರ ಸಂಘ’ ವನ್ನು ಪ್ರಾರಂಭಿಸಿ ಇದರ ಆಶ್ರಯದಲ್ಲಿ ಜೇನುಕೃಷಿ ಸಮ್ಮೇಳನಗಳನ್ನು ನಡೆಸುವುದರ ಜೊತೆಗೆ ‘ಭಾರತೀಯ ಜೇನುಕೃಷಿ ಪತ್ರಿಕೆ’ ಎಂಬ ನಿಯತಕಾಲಿಕೆಯನ್ನು ಹಿಂದಿ ಮತ್ತು ಆಂಗ್ಲ ಭಾಷೆಗಳಲ್ಲಿ ಪ್ರಕಟಿಸಲು ಪ್ರಾರಂಭಿಸಿದರು. ಮೊದಲು ಜೇನುಕೃಷಿಗೆ ಸಂಬಂಧಿಸಿದ ವೈಜ್ಞಾನಿಕ ವಿಶ್ಲೇಷಣೆಗಳನ್ನು ನವದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಗೆ (IARI) ವಹಿಸಿದ್ದಿತು. ನಂತರ ಭಾರತೀಯ ಕೃಷಿ ಅನುಸಂಧಾನ ಪರಿಷತ್ತು (ICAR) ಕೇಂದ್ರೀಯ ಜೇನುಕೃಷಿ ಪ್ರಾದೇಶಿಕ ಸಂಶೋಧನಾ ಕೇಂದ್ರಗಳನ್ನು ಪಂಜಾಬ್, ತಮಿಳನಾಡು, ಆಂಧ್ರಪ್ರದೇಶ ಮತ್ತು ಹಿಮಾಚಲ ಪ್ರದೇಶಗಳಲ್ಲಿ ೧೯೪೫ ರಲ್ಲಿ ಪ್ರಾರಂಭಿಸಿತು.

ಭಾರತದಲ್ಲಿ ಜೇನುಕೃಷಿ ಅಭಿವೃದ್ಧಿಗೆ ದುಡಿದ ಪ್ರಮುಖ ಮಹನೀಯರೆಂದರೆ ಕೊಡಗಿನ ಸ್ವಾಮಿ ಶಾಂಭವಾನಂದ, ಪಶ್ಚಿಮದ ಪ್ರದೇಶಗಳಿಂದ ಶ್ರೀ ಕಲ್ಲಾಪುರ್ ಮತ್ತು ಶ್ರೀ ಶಿಂಡೇ. ಮಧ್ಯ ಹಿಮಾಲಯ ಭಾಗದಿಂದ ಶ್ರೀ ಮಟ್ಟೂ, ಓರಿಸ್ಸಾದಿಂದ ಶ್ರೀಮತಿ ರಮಾದೇವಿ ಮತ್ತು ಶ್ರೀ ಮನಮೋಹನ ಚೌಧರಿ ಮತ್ತು ಕಾಶ್ಮೀರದಿಂದ ಶ್ರೀ ಶಾರವರು. ಅದೇ ರೀತಿ ಶ್ರೀ ಅತ್ವಾಲರು ಭಾರತದ ಹಿಮಾಚಲ ಪ್ರದೇಶದಲ್ಲಿ ಯೂರೋಪಿಯನ್ ಜೇನುನೊಣಗಳನ್ನು ಪರಿಚಯಿಸುವಲ್ಲಿ ಹೆಚ್ಚಿನ ಪ್ರಯತ್ನ ಮಾಡಿರುತ್ತಾರೆ.

ಸ್ವಾತಂತ್ರ್ಯದ ನಂತರ, ಭಾರತ ಸರ್ಕಾರ ಜೇನು ಕೈಗಾರಿಕೆಯನ್ನು ೧೯೫೨ ರಲ್ಲಿ ಸ್ಥಾಪಿತವಾದ ‘ಅಖಿಲ ಭಾರತ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ’ (KVIB) ಗೆ ವಹಿಸಿತು. ಈ ಮಂಡಳಿಗೆ, ೧೯೫೬ ರಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (KVIC) ವೆಂದು ಮರು ನಾಮಕರಣವಾಯಿತು. ನಂತರ ಇದನ್ನು ‘ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ’ ಯನ್ನಾಗಿ ಮಾರ್ಪಡಿಸಿ ರಾಜ್ಯದ ಜೇನು ಕೃಷಿ ಅಭಿವೃದ್ಧಿಗೆ ಶ್ರಮಿಸುತ್ತಿದೆ.

ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ಒಂದು ಪ್ರಧಾನ ಸಂಸ್ಥೆಯಾಗಿದ್ದು ಜೇನುಕೃಷಿ ಕಾರ್ಯಕ್ರಮ ಯೋಜನೆ. ವಿಸ್ತರಣೆ ಮತ್ತು ಅಭಿವೃದ್ಧಿಯನ್ನು ಇತರ ಉದ್ದಿಮೆಗಳೊಂದಿಗೆ ಸೇರಿ ಗ್ರಾಮೀಣ ಪ್ರದೇಶಗಳಲ್ಲಿ ಅಭಿವೃದ್ಧಿಪಡಿಸುತ್ತಿದೆ. ಈ ಆಯೋಗ ದೇಶದಲ್ಲಿ ೧೯೬೩ – ೬೪ ರಲ್ಲಿನ ಸುಮಾರು ೧೪,೫೯೭ ಜೇನು ಕುಟುಂಬಗಳಿಂದ ೧೯೯೦ – ೯೧ ರ ವೇಳೆಗೆ ಸುಮಾರು ೧೦,೬೧,೦೦೦ ಜೇನು ಕುಟುಂಬಗಳಿಗೆ ಹೆಚ್ಚಿಸಿ ಸುಮಾರು ೭.೧೩ ಟನ್ನುಗಳಿಂದ ೯.೨೮೮ ಟನ್ನುಗಳವರೆಗೆ ಜೇನುತುಪ್ಪದ ಉತ್ಪಾದನೆಯನ್ನು ಹೆಚ್ಚಿಸಿದೆ (ಕೋಷ್ಠಕ ೩).

ಕೇಂದ್ರದ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯು ಅನೇಕ ಜೇನು ಕೃಷಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ೧೯೬೨ ರಲ್ಲಿ ಪುಣೆಯಲ್ಲಿ ಕೇಂದ್ರೀಯ ಜೇನು ಸಂಶೋಧನೆ ಮತ್ತು ತರಬೇತಿ ಸಂಸ್ಥೆ (ಸಿ.ಬಿ.ಆರ್‌.ಟಿ.ಐ.) ಯನ್ನು ಸ್ಥಾಪಿಸಿ, ಆಧುನಿಕ

ಕೋಷ್ಠಕ : ಭಾರತದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯಡಿಯಲ್ಲಿ ಜೇನು ಕೃಷಿಯ ಬೆಳವಣಿಗೆ                  

ವರ್ಷ

ಜೇನು ಕೃಷಿಕರ ಸಂಖ್ಯೆ

ಜೇನು ಕುಟುಂಬಗಳ ಸಂಖ್ಯೆ

ಜೇನುತುಪ್ಪದ ಉತ್ಪಾದನೆ ಟನ್ನುಗಳಲ್ಲಿ

ಜೇನುತುಪ್ಪದ ಬೆಲೆ (ಲಕ್ಷ ರೂಗಳಲ್ಲಿ)

ಸರಾಸರಿ ಜೇನುತುಪ್ಪದ ಉತ್ಪಾದನೆ (ಒಂದು ಕುಟುಂಬಕ್ಕೆ)

೧೯೫೩ – ೫೪ ೨೩೨ ೮೦೦ ೧೨೮ ೦.೦೨ ೧.೫೦
೧೯೬೩ – ೬೪ ೫೭೧೯೮ ೧೬೪೫೯೭ ೭೧೩ ೩೭.೬೩ ೪.೩೩
೧೯೭೩ – ೭೪ ೧೫೦೪೨೧ ೫೨೨೭೧೪ ೨೪೩೫ ೩೬೫.೨೬ ೪.೬೫
೧೯೮೪ – ೮೫ ೨೦೦೦೦೦ ೮೬೮೦೦೦ ೫೫೦೦ ೯೫೦.೦೦ ೬.೩೩
೧೯೯೦ – ೯೧ ೨೪೬೦೦೦ ೧೦೬೧೦೦೦ ೯೨೮೮ ೩೨೨.೦೦ ೮.೭೫
೧೯೯೩ – ೯೪ ೨೩೬೦೦೦ ೬೭೮೦೦೦ ೫೫೨೯ ೧೩೮೨.೦೦ ೮.೧೫
೧೯೯೪ – ೦೩ ೩೫೫೬೭೦ ೯೦೪೦೦೦ ೮೪೯೧ ೧೬೫೪.೦೦ ೮.೧೦

ಜೇನುಕೃಷಿಯ ಅಗತ್ಯತೆಗಳ  ಸಂಶೋಧನೆಗೆ ನೆರವಾಯಿತು. ಈ ಕೇಂದ್ರ ಸಂಸ್ಥೆ ತಮ್ಮ ಪ್ರಾದೇಶಿಕ ಜೇನು ಕೃಷಿ ಸಂಶೋಧನಾ ಕೇಂದ್ರಗಳು ಮತ್ತು ಕ್ಷೇತ್ರ ಪ್ರಾತ್ಯಕ್ಷಿಕಾ ಕೇಂದ್ರಗಳ ಮೂಲಕ ಜೇನುಕೃಷಿ ಪ್ರಚಾರಾಂದೋಲನವನ್ನು ದೇಶದಾದ್ಯಂತ ಹಮ್ಮಿಕೊಂಡಿವೆ. ಈ ಕೇಂದ್ರಗಳು ಜೇನು ಕೃಷಿಯಲ್ಲಿನ ವಿವಿಧ ಸಮಸ್ಯೆಗಳ ನಿರ್ವಹಣೆ ಮತ್ತು ತರಬೇತಿಯ ಬಗ್ಗೆ ಹೆಚ್ಚು ಗಮನ ನೀಡುತ್ತಿವೆ.

ಕಳೆದ ದಶಕಗಳಿಂದ ಭಾರತ ಸರ್ಕಾರವು ಜೇನು ಕೃಷಿಯ ಅಭಿವೃದ್ಧಿ ಮತ್ತು ಜೇನು ತುಪ್ಪದ ಉತ್ಪಾದನೆಯ ಬಗ್ಗೆ ಹೊಸ ಯೋಜನೆಗಳನ್ನು ಹಮ್ಮಿಕೊಂಡಿದೆ. ೧೯೮೦ ರಲ್ಲಿ ಭಾರತೀಯ ಕೃಷಿ ಅನುಸಂಧಾನ ಪರಿಷತ್ತು ಜೇನುನೊಣಗಳ ಅಖಿಲ ಭಾರತ ಸಂಯಮಿತ ಯೋಜನೆಯನ್ನು  ರೂಪಿಸಿ ಇದರಡಿಯಲ್ಲಿ ಸುಮಾರು ಎಂಟು ಜೇನು ಕೃಷಿ ಸಂಯಮಿತ ಕೇಂದ್ರಗಳನ್ನು ದೇಶದಾದ್ಯಂತ ಪ್ರಾರಂಭಿಸಲಾಗಿದ್ದು ಈ ಕೇಂದ್ರಗಳು ಜೇನುನೊಣಗಳ ಸಂಶೋಧನೆ, ತರಬೇತಿ ಮತ್ತು ಜೇನುಸಾಕಣೆ ಬಗೆಗಿನ ಯೋಜನೆಗಳ ಪೂರ್ಣ ವಿಚಾರಗಳನ್ನು ನೀಡುತ್ತಿವೆ.

ಜೇನುಕೃಷಿ ಮುಖ್ಯವಾಗಿ ಕೃಷಿ ಬೆಳೆಗಳು, ತೋಟಗಾರಿಕಾ ಬೆಳೆಗಳು ಮತ್ತು ಕಾಡುಮರಗಳಿಂದ ಕೂಡಿದ ಗ್ರಾಮೀಣ ಪ್ರದೇಶಗಳಿಗೆ ಸೀಮಿತವಾಗಿದ್ದರೂ ನಗರ ಪ್ರದೇಶಗಳಲ್ಲಿ ಕಂಡು ಬರುತ್ತದೆ. ಜೇನುಕೃಷಿಯ ಅಭಿವೃದ್ಧಿ ಬೆಳವಣಿಗೆ ಹಂತದಲ್ಲಿದ್ದರೂ ಉತ್ತರದ ರಾಜ್ಯಗಳಾದ ಪಂಜಾಬ್, ಬಿಹಾರ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಪಶ್ಚಿಮ ಬಂಗಾಳ, ಹರಿಯಾಣ ಹಾಗೂ ದಕ್ಷಿಣ ರಾಜ್ಯಗಳಾದ ಕರ್ನಾಟಕ, ಕೇರಳ ರಾಜ್ಯಗಳಲ್ಲಿ ಚುರುಕಾಗಿದ್ದರೆ ಕೆಲವು ರಾಜ್ಯಗಳಾದ ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರಪ್ರದೇಶ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಸಾಮಾನ್ಯ ಹಂತದಲ್ಲಿದೆ.

ಭಾರತ ದೇಶ ಇತ್ತೀಚಿಗೆ ಪರಿಚಯಿಸಿದ ಯೂರೋಪಿಯನ್ ಜೇನುನೊಣವೂ ಸೇರಿದಂತೆ ಐದು ವಿಧದ ಜೇನು ನೊಣಗಳನ್ನು ಹೊಂದಿರುವ ಏಕೈಕ ದೇಶವಾಗಿದೆ. ಈ ದೇಶದ ಜೇನು ಪ್ರಭೇದಗಳೆಂದರೆ ಮುಜಂಟಿ ಜೇನು, ತುಡುವೆ ಜೇನು, ಕೋಲುಜೇನು, ಹೆಜ್ಜೇನು ಮತ್ತು ಯೂರೋಪಿಯನ್ ಜೇನು ನೊಣಗಳು. ೧೯೨೦ ರಲ್ಲಿ ಘೋಷ್‌ರವರು ಮೂರು ಯೋರೋಪಿಯನ್‌ ಜೇನು ಕುಟುಂಬಗಳನ್ನು ಇಟಲಿಯಿಂದ ತರಿಸಿ ಸುಮಾರು ೧೯೩೧ ರವರೆಗೂ ಸಾಕಣೆ ಮಾಡಿದರೂ ನಾಶವಾಗುತ್ತಿದ್ದವು. ಥಾಂಪ್‌ಸನ್‌ರವರು ೧೯೪೦ ರಲ್ಲಿ ಯೂರೋಪಿಯನ್ ಜೇನು ಕುಟುಂಬಗಳನ್ನು ಮಹಾಬಲೇಶ್ವರ ಮತ್ತು ಸುಮಾರು ಆರು ವರ್ಷಗಳ ನಂತರ ಅವುಗಳನ್ನು ಕೊಯಮತ್ತೂರಿಗೆ ಸ್ಥಳಾಂತರಿಸಿದರೂ ಉತ್ತಮ ಫಲಿತಾಂಶ ನೀಡದೆ ನಾಶವಾಗುತ್ತಿದ್ದವು. ರೆಹಮಾನ್ ಮತ್ತು ಸಿಂಗ್‌ರವರು ಯೂರೋಪಿಯನ್ ಜೇನು ಕುಟುಂಬಗಳನ್ನು ತುಡುವೆ ಜೇನು ಕುಟುಂಬಗಳೊಂದಿಗೆ ಬೆರೆಸಿದರೂ ಅವು ಪರಸ್ಪರ ಹೊಂದಾಣಿಕೆಯಾಗಲಿಲ್ಲ. ಈ ಪ್ರಭೇಧದ ರಾಣಿಯನ್ನು ತುಡುವೆ ಕುಟುಂಬಕ್ಕೆ ಸೇರಿಸಿ ಪ್ರಯತ್ನಿಸಿದರೂ ಪ್ರಾರಂಭದಲ್ಲಿ ಉತ್ತಮ ಪ್ರಗತಿ ಕಂಡರೂ ನಂತರ ಇಡೀ ಕುಟುಂಬವೇ ನಾಶವಾಯಿತು. ಈ ಜೇನು ನೊಣಗಳ ಪ್ರಗತಿ ೧೯೬೦ ರಲ್ಲಿ ಉನ್ನತ ಮಟ್ಟಕ್ಕೇರಿತು. ಯೂರೋಪಿಯನ್ ಜೇನು ನೊಣಗಳ ಸಂಕರಣ ತಳಿಗಳನ್ನು ಅಮೆರಿಕಾ ಮತ್ತು ಇಟಲಿ ದೇಶಗಳಿಂದ ೧೯೬೨ – ೬೪ ರಲ್ಲಿ ಹಿಮಾಚಲ ಪ್ರದೇಶ ರಾಜ್ಯದ ನಗ್ರೋಟದಲ್ಲಿ ಪರಿಚಯಿಸಲಾಯಿತು. ಈ ತಳಿಗಳ ರಾಣಿಗಳನ್ನು ತುಡುವೆ ಜೇನುಕುಟುಂಬದ ಜೇನುನೊಣಗಳೊಂದಿಗೆ ಒಂದುಗೂಡಿಸಲಾಯಿತು. ಅವುಗಳಲ್ಲಿ ಕ್ಯಾಲಿಫೋರ್ನಿಯ ಹಳದಿ ತಳಿ ಮತ್ತು ಸ್ಟಾರ್ ಲೈನ ತಳಿಗಳಿಂದ ಉತ್ತಮ ಪ್ರತಿಕ್ರಿಯೆ ಕಂಡುಬಂದರೂ ಯೂರೋಪಿಯನ್ ಜೇನುನೊಣಗಳನ್ನು ಸಾಕಣೆ ಮಾಡಲು ಹಂತ ಹಂತವಾಗಿ ಪ್ರಾರಂಭಿಸಲಾಯಿತು. ಈ ನೊಣಗಳಿಂದ ಜೇನು ಸಾಕಣೆ ದೇಶದಾದ್ಯಂತ ಪ್ರಗತಿಯಲ್ಲಿದ್ದು ಉತ್ತರದ ರಾಜ್ಯಗಳಾದ ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಬಿಹಾರ, ಹರಿಯಾಣ. ಪಂಜಾಬ್ ಮುಂತಾದ ರಾಜ್ಯದ ಪ್ರಮುಖ ಜೇನು ತುಪ್ಪ ಉತ್ಪಾದನೆ ಮತ್ತು ಬೆಳೆಗಳ ಪರಾಗಸ್ಪರ್ಶಿಗಳಾಗಿ ದಕ್ಷಿಣ ರಾಜ್ಯಗಳಾದ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳದಲ್ಲಿ ಈ ನೊಣದ ಸಾಕಣೆ ಪ್ರಗತಿಯಲ್ಲಿದೆ.

ತುಡುವೆ ಜೇನುನೊಣಗಳಲ್ಲಿ ಕೆಲವು ರೋಗಗಳು ಕಾಣಿಸಿಕೊಂಡರೂ ಸಾಮಾನ್ಯವಾಗಿ ಹೆಚ್ಚಿನ ನಷ್ಟವಾಗುತ್ತಿರಲಿಲ್ಲ. ಆದರೆ ೧೯೭೬ ರಲ್ಲಿ ಥೈಲ್ಯಾಂಡ್ ದೇಶದಲ್ಲಿ ಮೊಟ್ಟಮೊದಲಿಗೆ ಕಾಣಿಸಿಕೊಂಡ ಥೈಸ್ಯಾಕ್ ಭ್ರೂಡ್ ವೈರಸ್  ಎಂಬ ನಂಜುರೋಗವು ೧೯೭೮ ರಲ್ಲಿ ಭಾರತವನ್ನು ಪ್ರವೇಶಿಸಿ ಮೊದಮೊದಲು ಪೂರ್ವ ಈಶಾನ್ಯ ರಾಜ್ಯಗಳಲ್ಲಿ ನಂತರ ಉತ್ತರದ ರಾಜ್ಯಗಳಲ್ಲಿ ತೀವ್ರವಾಗಿ ತುಡುವೆ ಜೇನು ಕುಟುಂಬಗಳನ್ನು ನಾಶ ಮಾಡಿದುದಲ್ಲದೆ ಸುಮಾರು ೧೯೯೦ – ೯೨ ರಲ್ಲಿ ದಕ್ಷಿಣದ ರಾಜ್ಯಗಳಿಗೂ ಪ್ರವೇಶಿಸಿ ಇಡೀ ಕರ್ನಾಟಕ ರಾಜ್ಯದಲ್ಲೇ ಶೇ. ೮೦ ರಿಂದ ೯೦ ರಷ್ಟು ಸಾಕುವ ಮತ್ತು ನೈಸರ್ಗಿಕ ತುಡುವೆ ಜೇನು ಕುಟುಂಬಗಳನ್ನು ನಾಶಮಾಡಿತು. ಜೇನುಕೃಷಿತಜ್ಞರು ಕೆಲವು ನಿಯಂತ್ರಣ ಕ್ರಮಗಳತ್ತ ಸಂಶೋಧನೆ ನಡೆಸಿದರೂ ಸಹ ರೋಗವು ಸ್ವಲ್ಪ ಮಟ್ಟಿಗೆ ಕಾಣಿಸಿಕೊಳ್ಳುತ್ತಿದ್ದು ತುಡುವೆ ಜೇನು ನೊಣಗಳಿಗೆ ಕಮಠಕವಾಗಿದೆ. ಇದರಿಂದಾಗಿ ಭಾರತದಲ್ಲಿ ಜೇನು ಕೃಷಿಕರು ನಷ್ಟವನ್ನು ಅನುಭವಿಸಿ ಕಂಗಾಲಾಗಿದ್ದಾರೆ. ಉತ್ತರದ ರಾಜ್ಯಗಳಲ್ಲಿ ಜೇನು ಕೃಷಿಕರು ಯೂರೋಪಿಯನ್ ಜೇನುನೊಣಗಳ ಸಾಕಣೆಯತ್ತ ಹೆಜ್ಜೆ ಇಟ್ಟಿದ್ದರೂ, ದಕ್ಷಿಣದ ರಾಜ್ಯಗಳಲ್ಲಿ ಈ ನೊಣಗಳು ಪ್ರಗತಿ ಪಥದಲ್ಲಿ ಕೆಲಸ ಮಾಡದೆ ಇರುವುದರಿಂದ ಸ್ಥಳೀಯ ವಾತಾವರಣಕ್ಕೆ ಒಗ್ಗಿಸುವುದಲ್ಲದೆ ತುಡುವೆ ಜೇನುನೊಣಗಳ ನಂಜು ರೋಗದ ನಿಯಂತ್ರಣದ ಬಗ್ಗೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ರೋಗಬಾಧೆಯಿಂದಾಗಿ ಭಾರತದಲ್ಲಿ ಜೇನುತುಪ್ಪದ ಉತ್ಪಾದನೆ ಕುಸಿಯಲು ಕಾರಣವಾಗಿದೆ. ಸಾಮಾನ್ಯವಾಗಿ ಅನೇಕ ರೈತರು ಸರಳ ಮತ್ತು ಸಾಮಾನ್ಯ ವರ್ಗದವರಾಗಿದ್ದು ಕೃಷಿಯ ಜೊತೆಗೆ ಜೇನುಕೃಷಿಯ ಉಪಕಸುಬಾಗಿದ್ದು ಜೇನು ಕುಟುಂಬಗಳ ಸಂಖ್ಯೆಯನ್ನು ಹೆಚ್ಚಿಸಿ ಆಹಾರದ ಲಭ್ಯತೆಗೆ ಅನುಸಾರವಾಗಿ ಸ್ಥಳಾಂತರಿಸಿ ಜೇನುಸಾಕಾಣಿಕೆಯನ್ನು ಮಾಡಲಾಗುತ್ತಿದೆ.

ಕರ್ನಾಟಕ ರಾಜ್ಯದಲ್ಲಿ ಜೇನು ಕೃಷಿ : ಕರ್ನಾಟಕ ರಾಜ್ಯದ ವಿಶಾಲವಾದ ಪಶ್ಚಿಮಘಟ್ಟಗಳು ಮತ್ತು ಮೈದಾನಪ್ರದೇಶಗಳು ಸಸ್ಯ ಸಂಪತ್ತಿನಿಂದ ಕೂಡಿ ವರ್ಷವಿಡೀ ಉತ್ತಮ ಪರಾಗ ಮತ್ತು ಮಕರಂದವನ್ನು ಜೇನು ನೊಣಗಳಿಗೆ ಒದಗಿಸುತ್ತವೆ. ಇದರಿಂದಾಗಿ ಜೇನು ಸಾಕಾಣಿಕೆ ಮಲೆನಾಡು ಮತ್ತು ಕರಾವಳಿ ಪ್ರದೇಶಗಳು ಸೇರಿದಂತೆ ಎಲ್ಲಾ ಭಾಗಗಳಲ್ಲಿ ಕಂಡು ಬರುತ್ತದೆ.

ಸ್ವಾತಂತ್ರ್ಯಪೂರ್ವ : ಪ್ರಾಚೀನ ಕಾಲದಿಂದಲೂ ಕರ್ನಾಟಕದಲ್ಲಿ ತುಡುವೆ ಜೇನುನೊಣಗಳ ಸಾಕಾಣಿಕೆ ರೂಢಿಯಲ್ಲಿದ್ದು, ನ್ಯೂಟನ್‌ರ ಜೇನು ಪೆಟ್ಟಿಗೆಯ ಆವಿಷ್ಕಾರದಿಂದಾಗಿ ಸ್ಥಳಾಂತರೀ ಚೌಕಟ್ಟುಗಳಿಂದ ಕೂಡಿದ ಪೆಟ್ಟಿಗೆಗಳಲ್ಲಿ ಜೇನು ಸಾಕಾಣಿಕೆಯನ್ನು ಪ್ರಾರಂಭಿಸಲಾಯಿತು. ೨೦ ನೇ ಶತಮಾನದ ಆದಿಯಲ್ಲಿ ಡಾ. ಕುನ್ನೀಕಣ್ಣನ್ ಎಂಬ ಕೀಟಶಾಸ್ತ್ರಜ್ಞರು ಜೇನು ಕೃಷಿ ತರಬೇತಿ ಮತ್ತು ಪ್ರದರ್ಶನ ಕಾರ್ಯಕ್ರಮಗಳ ಮೂಲಕ ಅಂದಿನ ಮೈಸೂರು ರಾಜ್ಯದಲ್ಲಿ ಆಧುನಿಕ ಜೇನು ಕೃಷಿ ಪ್ರಚಾರ ಕೈಗೊಂಡರು. ಇದೇ ಕಾಲದಲ್ಲಿ ಬೆಂಗಳೂರು ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ೧೯೨೭ ರಲ್ಲಿ ಮಧುವನದ ಜೊತೆಗೆ ಒಂದು ಜೇನು ಕೃಷಿ ತರಬೇತಿ ಕೇಂದ್ರವನ್ನು ಪ್ರಾರಂಭಿಸಲಾಯಿತು. ೧೯೨೮ ರಲ್ಲಿ ರಾಮಕೃಷ್ಣ ಆಶ್ರಮದ ಸ್ವಾಮಿ ಶಾಂಭವನಂದಾಜಿಯವರ ಪ್ರಯತ್ನದಿಂದಾಗಿ ಒಂದು ಜೇನುಕೃಷಿ ತರಬೇತಿ ಕೇಂದ್ರವನ್ನು ಕೊಡಗು ಜಿಲ್ಲೆಯ ಪೊನ್ನಂಪೇಟೆಯಲ್ಲಿ ಪ್ರಾರಂಭಿಸಲಾಯಿತು. ರಾಜ್ಯದಲ್ಲಿ ಮೊಟ್ಟ ಮೊದಲಿಗೆ ಪ್ರಾರಂಭವಾದ ಜೇನು ಕೃಷಿಕರ ಸಹಕಾರ ಸಂಘ ವಿರಾಜಪೇಟೆಯಲ್ಲಿ ೧೯೩೬ ರಲ್ಲಿ ಸ್ಥಾಪನೆಗೊಂಡ ಕೊಡಗಿನ ಜೇನುತುಪ್ಪ ಮತ್ತು ಜೇನು ಮೇಣ ಬೆಳೆಗಾರರ ಸಹಕಾರ ಸಂಘವಾಗಿ ಇಂದಿಗೂ ಕಾರ್ಯನಿರ್ವಹಿಸುತ್ತಿದೆ. ಹಾಸನದ ಸಕಲೇಶಪುರದಲ್ಲಿ ಜೇನು ಸಹಕಾರ ಸಂಘವು ೧೯೪೦ ರಲ್ಲಿ ಪ್ರಾರಂಭವಾಯಿತು. ಇದು ರಾಜ್ಯದ ದೊಡ್ಡ ಸಂಘವಾಗಿದ್ದು ಇದರಲ್ಲಿನ ಸದಸ್ಯರ ಸಂಖ್ಯೆ ಸುಮಾರು ೩೦೦೦ ಕ್ಕೂ ಮೀರಿದೆ. ಕರಾವಳಿ ಪ್ರದೇಶದಲ್ಲಿನ ಜೇನು ಸಹಕಾರ ಸಂಘಗಳು ಹೊನ್ನಾವರ, ಪುತ್ತೂರು, ಕುಮುಟ, ಕಾರವಾರ ಮತ್ತು ಅಂಕೋಲಗಳಲ್ಲಿ ಕಂಡುಬರುತ್ತವೆ. ಇವುಗಳಲ್ಲಿ ಹೊನ್ನಾವರ ಜೇನು ಸಹಕಾರ ಸಂಘ ೧೯೪೧ ರಲ್ಲಿ ಪ್ರಾರಂಭವಾಗಿ, ಸುಮಾರು ೧೬೦೦ ಜೇನು ಕೃಷಿಕರ ಸದಸ್ಯತ್ವವನ್ನು ಪಡೆದಿದೆ.

ಸ್ವಾತಂತ್ಯ್ರಾ ನಂತರ : ಕರ್ನಾಟಕ ರಾಜ್ಯದಲ್ಲಿ ಜೇನುಕೃಷಿಯ ಅವಶ್ಯಕತೆಯನ್ನು ಅರಿತು ಇದರ ತರಬೇತಿಯ ಬಗ್ಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತಿದ್ದು ಕೊಡಗಿನ ಭಾಗಮಂಡಲದಲ್ಲಿ ೧೯೪೮ ರಲ್ಲಿ ಕೃಷಿ ಇಲಾಖೆ ವತಿಯಿಂದ ಜೇನುಕೃಷಿ ತರಬೇತಿ ಕೇಂದ್ರವನ್ನು ಸ್ಥಾಪಿಸಲಾಯಿತು. ಕರ್ನಾಟಕ ರಾಜ್ಯವು, ಜೇನು ಕೃಷಿ ಸಹಕಾರ ಸಂಘಗಳಿಂದ ಜೇನು ಕೃಷಿಯನ್ನು ಅಭಿವೃದ್ಧಿ ಮಾಡುತ್ತಿರುವ ಭಾರತದಲ್ಲಿ ಪ್ರಧಾನ ರಾಜ್ಯವಾಗಿದೆ. ರಾಜ್ಯದಲ್ಲಿ ೧೪ ಜೇನು ಕೃಷಿಕರ ಸಹಕಾರ ಸಂಘಗಳಿದ್ದು ಸುಮಾರು ೨೧,೨೦೦ ಜೇನು ಕೃಷಿಕರು ಸದಸ್ಯರಾಗಿ ಜೇನು ಕೃಷಿಯಲ್ಲಿ ತೊಡಗಿರುತ್ತಾರೆ. ಈ ಸಹಕಾರ ಸಂಘಗಳು ಜೇನುಕೃಷಿಯಲ್ಲಿ ಆಸಕ್ತಿಯುಳ್ಳವರಿಗೆ ಮಾರ್ಗದರ್ಶನವನ್ನು ನೀಡುವುದಲ್ಲದೆ ಜೇನುಕೃಷಿಗೆ ಸಂಭಂಧಿಸಿದಂತೆ ರಿಯಾಯತಿ ದರದಲ್ಲಿ ಆರ್ಥಿಕ ನೆರವು, ಅಗತ್ಯವಾದ ಉಪಕರಣಗಳು ಮತ್ತು  ಜೇನುತುಪ್ಪವನ್ನು ಮಾರಾಟ ಮಾಡಲು ಸಹಾಯ ಮಾಡುತ್ತಿವೆ. ಪುತ್ತೂರಿನ ದಕ್ಷಿಣ ಕನ್ನಡ ಜೇನುವ್ಯವಸಾಯಗಾರರ ಸಹಕಾರ ಸಂಘ ‘ಮಧುಪ್ರಪಂಚ’ ಎಂಬ ಕನ್ನಡ ತ್ರೈಮಾಸಿಕ ಪತ್ರಿಕೆಯನ್ನು  ಕೆಲವು ದಶಕಗಳಿಂದ ಪ್ರಕಟಿಸಿದ್ದು ಇದು ರಾಜ್ಯದ ಮಾತೃ ಭಾಷೆಯಲ್ಲಿ ಜೇನು ಕೃಷಿಕರ ಮಾಹಿತಿಯನ್ನು ನೀಡುತ್ತಿರುವ ನಿಯತಕಾಲಿಕೆಯಾಗಿದೆ. ಕೆಲವು ವರ್ಷಗಳಿಂದ  ಪುಣೆಯ  ಅಖಿಲ ಭಾರತ ಜೇನುಕೃಷಿಕರ ಸಂಘವು ಕನ್ನಡದಲ್ಲಿ ಭಾರತೀಯ ಜೇನುಕೃಷಿ ಪತ್ರಿಕೆಯನ್ನು ಪ್ರಕಟಿಸುತ್ತಿದ್ದು ರಾಜ್ಯದ ಜೇನುಕೃಷಿಕರಿಗೆ  ವೈಜ್ಞಾನಿಕ ಮಾಹಿತಿಯನ್ನು ನೀಡುತ್ತಿದೆ. ಕರ್ನಾಟಕ ಸರ್ಕಾರದ ಜೇನುಕೃಷಿ ಅಭಿವೃದ್ಧಿ ವಿಭಾಗ ಮೊದಲು ರಾಜ್ಯ ಕೃಷಿ ಇಲಾಖೆಯ ಕೀಟಶಾಸ್ತ್ರ ವಿಭಾಗದಲ್ಲಿದ್ದು ನಂತರ ಇದನ್ನು ತೋಟಗಾರಿಕೆ ಇಲಾಖೆಗೆ ನಂತರ ಪಶುಪಾಲನಾ ಇಲಾಖೆಗೆ ವರ್ಗಾಯಿಸಿ ೧೯೬೨ ರಿಂದ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ  ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದೆ.

ಕರ್ನಾಟಕ ರಾಜ್ಯದಲ್ಲಿ ಜೇನು ಕೃಷಿ ಅವಲಂಬಿಸಿರುವ ಪ್ರದೇಶಗಳು

ರಾಜ್ಯದಲ್ಲಿ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಅಡಿಯಲ್ಲಿ ೩೨ ಜೇನುಕೃಷಿ ಪ್ರದರ್ಶನಾ ಕೇಂದ್ರಗಳು ಕಾರ್ಯನಿರತವಾಗಿದ್ದು, ಪ್ರತಿಯೊಂದು ಪ್ರದರ್ಶನ ಕೇಂದ್ರಕ್ಕೂ ಒಂದು ಮಧುವನವಿರುತ್ತದೆ. ಅಲ್ಲದೆ ೨೯ ವಿದ್ಯಾರ್ಥಿ ಏಪಿಸ್ ಕ್ಲಬ್‌ಗಳು ಕೊಡಗು ಜಿಲ್ಲೆಯ ಶಾಲೆಗಳಲ್ಲಿರುತ್ತವೆ. ಪಶ್ಚಿಮಘಟ್ಟ ಪ್ರದೇಶದ ಅಭಿವೃದ್ಧಿ ಯೋಜನೆಯಡಿಯಲ್ಲಿ ೧೬ ಜೇನು ಸಾಕಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು ಈ ಯೋಜನೆಯಡಿಯಲ್ಲಿ ೪೦೦೦ ಜೇನು ಕುಟುಂಬಗಳನ್ನು ಬಡ ಜನರು ಮತ್ತು ಜೇನುಕೃಷಿಯಲ್ಲಿ ಆಸಕ್ತಿಯುಳ್ಳವರಿಗೆ ಶೇಕಡಾ ೫೦ ರ ರಿಯಾಯತಿ ದರದಲ್ಲಿ ನೀಡಲಾಗಿದೆ. ಕೇಂದ್ರೀಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ತರಬೇತಿ ಪಡೆದ ವಿಸ್ತರಣಾ ಸಿಬ್ಬಂದಿಯನ್ನು ಒಳಗೊಂಡಿದ್ದು ಅನೇಕ ಜೇನುಸಾಕಾಣಿಕಾ ಉಪಕೇಂದ್ರಗಳು, ಮಾದರಿ ಮಧುವನಗಳು, ಶಾಲಾ ಮಧುವನಗಳು, ವಾಣಿಜ್ಯ ಮಧುವನಗಳು, ಸಸ್ಯಮಯ ಮಧುವನಗಳು ಮತ್ತು ಮರಿಜೇನು ಸಾಕಣೆ ಕೇಂದ್ರಗಳನ್ನು ಸ್ಥಾಪಿಸಿವೆ. ಇದು ೧೯೭೮ – ೭೯ ರಲ್ಲಿ ೨೪ ಸಸ್ಯಮಯ ಮಧುವನ, ಎರಡು ಮಾದರಿ ಮಧುವನ ಮತ್ತು ಮರಿಕುಟುಂಬ ಸಾಕಾಣೆ ಕೇಂದ್ರಗಳು ಮತ್ತು ೬೪ ಶಾಲಾ ಘಟಕಗಳನ್ನು ಸ್ಥಾಪಿಸಿದೆ.

ಕರ್ನಾಟಕ ಸರ್ಕಾರದ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ರಾಜ್ಯದಲ್ಲಿನ ಜೇನು ಕೃಷಿ ಅಭಿವೃದ್ಧಿ ಮತ್ತು ತರಬೇತಿ ಮುಖ್ಯ ಕೇಂದ್ರವಾಗಿದ್ದು, ಆಸಕ್ತಿಯುಳ್ಳ ಜೇನುಕೃಷಿಕರಿಗೆ ಹಣಕಾಸಿನ ಸಹಾಯ, ಮಾರುಕಟ್ಟೆಯ ಜಾಲ, ತರಬೇತಿ ಮತ್ತು ವಿಚಾರ ಸಂಕೀರ್ಣಗಳನ್ನು ಏರ್ಪಡಿಸುವುದರೊಂದಿಗೆ ಜೇನು ಕೃಷಿಗೆ ಶ್ರಮಿಸುತ್ತಿದೆ. ೧೯೯೦ ರ ನಂತರದಲ್ಲಿ ‘ಥಾಯ್‌ಸ್ಯಾಕ ಬ್ರೂಡ್’ ನಂಜುರೋಗದಿಂದ ಉಂಟಾದ ನಷ್ಟವನ್ನು ನೀಗಿಸಲು ಈ ಇಲಾಖೆ ರಾಜ್ಯದ ಜೇನುತಜ್ಞರೊಂದಿಗೆ ಯೋಜನೆಗಳನ್ನು ರೂಪಿಸಿ ರೋಗ ನಿಯಂತ್ರಣದ ಜೊತೆಗೆ ಅದೇ ರೋಗ ರಹಿತ ಯೂರೋಪಿಯನ್ ಜೇನುನೊಣಗಳನ್ನು ಸಾಕಣೆ ಮಾಡಲು ಪ್ರಯತ್ನಿಸುತ್ತಿದೆ. ಇದು ವಿಶ್ವ ಆಹಾರ ಮತ್ತು ಕೃಷಿ ಸಂಸ್ಥೆಯ ಯೋಜನೆಯಡಿಯಲ್ಲಿ ರಾಜ್ಯದಲ್ಲಿ ಏಳು ಪ್ರದರ್ಶನಾ ಮಧುವನಗಳನ್ನು ಸ್ಥಾಪಿಸಿ ತರಬೇತಿ ಮತ್ತು ರೋಗರಹಿತ ಜೇನು ಕುಟುಂಬಗಳನ್ನು ಒದಗಿಸುತ್ತಿದೆ. ಈ ಯೋಜನೆಯಡಿಯಲ್ಲಿ ಯೂರೋಪಿಯನ್ ಜೇನುನೊಣವನ್ನು ರಾಜ್ಯದಲ್ಲಿ ಯಶಸ್ವಿಯಾಗಿ ಸಾಕಣೆ ಮಾಡಲು ಪ್ರಯತ್ನಿಸಲಾಗಿದೆ.

ರಾಜ್ಯದಲ್ಲಿ ಜೇನು ಕೃಷಿ ಪ್ರದೇಶಗಳನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದೆ (ಚಿತ್ರ ೨) ಅವುಗಳೆಂದರೆ ಪ್ರಧಾನ ಜೇನುಕೃಷಿ ಪ್ರದೇಶ, ಸಾಮಾನ್ಯ ಜೇನುಕೃಷಿ ಪ್ರದೇಶ, ಕಡಿಮೆ ಜೇನು ಕೃಷಿ ಪ್ರದೇಶ ಮತ್ತು ವಿರಳ ಜೇನು ಕೃಷಿ ಪ್ರದೇಶಗಳು. ಪ್ರಧಾನ ಜೇನು ಕೃಷಿಯ ಜಿಲ್ಲೆಗಳಿಂದ ಕೊಡಗು, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ ಮತ್ತು ಉತ್ತರ ಕನ್ನಡ. ಸಾಮಾನ್ಯ ಜೇನು ಕೃಷಿ ಪ್ರದೇಶಗಳೆಂದರೆ ಬೆಂಗಳೂರು, ಚಾಮರಾಜನಗರ, ಮೈಸೂರು, ಶಿವಮೊಗ್ಗ, ಹಾವೇರಿ, ಧಾರವಾಡ, ಗದಗ ಮತ್ತು ಬೆಳಗಾಂ ಜಿಲ್ಲೆಗಳು. ಕಡಿಮೆ ಜೇನು ಕೃಷಿ ಪ್ರದೇಶಗಳೆಂದರೆ ಕೋಲಾರ, ತುಮಕೂರು, ಚಿತ್ರದುರ್ಗ, ಡಾವಣಗೆರೆ, ಬಳ್ಳಾರಿ, ಕೊಪ್ಪಳ, ಬಾಗಲಕೋಟೆ, ಬೀದರ್ ಮತ್ತು ಬಿಜಾಪುರ ಜಿಲ್ಲೆಗಳ ಕೆಲವು ಭಾಗಗಳು. ಆದರೆ ಗುಲ್ಬರ್ಗಾ, ರಾಯಚೂರು ಮತ್ತು ಬಿಜಾಪುರದ ಕೆಲವು ಪ್ರದೇಶಗಳಲ್ಲಿ ಜೇನು ಸಾಕಾಣಿಕೆಯು ಅತಿ ವಿರಳವಾಗಿದೆ. ರಾಜ್ಯದ ತುಡುವೆ ಜೇನು ನೊಣಗಳಲ್ಲಿ ಎರಡು ತಳಿಗಳಿದ್ದು ಅವುಗಳಲ್ಲಿ ಹಳದಿ ಬಣ್ಣದ ತಳಿ ಸಾಮಾನ್ಯವಾಗಿ ಮೈದಾನ ಪ್ರದೇಶಗಳಲ್ಲಿ ಮತ್ತು ಬಣ್ಣದ ತಳಿ ಮೈದಾನ ಮತ್ತು ಮಲೆನಾಡು ಪ್ರದೇಶಗಳಲ್ಲಿ ಮತ್ತು ಕಪ್ಪು ಬಣ್ಣದ ತಳಿ ಮೈದಾನ ಮತ್ತು ಮಲೆನಾಡು ಪ್ರದೇಶಗಳೆರಡರಲ್ಲೂ ಕಂಡು ಬರುತ್ತವೆ.

೧೯೯೦ರ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ಯೂರೋಪಿಯನ್ ಜೇನುನೊಣಗಳನ್ನು ದಕ್ಷಿಣ ಭಾರತದಲ್ಲಿ ಅದರಲ್ಲೂ ಪ್ರಪ್ರಥಮವಾಗಿ ಕರ್ನಾಟಕದಲ್ಲಿ ಸಾಕಣೆ ಮಾಡಲು ಪ್ರಯತ್ನಿಸಿತು. ಮೊದಲ ಹಂತದಲ್ಲಿ ಪರತಂತ್ರ ನುಸಿ ಟ್ರೋಫಿಲೀಲ್ಯಾಪ್ಸ್ ಕ್ಲಾರಿಯೆ ಹಾವಳಿಯಿಂದಾಗಿ ಹೆಚ್ಚಿನ ಅಭಿವೃದ್ಧಿ ಸಾಧ್ಯವಾಗದೆ ನಂತರ ಆಹಾರದ ಕೊರತೆ ಮತ್ತು ವಾತಾವರಣಕ್ಕೆ ಹೊಂದಿಕೊಳ್ಳದೆ ಜೇನು ಕುಟುಂಬಗಳ ಅಭಿವೃದ್ಧಿ ಸ್ಥಗಿತಗೊಂಡಿತು. ದಕ್ಷಿಣ ಕನ್ನಡ ಜೇನುಕೃಷಿಕರ ಸಹಕಾರ ಸಂಘ ೧೯೯೩ ರಲ್ಲಿ ಪಶ್ಚಿಮ ಬಂಗಾಳದಿಂದ ೮೦ ಯೂರೋಪಿಯನ್ ಜೇನು ಕುಟುಂಬಗಳನ್ನು ತರಿಸಿ ಸಾಕಣೆ ಮಾಡಿದರೂ ವಾತಾವರಣಕ್ಕೆ ಹೊಂದಿಕೊಳ್ಳದೆ ನಾಶವಾದವು. ರಾಜ್ಯದ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಪಂಜಾಬ್ ರಾಜ್ಯದಿಂದ ೮೫ ಜೇನು ಕುಟುಂಬಗಳನ್ನು ೧೯೯೫ ರಲ್ಲಿ ತರಿಸಿ ರಾಜ್ಯದ ವಿವಿಧ ಭಾಗಗಳಲ್ಲಿ ಪರಿಚಯಿಸಿದರು. ಅನಂತರ ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಜಿಲ್ಲಾ ಪಂಚಾಯಿತಿಗಳು ೧೯೯೬ ರಲ್ಲಿ ಉತ್ತರ ಭಾರತದ ವಿವಿಧ ಭಾಗಗಳಿಂದ ಯೂರೋಪಿಯನ್ ಜೇನುಕುಟುಂಬಗಳನ್ನು ಪರಿಚಯಿಸಿ ಇತ್ತೀಚಿನ ದಿನಗಳಲ್ಲಿ ಈ ನೊಣಗಳು ಪರಿಸರಕ್ಕೆ ಹೊಂದಿಕೊಂಡು ಸಾಮಾನ್ಯ ಮಟ್ಟದಲ್ಲಿ ಜೇನುತುಪ್ಪವನ್ನು ಸಂಗ್ರಹಿಸುತ್ತಿರುವುದಲ್ಲದೆ ಅನೇಕ ಆಹಾರ ಬೆಳೆಗಳ ಪರಾಗಸ್ಪರ್ಶಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿವೆ.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯವೂ ಸೇರಿದಂತೆ, ಬೆಂಗಳೂರು ವಿಶ್ವ ವಿದ್ಯಾಲಯ, ಧಾರವಾಡ ಕೃಷಿ ವಿಶ್ವವಿದ್ಯಾಲಯ, ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಮತ್ತು ಇತರ ಖಾಸಗಿ ಸಂಸ್ಥೆಗಳು ಜೇನುಕೃಷಿ ಸಂಶೋಧನೆಯಲ್ಲಿ ತೊಡಗಿವೆ. ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ ಕೀಟಶಾಸ್ತ್ರ ವಿಭಾಗವು ಬೆಂಗಳೂರು ‘ಬೀಕೀಪರ್ಸ್ ಅಸೋಸಿಯೇಶನ್’ ಸ್ಥಾಪಿಸುವುದರ ಮೂಲಕ ಜೇನು ಕೃಷಿಕರನ್ನು ಒಟ್ಟುಗೂಡಿಸಿ ಜೇನುಕೃಷಿಯ ಕಾರ್ಯಕ್ರಮಗಳನ್ನು ಚರ್ಚಿಸಿ ಯೋಜನೆಗಳ ಮೂಲಕ ಜೇನುಕೃಷಿಗೆ ಚಾಲನೆ ನೀಡಿದೆ. ೧೯೯೬ ರಲ್ಲಿ ಭಾರತದಲ್ಲಿಯೇ ಪ್ರಪ್ರಥಮ ಬಾರಿಗೆ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರತ್ಯೇಕ ಜೇನುಕೃಷಿ ವಿಭಾಗವು ಪ್ರಾರಂಭವಾಗಿದ್ದು ಜೇನುಕೃಷಿಯಲ್ಲಿ ಸ್ನಾತಕೋತ್ತರ ಪದವಿಗಳನ್ನು ಪ್ರಾರಂಭಿಸುವುದರ ಮೂಲಕ ಜೇನುಕೃಷಿ ಶಿಕ್ಷಣ, ಸಂಶೋಧನೆ ಮತ್ತು ವಿಸ್ತರಣಾ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಈ ವಿಭಾಗವು ಭಾರತ ಸರ್ಕಾರದ ಕೃಷಿ ಮತ್ತು ಸಹಕಾರ ಸಚಿವಾಲಯ, ರಾಷ್ಟ್ರೀಯ ತೋಟಗಾರಿಕಾ ಮಂಡಳಿ, ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಸಂಸ್ಥೆ (ಸಿ.ಎಸ್.ಐ.ಆರ್), ಕೃಷಿ ಇಲಾಖೆಗಳೂ ಸೇರಿದಂತೆ ರಾಜ್ಯ ಸರ್ಕಾರದ ಪರಿಸರ ಮತ್ತು ಜೀವಶಾಸ್ತ್ರ ಇಲಾಖೆ ಮತ್ತು ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಗಳು ಸಂಶೋಧನಾ ಯೋಜನೆಗಳ ಆರ್ಥಿಕ ಸಹಾಯದಿಂದ ಅಗತ್ಯ ಜೇನುಕೃಷಿ ಸಂಶೋಧನೆಗಳನ್ನು ನಡೆಸುತ್ತಿದೆ. ಈ ವಿಭಾಗವು ಇತ್ತೀಚಿಗೆ ಜರ್ಮನಿಯ ಬ್ರೆಮನ್ ವಿಶ್ವವಿದ್ಯಾನಿಲಯದೊಂದಿಗೆ ಉನ್ನತ ಸಂಶೋಧನೆ ನಡೆಸಲು ಒಪ್ಪಂದ ಮಾಡಿಕೊಂಡಿದೆ. ಜೇನುಕೃಷಿಯ ಬಗ್ಗೆ ಮಾಹಿತಿಯನ್ನು ಆಂಗ್ಲ ಮತ್ತು ಕನ್ನಡ ಭಾಷೆಯಲ್ಲಿ ಅನೇಕ ಕಿರುಹೊತ್ತಿಗೆಗಳನ್ನು ಹೊರತಂದಿರುವ ಈ ವಿಭಾಗವು ರಾಜ್ಯದಲ್ಲಿ ಜೇನುಕೃಷಿಕರ ಬೇಡಿಕೆಗಳನ್ನು ಈಡೇರಿಸುವ ಕೇಂದ್ರವಾಗಿದೆ. ಈ ವಿಭಾಗವು ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ವಿಚಾರ ಸಂಕೀರಣ ಮತ್ತು ಕಾರ್ಯಗಾರಗಳನ್ನು ನಡೆಸುತ್ತಾ ಬಂದಿದ್ದು ಅನೇಕ ಯೋಜನೆಗಳಡಿಯಲ್ಲಿ ಜೇನುಕೃಷಿ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಜೇನು ಕೃಷಿಕರ ಸಾಮಾಜಿಕ ಮತ್ತು ಆರ್ಥಿಕ ಮಟ್ಟ : ಜೇನು ಕೃಷಿಯಲ್ಲಿ ಯುವಕರು ಮತ್ತು ಮಹಿಳೆಯರು ನಿರತರಾಗಿರುತ್ತಾರೆ. ಸಾಮಾನ್ಯವಾಗಿ ಪುರುಷರು ತರಬೇತಿ ಪಡೆದವರಾಗಿದ್ದು ಜೇನು ಕೃಷಿಯನ್ನು ಆಧುನಿಕ ರೀತಿಯಲ್ಲಿ ಸ್ವತಂತ್ರವಾಗಿ ಮಾಡಬಲ್ಲವರಾಗಿದ್ದಾರೆ. ಆದರೆ ಜೇನುಕೃಷಿಕರು ಅತಿ ಸಣ್ಣಪ್ರಮಾಣದ ರೈತರಾಗಿದ್ದು ಜೇನುಕೃಷಿ ಉಪಕಸಬಾಗಿರುತ್ತದೆ. ಜೇನುಬೇಟೆಗಾರರು ಮುಖ್ಯವಾಗಿ ಕಾಡಿನಲ್ಲಿ ವಾಸಿಸುವ ಬಡ ಹಿಂದುಳಿದ ವರ್ಗದವರಾಗಿರುತ್ತಾರೆ. ಇವರ ವಾರ್ಷಿಕ ಆದಾಯವು ೪೦೦೦ ರಿಂದ ೫೦೦೦ ರೂಪಾಯಿಗಳು ಮಾತ್ರ. ಜೇನು ತುಪ್ಪದ ಬೇಟೆಯು ಕಾಡಿನ ಪ್ರದೇಶಗಳಲ್ಲಿ ಸಾಮಾನ್ಯವಾಗಿದ್ದು ಜೇನು ಕೃಷಿಕರು ಜೇನು ಪೆಟ್ಟಿಗೆಗಳ ಜೊತೆಗೆ ಮಣ್ಣಿನ ಮಡಿಕೆಗಳಲ್ಲಿಯೂ ಸಹ ಜೇನು ನೊಣಗಳನ್ನು ಸಾಕುತ್ತಿದ್ದಾರೆ. ಜೇನು ಬೇಟೆಗಾರರು ಗುತ್ತಿಗೆದಾರರಿಂದ ನೇಮಕಗೊಂಡು ಅವರು ಸಂಗ್ರಹಿಸುವ ಜೇನುತುಪ್ಪವನ್ನು ಗುತ್ತಿಗೆದಾರರಿಗೆ ನೀಡಿ ಸಂಗ್ರಹಣೆಗೆ ತಕ್ಕಂತೆ ಹಣವನ್ನು ಪಡೆಯುತ್ತಾರೆ. ಆನಂತರ ಗುತ್ತಿಗೆದಾರರು ಜೇನು ಕೃಷಿ ಸಹಕಾರ ಸಂಘಗಳಿಗೆ ಜೇನು ತುಪ್ಪವನ್ನು ಮಾರಾಟ ಮಾಡುವರು. ಮಲೆನಾಡು ಪ್ರದೇಶದಲ್ಲಿ ಜೇನುಕೃಷಿಕರ ಆರ್ಥಿಕ ಮಟ್ಟ ಹೆಚ್ಚಿದಾಗಿದ್ದರೂ ಅನೇಕರು ಉಪಕಸುಬಾಗಿ ತೋಟಗಳಲ್ಲಿಟ್ಟು ಸಾಕುತ್ತಿದ್ದಾರೆ. ಮೈದಾನ ಪ್ರದೇಶದಲ್ಲಿಯೂ ಅನೇಕ ರೈತರು ತಮ್ಮ ಬೆಳೆಗಳ ಪರಾಗಸ್ಪರ್ಶಕ್ರಿಯೆಗೆಂದು ಜೇನುನೊಣಗಳನ್ನು ಸಾಕುವ ಪರಿಪಾಠವಿದೆ.