ಪುರಾತನ ಕಾಲದಲ್ಲಿ ಜೇನು ಬೇಟೆಗಾರರು ಮರಗಳನ್ನು ಹತ್ತಿ  ಜೇನುಗೂಡುಗಳನ್ನು ತೆಗೆಯಲು ಉದ್ದವಾದ ಬಿದುರಿನ ಏಣಿ, ಜೇನಿನ ಎರಿಯನ್ನು ಕತ್ತರಿಸಲು ಚೂಪಾದ ಬಿದುರಿನ ತಗಡು. ಶೇಖರಿಸಲು ಬಿದಿರಿನ  ಬುಟ್ಟಿಗಳನ್ನು ಮತ್ತು  ನೊಣಗಳಿಂದ ಚುಚ್ಚಿಸಿಕೊಳ್ಳುವುದನ್ನು ತಪ್ಪಸಿಕೊಳ್ಳಲು ತಲೆಯ ರಕ್ಷಣೆಗೆ ಟೋಪಿಯನ್ನು ಧರಿಸುತ್ತಿದ್ದರು. ಎರಿಗಳನ್ನು ಶೇಖರಿಸಿದ ಬುಟ್ಟಯನ್ನು ಹಗ್ಗದ ಸಹಾಯದಿಂದ ಮರದ ಮೇಲಿಂದ ಇಳಿಬಿಡುತ್ತಿದ್ದರು. ಗೂಡಿನಿಂದ ನೊಣಗಳನ್ನು ಓಡಿಸಲು ಮತ್ತು ಅವುಗಳ ಚುಚ್ಚುವಿಕೆಯನ್ನು ತಪ್ಪಿಸಿಕೊಳ್ಳಲು ಒಣಗಿದ ಎಲೆಗಳಿಂದ ಹೊಗೆಯನ್ನು ಹಾಕುತ್ತಿದ್ದರು.

ಜೇನು ಬೇಟೆಯಾಡುವ ವಿಧಾನ :  ಜೇನು ಬೇಟೆ ಸಾಮಾನ್ಯವಾಗಿ ಪ್ರಪಂಚದಾದ್ಯಂತ ಕಂಡು ಬಂದರೂ ಆಯಾ ಪ್ರದೇಶಗಳಿಗೆ ಹೊಂದಿಕೊಳ್ಳುವಂತೆ ತಮ್ಮದೇ ಆದ ಶಾಸ್ತ್ರೀಯ ವಿಧಾನಗಳಿರುತ್ತವೆ. ಹೆಜ್ಜೇನು ಕುಟುಂಬಗಳಿಂದ ಜೇನನ್ನು ತೆಗೆಯಲು ಬೇಟೆಗಾರರು ಕಾರ್ಯ ಸಫಲವಾಗಲೆಂದು ಮೊದಲು ಪೂಜೆ ಸಲ್ಲಿಸಿ ನಂತರ, ಪರಿಣಿತ ವ್ಯಕ್ತಿಯೊಬ್ಬ ಮರವನ್ನು ಹತ್ತಿ ಬಿದಿರಿನ ಏಣಿಯನ್ನು ಜೇನು ಗೂಡಿಗೆ ಹತ್ತಿರವಾಗುವಂತೆ ಗಟ್ಟಿಯಾದ ಹಗ್ಗದಿಂದ  ಕಟ್ಟಿ ಇಳಿಬಿಡುತ್ತಿದ್ದನು. ಪಕ್ಕದ ಕೊಂಬೆಯ ಮೇಲಿನ ಮತ್ತೊಬ್ಬ ಬೇಟೆಗಾರ ಇಳಿಬಿಟ್ಟ್ ಏಣಿಯನ್ನು ಗೂಡಿನ ಹತ್ತಿರಕ್ಕೆ ಬರುವಂತೆ ಜರುಗುಸುತ್ತಿದ್ದನು. ಹೊಗೆಯನ್ನು ಹೊತ್ತಿಸಿ ನೊಣಗಳನ್ನು ಸ್ತಬ್ಧಗೊಳಿಸಿ ಹರಿತವಾದ ಬಿದುರಿನಿಂದ ಮೊಟ್ಟೆಮರಿಗಳಿಂದ ಕೂಡಿದ ಎರಿಯನ್ನು ಕತ್ತರಿಸಿ ಬಿಸಾಡುವರು. ಜೇನುತುಪ್ಪ ಭರಿತ ಎರಿಗಳನ್ನು ಬುಟ್ಟಿಯಲ್ಲಿ ಶೇಖರಿಸಿ ಹಗ್ಗದ ಸಹಾಯದಿಂದ ಇಳಿಬಿಟ್ಟು ಜೇನುತುಪ್ಪವನ್ನು ಹಿಂಡಿ ಶುದ್ದೀಕರಿಸಿ ಹತ್ತಿರದ ಜೇನು ಸಹಕಾರಿ ಸಂಘಗಳಿಗೆ ಮಾರಾಟಮಾಡುತ್ತಿದ್ದರು.

ಶಾಸ್ತ್ರೀಯ ಜೇನುಕೃಷಿ : ಭಾರತದಲ್ಲಿ ಪುರಾತನ ಕಾಲದಿಂದಲೂ ಮಡಕೆಗಳು, ಗೋಡೆಯ ಸಂದುಗೊಂದುಗಳು ಮತ್ತು ವಿವಿಧ ಅಳತೆಯ ಪೆಟ್ಟಿಗೆಗಳಲ್ಲಿ ತುಡುವೆ ಜೇನುಸಾಕಣೆಯನ್ನು ಮಾಡಲಾಗುತ್ತಿದೆ.

ತೊರೆ/ದಿಮ್ಮಿಯ (ಲಾಗ್) ಜೇನು ಪೆಟ್ಟಿಗೆಗಳು :  ಮರದ ಜೇನುಪೆಟ್ಟಿಗೆಗಳನ್ನು ಜೇನುಸಾಕಾಣಿಕೆಗೆ ಉಪಯೋಗಿಸುತ್ತಿದ್ದುದು ಪ್ರಪಂಚದ ಅನೇಕ ಭಾಗಗಳಲ್ಲಿ ಕಂಡುಬರುತ್ತದೆ. ಮಯನ್‌ಮಾರ್ ದೇಶದಲ್ಲಿ ೩೦ – ೩೫ ಸೆಂ.ಮೀ ಉದ್ದದ ದಿಮ್ಮಿಯ ಪೆಟ್ಟಿಗೆಗಳನ್ನು ಕವನ್ ಮತ್ತು ಕೈಯರ ರಾಜ್ಯಗಳು, ಭೂತಾನಿನ ಸುರಿ ಮತ್ತು ನೇಪಾಳದಲ್ಲಿ ಉಪಯೋಗಿಸಲಾಗುತ್ತಿತ್ತು. ಈ ಪೆಟ್ಟಿಗೆಗಳಲ್ಲಿ ಯಾವುದೇ ರೀತಿಯ ಚೌಕಟ್ಟುಗಳಿಲ್ಲದೆ ಸಣ್ಣ ರಂಧ್ರಗಳಿಂದ ಕೂಡಿದ್ದು ಈ ಮೂಲಕ ಜೇನು ನೊಣಗಳು ಪೆಟ್ಟಿಗೆಯನ್ನು ಒಳಸೇರಲು ಹಾಗೂ ಹೊರಬರಲು ಸಾಧ್ಯವಾಗುತ್ತದೆ.

ದಿಮ್ಮಿಯ ಪೆಟ್ಟಿಗೆಗಳಲ್ಲಿ ಸಮಾನಾಂತರ ಮತ್ತು ಲಂಬಾಕಾರದ ದಿಮ್ಮಿ ಪೆಟ್ಟಿಗೆಗಳು ಎಂಬ ಎರಡು ವಿಧಗಳಿವೆ. ದಿಮ್ಮಿಯ ಪೆಟ್ಟಗೆಗಳು ಸುಮಾರು ೬೦ ರಿಂದ ೭೫ ಸೆಂ.ಮೀ. ಉದ್ದ ಹಾಗೂ ದ್ವಾರದ ವ್ಯಾಸವು ೬ ಮಿ.ಮೀ ಇದ್ದು ಮರ ಅಥವಾ ಕಲ್ಲಿನ ದಿಮ್ಮಿ, ಮಣ್ಣು ಅಥವಾ ಸಗಣಿಗಳಿಂದ ಮುಚ್ಚಲಾಗಿರುತ್ತದೆ. ಸಮಾನಾಂತರ ದಿಮ್ಮಿ ಪೆಟ್ಟಿಗೆ ಎರಡೂ ಕಡೆಯ ಎರಿಗಳನ್ನು ಕರಗಿಸಿದ ಮೇಣದಿಂದ ಅಂಟಿಸಲಾಗಿರುತ್ತದೆ. ಈ ಪೆಟ್ಟಿಗೆಯಲ್ಲಿ ನಾಲ್ಕೈದು ಎರಿಗಳನ್ನು ಇಟ್ಟರೆ ಮಧ್ಯಭಾಗದಲ್ಲಿ ಹೊಸ ಎರಿಗಳನ್ನು ನಿರ್ಮಿಸಲು ಸಾಧ್ಯವಾಗುತ್ತದೆ. ದಿಮ್ಮಿಯ ಪೆಟ್ಟಿಗೆಗಳಲ್ಲಿ ಜೇನುನೊಣಗಳು ಹಳೆಯ ಎರಿಗಳಿಗೆ ಸಮಾನಾಂತರವಾಗಿ ಎರಿಗಳನ್ನು ಕಟ್ಟುತ್ತವೆ.

ಲಂಬಾಕಾರದ ದಿಮ್ಮಿಯ ಜೇನು ಪೆಟ್ಟಿಗೆಗಳು ಒಂದು ಸೆಂ.ಮೀ ಗಾತ್ರದ ೫ ರಿಂದ ೬ ರಂಧ್ರಗಳನ್ನು ಹೊಂದಿರುತ್ತವೆ. ಸಾಮಾನ್ಯವಾಗಿ ಈ ಪೆಟ್ಟಿಗೆಗಳನ್ನು ಸಮತಲದ ಈ ಕಲ್ಲಿನ ಮೇಲೆ ಇಡಲಾಗುತ್ತಿದ್ದು ಇವುಗಳ ಮೇಲ್ಭಾಗವನ್ನು ಮರದ ದಿಮ್ಮಿಗಳಿಂದ ಮುಚ್ಚಲಾಗಿರುತ್ತದೆ. ಚೀನಾ ದೇಶದಲ್ಲಿ ಈಗಲೂ ಈ ಪೆಟ್ಟಿಗೆಗಳನ್ನು ಬಳಸಲಾಗುತ್ತಿದ್ದು ಇವುಗಳು ಸುಮಾರು ೪೦ ಸೆಂ.ಮೀ. ಎತ್ತರ ಮತ್ತು ೩೦ ಸೆಂ.ಮೀ ಅಗಲವಿದ್ದು ಪೆಟ್ಟಿಗೆಯ ಎರಡೂ ತುದಿಗಳು ತೆರೆದಿರುತ್ತವೆ. ಜೇನು ಕುಟುಂಬದ ನೊಣಗಳ ಸಂಖ್ಯೆ ಹೆಚ್ಚಾದಾಗ ಪೆಟ್ಟಿಗೆಯ ಗಾತ್ರವನ್ನು ಹೆಚ್ಚಿಸಿ ಅಧಿಕ ಪ್ರಮಾಣದಲ್ಲಿ ಜೇನುತುಪ್ಪವನ್ನು ಪಡೆಯಬಹುದು.

ಗೋಡೆಯ ಜೇನು ಪೆಟ್ಟಿಗೆಗಳು : ಸಾಮಾನ್ಯವಾಗಿ ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುವ ಜೇನುಕೃಷಿಕರು ಜೇನುನೊಣಗಳನ್ನು ಗೋಡೆಯಲ್ಲಿ ನಿರ್ಮಿಸಿದ ಗೂಡುಗಳಲ್ಲಿ ಸಾಕಣೆ ಮಾಡುವುದು ಕಂಡು ಬರುತ್ತದೆ. ಈ ಜೇನು ಗೂಡಿನ ವಾಸಸ್ಥಾನಗಳು ಚೌಕಾಕಾರದಲ್ಲಿದ್ದು, ತ್ರಿಭುಜ ಅಥವಾ ಚೌಕಾಕೃತಿಯ ರಂಧ್ರದ ಮುಖದ್ವಾರವನ್ನು ಹೊಂದಿರುತ್ತವೆ. ಈ ವಾಸಸ್ಥಾನಗಳು ಸುಮಾರು ೪೦ ರಿಂದ ೬೦ ಸೆಂ.ಮೀ ಉದ್ದ ಮತ್ತು ೨೫ ಸೆಂ.ಮೀ ಅಗಲವಿರುತ್ತವೆ. ಇವುಗಳ ಒಳಗೋಡೆಗಳನ್ನು ಮಣ್ಣು ಅಥವಾ ಸಗಣಿಯಿಂದ ಸಮವಾಗಿಟ್ಟು ತಳಭಾಗ ಮತ್ತು ಚಾವಣಿಯನ್ನು ಮರದಿಂದ  ಮಾಡಲಾಗಿರುತ್ತದೆ. ಜೇನು ತೆಗೆಯುವ ಸಂದರ್ಭದಲ್ಲಿ ಗೋಡೆಯನ್ನು ಹೊರತೆಗೆದು ನಂತರ ಮರದ ತಗಡಿನಿಂದ ಜೋಡಿಸಲಾಗಿರುತ್ತದೆ.

ಮಡಿಕೆಯ ವಾಸಸ್ಥಾನಗಳು : ಭಾರತದ ಕೆಲವು ಭಾಗಗಳಲ್ಲಿ ಮಡಿಕೆಗಳಲ್ಲಿ ಜೇನುನೊಣಗಳನ್ನು ಸಾಕಲಾಗುತ್ತಿದ್ದು. ಮಡಿಕೆಗಳಲ್ಲಿ ನೊಣಗಳ ಓಡಾಟಕ್ಕೆ ಒಂದು ರಂಧ್ರವಿರುತ್ತದೆ. ಇದೇ ರೀತಿ ಭೂಮಿಯೊಳಗೆ ಪೆಟ್ಟಿಗೆಗಳ ರೂಪದಲ್ಲಿ ಮರದ ತಗಡುಗಳನ್ನು ಜೋಡಿಸಿ ಜೇನುನೊಣಗಳನ್ನು ಸಾಕಣೆ ಮಾಡುವ ಪದ್ಧತಿ ಚೀನಾ, ಮಯನ್‌ಮಾರ್ ಮತ್ತು ಇತರೆ ದೇಶಗಳಲ್ಲಿ ಕಂಡು ಬರುತ್ತದೆ.

ಆಧುನಿಕ ಜೇನು ಪೆಟ್ಟಿಗೆಗಳುಎರಿಗಳ ನಡುವೆ ೮ ರಿಂದ ೧೦ ಮಿ.ಮೀ. ಅಂತರದ ಚೌಕಟ್ಟುಗಳಿಂದ ಕೂಡಿರುವ ಜೇನು ಪೆಟ್ಟಿಗೆಗಳನ್ನು ಯೋರೋಪಿಯನ್ ಜೇನುನೊಣಗಳಿಗೆ ಲಾಂಗ್ ಸ್ಟ್ರೋತ್‌ರು ೧೮೫೧ ರಲ್ಲಿ ಪ್ರಪ್ರಥಮ ಬಾರಿಗೆ ನಿರ್ಮಿಸಿದರು. ಈ ರೀತಿಯ ಪೆಟ್ಟಿಗೆಯಲ್ಲಿನ ಚೌಕಟ್ಟುಗಳನ್ನು ಜೇನುಪೆಟ್ಟಿಗೆಯಿಂದ ಸುಲಭವಾಗಿ ಹೊರತೆಗೆಯಬಹುದಲ್ಲದೇ ಹೆಚ್ಚಿನ ಕೋಣೆಗಳನ್ನು ಜೋಡಿಸಬಹುದಾಗಿದೆ. ಚೌಕಟ್ಟುಗಳ ಅಳತೆಗನುಗುಣವಾಗಿ ಪೆಟ್ಟಿಗೆಗಳ ಗಾತ್ರ ವ್ಯತ್ಯಾಸಗೊಳ್ಳುವುದರಿಂದ ಅವುಗಳಲ್ಲಿ ಜೇನುನೊಣದ ಅಂತರ ಸಿದ್ಧಾಂತವನ್ನು ಪಾಲಿಸಲಾಯಿತು. ಆಧುನಿಕ ಸ್ಥಳಾಂತರಿ ಚೌಕಟ್ಟುಗಳಿಂದ ಕೂಡಿದ ಜೇನು ಪೆಟ್ಟಿಗೆಗಳಲ್ಲಿ ಅಡಿಮಣೆ, ಅನೇಕ ಚೌಕಟ್ಟುಗಳಿಂದ ಕೂಡಿದ ಸಂಸಾರ ಕೋಣೆ ಮತ್ತು ಜೇನುಕೋಣೆಗಳಿದ್ದು ಹೊರ ಮುಚ್ಚಳವಿರುತ್ತದೆ. ಹೊರ ಮುಚ್ಚಳವು ತೆಳುವಾದ ಕಬ್ಬಿಣದ ಅಥವಾ ಅಲ್ಯೂಮಿನಿಯಂನ ತಗಡುಗಳಿಂದ ಸುತ್ತುವರೆದಿರುತ್ತದೆ. ಕೆಲವು ದೇಶಗಳಲ್ಲಿ ಪೆಟ್ಟಿಗೆಗಳಲ್ಲಿ ಹೊರ ಮುಚ್ಚಳವು ಕಬ್ಬಿಣ ಅಥವಾ ಅಲ್ಯೂಮಿನಿಯಂ ತಗಡುಗಳಿಂದ ಸುತ್ತುವರೆದಿರುವುದಿಲ್ಲ.

ಸ್ಥಳಾಂತರ ಚೌಕಟ್ಟುಗಳಿಂದ ಕೂಡಿದ ಪೆಟ್ಟಿಗೆಗಳ ಆವಿಷ್ಕಾರದಿಂದಾಗಿ ಭಾರತದಲ್ಲಿ ಲಾಂಗ್‌ಸ್ಟ್ರೋತ್‌ರ ಆಧುನಿಕ ರೀತಿಯ ಪೆಟ್ಟಿಗೆಯಲ್ಲಿನ ಜೇನು ಸಾಕಣೆ ೧೯ ನೇ ಶತಮಾನದಲ್ಲಿ ಪ್ರಾರಂಭವಾಯಿತು. ದಕ್ಷಿಣ ಭಾರತದಲ್ಲಿ ರೆವರೆಂಡ್ ಫಾದರ್ ನ್ಯೂಟನ್‌ರು ಮರದ ಚೌಕಟ್ಟುಗಳಿಂದ ಕೂಡಿದ ಜೇನು ಪೆಟ್ಟಿಗೆಯನ್ನು ತುಡುವೆ ಜೇನು ಕುಟುಂಬಗಳಿಗೆ ಅಭಿವೃದ್ಧಿ ಪಡಿಸಿದರೆ, ಉತ್ತರ ಭಾರತದಲ್ಲಿ ಜಾನ್ ಡಗ್ಲಾಸ್‌ರವರು ಆಧುನಿಕ ಜೇನು ಪೆಟ್ಟಿಗೆಯನ್ನು ನಿರ್ಮಿಸಿದರು. ಅನೇಕ ಜೇನು ತಜ್ಞರ ಮತ್ತು ಜೇನು ಸಾಕಣೆದಾರರ ಪ್ರಯತ್ನದಿಂದಾಗಿ ಇತ್ತೀಚಿಗೆ ಸ್ಥಳಾಂತರಿಸುವ ಆಧುನಿಕ ಜೇನುಕೃಷಿಗೆ ನಾಂದಿಯಾಯಿತು.

ಜೇನು ಪೆಟ್ಟಿಗೆಗಳ ವಿಕಾಸ ಮತ್ತು ಆಧುನಿಕತೆಯನ್ನು ಗಮನದಲ್ಲಿಟ್ಟುಕೊಂಡು ದೇಶದ ಎಲ್ಲಾ ಭಾಗಗಳಿಗೆ ಹೊಂದಾಣಿಕೆಯಾಗುವ ಮತ್ತು ತುಡುವೆ ಜೇನು ನೊಣಗಳ ವಿವಿಧ ಉಪ ಪ್ರಭೇದಗಳಿಗೆ ಹೊಂದಿಕೊಳ್ಳುವಂತೆ ಜೇನು ಪೆಟ್ಟಿಗೆಗಳನ್ನು ಅಭಿವೃದ್ಧಿಪಡಿಸಲು ಪ್ರಥಮ ಚೆರ್ಚೆ ಮುಂಬೈನಲ್ಲಿ ನಡೆದ ೧೧ ನೇ ಅಖಿಲ ಭಾರತ ಜೇನುಸಾಕಾಣಿಕೆದಾರರ ಸಮ್ಮೇಳನದಲ್ಲಿ ನಡೆಯಿತು. ಈ ಬಗೆಯ ಚರ್ಚೆಗಳು ಮುಂದುವರೆದು ೧೯೫೯ ರಲ್ಲಿ  ಜೇನು ಕೈಗಾರಿಕಾ ನೇಮಕಾತಿ ಸಮಿತಿಯನ್ನು ರಚಿಸಲಾಯಿತು. ಈ ಸಮಿತಿಯ ಆದೇಶದ ಮೇರೆಗೆ ಎರಡು ವಿಧದ ಜೇನು  ಪೆಟ್ಟಿಗೆಗಳನ್ನು ಗುರುತಿಸಲಾಯಿತು. ಅವುಗಳೆಂದರೆ ನ್ಯೂಟನ್ ಜೇನುಪೆಟ್ಟಿಗೆ ಮತ್ತು ಜೋಲಿಕೋಟೆ ಜೇನುಪೆಟ್ಟಿಗೆಗಳು ಹೆಚ್ಚಿನ ನೊಣದ ಜಾಗವನ್ನು ಹೊಂದಿರುವುದರಿಂದ ಬೆಟ್ಟಪ್ರದೇಶದ ತುಡುವೆ ಜೇನುನೊಣಗಳಿಗೂ ಮತ್ತು  ನ್ಯೂಟನ್ ಜೇನುಪೆಟ್ಟಿಗೆಗಳು ಸ್ವಲ್ಪ ಕಡಿಮೆ ನೊಣದ ಜಾಗವಿರುವುದರಿಂದ ಬಯಲು ಸೀಮೆಯಲ್ಲಿ ಸಾಕುವ ಜೇನು ನೊಣಗಳಿಗೂ ಸೂಕ್ತವಾಗಿರುತ್ತದೆ. ಈ ರೀತಿಯ ಜೇನು ಪೆಟ್ಟಿಗೆಗಳ ನಿಗದಿತ ಅಳತೆಗಳನ್ನು ಭಾರತೀಯ ಮಾನಕ ಬ್ಯೂರೋರವರು ನಿಗದಿಪಡಿಸಿರುತ್ತಾರೆ.

ಲಾಂಗ್‌ಸ್ಟ್ರೋತ್ ಜೇನುಪೆಟ್ಟಗೆ : ೧೦ ಚೌಕಟ್ಟುಗಳ ಲಾಂಗ್ ಸ್ಟ್ರೋತ್ ಜೇನುಪೆಟ್ಟಿಗೆಯ ವಿವಿಧ ಭಾಗಗಳು ಈ ಮುಂದಿನಂತಿವೆ (ಚಿತ್ರ ೩೩) :

ಆಧಾರ ಸ್ತಂಭ :  ನಾಲ್ಕು ಕಾಲುಗಳುಳ್ಳ ಆಧಾರ ಸ್ತಂಭ ೧೫ – ೨೫ ಸೆಂ.ಮೀ. ಎತ್ತರವಿರುತ್ತದೆ. ಇದರ ಮೇಲ್ಮೈ ಜೇನುಪೆಟ್ಟಿಗೆಯ ತಳ ಹಲಗೆ ಭದ್ರವಾಗಿ ಹಿಡಿಯುವಂತಿದ್ದು ಗಟ್ಟಿಯಾಗಿರುತ್ತದೆ.

ಆಧುನಿಕ ಜೆನುಪೆಟ್ಟಿಗೆಯ ಭಾಗಗಳು

ಅಡಿಮಣೆ :  ಇದನ್ನು ಮರದ ಹಲಗೆಯಿಂದ ಮಾಡಲಾಗಿದ್ದು ೫೫ ಸೆಂ.ಮೀ. ಉದ್ದ, ೪೦.೬ ಸೆಂ.ಮೀ ಅಗಲ ಮತ್ತು ೨.೨ ಸೆಂ.ಮೀ ದಪ್ಪದ ಹಲಗೆಗಳನ್ನು ಜೋಡಿಸಿ ತಯಾರಿಸಲಾಗಿರುತ್ತದೆ. ಪೆಟ್ಟಿಗೆಯ ಪ್ರವೇಶ ದ್ವಾರದ ಹಲಗೆ ಸುಮಾರು ೩೬.೩ ಸೆಂ.ಮೀ. ಉದ್ದ ೨.೨ ಸೆಂ.ಮೀ. ಅಗಲ ಮತ್ತು ೨.೨ ಸೆಂ.ಮೀ. ದಪ್ಪವಿರುತ್ತದೆ. ಅದರ ದ್ವಾರ ೭.೫ ಸೆಂ.ಮೀ. ಉದ್ದ ಮತ್ತು ೨.೨ ಸೆಂ.ಮೀ. ಎತ್ತರವಿರುತ್ತದೆ.

ಸಂಸಾರ ಕೋಣೆ :  ಇದು ಚೌಕಾಕಾರದ ಪೆಟ್ಟಿಗೆಯಾಗಿದ್ದು ಇದಕ್ಕೆ ಮುಚ್ಚಳಗಳಿರುವುದಿಲ್ಲ ಇದನ್ನು ೨.೨ ಸೆಂ.ಮೀ. ದಪ್ಪದ ಮರದಿಂದ ಮಾಡಲಾಗಿರುತ್ತದೆ. ಇದರ ಉದ್ದ ಹೊರಗಡೆಯಿಂದ ೪೦.೬ ಸೆಂ.ಮೀ. ಮತ್ತು ಪಕ್ಕಗಳಲ್ಲಿ ೩೬.೩ ಸೆಂ.ಮೀ. ಮತ್ತು ೨೩.೮ ಸೆಂ.ಮೀ. ಎತ್ತರವಿರುತ್ತದೆ.

ಚೌಕಟ್ಟುಗಳು :  ಇವು ಮೇಲಿನ ಪಟ್ಟಿ, ಎರಡು ಪಕ್ಕದ ಪಟ್ಟಿಗಳು ಮತ್ತು ತಳ ಪಟ್ಟಿಗಳಿಂದ ಕೂಡಿರುತ್ತವೆ.

ಮೇಲಿನ ಪಟ್ಟಿ :  ೪೭.೫ ಸೆಂ.ಮೀ. ಉದ್ದ, ೨.೫ ಸೆಂ.ಮೀ. ಅಗಲ ಮತ್ತು ೨.೨ ಸೆಂ.ಮೀ. ದಪ್ಪವಿದ್ದು ಎರಡೂ ಕಡೆ ೯ ಮಿ.ಮೀ ದಪ್ಪದಲ್ಲಿ ಕತ್ತರಿಸಿ ೨.೫ ಸೆಂ.ಮೀ. ಉದ್ದವಿದ್ದು ಕೆಳಭಾಗದ ಮಧ್ಯದಲ್ಲಿ ಕಾಲುವೆಯಂತಿದ್ದು ಮೇಣದ ಹಾಳೆಗಳನ್ನು  ಕಟ್ಟಲು ಅನುಕೂಲವಾಗುತ್ತದೆ.

ಪಕ್ಕದ ಪಟ್ಟಿಗಳು : ಇವುಗಳನ್ನು ೯ ಮಿ.ಮೀ. ದಪ್ಪದ ಮರದಿಂದ ತಯಾರಿಸಲಾಗಿದ್ದು ೨೨.೬ ಸೆಂ.ಮೀ ಉದ್ದವಿರುತ್ತದೆ. ಇದರ ಮೇಲ್ಭಾಗ ೩.೪ ಸೆಂ.ಮೀ ಅಗಲ ಮತ್ತು ಕೆಳಭಾಗ ೨.೫ ಸೆಂ.ಮೀ. ಆಗಿರುತ್ತದೆ. ಪ್ರತಿ ಪಟ್ಟಿಯ ಮಧ್ಯಭಾಗದಿಂದ ಎರಡೂ ತುದಿಗಳಲ್ಲಿ  ಕತ್ತರಿಸಲಾಗಿದ್ದು ಮೇಲಿನ ತಳ ಕೆಳ ಪಟ್ಟಿಗಳನ್ನು ಕ್ರಮವಾಗಿ ಸೇರಿಸಲು ಅನುಕೂಲವಾಗುತ್ತದೆ. ಪಟ್ಟಿಗಳ ಎರಡೂ ಕಡೆ ಎರಡೆರಡು ರಂಧ್ರಗಳಿದ್ದು ಚೌಕಟ್ಟುಗಳ ತಂತಿಗಳನ್ನು ಕಟ್ಟಲು ಸಾಧ್ಯವಾಗುತ್ತದೆ.

ತಳ ಪಟ್ಟಿ : ಇದು ೪೪ ಸೆಂ.ಮೀ. ಉದ್ದ. ೨ ಸೆಂ.ಮೀ. ಅಗಲ ಮತ್ತು ೯ ಮಿ.ಮೀ ದಪ್ಪವಾಗಿರುತ್ತದೆ. ಇದರ ಹೊರ ಮೇಲ್ಮೈ ೪೪ ಸೆಂ.ಮೀ. ಉದ್ದ ಹಾಗೂ ೨೨.೮ ಸೆಂ.ಮೀ. ಅಗಲವಿರುತ್ತದೆ.

ಜೇನು ಕೋಣೆ :  ಜೇನು ಕೋಣೆಯ ಪೆಟ್ಟಿಗೆ ಮತ್ತು ಚೌಕಟ್ಟುಗಳ ಅಳತೆ ಸಂಸಾರ ಕೋಣೆಯ ಪೆಟ್ಟಿಗೆ ಮತ್ತು ಚೌಕಟ್ಟುಗಳ ಅಳತೆಯನ್ನು ಹೊಂದಿರುತ್ತದೆ.

ಒಳ ಸುತ್ತ ಹಲಗೆ :  ಇದು ಮರದ ಹಲಗೆಯಾಗಿದ್ದು ಸಂಸಾರ ಕೋಣೆ ಮತ್ತು ಜೇನು ಕೋಣೆಯನ್ನು ಮುಚ್ಚಲು ಉಪಯೋಗಿಸಲಾಗುತ್ತದೆ. ಇದು ೫೦ ಸೆಂ.ಮೀ. ಉದ್ದ. ೪೦.೬ ಸೆಂ.ಮೀ. ಅಗಲ ಮತ್ತು ೯ ಮಿ.ಮೀ ದಪ್ಪವಿರುತ್ತದೆ. ಇದಕ್ಕೆ ೯ ಮಿ.ಮೀ. ದಪ್ಪ ಮತ್ತು  ೨.೨ ಸೆಂ.ಮೀ ಅಗಲದ ಮರದ ಪಟ್ಟಿಗಳನ್ನು ನಾಲ್ಕು ಕಡೆಗೂ ಅಂಟಿಸಲಾಗಿರುತ್ತದೆ.

ಹೊರ ಮುಚ್ಚಳ : ಇದು ೯ ಮಿ.ಮೀ ದಪ್ಪದ ಮರದ ಹಲಗೆಯಿಂದ ಚೌಕಾಕಾರದಲ್ಲಿ ಮಾಡಲ್ಪಟ್ಟಿದ್ದು ಲೋಹದ ತಗಡಿನಿಂದ ಸುತ್ತುವರೆದಿರುವುದರಿಂದ ಪೆಟ್ಟಿಗೆಯನ್ನು ಮಳೆಯಿಂದ ರಕ್ಷಿಸುತ್ತದೆ. ಇದರ ಒಳ ಅಳತೆ ೫೨.೫ ಸೆಂ.ಮೀ. ಉದ್ದ ಮತ್ತು ೪೨.೫ ಸೆಂ.ಮೀ ಅಗಲವಿದ್ದು ಪೆಟ್ಟಿಗೆಯ ಮೇಲೆ ಸುಲಭವಾಗಿ ಮುಚ್ಚಿಕೊಳ್ಳುವಂತಿರುತ್ತದೆ.

ನ್ಯೂಟನ್ ಜೇನು ಪೆಟ್ಟಿಗೆ : ಈ ಜೇನು ಪೆಟ್ಟಿಗೆ ಲಾಂಗ್‌ಸ್ಟ್ರೋತ್ ಜೇನುಪೆಟ್ಟಿಗೆಯಲ್ಲಿನ ಭಾಗಗಳನ್ನೇ ಹೊಂದಿದ್ದು ಅಳತೆಗಳಲ್ಲಿ ವ್ಯತ್ಯಾಸವಿರುತ್ತದೆ.

ಆಧಾರ ಸ್ತಂಭ :  ಇದನ್ನು ಸಿಮೆಂಟಿನಿಂದ ಮಾಡಲಾಗಿದ್ದು ೨೦ ರಿಂದ ೩೦ ಸೆಂ.ಮೀ. ಉದ್ದವಿದ್ದು ಮೇಲ್ಭಾಗದಲ್ಲಿ ೨೦ ರಿಂದ ೩೦ ಸೆಂ.ಮೀ. ಅಳತೆಯ ಸಿಮೆಂಟಿನ ತಗಡನ್ನು ಅಂಟಿಸಲಾಗಿರುತ್ತದೆ. ಜೇನುಪೆಟ್ಟಿಗೆಯನ್ನು ಇದರ ಮೇಲೆ ಇಡಲಾಗುತ್ತದೆ.

ಅಡಿಮಣೆ : ಇದು ಅಗಲವಾಗಿದ್ದು ಸಂಸಾರ ಕೋಣೆಗಿಂತ ಸುಮಾರು ೨.೫ ಸೆಂ.ಮೀ. ಉದ್ದವಾಗಿರುತ್ತದೆ. ಜೇನು ಪೆಟ್ಟಿಗೆಯ ಸಂಸಾರಕೋಣೆಯನ್ನು ಇದರ ಮೇಲೆ ಇಡಲಾಗುತ್ತದೆ, ಇದರ ಮುಖದ್ವಾರದ ಚಾಚಿದ ಭಾಗದಲ್ಲಿ ಜೇನು ನೊಣಗಳು ಓಡಾಡಲು ಸಹಾಯಕವಾಗುತ್ತದೆ. ಮುಂದಿನ ಹಲಗೆಯಲ್ಲಿ ೮.೮ ಸೆಂ.ಮೀ. ಉದ್ದ ಮತ್ತು ೯ ಮಿ.ಮೀ ಎತ್ತರದ ದ್ವಾರವಿರುತ್ತದೆ.

ಸಂಸಾರ ಕೋಣೆ : ಇದು ಮುಚ್ಚಳ ರಹಿತವಾದದ್ದು ಅಡಿಮಣೆಯ ಮೇಲಿನ ದೊಡ್ಡ ಕೋಣೆ. ಇದು ೨.೨ ಸೆಂ.ಮೀ. ದಪ್ಪದ ಹಲಗೆಯಿಂದ ಮಾಡಲ್ಪಟ್ಟಿದ್ದು ಇದರ ಹೊರ ಅಳತೆ ೨೭.೮ ಸೆಂ.ಮೀ. ಉದ್ದ, ೨೫.೬ ಸೆಂ.ಮೀ. ಅಗಲ ಮತ್ತು ೧೬ ಸೆಂ.ಮೀ. ಎತ್ತರವಿರುತ್ತದೆ. ಆದರೆ ಒಳ ಅಳತೆ ೨೩.೪ ಸೆಂ.ಮೀ. ಉದ್ದ, ೨೨.೫ ಸೆಂ.ಮೀ. ಅಗಲ ಮತ್ತು ಎತ್ತರ ೧೬ ಸೆಂ.ಮೀ. ಮೇಲಿನ ಮತ್ತು ಮುಂದಿನ ಹಲಗೆಗಳಲ್ಲಿ ೬ ಮಿ.ಮೀ. ಉದ್ದ ಮತ್ತು ೯ ಮಿ.ಮೀ. ದಪ್ಪದ ಜಾಗದ ಚೌಕಟ್ಟುಗಳ ಮೇಲೆ ಕುಳಿತುಕೊಳ್ಳಲು ಸಾಧ್ಯವಾಗುತ್ತದೆ.

ಸಂಸಾರ ಕೋಣೆಯ ಚೌಕಟ್ಟು :  ಮೇಲಿನ ಪಟ್ಟಿ ೨.೨ ಸೆಂ.ಮೀ. ಅಗಲ, ೨೫ ಸೆಂ.ಮೀ. ಉದ್ದ ಮತ್ತು ೩ ಮಿ.ಮೀ. ದಪ್ಪ ಪಕ್ಕದ ಪಟ್ಟಿ ಎತ್ತರ ೧೪.೪ ಸೆಂ.ಮೀ. ದಪ್ಪ (ಮೇಲ್ಭಾಗದಲ್ಲಿ) ೨.೮ ಸೆಂ.ಮೀ. ಮತ್ತು ದಪ್ಪ (ತಳಭಾಗದಲ್ಲಿ) ೧.೨ ಸೆಂ.ಮೀ. ಮತ್ತು ಚೌಕಟ್ಟಿನ ಒಳ ಉದ್ದ ೨೦.೬ ಸೆಂ.ಮೀ. ಒಳ ಚೌಕಟ್ಟಿನ ಎತ್ತರ ೧೪.೪. ಸೆಂ.ಮೀ. ಪಕ್ಕದ ಪಟ್ಟಿಯ ಎರಡೂ ಕಡೆ ೩ ಮಿ.ಮೀ. ಹೆಚ್ಚಿನ ಉದ್ದವಿದ್ದು ಎಂಟು ಚೌಕಟ್ಟುಗಳಿಂದ ಕೂಡಿರುತ್ತದೆ.

ಕೋಷ್ಠಕ೧೦ : ಎಂಟು ಚೌಕಟ್ಟುಗಳ ತುಡುವೆ ಜೇನುಪೆಟ್ಟಿಗೆಗಳ ವಿವಿಧ ಅಳತೆಗಳು

ಜೇನು ಪೆಟ್ಟಿಗೆ ಹೆಸರು

ಪೆಟ್ಟಿಗೆ ಚೌಕಟ್ಟುಗಳ ವಿವಿಧ ಅಳತೆಗಳು

ಸಂಸಾರ ಕೋಣೆಯ ಚೌಕಟ್ಟು
(ಮಿ.ಮೀ.)

ಜೇನು ಕೋಣೆಯ ಚೌಕಟ್ಟು (ಮಿ.ಮೀ.)

ವಿದೇಶಿ ಪೆಟ್ಟಿಗೆಗಳು
ಬ್ರಿಟಿಷ್ ೩೫೦ x ೨೧೨ ೩೫೦ x ೨೧೨
ಲಾಂಗ್‌ಸ್ಟ್ರೋತ್ ೪೪೦ x ೨೨೮ ೪೪೦ x ೨೨೮ ಅಥವಾ
೪೪೦ x ೧೩೦
ಡಡಾಂಟ್ ವಿಧ ಐ.ಎಸ್.ಐ (ನೊಣ ಜಾಗ ೭,೮,೯) ೪೬೨ x ೨೮೧ ೪೬೨ x ೧೫೬
’ಎ’ ವಿಧ ೨೩೦ x ೧೬೫ ೨೩೦ x ೮೫
’ಬಿ’ ವಿಧ ೩೦೦ x ೧೯೫ ೩೦೦ x ೧೦೫
ನ್ಯೂಟನ್ ೨೦೬ x ೧೪೪ ೨೦೬ x ೬೨
ಟ್ರಾವಂಕೊರ್ ೩೦೦ x ೧೫೦ ೩೦೦ x ೧೦೦

(ಅಬ್ರೋಲ್, ೧೯೯೭)

ಜೇನುಕೋಣೆ ಮತ್ತು ಜೇನುಕೋಣೆಯ ಚೌಕಟ್ಟು : ಇದು ಸಂಸಾರ ಕೋಣೆಯ ಅಳತೆಯನ್ನು ಹೊಂದಿದ್ದು ಎತ್ತರ ೭.೮ ಸೆಂ.ಮೀ. ಮಾತ್ರ ಇರುತ್ತದೆ. ಚೌಕಟ್ಟಿನ ಅಳತೆ ಸಂಸಾರ ಕೋಣೆಯ ಚೌಕಟ್ಟಿನ ಅಳತೆಗಳೇ ಆಗಿದ್ದು ಇವುಗಳ ಒಳ ಎತ್ತರ ೬.೨ ಸೆಂ.ಮೀ. ಆಗಿರುತ್ತದೆ.

ಮೇಲಿನ ಮುಚ್ಚಳ : ತೆಳು ಹಲಗೆಯಿಂದ ಕೂಡಿದ ಹೊರ ಮುಚ್ಚಳ ೮.೭ ಸೆಂ.ಮೀ. ರಂಧ್ರಗಳಿಂದ ಕೂಡಿ ಅದನ್ನು ತಂತಿಯ ಜಾಲರಿಯಿಂದ ಮುಚ್ಚಲಾಗಿದೆ. ಇದನ್ನು ಕಬ್ಬಿಣದ ತಗಡಿನಿಂದ ಮುಚ್ಚಲಾಗಿದ್ದು ಬಿದ್ದ ಮಳೆ ನೀರು ಸರಾಗವಾಗಿ ಹರಿದು ಹೋಗಿ ಪೆಟ್ಟಿಗೆಯನ್ನು ರಕ್ಷಿಸುವ ಭಾಗವಾಗಿರುತ್ತದೆ.

ಬ್ರಿಟಿಷ್ ಜೇನುಪೆಟ್ಟಿಗೆ :  ಇದು ಸಾಧಾರಣವಾಗಿ ದೊಡ್ಡ ಪೆಟ್ಟಿಗೆ. ಆದರೆ. ಲಾಂಗ್‌ಸ್ಟ್ರೋತ್‌ಪೆಟ್ಟಿಗೆಗಿಂತ ಚಿಕ್ಕದಾಗಿದ್ದು, ಇದನ್ನು ಸಾಮಾನ್ಯವಾಗಿ ಇಂಗ್ಲೆಂಡ್‌ನಲ್ಲಿ ಬಳಸುತ್ತಾರೆ. ಇದರ ಸಂಸಾರ ಕೋಣೆಯ ಚೌಕಟ್ಟಿನ ಅಳತೆ ೩೫೦ x ೨೧೨ ಮಿ.ಮೀ. ಇರುತ್ತದೆ.

ಜೋಲಿಕೋಟೆ ಜೇನುಪೆಟ್ಟಿಗೆ :  ಈ ಪೆಟ್ಟಿಗೆಯನ್ನು ಮೊದಲಬಾರಿಗೆ ಉತ್ತರ ಪ್ರದೇಶದ ಜೋಲಿಕೋಟೆ ಎಂಬ ಹಳ್ಳಿಯ ಜೇನುಕೃಷಿ ತರಬೇತಿ ಕೇಂದ್ರದಲ್ಲಿ ತಯಾರಿಸಿ ಉಪಯೋಗಿಸಲಾಯಿತು. ಇದರ ಸಂಸಾರ ಕೋಣೆಯ ಚೌಕಟ್ಟಿನ ಅಳತೆ ೩೦೦ x ೭೫ ಮಿ.ಮೀ. ಮತ್ತು ಅದೇ ಅಳತೆಯ ಜೇನುಕೋಣೆಯ ಚೌಕಟ್ಟುಗಳಿರುತ್ತವೆ.

ಕೋಷ್ಟಕ ೧೧ : ರಾಷ್ಟ್ರೀಯಎ’ ಮತ್ತುಬಿ’ ವಿಧದ ಜೇನುಪೆಟ್ಟಿಗೆಗಳ ಅಳತೆ (ಮಿ.ಮೀ.ಗಳಲ್ಲಿ)

  ವಿಧ ಬಿ ವಿಧ
ಅಡಿಗೆಮಣೆಯ ಉದ್ದ ೮೬೧ ೪೩೧
ಅಗಲ ೩೫೬ ೩೫೬
ಎತ್ತರ ೫೦ ೫೦
ಸಂಸಾರ ಕೋಣೆಯ ಉದ್ದ ೨೮೬ ೩೫೬
ಅಗಲ ೩೫೬ ೩೫೬
ಎತ್ತರ ೧೭೪ ೨೦೪
ಜೇನುಕೋಣೆಯ ಉದ್ದ ೨೮೬ ೩೫೬
ಅಗಲ ೩೫೬ ೩೫೬
ಎತ್ತರ ೯೪ ೧೧೪
ಮುಚ್ಚಳದ ಉದ್ದ ೩೨೮ ೩೯೮
ಅಗಲ ೩೯೮ ೩೯೮
ಎತ್ತರ ೧೧೫ ೧೧೫
ಸಂಸಾರ ಕೋಣೆಯ ಚೌಕಟ್ಟಿನ ಉದ್ದ ೨೩೦ ೩೦೦
ಅಗಲ ೧೬೫ ೧೯೫
ಜೇನುಕೋಣೆಯ ಚೌಕಟ್ಟಿನ ಉದ್ದ ೨೩೦ ೩೦೦
ಅಗಲ ೮೫ ೧೦೫
ಒತ್ತರಿಸುವ ಹಲಗೆಯ ಉದ್ದ ೨೩೦ ೩೦೦
ಅಗಲ ೧೬೫ ೧೯೫
ಮೇಲ್ಪಟ್ಟಿಯ ಚೌಕಟ್ಟಿನ ಉದ್ದ ೨೬೦ ೩೪೩
ತಳಪಟ್ಟಿಯ ಚೌಕಟ್ಟಿನ ಉದ್ದ ೨೧೦ ೨೮೦

(ಅಬ್ರೋಲ್. ೧೯೯೭)

.ಎಸ್..ಎ’ ವಿಧದ ಜೇನುಪೆಟ್ಟಿಗೆ : ಈ ಪೆಟ್ಟಿಗೆಗಳನ್ನು ತುಡುವೆ ಜೇನು ಸಾಕಾಣಿಕೆಗೆ ಭಾರತದಾದ್ಯಂತ ಉಪಯೋಗಿಸಲಾಗುತ್ತಿದ್ದು ಇದರ ವಿವಿಧ ಭಾಗಗಳ ಅಳತೆಗಳು ನ್ಯೂಟನ್ ಜೇನುಪೆಟ್ಟಿಗೆಯ ಅಳತೆಗಳನ್ನೇ ಹೋಲುತ್ತವೆ.

.ಎಸ್..ಬಿ’ ವಿಧದ ಜೇನುಪೆಟ್ಟಿಗೆ : ಈ ಪೆಟ್ಟಿಗೆಗಳನ್ನು ಐ.ಎಸ್.ಐ. ಎ  ವಿಧದ ಜೇನು ಪೆಟ್ಟಿಗೆಗಳಂತೆ ಭಾರತೀಯ ಮಾನಕ ಬ್ಯೂರೋ ಅಭಿವೃದ್ಧಿಪಡಿಸಿ ಜೋಲಿಕೋಟೆ ಜೇನುಪೆಟ್ಟಿಗೆಗಳ ಅಳತೆಗಳನ್ನೇ ಹೊಂದಿರುತ್ತವೆ. ಇದರ ಸಂಸಾರಕೋಣೆಯ ಚೌಕಟ್ಟಿನ ಅಳತೆ ೩೦೦ x ೧೯೫ ಮಿ.ಮೀ. ಈ ಪೆಟ್ಟಿಗೆಗಳು ೮ ಮತ್ತು ೧೦ ಚೌಕಟ್ಟುಗಳಿಂದ ಕೂಡಿರುತ್ತವೆ.

ಜೇನು ಕೃಷಿಗೆ ಅನೇಕ ಉಪಕರಣಗಳ ಅವಶ್ಯಕತೆ ಇರುತ್ತದೆ. ಅವುಗಳಲ್ಲಿ ಜೇನು ಪೆಟ್ಟಿಗೆ ಬಹಳ ಮುಖ್ಯವಾದುದು. ಅದರಂತೆ ಇತರ ಉಪಕರಣಗಳೂ ಸಹ ಅಗತ್ಯವಾಗಿರುತ್ತವೆ.

ಮಧುವನದಇತರಅವಶ್ಯಕಉಪಕರಣಗಳು

ಜೇನುತುಪ್ಪ ತೆಗೆಯುವ ಯಂತ್ರ : ಈ ಯಂತ್ರವು ಜೇನುಕೃಷಿಯಲ್ಲಿ ಅತ್ಯಗತ್ಯವಾಗಿದ್ದು ಜೇನುತುಪ್ಪ ಸಿಗುವ ಕಾಲದಲ್ಲಿ ಜೇನುತುಪ್ಪವನ್ನು ಎರಿಗಳಿಂದ ಹೊರತೆಗೆಯಲು ಉಪಯೋಗಿಸಲಾಗುತ್ತದೆ. ಈ ಯಂತ್ರದ ಕಾರ್ಯವೈಖರಿಯನ್ನು ಆಸ್ಟ್ರೀಯ ದೇಶದ ಹೃಷ್ಕರವರು ೧೮೬೫ ರಲ್ಲಿ ಮೊದಲ ಬಾರಿಗೆ ತೋರಿಸಿಕೊಟ್ಟರು. ಜೇನುತುಪ್ಪ ತೆಗೆಯುವ ಯಂತ್ರಗಳಲ್ಲಿ ಗಾತ್ರಗಳಿಗನುಗುಣವಾಗಿ ಅನೇಕ ವಿಧಗಳಿದ್ದರೂ ಅವುಗಳ ಕಾರ್ಯ ವೈಖರಿ ಒಂದೇ ಆಗಿರುತ್ತದೆ. ತುಡುವೆ ಜೇನು ಮತ್ತು ಯೂರೋಪಿಯನ್ ಜೇನುನೊಣಗಳನ್ನು ಸಾಕಣೆ ಮಾಡುತ್ತಿರುವ ಭಾರತದಲ್ಲಿ ಎರಡು ರೀತಿಯ ಜೇನು ತೆಗೆಯುವ ಯಂತ್ರಗಳಿದ್ದು, ದೊಡ್ಡ ಯಂತ್ರವು ಯೂರೋಪಿಯನ್ ಜೇನುನೊಣದ ಲಾಂಗ್‌ಸ್ಟ್ರೋತ್

ಜೇನುತುಪ್ಪ ತೆಗೆಯುವ ಉಪಕರಣ

 ಜೇನಿನ ಎರಿಯ ಮತ್ತು ಸಣ್ಣಯಂತ್ರ ತುಡುವೆ ಜೇನುನೊಣದ ಗೂಡಿನಲ್ಲಿ ಎರಿಗಳ ಅಳತೆಗನುಗುಣವಾಗಿರುತ್ತವೆ. ಜೇನುತುಪ್ಪವನ್ನು ತೆಗೆಯಲು ಜೇನು ತುಂಬಿದ ಕಣಗಳ ಮೇಣದ ಕವಚಗಳನ್ನು ಚೂಪಾದ ಚಾಕುವಿನಿಂದ ಹೊರತೆಗೆದು ಎರಿಗಳನ್ನು ಜೇನು ತೆಗೆಯುವ ಯಂತ್ರದಲ್ಲಿಡಲಾಗುತ್ತದೆ. ಈ ಎರಿಗಳನ್ನು ರಭಸವಾಗಿ ತಿರುಗಿಸುವ ವ್ಯವಸ್ಥೆ ಈ ಯಂತ್ರದಲ್ಲಿದ್ದು ಜೇನುತುಪ್ಪವು ಪಾತ್ರೆಯಲ್ಲಿ ಶೇಖರಣೆಯಾಗುತ್ತದೆ. ಈ ರೀತಿ ಜೇನುತುಪ್ಪ ತೆಗೆಯುವುದರಿಂದ ಜೇನುತುಪ್ಪವು ಶುದ್ದವಾಗಿರುತ್ತಲ್ಲದೆ ಎರಿಗಳು ಹಾಳಾಗುವುದನ್ನು ತಪ್ಪಸಿ ಪುನಃ ಎರಿಗಳನ್ನು ಜೇನುಗೂಡುಗಳಲ್ಲಿ ಉಪಯೋಗಿಸಲು ಸಾಧ್ಯವಾಗುತ್ತದೆ.

ಕೃತಕ ಮೇಣದ ಹಾಳೆಗಳು :  ಕೃತಕ ಮೇಣದ ಹಾಳೆಗಳನ್ನು ಜೇನುನೊಣಗಳಿಂದ ಉತ್ಪನ್ನವಾದ ಜೇನು ಮೇಣದಿಂದ ತಯಾರಿಸಲಾಗುತ್ತಿದ್ದು ಅಗತ್ಯವಿದ್ದಾಗ ಚೌಕಟ್ಟುಗಳಿಗೆ ಅಂಟಿಸಲಾಗುತ್ತದೆ. ಈ ಮೇಣದ ಹಾಳೆಯನ್ನು ಚೌಕಟ್ಟುಗಳಿಗೆಅಂಟಿಸಿದ ಕೆಲವು ದಿನಗಳಲ್ಲಿ  ಜೇನು ನೊಣಗಳು ಅವುಗಳ ಮೇಲೆ ಎರಿಗಳನ್ನು ಕಟ್ಟುತ್ತವೆ. ಸಾಮಾನ್ಯವಾಗಿ ಕೃತಕ ಮೇಣದ ಹಾಳೆಗಳನ್ನು ಕೆಲಸಗಾರ ನೊಣಗಳು ಮೇಣದ ಹಾಳೆಯ ಕಣದ ಗಾತ್ರಕ್ಕನುಗುಣವಾಗಿ ರಚಿಸುವುದರಿಂದ ಕಣದ ಗಾತ್ರದಲ್ಲಿಯೇ ಎರಿಯನ್ನು ಕಟ್ಟುತ್ತವೆ. ಮೇಣದ ಹಾಳೆಗಳು ವಿವಿಧ ಗಾತ್ರ ಮತ್ತು ಅಳತೆಗಳಲ್ಲಿ ದೊರೆಯುತ್ತಿದ್ದು ಅವುಗಳನ್ನು ಚೌಕಟ್ಟುಗಳ ಅಳತೆಗೆ ಹೊಂದಿಕೊಳ್ಳುವಂತೆ ನಿರ್ಮಿಸಲಾಗುತ್ತದೆ. ಸಂಸಾರ ಕೋಣೆಯ ಚೌಕಟ್ಟುಗಳಲ್ಲಿ ಉಪಯೋಗಿಸುವ ಮೇಣದ ಹಾಳೆಗಳು ತೆಳು, ಮಧ್ಯಮ ಮತ್ತು ದಪ್ಪ ಎಂದು ಮೂರು ಅಳತೆಗಳಲ್ಲಿರುತ್ತವೆ. ಆದರೆ ಜೇನುಕೋಣೆಗಳಲ್ಲಿ ಉಪಯೋಗಿಸುವ ಮೇಣದ ಹಾಳೆಗಳು ಮಧ್ಯ ಮತ್ತು ದಪ್ಪದ ಎರಡು ಅಳತೆಗಳಲ್ಲಿರುತ್ತವೆ.

ಜೇನುಕೃಷಿಯ ಉಪಕರಣಗಳು

ಮೇಣದ ಹಾಳೆಗಳನ್ನು ವಿವಿಧ ಕಚ್ಚಾವಸ್ತುಗಳನ್ನು (ಅಲ್ಯೂಮಿನಿಯಂ, ಸೆಲ್ಯುಲಾಯ್ಡ್, ಟ್ರೇಸಿಂಗ್‌ಕ್ಲಾತ್, ಮತ್ತು ಪ್ಲಾಸ್ಟಿಕ್) ಉಪಯೋಗಿಸಿ ತಯಾರಿಸಲು ಪ್ರಾರಂಭಿಸಲಾಯಿತು. ಜೇನು ನೊಣಗಳು ಜೇನು ಮೇಣದಿಂದ ತಯಾರಿಸಿದ ಮೇಣದ ಹಾಳೆಗಳನ್ನು ತೆಗೆದುಕೊಳ್ಳುವಷ್ಟು ಸುಲಭವಾಗಿ ಅಲ್ಯೂಮಿನಿಯಂ ಹಾಳೆಗಳನ್ನು ಸ್ವೀಕರಿಸದೆ ಇರುವುದರಿಂದ ಮತ್ತು ಅವುಗಳ ತಯಾರಿಕಾ ವೆಚ್ಚವು ಹೆಚ್ಚಾಗುವುದರಿಂದ ಅವುಗಳನ್ನು ಕೈಬಿಡಲಾಯಿತು. ನಿಗದಿತ ಗಾತ್ರದ ಸತುವಿನ ತಂತಿಗಳಿಂದ ಕೂಡಿದ ಚೌಕಟ್ಟುಗಳಿಗೆ ಕೃತಕ ಮೇಣದ ಹಾಳೆಗಳನ್ನು ಅಂಟಿಸಲಾಗಿರುತ್ತದೆ (ಸುಮಾರು ೨೬ – ೨೮ ಗೇಜ್). ಮಿತವಾದ ವಿದ್ಯುತ್‌ನಿಂದ ತಂತಿಗಳನ್ನು ಕಾಯಿಸಿ ಮೇಣದ ಹಾಳೆಗಳನ್ನು ಅವುಗಳಿಗೆ ಬಿಗಿಯಾಗಿ ಅಂಟಿಸಲಾಗುತ್ತದೆ ಮತ್ತು ಚೌಕಟ್ಟುಗಳ ಅಳತೆಗನುಗುಣವಾಗಿ ಮೇಣದ ಹಾಳೆಗಳನ್ನು ತಯಾರಿಸಲಾಗುತ್ತದೆ.

ಹೊಗೆತಿದಿ : ಜೇನುಗೂಡನ್ನು ಪರೀಕ್ಷೆ ಮಾಡುವ ಸಮಯದಲ್ಲಿ ಜೇನುನೊಣಗಳನ್ನು ತಾತ್ಕಾಲಿಕವಾಗಿ ಸ್ತಬ್ದಗೊಳಿಸಲು ಹೊಗೆತಿದಿಯ ಮೂಲಕ ಹೊಗೆಯನ್ನು ಕೊಡಲಾಗುತ್ತದೆ. ಹೊಗೆಯನ್ನು ಉತ್ಪತ್ತಿ ಮಾಡಲು ಇದ್ದಿಲು, ಚಿಂದಿ ಬಟ್ಟೆ, ಸ್ವಚ್ಛವಾದ ಹೊಟ್ಟು ಅಥವಾ ತಂಬಾಕುವಿನಿಂದ ಕೂಡಿದ ವಸ್ತುಗಳನ್ನು ಉಪಯೋಗಿಸಲಾಗುತ್ತದೆ. ಹೊಗೆಯನ್ನು ನೇರವಾಗಿ ಜೇನು ನೊಣಗಳಿಗೆ ನೀಡಲು ವಿವಿಧ ಅಳತೆಯ ಕೊಳವೆಗಳಿಂದ ಕೂಡಿದ ಹೊಗೆತಿದಿಗಳನ್ನು ಬಳಸಲಾಗುತ್ತಿದೆ. ಹೊಗೆ ತಿದಿಯು ೧.೬ ಸೆಂ.ಮೀ. ವ್ಯಾಸ ಮತ್ತು ೧೩ ಸೆಂ.ಮೀ. ಉದ್ದದ ಕೊಳವೆಯಿಂದ ಕೂಡಿರುತ್ತದೆ. ಹೊಗೆ ತಿದಿಯಲ್ಲಿ ಹೊಗೆ ಉತ್ಪಾದಿಸುವ  ವಸ್ತುಗಳನ್ನಿಟ್ಟು ಬೆಂಕಿ ಅಂಟಿಸುವ ಮೂಲಕ ಹೊಗೆಯನ್ನು ಜೇನುನೊಣಗಳಿಗೆ ನೀಡಲಾಗುತ್ತದೆ. ಈ ಹೊಗೆ ತಿದಿಗಳ ಗಾತ್ರವು ಪ್ರದೇಶಕ್ಕೆ ತಕ್ಕಂತೆ ವ್ಯತ್ಯಾಸಗೊಳ್ಳುತ್ತಿದ್ದು ಇತ್ತೀಚಿನ ದಿನಗಳಲ್ಲಿ ವಿದ್ಯುತ್ ಚಾಲಿತ  ಹೊಗೆತಿದಿಗಳು ಪ್ರಪಂಚದ ವಿವಿಧಭಾಗಗಳಲ್ಲಿ ದೊರೆಯುತ್ತವೆ.

ಮುಖಪರದೆ : ಮುಖಪರದೆ ಮತ್ತು ‘ಬೀ ಸ್ಯೂಟ್’ ಗಳು ಮಧುವನದಲ್ಲಿ ಜೇನುನೊಣಗಳೊಂದಿಗೆ ಕೆಲಸ ಮಾಡಲು ಅತ್ಯವಶ್ಯಕ. ಮುಖಪರದೆ ಹತ್ತಿ ಅಥವಾ ಹತ್ತಿಯ ಜೊತೆಗೆ ರೇಷ್ಮೆಯ ನೂಲಿನಿಂದ ಕೂಡಿದ ಬಲೆಯಾಗಿರುತ್ತದೆ. ಇದನ್ನು ಮಡಚಬಹುದಾಗಿದ್ದು ಟೋಪಿಯೊಂದಿಗೆ ಇಳಿಬಿಡಲಾಗಿರುತ್ತದೆ. ಇದರಿಂದಾಗಿ ಜೇನು ನೊಣಗಳು ಮುಖ ಮತ್ತು ಕುತ್ತಿಗೆಯ ಭಾಗಗಳಲ್ಲಿ ಚುಚ್ಚುವುದನ್ನು ತಪ್ಪಿಸಬಹುದು.

ಶುಚಿಗೊಳಿಸುವ ಸಾಧನ :  ಈ ಸಾಧನವನ್ನು ಜೇನು ಪೆಟ್ಟಿಗೆಯ ಭಾಗಗಳನ್ನು ಬೇರ್ಪಡಿಸಲು ಮತ್ತು ಅಡಿಮಣೆ, ಚೌಕಟ್ಟು ಮುಂತಾದವುಗಳನ್ನು ಶುಚಿಗೊಳಿಸಲು ಉಪಯೋಗಿಸಲಾಗುತ್ತದೆ. ಈ ಸಾಧನವು ಕಬ್ಬಿಣ, ಉಕ್ಕು ಅಥವಾ ಅಲ್ಯೂಮಿನಿಯಂನಿಂದಾಗಿದ್ದು ಒಂದು ತುದಿಯನ್ನು ಬಗ್ಗಿಸಲಾಗಿದ್ದು, ಮತ್ತೊಂದು ತುದಿ ಮೊನಚಾಗಿರುತ್ತದೆ.

ಕೈಚೀಲ :  ಜೇನುನೊಣಗಳ ಚುಚ್ಚುವಿಕೆಯಿಂದ ತಪ್ಪಿಸಿಕೊಳ್ಳಲು ಬಟ್ಟೆಯಿಂದ ಚೌಕಟ್ಟುಗಳ ಭಾಗಗಳಿಗೆ ಅಂಟಿಕೊಳ್ಳದ ರೀತಿಯಲ್ಲಿ ತಯಾರಿಸಿದ ಕೈ ಚೀಲಗಳನ್ನು ಉಪಯೋಗಿಸಲಾಗುತ್ತದೆ. ಸಾಮಾನ್ಯವಾಗಿ ಚರ್ಮ ಅಥವಾ ದಪ್ಪವಾದ ಹತ್ತಿಯಿಂದ ಮಾಡಲ್ಪಟ್ಟಿರುತ್ತವೆ.

ಒಳ ಮುಚ್ಚಳ :  ಜೇನುಗೂಡಿನಲ್ಲಿ ನೊಣಗಳ ಕೆಲಸ ಕಾರ್ಯಗಳು ಸುಗಮವಾಗಿ ನಡೆಯಲು ಗೂಡಿನ ಉಷ್ಣತೆ ನಿರ್ದಿಷ್ಟಾಗಿರಬೇಕು. ಉಷ್ಣತೆ ಹವಾಮಾನಕ್ಕೆ ಅನುಗುಣವಾಗಿ ವ್ಯತ್ಯಾಸಗೊಳ್ಳುವುದರಿಂದ ಮರದಿಂದ ತಯಾರಿಸಿದ ಒಳ ಮುಚ್ಚಳವನ್ನು ಉಪಯೋಗಿಸುವುದರಿಂದ ನಿರ್ದಿಷ್ಟ ಉಷ್ಣತೆಯನ್ನು ಕಾಪಾಡಬಹುದು.

ಒತ್ತರಿಸುವ ಹಲಗೆ : ಒತ್ತರಿಸುವ ಹಲಗೆ ಜೇನು ಪೆಟ್ಟಿಗೆಯ ಉಷ್ಣತೆಯನ್ನು ನಿಯಂತ್ರಿಸಲು ಉಪಯೋಗಿಸುವ ಉಪಕರಣವಾಗಿದ್ದು, ಕುಟುಂಬದಲ್ಲಿ ಜೇನುನೊಣಗಳ ಸಂಖ್ಯೆ ಕಡಿಮೆಯಾಗಿ ಸಂಸಾರ ಕೋಣೆಯಲ್ಲಿ ಜೇನುನೊಣಗಳು ಕೆಲವು ಎರಿಗಳನ್ನು ಆವರಿಸಿದಲ್ಲಿ ಈ ಹಲಗೆಯನ್ನು ಕೊನೆಯ ಎರಿಯ ಪಕ್ಕದಲ್ಲಿಟ್ಟು ಒತ್ತರಿಸುವುದರಿಂದ ಕುಟುಂಬದಲ್ಲಿ ಉಷ್ಣತೆಯೊಂದಿಗೆ ಸ್ವಾಭಾವಿಕ ವಾತಾವರಣವನ್ನು ಉಂಟುಮಾಡಬಹುದು.

ರಾಣಿ ತಡೆಗೇಟು : ರಾಣಿ ತಡೆಗೇಟು ಪ್ರಾರಂಭಿಕ ಜೇನುಕೃಷಿಯಲ್ಲಿ ಉಪಯೋಗಿಸುವ ಒಂದು ಸಾಧನ. ಇದರ ಮೂಲಕ ಕೆಲಸಗಾರ ನೊಣಗಳು ಮಾತ್ರ ಓಡಾಡಲು ಸಾಧ್ಯವಾಗುತ್ತದೆ ಮತ್ತು ರಾಣಿಗೆ ಹೊರ ಹೋಗಲು ಸಾಧ್ಯವಾಗುವುದಿಲ್ಲ. ಕುಟುಂಬವು ಪರಿಸರಕ್ಕೆ ಹೊಂದಿಕೊಂಡು ಮೊಟ್ಟೆ, ಮರಿ, ಜೇನುತುಪ್ಪದಿಂದ ಕೂಡಿದ್ದಲ್ಲಿ ಈ ಗೇಟನ್ನು ಉಪಯೋಗಿಸುವ ಅವಶ್ಯಕತೆ ಇರುವುದಿಲ್ಲ. ಜೇನು ಕುಟುಂಬಗಳು ಪಲಾಯನ ಮಾಡುವ ಕಾಲದಲ್ಲಿ, ಹೊಸದಾಗಿ ಕುಟುಂಬಗಳನ್ನು ಪೆಟ್ಟಿಗೆಗೆ ವರ್ಗಾಯಿಸಿದ ಸಮಯದಲ್ಲಿ ಉಪಕರಣಗಳನ್ನು ಉಪಯೋಗಿಸಬೇಕಾಗುತ್ತದೆ. ಆದರೆ ಕುಟುಂಬವು ತುಂಬಾ ಬಲಹೀನತೆಯಿಂದ ಕೂಡಿದ್ದಲ್ಲಿ ಕೆಲಸಗಾರ ನೊಣಗಳು ಗೇಟಿನ ಮೂಲಕ ರಾಣಿಯನ್ನು ಬಲವಂತವಾಗಿ ಹೊರಗೆಳೆದು ಗೂಡನ್ನು ಬಿಟ್ಟುಹೋಗುವ ಸಾಧ್ಯತೆ ಇರುತ್ತದೆ.

ರಾಣಿ ಪಂಜರ :  ರಾಣಿ ಪಂಜರವು ರಾಣಿಯನ್ನು ಕುಟುಂಬದ ನಿಗದಿತ ಭಾಗದಲ್ಲಿಡಲು ಉಪಯೋಗಿಸುವ ಸಾಧನವಾಗಿದ್ದು ಲೋಹದ ತಂತಿ ಅಥವಾ ಮರದಿಂದ ತಯಾರಿಸಲಾಗಿರುತ್ತದೆ. ಕೆಲಸಗಾರ ನೊಣಗಳು ಪಂಜರದೊಳಗೆ ಸರಾಗವಾಗಿ ಓಡಾಡಬಹುದಾದರೂ ರಾಣಿ ಪಂಜರದಿಂದ ಹೊರ ಹೋಗಲು ಸಾಧ್ಯವಾಗುವುದಿಲ್ಲ. ರಾಣಿ ಪಂಜರವು ಬಲಹೀನ ಕುಟುಂಬಕ್ಕೆ ಹೊಸ ರಾಣಿಯನ್ನು ಪರಿಚಯಿಸುವಾಗ, ಸ್ವಾಭಾವಿಕ ಸ್ಥಾನಗಳಿಂದ ಪೆಟ್ಟಿಗೆಗೆ ವರ್ಗಾಯಿಸುವಾಗ ಸಾಮಾನ್ಯವಾಗಿ ಉಪಯೋಗಿಸಲಾಗುತ್ತದೆ.

ಹೊಸ ಕುಟುಂಬವನ್ನು ಕೂಡಿಸುವ ಪೆಟ್ಟಿಗೆ : ಇದು ತುಂಬಾ ಹಗುರಾದ ಹಲಗೆಗಳಿಂದ ಕೂಡಿದ ಚಿಕ್ಕ ಜೇನು ಪೆಟ್ಟಿಗೆ, ಸುಮಾರು ೪- ೫ ಚೌಕಟ್ಟುಗಳಿಂದ ಮಾತ್ರ ಕೂಡಿರುತ್ತದೆ. ಇದನ್ನು ‘ಹೈವಿಂಗ್ ಕೇಜ್’ ಎಂದು ಕರೆಯುವರು. ನೈಸರ್ಗಿಕವಾಗಿ ಜೇನು ಕುಟುಂಬಗಳನ್ನು ಹಿಡಿದು ಸಾಗಿಸಲು ಮತ್ತು ಕೆಲವು ದಿನಗಳವರೆಗೆ ಪೆಟ್ಟಿಗೆಯ ಪರಿಸ್ಥಿತಿಗೆ ಹೊಂದಿಕೊಳ್ಳಲು ಈ ಪೆಟ್ಟಿಗೆ ಅವಶ್ಯಕ. ಈ ಪೆಟ್ಟಿಗೆಯ ಒಳ ಮೇಲ್ಭಾಗದಲ್ಲಿ ಜೇನುನೊಣಗಳು ಕೂರಲು ಮತ್ತು ಗಾಳಿಯಾಡಲು ಸಾಕಷ್ಟು ಸ್ಥಳಾವಕಾಶವನ್ನು ಒದಗಿಸಲಾಗಿರುತ್ತದೆ. ಜೇನು ಕುಟುಂಬಗಳು ಸಹಜ ಸ್ಥಿತಿಯಲ್ಲಿ ತೊಡಗಿದ ನಂತರ ಇದರಲ್ಲಿನ ಜೇನು ಕುಟುಂಬವನ್ನು ಸಾಕುವ ಜೇನುಪೆಟ್ಟಿಗೆಗೆ ವರ್ಗಾಯಿಸಲಾಗುತ್ತದೆ.

ಜೇನುನೊಣಗಳ ಕುಂಚ : ಇದು ಪ್ರಾಣಿಗಳ ಮೃದುವಾದ ಕೂದಲಿನಂತಹ ಎಳೆಗಳಿಂದ ಕುಡಿದ್ದು ಸುಮಾರು ೮ – ೯ ಸೆಂ.ಮೀ. ಉದ್ದವಿರುತ್ತದೆ. ಈ ಕುಂಚವು ಜೆನುನೊಣಗಳನ್ನು ಎರಿಗಳಿಂದ ಬೇರ್ಪಡಿಸಲು ಸಹಕಾರಿಯಾಗುತ್ತದೆ. ಕುಂಚವನ್ನು ಜೇನುಕುಟುಂಬದಲ್ಲಿ ಬಳಸುವಾಗ ಜೇನುತುಪ್ಪಕ್ಕೆ ಅಂಟಿಕೊಳ್ಳದಂತೆ ಉಪಯೋಗಿಸಬೇಕು.

ಜೇನು ನೊಣಗಳಿಗೆ ಆಹಾರ ನೀಡುತ್ತಿರುವುದು

 ಆಹಾರ ನೀಡುವ ಬಟ್ಟಲುಗಳು : ಜೇನುನೊಣಗಳಿಗೆ ಆಹಾರದ ಅಭಾವದ ಕಾಲದಲ್ಲಿ ಕೃತಕ ಆಹಾರವನ್ನು ನೀಡಿ ಕುಟುಂಬವನ್ನು ಬಲಗೊಳಿಸುವುದು ಅವಶ್ಯಕ. ಬಟ್ಟಲುಗಳಲ್ಲಿ ಅನೇಕ ವಿಧಗಳಿದ್ದು ಅವುಗಳಲ್ಲಿ ಬೋರ್ಡಮ್ಯಾನ್ ಫಿಡರ್‌ಗಳು ಮತ್ತು ಡೂಲಿಟ್ಲೆ ಫಿಡರ‍್ಗಳು ಸಾಮಾನ್ಯವಾಗಿ ಪ್ರಪಂಚದಾದ್ಯಂತ ಕಂಡು ಬರುತ್ತವೆ. ಡೂಲಿಟ್ಲೆ ಫಿಡರ‍್ಗಳನ್ನು ಚೌಕಟ್ಟುಗಳಿಂದ ಇಳಿಬಿಡಲಾಗಿರುತ್ತದೆ. ಇವುಗಳಿಗೆ ಸುಮಾರು ೪೦೦ – ೫೦೦ ಮಿ.ಲೀ. ನಷ್ಟು ಸಕ್ಕರೆ ಪಾಕವನ್ನಿಡಿಸುವ ಸಾಮರ್ಥ್ಯವಿದ್ದು ಜೇನುನೊಣಗಳು ಮುಳುಗಿ ಸಾಯದಂತೆ ತೆಳುವಾದ ತಂತಿಗಳನ್ನು ಅಳವಡಿಸಲಾಗಿರುತ್ತದೆ. ಬ್ರಾಡ್‌ಮೆನ್‌ನ ಫಿಡರ‍್ಗಳು ಜಾಡಿಗಳಂತಿದ್ದು ಮುಚ್ಚಳದಿಂದ ಕೂಡಿರುತ್ತವೆ ಮತ್ತು ದ್ವಾರದಲ್ಲಿನ ಪೆಟ್ಟಿಗೆಯಾಕಾರದ ಬಟ್ಟಲಿನಿಂದ ಜೇನುನೊಣಗಳು ಸಕ್ಕರೆ ಪಾಕವನ್ನು ನೇರವಾಗಿ ತೆಗೆದುಕೊಳ್ಳುವಂತೆ ಮಾಡಲಾಗಿರುತ್ತದೆ. ಸಕ್ಕರೆ ಪಾಕವು ಹೊರಹೋಗದಂತೆ ಮುಚ್ಚಳವನ್ನು ಗಟ್ಟಿಯಾಗಿ ಮುಚ್ಚಲಾಗಿರುತ್ತದೆ. ಜೇನುಕೃಷಿಕರು ತಮ್ಮ ಜೇನು ಕುಟುಂಬಗಳನ್ನು ಬಟ್ಟಲುಗಳಲ್ಲಿ ನೇರವಾಗಿ ಸಕ್ಕರೆ ಪಾಕವನ್ನು ಸುರಿದು ನೊಣಗಳು ಮುಳುಗದಂತೆ ಶುದ್ಧವಾದ ಒಣ ಹುಲ್ಲನ್ನು ಬಳಸಿ ಉಪಯೋಗಿಸುತ್ತಾರೆ (ಚಿತ್ರ ೩೬).

ಗಂಡು ಜೇನುನೊಣ ತಡೆಗೇಟು : ಈ ತಡೆಗೇಟನ್ನು ಗಂಡು ನೊಣಗಳು ಬೆಳವಣಿಗೆಯ ಕಾಲದಲ್ಲಿ ರಾಣಿಯ ಪ್ರಸ್ಥದ ಹಾರಾಟದ ನಂತರ ಹೊರದೋಡಿಸಲು ಉಪಯೋಗಿಸಲಾಗುತ್ತದೆ. ಇದರಿಂದಾಗಿ ಕುಟುಂಬದಿಂದ ಹೊರಹೋದ ಗಂಡುನೊಣಗಳು ಪೆಟ್ಟಿಗೆಯೊಳಗೆ ಬರಲು ಸಾಧ್ಯವಾಗುವುದಿಲ್ಲ. ಆದರೆ ಕೆಲಸಗಾರ ನೊಣಗಳ ಕಾರ್ಯಾಚರಣೆಗಳಿಗೆ ತಡೆಗೇಟಿನಿಂದ ಯಾವುದೇ ರೀತಿಯ ಅಡ್ಡಿಯುಂಟಾಗುವುದಿಲ್ಲ

ಪರಾಗ ತಡೆಗೇಟು : ಪರಾಗದ ತಡೆಗೇಟನ್ನು ಮರದ ಹಲಗೆ ಅಥವಾ ಪ್ಲಾಸ್ಟಿಕ್‌ನಿಂದ , ಮಾಡಲಾಗಿದ್ದು ಹೆಚ್ಚು ಪರಾಗ ದೊರೆಯುವ ಕಾಲದಲ್ಲಿ ಕೆಲಸಗಾರ ನೊಣಗಳು ಸಸ್ಯಗಳಿಂದ ಒಳ ತರುವ ಪರಾಗವನ್ನು ತಡೆಯಲು  ಉಪಯೋಗಿಸಲಾಗುತ್ತದೆ. ಈ ಗೇಟುಗಳು ಕೆಲಸಗಾರ ನೊಣಗಳ ಗಾತ್ರಕ್ಕನುಸಾರವಾಗಿ ಮಾಡಲಾಗಿದ್ದು  ಕೆಲಸಗಾರ ನೊಣಗಳು ಗೇಟಿನಿಂದ ಒಳಗೆ ಹೋಗುವಷ್ಟು ಗಾತ್ರದ ರಂಧ್ರಗಳಿದ್ದು  ತಮ್ಮ ಪರಾಗ ಬುಟ್ಟಿಯಲ್ಲಿನ ಪರಾಗ ಒಳಗಡೆ ಹೋಗುವಾಗ ಬೀಳುವುದರಿಂದ ಮರದ ಹಲಗೆಯಲ್ಲಿ ಶೇಖರಣೆಯಾಗುತ್ತದೆ. ಪರಾಗ ತಡೆಗೇಟು ಉತ್ತಮ ಮಟ್ಟದ ಮರದಿಂದ ತಯಾರಿಸಲಾಗಿದ್ದು ಕೆಲಸಗಾರ ನೊಣಗಳ ಪರಾಗದ ಬುಟ್ಟಿಗಳಿಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ.