ಜೇನುನೊಣಗಳು ತಮ್ಮ ಕುಟುಂಬಗಳ ಕಾರ್ಯಗಳನ್ನು ತಾವೇ ನಿರ್ವಹಿಸಿದರೂ ಕೆಲವು ತಂತ್ರಜ್ಞಾನಗಳಿಂದ ಕುಟುಂಬಗಳ ಗುಣಮಟ್ಟವನ್ನು ಹೆಚ್ಚಿಸಬಹುದಾಗಿದೆ. ಅವುಗಳಲ್ಲಿ ಕುಟುಂಬ ಪಾಲಾಗುವಿಕೆಯ ನಿಯಂತ್ರಣ, ಆಹಾರ ನೀಡುವಿಕೆ, ಕುಟುಂಬಗಳ ವಿಭಜನೆ, ಕುಟುಂಬಗಳನ್ನು ಕುಡಿಸುವುದು. ಜೇನುನೊನಗಳು ಪರಾರಿಯಾಗುವುದು, ತಳಿ ಸುಧಾರಣೆ, ರಾಣಿ ನೊಣ ಬೆಳೆಸುವಿಕೆ, ಕೃತಕ ಗರ್ಭಧಾರಣೆ ಮುಂತಾದವು ಪ್ರಮುಖವಾದವು.

ಕುಟುಂಬಗಳು ಪಾಲಾಗುವಿಕೆ : ಜೀವಿಗಳ ವಂಶಾಭಿವೃದ್ಧಿಯು ತಮ್ಮದೇ ಆದ ವಿಧಾನಗಳನ್ನು ಹೊಂದಿದ್ದು ಸಸ್ಯಗಳಲ್ಲಿ ಬೀಜಗಳಿಂದ ಉತ್ಪತ್ತಿ ಮಾಡಿದರೆ, ಕೀಟಗಳಲ್ಲಿ ಮೊಟ್ಟೆಯ ಮೂಲಕ ವಂಶಾಭಿವೃದ್ಧಿಯಾಗುತ್ತದೆ. ರಾಣಿನೊಣವು ಕುಟುಂಬದ ಅಗತ್ಯತೆ ಮತ್ತು ವಯಸ್ಸಿಗನುಗುಣವಾಗಿ ಮೊಟ್ಟೆಗಳನ್ನಿಡುತ್ತದೆ.

ಪಾಲಾಗಿರುವ ಒಂದು ಜೇನು ಕುಟುಂಬ

ಇದು ಹೆಚ್ಚಿನ ಮೊಟ್ಟೆಗಳನ್ನಿಟ್ಟಲ್ಲಿ ಜೇನು ಕುಟುಂಬವು ಮಿತಿ ಮೀರಿ ಬೆಳೆದು ರಾಣಿಯು ಇಡೀ ಕುಟುಂಬವನ್ನು ನಿಯಂತ್ರಿಸುವುದು ಕಷ್ಟವಾಗುತ್ತದೆ. ಇದರಿಂದಾಗಿ ಕೆಲಸಗಾರ ನೊಣಗಳು ಎರಿಯ ಕೆಳಭಾಗದ ಅಂಚಿನಲ್ಲಿ ಫಲಿತ ಮೊಟ್ಟೆಯಿಂದ ಹೊರಬಂದ ಒಂದು ದಿನದ ಮರಿಗೆ ರಾಣಿ ಕಣವನ್ನು ನಿರ್ಮಿಸಿ ರಾಜಶಾಹಿರಸವನ್ನು ಒದಗಿಸಿ, ಹೊಸ ರಾಣಿಯನ್ನು ಬೆಳೆಸುತ್ತವೆ. ಹಳೆಯ ರಾಣಿಗೆ ಹೊಸ ರಾಣಿಯ ಬೆಳವಣಿಗೆ ಕಂಡು ಬಂದಲ್ಲಿ ಅದನ್ನು ಕೋಶಾವಸ್ಥೆಯಲ್ಲಿಯೇ ಸಾಯಿಸುವ ಸಂಭವವಿರುತ್ತದೆ. ಹೀಗೆ ಹೊರಬಂದ ಹೊಸ ಮತ್ತು ಹಳೆಯ ರಾಣಿಗಳ ನಡುವೆ ಕೆಲಸಗಾರ ನೊಣಗಳೊಡನೆ ಕಲಹ ನಡೆದು ಸಾಮಾನ್ಯವಾಗಿ ಹಳೆಯ ರಾಣಿ ಅಗತ್ಯ ಸಂಖ್ಯೆಯ ಕೆಲಸಗಾರ ನೊಣಗಳೊಂದಿಗೆ ಜೇಣು ಕುಟುಂಬವನ್ನು ಬಿಟ್ಟು ಹೊರ ಹೋಗುತ್ತವೆ. ಇದೇ ರೀತಿ ಕೆಲವು ಬಾರಿ ಹೊಸರಾಣಿಯು ಕೆಲಸಗಾರ ನೊಣಗಳೊಂದಿಗೆ ಗೂಡನ್ನು ಬಿಟ್ಟು ಹೋಗುವ ಸಂಭವವಿರುತ್ತದೆ. ಈ ರೀತಿ ರಾಣಿಯೊಡನೆ ಜೇನು ಕುಟುಂಬವು ವಿಭಜಿಸುವುದಕ್ಕೆ ಕುಟುಂಬ ಪಾಲಾಗುವಿಕೆ ಎಂದು ಕರೆಯಲಾಗುತ್ತದೆ (ಚಿತ್ರ ೩೭).

ಜೇನು ಕುಟುಂಬದಲ್ಲಿ ಪಾಲಾಗುವಿಕೆಯ ಪ್ರಾರಂಭದ ಅನೇಕ ಕಾರಣಗಳಿಂದ ನಡೆಯುತ್ತದೆ. ಕುಟುಂಬದಲ್ಲಿ ಪ್ರೌಢ ನೊಣಗಳ ಸಂಖ್ಯೆ ಹೆಚ್ಚಾಗಿರುವುದು. ಗೂಡಿನಲ್ಲಿ ಗಾಳಿಯಾಡದಿರುವಿಕೆ, ರಾಣಿಗೆ ವಯಸ್ಸಾಗಿರುವುದು ಮತ್ತು ಎಲ್ಲಾ ಕೆಲಸಗಾರ ನೊಣಗಳಿಗೆ ಸೂಕ್ತವಾದ ರಾಣಿಯ ಚೋದಕ  ರಾಸಾಯನಿಕ ಸಿಕ್ಕದಿರುವುದು. ಇದನ್ನು ನಿಯಂತ್ರಿಸಲು ದಪ್ಪದಾದ ಸೂಕ್ತ ರಾಣಿಕಣವನ್ನು  ಬಿಟ್ಟು ಇನ್ನುಳಿದ ರಾಣಿಕಣಗಳನ್ನು ಕೋಶದ ಹಂತದಲ್ಲಿ ನಾಶಪಡಿಸುವುದರಿಂದ ಪಾಲಾಗುವಿಕೆಯನ್ನು ತಡೆಗಟ್ಟಬಹುದಾಗಿದೆ.

ಆಹಾರ ನೀಡುವಿಕೆ : ಪರಿಸರದಲ್ಲಿ ಪರಾಗ ಮತ್ತು ಮಕರಂದ ಸಿಗದಿದ್ದಲ್ಲಿ ಜೇನು ಕುಟುಂಬಗಳಿಗೆ ಕೃತಕ ಆಹಾರವನ್ನು ಒದಗಿಸಬೇಕು. ಶುದ್ಧ ಕಲ್ಮಶರಹಿತ ಸಕ್ಕರೆ ಮತ್ತು ನೀರನ್ನು ೧:೧ ಅನುಪಾತದಲ್ಲಿ ತಯಾರಿಸಬೇಕು.  ಕುದಿಯುವ ನೀರಿಗೆ ಸಕ್ಕರೆಯನ್ನು ಬೆರೆಸಿ ತಣ್ಣಗಾದ ಮೇಲೆ ೨ – ೩ ತೊಟ್ಟು ನಿಂಬೆ ಹಣ್ಣಿನ ರಸವನ್ನು ಬೆರೆಸಿ ನೀಡಬಹುದು. ಇದರಿಂದ ಜೇನು ನೊಣಗಳು ಆಹಾರವನ್ನು ಪಚನ ಮಾಡಲು ಸುಲಭವಾಗುವುದು. ಆಹಾರವನ್ನು ತೆರೆದ, ಶುದ್ಧವಾದ ಮತ್ತು ತೇಲುವ ಒಣ ಹುಲ್ಲಿನೊಂದಿಗೆ ಬಟ್ಟಲಿನಲ್ಲಿ ಇಡಬೇಕು.  ಮುಚ್ಚಿದ ಬಟ್ಟಲುಗಳಲ್ಲಿ ಕೊಡುವುದಾದರೆ ಅವುಗಳ ಮುಚ್ಚಳಗಳಲ್ಲಿ ಸೂಜಿಯಿಂದ ಸಾಕಷ್ಟು ಚಿಕ್ಕ ರಂಧ್ರಗಳನ್ನು ಮಾಡಬೇಕು. ಸಂಸಾರ ಕೋಣೆಯ ಮೇಲೆ ನೊಣಗಳಿರುವ ಭಾಗದಲ್ಲಿ ಸುಮಾರು ೭ ಮಿ.ಮೀ ದಪ್ಪದ ಕಡ್ಡಿಗಳನ್ನಿಟ್ಟು ಆಹಾರ ತುಂಬಿದ ಪಾತ್ರೆಗಳನ್ನು ಮುಚ್ಚಳದಲ್ಲಿ  ರಂಧ್ರಗಳ  ಭಾಗವು ಕೆಳಭಾಗಕ್ಕೆ ಬರುವಂತೆ ಕೋಣೆಯ ಚೌಕಟ್ಟಿನ ಕಡ್ಡಿಗಳ ಮೇಲಿಡಬೇಕು. ಆಹಾರ ಕದಿಯುವಿಕೆಯನ್ನು ತಪ್ಪಿಸಲು ಆಹಾರದ ಪಾತ್ರೆ ಸಂಪೂರ್ಣವಾಗಿ ಮುಚ್ಚುವಂತೆ ಖಾಲಿ ಜೇನು ಕೋಣೆಯಿಂದ ಕೂಡಿರಬೇಕು. ಅಲ್ಲದೇ ಬಟ್ಟಲಿನಲ್ಲಿ ಶುದ್ಧವಾದ ಹತ್ತಿಯ ಉಂಡೆಯನ್ನು ಮಾಡಿ ಸಕ್ಕರೆ ಪಾಕದಲ್ಲಿ ಮುಳುಗಿಸಿ ಜೇನುನೊಣಗಳಿಗೆ ನೀಡಬಹುದಾಗಿದೆ.

ಕುಟುಂಬಗಳ ವಿಭಜನೆ : ಆಹಾರವು ಹೇರಳವಾಗಿ ಸಿಗುವ ಕಾಲದಲ್ಲಿ ಕುಟುಂಬಗಳು ಚೆನ್ನಾಗಿ ಬೆಳೆದು ೮ – ೧೦ ಪೂರ್ಣ ಚೌಕಟ್ಟುಗಳಿಂದ ಕೂಡಿರುವುದಲ್ಲದೆ ಸಾಕಷ್ಟು ಮೊಟ್ಟೆ, ಮರಿ, ಪರಾಗ ಮತ್ತು ಜೇನುತುಪ್ಪವೂ ಇರುತ್ತದೆ. ಇಂತಹ ಮಧುವನದಿಂದ ಹೆಚ್ಚು ಜೇನುತುಪ್ಪ ನೀಡುವ ಮತ್ತು ರೋಗ ರಹಿತ ಕುಟುಂಬಗಳನ್ನು ಗುರುತಿಸಿ ದ್ವಿಗುಣಗೊಳಿಸಬಹುದು. ಇಂತಹ ಕುಟುಂಬಗಳನ್ನು ದ್ವಿಗುಣಗೊಳಿಸಲು ಮೊಟ್ಟೆ ಮರಿ, ಪರಾಗ ಮತ್ತು ಜೇನುತುಪ್ಪ ಸೇರಿದಂತೆ ಹೆಚ್ಚು ಸಂಖ್ಯೆಯ ದಾದಿನೊಣಗಳಿಂದ  ಕೂಡಿದ ೩ – ೪ ರಾಣಿರಹಿತ ಚೌಕಟ್ಟುಗಳನ್ನು ಜೇನು ಪೆಟ್ಟಿಗೆಯಲ್ಲಿಡಬೇಕು. ಅಂತಹ ಕುಟುಂಬದಲ್ಲಿ ಕೆಲಸಗಾರ ನೊಣಗಳು ರಾಣಿ ಕಣಗಳನ್ನು ನಿರ್ಮಿಸಿ ರಾಣಿಯನ್ನು ಬೆಳೆಸಲು ಪ್ರಾರಂಭಿಸುತ್ತವೆ. ಇಂತಹ ಕುಟುಂಬದಲ್ಲಿ ನೊಣಗಳು ಅನೇಕ ರಾಣಿಗಳನ್ನು ಬೆಳೆಸಲು ಪ್ರಯತ್ನಿಸುವುದರಿಂದ ದೃಢವಾದ ಮತ್ತು ಉದ್ದವಾದ ಒಂದು ಮುಚ್ಚಳ ಹಾಕಿದ ಕಣವನ್ನು ಬಿಟ್ಟು ಉಳಿದವನ್ನು ನಾಶಪಡಿಸಬೇಕು. ಇದೇ ರೀತಿ ರಾಣಿ ಬೆಳೆಸುವ ಅನೇಕ ವಿಧಾನಗಳಿಂದ ಕಸಿ ಮಾಡುವ ಮೂಲಕ ರಾಣಿಗಳನ್ನು ಬೆಳೆಸಿ ಕುಟುಂಬಗಳನ್ನು ದ್ವಿಗುಣಗೊಳಿಸಬಹುದು.

ಕುಟುಂಬಗಳನ್ನು ಒಂದುಗೂಡಿಸುವುದು : ವರ್ಷದ ಕೆಲವು ಕಾಲಗಳಲ್ಲಿ ಆಹಾರದ ಕೊರತೆಯಿಂದಾಗಿ ಜೇನುಕುಟುಂಬಗಳು ಕ್ಷೀಣಿಸಿ ಹಾಳಾಗುವ ಸಂಭವವಿರುತ್ತದೆ. ಈ ಸಮಯದಲ್ಲಿ ಬಲಹೀನ ಕುಟುಂಬದಲ್ಲಿನ ರಾಣಿಯನ್ನು ತೆಗೆಯುವ ಮೂಲಕ ಕುಟುಂಬಗಳನ್ನು ಒಂಗುಗೂಡಿಸಬಹುದು. ಕೆಲವು ಕಾರಣಗಳಿಂದ ಕುಟುಂಬದಲ್ಲಿ ಮೊಟ್ಟೆಮರಿಗಳಿಲ್ಲದೆ ರಾಣಿಯನ್ನು ಬೆಳೆಸಲಾಗಿದೆ ಕುಟುಂಬ ಸಾಯುವ ಸಂಭವವಿರುತ್ತದೆ. ಆದರೆ ಇಂತಹ ಕುಟುಂಬವನ್ನು ರಾಣಿಯಿರುವ ಕುಟುಂಬದೊಂದಿಗೆ ಒಂದುಗೂಡಿಸಬಹುದು. ಒಂದು ಗೂಡಿಸಲು ಸಂಜೆಯ ಸಮಯವು ಸೂಕ್ತವಾಗಿದ್ದು ಕೂಡಿಸಬೇಕಾದ  ಎರಡು ಕುಟುಂಬಗಳಲ್ಲಿ ಒಂದು ಕುಟುಂಬದ ವಯಸ್ಸಾದ ರಾಣಿಯನ್ನು ತೆಗೆದು ಚಿಕ್ಕ ರಂಧ್ರಗಳಿಂದ ಕೂಡಿದ ತೆಳುವಾದ ಕಾಗದಕ್ಕೆ ಜೇನುತುಪ್ಪವನ್ನು ಲೇಪಿಸಿ ಎರಡು ಪೆಟ್ಟಿಗೆಗಳ ಸಂಸಾರ ಕೋಣೆಗಳ ನಡುವೆ ಇಡುವುದರಿಂದ ಕುಟುಂಬಗಳು ಬೆರೆತು ಬಲಿಷ್ಠವಾಗಿ ಬೆಳೆಯುತ್ತವೆ. ಆದರೆ ಬಲಹೀನ ಕುಟುಂಬಗಳನ್ನು ನೇರವಾಗಿ ಸೇರಿಸಬಾರದು.

ಜೇನು ನೊಣಗಳು ಪರಾರಿಯಾಗುವುದು :  ಜೇನುನೊಣಗಳು ಮೂಲ ವಾಸಸ್ಥಾನವನ್ನು ತ್ಯಜಿಸಿ ಮತ್ತೊಂದು ವಾಸಸ್ಥಾನವನ್ನು ನಿರ್ಮಿಸಿ ಜೀವಿಸುವುದನ್ನು ‘ಪರಾರಿಯಾಗುವುದು’ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಕುಟುಂಬದ ಕಾರ್ಯಗಳಾದ ಆಹಾರ ಸಂಗ್ರಹಣೆ, ಮೊಟ್ಟೆ ಇಡುವುದು ಮತ್ತು ಮರಿಗಳ ಪೋಷಣೆ ಕ್ರಮವಷ್ಟೇ ನಡೆದರೆ, ಕೆಲವೊಮ್ಮೆ  ಪರಾಗ ಮತ್ತು ಮಕರಂದದ ಕೊರತೆ, ಶತ್ರುಗಳ ಹಾವಳಿ ಮತ್ತು ರೋಗಗಳ ಬಾಧೆ ಕಂಡುಬರುತ್ತದೆ. ಈ ತೊಂದರೆಯಿಂದ ತಪ್ಪಿಸಿಕೊಳ್ಳಲು ಜೇನುನೊಣಗಳು ಪರಾರಿಯಾಗುತ್ತವೆ. ಆದರೆ ಹೆಜ್ಜೇನು ಮತ್ತು ಕೋಲು ಜೇನು ನೊಣಗಳು ಅನುವಂಶೀಯ ಗುಣ ಮತ್ತು ವಾತಾವರಣದ ವೈಪರೀತ್ಯಗಳಿಂದಾಗಿ ಕಾಲ ಕಾಲಕ್ಕೆ ಪರಾರಿಯಾಗುತ್ತವೆ. ಅಭಾವ ಕಾಲಕ್ಕೆ ಅಗತ್ಯವಿರುವಷ್ಟು ಆಹಾರವನ್ನು, ಆಹಾರ ಸಿಗುವ ಕಾಲದಲ್ಲಿಯೇ ಗೂಡಿನಲ್ಲಿ ಬಿಡುವುದು. ಆಹಾರ ಕೊರತೆಯ ಸಮಯದಲ್ಲಿ ಸಕ್ಕರೆಪಾಕ ಮತ್ತು ಪರಾಗ  ನೀಡುವುದು ಮುಂತಾದ ಕ್ರಮಗಳಿಂದ ಪರಾರಿಯಾಗುವುದನ್ನು ತಪ್ಪಿಸಬಹುದು.

ತಳಿ ಸುಧಾರಣೆ :  ಜೇನುನೊಣವು ಆರ್ಥಿಕ ಕೀಟವಾಗಿದ್ದು ಅನೇಕ ಉತ್ಪನ್ನಗಳನ್ನು ನೀಡುವುದರಿಂದ ತಳಿ ಸುಧಾರಣೆಗೆ ಆದ್ಯತೆ ನೀಡಬೇಕಾಗಿದೆ. ಆಧುನಿಕ ಜೇನು ಕೃಷಿಯನ್ನು ಪ್ರಾರಂಭಿಸಿ ಶತಮಾನವೇ ಕಳೆದಿದ್ದರೂ ಈ ದಿಸೆಯಲ್ಲಿ ಹೆಚ್ಚಿನ ಪ್ರಗತಿಯನ್ನು ಸಾಧಿಸಲಾಗಿಲ್ಲ.

ಜೇನುನೊಣಗಳಲ್ಲಿ ಕನ್ಯಾರಾಣಿಯು ಅನೇಕ ಗಂಡು ನೊಣಗಳೊಡನೆ ಜೋಡಿಯಾಗುವುದರಿಂದ ತಳಿ ಸುಧಾರಣಾ ನಿಯಂತ್ರಣ ಕಷ್ಟಸಾಧ್ಯ. ಕೆಲಸಗಾರ ನೊಣಗಳು, ಗಂಡು ಮತ್ತು ಹೆಣ್ಣು ನೊಣಗಳ ಉತ್ಪಾದನೆಯಾದುದರಿಂದ ಉತ್ತಮ ಕುಟುಂಬ ಅಭಿವೃದ್ಧಿಗೆ ರಾಣಿ ಮತ್ತು ಗಂಡು ನೊಣಗಳ ಆಯ್ಕೆಯು ಉತ್ತಮವಾಗಿರಬೇಕು. ಈ ಗುಣಗಳುಳ್ಳ ಮಾತೃ ಕುಟುಂಬಗಳನ್ನು ಗುರುತಿಸಿ ಒಂದನ್ನು ರಾಣಿ ಬೆಳೆಸಲು ಮತ್ತೊಂದನ್ನು ಗಂಡು ನೊಣಗಳನ್ನು ಬೆಳೆಸಲು ಉಪಯೋಗಿಸಬೇಕು. ಒಂದು ಪೆಟ್ಟಿಗೆಯಲ್ಲಿ ಫಲಭರಿತ ಮೊಟ್ಟೆಗಳಿಂದ ಕೃತಕವಾಗಿ ರಾಣಿಗಳನ್ನು ಬೆಳೆಸಿದರೆ ಮತ್ತೊಂದು ಪೆಟ್ಟಿಗೆಯಲ್ಲಿ ಗಂಡು ನೊಣಗಳನ್ನು ಬೆಳೆಸುವಂತೆ ಪ್ರೇರೆಪಿಸಬೇಕು. ಈ ಕುಟುಂಬವನ್ನು ಪ್ರಸ್ಥ ಕುಟುಂಬವನ್ನಾಗಿ ಆಯ್ಕೆ ಮಾಡಿದ ದೂರದ ಸ್ಥಳದಲ್ಲಿಟ್ಟು ಬೇರೆ ನೊಣಗಳು ಅಲ್ಲಿಗೆ ಬಾರದಂತೆ ಎಚ್ಚರಿಕೆ ವಹಿಸಬೇಕು. ಈ ರಾಣಿಗಳನ್ನು ಪ್ರಸ್ಥ ಕುಟುಂಬದಲ್ಲಿ ಜೋಡಿಯಾಗುವಂತೆ ನಿಯಂತ್ರಿಸಿ ಮೊಟ್ಟೆ ಇಡಲು ಪ್ರಾರಂಭ ಮಾಡಿದ ನಂತರ ರಾಣಿಗಳನ್ನು ಅಗತ್ಯ ಕುಟುಂಬಕ್ಕೆ ಒಂದೊಂದರಂತೆ ಕ್ರಮವಾಗಿ ಕೊಡಬೇಕು.

ಗೂಡಿನಲ್ಲಿ ಸಹಜವಾಗಿರುವ ರಾಣಿನೊಣದ ಕೋಶ. ರಾಜಶಾಹಿ ರಸ ಮತ್ತು ಮರಿಹುಳು ಕಾಣಲು ಕೋಶದ ಕವಚವನ್ನು ತೆರೆಯಲಾಗಿದೆ.

ರಾಣಿಗಳ ಉತ್ಪಾದನೆ :  ಸಾಮಾನ್ಯವಾಗಿ ಜೇನು ಕುಟುಂಬವು ಒಂದು ರಾಣಿ, ನೂರಾರು ಗಂಡು ನೊಣಗಳು ಮತ್ತು ಸಾವಿರಾರು ಕೆಲಸಗಾರ ನೊಣಗಳನ್ನು ಒಳಗೊಂಡಿರುತ್ತದೆ ಹಾಗೂ ರಾಣಿ ಇಡೀ ಕುಟುಂಬದ ತಾಯಿಯಾಗಿರುತ್ತದೆ. ಇದರಿಂದಾಗಿ ರಾಣಿಯ ಗುಣಗಳು ಇಡೀ ಕುಟುಂಬದ ಮೇಲೆ ಪರಿಣಾಮ ಬೀರುತ್ತವೆ. ರಾಣಿನೊಣಗಳನ್ನು ಉತ್ಪದಿಸಲು ಉಪಯೋಗಿಸುವ ಮಾತೃ ಕುಟುಂಬವು ಹೆಚ್ಚು ಮೊಟ್ಟೆಗಳನ್ನಿಡುವ ರಾಣಿಯ ಜೊತೆಗೆ ಮತ್ತು ಕಡಿಮೆ ವೇಳೆಯಲ್ಲಿ ತ್ವರಿತಗತಿಯಲ್ಲಿ ಬೆಳವಣಿಗೆಯಾಗಬೇಕು. ಇಂತಹ ಕುಟುಂಬದ ಕೆಲಸಗಾರ ನೊಣಗಳು ಹೆಚ್ಚು ಪರಾಗ ಮತ್ತು ಮಕರಂದವನ್ನು ಶೇಖರಿಸುವುದರಿಂದ ಜೇನುತುಪ್ಪವನ್ನು ಸಂಗ್ರಹಿಸಲು ಸಾಧ್ಯವಾಗುತ್ತದೆ. ಇದರ ಜೊತೆಗೆ ಹೆಚ್ಚಿನ ದೂರದಿಂದ ಆಹಾರ ಶೇಖರಣೆ, ಶತ್ರುಗಳನ್ನು ಎದುರಿಸುವ ಶಕ್ತಿ, ಹವಾಮಾನಕ್ಕೆ ಹೊಂದಿಕೊಳ್ಳುವಿಕೆ ಮುಂತಾದ ಗುಣಗಳಿಂದ ಕೂಡಿರಬೇಕು. ಇಂತಹ ಕುಟುಂಬಗಳನ್ನು ಗುರುತಿಸಿ ಇವುಗಳಿಂದ ರಾಣಿನೊಣಗಳನ್ನು ಉತ್ಪಾದಿಸುವುದು ಅಗತ್ಯವಾಗಿರುತ್ತದೆ.

ರಾಣಿ ಬೆಳೆಸುವ ವಿಧಾನಗಳು : ಆರೋಗ್ಯವಂತ ರಾಣಿಗಳನ್ನು ಪಡೆಯಬಯಸುವ ಮೂಲ ಕುಟುಂಬವು ದೃಢವಾಗಿರಬೇಕು. ಜೇನು ಕುಟುಂಬದಲ್ಲಿ ದಾದಿ ನೊಣಗಳು, ಎರಿಕಟ್ಟುವ ನೊಣಗಳು, ಮತ್ತು ಆಹಾರ ತರುವ ನೊಣಗಳು ಹೆಚ್ಚಿ ಸಂಖ್ಯೆಯಲ್ಲಿರಬೇಕು. ಮರಿ ಹುಳುಗಳ ಸಂಖ್ಯೆ ಹೆಚ್ಚಾಗಿದಲ್ಲಿ ದಾದಿ ನೊಣಗಳು ಅಧಿಕ ರಾಜಶಾಹಿ ರಸವನ್ನು ಸ್ರವಿಸಿ ರಾಣಿಯನ್ನು  ಆರೋಗ್ಯಯುತವಾಗಿ ಬೆಳೆಸಲು ಸಾಧ್ಯವಾಗುವುದರ ಜೊತೆಗೆ ಸಾಕಷ್ಟು ಗಂಡು ನೊಣಗಳು ರಾಣಿಯ ಜೋಡಿಯಾಗುವಿಕೆ ಅತ್ಯಗತ್ಯ. ಇಂತಹ ಕುಟುಂಬಗಳಿಂದ ಕೃತಕ ರಾಣಿ ಬಟ್ಟಲುಗಳನ್ನು ನಿರ್ಮಿಸಿ ಉತ್ತಮ ರಾಣಿಗಳನ್ನು ಪಡೆಯಲು ಸಾಧ್ಯವಾಗುತ್ತದೆ. ರಾಣಿ ಬೆಳೆಸುವಿಕೆಯಲ್ಲಿ ಅನೇಕ ವಿಧಾನಗಳಿದ್ದರೂ ಅವುಗಳ ನಿಯಮವು ಒಂದೇ ಆಗಿರುತ್ತದೆ.

ರಾಣಿಗಳನ್ನು ಪ್ರತ್ಯೇಕ ಕೋಶಗಳಲ್ಲಿ ಬೆಳೆಸುತ್ತಿರುವುದು

 ಡೂಲಿಟ್ಲ್ ವಿಧಾನ :  ಈ ವಿಧಾನಗಳಲ್ಲಿ ಕೃತಕ ರಾಣಿಕಣಗಳನ್ನು ಮೇಣದಿಂದ ರಚಿಸಿ ಒಂದು ದಿನಕ್ಕೂ ಕಡಿಮೆ ವಯಸ್ಸಿನ ಮರು ಹುಳುಗಳನ್ನು ಕಸಿ ಮಾಡಿ ರಾಣಿ ರಹಿತ ಕುಟುಂಬದಲ್ಲಿ ರಾಣಿಗಳನ್ನು ಬೆಳೆಸುವುದಾಗಿದೆ.

ಈ ವಿಧಾನದಲ್ಲಿ ರಾಣಿ ಬೆಳೆಸಲು ನಿರ್ಮಿಸಿದ ಸಂಸಾರ ಕೋಣೆಯ ಚೌಕಟ್ಟಿನ ಮೇಲೆ ಮಧ್ಯದ ಮತ್ತು ಕೆಳಪಟ್ಟಿಗಳಿಗೆ ೧ ರಿಂದ ೧.೫ ಸೆಂ.ಮೀ. ಅಳತೆಯ ಚೌಕಾಕಾರದ ಮರ ಅಥವಾ ಮೇಣದ ದಿಂಡುಗಳನ್ನು ತಯಾರಿಸಿ ಒಂದೊಂದು ಪೆಟ್ಟಿಗೆ ಸರಾಸರಿ ೬- ೭ ದಿಂಡುಗಳನ್ನು ಅಂಟಿಸಲಾಗುತ್ತದೆ. ಈ ದಿಂಡುಗಳಿಂದ ಕರಗಿದ ಮೇಣದಿಂದ ತಯಾರಿಸಿದ ರಾಣಿಕಣಗಳನ್ನು ರಚಿಸಿ ಅಂಟಿಸಲಾಗುತ್ತದೆ. ಈ ರೀತಿ ರಚಿಸಿದ ರಾಣಿ ಕಣಗಳಿಂದ ಕೂಡಿದ ಚೌಕಟ್ಟುಗಳನ್ನು ಅಧಿಕ ಪರಾಗ, ಜೇನುತುಪ್ಪ, ದಾದಿನೊಣಗಳು ಸೇರಿದಂತೆ ೬ – ೮ ಚೌಕಟ್ಟುಗಳ ಜೇನುನೊಣಗಳಿಂದ ಕೂಡಿದ ರಾಣಿರಹಿತ ಜೇನುಪೆಟ್ಟಿಗೆಯಲ್ಲಿಡಬೇಕಾಗುತ್ತದೆ. ಈ ಪೆಟ್ಟಿಗೆಯಲ್ಲಿ ಹೆಚ್ಚು ಯುವ ಜೇನುನೊಣಗಳಿದ್ದಲ್ಲಿ ಅಧಿಕ ಪ್ರಮಾಣದಲ್ಲಿ ರಾಜಶಾಹಿರಸವನ್ನು ಒದಗಿಸಲು ಸಹಾಯವಾಗುತ್ತದೆ. ಕೆಲವೇ ನಿಮಿಷಗಳಲ್ಲಿ ಜೇನುನೊಣಗಳು ರಾಣಿಕಣಗಳನ್ನು ಶುಚಿಗೊಳಿಸಿದ ನಂತರ ಚೌಕಟ್ಟಿನ ಒಂದೊಂದು ಪಟ್ಟಿಯನ್ನು ಹೊರತೆಗೆದು ರಾಣಿಕಣಕ್ಕೆ ರಾಜಶಾಹಿರಸವನ್ನು ಸವರಿ ಒಂದು ದಿನಕ್ಕೂ ಕಡಿಮೆ ವಯಸ್ಸಿನ ಮರಿಹುಳುಗಳನ್ನು ಪ್ರತಿ ಕಣಕ್ಕೆ ಒಂದರಂತೆ ವಿಶೇಷ ಕಸಿ ಸಾಧನ ಅಥವಾ ಬೆಂಕಿಕಡ್ಡಿಯಿಂದ ಮರಿಹುಳುವಿಗೆ ಯಾವುದೇ ಅಪಾಯವಾಗದಂತೆ ಕಸಿ ಮಾಡಲಾಗುತ್ತದೆ. ಈ ರೀತಿ ಎಲ್ಲ ರಾಣಿ ಕಣಗಳಿಗೂ ರಾಜಶಾಹಿರಸವನ್ನು ಅಗತ್ಯವಿದ್ದಲ್ಲಿ ಶುದ್ಧ ನೀರಿನಲ್ಲಿ ಬೆರೆಸಿ ರಾಣಿಕಣಗಳಿಗೆ ಸವರಿ ಅತಿ ಕಡಿಮೆ ಸಮಯದಲ್ಲಿ ಕಸಿ ಮಾಡಬೇಕಾಗುತ್ತದೆ. ಇದರಿಂದಾಗಿ ಕೆಲಸಗಾರ ನೊಣಗಳು ರಾಜಶಾಹಿರಸವನ್ನು ಬೆಳವಣಿಗೆಯಲ್ಲಿನ ಮರಿಹುಳುವಿಗೆ ತಿನ್ನಿಸಿ ರಾಣಿನೊಣವನ್ನಾಗಿ ಬೆಳೆಸುತ್ತವೆ. ರಾಣಿಕಣಗಳು ಕೋಶದ ಹಂತಕ್ಕೆ ಬಂದ ನಂತರ ಕಣಗಳಿಂದ ಹೊರಬರುವ ಸಮಯದಲ್ಲಿ ಈ ಕಣಗಳನ್ನು ಅವಶ್ಯಕ ರಾಣಿರಹಿತ ಕುಟುಂಬಕ್ಕೆ ನೀಡಬಹುದು. ಆದರೆ ಅಗತ್ಯತೆ ಇದ್ದಲ್ಲಿ ಪ್ರತಿಯೊಂದು ಕಣಕ್ಕೂ ರಾಣಿ ಪಂಜರವನ್ನಳವಡಿಸಿ ಬೇಕಾದ ಮರಿ ಕುಟುಂಬಗಳಿಗೆ ಅಳವಡಿಸಬಹುದಾಗಿದೆ (ಕೋಷ್ಟಕ ೧೨).

ಮಿಲ್ಲರ್ ಕ್ರಮ :  ಈ ವಿಧಾನದಿಂದ ಕಡಿಮೆ ಸಂಖ್ಯೆಯ ಉತ್ತಮ ರಾಣಿಗಳನ್ನು ಪಡೆಯಬಹುದು. ಮೆಣದ ಹಾಳೆಯ ತಳಭಾಗದಲ್ಲಿ V ಆಕಾರದಲ್ಲಿ ಕತ್ತರಿಸಿ ಸಂಸಾರ ಕೋಣೆ ಚೌಕಟ್ಟಿನ ತಳದಲ್ಲಿ ಅಂಟಿಸಿ ಆಯ್ಕೆ ಮಾಡಿದ ಜೇನು ಪೆಟ್ಟಿಗೆಯ ಸಂಸಾರಕೋಣೆಯ ಮಧ್ಯಭಾಗಕ್ಕೆ ನೀಡಬೇಕು. ಕುಟುಂಬದಲ್ಲಿ ಜೇನುತುಪ್ಪವಿಲ್ಲದಿದ್ದರೆ ಸಕ್ಕರೆ ಪಾಕವನ್ನು ನೀಡಬೇಕು. ಈ ಮೇಣದ ಹಾಳೆಯಲ್ಲಿ ಎರಿಯನ್ನು ಕಟ್ಟಿದ ಏಳನೆ ದಿವಸ ಎರಿ ತುಂಬ ಮೊಟ್ಟೆ ಮತ್ತು ಒಂದು ಅಥವಾ ಒಂದೂವರೆ ದಿವಸ ವಯಸ್ಸಿನ ಮರಿ ಹುಳುವನ್ನು ಕಾಣಬಹುದು. ಜೊತೆಗೆ ಗಂಡುನೊಣಗಳು ಕಣಗಳನ್ನು ನಿರ್ಮಿಸುತ್ತವೆ. ಈ ಗಂಡು ಕಣಗಳನ್ನು ಕತ್ತರಿಸಿ ಹೊರತೆಗೆದು ತಳ ಭಾಗದಲ್ಲಿ ಕೆಲಸಗಾರ ಮೊಟ್ಟೆಗಳಿಂದ ಕೂಡಿದ ಎರಿ ಇರುವಂತೆ ನೋಡಿಕೊಳ್ಳಬೇಕು. ಇಂತಹ ಎರಿಯನ್ನು ಸೂಕ್ತ ರಾಣಿಬೆಳೆಸುವ ರಾಣಿರಹಿತ ಕುಟುಂಬದಲ್ಲಿಟ್ಟಾಗ ಉತ್ತಮ ಗುಣಮಟ್ಟದ ರಾಣಿಯು ಬೆಳವಣಿಗೆಯಾಗುತ್ತದೆ.

ಹೊಸರಾಣಿ ಸಾಮಾನ್ಯವಾಗಿ ಎರಡು ದಿನಗಳಿಂದ ಒಂದು ವಾರದವರೆಗೂ ಹಾರಾಟವನ್ನು ನಡೆಸಿ ಜೋಡಿಯಾಗುತ್ತದೆ. ತುಡುವೆ ಜೇನು ನೊಣದ ರಾಣಿ. ಯೂರೋಪಿಯನ್ ರಾಣಿಯಂತೆ ೨ – ೪ ಗಂಟೆಯ ವೇಳೆಯಲ್ಲಿ ಜೋಡಿಯ ಹಾರಾಟವನ್ನು ನಡೆಸುತ್ತವೆ. ಆದರೆ ಕೋಲುಜೇನು ಮತ್ತು ಹೆಜ್ಜೇನು ರಾಣಿಗಳ ಜೋಡಿಯ ಹಾರಾಟವು ಸಂಜೆ ಐದು ಗಂಟೆ ಸಮಯದಲ್ಲಿ ನಡೆಯುತ್ತದೆಂದು ತಿಳಿದು ಬಂದಿದೆ. ರಾಣಿಯು ಸಾಮಾನ್ಯವಾಗಿ ಜೋಡಿಯಾಗುವ ೨ – ೩ ದಿನಗಳಲ್ಲಿ ಮೊಟ್ಟೆ ಇಡಲು ಪ್ರಾರಂಭಿಸಿದರೆ, ಕೆಲವು ಬಾರಿ ಸುಮಾರು ೧೦ ದಿನಗಳನ್ನು ತೆಗೆದುಕೊಳ್ಳಬಹುದು.

ಕೋಷ್ಟಕ ೧೨ : ರಾಣಿನೊಣ ಉತ್ಪಾದನೆಯ ಮಾದರಿ ವೇಳಾಪಟ್ಟಿ

ದಿನ

ಒಂದನೇ ಹಂತ

ಎರಡನೇ ಹಂತ

ಮೂರನೇ ಹಂತ

ಅನುಸರಿಸಬಹುದಾದ ದಿನಾಂಕ

ಕಸಿ ಮಾಡುವುದು

ಮಾರ್ಚ್, ೧೬
ರಾಜಶಾಹಿರಸ ತೆಗೆಯುವುದು (ಅಗತ್ಯವಿದ್ದಲ್ಲಿ) ಕಸಿ ಮಾಡುವುದು

ಮಾರ್ಚ್, ೧೯

ರಾಜಶಾಹಿರಸ ತೆಗೆಯುವುದು (ಅಗತ್ಯವಿದ್ದಲ್ಲಿ) ಕಸಿ ಮಾಡುವುದು ಮಾರ್ಚ್, ೨೨
೧೦ ಕೋಶದ ಹಂತ

ರಾಜಶಾಹಿರಸ ತೆಗೆಯುವುದು (ಅಗತ್ಯವಿದ್ದಲ್ಲಿ) ಮಾಚ್‌, ೨೬
೧೩

ಕೋಶದ ಹಂತ

ಮಾರ್ಚ್, ೨೯
೧೬

ಕೋಶದ ಹಂತ ಎಪ್ರಿಲ್, ೧
೧೮ ಜೋಡಿಯ ಹಾರಾಟ

ಎಪ್ರಿಲ್, ೩
೨೧ ಮೊಟ್ಟೆ ಜೋಡಿಯ ಹಾರಾಟ

ಎಪ್ರಿಲ್, ೬
೨೪ ಮರಿಹುಳು ಮೊಟ್ಟೆ ಜೋಡಿಯ ಹಾರಾಟ ಎಪ್ರಿಲ್, ೯
೨೭

ಮರಿಹುಳು ಮೊಟ್ಟೆ ಎಪ್ರಿಲ್, ೧೨
೩೦ ಮುಚ್ಚಳದ ಮರಿಗಳು

ಮರಿಹುಳು ಎಪ್ರಿಲ್, ೧೫
೩೩

ಮುಚ್ಚಳದ ಮರಿಗಳು

ಎಪ್ರಿಲ್, ೧೮
೩೬

ಮುಚ್ಚಳದ ಮರಿಗಳು ಎಪ್ರಿಲ್, ೨೧
೪೩ ಕೆಲಸಗಾರ ನೊಣ

ಎಪ್ರಿಲ್, ೨೮
  ಹೊರ ಬರುವುದು      
೪೬

ಕೆಲಸಗಾರ ನೊಣ ಹೊರ ಬರುವುದು

ಮೇ, ೧
೪೭

ಕೆಲಸಗಾರ ನೊಣ ಹೊರ ಬರುವುದು ಮೇ, ೪

ಹೊಸ ರಾಣಿಯನ್ನು ಸೇರಿಸುವುದು : ಪ್ರತಿಯೊಂದು ಜೇನು ನೊಣಕ್ಕೂ ತನ್ನ ಕುಟುಂಬದ ರಾಣಿಯ ಪರಿಚಯವಿದ್ದು ರಾಣಿಯೇ ಕುಟುಂಬದ ಸಂಘಟನಾ ಶಕ್ತಿ ಹಾಗೂ ಸಕಲ ಚಟುವಟಿಕೆಗಳ ಚೇತನಾ ಕೇಂದ್ರ, ಪ್ರತಿಯೊಂದು ಕುಟುಂಬಕ್ಕೂ ಪ್ರತ್ಯೇಕ ವಾಸನೆಯಿದ್ದು ಆ ವಾಸನೆಯನ್ನು ರಾಣಿಯಿಂದ  ನೊಣಗಳು ಪಡೆದಿರುತ್ತವೆ. ಜೇನು ಕುಟುಂಬದಲ್ಲಿ ರಾಣಿ ಆಕಸ್ಮಿಕ ಸಾವನ್ನಪ್ಪಿದ್ದರೆ ಬೇರೆ ರಾಣಿಯನ್ನು ಸುಲಭವಾಗಿ ಸ್ವೀಕರಿಸುವುದಿಲ್ಲ. ಆದುದರಿಂದ ರಾಣಿ ಇಲ್ಲದ ಗೂಡಿಗೆ ಹೊಸ ರಾಣಿಯನ್ನು ಪರಿಚಯಿಸಬೇಕಾದರೆ ಕೆಲವು ನಿರ್ದಿಷ್ಟ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ.

ಖಾಲಿ ಬೆಂಕಿ ಪೆಟ್ಟಿಗೆಗೆ ಸೂಜಿಯಿಂದ ಚಿಕ್ಕಚಿಕ್ಕ ರಂಧ್ರಗಳನ್ನು ಮಾಡಿ ಅದರಲ್ಲಿ ಹೊಸ ರಾಣಿಯನ್ನಿಟ್ಟು ಸಂಜೆಯ ವೇಳೆ ರಾಣಿಯನ್ನು ಪರಿಚಯಿಸಬೇಕಾದ ಜೇನು ಪೆಟ್ಟಿಗೆಯೊಳಗೆ ಇಡಬೇಕು. ಬೆಂಕಿ ಪೆಟ್ಟಿಗೆಯಲ್ಲಿನ ರಾಣಿಯ ಚೋದಕ ರಾಸಾಯನದ ವಾಸನೆ ರಂಧ್ರಗಳ ಮೂಲಕ ಗೂಡಿನ ವಾಸನೆಯೊಂದಿಗೆ ಬೆರೆತು ರಾಣಿಯನ್ನು ಹೊರ ಬಿಟ್ಟರೆ ಜೇನು ನೊಣಗಳು ಸ್ವೀಕರಿಸುತ್ತವೆ. ಇದೇ ರೀತಿ ಪಂಜರದಲ್ಲಿನ ರಾಣಿಯನ್ನು ಜೇನುಕುಟುಂಬದಲ್ಲಿಟ್ಟು ಕೆಲ ಗಂಟೆಗಳ ನಂತರ ಪಂಜರದಿಂದ ಹೊರ ಬಿಡುವ ಮೂಲಕ ಪರಿಚಯಿಸಬಹುದು. ರಾಣಿ ರಹಿತ ಜೇನು ಕುಟುಂಬಕ್ಕೆ ಹೊಸ ರಾಣಿಯನ್ನು ಪರಿಚಯಿಸುವಾಗ ಅದರ ಶರೀರದ ರೆಕ್ಕೆಗಳಿಗೆ ಅಂಟಿದಂತೆ ಜೇನು ತುಪ್ಪವನ್ನು ಸವರಿ ಜೇನು ಪೆಟ್ಟಿಗೆಯೊಳಗೆ ಬಿಡಬೇಕು. ಹೀಗೆ ಮಾಡುವುದರಿಂದ ಜೇನು ಕುಟುಂಬದ ಕೆಲಸಗಾರ ನೊಣಗಳು ರಾಣಿಯ ಶರೀರದ ಮೇಲಿನ ಜೇನು ತುಪ್ಪವನ್ನು ನೆಕ್ಕಲು ಪ್ರಾರಂಭಿಸಿ ರಾಣಿಯ ಚೋದಕ ರಾಸಾಯನದ ಮೂಲಕ ಕುಟುಂಬದಲ್ಲಿ ನೊಣಗಳು ತಮ್ಮದೇ ರಾಣಿಯೆಂದು ಸ್ವೀಕರಿಸುತ್ತವೆ. ಜೇನು ತುಪ್ಪದ ಬದಲು ನೀರನ್ನು ಸಹಾ ಬಳಸಬಹುದು. ಹೊಸ ರಾಣಿಯ ಶರೀರವನ್ನು ನೀರಿನಲ್ಲಿ ಒದ್ದೆ ಮಾಡಿ ರಾಣಿ ರಹಿತ ಜೇನು ಕುಟುಂಬಕ್ಕೆ ಪರಿಚಯಿಸಿದಾಗ ಕೆಲಸಗಾರ ನೊಣಗಳು ರಾಣಿಯನ್ನು ನೆಕ್ಕುವ ಮೂಲಕ ಸ್ವೀಕರಿಸುತ್ತವೆ.

ಕೃತಕ ಗರ್ಭಧಾರಣೆ : ಪ್ರಕೃತಿ ನಿಯಮದಂತೆ ಜೇನುನೊಣಗಳಲ್ಲಿಯೂ ಕೆಲವು ಆನುವಂಶೀಯ ಗುಣಗಳಿರುತ್ತವೆ. ಇವುಗಳಲ್ಲಿ ಕೆಲವನ್ನು ಮೆಂಡೆಲಿಯನ್ ಆನುವಂಶೀಯ ನಿಯಮಗಳ ಮೂಲಕ ಬದಲಿಸಬಹುದಾದರೂ, ರಾಣಿಯು ಅನೇಕ ಗಂಡು ಜೇನುನೊಣಗಳೊಂದಿಗೆ ಜೋಡಿಯಾಗುವುದರಿಂದ ಈ ನಿಯಂತ್ರಣ ಕ್ಲಿಷ್ಟವಾದುದು. ಕನ್ಯಾ ರಾಣಿನೊಣಗಳನ್ನು ನಿಗದಿತ ಪ್ರಭೇದ ರಹಿತ ದ್ವೀಪ ಪ್ರದೇಶಗಳಲ್ಲಿ  ಅಗತ್ಯ ಗಂಡು ಜೇನುನೊಣಗಳೊಂದಿಗೆ  ಜೋಡಿಗೊಳಿಸಬಹುದಾದರೂ, ಅವುಗಳ ಅನುವಂಶೀಯ ಅಭಿವೃದ್ಧಿಯಲ್ಲಿ ಕೃತಕ ಗರ್ಭಧಾರಣೆ ಹೆಚ್ಚಿನ ಪಾತ್ರವನ್ನು ವಹಿಸುತ್ತದೆ. ಜೇನು ನೊಣಗಳ ಕೃತಕ ಗರ್ಭಧಾರಣಾ ವಿಧಾನವನ್ನು ಡಾ. ವ್ಯಾಟ್ಸನ್‌ರು ೧೯೨೬ ರಲ್ಲಿ ಮೊಟ್ಟ ಮೊದಲಿಗೆ ತೋರಿಸಿಕೊಟ್ಟರು. ಈ ವಿಧಾನದಿಂದ ಯೂರೋಪಿಯನ್ ಜೇನುನೊಣದಲ್ಲಿ ಅನೇಕ ಸಂಕರಣ ತಳಿಗಳನ್ನು ಅಭಿವೃದ್ಧಿ ಪಡಿಸಿ ಹೆಚ್ಚಿನ ಜೇನುತುಪ್ಪವನ್ನು ಪಡೆಯಲಾಗುತ್ತಿದೆ.

ಕೃತಕ ಗರ್ಭಧಾರಣೆ ಒಂದು ಅಥವಾ ಅನೇಕ ಸೂಕ್ತ ಗಂಡು ನೊಣಗಳ ಜನನಾಂಗಗಳಿಂದ ವೀರ್ಯವನ್ನು ಸೂಕ್ಷ್ಮ ಉಪಕರಣದೊಳಗೆ ಶೇಖರಿಸಿ ಅಗತ್ಯ  ಪ್ರಮಾಣದ ವೀರ್ಯವನ್ನು ಉಪ್ಪಿನ ದ್ರಾವಣದೊಂದಿಗೆ ಕನ್ಯಾ ರಾಣಿಯ ಅಂಡನಾಳಕ್ಕೆ ಸೂಕ್ಷ್ಮದರ್ಶಕ ಯಂತ್ರದ ಸಹಾಯದಿಂದ ಸೇರಿಸುವುದಾಗಿದೆ. ಈ ತಾಂತ್ರಿಕತೆಯಲ್ಲಿ ಜೇನುನೊಣಗಳು ಜೋಡಿಯಾಗುವ ವಿಧಾನ, ನೊಣಗಳ ವಂಶಾಭಿವೃದ್ಧಿ ವ್ಯೂಹ, ಗಂಡು  ಜೇನುನೊಣಗಳಲ್ಲಿ ಫಲಿತ ವೀರ್ಯ ಸಿಗುವ ವಯಸ್ಸು, ಕನ್ಯಾರಾಣಿಯ ವಯಸ್ಸು ಮುಂತಾದವುಗಳ ಅರಿವು ಅಗತ್ಯ. ಕೃತಕ ಗರ್ಭಧಾರಣಾ ಕ್ರಿಯೆಗೆ ಬೆಳಕಿನಿಂದ ಕೂಡಿದ ಪ್ರಯೋಗಾಲಯವು ಅತ್ಯಗತ್ಯ. ಇದರ ಜೊತೆಗೆ ಸೂಕ್ಷ್ಮದರ್ಶಕ, ಇಂಗಾಲದ ಡೈ ಆಕ್ಸೈಡಿನ ನಿಯಂತ್ರಕ, ಕೊಕ್ಕೆಗಳು ಮತ್ತು ವೀರ್ಯ ಸಾಗಿಸುವ ಸೂಕ್ಷ್ಮ ಸೂಜಿಗಳು ಅಗತ್ಯವಾಗಿರುತ್ತವೆ. ಈ ವಿವಿಧ ರೀತಿಯ ಉಪಕರಣಗಳನ್ನು ಚಿತ್ರದಲ್ಲಿ ತೋರಿಸಲಾಗಿದೆ (ಚಿತ್ರ. ೪೦). ಗಂಡು ಜೇನುನೊಣಗಳಲ್ಲಿ ವಯಸ್ಸು ಹೆಚ್ಚಾದಂತೆ ವೀರ್ಯದ ಬಣ್ಣ ತಿಳಿ ಬಿಳಿ ಬಣ್ಣದಿಂದ ತಿಳಿ ಕಂದು ಬಣ್ಣಕ್ಕೆ ತಿರುಗುತ್ತದೆ. ಒಂದು ಗಂಡು ಜೇನುನೊಣದಲ್ಲಿ ಸುಮಾರು ೧೦ ಮಿಲಿಯನ್ ವೀರ್ಯಾಣುಗಳಿದ್ದು, ಒಂದು ಮೈಕ್ರೋ ಲೀಟರ್ ವೀರ್ಯದಲ್ಲಿ ಸುಮಾರು ೭.೫ ಮಿಲಿಯನ್ ವೀರ್ಯಾಣುಗಳಿರುತ್ತವೆ ಎಂದು ಅಂದಾಜುಮಾಡಲಾಗಿದೆ.

ರಾಣಿ ಜೇನುನೊಣಕ್ಕೆ ಕೃತಕ ಗರ್ಭಧಾರಣೆ ಮಾಡುತ್ತಿರುವುದು

ಗಂಡು ಜೇನುನೊಣಗಳು ಕಣಗಳಿಂದ ಹೊರಬಂದ ಮೂರು ದಿನಗಳ ವಯಸ್ಸಿನಲ್ಲಿ ವೀರ್ಯವು ಬೀಜಾಶಯದಿಂದ  ರೇತಸ್ಸು ಕೋಶಕ್ಕೆ ಹರಿಯಲು ಪ್ರಾರಂಭವಾಗಿ ಗರ್ಭಧಾರಣೆಯಾಗುವವರೆಗೂ ರೇತಸ್ಸು ಕೋಶದಲ್ಲಿ ಉಳಿಯುತ್ತದೆ. ಆದರೆ ಸುಮಾರು೧೦ – ೨೧ ದಿನಗಳ ವಯಸ್ಸಿನ ಗಂಡು ಜೇನುನೊಣಗಳ ವೀರ್ಯವು ಗರ್ಭಧಾರಣೆಗೆ ಸೂಕ್ತವಾಗಿರುತ್ತದೆ. ಬಲಿಷ್ಠ ರೋಗರಹಿತ ಗಂಡು ಜೇನುನೊಣಗಳನ್ನು ಆಯ್ಕೆ ಮಾಡಿ ಗಾಳಿ, ಬೆಳಕು ಮತ್ತು ಕೈಗಳಿಂದ ಸರಾಗವಾಗಿ ಗಂಡುನೊಣಗಳನ್ನು ಹಿಡಿದುಕೊಳ್ಳಲು ಅನುಕೂಲವಾದ ಪರದೆಯಿಂದ ಕೂಡಿದ ಅಗತ್ಯ ಗಾತ್ರದ ಬುಟ್ಟಿಯಲ್ಲಿ ಕೂಡಿಹಾಕಬೇಕು. ಈ ಬುಟ್ಟಿಗೆ ಅಗತ್ಯಕ್ಕನುಸಾರವಾಗಿ ೫೦ – ೧೦೦ ಗಂಡು ನೊಣಗಳನ್ನು ಶೇಖರಿಸುವ ಸಾಮರ್ಥ್ಯವಿರಬೇಕು.

ವೀರ್ಯವನ್ನು ಸ್ವಚ್ಛವಾದ ಸೂಜಿಯಿಂದ ಗಂಡುನೊಣಗಳ ರೇತಸ್ಸು ಕೋಶಗಳಿಂದ ಹೊರ ತೆಗೆಯಬೇಕು ಸೂಜಿಯಲ್ಲಿ ವೀರ್ಯವನ್ನು ತೆಗೆಯುವುದಕ್ಕೂ ಮೊದಲು ಶೇ. ೧.೦ ರ ಸೋಡಿಯಂ ಕ್ಲೋರೈಡ್ ಮತ್ತು ಶೇ. ೦.೨೫ರ ಡೈಹೈಡ್ರೊ ಸಟೆಸ್ಟ್ರೆಪ್ಟೋಮೈಸಿನ್ ಸಲ್ಫೇಟನ್ನು ತೆಗೆದುಕೊಳ್ಳಬೇಕಾಗುತ್ತದೆ. ಸೂಜಿಯನ್ನು ಕೃತಕ ಗರ್ಭಧಾರಣೆಗೆ ಉಪಯೋಗಿಸುವುದಕ್ಕೂ ಮೊದಲು ಶೇ. ೫ ರ ಸೋಡಿಯಂ ಹೈಪೋಕ್ಲೋರೈಟ್‌ನಿಂದ ಶುದ್ಧೀಕರಿಸಬೇಕು. ಅನೇಕ ಗಂಡು ಜೇನುನೊಣಗಳಿಂದ ವೀರ್ಯವನ್ನು ಶೇಖರಿಸುವಾಗ ಪ್ರತಿ ನೊಣದ ವೀರ್ಯದ ನಡುವೆ ಸೂಜಿಯ ನಳಿಕೆಯಲ್ಲಿ ಗಾಳಿತೂರದಂತೆ ಎಚ್ಚರ ವಹಿಸಬೇಕು. ಕಣಗಳಿಂದ ಹೊರ ಬರುವ ರಾಣಿಗಳನ್ನು ಎರಡು ವಿಧಗಳಲ್ಲಿ ಕೂಡಿಡಬಹುದು. ಅವುಗಳೆಂದರೆ ಜೇನು ಕುಟುಂಬಕ್ಕೆ ರಾಣಿಯನ್ನು ಅಳವಡಿಸಿ ಗೇಟನ್ನು ಅಳವಡಿಸುವುದು ಮತ್ತು ರಾಣಿಗಳನ್ನು ಪ್ರತ್ಯೇಕ ಪಂಜರಗಳಲ್ಲಿ ಇಡುವುದು.

ಗಂಡು ನೊಣಗಳಿಂದ ಶೇಖರಿಸಿದ ವೀರ್ಯವನ್ನು ಕೊಠಡಿಯ ಉಷ್ಣತೆಯಲ್ಲಿ ಕೆಲವು ಗಂಟೆಗಳ ಜೀವಂತವಾಗಿ ಇಡಬಹುದಾದರೂ ಸುಮಾರು ಕೊಠಡಿಯ ಉಷ್ಣತೆಯಲ್ಲಿ ಕೆಲವು ಗಂಟೆಗಳ ಜೀವಂತವಾಗಿ ಇಡಬಹುದಾದರೂ ಸುಮಾರು ೫ – ೧೫ ಡಿಗ್ರಿ ಸೆ. ಉಷ್ಣತೆಯಲ್ಲಿ ಅನೇಕ ದಿನಗಳವರೆಗೆ ಶೇಖರಿಸಬಹುದು. ರಾಣಿಯನ್ನು ಗರ್ಭಧಾರಣೆಗೆ ಬಳಸುವ ಮೊದಲು ಇಂಗಾಲದ ಡೈ ಆಕ್ಸೈಡನ್ನು (ಒಂದು ನಿಮಿಷಕ್ಕೆ ಸುಮಾರು ೩೫ ಮಿ.ಲೀ.) ನೀಡುವುದರಿಂದ ರಾಣಿಯ ಅಂಗಗಳು ಸಡಿಲಗೊಂಡು ಸೂಜಿಯನ್ನು ತೂರಿಸಲು ಅನುಕೂಲವಾಗುವುದಲ್ಲದೇ ರಾಣಿಯನ್ನು ಮೊಟ್ಟೆ ಇಡುವಂತೆ ಪ್ರೇರೆಪಿಸುತ್ತದೆ. ಒಂದು ಮಿ.ಲೀ. ಉಪ್ಪಿನ ದ್ರಾವಣದೊಂದಿಗೆ ಸೂಜಿಯಲ್ಲಿ ಗಂಡು ಜೇನುನೊಣದ ರೇತಸ್ಸು ಕೋಶದಿಂದ ತೆಗೆದುಕೊಂಡ ವೀರ್ಯವನ್ನು ರಾಣಿಯ ಅಂಡನಾಳಕ್ಕೆ ಸೇರಿಸಲಾಗುತ್ತದೆ. ಉಪ್ಪಿನ ದ್ರಾವಣವು ವೀರ್ಯ ಒಣಗುವುದನ್ನು ತಪ್ಪಿಸುವುದಲ್ಲದೆ ರಾಣಿಯ ವಂಶಾಭಿವೃದ್ಧಿ ಅಂಗಗಳಿಗೆ ಸೋಂಕು ತಗಲುವುದನ್ನು ನಿಯಂತ್ರಿಸುತ್ತದೆ. ರಾಣಿಯನ್ನು ಕೃತಕ ಗರ್ಭಧಾರಣೆ ಮಾಡಲು ಇಂಗಾಲದ ಡೈ ಆಕ್ಸೈಡನಿಂದ ಸ್ಥಗಿತಗೊಳಿಸಿ ಯಂತ್ರದ ನಳಿಕೆಯೊಂದಿಗೆ ನುಗ್ಗುವಂತೆ ಮಾಡಲಾಗುತ್ತದೆ. ಈ ಸಮಯದಲ್ಲಿ ಕೊಕ್ಕೆಗಳ ಮೂಲಕ ವಿಷ ಕೊಂಡಿಯನ್ನು ಪಕ್ಕಕ್ಕೆ ತಳ್ಳಿ ಯೋನಿಯ ಮೂಲಕ ಉಪ್ಪಿನ ದ್ರಾವಣ ಮತ್ತು ವೀರ್ಯದಿಂದ ಕೂಡಿದ ಸೂಜಿಯನ್ನು ತೂರಿಸುವುದರೊಂದಿಗೆ ೨ – ೩ ಮೈ. ಲೀ. ವೀರ್ಯವನ್ನು ವೀರ್ಯಾಣುಚೀಲಕ್ಕೆ ಸೇರಿಸಲಾಗುತ್ತದೆ. ರಾಣಿಯನ್ನು ಅಗತ್ಯ ಕುಟುಂಬಕ್ಕೆ ಸೇರಿಸಿ ದೂರ ಹಾರಿ ಹೋಗುವುದನ್ನು ತಪ್ಪಿಸಲು ಅದರ ಒಂದು ಬದಿಯ ರೆಕ್ಕೆಗಳನ್ನು ಕತ್ತರಿಸಿ ಮೊಟ್ಟೆ ಇಡುವಂತೆ ಪ್ರಚೋದಿಸಲು ಕಡಿಮೆ ಪ್ರಮಾಣದಲ್ಲಿ ಇಂಗಾಲದ ಡೈ ಆಕ್ಸೈಡನ್ನು ಎರಡು ಮೂರು ಬಾರಿ ನೀಡಲಾಗುತ್ತದೆ. ಆದರೆ ಕೇವಲ ಒಂದು ಗಂಡುನೊಣದ ವೀರ್ಯದಿಂದ ಗರ್ಭಧಾರಣೆ ಮಾಡಿದ್ದಲ್ಲಿ ಕುಟುಂಬಗಳಲ್ಲಿ ಉತ್ತಮ ಕುಟುಂಬಗಳನ್ನು ಪಡೆಯಲು ಸಾಧ್ಯವಾಗುತ್ತದೆ.