ಜೇನು ಕೃಷಿ ತರಬೇತಿ : ಜೇನುಕೃಷಿಯನ್ನು ಪ್ರಾರಂಭಿಸುವ ಪ್ರತಿಯೊಬ್ಬರಿಗೂ ಅವುಗಳ ನಡುವಳಿಕೆಗಳು, ಅವಶ್ಯಕ ಆಹಾರ ಸಸ್ಯಗಳು, ಮತ್ತು ನಿರ್ವಹಿಸುವ ಕ್ರಮಗಳ ಬಗ್ಗೆ ತಿಳಿದಿರಬೇಕು. ಈ ಮಾಹಿತಿಯನ್ನು ಹತ್ತಿರದ ಪರಿಣಿತ ಜೇನುಕೃಷಿಕರು ತಮ್ಮ ಪ್ರದೇಶದ ಜೇನುಕೃಷಿ ಅಧಿಕಾರಿಗಳಿಂದ ಪಡೆಯಬಹುದಾದರೂ ಸರ್ಕಾರ, ಕೃಷಿ ವಿಶ್ವವಿದ್ಯಾಲಯಗಳು ಮತ್ತು ಸಂಶೋಧನಾ ಸಂಸ್ಥೆಗಳು ನಡೆಸುವ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅನುಭವವನ್ನು ಪಡೆದುಕೊಳ್ಳಬಹುದು. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಜೇನುಕೃಷಿ ವಿಭಾಗವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನೇಕ ಯೋಜನೆಗಳಡಿಯಲ್ಲಿ ಒಂದು ವಾರದ ಜೇನುಕೃಷಿ ವಿಭಾಗವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನೇಕ ಯೋಜನೆಗಳಡಿಯಲ್ಲಿ ಒಂದು ವಾರದ ಜೇನುಕೃಷಿ ತರಬೇತಿ ನಡೆಸುತ್ತಿದ್ದು, ಫಲಾನುಭವಿಗಳಿಗೆ ಜೇನುಕೃಷಿಯಲ್ಲಿ ಆಸಕ್ತಿ ಮೂಡಿಸಲು ಒಂದೊಂದು ಜೇನು ಪೆಟ್ಟಿಗೆಯನ್ನು ನೀಡುವುದರೊಂದಿಗೆ ತಾಂತ್ರಿಕ ಮಾಹಿತಿಯನ್ನು ಸರಳ ಭಾಷೆಯಲ್ಲಿ ನೀಡುತ್ತಿದೆ. ಕರ್ನಾಟಕ ರಾಜ್ಯ ಸರ್ಕಾರದ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯು ಜೇನುಕೃಷಿಯನ್ನು ಅಭಿವೃದ್ಧಿ ಪಡಿಸಲು ಅನೇಕ  ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಸಮೀಪದಲ್ಲಿರುವ ಗ್ರಾಮೀಣ ಅಭಿವೃದ್ಧಿ ತರಬೇತಿ ಸಂಸ್ಥೆಗಳ ಮೂಲಕ ಉಚಿತ ತರಬೇತಿಯನ್ನು ನೀಡುತ್ತಿದೆ. ಕೊಡಗಿನ ಭಾಗಮಂಡಲದಲ್ಲಿರುವ ಸರ್ಕಾರಿ ಜೇನುಕೃಷಿ ತರಬೇತಿ ಶಾಲೆಯಲ್ಲಿ ಮೂರು ತಿಂಗಳ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತದೆ. ಇದರ ಜೊತೆಗೆ ಹೆಚ್ಚಿನ ತರಬೇತಿಯನ್ನು ಪಡೆಯಲು ಮಹಾರಾಷ್ಟ್ರ ರಾಜ್ಯದಲ್ಲಿರುವ ಪುಣೆಯ ಕೇಂದ್ರೀಯ ಜೇನು ಸಂಶೋಧನಾ ಮತ್ತು ತರಬೇತಿ ಕೇಂದ್ರ ೩- ೯ ತಿಂಗಳ ತರಬೇತಿಯನ್ನು ನೀಡಲಾಗುತ್ತಿದೆ (ಕೋಷ್ಟಕ ೮).

ಸೂಕ್ತ ಸ್ಥಳದ ಆಯ್ಕೆ : ಜೇನು ಸಾಕಣೆಯನ್ನು ಪ್ರಾರಂಭಿಸುವ ಸ್ಥಳವು ಸೂಕ್ತವಾಗಿದ್ದು ಇರುವೆ, ಕಡಜ ಮುಂತಾದವುಗಳಿಂದ ಕೂಡಿರಬಾರದು. ಆ ಪ್ರದೇಶದಲ್ಲಿ ವರ್ಷವಿಡೀ ಹೇರಳವಾಗಿ ಪರಾಗ ಮತ್ತು ಮಕರಂದ ಸಿಗುವ ಗಿಡಮರಗಳಿರಬೇಕು. ಹೆಚ್ಚಿನ ಜನಸಂದಣಿಯಿಂದ ಕೂಡಿದ್ದಲ್ಲಿ ಜೇನುನೊಣಗಳ ಕುಟುಂಬದ ಚಟುವಟಿಕೆಗಳಿಗೆ ಅಡ್ಡಿಯಾಗಬಹುದು. ಆ ಪ್ರದೇಶವು ಯಾವುದೇ ರೀತಿಯ ಪ್ರಾಣಿಗಳ ದಾಳಿಗೆ ಒಳಗಾಗದಂತೆ ಮುಳ್ಳು ತಂತಿಯಿಂದ ಸುತ್ತಲೂ ಬೇಲಿಯನ್ನು ಹಾಕಬೇಕು. ಇದರ ಜೊತೆಗೆ ಶುದ್ಧವಾದ ನೀರು ದೊರೆಯುವಂತಿರಬೇಕು.

ಕೋಷ್ಟಕ . ಜೇನುಸಾಕಾಣಿಕೆಯ ತರಬೇತಿ ಕಾರ್ಯಕ್ರಮಗಳು

ಕ್ರ.ಸಂ

ಕಾರ್ಯಕ್ರಮದ ಹೆಸರು

ವ್ಯವಸ್ಥಾಪಕರು

ಅವಧಿ

ತರಬೇತಿ ಭತ್ಯೆ

ತರಬೇತಿದಾರರಿಗೆ ಆಗುವ ಲಾಭಗಳು

೧. ಜೇನುಸಾಕಾಣಿಕೆ ತರಬೇತಿ ಪ್ರತಿ ಜಿಲ್ಲಾ ಪಂಚಾಯತ್ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಎರಡು ತಿಂಗಳು ಪ್ರತಿ ತಿಂಗಳಿಗೆ ೨೦೦ ರೂ ಶೇ. ೫೦ ರಿಯಾಯತಿ
೨. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ತರಬೇತಿ ಪ್ರತಿ ಜಿಲ್ಲಾ ಪಂಚಾಯತ್ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಎರಡು ತಿಂಗಳು ಪ್ರತಿ ತಿಂಗಳಿಗೆ ೨೫೦ ರೂ ೧೦೦೦ ರೂ ಮೌಲ್ಯದ ಸಲಕರಣೆಗಳು ಉಚಿತ
೩. ಪಶ್ಚಿಮ ಘಟ್ಟಗಳ ಅಭಿವೃದ್ಧಿ ಯೋಜನೆಯ ಅಡಿಯಲ್ಲಿ ತರಬೇತಿ (ಧಾರವಾಡ) ಜಿಲ್ಲೆ ಜಿಲ್ಲಾ ಪಂಚಾಯತ್ ಕೈಗಾರಿಕಾ ಮತ್ತು ವಾಣೀಜ್ಯ ಇಲಾಖೆ ಎರಡು ತಿಂಗಳು ಪ್ರತಿ ತಿಂಗಳಿಗೆ ೨೦೦ ರೂ ಸಲಕರಣೆಯ ಮಾರಾಟದಲ್ಲಿ  ಶೇ.೩೩ ರಿಯಾಯತಿ
೪. ಐ.ಆರ್.ಡಿ.ಪಿ ಯೋಜನೆಯ ಅಡಿಯಲ್ಲಿ ತರಬೇತಿ ಪ್ರತಿ ಜಿಲ್ಲಾ ಪಂಚಾಯತ್ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಎರಡು ತಿಂಗಳು ಪ್ರತಿ ತಿಂಗಳಿಗೆ ೨೫೦ ರೂ ೫೦೦ ರೂ ಮೌಲ್ಯದ ಸಲಕರಣೆಗಳು ಉಚಿತ
೫. ಸರ್ಟಿಫಿಕೇಟ್ ಕೋರ್ಸ ತರಬೇತಿ ಕೇಂದ್ರ, ಭಾಗಮಂಡಲ ಸರಕಾರಿ ಜೇನು ಸಾಕಾಣಿಕೆಯ ಮೂರು ತಿಂಗಳು ಪ್ರತಿ ತಿಂಗಳಿಗೆ ೨೫೦ ರೂ ೫೦೦ ರೂ ಮೌಲ್ಯದ ಸಲಕರಣೆಗಳು ಉಚಿತ
೬. ಎಪಿಯೆರಿಸ್ಟ್ ಕೋರ್ಸ ಕೇಂದ್ರಿಯ ಜೇನು ಸಂಶೋಧನಾ ಮತ್ತು ತರಬೇತಿ ಕೇಂದ್ರ ಪುಣೆ, ಮಹಾರಾಷ್ಟ್ರ ಒಂಬತ್ತು ತಿಂಗಳು ಇಲ್ಲ ತರಬೇತಿ ಪಡೆಯುವುದು
೭. ಫೀಲ್ಡ್‌ಮ್ಯಾನ್ ಕೋರ್ಸ ಕೇಂದ್ರಿಯ ಜೇನು ಸಂಶೋಧನಾ ಮತ್ತು ತರಬೇತಿ ಕೇಂದ್ರ ಪುಣೆ, ಮಹಾರಾಷ್ಟ್ರ ಮೂರು ತಿಂಗಳು ಇಲ್ಲ ತರಬೇತಿ ಪಡೆಯುವುದು
  ಇವು ಕಾಲಕಾಲಕ್ಕೆ ಬದಲಾಗಬಹುದು        

ಜೇನುಕುಟುಂಬಗಳನ್ನು ಪಡೆಯುವುದು : ಸೂಕ್ತ ಸ್ಥಳವನ್ನು ಆಯ್ಕೆ ಮಾಡಿದ ನಂತರ ಹೊಸ ಜೇನು ಕುಟುಂಬಗಳ ಅವಶ್ಯಕತೆ ಇರುತ್ತದೆ. ನಾಲ್ಕೈದು ಜೇನುಕುಟುಂಬಗಳಿಂದ ಜೇನು ಸಾಕಣೆ ಪ್ರಾರಂಭಿಸುವುದು ಉತ್ತಮ. ಅಂತಹ ಕುಟುಂಬಗಳು ಅತಿ ಕಡಿಮೆ ಎಂದರೆ  ಮೂರ್ನಾಲ್ಕು ಚೌಕಟ್ಟುಗಳಿಂದ ಕೂಡಿದ ಮರಿಗಳು ಮತ್ತು ಪ್ರೌಢ ಕೆಲಸಗಾರ ನೊಣಗಳನ್ನು ಹೊಂದಿರಬೇಕು. ಈ ಕುಟುಂಬಗಳು ಸುಮಾರು ೩ – ೪ ತಿಂಗಳ ಯುವರಾಣಿಗಳಿಂದ ಕೂಡಿದ್ದರೆ ಉತ್ತಮ. ಜೇನು ಸಾಕಾಣೆಯನ್ನು ಭಾರತೀಯ ಮಾನಕ ಬ್ಯೂರೋರವರು ನಿಗದಿಪಡಿಸಿದ ಪೆಟ್ಟಿಗೆಗಳಲ್ಲಿ ಸಾಕಣೆ ಮಾಡಬೇಕು. ಈ ಕುಟುಂಬಗಳು ಬೇಗ ಬೆಳವಣಿಗೆಯಾಗಿ, ಅಧೀಕ ಜೇನುತುಪ್ಪ ನೀಡುವಂತಾಗಬೇಕು. ಉತ್ತಮ ಗುಣಮಟ್ಟದ ಜೇನುಕುಟುಂಬಗಳನ್ನು ಕೆಳಕಂಡ ವಿಧಾನಗಳಿಂದ ಪಡೆಯಬಹುದು :

೧. ಜೇನುಕುಟುಂಬಗಳನ್ನು ಖಾಸಗಿ ಸಂಸ್ಥೆಗಳಿಂದ ಕೊಂಡುಕೊಳ್ಳುವುದು.

೨. ಪಾಲಾದ ಕುಟುಂಬಗಳನ್ನು ಹಿಡಿದು ಪೆಟ್ಟಿಗೆಗೆ ತುಂಬಿಸುವುದು.

೩. ಜೇನು ನೊಣಗಳ ಸ್ವಾಭಾವಿಕ ವಾಸ ಸ್ಥಾನದಿಂದ ಹಿಡಿದು ಪೆಟ್ಟಿಗೆಗೆ ತುಂಬಿಸುವುದು.

. ಜೇನುಕುಟುಂಬಗಳನ್ನು ಕೊಂಡುಕೊಳ್ಳುವುದು : ಹೊಸದಾಗಿ ಜೇನುಸಾಕಣೆ ಪ್ರಾರಂಭಸುವವರು ಜೇನುಸಾಕಣೆಯಲ್ಲಿ ತೊಡಗಿರುವ ತಮ್ಮ ಸುತ್ತಮುತ್ತಲಿನ ಪ್ರದೇಶ ಜೇನುಕೃಷಿಕರಿಂದ ಹೊಸ ಕುಟುಂಬಗಳನ್ನು ಪಡೆಯಬಹುದು. ಕರ್ನಾಟಕ ರಾಜ್ಯವು ಅನೇಕ ಜೇನುಕೃಷಿ ಸಹಕಾರ ಸಂಘಗಳಿಂದ ಕೂಡಿದ ರಾಜ್ಯ. ರಾಜ್ಯದಲ್ಲಿನ ಜೇನು ಸಾಕಣೆಯ ಅಭಿವೃದ್ಧಿಯಲ್ಲಿ ಇವುಗಳ ಪಾತ್ರ ಮಹತ್ತರವಾದುದು. ಈ ಸಂಘದ ಪ್ರತಿನಿಧಿಗಳು ಜೇನು ಕೃಷಿಯಲ್ಲಿ ಪರಿಣಿತಿ ಪಡೆದವರಾಗಿದ್ದು ಅವರಿಂದ ಜೇನು ಕುಟುಂಬಗಳನ್ನು ಖರೀದಿಸಬಹುದು. ಇದರ ಜೊತೆಗೆ ವೈಜ್ಞಾನಿಕವಾಗಿ ಉತ್ಪಾದಿಸಿದ ಮರಿ ಜೇನು ಕುಟುಂಬಗಳನ್ನು ಹತ್ತಿರದ ಜೇನು ಕೃಷಿ ಸಂಶೋಧನಾ ಸಂಸ್ಥೆಗಳಿಂದ ಮತ್ತು ವಿಶ್ವವಿದ್ಯಾಲಯಗಳಿಂದಲೂ ಪಡೆಯಬಹುದು. ಜೇನುಕುಟುಂಬಗಳನ್ನು ಖರೀದಿಸಿಲು ರಾಜ್ಯ ಸರ್ಕಾರವು ಕೆಲವು ಯೋಜನೆಗಳಡಿಯಲ್ಲಿ ರಿಯಾಯತಿ ದರದಲ್ಲಿ ಹಣಕಾಸಿನ ಸಹಾಯವನ್ನು ಒದಗಿಸುತ್ತದೆ (ಕೋಷ್ಟಕ ೯).

. ಪಾಲಾದ ಕುಟುಂಬಗಳನ್ನು ಪೆಟ್ಟಿಗೆಗೆ ತುಂಬಿಸಿಕೊಳ್ಳುವುದು : ಸಾಮಾನ್ಯವಾಗಿ ಆಹಾರ ಹೇರಳವಾಗಿ ಸಿಗುವ ಕಾಲದಲ್ಲಿ ಜೇನುಕುಟುಂಬಗಳು ಹೊಸರಾಣಿಯನ್ನು ಉತ್ಪಾದಿಸಿದ ಪಾಲಾಗುವುದು ಸ್ವಾಭಾವಿಕ ವಿಭಜನೆಯ ಕ್ರಮ. ಅವು ಪಾಲಾಗುವ ಸಮಯದಲ್ಲಿ ಮರದ ಕೊಂಬೆಗಳ ಮೇಲೆ ತಮಗೆ ಸೂಕ್ತವಾದ ಸ್ಥಳವನ್ನು ಆಯ್ಕೆ ಮಾಡುವವರೆಗೂ ತಾತ್ಕಾಲಿಕವಾಗಿ ಜೋತುಬಿದ್ದಿರುತ್ತವೆ. ಅಂತಹ ಕುಟುಂಬಗಳನ್ನು ಹಿಡಿಯುವ ಪರದೆಯಿಂದ ರಾಣಿಗೆ ಅಪಾಯವಾಗದಂತೆ ಜೇನು ಪೆಟ್ಟಿಗೆಗೆ ತುಂಬಿಸಿ ಜೇನು ಸಾಕಣೆಯನ್ನು ಪ್ರಾರಂಭಿಸಬಹುದು.

. ಜೇನುನೊಣಗಳ ಸ್ವಾಭಾವಿಕ ಸ್ಥಾನಗಳಿಂದ ಪೆಟ್ಟಿಗೆಗೆ ವರ್ಗಾಯಿಸುವದು : ತುಡುವೆ ಜೇನುಕುಟುಂಬಗಳು ಪರಿಸರದಲ್ಲಿ ಹೇರಳವಾಗಿದ್ದು ಅವು ಹುತ್ತದ ಕೋವೆಗಳು, ಮರದಪೊಟರೆಗಳು, ಕಟ್ಟಡ ಗೋಡೆಯ ಸಂದುಗೊಂದುಗಳಲ್ಲಿ ವಾಸಿಸುತ್ತಿರುತ್ತವೆ. ಅವುಗಳನ್ನು ಗುರುತಿಸಿ ಈ ಮುಂದಿನ ವಿಧಾನಗಳಿಂದ ಪೆಟ್ಟಿಗೆಗೆ ವರ್ಗಾಯಿಸಿ ಕೊಳ್ಳಬಹುದು (ಚಿತ್ರ ೩೧).

ತುಡುವೆ ಜೇನುಕುಟುಂಬಗಳನ್ನು ಸ್ವಾಭಾವಿಕವಾಗಿ ವಾಸಿಸುವ ಗೂಡುಗಳಿಂದ ಜೇನುನೊಣಗಳು ಹೊರಹೋಗುವ ಮತ್ತು ಒಳ ಬರುವ ಹಾರಾಟವನ್ನು ಕಂಡಾಗ ಜೇನುಕುಟುಂಬವಿರುವ ಸ್ಥಳಗಳನ್ನು ಗುರುತಿಸಬಹುದು. ಈ ಕಾರ್ಯಕ್ಕೆ ಬೆಳಿಗ್ಗೆ ೭ – ೯  ಗಂಟೆಯ ಸಮಯವು ಸೂಕ್ತವಾದರೂ ದಿನದ ಯಾವುದೇ ಅವಧಿಯಲ್ಲಿ ಕೈಗೊಳ್ಳಬಹುದಾಗಿದೆ. ಜೇನುನೊಣಗಳು ಹೂವಿನಿಂದ ಮಕರಂದ ಹಾಗೂ ಪರಾಗವನ್ನು ಸಂಗ್ರಹಿಸಿ ಹಿಂದಿರುಗುವ ಮಾರ್ಗವನ್ನು ಅನುಸರಿಸಿ ಗೂಡಿರುವ ಜಾಗವನ್ನು ಕಂಡುಹಿಡಿಯಬಹುದು. ಒಂದು ನಿಗದಿತ ಸ್ಥಳದಲ್ಲಿ ಸಕ್ಕರೆ ಪಾಕವನ್ನಿಟ್ಟರೆ ಆ ಜಾಗದ ಸುತ್ತಮುತ್ತ ಜೇನುಗೂಡುಗಳಿದ್ದರೆ ಕೆಲಸಗಾರ ನೊಣಗಳು ಸಕ್ಕರೆ ಪಾಕಕ್ಕೆ ಆಕರ್ಷಿತವಾಗುತ್ತವೆ. ಇವುಗಳನ್ನು ಹಿಡಿದು ನಾಲ್ಕಾರು ಕಡೆ ಒಂದೊಂದಾಗಿ ಬಿಟ್ಟರೆ ಅವು ಗೂಡಿರುವ ಜಾಗದ ಕಡೆಗೆ ಹಾರುತ್ತವೆ. ಇದರಿಂದ ಇವುಗಳನ್ನು ಹಿಂಬಾಲಿಸಿ ಕುಟುಂಬಗಳನ್ನು ಗುರುತಿಸಬಹುದು.

ಜೇನು ಕುಟುಂಬಗಳ ವಾಸಸ್ಥಾನಗಳವನ್ನು ಗುರುತಿಸಿದ ನಂತರ ಕೆಲವು ಸಲಕರಣೆಗಳಾದ ಗುದ್ದಲಿ, ಪಾತ್ರೆ, ಚಾಕು, ಹೊಗೆತಿದಿ, ರಾಣಿ ಪಂಜರ, ಬಾಳೇನಾರು ಮತ್ತು ಕುಟುಂಬಗಳನ್ನು ವರ್ಗಾಯಿಸುವ ಪೆಟ್ಟಿಗೆಯೊಂದಿಗೆ ಹೋಗಬೇಕು.

ಹುತ್ತದ ಕೋವೆಯೊಂದರಿಂದ ಪೆಟ್ಟಿಗೆಗೆ ತುಡುವೆ ಜೇನನ್ನು ವರ್ಗಾಯಿಸುವ ಹಂತಗಳು

ಜೇನುಕುಟುಂಬವಿರುವ ಹುತ್ತ ಅಥವಾ ಮರದ ಪೊಟರೆ ಬಾಯಿ ಚಿಕ್ಕದಾಗಿದ್ದಾಗ ಗುದ್ದಲಿಯಿಂದ ಅಗಲ ಮಾಡಿ ಎರಿಗಳನ್ನು ಒಂದೊಂದಾಗಿ ಚಾಕುವಿನಿಂದ ಕತ್ತರಿಸಿ ಅವುಗಳನ್ನು ಪಾತ್ರೆಯಲ್ಲಿಡಬೇಕು. ಎರಿಗಳನ್ನು ತೆಗೆದ ನಂತರ ಕೂಡಿಸುವ ಜೇನುಪೆಟ್ಟಿಗೆಯ ಚೌಕಟ್ಟುಗಳಿಗೆ ಮೊಟ್ಟೆ ಮರಿ ಇರುವ ಎರಿಗಳನ್ನು ಬಾಳೆನಾರಿನ ಸಹಾಯದಿಂದ ಕಟ್ಟಿ ಪೆಟ್ಟಿಗೆಯಲ್ಲಿರಿಸಬೇಕು. ನೊಣಗಳನ್ನು ಪೆಟ್ಟಿಗೆಗೆ ವರ್ಗಾಯಿಸುವಾಗ ರಾಣಿ ನೊಣವನ್ನು  ಹುಡುಕಿ ಅದನ್ನು  ರಾಣಿ ಪಂಜರಕ್ಕೆ ಸೇರಿಸಿ ವರ್ಗಾಯಿಸುವ ಪಟ್ಟಿಗೆಯೊಳಗಿಡಬೇಕು. ರಾಣಿನೊಣ ಪೆಟ್ಟಿಗೆಯೊಳಗಿರುವುದರಿಂದ ಕೆಲಸಗಾರ ನೊಣಗಳೆಲ್ಲಾ ಅಲ್ಲಿಗೆ ಬಂದು ಸೇರುತ್ತವೆ. ನಿಧಾನವಾದರೆ ಗುಂಪು ಗುಂಪಾಗಿರುವ ನೊಣಗಳನ್ನು ಕೈಯಿಂದ ನಿಧಾನವಾಗಿ ತೆಗೆದು ಪೆಟ್ಟಿಗೆಗೆ ಸೇರಿಸಬೇಕು. ಕತ್ತಲೆಯಾದ ನಂತರ ಜೇನುಕುಟುಂಬಗಳನ್ನು ನಿಗದಿ ಪಡಿಸಿದ ಮಧುವನಕ್ಕೆ ಸಾಗಿಸಬಹುದು.

ಜೇನು ಗೂಡನ್ನು ಪರೀಕ್ಷಿಸುವಿಕೆ :  ಜೇನು ಕುಟುಂಬಗಳನ್ನು ಕನಿಷ್ಟ ೧೫ ರಿಂದ ೨೦ ದಿನಗಳಿಗೊಮ್ಮೆಯಾದರೂ ಪರೀಕ್ಷಿಸಬೇಕಾಗುತ್ತದೆ. ಜೇನು ಕುಟುಂಬಗಳನ್ನು ಅಡಿ ಹಲಗೆಯಿಂದಲೇ ಪರೀಕ್ಷಿಸುತ್ತಾ ಒಂದೊಂದಾಗಿ ಸಂಸಾರ ಕೋಣೆ, ಜೇನು ಕೋಣೆ, ಮೇಲ್ಮುಚ್ಚಳ ಹೀಗೆ ಕ್ರಮವಾಗಿ ಪರೀಕ್ಷಿಸಬೇಕು. ಕುಟುಂಬಗಳನ್ನು ಪರೀಕ್ಷಿಸಲು ಹೊಗೆ ತಿದಿ, ಗೂಡಿನ ಆಯುಧ, ಮುಖಪರದೆ, ಮತ್ತು ಕೈಚೀಲಗಳನ್ನು ಬಳಸುವುದು. ಮೊದಲು ಹೊಗೆಯ ತಿದಿಯಿಂದ ಎರಡು ಮೂರು ಬುಗ್ಗೆಯಷ್ಟು ಹೊಗೆಯನ್ನು ಕೊಡಬೇಕು (ಚಿತ್ರ ೩೨).

ಜೇನುಗೂಡನ್ನು ಪರೀಕ್ಷಿಸುತ್ತಿರುವುದು

ಸಂಸಾರ ಕೋಣೆಯನ್ನು ಎತ್ತಿ ಪಕ್ಕದಲ್ಲಿಟ್ಟು ಅಡಿಮಣೆಯನ್ನು ಪರಿಶೀಲಿಸುವುದರಿಂದ ಜೇನು ಗೂಡಿನ ಶುಚಿತ್ವ, ಮೇಣದ ಚಿಟ್ಟೆಯ ಹಾವಳಿ ಮುಂತಾದವುಗಳನ್ನು ತಿಳಿಯಬಹುದು. ಸಂಸಾರ ಕೋಣೆಯ ಪರೀಕ್ಷೆಯಿಂದ ಎರಿಗಳ ಬಣ್ಣ, ಜೇನುತುಪ್ಪ ಮತ್ತು ಪರಾಗ ಶೇಖರಣೆಯ ಮಟ್ಟ, ರಾಣಿಯ ಮೊಟ್ಟೆಯಿಡುವ ಗುಣ, ರಾಣಿಯ ವಯಸ್ಸು, ಗಂಡು ಜೇನುನೊಣಗಳ ಉತ್ಪತ್ತಿ ಮುಂತಾದವುಗಳನ್ನು ತಿಳಿಯಬಹುದು. ಅಡಿಮಣೆಯನ್ನು ಗೂಡಿನ ಆಯುಧದಿಂದ ಶುಚಿಗೊಳಿಸಿ ಶುದ್ಧಗೊಳಿಸಬೇಕು.

ಸಂಸಾರ ಕೋಣೆಯನ್ನು ಪರೀಕ್ಷಿಸಲು ಸಂಸಾರ ಕೋಣೆಯ ಮೇಲಿರುವ ಭಾಗಗಳನ್ನು ಗೂಡಿನ ಆಯುಧದಿಂದ ಬಿಡಿಸಿ ಕೆಳಗಿಡಬೇಕು. ಸಂಸಾರ ಕೋಣೆಯಲ್ಲಿನ ಒಂದು ಎರಿಯನ್ನು ಬಿಡಿಸಿ ತೆಗೆದು ಹೊರ ಬದಿಯಲ್ಲಿ ಲಂಭವಾಗಿರಿಸಿ ಮಧ್ಯದ ಪಕ್ಕದ ಎರಿಗಳನ್ನು ಪೆಟ್ಟಿಗೆಯ ಬದಿಗೆ ಸೇರಿಸಿ, ಮಧ್ಯದ ಎರಿಗಳನ್ನು ಪರೀಕ್ಷಿಸಿ ಅಗತ್ಯವಿದ್ದರೆ ಪಕ್ಕದ ಎರಿಗಳನ್ನು ಪರೀಕ್ಷಿಸಿದ ನಂತರ ಮೊದಲಿನಂತೆ ಇಟ್ಟು ಹೊರಬದಿಯಲ್ಲಿ ಇರಿಸಿದ ಎರಿಯನ್ನು ಪೆಟ್ಟಿಗೆಯಲ್ಲಿಡಬೇಕು. ಚೌಕಟ್ಟುಗಳನ್ನು ಪರೀಕ್ಷಿಸುವಾಗ ಅದರಲ್ಲೂ ತಂತಿ ಅಳವಡಿಸದಿದ್ದಲ್ಲಿ ಅಂತಹ ಎರಿಗಳನ್ನು ಭೂಮಿಗೆ ಲಂಭವಾಗಿ ಹಿಡಿದು ಎರಿಯನ್ನು ಗಮನಿಸಿ ಹಳೆಯ ಎರಿಗಳನ್ನು ತೆಗೆಯಲು ಪ್ರಯತ್ನಿಸಬೇಕು. ರಾಣಿಯ ವಯಸ್ಸು, ಮೊಟ್ಟೆ ಇಡುವ ಗುಣ. ಗಂಡು ನೊಣಗಳ ಬೆಳವಣಿಗೆ, ಆಹಾರದ ದಾಸ್ತಾನು, ಮಕರಂದ ಮತ್ತು ಪರಾಗ ಸಿಕ್ಕುವುದು ಮುಂತಾದುವನ್ನು ಗಮನಿಸಬೇಕು. ಪಾಲಾಗುವ ಸಮಯದಲ್ಲಿ ಗಂಡು ನೊಣಗಳ ಬೆಳೆಸುವಿಕೆ, ಎರಿಗಳ ಅಡಿ ಭಾಗದಲ್ಲಿ ರಾಣಿ ಕಣಗಳನ್ನು ರಚಿಸುತ್ತಿರುವುದು ಮುಂತಾದುವನ್ನು ಗಮನಿಸಿ ಪಾಲಾಗುವ ಕಾಲದಲ್ಲಿ ಹಳೆಯ ಎರಿಗಳಿದ್ದಲ್ಲಿ ಒಂದೊಂದಾಗಿ ತೆಗೆದು ಖಾಲಿ ಚೌಕಟ್ಟನ್ನು ಸಂಸಾರ ಕೋಣೆಯ ಮಧ್ಯಭಾಗದ ಎರಡು ಎರಿಗಳ ಮಧ್ಯೆ ಕೊಡಬೇಕು. ಮಕರಂದ ಹೇರಳವಾಗಿ ಸಿಗದಿದ್ದಲ್ಲಿ ಸಕ್ಕರೆ ಪಾಕವನ್ನು ನೀಡಬೇಕು.

ಕೋಷ್ಟಕ : ಜೇನು ಸಾಕಾಣಿಕೆಯ ಆರ್ಥಿಕ ಅಂದಾಜು ಪಟ್ಟಿ

ಕ್ರ.ಸಂ

ವಿವರಗಳು

ಬೆಲೆ / ಒಂದಕ್ಕೆ

ಸಣ್ಣ ಘಟಕಕ್ಕೆ (೧೦ ಕುಟುಂಬಗಳಿಗೆ)

ಮಧ್ಯಮ ಘಟಕಕ್ಕೆ (೫೦ ಕುಟುಂಬಗಳಿಗೆ)

ದೊಡ್ಡ ಘಟಕಕ್ಕೆ (೧೦೦ ಕುಟುಂಬಗಳಿಗೆ)

ಪ್ರಮಾಣ

ಪ್ರಮಾಣ  ಮೊಬಲಗು (ರೂ)

ಪ್ರಮಾಣ

ಪ್ರಮಾಣ  ಮೊಬಲಗು (ರೂ)

ಪ್ರಮಾಣ

ಪ್ರಮಾಣ  ಮೊಬಲಗು (ರೂ)

.
೧. ಜೇನು ಪೆಟ್ಟಿಗೆ ೫೦೦ ೧೦    ೫೦೦೦ ೫೦     ೫೦೦೦ ೧೦೦  ೫೦೦೦೦
೨. ಜೇನುತುಪ್ಪ ತೆಗೆಯುವ ಯಂತ್ರ ೩೦೦    ೩೦೦     ೩೦೦     ೩೦೦
೩. ಇತರೆ ಸಲಕರಣೆಗಳು    ೧೦೦     ೧೦೦     ೨೦೦
೪. ತುಪ್ಪ ಶೇಖರಣೆಯ ಪಾತ್ರೆಗಳು ೧೫೦    ೧೫೦     ೬೦೦ ೧೦    ೧೫೦೦
೫. ಜೇನುಕುಟುಂಬಗಳಿಗೆ ೨೦೦ ೧೦    ೨೦೦೦ ೫೦   ೧೦೦೦೦ ೧೦೦   ೨೦೦೦೦
  ಒಟ್ಟು      ೭೫೫೦   ೩೬೦೦೦   ೭೨೦೦೦
.
೧.  ಪ್ರತಿ ಕುಟುಂಬಕ್ಕೆ ಹತ್ತು ಮೇಣಸ ಹಾಳೆಗಳು ೧೦೦   ೫೦೦ ೫೦೦ ೨೫೦೦ ೧೦೦೦     ೫೦೦೦
೨. ಸಕ್ಕರೆ ದ್ರಾವಣ ಒಂದು ಕಿ.ಗ್ರಾಂ / ಕುಟುಂಬಕ್ಕೆ ೧೫ ೧೦   ೧೫೦ ೫೦    ೭೫೦ ೧೦೦     ೧೫೦೦
೩. ಕೂಲಿ ಕೆಲಸ ತಿಂಗಳಿಗೆ ೧೦೦೦   ೧೦೦೦    ೨೦೦೦     ೩೦೦೦
೪. ಮೂಲ ಹೂಡಿಕೆಯ ಮೇಲೆ ಶೇಕಡ ಬಡ್ಡಿ ೧೨   ೧೧೦೪ ೪೯೫೦ ೧೯೨೮೦    
  ಒಟ್ಟು       ೨೭೫೪   ೧೦೨೦೦   ೧೯೨೮೦
ಇ. ಒಟ್ಟು ಖರ್ಚು (ಅ+ಆ)      ೧೦೩೦೪   ೪೬೨೦೦   ೯೧೨೮೦
. ಆದಾಯ
೧. ಜೇನುತುಪ್ಪ ೭ ಕಿ.ಗ್ರಾಂ/ ಕುಟುಂಬಕ್ಕೆ ೧೨೦ ೭೦   ೮೪೦೦ ೩೫೦ ೪೨೦೦೦ ೭೦೦ ೮೪೦೦೦
೨. ಜೇನುಕುಟುಂಬದ ಮಾರಾಟ ೨೦೦ ೦೫   ೧೦೦೦ ೨೫ ೫೦೦೦ ೫೦      ೧೦೦೦೦
೩. ಮೇಣದ ೨೫೦ ಗ್ರಾಂ/ಕುಟುಂಬಕ್ಕೆ ೧೩೦ ೨.೫ ಕಿ.ಗ್ರಾಂ   ೩೨೫ ೧೨.೫ ಕಿ.ಗ್ರಾಂ ೧೬೨೫ ೨೫ ಕಿ.ಗ್ರಾಂ ೩೨೫೦
. ಮೊದಲ ವರ್ಷದ ಲಾಭ
  ಎರಡನೆ ವರ್ಷದ ಲಾಭ              
ಅ. ಎನ್‌.ಆರ್.ಸಿ   ಇಲ್ಲ          
ಆ. ಆರ್. ಸಿ.              
ಇ. ಒಟ್ಟು ಖರ್ಚು      ೨೭೫೪   ೧೦೨೦೦   ೧೯೨೮೦
ಈ. ಆದಾಯ      ೯೭೨೫   ೪೮೬೨೫   ೯೭೨೫೦
ಉ. ಎರಡನೆಯ ವರ್ಷದ ಆದಾಯ (ಈ – ಇ)      ೬೯೭೧   ೩೮೪೨೫   ೭೭೯೭೦

ಸೂಚನೆ : ೧. ಸರಾಸರಿ ಜೇನುತುಪ್ಪವನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ.
೨. ಸ್ಥಳಾಂತರ ಜೇನುಸಾಕಾಣಿಕೆಯಿಂದ ಎರಡರಿಂದ ಮೂರು ಪಟ್ಟು ಜೇನುತುಪ್ಪವನ್ನು ಹೆಚ್ಚಿಸಬಹುದಾಗಿದೆ.

ಗೂಡು ಪರೀಕ್ಷಿಸುವಾಗ ವೇಳೇಯಲ್ಲಿ ಈ ಕೆಳಕಂಡ ಅಂಶಗಳನ್ನು ಗಮನಿಸಬೇಕು:

೧. ಕುಟುಂಬಕ್ಕೆ ಅಗತ್ಯವಿರುವಷ್ಟು ಪರಾಗ, ಜೇನುತುಪ್ಪವಿರುವಿಕೆ ಮತ್ತು ಸಕ್ಕರೆಪಾಕದ ಅಗತ್ಯತೆ.

೨. ಎರಿಗಳಲ್ಲಿ ಮೊಟ್ಟೆಗಳು ಇದ್ದಲ್ಲಿ ರಾಣಿ ಇರುವಿಕೆಯನ್ನು ದೃಢಪಡಿಸಿಕೊಳ್ಳಬಹುದು.

೩. ರಾಣಿ ಕಣಗಳನ್ನು ಗಮನಿಸಿ ಅನಗತ್ಯವಿದ್ದಲ್ಲಿ ನಾಶಪಡಿಸುವುದು.

೪. ಕುಟುಂಬದಲ್ಲಿ ರಾಣಿನೊಣ ಮೊಟ್ಟೆ ಇಡಲು ಮತ್ತು ಜೇನುತುಪ್ಪವನ್ನು ಶೇಖರಿಸಲು ಎರಿಗಳನ್ನು ಒದಗಿಸುವುದು.

೫. ಕುಟುಂಬದಲ್ಲಿ ನೈಸರ್ಗಿಕ ಶತ್ರುಗಳ ಹಾನಿಯನ್ನು ಗುರ್ತಿಸಿ ನಿಯಂತ್ರಣದ ಬಗ್ಗೆ ಕ್ರಮಕೈಗೊಳ್ಳುವುದು.

ಜೇನುಕುಟುಂಬಗಳ ನಿರ್ವಹಣೆ : ಜೇನುನೊಣಗಳು ಇತರ ಪಶುಪಕ್ಷಿಗಳಂತೆ ಆಹಾರಕ್ಕಾಗಿ ಸಸ್ಯಗಳನ್ನೇ ಅವಲಂಭಿಸಿವೆ. ಸಸ್ಯಗಳಿಂದ ದೊರೆಯುವ ಮಕರಂದ ಮತ್ತು ಪರಾಗವು ಜೇನುನೊಣಗಳ ಮುಖ್ಯ ಆಹಾರವಾದರೆ, ಕೆಲವು ಕೀಟಗಳ ವಿಸರ್ಜಿತ ಸಿಹಿ ಅಂಟು ಕೂಡ ಜೇನುನೊಣಗಳ ಆಹಾರವಾಗಿರುತ್ತದೆ. ಪರಿಸರದಲ್ಲಿ ಅನೇಕ ಸಸ್ಯಗಳು ವರ್ಷವಿಡೀ ಪರಾಗ ಮತ್ತು ಮಕರಂದವನ್ನು ಉತ್ಪಾದಿಸಿದರೆ, ಅನೇಕ ಸಸ್ಯಗಳು ವರ್ಷದ ಕೆಲವೇ ದಿನಗಳು ಅಥವಾ ತಿಂಗಳುಗಳು ಮಾತ್ರ ಪರಾಗ ಮತ್ತು ಮಕರಂದವನ್ನು ಉತ್ಪಾದಿಸುತ್ತವೆ. ಇದರಿಂದಾಗಿ ಜೇನುನೊಣಗಳಿಗೆ ವರ್ಷದ ಕೆಲವು ಕಾಲಗಳಲ್ಲಿ ಆಯಾ ಪ್ರದೇಶಗಳಿಗೆ ಅನುಗುಣವಾಗುವಂತೆ ಆಹಾರದ ಕೊರತೆ ಉದ್ಭವಿಸುತ್ತದೆ.

ಜೇನು ಕುಟುಂಬಗಳ ನಿರ್ವಹಣೆ ಹವಾಮಾನಕ್ಕನುಗುಣವಾಗಿ ಉಷ್ಣವಲಯ, ಸಮಶೀತೋಷ್ಣವಲಯ ಮತ್ತು ಶೀತವಲಯಗಳ ಪ್ರದೇಶದೊಂದಿಗೆ ವ್ಯತ್ಯಾಸವಾಗುತ್ತದೆ. ಸಮಶೀತೋಷ್ಣವಲಯದ ಪ್ರದೇಶಗಳಲ್ಲಿ ಜೇನುನೊಣಗಳು ತಮ್ಮ ಚಟುವಟಿಕೆಗಳನ್ನು ಜನವರಿ ತಿಂಗಳು ಆರಂಭವಾದೊಡನೆ ಚುರುಕುಗೊಳಿಸುತ್ತವೆ. ಜೇನು ಕೃಷಿಕರು ಈ ಸಮಯದಲ್ಲಿ ತಮ್ಮಲ್ಲಿರುವ ಖಾಲಿ ಪೆಟ್ಟಿಗೆಗಳಿಗೆ ಜೇನು ಕುಟುಂಬಗಳನ್ನು ತುಂಬಿಸುವುದು ಸೂಕ್ತ. ಕರಾವಳಿ ಪ್ರದೇಶದ ಜೇನು ಕೃಷಿಕರು ಮಾವಿನ ಹಂಗಾಮು ಮುಗಿದೊಡನೆ ಜೇನು ಕುಟುಂಬಗಳನ್ನು ಕೃತಕವಾಗಿ ಪಾಲುಮಾಡಿ ಸ್ಥಳಾಂತರ ಮಾಡಿ ಮಾರ್ಚ್ ತಿಂಗಳಿನಿಂದಲೇ ಜೇನುತುಪ್ಪವನ್ನು ಪಡೆಯುತ್ತಾರೆ. ಫೆಬ್ರವರಿಯಲ್ಲಿ ಕೆಲವು ಕಡೆ ಆಹಾರದ ಕೊರತೆಯಾಗುವುದರಿಂದ ಕೃತಕ ಆಹಾರವನ್ನು ನೀಡಬೇಕು. ಮಾರ್ಚ್ ತಿಂಗಳಿನಲ್ಲಿ ಕೆಲವೊಂದು ಜೇನು ಕುಟುಂಬಗಳು ಪಾಲಾಗಲು ಪ್ರಯತ್ನಿಸಿ ರಾಣಿ ಕಣ ತಯಾರಿಸುತ್ತವೆ. ಆದುದರಿಂದ ಅಂತಹ ಕುಟುಂಬಗಳನ್ನು ಪಾಲುಮಾಡಬಹುದು. ಹೇರಳವಾಗಿ ಆಹಾರ ಸಿಗುವ ಸಂದರ್ಭಗಳ ಬಲಹೀನವಾದ ಎರಡು ಕುಟುಂಬಗಳನ್ನು ಒಂದುಗೂಡಿಸಿ ಹೆಚ್ಚಿನ ಜೇನುತುಪ್ಪವನ್ನು ಪಡೆಯಬಹುದು. ಏಪ್ರಿಲ್ ತಿಂಗಳು ಆರಂಭವಾದೊಡನೆ ಜೇನು ನೊಣಗಳು ತಮ್ಮ ಕೆಲಸ ಕಾರ್ಯಗಳನ್ನು ಬರದಿಂದ ಮಾಡಲಾರಂಭಿಸುತ್ತವೆ. ಎಲ್ಲ ಕಡೆಗಳಲ್ಲಿ ಗಿಡ, ಮರ, ಬಳ್ಳಿಗಳು ಹೂವುಗಳನ್ನು ಬಿಡುವುದರಿಂದ ಜೇನು ನೊಣಗಳು ಪರಾಗ ಮತ್ತು ಮಕರಂದವನ್ನು ಸಂಗ್ರಹಿಸಿ ಜೇನು ತುಪ್ಪವಾಗಿ ಶೇಖರಿಸುತ್ತವೆ. ಪರಾಗ ದೊರೆಯುವುದರಿಂದ ಕುಟುಂಬಗಳು ಅಭಿವೃದ್ಧಿಯಾಗಿ ಕೆಲವೊಂದು ಜೇನು ಕುಟುಂಬಗಳು ರಾಣಿ ಕಣಗಳನ್ನು ನಿರ್ಮಿಸುತ್ತವೆ. ರಾಣಿ ಕಣಗಳನ್ನು ಕಂಡ ಬಳಿಕ ಜೇನುಕೃಷಿಕರು ವಾರಕ್ಕೊಮ್ಮೆ ಜೇನುಗೂಡನ್ನು ಪರೀಕ್ಷಿಸಿ ಅಂತಹ ರಾಣಿ ಕಣಗಳನ್ನು ತೆಗೆಯುತ್ತಿರಬೇಕು. ಆಹಾರದ ಅಭಾವ ಉಂಟಾದಾಗ ಜೇನು ನೊಣಗಳು ಗೂಡನ್ನು ಬಿಟ್ಟು ಹೋಗುವ ಸಂಭವವಿರುತ್ತದೆ. ಆದುದರಿಂದ ಜೇನು ಕುಟುಂಬಗಳಿಗೆ  ಕೃತಕ ಆಹಾರದ ಸಕ್ಕರೆ ಪಾಕ ಮತ್ತು ಪರಾಗವನ್ನು ನೀಡಬೇಕು. ಸಂಸಾರ ಕೋಣೆಯಲ್ಲಿ ಜೇನು ನೊಣಗಳಿಲ್ಲದ ಖಾಲಿ ಎರಿಗಳನ್ನು ತೆಗೆಯಬೇಕು.

ಜುಲೈ ತಿಂಗಳಿನಲ್ಲಿ ಮಳೆ ಹೆಚ್ಚಾಗಿರುವುದರಿಂದ ಜೇನು ಪೆಟ್ಟಿಗೆಗಳನ್ನಿಟ್ಟ ಸ್ಥಳಗಳನ್ನು ಚೆನ್ನಾಗಿ ಶುಚಿಗೊಳಿಸಬೇಕು. ಮಳೆ ಗಾಳಿಯಿಂದ ರಕ್ಷಿಸಲು ಕಲ್ನಾರಿನ ಹಾಳೆಗಳಿಂದ ಮುಚ್ಚಿ ಆಧಾರ ಸ್ಥಂಭಕ್ಕೆ ಹಗ್ಗದಿಂದ ಕಟ್ಟಬೇಕು. ಜೇನು ಕುಟುಂಬದ ಉಷ್ಣತೆಯನ್ನು ಕಾಪಾಡಲು ಜೇನು ನೊಣಗಳ ಸಂಖ್ಯಾ ಬಲ ಹೆಚ್ಚಾಗಿರುವಂತೆ ನೋಡಿಕೊಂಡು ಅಗತ್ಯವಿದ್ದಲ್ಲಿ ಒತ್ತರಿಸುವ ಹಲಗೆಯನ್ನು ಜೇನು ಕುಟುಂಬಗಳಿಗೆ ಅಳವಡಿಸಬೇಕು. ಆಹಾರ ಅಭಾವವಿದ್ದಲ್ಲಿ ಕೃತಕ ಆಹಾರ ನೀಡುವ ಜೊತೆಗೆ ಜೇನು ನೊಣಗಳು ಆವೃತವಾಗದೇ ಇರುವ ಎರಿಗಳನ್ನು ಹೊರತೆಗೆಯಬೇಕು. ಅಗಸ್ಟ್ – ಅಕ್ಟೋಬರ್ ತಿಂಗಳುಗಳಲ್ಲಿ ಮಳೆ ಬೀಳುವುದರಿಂದ ಪ್ರಕೃತಿಯಲ್ಲಿ ಮರ ಗಿಡಗಳು ಹೂ ಬೀಡುವುದರಿಂದ ಕುಟುಂಬಗಳು ಚೇತರಿಸಿಕೊಂಡು ಕೆಲಸ ಮಾಡಲು ಆರಂಭಿಸುತ್ತವೆ. ಎರಿ ತೆಗೆದ ಚೌಕಟ್ಟುಗಳಿಗೆ ಮೇಣದ ಹಾಳೆಯನ್ನು ಪೂರೈಸಿ ಮೊಟ್ಟೆಗಳಿರುವ ಚೌಕಟ್ಟನ್ನು ಬದಿಗೆ ಹಾಕಿ ಮೇಣದ ಹಾಳೆ ಪೂರೈಸಿದ ಚೌಕಟ್ಟನ್ನು ಮಧ್ಯದಲ್ಲಿಡಬೇಕು. ಕೆಲವು ಜೇನು ಕುಟುಂಬಗಳು ಗಂಡು ನೊಣಗಳನ್ನು ಉತ್ಪಾದಿಸುವುದರಿಂದ ರಾಣಿಗೆ ವಯಸ್ಸಾಗಿದ್ದಲ್ಲಿ ರಾಣಿ ನೊಣಗಳನ್ನು ಉತ್ಪಾದಿಸುವುದರ ಮೂಲಕ ಹಳೆಯ ರಾಣಿಗಳನ್ನು ಬದಲಿಸಿ ಹೊಸ ರಾಣಿಗಳನ್ನು ಅಳವಡಿಸುವುದು ಉತ್ತಮ. ಈ ಕಾಲದಲ್ಲಿ ಕುಟುಂಬಗಳು ಚೆನ್ನಾಗಿ ಅಭಿವೃದ್ಧಿಹೊಂದಿ ಜೇನುತುಪ್ಪವನ್ನು ಶೇಖರಿಸುವುದರಿಂದ ಅದನ್ನು ತೆಗೆಯಬಹುದು.